Back
Home » ಸುದ್ದಿ
ಬಿಬಿಎಂಪಿ ಆಡಿಟ್ ವರದಿ ಬಗ್ಗೆ ಹೈ ಕೋರ್ಟ್ ನಲ್ಲಿ ವಿಚಾರಣೆ ಆರಂಭ
Oneindia | 12th Jul, 2018 08:07 PM

ಬೆಂಗಳೂರು, ಜುಲೈ 12 : ಬಿಬಿಎಂಪಿಯ ಸಿಎಜಿ ಲೆಕ್ಕಪರಿಶೋಧನೆಯ ವರದಿ ಕೇಳಿ ಸಂಸದ ರಾಜೀವ್ ಚಂದ್ರಶೇಖರ್ ಹಾಗೂ ನಮ್ಮ ಬೆಂಗಳೂರು ಫೌಂಡೇಷನ್ ಸಲ್ಲಿಸಿದ್ದ ಅರ್ಜಿ ಗುರುವಾರ ಹೈಕೋರ್ಟ್ ಮುಂದೆ ಬಂದಿತು. ನ್ಯಾಯಮೂರ್ತಿಗಳಾದ ಎಚ್.ಜಿ.ರಮೇಶ್ ಹಾಗೂ ಮೊಹಮ್ಮದ್ ನವಾಜ್ ಮುಂದೆ ಈ ಪ್ರಕರಣ ಬಂದಿತು.

ಆದರೆ, ಲೆಕ್ಕ ಪರಿಶೋಧನೆ ವರದಿಯನ್ನು ಭಾಷಾಂತರ ಮಾಡಿಸಿ ಕೊಡುವಂತೆ ನೀಡಿದ್ದ ಕೋರ್ಟ್ ಸೂಚನೆಯನ್ನು ಬಿಬಿಎಂಪಿ ಪಾಲಿಸಿರಲಿಲ್ಲ. ಇದೀಗ ಬಿಬಿಎಂಪಿಯ ಆಕ್ಷೇಪಕ್ಕೆ ಪ್ರತಿಯಾಗಿ ಉತ್ತರ ನೀಡುವತಂತೆ ಸೂಚಿಸಿ, ಆಗಸ್ಟ್ ಎರಡನೇ ತಾರೀಕಿಗೆ ವಿಚಾರಣೆ ಮುಂದೂಡಿ ಕೋರ್ಟ್ ಆದೇಶ ನೀಡಿದೆ.

ಬೆಂಗಳೂರು ಸುಧಾರಣೆಗೆ ರಾಜೀವ್ ಚಂದ್ರಶೇಖರ್ 5 ಅದ್ಭುತ ಸಲಹೆ

"ಬಿಬಿಎಂಪಿಯ ಆರ್ಥಿಕ ಲೆಕ್ಕಪರಿಶೋಧನೆಗೆ ಕೇಳಿ ನಾನು ಹಾಗೂ ನಮ್ಮ ಬೆಂಗಳೂರು ಫೌಂಡೇಷನ್ ಮೂರು ವರ್ಷದ ಹಿಂದೆ ಸಲ್ಲಿಸಿದ್ದ ಅರ್ಜಿ ಇಂದು ಹೈಕೋರ್ಟ್ ನಲ್ಲಿ ವಿಚಾರಣೆಗೆ ಬಂತು. ಭ್ರಷ್ಟ ಬಿಬಿಎಂಪಿಯಿಂದ ಹತ್ತು ಸಾವಿರ ಕೋಟಿ ರುಪಾಯಿ 'ಯೋಜನೆ'ಯು ಯಾವುದೇ ಉತ್ತರದಾಯಿತ್ವ, ಪಾರದರ್ಶಕತೆ ಅಥವಾ ಲೆಕ್ಕ ಪರಿಶೋಧನೆ ಇಲ್ಲದೆ ಖರ್ಚು ಮಾಡಲಾಗಿದೆ" ಎಂದಿದ್ದಾರೆ ರಾಜೀವ್ ಚಂದ್ರಶೇಖರ್.

ಇದನ್ನು ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಬದಲಿಸಬೇಕು. ಆ ದಿಕ್ಕಿನಲ್ಲಿ ವೇಗವಾಗಿ ಸಾಗಲು ಕೋರ್ಟ್ ನೆರವಾಗಬೇಕು. ಬಿಬಿಎಂಪಿ ಪ್ರತಿ ವರ್ಷ ಸಾರ್ವಜನಿಕರ ಹತ್ತು ಸಾವಿರ ಕೋಟಿ ರುಪಾಯಿಯನ್ನು ಯೋಜನೆಗಳು ಹಾಗೂ ಖರ್ಚಿಗೆ ವೆಚ್ಚ ಮಾಡುತ್ತದೆ. ಇಷ್ಟು ಹಣ ಖರ್ಚು ಮಾಡಿದರೂ ಸಾರ್ವಜನಿಕರ ಬದುಕಲ್ಲಿ ಏನೂ ಬದಲಾವಣೆ ಆಗಿಲ್ಲ ಎಂದು ಸಂಸದರು ಆರೋಪಿಸಿದ್ದಾರೆ.

ಕೆರೆಗಳಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ. ರಸ್ತೆಗಳಲ್ಲಿ ಹಳ್ಳ ಬಿದ್ದಿದೆ. ಮನೆಗಳಲ್ಲಿ ನೀರು ನುಗ್ಗುತ್ತಿದೆ. ಕಸ ವಿಲೇವಾರಿ ಆಗುತ್ತಿಲ್ಲ. ವೇತನ ಸಿಗದೆ ಪೌರಕಾರ್ಮಿಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಜನರ ಪರವಾಗಿ ಕೆಲಸ ಮಾಡಬೇಕಾದ ಕಾರ್ಪೊರೇಟರ್ ಗಳೇ ಕಾಂಟ್ರಾಕ್ಟರ್ ಗಳಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಕನಿಷ್ಠ ಪಕ್ಷ ಆರ್ಥಿಕ ಆಡಿಟ್ ಮೂಲಕ ಜನರಿಗೆ ತಿಳಿಯಬೇಕು: ಅಷ್ಟು ದೊಡ್ಡ ಮೊತ್ತ ಏನಾಗುತ್ತಿದೆ? ಸಾರ್ವಜನಿಕ ಹಣ ಹೇಗೆ ವೆಚ್ಚವಾಗುತ್ತಿದೆ ಎಂಬುದು ತಿಳಿದುಕೊಳ್ಳುವುದು ಪ್ರಜಾಪ್ರಭುತ್ವದಲ್ಲಿ ಜನರ ಅಧಿಕಾರ ಎಂದು ರಾಜೀವ್ ಚಂದ್ರಶೇಖರ್ ಅಭಿಪ್ರಾಯ ಪಟ್ಟಿದ್ದಾರೆ.

   
 
ಹೆಲ್ತ್