Back
Home » Business
ಯಶಸ್ವಿ ಉದ್ಯಮ ನಡೆಸಲು ಬಂಗಾರದಂತ 10 ನಿಯಮಗಳು
Good Returns | 12th Jul, 2018 11:49 AM
 • ಬಿಸಿನೆಸ್ ಐಡಿಯಾ ಆಯ್ಕೆ ಮಾಡಿ

  ಇಂದಿನ ಮಾರುಕಟ್ಟೆಯಲ್ಲಿ ಯಾವುದಕ್ಕೆ ಬೇಡಿಕೆ ಇದೆ ಅನ್ನುವುದನ್ನು ಅರಿತುಕೊಳ್ಳಬೇಕು. ಇದು ಹೊಸ ಉದ್ಯಮಿ ಮಾಡಬೇಕಾದ ಮೊದಲ ಕೆಲಸ. ಈಗಾಗಲೇ ಮಾರುಕಟ್ಟೆಯಲ್ಲಿ ಇರುವುದನ್ನು ಅಥವಾ ಜನರಿಗೆ ಬೇಡಿಕೆ ಇಲ್ಲದಿರುವುದನ್ನು ಉದ್ಯಮಿ ತನ್ನ ಪರಿಶ್ರಮದ ಬುಡ ಮಾಡಿಕೊಂಡರೆ ಮೊದಲನೇ ಹೆಜ್ಜೆಯಿಂದಲೇ ಸೋಲನ್ನು ಹಿಂಬಾಲಿಸಿದಂತೆ. ಜನಕ್ಕೆ ಯಾವ ಸರಕು ಅಥವಾ ಸೇವೆ ಅಗತ್ಯವಾಗಿ ಬೇಕು ಅದರ ಸುತ್ತ ನಮ್ಮ ಪರಿಶ್ರಮವನ್ನು ನಾವು ಹರಿಬಿಡಬೇಕು. ಇದು ಒಂದೇ ಏಟಿಗೆ ಕೈಗೆ ಸಿಗುವ ವಸ್ತು ಅಲ್ಲ. ಇದಕ್ಕೆ ಸಾಕಷ್ಟು ಪರಿಶ್ರಮ ಪಡಬೇಕಾಗುತ್ತದೆ. ಏಕೆಂದರೆ ನಾವು ಜನರಿಗೆ ಕೊಡಲು ಇಚ್ಚಿಸುವುದು ಒಂದಾದರೆ ಜನರಿಗೆ ನಿಜವಾಗಿಯೂ ಬೇಕಾಗಿರುವುದು ಬೇರೆಯದೇ ಆಗಿರುತ್ತದೆ. ಇದನ್ನು ಹಿಡಿತಕ್ಕೆ ತಂದು ಒಂದು ಹಂತಕ್ಕೆ ತರಲು ನವ ಉದ್ಯಮಿ ಬಹು ಸಾಹಸ ಪಡಲೇಬೇಕು ಹಾಗು ಇದಕ್ಕೆ ಎಷ್ಟು ಆದ್ಯತೆ ಮತ್ತು ಸಮಯ ಕೊಡಬೇಕೋ ಅಷ್ಟು ಕೊಡಲೇಬೇಕಾಗುತ್ತದೆ.


 • ಬಿಸಿನೆಸ್ ಕಮಿಟ್ಮೆಂಟ್

  ನಮ್ಮ ದ್ಯೇಯ ಯಾವುದು ಅನ್ನುವುದು ಖಚಿತ ಆದ ಮೇಲೆ ನಾವು ಗುರಿ ಸಾಧಿಸುವ ಸಲುವಾಗಿ ಬದ್ಧರಾಗಿ ಕೆಲಸ ಮಾಡಬೇಕು. ನಿರಂತರ ಪರಿಶ್ರಮದಿಂದ ಮಾತ್ರ ನಾವು ಮುಂದೆ ಸಾಗಬಹುದು. ಏನೆ ಬಂದರು ಎದುರಿಸಿ ಕೈ ಹಿಡಿದ ಕೆಲಸ ಮಾಡೇ ತೀರುತ್ತೇನೆ ಅನ್ನುವ ಒಂದು ಮೊಂಡುತನ ಇರಬೇಕು. ಹೀಗಿದ್ದರೆ ಮಾತ್ರ ಮೊದಲಲ್ಲಿ ಎದಿರಾಗುವ ಸೋಲುಗಳು ನಿರಾಶೆಗಳನ್ನು ದಾಟಿ ಮುಂದೆ ಹೋಗಲು ಸಾಧ್ಯ. ಇದು ಇಲ್ಲದಿದ್ದಲ್ಲಿ ಇಷ್ಟೇ ಇದು ಎಂದು ಸೋಲು ಅಪ್ಪುವವರ ಪೈಕಿಗೆ ಸೇರುವುದಕ್ಕೆ ಎದುರು ಬಂದು ನಿಂತಂತೆ ಇರುತ್ತದೆ. ಬಹಳ ಬೇಗ ನಿರಾಶೆಗಳಿಗೆ ಗುರಿಯಾಗುತ್ತೇವೆ. ಈ ಹಂತ ದಾಟಿದ ಮೇಲೆ ಮುಂದಿನ ನಿಯಮಗಳು ದಿನನಿತ್ಯ ಕೆಲಸದಲ್ಲಿ ತೊಡಗುವಾಗ ಅರಿವುವಿಟ್ಟುಕೊಳ್ಳಬೇಕಾದವು.


 • ಟಿಮ್ ವರ್ಕ್

  ಮನುಷ್ಯ ತಾನೊಬ್ಬನೇ ಸಾಧಿಸುವುದನ್ನು ಬೇರೆಯವರೊಡನೆ ಒಡಗೂಡಿ ಬಹಳ ಬೇಗ ಮತ್ತು ಸುಲಭವಾಗಿ ಸಾಧಿಸಬಹುದು. ಇದಕ್ಕೆ ಟೀಮ್ ವರ್ಕ್ ಅಥವಾ ತಂಡ ಕಟ್ಟಿಕೊಂಡು ದುಡಿಯುವುದು ಅನ್ನಬಹುದು. ಒಂದು ಒಳ್ಳೆಯ ತಂಡ ಕಟ್ಟಿಕೊಂಡು ಎಲ್ಲರೂ ಜೊತೆಯಾಗಿ ಹಾಕಿದ ಗುರಿಗೆ ತಕ್ಕಂತೆ ಶ್ರಮಪಟ್ಟು ಒಟ್ಟಿಗೆ ದುಡಿದರೆ ಕೆಲ ಕಾಲದಲ್ಲಿಯೇ ಗುರಿಯನ್ನು ಸಾಧಿಸಬಹದು. ಇದು ಜಾಣತನದ ಕೆಲಸ. ಇದರಿಂದ ಬಹು ಉಪಯೋಗಗಳಿವೆ. ಉದಾಹರಣೆಗೆ ಪಡಬೇಕಾದ ಶ್ರಮ, ಬೇಕಾಗುವ ಸಮಯ ಎಲ್ಲವು ಕಡಿಮೆಯೇ. ತಂಡದಲ್ಲಿ ಎಲ್ಲರ ವಿಭಿನ್ನ ಯೋಚನೆಗಳು ಹಲವಾರು ಪರಿಹಾರಗಳು ಇವು ಉನ್ನತ ಉದ್ಯಮಕ್ಕೆ ಬೇಕೇ ಬೇಕು.ಹೀಗಾಗಿ ಉದ್ಯಮಿ ತನ್ನ ಗುರಿಗೆ ತಕ್ಕಂತೆ ನಡಿಯುವ ನುಡಿಯುವ ತಂಡವನ್ನು ಕಟ್ಟುವುದು ಅನಿವಾರ್ಯ.


 • ಟೀಮ್ ಅನ್ನು ಪ್ರೋತ್ಸಾಹಿಸಿ

  ತಂಡದವರಿಗೆ ಮಾಡಿದ ಕೆಲಸಕ್ಕೆ ಶಭಾಷ್ ಹೇಳುವುದು, ತಪ್ಪಾಗಿದ್ದರೂ ಮಾಡಿದ ಪ್ರಯತ್ನ ಒಳ್ಳೆಯದು, ಹೇಗೆ ಮುಂದೆ ತಪ್ಪಾಗದಂತೆ ನೋಡಿಕೊಳ್ಳಬೇಕು ಅನ್ನುವ ದಾರಿ ತೋರಿಸಬೇಕು. ಇವೇಲ್ಲವೂ ಒಳ್ಳೆ ನಾಯಕನ ಲಕ್ಷಣಗಳು. ಇವಿಲ್ಲದೆ ತಂಡ ಬೇಗ ಬುಡ ಸಮೇತ ಕುಸಿದುಹೋಗುತ್ತದೆ.


 • ಗ್ರಾಹಕರ ಅಗತ್ಯ ಅರಿಯಿರಿ

  ಉದ್ಯಮ ನಡೆಸುತ್ತ ಸಾಗುವಾಗ ಗ್ರಾಹಕ ಬಹು ಮುಖ್ಯ ಅನ್ನುವುದು ನೆನಪು ಇಟ್ಟುಕೊಳ್ಳಬೇಕು. ಮಾಡುತ್ತಿರುವುದೆಲ್ಲ ಗ್ರಾಹಕನ ಸೇವನೆಗೆ. ನಮ್ಮ ಸರಕು ಹಾಗು ಸೇವೆ ಗ್ರಾಹಕರಿಗೆ ಮೆಚ್ಚುಗೆ ಇದೆಯೋ ಇಲ್ಲವೋ ತಿಳಿದುಕೊಳ್ಳಲೇ ಬೇಕು ತಪ್ಪಿದ್ದರೆ ತಿದ್ದುಕೊಳ್ಳಲೇಬೇಕು. ಗ್ರಾಹಕನ ಬೇಕು ಬೇಡಗಳನ್ನೂ ಚೆನ್ನಾಗಿ ಅರಿತುಕೊಳ್ಳುವುದು ಶ್ರೇಷ್ಠ ಉದ್ಯಮಿಯ ಒಳಗುಣ. ಗ್ರಾಹಕನನ್ನ ಮನದಲ್ಲಿಟ್ಟುಕೊಂಡು ತಯಾರಿಸಿದ ಸರಕು ಹಾಗು ಸೇವೆ ಎಂದಿಗೂ ಅಸಫಲ ಆಗುವುದಿಲ್ಲ. ಇನ್ನೊಂದು ಯಶಸ್ಸಿನ ಗುಟ್ಟು ಏನೆಂದರೆ ಗ್ರಾಹಕನ ಬದಲಾಗುವ ರುಚಿಗಳನ್ನು ಕೂಡ ಒಬ್ಬ ಶ್ರೇಷ್ಠ ಉದ್ಯಮಿ ಮನದಟ್ಟು ಮಾಡಿಕೊಂಡಿರುತ್ತಾನೆ.


 • ಸರಕು ಹಾಗು ಗ್ರಾಹಕ

  ಒಬ್ಬ ಗ್ರಾಹಕನ ಆಪೇಕ್ಷೆಗಿಂತ ಹೆಚ್ಚು ಸಮಾಧಾನ ತರುವಂತ ಸರಕು ಅಥವಾ ಸೇವೆ ಕೊಟ್ಟರೆ ಆ ಗ್ರಾಹಕ ತಾನು ಸೇವಿಸುವುದಲ್ಲದೆ ತನಗೆ ಗೊತ್ತಿರುವವರಿಗೆಲ್ಲರಿಗೂ ಪ್ರಚಾರ ಮಾಡುತ್ತಾನೆ. ಇದರಿಂದ ಉದ್ಯಮಿಗೆ ಖರ್ಚಿಲ್ಲದೆ ಶ್ರೇಷ್ಟ ಮಟ್ಟದ ವೈಯಕ್ತಿಕ ಪ್ರಚಾರ ಸಿಗುತ್ತದೆ. ಇದರ ಮೌಲ್ಯ ತೂಕ ಮಾಡಲು ಅಸಾಧ್ಯ. ಇದನ್ನು ಗಳಿಸುವ ಸಲುವಾಗಿ ಉದ್ಯಮಿ ಸದಾ ಪರಿಶ್ರಮಿಸಬೇಕು.


 • ಖರ್ಚುವೆಚ್ಚಗಳ ಮೇಲೆ ಹಿಡಿತ

  ಒಬ್ಬ ಶ್ರೇಷ್ಠ ಉದ್ಯಮಿ ಪಾಲಿಸಲೇಬೇಕಾದ ಇನ್ನೊಂದು ನಿಯಮವೇನೆಂದರೆ ಖರ್ಚುಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು. ಇಲ್ಲವಾದರೆ ಗಳಿಸುವುದೆಲ್ಲವನ್ನು ಧಾರೆ ಎರೆದು ದಾನ ಮಾಡಿದ ಹಾಗೆ ಆಗುತ್ತದೆ. ಲಾಭ ಮಾಡುವುದು ಉದ್ಯಮದ ಒಂದು ಗುರಿ. ಇದರಿಂದ ಉದ್ಯಮಿಗೆ ತನ್ನ ತಂಡಕ್ಕೆ ಎಲ್ಲರಿಗೂ ಒಂದು ಸಾಧನೆ ಮಾಡಿದ ಹಾಗೆ ಅನಿಸುತ್ತದೆ. ಲಾಭ ಇಲ್ಲದಲ್ಲಿ ಮಾಡಿದ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗಂದಂತೆ ಭಾಸವಾಗುತ್ತದೆ ಹಾಗು ನಿರಾಶೆಗೆ ದಾರಿಯಾಗುತ್ತದೆ. ಇದು ಬಹಳ ಅಪಾಯಕಾರಿ ಹಾಗು ಉದ್ಯಮಕ್ಕೆ ಮತ್ತು ತಂಡದ ಬೆಳವಣಿಗೆಗೆ ಒಂದು ಮಾರಕ ಹೊಡೆತವಾಗುತ್ತದೆ.


 • ಲಾಭದಲ್ಲಿ ಹಂಚಿಕೆ

  ಮತ್ತೆ ಉದ್ಯಮಿ ತನ್ನ ಲಾಭದಲ್ಲಿ ತನ್ನ ತಂಡದೊಡನೆ ಸರಿಯಾದ ಹಂಚುವಿಕೆ ಮಾಡಬೇಕು. ಇಲ್ಲದಲ್ಲಿ ತಂಡಕ್ಕೆ ಬೇರೆಯವರ ಬೆಳೆವಣಿಗೆಗೆ ದುಡಿದಂತೆ ತಮಗೆ ಏನು ದಕ್ಕದಂತೆ ಭಾಸವಾಗುತ್ತದೆ.


 • ಬಿಸಿನೆಸ್ ಬ್ರಾಂಡ್ ಆಗಿ

  ಉದ್ಯಮಿ ಮಾಡುವ ಎಲ್ಲ ಕೆಲಸಗಳು ತನ್ನ ಒಂದು ವೈಯಕ್ತಿಕ ಬ್ರಾಂಡ್ ಇಮೇಜ್ಅನ್ನು ಬೆಳೆಸುವುದಕ್ಕೆ. ಇದು ಕೊನೆಯ ಆದರೆ ಬಹು ಮುಖ್ಯವಾದ ನಿಯಮ. ಸರಕು ಅಥವಾ ಸೇವೆಗಳಿಗೆ ಬೇಡಿಕೆ ಇರಬೇಕಾದರೆ ಗ್ರಾಹಕರ ಮನದಲ್ಲಿ ಇವುಗಳಿಂದ ತನ್ನ ಬ್ರಾಂಡ್ ಹೆಚ್ಚುತ್ತದೆ ಅನ್ನುವ ಒಂದು ಭಾವನೆ ಬರಬೇಕು. ಆಗಲೇ ಉದ್ಯಮಿಯ ಸರಕು ಹಾಗು ಸೇವೆಗೆ ಕಾಲ ಮೀರಿದರೂ ಬೇಡಿಕೆಯಿರುತ್ತದೆ.

  ಈ ಎಲ್ಲ ನಿಯಮಗಳನ್ನು ಮನವರಿಕೆಮಾಡಿಕೊಂಡು ನಿಮ್ಮ ಸ್ವಉದ್ಯಮದ ದಾರಿಯಲ್ಲಿ ಸಾಗಿ ನೀವೆಲ್ಲರೂ ಯಶಸ್ವಿಯಾಗುತ್ತೀರೆಂದು ಆಶಿಸುತ್ತೇವೆ. ನಿಮಗೆ ಇನ್ನೂ ಉದ್ಯಮದ ಕುರಿತು ಹೆಚ್ಚು ಪ್ರಶ್ನೆಗಳಿದ್ದರೆ ಕಾಮೆಂಟ್ಸ್ ಸೆಕ್ಷನ್ ಅಲ್ಲಿ ಬರೆಯಿರಿ.
ನಮ್ಮ ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಕೂಡ ಏನಾದರೂ ಉದ್ಯೋಗ ಮಾಡಿ ಜೀವನ ನಡೆಸುತ್ತೇನೆ ಅನ್ನುವ ಒಂದು ಭರವಸೆ ಇಟ್ಟುಕೊಳ್ಳಬಹುದಾದ ಸೂಕ್ತ ವಾತಾವರಣವಿದೆ. ಇದಕ್ಕೆ ನಮ್ಮ ಯುವಶಕ್ತಿ, ಹಣಕಾಸು ವ್ಯವಸ್ಥೆ, ಕೆಲಸ ಮಾಡುವ ಕರ ಕುಶಲತೆ, ಉದ್ಯಮಕ್ಕೆ ಅನುಕೂಲ ಮಾಡಿಕೊಡುವ ವಾತಾವರಣ ಮೊದಲಾದವು ಕಾರಣಗಳಿವೆ. ಹೊಸ ಬಗೆಯ ಸರಕುಗಳು ಮತ್ತು ಸೇವೆಗಳು ದಿನ ನಿತ್ಯ ನೋಡುತ್ತಲೇ ಇರುತ್ತೇವೆ. ಸಮಾಜದ ಬೇಕುಗಳಿಗೆ ಕೊನೆಯೇ ಇಲ್ಲ. ಉದ್ಯಮದಲ್ಲಿ ಕೆಲವೊಂದು ನಿಯಮಗಳನ್ನು ಪಾಲಿಸಿದರೆ ಇಟ್ಟ ಗುರಿ ತಪ್ಪುವುದಿಲ್ಲ ಎಂಬುದಕ್ಕೆ ವಿಶ್ವದ್ಯಾದ್ಯಂತ ಹಲವಾರು ಉದ್ಯಮಿಗಳು ನಮ್ಮ ಮುಂದೆ ಇದ್ದಾರೆ. ಹಾಗಿದ್ದರೆ ಬನ್ನಿ ನಮ್ಮ ಕನಸುಗಳನ್ನು ನನಸಾಗುವುದರ ಎಡೆಗೆ ಧೈರ್ಯದಿಂದ ಸಾಗೋಣ..

   
 
ಹೆಲ್ತ್