Back
Home » ಆರೋಗ್ಯ
ರಸ್ತೆ ಅಪಘಾತದ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ಹೇಗೆ?
Boldsky | 12th Jul, 2018 12:41 PM
 • ನಿಮ್ಮನ್ನು ಮೊದಲು ಪರೀಕ್ಷಿಸಿಕೊಳ್ಳಿ

  ಅಪಘಾತದಲ್ಲಿ ನೀವು ಗಾಯಗೊಂಡಿದ್ದರೆ ಆಗ ನೀವು ಮೊದಲು ನಿಮ್ಮನ್ನು ಪರೀಕ್ಷಿಸಿಕೊಳ್ಳಿ. ಅಂಗಾಂಗಳನ್ನು ಯಾವ ರೀತಿಯಲ್ಲಿ ತಿರುಗಿಸಬಹುದು ಮತ್ತು ತಲೆತಿರುಗುವಿಕೆ ಇತ್ಯಾದಿ ಸಮಸ್ಯೆ ಇದೆಯಾ ಎಂದು ತಿಳಿಯಿರಿ. ಬೇರೆಯವರಿಗೆ ನೆರವಾಗಲು ನೀವು ಮೊದಲು ಫಿಟ್ ಇರಬೇಕು.


 • ಇತರ ಗಾಯಾಳುಗಳನ್ನು ನೋಡಿ

  ಬೇರೆ ವ್ಯಕ್ತಿಗಳು ಗಾಯಗೊಂಡಿದ್ದರೆ ಆಗ ಮೊದಲು ಅವರ ಗಾಯದ ಸಮಸ್ಯೆ ಎಷ್ಟು ತೀವ್ರವಾಗಿದೆ ಎಂದು ತಿಳಿಯಿರಿ. ಉದಾಹರಣೆಗೆ ತಲೆ, ಕುತ್ತಿಗೆ, ಕೈಕಾಲು, ಬೆನ್ನು ಇತ್ಯಾದಿ ಭಾಗಗಳಿಂದ ರಕ್ತಸ್ರಾವವಾಗುತ್ತಿದೆಯಾ ಎಂದು ನೋಡಿ. ಗಂಭೀರವಾಗಿ ಗಾಯಗೊಂಡು, ಉಸಿರಾಡಲು ಕಷ್ಟಪಡುತ್ತಿರುವ ವ್ಯಕ್ತಿಗೆ ಮೊದಲು ಪ್ರಾಶಸ್ತ್ಯ ನೀಡಿ. ಮಾತನಾಡುವ ಮತ್ತು ಬೊಬ್ಬೆ ಹಾಕುತ್ತಿರುವ ವ್ಯಕ್ತಿಯು ಉಸಿರಾಡಬಲ್ಲರು. ಇವರನ್ನು ಬಳಿಕ ಉಪಚರಿಸಬಹುದು. ಗಾಯಾಳುವಿನ ಹೆಸರನ್ನು ಕೇಳಿ, ಆತ ಇದಕ್ಕೆ ಪ್ರತಿಕ್ರಿಯಿಸಿದರೆ ಪರಿಸ್ಥಿತಿ ಆತನಿಗೆ ಅರಿವಾಗಿದೆ ಮತ್ತು ದೊಡ್ಡ ಮಟ್ಟದಲ್ಲಿ ತಲೆಗೆ ಏಟಾಗಿಲ್ಲವೆಂದು ಹೇಳಬಹುದು.


 • ನೆರವಿಗೆ ಕರೆ ಮಾಡಿ

  ತಕ್ಷಣ ನೀವು ಆ್ಯಂಬುಲೆನ್ಸ್ ಗೆ ಕರೆ ಮಾಡಿ ಅಥವಾ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ. ಗಾಯಾಳುವಿನ ಸ್ಥಿತಿ ಬಗ್ಗೆ ತಿಳಿದಾಗ, ಅದನ್ನು ವೈದ್ಯರಿಗೆ ವಿವರಿಸಲು ನಿಮಗೆ ನೆರವಾಗುವುದು.


 • ಉಸಿರಾಟದ ಚಿಹ್ನೆಗಳನ್ನು ಗಮನಿಸಿ

  ಇದರ ಬಳಿಕ ವ್ಯಕ್ತಿ ಉಸಿರಾಡುತ್ತಿದ್ದಾನೆಯಾ ಮತ್ತು ಆತನ ನಾಡಿಬಡಿತ ನೋಡಿ.


 • ಬಾಯಿ ಅಥವಾ ಗಂಟಲಿನಲ್ಲಿ ಏನಾದರೂ ಇದೆಯಾ ಎಂದು ಪರೀಕ್ಷಿಸಿ

  ನಿಮಗೆ ಉಸಿರಾಟದ ಶಬ್ದ ಬಾರದೆ ಇದ್ದರೆ ಆಗ ನೀವು ಬಾಯಿ ಅಥವಾ ಗಂಟಲಿನಲ್ಲಿ ಏನಾದರೂ ಇದೆಯಾ ಎಂದು ನೋಡಿ. ಬಾಯಿಯ ಒಳಗಡೆ ಏನಾದರೂ ಸಿಲುಕಿಕೊಂಡಿದ್ದರೆ ಆಗ ನೀವು ತೋರು ಮತ್ತು ಮಧ್ಯದ ಬೆರಳು ಹಾಕಿ ಇದನ್ನು ಸರಿಪಡಿಸಿ.


 • ಜೀವ ಉಳಿಸುವ ತಂತ್ರಗಳು

  ನಾಡಿಬಡಿತ ಇಲ್ಲವೆಂದಾದಲ್ಲಿ ಸಿಪಿಆರ್ ಅಥವಾ ಇಎಆರ್ ಆರಂಭಿಸಿ. ವ್ಯಕ್ತಿಯ ಕುತ್ತಿಗೆ ನೇರವಾಗಿಟ್ಟುಕೊಂಡು ಇಎಆರ್(ಹೊರಗಿನ ಗಾಳಿ ಪುನರುಜ್ಜೀವನ) ಅಥವಾ ಸಿಪಿಆರ್( ಹೃದಯ ಶ್ವಾಸಕೋಶ ಪ್ರಚೋದಕ). ಇಎಆರ್ ನಲ್ಲಿ ಮೂರು ವಿಧಗಳು ಇವೆ: ಬಾಯಿಯಿಂದ ಬಾಯಿಗೆ, ಬಾಯಿಯಿಂದ ಮೂಗಿಗೆ ಮತ್ತು ಬಾಯಿಯಿಂದ ಮಾಸ್ಕ್ ಗೆ. ಇಎಆರ್ ಮತ್ತು ಸಿಪಿಆರ್ ಹೇಗೆ ಮಾಡುವುದು ಎಂದು ಇಲ್ಲಿ ಓದುತ್ತಾ ತಿಳಿಯಿರಿ.


 • ಗಂಭೀರ ಪರಿಸ್ಥಿತಿ ಎದುರಿಸುವ ದಾರಿಗಳು

  ವ್ಯಕ್ತಿಯ ಬಾಯಿಯಿಂದ ರಕ್ತಸ್ರಾವವಾಗುತ್ತಿದ್ದರೆ ಅಥವಾ ಆತ/ಆಕೆ ವಾಂತಿ ಮಾಡುತ್ತಲಿದ್ದರೆ ವ್ಯಕ್ತಿಯನ್ನು ಆತ/ಆಕೆಯ ಕಡೆಗೆ ತಿರುಗಿಸಿ. ಇದರಿಂದ ವ್ಯಕ್ತಿಯು ಉಸಿರುಗಟ್ಟುವುದು ನಿಲ್ಲುವುದು. ವ್ಯಕ್ತಿಯ ಕೆಳಗಡೆ ಇರುವ ಕೈಗಳನ್ನು ನೇರವಾಗಿರಿಸಿ ಮತ್ತು ಕೈಗಳನ್ನು ಎದೆಯ ಹತ್ತಿರಕ್ಕೆ ಇರಿಸಿ.


 • ಗಾಯಗಳಿಗೆ ಚಿಕಿತ್ಸೆ

  ದೊಡ್ಡ ಮಟ್ಟದ ಗಾಯಗಳಾಗಿ ಅದರಿಂದ ತೀವ್ರ ರಕ್ತ ಒಸರಿ ಬರುತ್ತಿದ್ದರೆ ಆಗ ನೀವು ಒಂದು ದೊಡ್ಡ ಬಟ್ಟೆ ತೆಗೆದುಕೊಂಡು ಅದಕ್ಕೆ ಒತ್ತಿ ಹಿಡಿಯಿರಿ. ಬೆರಳುಗಳ ಬದಲಿಗೆ ಅಂಗೈಯಲ್ಲಿ ಇದನ್ನು ಒತ್ತಿಟ್ಟುಕೊಳ್ಳಿ. ಪ್ರಥಮ ಚಿಕಿತ್ಸೆ ಬಗ್ಗೆ ನೀವು ಓದಿಕೊಳ್ಳಬಹುದು. ಒಂದು ವೇಳೆ ಗಾಯದಿಂದ ತುಂಬಾನೇ ರಕ್ತ ಬರುತ್ತಿದ್ದರೆ, ಗಾಯದ ಮೇಲೆ ಚಿಟಿಕೆಯಷ್ಟು ಅರಿಶಿನ ಹುಡಿಯ ಪ್ರಯೋಗವನ್ನು ಮಾಡಿ. ಉಳಿದ ಭಾಗಕ್ಕೆ ಸೋಂಕು ಹರಡದಂತೆ ಇದು ತಡೆಯುತ್ತದೆ ಮತ್ತು ಕೆಲವೇ ನಿಮಿಷಗಳಲ್ಲಿ ರಕ್ತವನ್ನು ನಿಯಂತ್ರಣಕ್ಕೆ ತರುತ್ತದೆ. ಇನ್ನೊಂದು ವಿಧಾನವೆಂದರೆ ತೆರೆದ ಗಾಯದ ಮೇಲೆ ಐಸ್ ಕ್ಯೂಬ್‌ಗಳನ್ನು ಒತ್ತಿಹಿಡಿಯಿರಿ. ತ್ವಚೆಯ ಕೋಶಗಳನ್ನು ಮತ್ತು ಅಂಗಾಂಶಗಳನ್ನು ರಚಿಸಿಕೊಂಡು ಇದು ರಕ್ತ ಸೋರುವಿಕೆಯನ್ನು ನಿಯಂತ್ರಿಸುತ್ತದೆ.


 • ಬೆನ್ನುಮೂಳೆ ಗಾಯದ ಬಗ್ಗೆ ಸಂಶಯಿಸಿ

  ಗಾಯಾಳುವಿನ ಕುತ್ತಿಗೆಯು ಸಾಮಾನ್ಯಕ್ಕಿಂತ ವ್ಯತಿರಿಕ್ತವಾಗಿ ಕಾಣಿಸಿಕೊಳ್ಳುತ್ತಿದ್ದರೆ ಅಥವಾ ಪ್ರಜ್ಞೆ ಕಳೆದುಕೊಂಡಿದ್ದರೆ ಆಗ ಆತನನ್ನು ನೀವು ಮುಟ್ಟಬೇಡಿ. ತಕ್ಷಣ ನೀವು ನೆರವು ಕೇಳಿ. ಗಾಯಾಳುವಿನ ಕುತ್ತಿಗೆ ಮುರಿದಿರಬಹುದು. ನೀವು ಆತನನ್ನು ಅಲ್ಲಿಂದ ಅಲುಗಾಡಿಸಿದರೆ ಇದರಿಂದ ಹೆಚ್ಚಿನ ತೊಂದರೆಯಾಗಬಹುದು.


 • ವ್ಯಕ್ತಿಯನ್ನು ಬಿಸಿಯಾಗಿರಿ

  ಆಘಾತದಿಂದಾಗಿ ವ್ಯಕ್ತಿಗೆ ಅಪಘಾತದ ಬಳಿಕ ತುಂಬಾ ಚಳಿಯ ಭಾವನೆ ಬರಬಹುದು. ಇದರಿಂದ ಆತನನ್ನು ಬೆಚ್ಚಗೆ ಇಡುವುದು ಅತೀ ಅಗತ್ಯವಾಗಿರುವುದು. ಆತನಿಗೆ ಕಂಬಳಿ, ಜಾಕೆಟ್ ಇತ್ಯಾದಿ ಏನಾದರೂ ನೀಡಿ ಬಿಸಿಯಾಗಿಡಿ.


 • ಗಾಯಾಳುವಿಗೆ ನೀರು, ಆಹಾರ ಕೊಡಬೇಡಿ

  ಗಾಯಾಳುವಿಗೆ ನೀರು ಅಥವಾ ಯಾವುದೇ ರೀತಿಯ ಆಹಾರ, ದ್ರವಾಹಾರ ನೀಡಲು ಹೋಗಬೇಡಿ. ಇದರಿಂದ ಗಾಯಾಳು ಉಸಿರುಗಟ್ಟಬಹುದು.


 • ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದರೆ...

  ಯಾವಾಗ ವ್ಯಕ್ತಿಗೆ ಇದ್ದಕ್ಕಿದ್ದ ಹಾಗೇ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದರೆ, ಅವರಿಗೆ ಹೃದಯಾಘಾತವಾಗಿರುತ್ತದೆ. ಹೀಗೆ ಉಂಟಾದಾಗ ವೈದ್ಯರ ಬಳಿ ಕೊಂಡೊಯ್ಯುವಷ್ಟರಲ್ಲಿ ಅಪಾಯ ಉಂಟಾಗಬಹುದು. ಅದನ್ನು ತುರ್ತು ಚಿಕಿತ್ಸೆ ವಿಧಾನದಿಂದ ತಡೆಯಬಹುದು. ಹೃದಯಾಘಾತವಾದರೆ ಹೃದಯ ತನ್ನ ಕೆಲಸವನ್ನು ಕ್ಷಣ ಕಾಲ ನಿಲ್ಲಿಸಿ ಬಿಡುತ್ತದೆ. ಈ ಸಂದರ್ಭದಲ್ಲಿ ಅವರ ಹೃದಯವನ್ನು ಬಲವಾಗಿ ಪ್ರೆಸ್ ಮಾಡಬೇಕು, ಈ ರೀತಿ ಮಾಡಿದಾಗ ಹೃದಯ ತನ್ನ ಕೆಲಸ ಪ್ರಾರಂಭಿಸುತ್ತದೆ. ನಂತರ ಹೃದಯಾಘಾತವಾದ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಿರಿ.


 • ಒಂದು ವೇಳೆ ವ್ಯಕ್ತಿಗೆ ಮೂಳೆ ಮುರಿತವಾಗಿದ್ದರೆ

  ಮೂಳೆ ಮುರಿತ ಭಾಗವನ್ನು ಯಾವುದೇ ಕಾರಣಕ್ಕು ಅಲುಗಾಡಿಸಬೇಡಿ. ಇದರಿಂದ ಪರಿಸ್ಥಿತಿ ಮತ್ತಷ್ಟು ಹಾಳಾಗುತ್ತದೆ. ಮೂಳೆ ಮುರಿದ ಭಾಗವನ್ನು ಅಲುಗಾಡದಂತೆ ಬಟ್ಟೆಯಲ್ಲಿ ಕಟ್ಟಿಕೊಂಡು, ಊತ ಬರುವ ಮೊದಲು ವೈದ್ಯರ ಬಳಿಗೆ ತಪಾಸಣೆಗೆ ಹೋಗಿ.


 • ಪ್ರಜ್ಞೆ ತಪ್ಪಿದಾಗ ಮತ್ತು ಉಸಿರಾಡದೆ ಇದ್ದಾಗ

  ಒಂದು ವೇಳೆ ಅಪಘಾತದಲ್ಲಿ ಪ್ರಜ್ಞೆ ತಪ್ಪಿದಾಗ ಮತ್ತು ಉಸಿರಾಡದೆ ಇದ್ದಾಗ ಪ್ರಜ್ಞೆ ತಪ್ಪಿದ ವ್ಯಕ್ತಿಯನ್ನು ಮೊದಲು ನೆಲದ ಮೇಲೆ ಮುಖವನ್ನು ಕೆಳಗೆ ಮಾಡಿ ಮಲಗಿಸಿ. ಆತನ ಎದೆಯ ಮಧ್ಯ ಭಾಗದಲ್ಲಿ ಆತನಿಗೆ ನಿಧಾನವಾಗಿ ಒತ್ತಿ. ಈ ಒತ್ತುವಿಕೆಯಿಂದ ಆತನ ಹೃದಯದಲ್ಲಿ ರಕ್ತ ಪರಿಚಲನೆ ಎಂದಿನಂತೆ ಆರಂಭಗೊಳ್ಳುತ್ತದೆ. ಆದರೆ ಈ ಪ್ರಥಮ ಚಿಕಿತ್ಸೆಯನ್ನು ನೀಡಿದ ಮೇಲೆ ವೈದ್ಯರಿಂದ ಪರೀಕ್ಷಿಸುವುದನ್ನು ಮರೆಯಬೇಡಿ.


 • ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಪಾಲಿಸಬೇಕಾದ ಕ್ರಮಗಳು

  • ಗಾಯಾಳುವನ್ನು ಸ್ಟ್ರೆಚರ್ ಅಥವಾ ಸ್ಟಿಫ್ ಬೋರ್ಡ್ ನಲ್ಲಿ ಸಾಗಿಸಿ.
  • ಇದರಿಂದ ಗಾಯಾಳುವಿನ ಚಲನೆ ಕಡಿಮೆಯಾಗುವುದು ಮತ್ತು ಗಾಯಾಳು ಸಮಸ್ಯೆಯು ತುಂಬಾ ಕೆಟ್ಟ ಸ್ಥಿತಿಗೆ ತಲುಪುವುದು ತಪ್ಪುವುದು.
  • ಕುತ್ತಿಗೆ ಮತ್ತು ಬೆನ್ನು ನೇರವಾಗಿರಲಿ. ಸುತ್ತಿಕೊಂಡ ಟವೆಲ್ ಅಥವಾ ದಪ್ಪದ ಬಟ್ಟೆಯನ್ನು ಕುತ್ತಿಗೆ ಕೆಳಗೆ ಇಟ್ಟುಬಿಡಿ.
  • ನೇರವಾಗಿ ಮಲಗುವಂತೆ ನೋಡಿಕೊಳ್ಳಿ.
  • ಅಂಗಾಂಗಗಳಿಗೆ ಗಾಯವಾಗಿದ್ದರೆ ಆಗ ಕುಳಿತುಕೊಂಡು ಸಾಗಿಸಬಹುದು.
  • ರಕ್ತಸ್ರಾವವಾಗುತ್ತಿದ್ದರೆ ಗಾಯಗೊಂಡಿರುವ ಭಾಗವನ್ನು ವ್ಯಕ್ತಿಯ ದೇಹಕ್ಕಿಂತ ಮೇಲೆ ಎತ್ತಲು ಪ್ರಯತ್ನಿಸಿ. ಆಸ್ಪತ್ರೆಗೆ ಸಾಗಿಸುವ ತನಕ ಗಾಯದ ಭಾಗಕ್ಕೆ ಒತ್ತಡ ಹಾಕಿ. ಇದು ರಕ್ತಸ್ರಾವ ನಿಯಂತ್ರಣ ಮತ್ತು ನಿಲ್ಲಲು ನೆರವಾಗುವುದು.
  • ಆಸ್ಪತ್ರೆಗೆ ಸಾಗಿಸುವ ವೇಳೆ ನಾಡಿಬಡಿತ ಮತ್ತು ಉಸಿರಾಟ ಪರೀಕ್ಷಿಸುತ್ತಾ ಇರಿ. ಉಸಿರಾಟ ನಿಲ್ಲಿಸಿದರೆ ಆಗ ನೀವು ಸಿಪಿಆರ್ ಅಥವಾ ಇಎಆರ್ ನೀಡಬಹುದು.
ರಸ್ತೆ ಅಪಘಾತಗಳ ಬಗ್ಗೆ ನಾವು ಕ್ಷಣಕ್ಷಣವು ಸುದ್ದಿಗಳನ್ನು ಓದುತ್ತಲೇ ಇರುತ್ತೇವೆ. ವೇಗದ ಚಾಲನೆ, ಅಜಾಗರೂಕತೆ, ಪಾದಚಾರಿಗಳು ಹೀಗೆ ಪ್ರತಿಯೊಬ್ಬರು ಇದಕ್ಕೆ ಕಾರಣವಾಗುತ್ತಿದ್ದಾರೆ. ಕೆಲವೊಂದು ಸಲ ಕುಟುಂಬವೇ ಅಪಘಾತಕ್ಕೆ ಸಿಲುಕಿ ಸಂಪೂರ್ಣವಾಗಿ ಬಲಿಯಾಗಿರುವುದನ್ನು ನಾವು ಓದಿದ್ದೇವೆ. ಆದರೆ ಅಪಘಾತದ ವೇಳೆ ಗಾಯಾಳುಗಳಿಗೆ ಸರಿಯಾದ ಪ್ರಥಮ ಚಿಕಿತ್ಸೆ ಸಿಗದೇ ಇರುವುದೇ ಸಾವಿನ ಸಂಖ್ಯೆಯು ಹೆಚ್ಚಾಗಲು ಕಾರಣವೆಂದು ತಿಳಿದುಬರುವುದು.

ಅಪಘಾತದಲ್ಲಿ ಸಿಲುಕಿರುವ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ದಾಖಲಿಸುವುದು ನಮ್ಮೆಲ್ಲರ ಪ್ರಥಮ ಆದ್ಯತೆಯಾಗಬೇಕು. ಅಪಘಾತದಲ್ಲಿ ಗಾಯಾಳುಗಳಾದರೆ ಆಗ ಏನು ಮಾಡಬೇಕು ಎಂದು ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಪ್ರಥಮ ಚಿಕಿತ್ಸೆ ವೇಳೆ ಮಾಡಬಹುದಾದ ಮತ್ತು ಮಾಡಬಾರದ ವಿಚಾರಗಳು...

   
 
ಹೆಲ್ತ್