Back
Home » ಇತ್ತೀಚಿನ
ಇನ್‌ಸ್ಟಾಗ್ರಾಂಗೂ ಬಂತೂ ಪರಿಶೀಲಿಸಿದ ಅಕೌಂಟ್‌ ಲೇಬಲ್..!
Gizbot | 12th Jul, 2018 01:01 PM

ಇನ್ನು ಮುಂದೆ ಇನ್ಸ್ಟಾಗ್ರಾಂ ನಲ್ಲಿ ಫೇಸ್ ಬುಕ್ ನಂತೆ ಕಳ್ಳರಿಗೆ, ಕಾಕರಿಗೆ ಮತ್ತು ಬೇಕಾಬಿಟ್ಟಿಯಾಗಿ ಖಾತೆ ತೆರೆಯುವವರಿಗೆ ಕಡಿವಾಣ ಬೀಳಲಿದೆ. ಅಪಪ್ರಚಾರದ ಕಾರ್ಯದಲ್ಲಿ ತೊಡಗಿ ಸಮಾಜದ ಮೇಲೆ ಪರಿಣಾಮ ಬೀರುವವರ ವಿರುದ್ಧ ಇನ್ಸ್ಟಾಗ್ರಾಂ ಈಗಾಗಲೇ ಸಮರ ಸಾರಿದೆ. ಅದರ ಹಂತವಾಗಿ ಹಲವಾರು ಭದ್ರತಾ ಕಾರ್ಯಕ್ರಮಗಳನ್ನು ಇನ್ಸ್ಟಾಗ್ರಾಂ ಮಾಡುತ್ತಿದೆ. ಹೊಸ ಹೊಸ ವೈಶಿಷ್ಟ್ಯತೆಗಳನ್ನು ಬಿಡುಗಡೆಗೊಳಿಸಿರುವ ಇನ್ಸ್ಟಾಗ್ರಾಂ ತನ್ನ ಖಾತೆಗಳ ಸುರಕ್ಷತೆಯನ್ನು ನೋಡಿಕೊಳ್ಳಲು ಶ್ರಮಿಸುತ್ತಿದೆ. ಅದರ ಒಂದು ಹಂತವೇ ಈ ಅರ್ಜಿ ಆಹ್ವಾನ.

ಇನ್ಸ್ಟಾಗ್ರಾಮ್ ನಲ್ಲಿರುವ ಅಕೌಂಟ್ ಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಹೌದು ಫೇಕ್ ಅಕೌಂಟ್ ಗಳ ತಡೆ ಮತ್ತು ಅಪಪ್ರಚಾರವನ್ನು ತಡೆಯುವ ನಿಟ್ಟಿನಲ್ಲಿ ಇನ್ಸ್ಟಾಗ್ರಾಂ ಸಂಸ್ಥೆ ತನ್ನೆಲ್ಲ ಇನ್ಸ್ಟಾಗ್ರಾಂ ಗ್ರಾಹಕರ ಖಾತೆಗಳನ್ನು ಪರಿಶೀಲನೆಗೆ ಒಳಪಡಿಸಲಿದೆ. ಪರಿಶೀಲನಗೆ ಒಳಪಟ್ಟ ಖಾತೆಗಳನ್ನು ನೀಲಿ ವರ್ಣದ ಟಿಕ್ ಮಾರ್ಕ್ ನಿಂದ ಗುರುತಿಸಲಾಗುತ್ತದೆಯಂತೆ. ಈಗಾಗಲೇ ಇನ್ಸ್ಟಾಗ್ರಾಂನ ಅಕೌಂಟ್ ಪರಿಶೀಲನೆಯ ಕಾರ್ಯ ಆಸ್ಟ್ರೇಲಿಯಾದಲ್ಲಿ ಆರಂಭವಾಗಿದೆ ಮತ್ತು ತಮ್ಮ ಅಕೌಂಟನ್ನು ಪರಿಶೀಲಿಸುವ ನಿಟ್ಟಿನಲ್ಲಿ ಅರ್ಜಿಯನ್ನು ಬಳಕೆದಾರರಿಂದ ಆಹ್ವಾನಿಸಲಾಗಿದೆ.

ಈ ನೀಲಿ ವರ್ಣದ ಟಿಕ್ ಮಾರ್ಕ್ ನಿಮ್ಮ ಪ್ರೊಫೈಲ್ ಹುಡುಕಾಟದ ಫಲಿತಾಂಶದಲ್ಲಿ ಎದ್ದು ಕಾಣುವಂತೆ ಮಾಡುತ್ತದೆ ಮತ್ತು ನಿಮ್ಮ ಖಾತೆಗೆ ಹೆಚ್ಚಿನ ವಿಶ್ವಾಸಾರ್ಹತೆಯನ್ನು ದಯಪಾಲಿಸುತ್ತದೆ ಜೊತೆಗೆ ಬಳಕೆದಾರರಿಗೆ ಕೆಲವು ವಿಶೇಷ ಸವಲತ್ತುಗಳನ್ನು ಕೂಡ ನೀಡುತ್ತದೆ.

ಇಂದಿನಿಂದ, ಇನ್ಸ್ಟಾಗ್ರಾಂನ ಆಸ್ಟ್ರೇಲಿಯಾ ಬಳಕೆದಾರರು ಈ ಅರ್ಜಿಯನ್ನು ಹಾಕಬಹುದು . ಸೆಟ್ಟಿಂಗ್ಸ್ ಮೆನುವಿನಲ್ಲಿ " ರಿಕ್ವೆಸ್ಟ್ ವೆರಿಫಿಕೇಷನ್ " ಎಂಬ ಆಯ್ಕೆಯನ್ನು ಆಸ್ಟ್ರೇಲಿಯನ್ನಿರಿಗೆ ನೀಡಲಾಗಿದ್ದು ಅಲ್ಲಿ ಅವರು ಅಕೌಂಟಿನ ಪರಿಶೀಲನೆಗೆ ಅರ್ಜಿ ಹಾಕಲು ಅವಕಾಶವಿರುತ್ತದೆ. ಒಮ್ಮೆ ಅವರು ಸಂಬಂಧಪಟ್ಟ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿದರೆ, ಇನ್ಸ್ಟಾಗ್ರಾಂ ಪ್ರೊಫೈಲನ್ನು ಪರಿಶೀಲಿಸುತ್ತದೆ.

ಒಂದು ವೇಳೆ ಆ ಅಕೌಂಟ್ ಪರಿಶೀಲನೆಯ ನಂತರ ಯೋಗ್ಯ ಅಕೌಂಟ್ ಎಂದು ಸಾಬೀತಾದರೆ ಅವರಿಗೆ ಸೂಕ್ತ ಸವಲತ್ತುಗಳನ್ನು ನೀಡಲಾಗುತ್ತದೆ. ಸದ್ಯಕ್ಕೆ IOS ನ ಇನ್ಸ್ಟಾಗ್ರಾಂ ಆಪ್ ನಲ್ಲಿ ಮಾತ್ರ ಈ ಸೌಲಭ್ಯ ಲಭ್ಯವಿದ್ದು, ಕೆಲವೇ ದಿನಗಳಲ್ಲಿ ಆಂಡ್ರಾಯ್ಡ್ ನಲ್ಲೂ ಲಭ್ಯವಾಗಲಿದೆ.

ಪ್ರೊಫೈಲ್ ಪರಿಶೀಲನೆಗೆ ಇನ್ಸ್ಟಾಗ್ರಾಂ ಜನಪ್ರೀಯತೆ, ದೃಢೀಕರಣ,ಅನನ್ಯತೆ ಮತ್ತು ಪ್ರೊಫೈಲ್ ಸಂಪೂರ್ಣತೆಯಂತಹ ಹಲವು ಮಾನದಂಡಗಳನ್ನು ಇಟ್ಟಿದೆ. ಖಾತೆಯ ಪರಿಶೀಲನೆಗಾಗಿ ಬಳಕೆದಾರರು ತಮ್ಮ ಹೆಸರು, ಸಂಪೂರ್ಣ ಹೆಸರು, ಫೋಟೋ ಗುರುತಿನ ಚೀಟಿ ಇತ್ಯಾದಿ ಹಲವು ವಿವರಗಳನ್ನು ಇನ್ಸ್ಟಾಗ್ರಾಂಗೆ ಸಲ್ಲಿಸಬೇಕಾಗುತ್ತದೆ.

ಸ್ಕ್ಯಾಪ್ ಅಕೌಂಟ್ ಗಳು, ಫೇಕ್ ಅಕೌಂಟ್ ಗಳು, ಅಪಪ್ರಚಾರ, ಅನಗತ್ಯ ಬಳಕೆದಾರರನ್ನು ಇನ್ಸ್ಟಾಗ್ರಾಂನಿಂದ ಹೊರಗೋಡಿಸಲು ಸಂಸ್ಥೆ ಹೂಡಿರುವ ಹೊಸ ತಂತ್ರ ಇದು. ಯಾಕೆಂದರೆ ಇಂತಹ ಬಳಕೆದಾರರಿಂದ ಇನ್ಸ್ಟಾಗ್ರಾಂ ನ ಹೆಸರಿಗೆ ಧಕ್ಕೆ ಬರುತ್ತದೆ ಮತ್ತು ನಿಜವಾದ ಉತ್ತಮ ಬಳಕೆದಾರನಿಗೆ ತೊಂದರೆಯಾಗುತ್ತಿದೆ. ಅಷ್ಟೇ ಕೆಲವು ವಿಚಾರಗಳು ಸಾಮಾಜಿಕವಾಗಿಯೂ ದೊಡ್ಡ ಪರಿಣಾಮಗಳಿಗೆ ಕಾರಣವಾಗುತ್ತದೆ.

ಆಸ್ಟ್ರೇಲಿಯಾದಲ್ಲಿ ಆರಂಭವಾಗಿರುವ ಈ ಪ್ರಕ್ರಿಯೆಯನ್ನು ಇನ್ಸ್ಟಾಗ್ರಾಂ ಇತರ ಭಾಗಗಳಿಗೂ ವಿಸ್ತರಿಸಲಿದೆಯಂತೆ. ಸದ್ಯಕ್ಕೆ ಯಾವ ದೇಶದಲ್ಲಿ ಯಾವಾಗ ಬಿಡುಗಡೆಯಾಗಬಹುದು ಎಂಬ ವಿವರಣೆಯನ್ನು ಸಂಸ್ಥೆ ನೀಡಿಲ್ಲ. ಆದರೂ ನಿಮ್ಮ ಇನ್ಸ್ಟಾಗ್ರಾಂ ಅಕೌಂಟ್ ಪರಿಶೀಲನೆಗೆ ನೀವು ಸಿದ್ಧರಾಗಿರಬೇಕು ಎಂಬುದು ಮಾತ್ರ ಸತ್ಯ.

   
 
ಹೆಲ್ತ್