Back
Home » ಆರೋಗ್ಯ
ಬಾಯಿ ದುರ್ವಾಸನೆ ಸಮಸ್ಯೆಯೇ? ಇಲ್ಲಿದೆ ನೋಡಿ ಸರಳ ಮನೆಮದ್ದುಗಳು
Boldsky | 8th Aug, 2018 02:29 PM
 • ಬಾಯಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ತೋರುವ ಅಸಡ್ಡೆ, ಸೋಮಾರಿತನ

  ದುರ್ವಾಸನೆ ಎದುರಾಗಲು ಇರುವ ಕಾರಣಗಳಲ್ಲಿ ಸಿಂಹಪಾಲು ಈ ಕಾರಣವೇ ಆಗಿದೆ. ನಾವು ಸೇವಿಸಿದ ಆಹಾರವನ್ನು ಅಗಿಯುವ ವೇಳೆ ಲಾಲಾರಸದೊಂದಿಗೆ ಕೆಲವು ಸಾಮಾಗ್ರಿಗಳು ಜೀರ್ಣಗೊಳ್ಳುತ್ತವೆ. ನೀರುಳ್ಳಿ, ಬೆಳ್ಳುಳ್ಳಿಯಂತಹ ಆಹಾರಗಳು ಲಾಲಾರಸದೊಂದಿಗೆ ಜೀರ್ಣಗೊಂಡಾಗ ಕೆಲವು ಅನಿಲಗಳು ಬಿಡುಗಡೆಗೊಂಡು ಬಾಯಿಯಲ್ಲಿಯೇ ಉಳಿದುಬಿಡುತ್ತವೆ. ಇವು ಹಲ್ಲುಜ್ಜಿಕೊಂಡ ಬಳಿಕವೂ ಸುಲಭವಾಗಿ ನಿವಾರಣೆಯಾಗುವುದಿಲ್ಲ. ಅಲ್ಲದೇ ಇತರ ಆಹಾರಗಳನ್ನು ಸೇವಿಸಿದ ಬಳಿಕ ಬಾಯಿಯನ್ನು ಮುಕ್ಕಳಿಸಿಕೊಳ್ಳದಿದ್ದರೆ, ಹಲ್ಲುಜ್ಜಲು ಸೋಮಾರಿತನ ತೋರಿದರೆ ಈ ಆಹಾರ ಹಲ್ಲುಗಳ ಸಂಧಿಯಲ್ಲಿ ಕೊಳೆತು ದುರ್ವಾಸನೆ ಸೂಸತೊಡಗುತ್ತವೆ. ನಾಲಿಗೆ, ಹಲ್ಲುಗಳನ್ನು ಸ್ವಚ್ಛಗೊಳಿಸಲು ತೋರುವ ಸೋಮಾರಿತನ, ಹಲ್ಲುಗಳ ನಡುವೆ ತೆಳುವಾದ ದಾರವನ್ನು ತೂರಿಸಿ (ಫ್ಲಾಸ್) ಸ್ವಚ್ಛಗೊಳಿಸದೇ ಇದ್ದರೂ ದುರ್ವಾಸನೆ ಸೂಸುವುದು ಸಾಮಾನ್ಯ.


 • ಹಲ್ಲುಗಳಲ್ಲಿನ ಕುಳಿ

  ಹಲ್ಲುಗಳ ಕುಳಿಗಳಲ್ಲಿ ಆಹಾರ ಸುಲಭವಾಗಿ ಕುಳಿತುಕೊಳ್ಳುತ್ತದೆ ಹಾಗೂ ಕೊಳೆತು ದುರ್ವಾಸನೆ ಸೂಸುತ್ತದೆ. ಈ ಕುಳಿಯನ್ನೂ ಪೂರ್ಣವಾಗಿ ಕೊಳೆಮುಕ್ತವಾಗಿರಿಸದಿದ್ದರೆ ಇಲ್ಲಿ ಬ್ಯಾಕ್ಟೀರಿಯಾಗಳು ಶಾಶ್ವತವಾಗಿ ತಮ್ಮ ಸಂಸಾರ ಹೂಡಿ ಬಾಯಿಯನ್ನು ದುರ್ವಾಸನೆಯ ತಾಣವಾಗಿಸಬಹುದು.


 • ಧೂಮಪಾನ

  ತಂಬಾಕು ಮೂಲ ಉತ್ಪನ್ನಗಳನ್ನು ಹೊಗೆಯ ಅಥವಾ ಬಾಯಿಯಲ್ಲಿ ಜಗಿಯುವ ಮೂಲಕ ಸೇವಿಸಿದಾಗ ಹಲ್ಲುಗಳ ಸವೆತ, ಬಣ್ಣಗೆಡುವುದು, ಒಸಡುಗಳು ಸಡಿಲವಾಗುವುದು, ನಾಲಿಗೆ ರುಚಿಯನ್ನು ಕಂಡುಕೊಳ್ಳಲು ವಿಫಲವಾಗುವುದು, ಒಸಡಿನಲ್ಲಿ ಉರಿ ಮೊದಲಾದ ತೊಂದರೆಗಳ ಜೊತೆಗೇ ಬಾಯಿಯ ದುರ್ವಾಸನೆಯೂ ಬೋಸನ್ ರೂಪದಲ್ಲಿ ಖಚಿತವಾಗಿ ಮತ್ತು ಉಚಿತವಾಗಿ ದೊರಕುತ್ತದೆ.


 • ಒಸಡುಗಳ ಕಾಯಿಲೆ, ಸಡಿಲವಾದ ಒಸಡುಗಳು ಮತ್ತು ಇಲ್ಲಿ ಎದುರಾಗಿರುವ ಸೋಂಕುಗಳು

  ಒಸಡು ಮತ್ತು ಹಲ್ಲುಗಳ ಸಂದು ಹೆಚ್ಚು ಆಳವಾದಷ್ಟೂ ಇಲ್ಲಿ ಸಂಗ್ರಹವಾಗುವ ಆಹಾರ ಕೊಳೆತು ಆಳದಲ್ಲಿ ಸಂಗ್ರಹವಾಗುತ್ತವೆ ಹಾಗೂ ದುರ್ವಾಸನೆ ಸೂಸತೊಡಗುತ್ತವೆ. ಈ ಭಾಗ ಕೇವಲ ಬ್ಯಾಕ್ಟೀರಿಯಾ ಮಾತ್ರವಲ್ಲ, ಶಿಲೀಂಧ್ರಗಳಿಗೂ ಕೈಬೀಸಿ ಕರೆದು ಹಲ್ಲುಗಳನ್ನು ಇನ್ನಷ್ಟು ಹುಳುಕಾಗಿಸಲು, ಸಡಿಲಗೊಳಿಸಲು ಪ್ರೇರಣೆ ನೀಡುತ್ತದೆ. ಇದರೊಂದಿಗೆ ಅಕ್ಕ ಪಕ್ಕದ ಹಲ್ಲುಗಳಲ್ಲಿ ಕುಳಿಗಳಿದ್ದರಂತೂ ಈ ಕ್ರಿಮಿಗಳಿಗೆ ಸ್ವರ್ಗಕ್ಕೇ ಬಂದಂತಾಗುತ್ತದೆ.


 • ಬಾಯಿ ಒಣಗಿರುವುದು

  ನಮ್ಮ ಬಾಯಿಯಲ್ಲಿ ಸದಾ ಲಾಲಾರಸವಿರಲೇಬೇಕು. ಒಂದು ವೇಳೆ ಲಾಲಾರಸದ ಕೊರತೆಯುಂಟಾದರೆ ಇದಕ್ಕೆ ಒಣಬಾಯಿ ಅಥವಾ 'xerostomia' ಎಂಬ ಸ್ಥಿತಿ ಎದುರಾಗುತ್ತದೆ. ಈ ಸ್ಥಿತಿಯೂ ದುರ್ವಾಸನೆಗೆ ಕಾರಣವಾಗಬಹುದು. ಬಾಯಿಯಲ್ಲಿರುವ ಆಹಾರದ ಕೊಳೆಯುವಿಕೆಯಿಂದ ಉತ್ಪನ್ನವಾದ ಆಮ್ಲೀಯತೆಯನ್ನು ಲಾಲಾರಸ ಸಂತುಲಿತಗೊಳಿಸುತ್ತದೆ ಹಾಗೂ ಒಸಡು, ನಾಲಿಗೆ, ಒಳಕೆನ್ನೆಗಳ ಪದರದಿಂದ ಸತ್ತ ಜೀವಕೋಶಗಳನ್ನೂ ನಿವಾರಿಸುತ್ತದೆ. ಲಾಲಾರಸವೇ ಇಲ್ಲದಿದ್ದರೆ ಈ ಕ್ರಿಯೆಗಳೂ ನಡೆಯದೇ ಈ ಜೀವಕೋಶಗಳು ಆಮ್ಲೀಯ ವಾತಾವರಣದಲ್ಲಿ ಶೀಘ್ರವಾಗಿ ಕೊಳೆತು ದುರ್ವಾಸನೆ ಮೂಡಿಸುತ್ತವೆ. ಒಣಬಾಯಿಗೆ ಕೆಲವು ಔಷಧಿಗಳ ಅಡ್ಡ ಪರಿಣಾಮ, ಗ್ರಂಥಿಗಳ ತೊಂದರೆ ಹಾಗೂ ಬಾಯಿ ತೆರೆದೇ ಉಸಿರಾಡುವ ಅಭ್ಯಾಸಗಳು ಕಾರಣವಾಗಿವೆ.


 • ಅನಾರೋಗ್ಯದ ಪರಿಣಾಮ

  ನ್ಯುಮೋನಿಯಾ, ಕುಹರ ಅಥವಾ ಸೈನಸ್ ನಲ್ಲಿ ಸೋಂಕು, ಶ್ವಾಸಕೋಶದ ತೊಂದರೆ ಅಥವಾ ಬ್ರಾಂಖೈಟಿಸ್, ಮಧುಮೇಹ, ಹೆರಿಗೆಯ ಬಳಿಕ ನೀಡಲಾಗುವ ದ್ರವಾಹಾರ, ಹುಳಿತೇಗು, ಮೂತ್ರಪಿಂಡ ಅಥವಾ ಯಕೃತ್ ತೊಂದರೆಗಳೂ ಬಾಯಿಯ ದುರ್ವಾಸನೆಗೆ ಕಾರಣವಾಗಬಹುದು.


 • ಶೀಘ್ರವಾಗಿ ತೂಕ ಇಳಿಸಿಕೊಳ್ಳಲು ಸೇವಿಸುವ ಆಹಾರಗಳು

  ಶೀಘ್ರವಾಗಿ ತೂಕ ಇಳಿಸಿಕೊಳ್ಳಲು ಅತಿ ಕಡಿಮೆ ಕಾರ್ಬೋಹೈಡ್ರೇಟುಗಳಿರುವ ಆಹಾರಗಳ ಸೇವನೆಯೂ ಬಾಯಿಯ ದುರ್ವಾಸನೆಗೆ ಕಾರಣವಾಗಬಹುದು. ಕೊಬ್ಬನ್ನು ಒಡೆಯುವಾಗ ಕೀಟೋನ್ ಗಳೆಂಬ ರಾಸಾಯನಿಕಗಳು ಉತ್ಪತ್ತಿಯಾಗುತ್ತವೆ ಹಾಗೂ ಇವು ಭಾರೀ ಘಾಟು ಹೊಂದಿರುತ್ತವೆ. ಇವೂ ಬಾಯಿಯ ದುರ್ವಾಸನೆಗೆ ಕಾರಣವಾಗಬಹುದು.


 • ಮಧುಮೇಹ

  ಬಾಯಿಯ ದುರ್ವಾಸನೆಗೆ ಮಧುಮೇಹ ನೇರವಾಗಿಯಲ್ಲದಿದ್ದರೂ ಪರೋಕ್ಷವಾಗಿ ಕಾರಣವಾಗುತ್ತದೆ. ಹೇಗೆ ಎಂದರೆ, ಈ ವ್ಯಕ್ತಿಗಳಲ್ಲಿ ಇನ್ಸುಲಿನ್ ಕಡಿಮೆ ಇದ್ದು ರಕ್ತದಲ್ಲಿನ ಸಕ್ಕರೆಯನ್ನು ಬಳಸಿಕೊಳ್ಳದೇ ಹೋದಾಗ ದೇಹ ಕೊಬ್ಬಿನ ಸಂಗ್ರಹವನ್ನು ಅನಿವಾರ್ಯವಾಗಿ ಬಳಸಬೇಕಾಗುತ್ತದೆ. ಈ ಕೊಬ್ಬು ಒಡೆದು ಕೀಟೋನುಗಳೆಂಬ ರಾಸಾಯನಿಕಗಳು ಉತ್ಪತ್ತಿಯಾಗುತ್ತವೆ. ಈ ಸ್ಥಿತಿಗೆ 'ketoacidosis' ಎಂದು ಕರೆಯುತ್ತಾರೆ. ಇದೇ ಬಾಯಿಯ ದುರ್ವಾಸನೆಗೆ ಕಾರಣವಾಗಿದೆ.


 • ಮಧುಮೇಹ ಬಾಯಿಯ ದುರ್ವಾಸನೆಯ ನಿವಾರಣೆಗೆ ಹದಿನೈದು ನೈಸರ್ಗಿಕ ಪರಿಹಾರಗಳು

  ನಮ್ಮ ದೇಹದ ಬಹುತೇಕ ತೊಂದರೆಗಳಿಗೆ ನಿಸರ್ಗದ ಬಳಿ ಚಿಕಿತ್ಸೆ ಇದೆ. ಬಾಯಿಯ ದುರ್ವಾಸನೆಗೆ ಅನಾರೋಗ್ಯದ ಹೊರತಾಗಿ ಇತರ ಕಾರಣಗಳಿದ್ದರೆ ಈ ಕೆಳಗಿನ ಕೆಲವು ವಿಧಾನಗಳು ಬಾಯಿಯ ದುರ್ವಾಸನೆಯಿಂದ ಶೀಘ್ರ ಉಪಶಮನ ನೀಡುತ್ತವೆ.
  • ಸೇಬು ಮತ್ತು ದಾಲ್ಚಿನ್ನಿ
  • ಉಗುರುಬೆಚ್ಚನೆಯ ಉಪ್ಪುನೀರಿನ ಮುಕ್ಕಳಿಕೆ
  • ಟೀ ಟ್ರೀ ಎಣ್ಣೆ
  • ಲವಂಗ, ದೊಡ್ಡ ಜೀರಿಗೆ ಮತ್ತು ಲವಂಗ ಜಗಿಯಿರಿ
  • ಪುದಿನಾ, ತುಳಸಿ ಮತ್ತು ಕೊತ್ತಂಬರಿ ಸೊಪ್ಪು
  • ಸತುವಿನ ಸ್ವಚ್ಛಕಾರಕ
  • ಹಸಿರು ಟೀ
  • ಲೋಳೆಸರ
  • ಸೇಬಿನ ಶಿರ್ಕಾ
  • ಕೊಬ್ಬರಿ ಎಣ್ಣೆ
  • ಹಸಿಶುಂಠಿಯ ರಸ
  • ಸಕ್ಕರೆ ರಹಿತ ಜಗಿಯುವ ಗಮ್
  • ನೀಲಗಿರಿ ಎಣ್ಣೆಯ
  • ಏಲಕ್ಕಿ
  • ಲಿಂಬೆ, ದಾಲ್ಚಿನ್ನಿ ಮತ್ತು ಜೇನು.


 • ಸೇಬು ಮತ್ತು ದಾಲ್ಚಿನ್ನಿ

  ತಿನ್ನಲು ಗರಿಮುರಿಯಾಗಿರುವ ಆಹಾರಗಳಾದ ಸೇಬು, ಕ್ಯಾರೆಟ್ ಮೊದಲಾದವು ಬಾಯಿಯ ದುರ್ವಾಸನೆ ಇಲ್ಲವಾಗಿಸಲು ನೆರವಾಗುತ್ತವೆ. ಸೇಬಿನಲ್ಲಿರುವ ಪೆಕ್ಟಿನ್ ಅಹಾರದ ಕೊಳೆಯುವಿಕೆಯನ್ನು ನಿಧಾನವಾಗಿಸುತ್ತದೆ ಹಾಗೂ ಲಾಲಾರಸವನ್ನು ಹೆಚ್ಚಿಸುತ್ತದೆ. ದಾಲ್ಚಿನ್ನಿಯಲ್ಲಿ ಸೂಕ್ಷ್ಮಜೀವಿನಿವಾರಕ ಗುಣವಿದೆ. ಮೊಸರಿನಲ್ಲಿಯೂ ಜೀರ್ಣಶಕ್ತಿಯನ್ನು ಹೆಚ್ಚಿಸುವ ಜಠರಸ್ನೇಹಿ ಬ್ಯಾಕ್ಟೀರಿಯಾಗಳಿದ್ದು ಇವು ಸಹಾ ಬಾಯಿಯ ದುರ್ವಾಸನೆಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ನಿವಾರಿಸುತ್ತದೆ. ಒಂದು ಸೇಬು, ಒಂದು ಕ್ಯಾರೆಟ್ ಗಳನ್ನು ಚೆನ್ನಾಗಿ ತುರಿದು ಇದಕ್ಕೆ ಮೂರರಿಂದ ಐದು ದೊಡ್ಡ ಚಮಚ ಕಡಿಮೆ ಕೊಬ್ಬಿನ ಮೊಸರನ್ನು ಬೆರೆಸಿ. ಇದಕ್ಕೆ ಕೊಂಚ ಅಕ್ರೋಟು, ದಾಲ್ಚಿನ್ನಿ ಪುಡಿ ಬೆರೆಸಿ ಕುಡಿಯಿರಿ. ಈ ದ್ರವ ಬಾಯಿಯಲ್ಲಿನ ದ್ರವ್ಯತೆಯನ್ನು ಹೆಚ್ಚಿಸುತ್ತದೆ.


 • ಉಗುರುಬೆಚ್ಚನೆಯ ಉಪ್ಪುನೀರಿನ ಮುಕ್ಕಳಿಕೆ

  ಬಾಯಿಯನ್ನು ಆಗಾಗ ಉಪ್ಪುನೀರಿನಿಂದ ಮುಕ್ಕಳಿಸುವುದರಿಂದಲೂ ಸೋಂಕುಗಳು ಉಂಟಾಗುವುದರಿಂದ ತಪ್ಪಿಸಬಹುದು ಹಾಗೂ ವಿಶೇಷವಾಗಿ ಗಂಟಲ ಒಳಭಾಗ ಬಾಯಿ ಹಾಗೂ ಹಲ್ಲು ಮತ್ತು ಒಸಡುಗಳ ಸಂಧುಗಳು ಬ್ಯಾಕ್ಟೀರಿಯಾಗಳಿಂದ ಮುಕ್ತವಾಗಿ ಬಾಯಿಯ ದುರ್ವಾಸನೆ ಇಲ್ಲವಾಗುತ್ತದೆ.


 • ಟೀ ಟ್ರೀ ಎಣ್ಣೆ (Tea tree oil)

  ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಒಂದೆರಡು ತೊಟ್ಟು ಟೀ ಟ್ರೀ ಎಣ್ಣೆ ಬೆರೆಸಿ ಈ ನೀರಿನಿಂದ ಸುಮಾರು ಐದು ನಿಮಿಷ ಮುಕ್ಕಳಿಸಿ. ಈ ಎಣ್ಣೆಯಲ್ಲಿ ಪ್ರಬಲ ಬ್ಯಾಕ್ಟೀರಿಯಾನಿವಾರಕ ಗುಣವಿದ್ದು ಬಾಯಿಯಲ್ಲಿರುವ ಹಲವಾರು ಬಗೆಯ ಬ್ಯಾಕ್ಟೀರಿಯಾಗಳನ್ನು ಕೊಂದು ಸ್ವಚ್ಛಗೊಳಿಸಿ ಬಾಯಿಯ ದುರ್ವಾಸನೆ ಇಲ್ಲವಾಗಿಸುತ್ತದೆ.


 • ಲವಂಗ, ದೊಡ್ಡಜೀರಿಗೆ ಮತ್ತು ಏಲಕ್ಕಿ ಜಗಿಯಿರಿ

  ಒಂದು ವೇಳೆ ನೈಸರ್ಗಿಕ ಸುಗಂಧಭರಿತ ಬಾಯಿ ಸ್ವಚ್ಛಕಾರಕ ನಿಮ್ಮ ಆಯ್ಕೆಯಾಗಿದ್ದರೆ ಕೊಂಚ ದೊಡ್ಡಜೀರಿಗೆ (ಸೌಂಫ್), ಲವಂಗ ಮತ್ತು ಏಲಕ್ಕಿಯನ್ನು ಜಗಿದು ಪೂರ್ಣವಾಗಿ ನೀರಾದ ಬಳಿಕ ನುಂಗಿರಿ.


 • ಮೂಲಿಕೆಗಳು - ಪುದಿನಾ, ತುಳಸಿ ಮತ್ತು ಕೊತ್ತಂಬರಿ ಸೊಪ್ಪು

  ನೈಸರ್ಗಿಕ ಉಪಶಮನ ನಿಮ್ಮ ಆಯ್ಕೆಯಾಗಿದ್ದರೆ ಹಾಗೂ ಹಲ್ಲು ಮತ್ತು ಒಸಡುಗಳನ್ನೂ ಸ್ವಚ್ಛಗೊಳಿಸಬೇಕಾಗಿದ್ದರೆ ಕೆಲವು ಮೂಲಿಕೆಗಳಾದ ಕೊತ್ತಂಬರಿ ಸೊಪ್ಪು, ಪುದಿನಾ ಮತ್ತು ತುಳಸಿ ಎಲೆಗಳು ಉತ್ತಮ ಆಯ್ಕೆಯಾಗಿದೆ. ಈ ಎಲೆಗಳಿಗೆ ಹಸಿರು ಬಣ್ಣ ನೀಡುವ ಹರಿತ್ತು ಬಾಯಿಯ ಒಳಭಾಗದಲ್ಲಿ ಸ್ವಚ್ಛಕಾರಕವಾಗಿ ಕಾರ್ಯನಿರ್ವಹಿಸುತ್ತದೆ ಹಾಗೂ ಬಾಯಿಯ ದುರ್ವಾಸನೆಯನ್ನು ಇಲ್ಲವಾಗಿಸುತ್ತದೆ.


 • ಸತುವಿನ ಸ್ವಚ್ಛಕಾರಕ (Zinc mouthwash)

  ಔಷಧಿ ಅಂಗಡಿಯಲ್ಲಿ ಸಿಗುವ ಈ ಉತ್ಪನ್ನವನ್ನು ಮುಕ್ಕಳಿಸುವ ಮೂಲಕ ಅಥವಾ ಚ್ಯೂಯಿಂಗ್ ಗಮ್ ಅಗಿಯುವ ಮೂಲಕ ಇದಲ್ಲಿರುವ ಸತುವಿನ ಗ್ಲುಕೋನೇಟ್ ಒಸಡುಗಳ ಸಂಧುಗಳಲ್ಲಿರುವ ಆಹಾರಕಣಗಳನ್ನು ನಿವಾರಿಸಲು ನೆರವಾಗುವ ಮೂಲಕ ಬಾಯಿಯ ದುರ್ವಾಸನೆಯನ್ನು ನಿವಾರಿಸುತ್ತದೆ.


 • ಹಸಿರು ಟೀ

  ಹಸಿರು ಟೀ ಯಲ್ಲಿರುವ ಪರಿಮಳ ಹಾಗೂ ಬ್ಯಾಕ್ಟೀರಿಯಾ ನಿವಾರಕ ಗುಣದಿಂದಾಗಿ ಇದರ ಸೇವನೆಯಿಂದ ತಾತ್ಕಾಲಿಕವಾಗಿ ಬಾಯಿಯ ದುರ್ವಾಸನೆ ಇಲ್ಲವಾಗುತ್ತದೆ. ಇದರಲ್ಲಿರುವ ಪಾಲಿಫೆನಾಲ್ ಗಳು ದುರ್ವಾಸನೆಯನ್ನು ಹೊರಹೊಮ್ಮುವುದರಿಂದ ತಡೆಯುತ್ತವೆ. ಉತ್ತಮ ಪರಿಣಾಮಕ್ಕಾಗಿ ದಿನಕ್ಕೆ ಮೂರು ಕಪ್ ಹಸಿರು ಟೀ ಕುಡಿಯಿರಿ.


 • ಲೋಳೆಸರ

  ಇದೊಂದು ನೈಸರ್ಗಿಕ ಶಿಲೀಂಧ್ರನಿವಾರಕ ಹಾಗೂ ಬ್ಯಾಕ್ಟೀರಿಯಾನಿವಾರಕ ಗುಣಗಳು ಬಾಯಿಯನ್ನು ಸ್ವಚ್ಛಗೊಳಿಸಿ ಹಲ್ಲುಗಳ ಸಂಧುಗಳಲ್ಲಿರುವ ಕೊಳೆಯನ್ನು ನಿವಾರಿಸುತ್ತದೆ.


 • ಸೇಬಿನ ಶಿರ್ಕಾ (Apple cider vinegar)

  ಎರಡು ದೊಡ್ಡ ಚಮಚ ಸೇಬಿನ ಶಿರ್ಕಾವನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಇದರಿಂದ ಬಾಯಿಯನ್ನು ಸತತವಾಗಿ ಐದು ನಿಮಿಷಗಳವರೆಗೆ ಮುಕ್ಕಳಿಸಿ. ಬಳಿಕ ಸಾಮಾನ್ಯ ನೀರಿನಿಂದ ಮುಕ್ಕಳಿಸಿ ಸ್ವಚ್ಛಗೊಳಿಸಿ. ಇದರಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ಬಾಯಿಯ ದುರ್ವಾಸನೆಯಿಂದ ಮುಕ್ತಿ ದೊರಕುತ್ತದೆ.


 • ಕೊಬ್ಬರಿ ಎಣ್ಣೆ

  ಒಂದು ದೊಡ್ಡ ಚಮಚ ಅಪ್ಪಟ ಕೊಬ್ಬರಿ ಎಣ್ಣೆಯನ್ನು ಬಾಯಿಗೆ ಹಾಕಿಕೊಂಡು ಸುಮಾರು ಐದು ನಿಮಿಷಗಳವರೆಗೆ ಮುಕ್ಕಳಿಸಿ ಉಗಿಯಿರಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ಮುಕ್ಕಳಿಸಿ. ಬಾಯಿಯ ದುರ್ವಾಸನೆ ಇಲ್ಲವಾಗುವವರೆಗೂ ನಿತ್ಯವೂ ಈ ವಿಧಾನ ಅನುಸರಿಸಿ. ಬಾಯಿಯನ್ನು ದುರ್ವಾಸನೆ ಮುಕ್ತ ಹಾಗೂ ಆರೋಗ್ಯಕರವಾಗಿರಿಸಲು ಇದೊಂದು ಜನಪ್ರಿಯ ವಿಧಾನವಾಗಿದೆ.


 • ಶುಂಠಿಯ ರಸ

  ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಒಂದು ಚಿಕ್ಕ ಚಮಚ ಶುಂಠಿಯ ರಸ ಬೆರೆಸಿ ಈ ನೀರಿನಿಂದ ಬಾಯಿಯನ್ನು ಮುಕ್ಕಳಿಸಿ. ಪ್ರತಿ ಊಟದ ಬಳಿಕವೂ ಈ ನೀರಿನಿಂದ ಬಾಯಿಯನ್ನು ಮುಕ್ಕಳಿಸಿಕೊಳ್ಳುವುದರಿಂದ ಬಾಯಿಯ ದುರ್ವಾಸನೆ ಇಲ್ಲವಾಗುತ್ತದೆ. ಶುಂಠಿಯ ಸೂಕ್ಷ್ಮಜೀವಿ ನಿವಾರಕ ಗುಣ ಬಾಯಿಯ ಸೋಂಕನ್ನು ನಿವಾರಿಸಿ ದುರ್ವಾಸನೆಮುಕ್ತವಾಗಿಸುತ್ತದೆ.


 • ಸಕ್ಕರೆ ರಹಿತ ಚ್ಯೂಯಿಂಗ್ ಗಮ್(Sugar-free gum)

  ಮಾರುಕಟ್ಟೆಯಲ್ಲಿ ಸಿಗುವ ಈ ಗಮ್ ಜಗಿಯುವುದರಿಂದಲೂ ದುರ್ವಾಸನೆ ಇಲ್ಲವಾಗುತ್ತದೆ ಹಾಗೂ ಆರೋಗ್ಯಕರ ಪ್ರಮಾಣದ ಲಾಲಾರಸ ಉತ್ಪತ್ತಿಯಾಗಲು ನೆರವಾಗುತ್ತದೆ. ತನ್ಮೂಲಕ ಬಾಯಿ ಹಾಗೂ ಗಂಟಲಿನಲ್ಲಿ ಹೆಚ್ಚಿನ ಲಾಲಾರಸ ಸ್ರವಿಸಿ ದುರ್ವಾಸನೆಗೆ ಕಾರಣವಾದ ಕಣಗಳೂ ಜಠರಕ್ಕೆ ರವಾನೆಯಾಗುತ್ತದೆ. ಈ ಉತ್ಪನ್ನಗಳು ವಿವಿಧ ಸ್ವಾದಗಳಲ್ಲಿಯೂ ದೊರಕುತ್ತದೆ. ಪುದಿನಾ ಹೆಚ್ಚಿನವರ ನೆಚ್ಚಿನ ಸ್ವಾದವಾಗಿದೆ.


 • ನೀಲಗಿರಿ ಎಣ್ಣೆಯ ಮುಕ್ಕಳಿಕೆ

  ಒಂದು ಕಪ್ ನೀರಿಗೆ ಎರಡು ಮೂರು ತೊಟ್ಟು ನೀಲಗಿರಿ ಎಣ್ಣೆಯನ್ನು ಬೆರೆಸಿ ನಿತ್ಯವೂ ಈ ನೀರಿನಿಂದ ಬಾಯಿಯನ್ನು ಮುಕ್ಕಳಿಸಿ. ಈ ಎಣ್ಣೆಯಲ್ಲಿನ ಉರಿಯೂತ ನಿವಾರಕ ಗುಣ ಮತ್ತು ಗುಣಪಡಿಸುವ ಗುಣ ಬಾಯಿಯಲ್ಲಿರುವ ವಿವಿಧ ಬಗೆಯ ಬ್ಯಾಕ್ಟೀರಿಯಾಗಳ ಮೇಲೆ ಧಾಳಿಯಿಟ್ಟು ದುರ್ವಾಸನೆ ಇಲ್ಲವಾಗುತ್ತದೆ.


 • ಏಲಕ್ಕಿ

  ಒಂದು ವೇಳೆ ಬೆಳ್ಳುಳ್ಳಿ ಮತ್ತು ನೀರುಳ್ಳಿಯಿಂದ ಕೂಡಿದ ಆಹಾರವನ್ನು ಸೇವಿಸಿದ ಬಳಿಕ ದುರ್ವಾಸನೆ ಎದುರಾದರೆ ಊಟವಾದ ಬಳಿಕ ಒಂದು ಏಲಕ್ಕಿಯನ್ನು ಚೆನ್ನಾಗಿ ಅಗಿದು ನುಂಗಿರಿ. ಸಿಪ್ಪೆ ಅಗಿಯುವುದು ಇಷ್ಟವಾಗದಿದ್ದರೆ ಬರೆಯ ಬೀಜಗಳನ್ನು ಜಗಿದರೂ ಸರಿ. ಇದರಿಂದಲೂ ಬಾಯಿಯ ದುರ್ವಾಸನೆ ಇಲ್ಲವಾಗುತ್ತದೆ.


 • ಲಿಂಬೆ, ದಾಲ್ಚಿನ್ನಿ ಮತ್ತು ಜೇನು

  ಎರಡು ಲಿಂಬೆಗಳ ರಸ, ಒಂದೂವರೆ ದೊಡ್ಡಚಮಚ ಚೆಕ್ಕೆ ಪುಡಿ ಹಾಗೂ ಎರಡು ದೊಡ್ಡ ಚಮಚ ಜೇನನ್ನು ಗಾಳಿಯಾಡದ ಜಾಡಿಯಲ್ಲಿ ಹಾಕಿ ಇದಕ್ಕೆ ಒಂದು ಕಪ್ ಬಿಸಿನೀರು ಹಾಕಿ ಚೆನ್ನಾಗಿ ಕಲಕಿ ಮುಚ್ಚಳ ಮುಚ್ಚಿ. ಪ್ರತಿಬಾರಿ ಹಲ್ಲುಜ್ಜಿಕೊಂಡ ಬಳಿಕ ಈ ನೀರನ್ನು ಬಳಸಿ ಬಾಯಿಯನ್ನು ಮುಕ್ಕಳಿಸಿ. ಬಳಿಕ ತಣ್ಣೀರಿನಿಂದ ಮುಕ್ಕಳಿಸಿ. ಉಳಿದ ದ್ರವವನ್ನು ಮತ್ತೆ ಮುಚ್ಚಳ ಮುಚ್ಚಿ ಮುಂದಿನ ಬಾರಿಯ ಬಳಕೆಗಾಗಿ ತೆಗೆದಿರಿಸಿ. ಲವಂಗ ಮತ್ತು ಜೇನಿನಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣಗಳು ಬಾಯಿಯನ್ನು ಕೀಟಾಣುರಹಿತವಾಗಿಸಿ ಸ್ವಚ್ಛಗೊಳಿಸಲು ನೆರವಾಗುತ್ತವೆ.


 • ಬಾಯಿಯ ದುರ್ವಾಸನೆ ಇಲ್ಲವಾಗಿಸಲು ಅನುಸರಿಸಬೇಕಾದ ಜೀವನಶೈಲಿಯ ಮಾರ್ಪಾಡುಗಳು

  * ಬಾಯಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಕ್ರಮಗಳನ್ನು ಅನುಸರಿಸುವುದು ಬಾಯಿಯ ದುರ್ವಾಸನೆ ಇಲ್ಲವಾಗಿಸಲು ಪ್ರಮುಖ ಕ್ರಮವಾಗಿದೆ. ಇದರಲ್ಲಿ ದಿನಕ್ಕೆರಡು ಬಾರಿ ಬಾಯಿಯನ್ನು ಉಜ್ಜಿ ಸ್ವಚ್ಛಗೊಳಿಸುವುದು, ಫ್ಲಾಸ್ ಬಳಸಿ ಹಲ್ಲುಗಳ ನಡುವಣ ಸಂಧುಗಳನ್ನು ಸ್ವಚ್ಛಗೊಳಿಸುವುದು, ನಾಲಿಗೆಯನ್ನು ಕೆರೆದು ಸ್ವಚ್ಛಗೊಳಿಸುವುದು, ಬ್ಯಾಕ್ಟೀರಿಯಾನಿವಾರಕ ದ್ರಾವಣದಿಂದ ಬಾಯಿಯನ್ನು ದಿನಕ್ಕೆರಡು ಬಾರಿ ಮುಕ್ಕಳಿಸುವುದು, ಪ್ರತಿ ಮೂರು ತಿಂಗಳಿಗೊಂದು ಹಲುಜ್ಜುವ ಬ್ರಶ್
  ಬದಲಿಸುವುದು ಇತ್ಯಾದಿಗಳನ್ನು ಅಗತ್ಯವಾಗಿ ಅನುಸರಿಸಬೇಕಾಗಿದೆ.
  * ಕನಿಷ್ಟ ವರ್ಷಕ್ಕೆರಡು ಬಾರಿಯಾದರೂ ನಿಮ್ಮ ದಂತವೈದ್ಯರನ್ನು ಸಂಪರ್ಕಿಸಿ ಹಲ್ಲು, ಒಸಡುಗಳನ್ನು ತಪಾಸಣೆಗೊಳಪಡಿಸಿಕೊಂಡು ಸಲಹೆ ಪಡೆಯಬೇಕು. ಅಲ್ಲದೇ ನಿಮ್ಮ ಇತರ ಔಷಧಿಗಳು ಈ ದುರ್ವಾಸನೆಗೇನಾದರೂ ಕಾರಣವೇ ಎಂಬುದನ್ನು ಕೇಳಿ ಖಚಿತಪಡಿಸಿಕೊಳ್ಳಿ.
  * ಧೂಮಪಾನ, ತಂಬಾಕು ಆಧಾರಿತ ಉತ್ಪನ್ನಗಳಿಗೆ ಕಡ್ಡಾಯವಾಗಿ ಇಲ್ಲ ಎನ್ನುವುದು
  * ಕೆಫೀನ್ ಮತ್ತು ಮದ್ಯ ಯುಕ್ತ ಪಾನೀಯಗಳ ವರ್ಜನೆ, ಇದರಿಂದ ಬಾಯಿ ಒಣಗಬಹುದು.
  * ದಿನದ ಅವಧಿಯಲ್ಲಿ ಸಾಕಷ್ಟು ನೀರು ಕುಡಿದು ದೇಹದಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಿ.
  * ನಿದ್ದೆಯ ಕೊರತೆಯಿಂದ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ ಹಾಗೂ ಒತ್ತಡಕ್ಕೆ ಸುಲಭವಾಗಿ ಒಳಗಾಗುತ್ತದೆ. ಹಾಗಾಗಿ, ದಿನಕ್ಕೆ ಕನಿಷ್ಟ ಏಳು ಘಂಟೆಗಳಾದರೂ ಗಾಢನಿದ್ದೆ ಅವಶ್ಯವಾಗಿದೆ.
  * ಮಾನಸಿಕ ಒತ್ತಡವೂ ದೇಹದಲ್ಲಿ ದುರ್ವಾಸನೆಗೆ ಕಾರಣವಾಗುತ್ತದೆ ಎಂಬುದು ನಿಮಗೆ ಗೊತ್ತಿತ್ತೇ? ಹಾಗಾಗಿ ಬಾಯಿಯ ದುರ್ವಾಸನೆ ಇಲ್ಲವಾಗಲು ಮಾನಸಿಕ ಒತ್ತಡ ಇಲ್ಲದಿರುವುದೂ ಅಗತ್ಯ.
  * ನೀವು ಸೇವಿಸುವ ಆಹಾರಗಳ ಬಗ್ಗೆ ಗಮನವಿರಲಿ. ವಿಶೇಷವಾಗಿ ಬೆಳ್ಳುಳ್ಳಿ, ಹಸಿ ನೀರುಳ್ಳಿ ಹಾಗೂ ಮಸಾಲೆಯುಕ್ತ ಆಹಾರಗಳ ಬಗ್ಗೆ ಎಚ್ಚರವಿರಲಿ. ಅತಿಯಾದ ಸಕ್ಕರೆ ಇರುವ ಆಹಾರಗಳೂ ಬಾಯಿಯ ದುರ್ವಾಸನೆಗೆ ಕಾರಣವಾಗುತ್ತವೆ.ಒಂದು ವೇಳೆ ಈ ವಿಧಾನಗಳನ್ನು ಅನುಸರಿಸಿದ ಬಳಿಕವೂ ಬಾಯಿಯ ದುರ್ವಾಸನೆ ಮುಂದುವರೆದರೆ ನೀವು ತಜ್ಜ ವೈದ್ಯರ
  ಸಲಹೆ ಪಡೆಯಬೇಕು ಹಾಗೂ ಇದಕ್ಕೆ ನೀವು ಸೇವಿಸುವ ಯಾವುದಾದರೂ ಔಷಧಿಯ ಅಡ್ಡಪರಿಣಾಮ ಕಾರಣವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಹ್ಯಾಲಿಟೋಸಿಸ್? ಏನು ಹಾಗೆಂದರೆ? ಕನ್ನಡದಲ್ಲಿ ಈ ಪದವನ್ನು ತರ್ಜುಮೆ ಮಾಡಿದರೆ "ಬಾಯಿಯ ದುರ್ವಾಸನೆ", ಇದೊಂದು ಸಾಮಾನ್ಯ ತೊಂದರೆಯಾಗಿದ್ದು ವಿಶ್ವದ ಪ್ರತಿ ನಾಲ್ವರಲ್ಲೊಬ್ಬರಲ್ಲಿ ಇದು ಕಂಡುಬರುತ್ತದೆ. ಇವರಲ್ಲಿ ಧೂಮಪಾನಿಗಳ ಸಂಖ್ಯೆ ಹೆಚ್ಚು. ಈ ತೊಂದರೆಯಿಂದ ಬಾಯಿಯ ಆರೋಗ್ಯ ಹಾಳಾಗುವುದು ಪ್ರಮುಖ ತೊಂದರೆಯಾದರೆ ನಾಲ್ಕು ಜನರ ನಡುವೆ ಇದ್ದಾಗ ಎದುರಾಗುವ ಮುಜುಗರವನ್ನು ವರ್ಣಿಸಲು ಸಾಧ್ಯವಿಲ್ಲ. ಈ ದುರ್ವಾಸನೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ.

ದಂತವೈದ್ಯರ ಪ್ರಕಾರ, ದಂತಕ್ಷಯದ ತೊಂದರೆ ಹೇಳಿಕೊಂಡು ಬರುವವರಲ್ಲಿ ಹೆಚ್ಚಿನವರಿಗೆ ಈ ದುರ್ವಾಸನೆಯೇ ಹಲ್ಲುಗಳ ಸವೆತ, ಹುಳುಕು, ಕುಳಿಗಳಿಗೆ ಕಾರಣವಾಗಿರುತ್ತದೆ. ಇಂದಿನ ಲೇಖನದಲ್ಲಿ ಈ ತೊಂದರೆಗೆ ಕಾರಣಗಳು ಹಾಗೂ ಇದರ ನಿವಾರಣೆಗೆ ಕೆಲವು ಸುಲಭ ಮನೆಮದ್ದುಗಳನ್ನು ವಿವರಿಸಲಾಗಿದೆ. ಜೊತೆಗೇ ತಡೆಗಟ್ಟುವ ವಿಧಾನಗಳು, ಜೀವನಕ್ರಮದಲ್ಲಿ ಆಗಬೇಕಾದ ಬದಲಾವಣೆ ಹಾಗೂ ಸಂಬಂಧಿಸಿದ ಇತರ ಅಮೂಲ್ಯ ಮಾಹಿತಿಗಳನ್ನು ಒದಗಿಸಲಾಗಿದೆ. ಯಾವುದೇ ಕಾರಣಕ್ಕೂ, ಈ ವಿಧಾನಗಳಿಂದ ಉಪಯೋಗ ಕಂಡುಬರದೇ ಇದ್ದರೆ ಈ ದುರ್ವಾಸನೆಗೆ ಇರುವ ಸಂಭಾವ್ಯ ಕಾರಣಗಳನ್ನು ತಜ್ಞ ವೈದ್ಯರಿಂದ ಪರೀಕ್ಷಿಸಿ ಸಲಹೆ ಪಡೆದುಕೊಳ್ಳಬೇಕು.

ಬಾಯಿಯ ದುರ್ವಾಸನೆಗೆ ಪ್ರಮುಖ ಕಾರಣಗಳು

* ಬಾಯಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ತೋರುವ ಅಸಡ್ಡೆ, ಸೋಮಾರಿತನ

* ಹಲ್ಲುಗಳಲ್ಲಿನ ಕುಳಿ

* ಧೂಮಪಾನ

* ಒಸಡುಗಳ ಕಾಯಿಲೆ, ಸಡಿಲವಾದ ಒಸಡುಗಳು ಮತ್ತು ಇಲ್ಲಿ ಎದುರಾಗಿರುವ ಸೋಂಕುಗಳು

* ಬಾಯಿ ಒಣಗಿರುವುದು

* ಅನಾರೋಗ್ಯದ ಪರಿಣಾಮ

*ಶೀಘ್ರವಾಗಿ ತೂಕ ಇಳಿಸಿಕೊಳ್ಳಲು ಸೇವಿಸುವ ಆಹಾರಗಳು

* ಮಧುಮೇಹ

   
 
ಹೆಲ್ತ್