Back
Home » ಆರೋಗ್ಯ
ಸಿಕ್ಸ್ ಪ್ಯಾಕ್ ಆಬ್ಸ್ ಬೇಕೆಂದರೆ- ಈ ಟ್ರಿಕ್ಸ್ ಅನುಸರಿಸಿ
Boldsky | 17th Aug, 2018 08:31 AM

ಸುಂದರ, ಬಲಿಷ್ಠ ಮೈಕಟ್ಟಿಗಾಗಿ ಜಿಮ್‌ಗೆ ಹೋಗುವ ಬಹುತೇಕರಿಗೆ ತಾವೂ ಸಿಕ್ಸ್ ಪ್ಯಾಕ್ ಆಬ್ ಹೊಂದಬೇಕೆಂಬ ಆಸೆ ಇದ್ದೇ ಇರುತ್ತದೆ. ಆದರೆ ಕಿಬ್ಬೊಟ್ಟೆಯ (ಅಬ್ಡಾಮಿನಲ್) ಸಿಕ್ಸ್ ಪ್ಯಾಕ್ ಸಾಧನೆ ಮಾಡುವುದು ಸುಲಭವಲ್ಲ. ಇದಕ್ಕೆ ಸಾಕಷ್ಟು ಪರಿಶ್ರಮ ಹಾಗೂ ಅವಿರತ ಪ್ರಯತ್ನ ಬೇಕಾಗುತ್ತದೆ. ಇಷ್ಟಾದರೂ ಆರೋಗ್ಯಯುತ ಆಹಾರ ಶೈಲಿ ಹಾಗೂ ಪರಿಶ್ರಮದ ವ್ಯಾಯಾಮದಿಂದ ಸಿಕ್ಸ್ ಪ್ಯಾಕ್ ಆಬ್ ಅಥವಾ ಗಟ್ಟಿಮುಟ್ಟಾದ ಆಬ್ ನಿಮ್ಮದಾಗಿಸಿಕೊಳ್ಳಲು ಸಾಧ್ಯವಿದೆ. ಉಕ್ಕಿನಂತ ಸಿಕ್ಸ್ ಪ್ಯಾಕ್ ಆಬ್ ಪಡೆಯಬೇಕಾದರೆ ಶಿಸ್ತುಬದ್ಧ ವ್ಯಾಯಾಮ ಮಾತ್ರ ಬೇಕೇ ಬೇಕು. ಗಟ್ಟಿಮುಟ್ಟಾದ ಆಬ್ ಅಡುಗೆ ಮನೆಯಲ್ಲಿ ತಯಾರಾಗುತ್ತವೆ ಎಂದು ಕೆಲವರು ಹೇಳುವುದು ಸತ್ಯ ಸಂಗತಿಯಾಗಿದೆ.

ಬಹುತೇಕರು ಜಿಮ್‌ಗಳಲ್ಲಿ ನೂರಾರು ಕೆಜಿ ಭಾರ ಎತ್ತುವ ಮೂಲಕ ಆಬ್ ವರ್ಕೌಟ್ ಮಾಡುತ್ತಾರೆ. ಆದರೆ ಹೊಟ್ಟೆಯ ಭಾಗದಲ್ಲಿನ ಕೊಬ್ಬು ಕರಗಿಸುವ ಬಗ್ಗೆ ಮಾತ್ರ ನಿರ್ಲಕ್ಷ್ಯ ವಹಿಸುತ್ತಾರೆ. ಬೊಜ್ಜು ಕರಗಿಸಿ ತುಸು ತೆಳ್ಳಗಾದಾಗ ನಿಧಾನಕ್ಕೆ ಸಿಕ್ಸ್ ಪ್ಯಾಕ್ ಕಾಣಲಾರಂಭಿಸುತ್ತವೆ. ಈ ಹಂತದಲ್ಲಿ ಆಬ್ ಕೇಂದ್ರೀಕೃತ ವ್ಯಾಯಾಮಗಳನ್ನು ಹೆಚ್ಚು ಮಾಡಿ ಸಿಕ್ಸ್ ಪ್ಯಾಕ್ ಬೆಳೆಸುವತ್ತ ಗಮನ ಹರಿಸುವುದು ಸೂಕ್ತ.

ಖ್ಯಾತ ದೇಹದಾರ್ಢ್ಯ ಪಟುಗಳು ಹಾಗೂ ನಮ್ಮ ಚಿತ್ರನಟರು ಬೆಳೆಸಿಕೊಂಡ ಹಾಗೆ ನಾವೂ ಸಿಕ್ಸ್ ಪ್ಯಾಕ್ ಪಡೆಯಬೇಕಾದರೆ ತಜ್ಞರ ಸೂಚನೆಯನುಸಾರ ಆರೋಗ್ಯಯುತ ಆಹಾರ ಶೈಲಿ ಹಾಗೂ ನಿರ್ದಿಷ್ಟ ವ್ಯಾಯಾಮ ಕ್ರಮಗಳನ್ನು ಏಕಕಾಲದಲ್ಲಿ ಅನುಸರಿಸಬೇಕಾಗುತ್ತದೆ. ಕೆಲ ಸಪ್ಲಿಮೆಂಟರಿ ಆಹಾರದ ಪೊಟ್ಟಣಗಳನ್ನು ಸೇವಿಸಿ ಶೀಘ್ರವಾಗಿ ಸಿಕ್ಸ್ ಪ್ಯಾಕ್ ಪಡೆದುಕೊಳ್ಳಿ ಎಂಬುದಾಗಿ ಅನೇಕ ಕಂಪನಿಗಳು ಆನ್‌ಲೈನ್ ಜಾಹೀರಾತು ನೀಡುತ್ತವೆ. ಆದರೆ ಇವುಗಳಿಗೆ ಮೊರೆ ಹೋಗಿ ಕೈಸುಟ್ಟುಕೊಂಡವರೇ ಅಧಿಕ. ಹೀಗಾಗಿ ವೈಜ್ಞಾನಿಕವಾಗಿ ಸಿಕ್ಸ್ ಪ್ಯಾಕ್ ಹೇಗೆ ಉಂಟಾಗುತ್ತವೆ ಎಂಬ ವಾಸ್ತವದ ಬಗ್ಗೆ ಮೊದಲು ಅರಿವು ಹೊಂದುವುದು ಅಗತ್ಯವಾಗಿದೆ.

ಸಿಕ್ಸ್ ಪ್ಯಾಕ್ ಹಿಂದಿನ ವಿಜ್ಞಾನ

ಸಿಕ್ಸ್ ಪ್ಯಾಕ್ ಆಬ್ ಪಡೆಯಲು ಒಮ್ಮೆಲೇ ವ್ಯಾಯಾಮ ಆರಂಭಿಸುವ ಮುಂಚೆ ವೈಜ್ಞಾನಿಕವಾಗಿ ಯಾವೆಲ್ಲ ಅಂಶಗಳು ಸಿಕ್ಸ್ ಪ್ಯಾಕ್ ಪಡೆಯಲು ಸಹಕಾರಿಯಾಗುತ್ತವೆ ಎಂಬುದನ್ನು ಅರಿತುಕೊಳ್ಳುವುದು ಅತಿ ಮುಖ್ಯ.

ದೇಹದ ಬೊಜ್ಜಿನ ಪ್ರಮಾಣ

ಬಹಳಷ್ಟು ಜನರ ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿರುವುದರಿಂದ ಸಿಕ್ಸ್ ಪ್ಯಾಕ್ ಅದರಲ್ಲಿಯೇ ಮುಚ್ಚಿ ಹೋಗುವ ಸಂದರ್ಭಗಳು ಹೆಚ್ಚಾಗಿರುತ್ತವೆ. ಅಂದರೆ ಗಟ್ಟಿ ಮುಟ್ಟಾದ ಆಬ್ ಇದ್ದರೂ ಅವು ಬೊಜ್ಜಿನ ಕಾರಣದಿಂದ ಹೊರಗೆ ಎದ್ದು ಕಾಣಲಾರವು.

ಅಬ್ಡಾಮಿನಲ್ ಸ್ನಾಯುವಿನ ಸಾಂದ್ರತೆ

ಒಮ್ಮೆ ಬೊಜ್ಜಿನ ಅಂಶ ಕಡಿಮೆ ಮಾಡಿಕೊಂಡ ನಂತರ, ಆಬ್ ವರ್ಕೌಟ್ ಆರಂಭಿಸಿದರೆ ಪ್ಯಾಕ್‌ಗಳು ನಿಧಾನವಾಗಿ ಸುಧಾರಿಸಲಾರಂಭಿಸುತ್ತವೆ.

ಕಿಬ್ಬೊಟ್ಟೆಯ ರಚನೆ ಹಾಗೂ ಅನುವಂಶಿಕತೆ

ಕೆಲವರು ಹುಟ್ಟುವಾಗಲೇ ತೆಳ್ಳನೆಯ ಮೈಕಟ್ಟು ಹೊಂದಿದ್ದು, ಉತ್ತಮ ಆಬ್ ರಚನೆಯನ್ನು ಅನುವಂಶಿಕವಾಗಿ ಪಡೆದಿರುತ್ತಾರೆ. ಇದರೊಂದಿಗೆ ತುಸು ಜಿಮ್ ವರ್ಕೌಟ್ ಮಾಡಿದಲ್ಲಿ ಇಂಥವರಿಗೆ ಸಿಕ್ಸ್ ಪ್ಯಾಕ್ ಒಲಿಯುವುದು ಸುಲಭ.

ವಿಪರೀತ ಬೊಜ್ಜಿನ ದೇಹ

ಕೆಲವರಿಗೆ ಹೊಟ್ಟೆಯ ಭಾಗದಲ್ಲಿ ತುಸು ವಿಪರೀತ ಎನ್ನಿಸುಷ್ಟು ಬೊಜ್ಜು ಇರುತ್ತದೆ. ಇವರು ಹೆಚ್ಚಿನ ಬೊಜ್ಜು ಕರಗಿಸಲು ನಿಯಮಿತ ಹಾಗೂ ನಿಯಂತ್ರಿತ ಆಹಾರ ಪದ್ಧತಿ ಅನುಸರಿಸುವುದು ಅನಿವಾರ್ಯ. ಸಿಕ್ಸ್ ಪ್ಯಾಕ್ ಹಿಂದೆ ಕೆಲಸ ಮಾಡುವ ಅಂಶಗಳನ್ನು ತಿಳಿದ ನಂತರ ಈಗ ನಿಮ್ಮ ನಿಯಮಿತ ವರ್ಕೌಟ್‌ನಲ್ಲಿ ಯಾವ್ಯಾವ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ಅರಿತುಕೊಳ್ಳೋಣ.

ಆಕರ್ಷಕ ಸಿಕ್ಸ್ ಪ್ಯಾಕ್ ಆಬ್ ಹಿಂದಿನ ವೈಜ್ಞಾನಿಕ ಸೂತ್ರಗಳು
  • ಸಮತೋಲಿತ ಆಹಾರ
  • ಪರಿಣಾಮಕಾರಿ ವ್ಯಾಯಾಮ ಕ್ರಮ
  • ರಕ್ತಪರಿಚಲನೆ ಹೆಚ್ಚಳಕ್ಕೆ ನಿರ್ದಿಷ್ಟ ಸೂತ್ರ
  • ಮೂಲ ವ್ಯಾಯಾಮದಲ್ಲಿ ಪರಿಣತಿ
  • ಹೊಸ ಆಟಗಳಲ್ಲಿ ತೊಡಗಿಸಿಕೊಳ್ಳುವಿಕೆ
ಸಮತೋಲಿತ ಆಹಾರ

ಮೊದಲೇ ಹೇಳಿದಂತೆ ಸಿಕ್ಸ್ ಪ್ಯಾಕ್‌ಗಳು ಕೇವಲ ಜಿಮ್‌ನಲ್ಲಿ ಅಲ್ಲ, ಕಿಚನ್‌ನಲ್ಲಿ ತಯಾರಾಗುತ್ತವೆ ಎಂಬ ಅಂಶ ನೆನಪಿರಲಿ. ಜಿಮ್‌ನಲ್ಲಿ ಮಾಡುವ ವರ್ಕೌಟ್‌ಗೆ ತಕ್ಕ ಹಾಗೆ ಆಹಾರದಲ್ಲಿಯೂ ಶಿಸ್ತು ಬೇಕು. ಎಲ್ಲಕ್ಕೂ ಮೊದಲು ಜಂಕ್ ಫುಡ್ ತ್ಯಜಿಸಬೇಕು. ನಿತ್ಯ ಆಹಾರದಲ್ಲಿ ಹಸಿ ತರಕಾರಿ, ಸಾವಯವ ಪ್ರೋಟೀನ್, ಆರೋಗ್ಯಕರ ಕೊಬ್ಬು ಇರುವ ಪದಾರ್ಥಗಳನ್ನು ಸೇವಿಸಬೇಕು. ಆಲಿವ್ ಎಣ್ಣೆ, ಮೀನಿನ ಎಣ್ಣೆ ಹಾಗೂ ಹಣ್ಣುಗಳನ್ನು ಆಹಾರ ಕ್ರಮದಲ್ಲಿ ಅಳವಡಿಸಿಕೊಳ್ಳಬೇಕು. ತಜ್ಞರ ಪ್ರಕಾರ ದಿನಕ್ಕೆ ಮೂರು ಬಾರಿ ಹೆಚ್ಚು ಪ್ರಮಾಣದ ಊಟಕ್ಕಿಂತ ಆರು ಬಾರಿ ಚಿಕ್ಕ ಪ್ರಮಾಣದಲ್ಲಿ ಊಟ ಮಾಡುವುದು ಒಳಿತು. ಹೊಸ ಆಹಾರ ಪದ್ಧತಿ ಆರಂಭಿಸುವ ಮುಂಚೆ ವೈದ್ಯರನ್ನು ಕಂಡು ಯಾವ ಬಗೆಯ ಆಹಾರ ನಿಮ್ಮ ದೇಹಕ್ಕೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಲು ಹಿಂಜರಿಕೆ ಬೇಡ.

ಪರಿಣಾಮಕಾರಿ ವ್ಯಾಯಾಮ ಕ್ರಮ

ಪ್ರತಿದಿನ ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಇಡೀ ದೇಹಕ್ಕೆ ವ್ಯಾಯಾಮ ಸಿಗುವಂತೆ ಮಾಡುವುದು ಉತ್ತಮ ಕ್ರಮವಾಗಿದೆ. ವಾರಕ್ಕೆ ಮೂರೇ ದಿನ ವ್ಯಾಯಾಮ ಮಾಡಿದರೂ ಪರಿಣಾಮಕಾರಿ ವ್ಯಾಯಾಮ ಕ್ರಮದಿಂದ ದೇಹದ ಜೀರ್ಣಶಕ್ತಿ ಹೆಚ್ಚಾಗಿ ಆರೋಗ್ಯ ಸುಧಾರಿಸುವುದು. ಕಾಲು, ಕೈಗಳು ಸೇರಿದಂತೆ ದೇಹದ ಯಾವುದೇ ಭಾಗವೂ ವ್ಯಾಯಾಮದಿಂದ ವಂಚಿತವಾಗದಂತೆ ನೋಡಿಕೊಳ್ಳಿ. ಸಿರಾಕ್ಯೂಸ್ ಯುನಿವರ್ಸಿಟಿಯ ಸಂಶೋಧನೆಯ ಪ್ರಕಾರ ಹೆಚ್ಚಿನ ಜನ ದೇಹದ ಕೆಳಭಾಗಕ್ಕೆ ಹೆಚ್ಚು ಒತ್ತು ಕೊಟ್ಟು ಫ್ಯಾಟ್ ಕರಗಿಸಲು ನೋಡುತ್ತಾರೆ. ದೇಹದ ಮೇಲ್ಭಾಗದ ವ್ಯಾಯಾಮಕ್ಕೆ ಹೆಚ್ಚಿನವರು ಗಮನ ನೀಡುತ್ತಿಲ್ಲ ಎನ್ನಲಾಗಿದೆ. ಹೀಗಾಗಿ ದೇಹದ ಎಲ್ಲ ಭಾಗಕ್ಕೂ ವ್ಯಾಯಾಮದ ಲಾಭ ಸಿಗುವಂತೆ ಕ್ರಮ ಅನುಸರಿಸಬೇಕು.

ರಕ್ತಪರಿಚಲನೆ ಹೆಚ್ಚಳಕ್ಕೆ ನಿರ್ದಿಷ್ಟ ಸೂತ್ರ

ಸಾಕಷ್ಟು ವ್ಯಾಯಾಮ ಮಾಡದೆ ಕೇವಲ ಆಹಾರದಲ್ಲಿ ಕೊಬ್ಬಿನ ಪದಾರ್ಥ ಕಡಿಮೆ ಮಾಡಿ ಆರಂಭದಲ್ಲಿ ಫ್ಯಾಟ್ ಕರಗಿಸಬಹುದು. ಆದರೆ ಇದು ಮಾತ್ರ ಸಾಕಾಗದು. ದೀರ್ಘಾವಧಿಯವರೆಗೆ ನಮ್ಮ ದೇಹ ಫಿಟ್ ಆಗಿರಬೇಕಾದರೆ ಇತರ ರಕ್ತಪರಿಚಲನೆ ಹೆಚ್ಚಿಸುವ, ಹೃದಯಕ್ಕೆ ಶಕ್ತಿ ನೀಡುವ ಚಟುವಟಿಕೆಗಳು ಅಗತ್ಯ. ವ್ಯಾಯಾಮದಿಂದ ಕೆಲ ಕಾಲ ದೂರವಿದ್ದರೂ ವಾಕಿಂಗ್, ಬೆಟ್ಟ ಹತ್ತುವುದು, ಸೈಕ್ಲಿಂಗ್, ಈಜು ಮುಂತಾದ ಚಟುವಟಿಕೆಗಳು ನಮ್ಮ ನಿತ್ಯದ ಕ್ರಮವಾಗಬೇಕು. ಕೆಲವೊಮ್ಮೆ ಕಾರು ಬಿಟ್ಟು ನಡೆದು ಹೋಗುವುದನ್ನೂ ಅಭ್ಯಾಸ ಮಾಡಿಕೊಳ್ಳುವುದು ಒಳಿತು.

ಮೂಲ ವ್ಯಾಯಾಮದಲ್ಲಿ ಪರಿಣತಿ

ಯಾವ ರೀತಿ ವ್ಯಾಯಾಮ ಮಾಡಬೇಕು ಎಂಬ ಅಂಶವನ್ನು ಮೊದಲು ಕಲಿಯಬೇಕು. ಮೂಲ ವ್ಯಾಯಾಮ ಸುಲಭ ಎನಿಸಿದರೂ, ಇದನ್ನು ಸರಿಯಾಗಿ ಮಾಡಲು ಕಲಿತರೆ ದೇಹಕ್ಕೆ ಮಾಟ ಬರುವುದು. ಎಲ್ಲ ವರ್ಕೌಟ್‌ಗಳಲ್ಲಿ ಮೂಲ ವ್ಯಾಯಾಮದ ಪಾತ್ರ ಅತಿ ಮುಖ್ಯವಾಗಿದೆ.

ಹೊಸ ಆಟಗಳಲ್ಲಿ ತೊಡಗಿಸಿಕೊಳ್ಳುವಿಕೆ

ನೀವು ಆಟವಾಡುವಾಗಲೂ ನಿಮ್ಮ ಸಿಕ್ಸ್ ಪ್ಯಾಕ್ ಬೆಳೆಸಬಹುದು ಎಂಬುದು ಗೊತ್ತೆ? ಹೌದು. ಆಟವಾಡುತ್ತ ದೇಹದ ಬೊಜ್ಜು ಕರಗಿಸಿ ಸಹಜ ವಿಧಾನದಲ್ಲಿ ಮೈಮಾಟ ಹೆಚ್ಚಿಸಿಕೊಳ್ಳಬಹುದು ಎಂಬುದು ಸತ್ಯ. ದೇಹದ ಮೇಲ್ಭಾಗ ಹಾಗೂ ಕೆಳಭಾಗ ಎರಡಕ್ಕೂ ವ್ಯಾಯಾಮ ನೀಡಬಲ್ಲ ಆಟೋಟಗಳು ಸಹ ಸಿಕ್ಸ್ ಪ್ಯಾಕ್ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಒಟ್ಟಾರೆಯಾಗಿ ವೈಜ್ಞಾನಿಕವಾಗಿ ನೋಡುವುದಾದರೆ ಸಿಕ್ಸ್ ಪ್ಯಾಕ್ ಸಾಹಸಕ್ಕೆ ಮುಂದಾಗುವ ಮುನ್ನ ನೀವು ನಿಮ್ಮ ದೇಹದ ಬೊಜ್ಜಿನ ಪ್ರಮಾಣ ಅಳೆಯುವುದು ಅಗತ್ಯ. ಇದು ಆರಂಭಿಕ ಹಂತವಾಗಿದ್ದು, ಇದರ ನಂತರ ವಾಸ್ತವಿಕ ಗುರಿ ಇಟ್ಟುಕೊಂಡು ಅದರ ಮೇಲೆ ವರ್ಕೌಟ್ ಆರಂಭಿಸಬೇಕು. ಸಿಕ್ಸ್ ಪ್ಯಾಕ್ ಮೇಲೆ ನಿಮ್ಮೆಲ್ಲ ಗಮನ ಕೇಂದ್ರೀಕರಿಸಿದಾಗಲೂ ದೇಹದ ಬೊಜ್ಜು ಕರಗಿಸುವ ಬಗ್ಗೆ ಸಹ ಗಮನ ಇರಲೇಬೇಕು ಎಂಬುದು ತಿಳಿದಿರಲಿ.

   
 
ಹೆಲ್ತ್