Back
Home » ಆರೋಗ್ಯ
ಮಧುಮೇಹದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಸೀಬೆಹಣ್ಣಿನ ಎಲೆಗಳು ನೆರವಾಗಲಿದೆ!
Boldsky | 4th Jul, 2018 11:09 AM

ನಿತ್ಯದ ಪ್ರಾರಂಭವನ್ನು ಪೇರಳೆ ಅಥವಾ ಸೀಬೆಹಣ್ಣಿನ ಜ್ಯೂಸ್ ಸೇವನೆಯೊಂದಿಗೆ ಪ್ರಾರಂಭಿಸುವ ವ್ಯಕ್ತಿಗಳಲ್ಲಿ ನೀವೂ ಒಬ್ಬರೇ? ಹೌದು ಎಂದಾದರೆ ಇದೊಂದು ಉತ್ತಮ ಹವ್ಯಾಸ ಎನ್ನವುದರಲ್ಲಿ ಎರಡು ಮಾತಿಲ್ಲ. ಮೊದಲನೆಯದಾಗಿ, ದಿನದ ಪ್ರಾರಂಭವನ್ನು ತಾಜಾ ಹಣ್ಣಿನ ರಸದೊಂದಿಗೆ ಸೇವಿಸುವುದರಿಂದ ಆರೋಗ್ಯ ವೃದ್ದಿಸುತ್ತದೆ ಹಾಗೂ ಕೃತಕ ಸಕ್ಕರೆಯಿಲ್ಲದ ಈ ನೈಸರ್ಗಿಕ ರಸದಲ್ಲಿ ವಿಫುಲವಾದ ಆಂಟಿ ಆಕ್ಸಿಡೆಂಟುಗಳು ಮತ್ತು ಕರಗದ ನಾರು ಇದ್ದು ಹಲವು ವಿಧದಲ್ಲಿ ಉತ್ತಮ ಆರೋಗಕ್ಕೆ ನೆರವಾಗುತ್ತದೆ.

ಎರಡನೆಯದಾಗಿ, ಪೇರಳೆ ಹಣ್ಣಿನ ರಸದಲ್ಲಿ ಹಲವು ಬಗೆಯ ಪೋಷಕಾಂಶಗಳಿವೆ. ನಮ್ಮ ಅಡುಗೆ ಮನೆಯ ಹಲವು ಸಾಮಾಗ್ರಿಗಳಲ್ಲಿ ಕಂಡು ಬರುವ ಪೋಷಕಾಂಶಗಳಲ್ಲೆವೂ ಈ ರಸದಲ್ಲಿ ಮೇಳೈಸಿದ್ದು ಈ ರಸದ ಸೇವನೆಯಿಂದ ಅಷ್ಟೂ ಪೋಷಕಾಂಶಗಳನ್ನು ಹಲವಾರು ಆಹಾರಗಳ ಸೇವನೆಯ ಅಗತ್ಯವಿಲ್ಲದೇ ಲಭಿಸಿದಂತಾಗುತ್ತದೆ. ಇವುಗಳಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ.

ಈ ನೈಸರ್ಗಿಕ ಪೋಷಕಾಂಶಗಳು ದೇಹವನ್ನು ಹಲವರು ರೋಗಗಳಿಂದ ಕಾಪಾಡುತ್ತವೆ. ವಿಶೇಷವಾಗಿ ಜೀವನಕ್ರಮದ ಬದಲಾವಣೆಯಿಂದ ಎದುರಾಗಿದ್ದ ತೊಂದರೆಗಳನ್ನು ಸರಿಪಡಿಸಲು ಈ ರಸದ ಸೇವನೆಯ ಜೊತೆಗೇ ಕೊಂಚ ಜೀವನಕ್ರಮವನ್ನು ಬದಲಾವಣೆ ಮಾಡಿಕೊಳ್ಳುವುದೂ ಅಗತ್ಯ. ಇತ್ತೀಚಿನ ಸಂಶೋಧನೆಯಲ್ಲಿ ಕಂಡುಕೊಂಡಿರುವಂತೆ ಕೇವಲ ಹಣ್ಣು ಮತ್ತು ತರಕಾರಿಗಳ ರಸ ಮತ್ತು ತಿರುಳು ಮಾತ್ರವಲ್ಲ, ಇತರ ಭಾಗಗಳೂ ಆರೋಗ್ಯವನ್ನು ವೃದ್ದಿಸಲು ನೆರವಾಗುತ್ತವೆ.

ಉದಾಹರಣೆಗೆ ಎಲೆಗಳು ಮತ್ತು ಬೇರುಗಳನ್ನೂ ಹಲವು ಬಗೆಯ ಪೇಯಗಳನ್ನು ಸಿದ್ಧಪಡಿಸಲು ತಯಾರಿಸಬಹುದು ಹಾಗೂ ಇವುಗಳ ಸೇವನೆಯಿಂದ ಕೆಲವಾರು ಬಗೆಯ ಕಾಯಿಲೆಗಳನ್ನು ಗುಣಪಡಿಸಬಹುದು. ಇತ್ತೀಚಿನ ಅಧ್ಯಯನವೊಂದರಲ್ಲಿ ಮಧುಮೇಹ ಇರುವ ವ್ಯಕ್ತಿಗಳಿಗೆ ಇದನ್ನು ನಿಯಂತ್ರಿಸಿ ಉತ್ತಮ ಜೀವನ ಸಾಗಿಸಲು ಪೇರಳೆ ಮರದ ಎಲೆಗಳ ರಸ ನೆರವಾಗುವ ಸಾಮರ್ಥ್ಯ ಪಡೆದಿದೆ ಎಂದು ಕಂಡುಕೊಳ್ಳಲಾಗಿದೆ. ಬನ್ನಿ, ಈ ವಿಧಾನದ ಪ್ರಯೋಜನವನ್ನು ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ನೋಡೋಣ:

ಮಧುಮೇಹವೆಂದರೇನು?

ನಾವು ಈಗಾಗಲೇ ತಿಳಿದಿರುವಂತೆ ಈ ಜಗತ್ತಿನ ಪ್ರತಿ ವ್ಯಕ್ತಿಯೂ ಒಂದಲ್ಲಾ ಒಂದು ಆರೋಗ್ಯ ತೊಂದರೆಯಿಂದ ಬಾಧಿತರಾಗಿಯೇ ಇದ್ದಾರೆ. ಇವುಗಳಲ್ಲಿ ಕೆಲವು ಇಡಿಯ ಜೀವಮಾನ ಬಾಧಿಸಬಹುದು. ಕೆಲವರಿಗೆ ಯಾವುದೇ ಕ್ರಮವಿಲ್ಲದೇ ವಿವಿಧ ಕಾಯಿಲೆಗಳು ಅವರಿಸುತ್ತಾ ಬರುತ್ತದೆ. ಇದರ ಹೊರತಾಗಿ ಅನುವಂಶಿಕ ಕಾರಣಗಳು, ರಸದೂತಗಳ ಏರುಪೇರು, ಪೌಷ್ಟಿಕಾಂಶಗಳ ಕೊರತೆ, ಗಾಯ, ಪೆಟ್ಟುಗಳು, ಅನಾರೋಗ್ಯಕರ ಜೀವನಕ್ರಮ, ದೇಹದ ಅಂಗವೊಂದರ ಕಾರ್ಯಕ್ಷಮತೆ ಕುಸಿಯುವುದು ಮೊದಲಾದವು ಮಧುಮೇಹ ಹಾಗೂ ಇತರ ರೋಗಗಳಿಗೆ ಮೂಲವಾಗಬಹುದು.

ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಆವರಿಸಲು ಅನುವಂಶಿಕ, ಅನಾರೋಗ್ಯಕರ ಜೀವನಕ್ರಮ ಹಾಗೂ ಹುಟ್ಟಿನಿಂದಲೇ ಬರುವ ಕೆಲವು ಕಾರಣಗಳಿರಬಹುದು. ದೇಹಕ್ಕೆ ಆಗಮಿಸುವ ಸಕ್ಕರೆಯನ್ನು ಇನ್ಸುಲಿನ್ ಎಂಬ ರಸದೂತದ ಕೊರತೆಯಿಂದ ಬಳಸಿಕೊಳ್ಳಲಾಗದೇ ಹೋಗುವುದು ಅಥವಾ ಇನ್ಸುಲಿನ್ ಇದ್ದರೂ ಬಳಸಿಕೊಳ್ಳಲು ಸಾಧ್ಯವಾಗದೇ ಹೋಗುವ ಈ ರೋಗವನ್ನು ವೈದ್ಯರು ಜೀವರಾಸಾಯನಿಕ ಕ್ರಿಯೆ ಭಂಗಗೊಂಡಿರುವ ಕಾಯಿಲೆ ಎಂದು ಪರಿಗಣಿಸುತ್ತಾರೆ. ಮಧುಮೇಹದ ಲಕ್ಷಣ ಮತ್ತು ಪರಿಣಾಮಗಳನ್ನು ಅನುಸರಿಸಿ ಕೆಲವಾರು ಬಗೆಯ ಮಧುಮೇಹಗಳನ್ನಾಗಿ ವಿಂಗಡಿಸಲಾಗಿದೆ. ಇವು ಭಿನ್ನ ವಯೋಮಾನದ ವ್ಯಕ್ತಿಗಳಿಗೆ ಭಿನ್ನವಾಗಿ ಪ್ರತಿಕ್ರಿಯಿಸುತ್ತವೆ.

ಸ್ಥೂಲವಾಗಿ ಮಧುಮೇಹವನ್ನು ಎರಡು ಬಗೆಯಲ್ಲಿ ವಿಂಗಡಿಸಲಾಗಿದೆ. ಟೈಪ್ ೧ ಮಧುಮೇಹ ಇರುವ ವ್ಯಕ್ತಿಗಳ ದೇಹದಲ್ಲಿರುವ ಮೇದೋಜೀರಕ ಗ್ರಂಥಿ ಅಗತ್ಯ ಪ್ರಮಾಣದ ಇನ್ಸುಲಿನ್ ಅನ್ನು ಉತ್ಪಾದಿಸುವುದೇ ಇಲ್ಲ, ಹಾಗಾಗಿ ಸಕ್ಕರೆ ಬಳಕೆಯಾಗದೇ ಮೂತ್ರದ ಮೂಲಕ ಹೊರಟು ಹೋಗುತ್ತದೆ. ಟೈಪ್ ೨ ಮಧುಮೇಹ ಇರುವ ವ್ಯಕ್ತಿಗಳ ದೇಹದಲ್ಲಿ ಮೇದೋಜೀರಕ ಗ್ರಂಥಿ ಅಗತ್ಯ ಪ್ರಮಾಣದ ಇನ್ಸುಲಿನ್ ಅನ್ನು ಉತ್ಪಾದಿಸಿದರೂ ಇದನ್ನು ಬಳಸಿಕೊಳ್ಳಲು ಅಸಮರ್ಥವಾಗುವ ಮೂಲಕ ಸಕ್ಕರೆ ಹಾಗೇ ಮೂತ್ರದ ಮೂಲಕ ಹೊರಹೋಗುತ್ತದೆ. ಇವುಗಳ ಹೊರತಾಗಿ ಇನ್ನೊಂದು ತಾತ್ಕಾಲಿಕ ಬಗೆಯ ಮಧುಮೇಹವಿದೆ. ಇದನ್ನು ಗೆಸ್ಟೇಶಹನಲ್ ಡಯಾಬಿಟೀಸ್ ಅಥವಾ ಗರ್ಭಾವಸ್ಥೆಯಲ್ಲಿ ಎದುರಾಗುವ ಮಧುಮೇಹ ಎಂದು ಗುರುತಿಸಲಾಗುತ್ತದೆ. ಇನ್ನೊಂದು ಬಗೆಯ ಮಧುಮೇಹ ಎಂದರೆ ಜುವಿನೈಲ್ ಡಯಾಬಿಟೀಸ್ ಅಥವಾ ಬಾಲ್ಯಕಾಲದಲ್ಲಿ ಕಾಡುವ ಮಧುಮೇಹವಾಗಿದೆ.

ಮಧುಮೇಹದ ಲಕ್ಷಣಗಳೆಂದರೆ ಅತಿಯಾದ ಬಾಯಾರಿಕೆ, ಅತೀವ ಸುಸ್ತು, ಸತತವಾಗಿ ಮೂತ್ರಕ್ಕೆ ಅವಸರವಾಗುವುದು, ಹಸಿವಿಲ್ಲದಿರುವಿಕೆ, ತೂಕದಲ್ಲಿ ಇಳಿಕೆ, ದೃಷ್ಟಿ ಮಂದವಾಗುವುದು, ಗಾಯಗಳು ತೀರಾ ನಿಧಾನವಾಗಿ ಮಾಗುವುದು, ಲೈಂಗಿಕ ನಿರಾಸಕ್ತಿ ಮೊದಲಾದವುಗಳಾಗಿವೆ. ಮಧುಮೇಹವನ್ನು ಸಂಪೂರ್ಣವಾಗಿ ವಾಸಿ ಮಾಡಲು ಇದುವರೆಗೆ ಯಾವುದೇ ಮದ್ದು ಇಲ್ಲ, ಆದರೆ ಸೂಕ್ತ ಔಷಧಿ ಹಾಗೂ ಜೀವನಕ್ರಮದದಲ್ಲಿ ಬದಲಾವಣೆಯ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿರಿಸಿ ಆರೋಗ್ಯಕರ ಜೀವನವನ್ನು ನಡೆಸಬಹುದು.

ಪೇರಳೆ ಎಲೆಗಳ ಆರೋಗ್ಯಕರ ಪ್ರಯೋಜನಗಳು

ಭಾರತ ಸೇರಿದಂತೆ ಜಗತ್ತಿನ ಹಲವು ಸಮಶೀತೋಷ್ಣ ವಲಯದಲ್ಲಿ ಪೇರಳೆ ಮರಗಳು ಹೆಚ್ಚಿನ ಆರೈಕೆ ಬೇಡದೇ ಬೆಳೆಯುತ್ತವೆ ಹಾಗೂ ಪೇರಳೆ ಹಣ್ಣು ಹೆಚ್ಚಿನವರ ನೆಚ್ಚಿನ ಫಲವೂ ಆಗಿದೆ. ಈ ಹಣ್ಣಿನಂತೆಯೇ ಈ ಮರದ ಎಲೆಗಳೂ ಹಲವು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿವೆ. ಪೇರಳೆ ಎಲೆಗಳ ರಸವನ್ನು ಸೇವಿಸುವ ಮೂಲಕ ಅತಿಸಾರ ನಿಲ್ಲಿಸುವುದು, ತೂಕ ಇಳಿಕೆಯಲ್ಲಿ ನೆರವು, ಒಸಡುಗಳ ಊತವನ್ನು ಕಡಿಮೆ ಮಾಡುವುದು, ಅತಿಹೆಚ್ಚು ಕೊಲೆಸ್ಟ್ರಾಲ್ ಇದ್ದರೆ ಕಡಿಮೆ ಮಾಡುವುದು, ಹೊಟ್ಟೆ, ಪ್ರಾಸ್ಟೇಟ್ ಮೊದಲಾದ ಕ್ಯಾನ್ಸರ್ ಗಳಿಂದ ರಕ್ಷಣೆ ಪಡೆಯುವುದು ಮೊದಲಾದ ಪ್ರಯೋಜನಗಳನ್ನು ಪಡೆಯಬಹುದು. ಈಗ ಮಧುಮೇಹವನ್ನು ಇನ್ನಷ್ಟು ಉತ್ತಮವಾಗಿ ನಿಯಂತ್ರಿಸಿ ಆರೋಗ್ಯವನ್ನು ವೃದ್ದಿಸಲು ಪೇರಳೆ ಎಲೆಗಳು ನೆರವಾಗುತ್ತವೆ ಎಂದು ಅಧ್ಯಯನಗಳ ಮೂಲಕ ಕಂಡುಕೊಳ್ಳಲಾಗಿದೆ. ಇದರ ಪ್ರಯೋಜನ ಪಡೆಯುವುದು ಹೇಗೆ, ನೋಡೋಣ:

ಮಧುಮೇಹ ಗುಣಪಡಿಸಲು ಪೇರಳೆ ಎಲೆಗಳನ್ನು ಸೇವಿಸುವ ಬಗೆ ಯಾವುದು?

Nutrition & Metabolism ಎಂಬ ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟವಾದ ಸಂಶೋಧನಾ ವರದಿಯ ಪ್ರಕಾರ ಪೇರಳೆ ಎಲೆಗಳನ್ನು ಸೇವಿಸುವ ಮೂಲಕ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಿ ಈ ಮೂಲಕ ಮಧುಮೇಹವನ್ನೂ ನಿಯಂತ್ರಿಸಬಹುದು. ಸಂಶೋಧನೆಯಲ್ಲಿ ವಿವರಿಸಿರುವ ಪ್ರಕಾರ ದೇಹಕ್ಕೆ ಆಗಮಿಸುವ ಆಹಾರವನ್ನು ಸಕ್ಕರೆಯನಾಗಿ ಪರಿವರ್ತಿಸಲು ಪ್ರಮುಖ ಪಾತ್ರ ವಹಿಸುವ ಆಲ್ಫಾ-ಗ್ಲುಕೋಸಿಡೈಸ್ ಎಂಬ ಕಿಣ್ವದ ಪ್ರಭಾವವನ್ನು ಕಡಿಮೆಗೊಳಿಸಿ ರಕ್ತದಲ್ಲಿ ಸಕ್ಕರೆಯ ಮಟ್ಟ ಏರದಂತೆ ತಡೆಯುತ್ತದೆ. ದಿನದ ಪ್ರತಿ ಹೊತ್ತಿನ ಆಹಾರ ಸೇವನೆಯ ಬಳಿಕ ಪೇರಳೆ ಎಲೆಗಳ ರಸ ಅಥವಾ ಈ ರಸಗಳಂದ ಪ್ರತ್ಯೇಕಿಸಿ ತಯಾರಿಸಿದ ಔಷಧಿಗಳನ್ನು ಸೇವಿಸುವ ಮೂಲಕ ಮಧುಮೇಹ ಶೀಘ್ರವಾಗಿ ನಿಯಂತ್ರಣಕ್ಕೆ ಬರುತ್ತದೆ.

ಅಲ್ಲದೇ ಯಾವುದೇ ಅಡ್ಡ ಪರಿಣಾಮವಿಲ್ಲದೇ ಮಧುಮೇಹವನ್ನು ಸಂಪೂರ್ಣವಾಗಿ ಹತೋಟಿಗೆ ತಂದು ಮಧುಮೇಹ ಇಲ್ಲವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಗುಣಪಡಿಸುತ್ತದೆ. ಆದರೆ ಈ ವಿಧಾನವನ್ನು ಪ್ರಾರಂಭಿಸುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆಯುವುದು ಅಗತ್ಯವಾಗಿದೆ. ಅಲ್ಲದೇ ವೈದ್ಯರು ಸೂಚಿಸಿರುವ ಔಷಧಿ ಗುಳಿಗೆಗಳನ್ನು ಮುಂದುವರೆಸುವುದೂ ಅಗತ್ಯವಾಗಿದೆ. ಎಲ್ಲಿಯವರೆಗೆ ವೈದ್ಯರೇ ಕೆಲವು ಬದಲಾವಣೆಗಳನ್ನು ಅಥವಾ ಗುಳಿಗೆಗಳ ಸೇವನೆ ನಿಲ್ಲಿಸಲು ತಿಳಿಸುವುದಿಲ್ಲವೋ ಅಲ್ಲಿಯವರೆಗೂ ಎಂದಿನಂತೆ ಚಿಕಿತ್ಸೆಯನ್ನು ಮುಂದುವರೆಸಬೇಕಾಗುತ್ತದೆ. ಪೇರಳೆ ಎಲೆಗಳ ಸೇವನೆ ಇದಕ್ಕೆ ಪೂರಕವಾಗಿರಬೇಕೇ ವಿನಃ ಇದೇ ಚಿಕಿತ್ಸೆ ಯಾಗಬಾರದು. ಇದರ ಜೊತೆಗೇ ಆರೋಗ್ಯಕರ ಜೀವನಕ್ರಮ, ಸಾಕಷ್ಟು ವ್ಯಾಯಾಮ ಹಾಗೂ ಒತ್ತಡ ರಹಿತ ಜೀವನ ನಡೆಸುವುದೂ ಅಗತ್ಯವಾಗಿದೆ.

ತಯಾರಿಸುವ ವಿಧಾನ

ಸುಮಾರು ನಾಲ್ಕರಿಂದ ಐದು ತಾಜಾ ಪೇರಳೆ ಎಲೆಗಳನ್ನು ಸಂಗ್ರಹಿಸಿ ಚೆನ್ನಾಗಿ ತೊಳೆದು ಒಂದು ಪಾತ್ರೆಯಲ್ಲಿರುವ ನೀರಿನಲ್ಲಿ ಮುಳುಗಿಸಿ ನೀರನ್ನು ಕುದಿಸಿ. ನೀರು ಕುದಿಯಲು ಪ್ರಾರಂಭವಾದ ಬಳಿಕ ಸುಮಾರು ಐದು ನಿಮಿಷಗಳ ಕಾಲ ಕುದಿಸುವುದನ್ನು ಮುಂದುವರೆಸಿ. ಬಳಿಕ ಈ ನೀರನ್ನು ಸೋಸಿ ಒಂದು ಲೋಟದಲ್ಲಿ ಸಂಗ್ರಹಿಸಿ. ಈ ನೀರು ಉಗುರುಬೆಚ್ಚಗಾದ ಬಳಿಕವೇ ಪ್ರತಿ ಊಟದ ಬಳಿಕ ಸೇವಿಸಿ. ಎಲೆಗಳನ್ನು ಸ್ವಚ್ಛಗೊಳಿಸಿ ಹಸಿಯಾಗಿ ಅಗಿದು ನುಂಗುವುದು ಇನ್ನಷ್ಟು ಉತ್ತಮ. ಅದರೆ ಇದರ ರುಚಿ ಎಲ್ಲರಿಗೂ ಹಿಡಿಸದಿರಬಹುದು. ಆದರೆ ಈ ವಿಧಾನ ಗರ್ಭಿಣಿಯರಿಗೆ ಸೂಕ್ತವಲ್ಲ! ವೈದ್ಯರ ಸಲಹೆ ಪಡೆಯದೇ ಈ ವಿಧಾನವನ್ನು ಗರ್ಭವತಿಯರು ಅನುಸರಿಸಕೂಡದು. ಉಳಿದಂತೆ ಈ ವಿಧಾನ ಬೇರೆಲ್ಲಾ ಮಧುಮೇಹಿಗಳಿಗೆ ಸೂಕ್ತವಾಗಿದೆ.

   
 
ಹೆಲ್ತ್