Back
Home » ಆರೋಗ್ಯ
ಮಧುಮೇಹಿಗಳು ಈ ಎಂಟು ಬಗೆಯ 'ಹೃದಯ ಪರೀಕ್ಷೆ' ಗಳನ್ನು ಮಾಡಿಸಿಕೊಳ್ಳಲೇಬೇಕು!
Boldsky | 19th Jul, 2018 11:19 AM

ಮಧುಮೇಹಿಗಳ ಸಂಖ್ಯೆ ಸುಮಾರು ಎರಡು ದಶಕಗಳ ಹಿಂದೆ ತೀರಾ ಕಡಿಮೆ ಇತ್ತು. ಇಂದು ನಮ್ಮ ಆಪ್ತರ ವಲಯದಲ್ಲಿಯೇ ಅಥವಾ ಸಾಮಾಜಿಕ ಪರಿಚಯದಲ್ಲಿಯೇ ಹಲವಾರು ಮಧುಮೇಹಿಗಳಿರಬಹುದು, ಅಥವಾ ಸ್ವತಃ ನಾವೇ ಮಧುಮೇಹಿಗಳಾಗಿರಾಹುದು.

ಹೌದು, ಆಧುನಿಕ ಜೀವನಕ್ರಮ ನೀಡಿರುವ ಆರಾಮದ ಜೊತೆಗೇ ಉಚಿತವಾಗಿ ನೀಡಿರುವ ಉಡುಗೊರೆ. ಈ ಸ್ಥಿತಿಗೆ ಒಳಗಾಗುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದನ್ನು ನಿತ್ಯ ಎಂಬಂತೆ ಕೇಳುತ್ತಲೇ ಬರುತ್ತಿದ್ದೇವೆ.

ಮನುಷ್ಯ ಎಂದ ಮೇಲೆ ಒಂದಲ್ಲಾ ಒಂದು ಕಾಯಿಲೆ ಇದ್ದೇ ಇರಬೇಕು, ನಮ್ಮ ಇಡಿಯ ಜೀವಮಾನದಲ್ಲಿ ಹಲವಾರು ಕಾಯಿಲೆಗಳು ಬೇಡವೆಂದರೂ ಆವರಿಸಿಯೇ ಇರುತ್ತವೆ. ಹಾಗೆ ಇರಲು ಸಾಧ್ಯವೇ ಇಲ್ಲ, ಏಕೆಂದರೆ ನಮ್ಮ ಪರಿಸರದಲ್ಲಿ ಸಾವಿರಾರು ಬಗೆಯ ವೈರಸ್ಸುಗಳಿದ್ದು ಪ್ರತಿ ಬಾರಿ ಒಂದು ಬಗೆಯ ವೈರಸ್ಸು ಧಾಳಿ ಮಾಡಿದಾಗಲೂ ದೇಹ ಇದಕ್ಕೆ ಪ್ರತಿರೋಧ ವ್ಯವಸ್ಥೆಯನ್ನು ಸ್ಥಾಪಿಸಿಕೊಳ್ಳುವವರೆಗಾದರೂ ಶೀತ ನೆಗಡಿ ಮೊದಲಾದ ಕಾಯಿಲೆ ಬಂದೇ ಬರಬೇಕು. ಇವೆಲ್ಲವೂ ತಾತ್ಕಾಲಿಕ ಅವಧಿಯ ಕಾಯಿಲೆಗಳಾದರೆ ಕೆಲವು ಜೀವಮಾನವಿಡೀ ಬಾಧಿಸುವಂತಹದ್ದೂ ಇರಬಹುದು. ಮಧುಮೇಹ ಸಹಾ ಇಂತಹದ್ದೊಂದು ಕಾಯಿಲೆಯಾಗಿದೆ. ಮಧುಮೇಹ ಬಂದ ಬಳಿಕ ಇದನ್ನು ನಿಯಂತ್ರಣದಲ್ಲಿರಿಸಬಹುದೇ ವಿನಃ ಇದನ್ನು ಸಂಪೂರ್ಣವಾಗಿ ಗುಣಪಡಿಸಲು ಇದುವರೆಗೆ ಯಾವುದೇ ಔಷಧಿಯನ್ನು ಕಂಡುಹಿಡಿಯಲಾಗಿಲ್ಲ.

ನಮ್ಮ ಆಹಾರದಿಂದ ಲಭಿಸುವ ಸಕ್ಕರೆಯನ್ನು ಬಳಸಿಕೊಳ್ಳಲು ಮೇದೋಜೀರಕ ಗ್ರಂಥಿ ಸ್ರವಿಸುವ ಇನ್ಸುಲಿನ್ ಎಂಬ ರಸದೂತದ ಅಗತ್ಯವಿದೆ. ಒಂದು ವೇಳೆ ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಉತ್ಪತ್ತಿಯಾಗದೇ ಇದ್ದರೆ ಅಥವಾ ಉತ್ಪತ್ತಿಯಾದರೂ ಬಳಕೆಯಾಗದೇ ಹೋದರೆ ಸಕ್ಕರೆ ಮೂತ್ರದ ಮೂಲಕ ವಿಸರ್ಜಿಸಲ್ಪಡುತ್ತದೆ.

ಮೇದೋಜೀರಕ ಗ್ರಂಥಿ ಉತ್ಪಾದಿಸುವ ಇನ್ಸುಲಿನ್ ಅಷ್ಟೂ ಸಕ್ಕರೆಯನ್ನು ಬಳಸಿಕೊಳ್ಳಲು ಸಾಧ್ಯವಾಗದಷ್ಟು ಪ್ರಮಾಣದಲ್ಲಿರದೇ ಇದ್ದರೆ ಇದಕ್ಕೆ ಟೈಪ್ ೧ ಎಂದೂ, ಉತ್ಪತ್ತಿಯಾದರೂ ಬಳಸಿಕೊಳ್ಳಲು ಅಸಮರ್ಥವಾದರೆ ಇದಕ್ಕೆ ಟೈಪ್ 2 ಮಧುಮೇಹ ಎಂದು ಗುರುತಿಸಲಾಗುತ್ತದೆ. ಬಗೆ ಯಾವುದೇ ಆದರೂ ಇದರ ಲಕ್ಷಣಗಳು ಸಮಾನವಾಗಿರುತ್ತವೆ. ಅತಿಯಾದ ಸುಸ್ತು, ಹಸಿವಾಗುವ ಪರಿಯಲ್ಲಿ ಏರಿಳಿತಗಳು, ಶೀಘ್ರವಾಗಿ ಮೂತ್ರಕ್ಕೆ ಅವಸರವಾಗುವುದು, ತೂಕದಲ್ಲಿ ಶೀಘ್ರವಾದ ಏರಿಳಿತ, ದೃಷ್ಟಿ ಮಂದವಾಗುವುದು, ಗಾಯವಾದರೆ ಮಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದು ಇತ್ಯಾದಿ.

ಮಧುಮೇಹದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಸೀಬೆಹಣ್ಣಿನ ಎಲೆಗಳು ನೆರವಾಗಲಿದೆ!

ಹಾಗಾಗಿ ಮಧುಮೇಹ ಆವರಿಸಿದ ವ್ಯಕ್ತಿ ಪುರುಷ/ಮಹಿಳೆ ಎಂಬ ಬೇಧವಿಲ್ಲದೇ ರೋಗಿಯ ಜೀವನಕ್ರಮವನ್ನೇ ಬದಲಿಸಿಬಿಡುತ್ತದೆ. ಮಧುಮೇಹವನ್ನು ನಿಯಂತ್ರಿಸಿಕೊಳ್ಳಲು ಅನಿವಾರ್ಯವಾಗಿ ಕೆಲವಾರು ಬದಲವಾಣೆಗಳಿಗೆ ಒಳಪಡಬೇಕಾಗುತ್ತದೆ, ಕೆಲವಾರು ಕಟ್ಟುಪಾಡುಗಳನ್ನು ತಮಗೆ ತಾವೇ ವಿಧಿಸಿಕೊಳ್ಳಬೇಕಾಗುತ್ತದೆ.

ಉದಾಹರಣೆಗೆ, ಮಧುಮೇಹಿಗಳು ಎಷ್ಟೇ ಇಷ್ಟವಾದರೂ ಸರಿ, ಸಿಹಿಪದಾರ್ಥಗಳನ್ನು ತಿನ್ನುವಂತಿಲ್ಲ, ಬೇರೆಯವರು ತಿನ್ನುವುದನ್ನು ನೋಡಿ ತೃಪ್ತಿಪಟ್ಟುಕೊಳ್ಳಬೇಕು. ಹೆಚ್ಚಿನ ಆಯಾಸವಾಗುವ ವ್ಯಾಯಾಮಗಳನ್ನು ಮಾಡುವಂತಿಲ್ಲ. ಇದರೊಂದಿಗೆ ಮಧುಮೇಹ ಇನ್ನೂ ಕೆಲವಾರು ರೋಗಗಳಿಗೆ ಮೂಲವಾಗಿದ್ದು ಹೃದಯ ಸಂಬಂಧಿ ತೊಂದರೆ ಪ್ರಮುಖವಾದ ಅಪಾಯವಾಗಿದೆ. ಹೃದಯ ಸಂಬಂಧಿ ತೊಂದರೆಗಳಿಗೆ ಅಧಿಕ ರಕ್ತದೊತ್ತಡ ಅಪಾಯಕರವಾಗಿದ್ದು ಮಧುಮೇಹಿಗಳು ತಮ್ಮ ರಕ್ತದೊತ್ತಡವನ್ನು ಹೆಚ್ಚಿಸಿಕೊಳ್ಳುವ ಯಾವುದೇ ಸಂಭವಗಳಿಂದ ದೂರವಿರಬೇಕು. ಆಗಾಗ ತಮ್ಮ ಆರೋಗ್ಯವನ್ನು ತಪಾಸಣೆಗೊಳಪಡಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಮಧುಮೇಹಿಗಳು ಅಗತ್ಯವಾಗಿ ಕೈಗೊಳ್ಳಬೇಕಾದ ಕೆಲವು ಹೃದಯ ಪರೀಕ್ಷೆಗಳು ಇಂತಿವೆ:

1. ರಕ್ತದೊತ್ತಡ ಪರೀಕ್ಷೆ

ಇದೊಂದು ಸುಲಭವಾದ ಪರೀಕ್ಷೆಯಾಗಿದ್ದು ಯಾವುದೇ ವೈದ್ಯರು ತಮ್ಮಲ್ಲಿರುವ ಸರಳ ಉಪಕರಣದ ಮೂಲಕ ಕಂಡುಕೊಳ್ಳುತ್ತಾರೆ. ಮಧುಮೇಹಿಗಳಿಗೆ ಹೃದಯ ಸಂಬಂಧಿ ತೊಂದರೆಗಳು ಆವರಿಸುವ ಸಾಧ್ಯತೆ ಇತರರಿಗಿಂತ ಹೆಚ್ಚೇ ಇರುವ ಕಾರಣ ರಕ್ತದೊತ್ತಡವನ್ನು ಇತರರಿಗಿಂತಲೂ ಕಡಿಮೆ ಸಮಯದ ಅಂತರಗಳಲ್ಲಿ ರಕ್ತದೊತ್ತಡವನ್ನು ತಪಾಸಿಸಿಕೊಳ್ಳಬೇಕಾಗುತ್ತದೆ. ರಕ್ತದೊತ್ತಡ ಅಧಿಕವಾದರೆ ಹೃದಯ ಸ್ತಂಭನ, ಮೂತ್ರಪಿಂಡ ವೈಫಲ್ಯ ಮೊದಲಾದ ತೊಂದರೆಗಳು ಎದುರಾಗಬಹುದು. ಆದ್ದರಿಂದ ಮಧುಮೇಹಿಗಳು ತಮ್ಮ ಕುಟುಂಬ ವೈದ್ಯರಲ್ಲಿ ನಿಯಮಿತವಾಗಿ ರಕ್ತದೊತ್ತಡವನ್ನು ತಪಾಸಿಸಿಕೊಂಡು ನಿಯಂತ್ರಣದಲ್ಲಿರುವ ಬಗ್ಗೆ ಎಚ್ಚರಿಕೆ ವಹಿಸಬೇಕು. ಇನ್ನೂ ಒಳ್ಳೆಯದೆಂದರೆ ರಕ್ತದೊತ್ತಡ ಪರೀಕ್ಷಿಸುವ ಉಪಕರಣವೊಂದನ್ನು ಕೊಂಡು ಬಳಸುವುದು.

2. ಕ್ಯಾರೋಟಿಡ್ ಅಲ್ಟ್ರಾ ಸೌಂಡ್ (Carotid Ultrasound)

ದೇಹದ ಒಳಗಣ ಪ್ರಮುಖ ಅಂಗಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಪರೀಕ್ಷಿಸಲು ಅಲ್ಟ್ರಾ ಸೌಂಡ್ ಅಥವಾ ಅತಿ ಕಂಪನದ ರೇಡಿಯೋ ಅಲೆಗಳನ್ನು ಬಳಸಿ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ. ಹೃದಯದ ತೊಂದರೆ ಸಾಧ್ಯತೆ ಇರುವ ವ್ಯಕ್ತಿಗಳಿಗೆ ಕ್ಯಾರೋಟಿಡ್ ಎಂಬ ಬಗೆಯ ಪರೀಕ್ಷೆಯನ್ನು ನಡೆಸಲಾಗುತದೆ. ಈ ಪರೀಕ್ಷೆಯಲ್ಲಿ ರೇಡಿಯೋ ಅಲೆಗಳ ಬದಲಾವಣೆಯನ್ನು ಗಮನಿಸಿ ಕುತ್ತಿಗೆಯಲ್ಲಿರುವ ಪ್ರಮುಖ ನರವಾದ ಶೀರ್ಷಧಮನಿ ಅಥವಾ ಕ್ಯಾರೋಟಿಡ್ ನರದ ಆರೋಗ್ಯದ ಸ್ಥಿತಿಯನ್ನು ಅರಿಯಬಹುದು. ವೈದ್ಯರು ಈ ಭಾಗದಲ್ಲಿ ಏನಾದರೂ ಕೊಬ್ಬಿನ ಆಮ್ಲಗಳು (ಫ್ಯಾಟಿ ಆಸಿಡ್) ಸಂಗ್ರಹಗೊಂಡಿದೆಯೇ? ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಒಂದು ವೇಳೆ ಹೌದೆಂದರೆ ಇದು ಹೃದಯಕ್ಕೆ ಅಪಾಯಕಾರಿಯಾಗಿದ್ದು ಇದಕ್ಕೆ ಸೂಕ್ತವಾದ ಚಿಕಿತ್ಸೆಯನ್ನು ಸೂಚಿಸುತ್ತಾರೆ. ಹಾಗಾಗಿ ಪ್ರತಿ ಮಧುಮೇಹಿ ವ್ಯಕ್ತಿಯೂ ಈ ಪರೀಕ್ಷೆಯನ್ನು ಆಗಾಗ ಮಾಡಿಸಿಕೊಳ್ಳುತ್ತಿರುವುದು ಅಗತ್ಯ.

3. ಸಿಟಿ ಸ್ಕ್ಯಾನ್ (CT Scan)

ಸಿಟಿ ಅಥವಾ CT(Computerised Tomography)ಸ್ಕ್ಯಾನ್ ಎಂಬ ಇನ್ನೊಂದು ಪರೀಕ್ಷೆಯೂ ಹೃದಯದ ಆರೋಗ್ಯವನ್ನು ಪರೀಕ್ಷಿಸುವ ವಿಧಾನವಾಗಿದೆ. ಈ ಮೂಲಕ ಹೃದಯದ ನರಗಳ ಒಳಭಾಗದಲ್ಲಿ ಕ್ಯಾಲ್ಸಿಯಂ ಲವಣದ ಸಂಗ್ರಹ ಎಷ್ಟು ಮಟ್ಟಿಗೆ ಆಗಿದೆ? ಇದು ರಕ್ತಪರಿಚಲನೆಗೆ ಅಡ್ಡಿಯಾಗುತ್ತಿದೆಯೇ? ಹೌದೆಂದರೆ ಎಷ್ಟು ಪ್ರಮಾಣದಲ್ಲಿ? ಎಂಬೆಲ್ಲಾ ವಿವರಗಳನ್ನು ಪಡೆಯಬಹುದು. ಸಾಮಾನ್ಯವಾಗಿ ಮಧುಮೇಹಿಗಳ ರಕ್ತನಾಳಗಳು ಇತರರಿಗಿಂತ ಹೆಚ್ಚು ಪೆಡಸಾಗಿರುತ್ತವೆ. ಇದಕ್ಕೆ ಕ್ಯಾಲ್ಸಿಯಂ ಸಂಗ್ರಹವೇ ಪ್ರಮುಖ ಕಾರಣವಾಗಿದ್ದು ಹೃದಯದ ಮೇಲೆ ಹೆಚ್ಚಿನ ಒತ್ತಡವನ್ನುಂಟುಮಾಡುತ್ತಿರುತ್ತವೆ. ಹಾಗಾಗಿ ಈ ಪರೀಕ್ಷೆ ಸಹಾ ತುಂಬಾ ಅಗತ್ಯ.

4. ಎಲೆಕ್ಟ್ರೋಕಾರ್ಡಿಯೋಗ್ರಾಂ (ECG ಅಥವಾ EKG)

ಇಸಿಜಿ ಎಂದೇ ಹೆಚ್ಚಾಗಿ ಕರೆಯಲ್ಪಡುವ ಈ ಪರೀಕ್ಷೆಯನ್ನು ಮಧುಮೇಹಿ ಹಾಗೂ ಹೃದಯಸಂಬಂಧಿ ತೊಂದರೆ ಇರುವ ರೋಗಿಗಳ ಹೃದಯದ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ವೈದ್ಯರು ಹೆಚ್ಚಾಗಿ ಶಿಫಾರಸ್ಸು ಮಾಡುತ್ತಾರೆ. ಈ ಪರೀಕ್ಷೆಯ ಮೂಲಕ ಹೃದಯ ಬಡಿತದಲ್ಲಿ ಏನಾದರೂ ಏರುಪೇರು ಆಗಿದೆಯೇ, ಹೃದಯದ ಭಾಗಗಳಲ್ಲಿ ಊತ, ಅಸಾಮಾನ್ಯ ಪ್ರಮಾಣದ ರಕ್ತದ ಆಗಮನ ಮೊದಲಾದವುಗಳ ಬಗ್ಗೆ ವಿವರಗಳನ್ನು ಪಡೆಯಬಹುದು. ಒಂದು ವೇಳೆ ಶೀಘ್ರ ಸಮಯದಲ್ಲಿ ಹೃದಯಾಘಾತವಾಗುವ ಸಂಭವವಿದ್ದರೂ ಈ ಮುನ್ಸೂಚನೆಯನ್ನು ಈ ಪರೀಕ್ಷೆಯ ಮೂಲಕ ಪಡೆಯಬಹುದು.

5. ಆಂಬ್ಯುಲೇಟರಿ ಇಸಿಜಿ (Ambulatory Electrocardiogram)

ಹೋಲ್ಟಲ್ ಮಾನಿಟರ್ ಎಂದೂ ಕರೆಯಲ್ಪಡುವ ಈ ಪರೀಕ್ಷೆ ಹೆಚ್ಚು ಜನಪ್ರಿಯವಾಗಿದ್ದು ಹೃದಯದ ಕಾರ್ಯವಿಧಾನದಲ್ಲಿ ಆಗಿರುವ ಬದಲಾವಣೆಯನ್ನು ವಿದ್ಯುದಾಯಸ್ಕಾಂತದ ಅಲೆಗಳನ್ನು ಬಳಸಿ ಕಂಢುಹಿಡಿಯಲಾಗುತ್ತದೆ. ಅಲ್ಲದೇ ಹೃದಯದ ಚಟುವಟಿಕೆಯನ್ನು ಸತತವಾಗಿ ನಲವತ್ತೆಂಟು ಘಂಟೆಗಳ ಕಾಲ ರೋಗಿಯ ಎದೆಯ ಹೊರಭಾಗದಲ್ಲಿ ಅಳವಡಿಸಿ ವಿವರಗಳನ್ನು ಕಲೆ ಹಾಕಲಾಗುತ್ತದೆ. ಈ ಮೂಲಕ ಸತತ ಎರಡು ದಿನಗಳ ಅವಧಿಯಲ್ಲಿ ಹೃದಯದ ಕಾರ್ಯವಿಧಾನದಲ್ಲಿ ಏನಾದರೂ ಏರುಪೇರು ಆಗುತ್ತಿದ್ದರೆ ಈ ಮೂಲಕ ಕಂಡುಕೊಳ್ಳಬಹುದು.

6. ಎಖೋ ಪರೀಕ್ಷೆ (Echocardiograph (ECHO Test)

ಎಖೋ ಪರೀಕ್ಷೆ ಹೃದಯದ ಕಾರ್ಯವಿಧಾನದ ವಿವರಗಳನ್ನು ಕಲೆಹಾಕಲು ಬಳಸಲಾಗುವ ಇನ್ನೊಂದು ಪರೀಕ್ಷೆಯಾಗಿದೆ. ಪ್ರತಿ ಮಧುಮೇಹಿಯೂ ಕಡ್ಡಾಯವಾಗಿ ಒಳಗೊಳ್ಳಬೇಕಾದ ಈ ಪರೀಕ್ಷೆ ಹೃದಯದ ತೊಂದರೆಯ ಸಾಧ್ಯತೆ ಇರುವ ವ್ಯಕ್ತಿಗಳಿಗೂ ಅಮೂಲ್ಯವಾಗಿದೆ. ಈ ಮೂಲಕ ಹೃದಯದ ಹೃತ್ಕುಕ್ಷಿಗಳು ಮತ್ತು ಹೃದಯದ ಭಾಗಗಳು ಮತ್ತು ಹೃದಯದ ಸ್ನಾಯುಗಳು ಎಷ್ಟು ಚೆನ್ನಾಗಿ ಕಾರ್ಯನಿರ್ವಹಿಸುತ್ತಿವೆ ಎಂಬ ವಿವರಗಳನ್ನು ಪಡೆಯಬಹುದು ಹಾಗೂ ಇವು ಅಗತ್ಯ ಒತ್ತಡದಲ್ಲಿ ರಕ್ತವನ್ನು ದೂಡಿಕೊಡುತ್ತಿವೆಯೇ ಎಂಬುದನ್ನು ಗಮನಿಸಲಾಗುತ್ತದೆ.

7. ವ್ಯಾಯಾಮ ಒತ್ತಡ ಪರೀಕ್ಷೆ (Exercise Stress Test)

ಸಾಮಾನ್ಯವಾಗಿ ಟ್ರೆಡ್ ಮಿಲ್ ಟೆಸ್ಟ್ ಎಂದೇ ಹೆಚ್ಚಾಗಿ ಜನಪ್ರಿಯವಾಗಿರುವ ಈ ಪರೀಕ್ಷೆಯನ್ನು ವೈದ್ಯರು ಮಧುಮೇಹಿ ಹಾಗೂ ಹೃದಯ ಸಂಬಂಧಿ ತೊಂದರೆಯ ಸಾಧ್ಯತೆ ಇರುವ ವ್ಯಕ್ತಿಗಳಿಗೆ ಶಿಫಾರಸ್ಸು ಮಾಡುತ್ತಾರೆ. ಈ ಮೂಲಕ ವ್ಯಾಯಾಮ ಅಥವಾ ಹೆಚ್ಚಿನ ದೈಹಿಕ ಚಟುವಟಿಕೆಯ ಸಮಯದಲ್ಲಿ ಹೃದಯ ಎಷ್ಟು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಕಂಡುಕೊಳ್ಳಲಾಗುತ್ತದೆ. ಈ ಮೂಲಕ ರೋಗಿಗೆ ಎಷ್ಟ ಮಟ್ಟಿಗಿನ ದೈಹಿಕ ಚಟುವಟಿಕೆ ಅಥವಾ ವ್ಯಾಯಾಮ ಸುರಕ್ಷಿತ ಎಂಬುದನ್ನು ವೈದ್ಯರು ನಿರ್ಧರಿಸುತ್ತಾರೆ.

8. ಕೋರೋನರಿ ಆಂಜಿಯೋಗ್ರಫಿ (Coronary Angiography)

ಕಾರ್ಡಿಯಾಕ್ ಕ್ಯಾಥೆರೈಸೇಶನ್ ಎಂದೂ ಕರೆಯಲ್ಪಡುವ ಈ ಪರೀಕ್ಷೆಯ ಮೂಲಕ ಹೃದಯದ ಕವಾಟಗಳಲ್ಲಿ ಎಷ್ಟು ಮಟ್ಟಿನ ತಡೆಯುಂಟಾಗಿದೆ ಹಾಗೂ ಇವುಗಳ ಗಂಭೀರತೆಯ ಬಗ್ಗೆ ವಿವರಗಳನ್ನು ಪಡೆಯಲಾಗುತ್ತದೆ. ಈ ಮೂಲಕ ಹೃದಯಕ್ಕೆ ಒದಗಲಿರುವ ಅಪಾಯ ಹಾಗೂ ಆಘಾತದ ಬಗ್ಗೆ ಮುನ್ಸೂಚನೆಯನ್ನು ಪಡೆದು ತಕ್ಷಣವೇ ಸೂಕ್ತ ಚಿಕಿತ್ಸೆ ಒದಗಿಸುವ ಮೂಲಕ ಪ್ರಾಣಾಪಾಯವಾಗುವ ಸಂಭವವನ್ನು ತಪ್ಪಿಸಬಹುದು.

ಮಧುಮೇಹ ನಿಯಂತ್ರಣದಲ್ಲಿಡುವ 16 ಅತ್ಯುತ್ತಮ ಆಹಾರ ಪದಾರ್ಥಗಳು

   
 
ಹೆಲ್ತ್