Back
Home » ಆರೋಗ್ಯ
ಕಾಫಿ ಬದಲಿಗೆ ಈ ಆರು ಪಾನೀಯ ಸೇವನೆ ಮಾಡಿ- ಆರೋಗ್ಯಕ್ಕೆ ಒಳ್ಳೆಯದು
Boldsky | 12th Sep, 2018 07:01 AM
 • ದಾಂಡೇಲಿಯನ್ ರೂಟ್ ಕಾಫಿ

  ಕಾಫಿ ರುಚಿಯು ನಿಮಗೆ ತುಂಬಾ ಇಷ್ಟವಾಗಿದ್ದು, ಅದನ್ನು ಬಿಡಲು ಮನಸ್ಸು ಬರುತ್ತಿಲ್ಲ ಮತ್ತು ಆರೋಗ್ಯಕರವಾಗಿಯೂ ಇರಬೇಕೆಂದರೆ ಆಗ ನೀವು ದಾಂಡೇಲಿಯನ್ ಕಾಫಿ ಸೇವನೆ ಮಾಡಬಹುದು. ಇದರಲ್ಲಿ ಪೋಷಕಾಂಶಗಳಾಗಿರುವ ವಿಟಮಿನ್ ಎ, ಬಿ, ಸಿ ಮತ್ತು ಡಿ, ಕಬ್ಬಿಣಾಂಶ, ಕ್ಯಾಲ್ಸಿಯಂ ಮತ್ತು ಮೆಗ್ನಿಶಿಯಂ ಇದೆ. ಕಾಫಿಗಿಂತ ಇದು ಹೆಚ್ಚಿನ ಪೋಷಕಾಂಶಗಳನ್ನು ಒಳಗೊಂಡಿದೆ. ಕ್ಯಾಲ್ಸಿಯಂ ಮತ್ತು ಮೆಗ್ನಿಶಿಯಂ ಶಕ್ತಿಯ ಉತ್ಪತ್ತಿಗೆ ಅಗತ್ಯವಾಗಿರುವುದು.


 • ಮೆಟಾ ಗ್ರೀನ್ ಟೀ

  ಗ್ರೀನ್ ಟೀಯನ್ನು ಹುಡಿ ಮಾಡಿಕೊಂಡು ಇದನ್ನು ತಯಾರಿಸಲಾಗುವುದು. ಮೆಟಾ ಗ್ರೀನ್ ಟೀಯು ಗ್ರೀನ್ ಟೀಯ ಕೇಂದ್ರೀಕೃತ ರೂಪವಾಗಿದ್ದು, ಇದರಲ್ಲಿ ಆ್ಯಂಟಿಆಕ್ಸಿಡೆಂಟ್, ಕ್ಲೋರೊಫಿಲ್ ಮತ್ತು ನಾರಿನಾಂಶವಿದೆ. ಇದು ಹೃದಯದ ಕಾಯಿಲೆ ತಡೆಯುವುದು. ಟೈಪ್ 2 ಮಧುಮೇಹಿಗಳಿಗೆ ಒಳ್ಳೆಯದು ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡುವುದು. ಇದು ದೇಹಕ್ಕೆ ಬೇಕಾಗುವಷ್ಟು ಕೆಫಿನ್ ಒದಗಿಸುವುದು ಮತ್ತು ಆಯಾಸ ದೂರ ಮಾಡಲು ಶಕ್ತಿ ನೀಡುವುದು. ಕಾಫಿ ಬದಲಿಗೆ ನೀವು ಇದನ್ನು ಆಯ್ಕೆ ಮಾಡಿಕೊಳ್ಳಿ.


 • ಮಸಾಲ ಚಹಾ

  ಚಹಾ ನಮ್ಮ ಸಂಸ್ಕೃತಿಯ ಒಂದು ಭಾಗವೇ ಆಗಿ ಹೋಗಿದೆ. ಚಹಾ ಕೂಡಾ ವ್ಯಸನಕಾರಿ ಪೇಯವಾದರೂ ಇದೇನೂ ಅಪಾಯಕಾರಿ ವ್ಯಸನವಲ್ಲ. ದಿನಕ್ಕೆ ನಿಯಮಿತವಾಗಿ ಮೂರು ನಾಲ್ಕು ಕಪ್ ಕುಡಿಯುವುದರಿಂದ ಆರೋಗ್ಯಕ್ಕೆ ಒಳ್ಳೆಯದೇ. ಚಹಾ ಅಥವಾ ಚಾಯ್ ಪರಿವಾರ, ಸ್ನೇಹಿತರ ನಡುವಣ ಬಂಧವನ್ನು ಹೆಚ್ಚಿಸುವ ಮಾಧ್ಯಮವಾಗಿಯೇ ಹೆಚ್ಚು ಆಪ್ತವಾಗಿದೆ. ಸಾಮಾನ್ಯ ಜನರಿಂದ ಹಿಡಿದು ನಮ್ಮ ಪ್ರಧಾನಮಂತ್ರಿಗಳ 'ಚಾಯ್ ಪೇ ಚರ್ಚಾ' ಕಾರ್ಯಕ್ರಮದವರೆಗೂ ಈ ಚಹಾಕೂಟವನ್ನು ಏರ್ಪಡಿಸುತ್ತಾರೆ. ಆದರೆ ಸಾಮಾನ್ಯ ಚಹಾದ ಬದಲಿಗೆ ಇದಕ್ಕೆ ಕೊಂಚ ಅಡುಗೆಮನೆಯ ಮಸಾಲೆವಸ್ತುಗಳನ್ನು ಬೆರೆಸಿ 'ಮಸಾಲಾ ಚಹಾ'ವನ್ನಾಗಿಸಿ ಕುಡಿಯುವುದರಿಂದ ಸ್ವಾದ ನೂರು ಪಟ್ಟು ಹೆಚ್ಚುವುದರ ಜೊತೆಗೇ ಇದರ ಆರೋಗ್ಯಕರ ಗುಣಗಳನ್ನೂ ಪಡೆಯಬಹುದು. ಅದರಲ್ಲು ಮಸಾಲೆ ಚಹಾ ಭಾರತದಲ್ಲಿ ಈ ಚಹಾವು ತುಂಬಾ ಜನಪ್ರಿಯವಾಗಿದ್ದು, ಶಕ್ತಿ ಒದಗಿಸಲು ಬೇಕಾಗುವಂತಹ ಕೆಫಿನ್ ಇದರಲ್ಲಿದೆ. ಇದರಲ್ಲಿ ಭಾರತೀಯ ಮಸಾಲೆಗಳಾಗಿರುವ ಏಲಕ್ಕಿ, ದಾಲ್ಚಿನಿ, ಜಾಯಿಕಾಯಿ, ಲವಂಗ, ಶುಂಠಿ ಇತ್ಯಾದಿಗಳು ಇವೆ. ಇದರಿಂದ ಚಹಾ ತುಂಬಾ ರುಚಿಕರವಾಗುವುದು ಮತ್ತು ಆ್ಯಂಟಿಆಕ್ಸಿಡೆಂಟ್ ನಮ್ಮ ಪ್ರತಿರೋಧಕ ಶಕ್ತಿ ವೃದ್ಧಿಸಿ ಶೀತ ಮತ್ತು ಜ್ವರದಿಂದ ದೂರವಿಡುವುದು.

  ಮಸಾಲಾ ಚಹಾ ಮಾಡುವ ವಿಧಾನ

  ಸಾಮಾನ್ಯವಾಗಿ ಒಂದು ಕಪ್ ಚಹಾಕ್ಕೆ ಕಾಲಿಂಚಿನಷ್ಟು ಗಾತ್ರದ ಹಸಿಶುಂಠಿ, ಕಾಲು ಚಿಕ್ಕ ಚಮಚದ ಅರ್ಧದಷ್ಟು ಚೆಕ್ಕೆ ಪುಡಿ (ಇದು ಕೊಂಚ ಖಾರವಾದ ಕಾರಣ ಖಾರ ಹೆಚ್ಚು ಬೇಕಿದ್ದರೆ ಹೆಚ್ಚಿಸಬಹುದು) ಹಾಗೂ ಒಂದು ಏಲಕ್ಕಿ ಸಾಕು. ಇವನ್ನು ಕುಟ್ಟಿ ಪುಡಿಮಾಡಿ ನೀರು ಕುದಿ ಬಂದ ಬಳಿಕ ಚಿಕ್ಕ ಉರಿಯಲ್ಲಿ ಸುಮಾರು ಹದಿನೈದು ಇಪ್ಪತ್ತು ನಿಮಿಷ ಕುದಿಸಬೇಕು. ಬಳಿಕ ಟೀ ಪುಡಿ ಸೇರಿಸಿ ಒಂದೆರಡು ನಿಮಿಷ ಕುದಿಸಿ (ಇನ್ನೂ ಸ್ಟ್ರಾಂ ಬೇಕು ಎಂದಿದ್ದರೆ ನಾಲ್ಕು ನಿಮಿಷ ಕುದಿಸಬಹುದು) ಹಾಲು ಸಕ್ಕರೆ ಸೇರಿಸಿ ಸೋಸಿದರೆ ಮಸಾಲಾ ಚಾಯ್ ಸಿದ್ಧ.


 • ಅರಿಶಿನ ಚಹಾ

  ಇದರಲ್ಲಿ ಇರುವಂತಹ ಆರೋಗ್ಯ ಲಾಭಗಳಿಂದಾಗಿ ಈ ಚಹಾವನ್ನು ಹೆಚ್ಚಿನವರು ಸೇವನೆ ಮಾಡುತ್ತಾರೆ. ಈ ಚಹಾಗೆ ಬಂಗಾರದ ಬಣ್ಣವಿದೆ ಮತ್ತು ಪ್ರಬಲ ರುಚಿಯಿದೆ. ಕರ್ಕ್ಯುಮಿನ್ ಎನ್ನುವ ಅಂಶದಿಂದ ಹಲವಾರು ಆರೋಗ್ಯ ಲಾಭಗಳು ಸಿಗುವುದ. ಇದು ನಿಮ್ಮ ಪ್ರತಿರೋಧಕ ಶಕ್ತಿ ವೃದ್ಧಿಸುವುದು, ಉರಿಯೂತ ತಗ್ಗಿಸುವುದು, ಸಂಧಿವಾತದ ಲಕ್ಷಣಗಳು, ಕ್ಯಾನ್ಸರ್ ಮತ್ತು ಅಲ್ಝೈಮರ್ ಇತ್ಯಾದಿಗಳನ್ನು ತಡೆಯುವುದು. ಯಕೃತ್ ನ ಹಾನಿ ಮತ್ತು ಮೂತ್ರಕೋಶದ ಕಲ್ಲಿನಿಂದ ಬಳಲುತ್ತಾ ಇರುವವರು ಈ ಚಹಾ ಕುಡಿಯಬೇಕು.

  ಅರಿಶಿನ ಚಹಾ ತಯಾರಿಸುವ ವಿಧಾನ-

  ಒಂದು ಸಣ್ಣ ಪಾತ್ರೆಯಲ್ಲಿ ಎರಡು ಕಪ್ ನೀರು ಬಿಸಿ ಮಾಡಿ. ಇದಕ್ಕೆ ಒಂದು ಇಂಚಿನಷ್ಟಿರುವ ತಾಜಾ ಅರಿಶಿನ ಕೊಂಬನ್ನು ತುರಿದು ನೀರಿಗೆ ಹಾಕಿ. ಅರಿಶಿನ ಕೊಂಬು ಸಿಗಲಿಲ್ಲವೆಂದಾದರೆ ನೀವು ಒಂದು ಚಮಚ ಅರಿಶಿನ ಹುಡಿ ಬಳಸಬಹುದು. *ಪಾತ್ರೆಗೆ ಮುಚ್ಚಳ ಮುಚ್ಚಿಕೊಳ್ಳಿ ಮತ್ತು 2-3 ನಿಮಿಷ ಕಾಲ ಇದು ಕುದಿಯಲು ಬಿಡಿ. *ಈಗ ಈ ಮಿಶ್ರಣವನ್ನು ಒಂದು ಲೋಟಕ್ಕೆ ಹಾಕಿ. ಒಂದು ಚಮಚ ಜೇನುತುಪ್ಪ ಮತ್ತು ಚಿಟಿಕೆ ಕರಿಮೆಣಸಿನ ಹುಡಿ ಹಾಕಿ ಕಲಸಿ. ಪ್ರತಿನಿತ್ಯ ಉಪಹಾರಕ್ಕೆ ಮೊದಲು ಇದನ್ನು ಸೇವಿಸಿ.


 • ಬಿಸಿ ಕೋಕಾ

  ಈ ಪಾನೀಯವು ಶಕ್ತಿ ಒದಗಿಸುವುದು ಮತ್ತು ದಿನದ ಆರಂಭಕ್ಕೆ ಅತ್ಯುತ್ತಮವಾಗಿರುವಂತದ್ದಾಗಿದೆ. ಇದರಲ್ಲಿ ನರಪ್ರೇಕ್ಷಕವಾಗಿರುವ ಅನನ್ಡಮೈಡ್ ಇದೆ. ಇದು ನಮ್ಮ ಮಾನಸಿಕ ಸ್ಥಿತಿಯನ್ನು ಸರಿಯಾಗಿಟ್ಟು, ಸಂತೋಷ ಹೆಚ್ಚಿಸುವುದು. ಕೋಕಾದಲ್ಲಿರುವಂತಹ ಮೆಗ್ನಿಶಿಯಂ ಯಾವಾಗಲೂ ನಮ್ಮನ್ನು ಚುರುಕಾಗಿಡುವುದು.


 • ಬಿಸಿ ಮಕಾ

  ಇದರಲ್ಲಿ ಪ್ರೋಟೀನ್ ಸಹಿತ ಹಲವಾರು ಪೋಷಕಾಂಶಗಳು ಇವೆ ಮತ್ತು ಇದನ್ನು ಅದ್ಭುತ ಪಾನೀಯವೆಂದು ಪರಿಗಣಿಸಲಾಗಿದೆ. ಇದನ್ನು ಸ್ಮೂಥಿ ತಯಾರಿಸಲು ಬಳಕೆ ಮಾಡಲಾಗುವುದು. ಇದು ಶಕ್ತಿ ನೀಡುವುದು ಮಾತ್ರವಲ್ಲದೆ, ಹಾರ್ಮೋನುಗಳನ್ನು ನಿರ್ವಹಿಸುವುದು. ಇದು ಕಾಫಿಗೆ ಆರೋಗ್ಯಕಾರಿ ಪರ್ಯಾಯವಾಗಿದೆ.

  ಈ ಆರು ಆರೋಗ್ಯಕರ ಪಾನೀಯಗಳನ್ನು ನೀವು ಕಾಫಿ ಬದಲಿಗೆ ಸೇವನೆ ಮಾಡಿದರೆ ದಿನಕ್ಕೆ ಬೇಕಾಗಿರುವ ಶಕ್ತಿ ಸಿಗುವುದು. ಕಾಫಿ ಪ್ರಿಯರಾಗಿದ್ದರೆ ಆಗ ನೀವು ಅತಿಯಾಗಿ ಇದರ ಸೇವನೆ ಮಾಡಬೇಡಿ. ಕೆಫಿನ್ ಸೇವನೆಯ ಅಡ್ಡಪರಿಣಾಮದಿಂದ ಪಾರಾಗಿ.
ಪ್ರತಿಯೊಬ್ಬರಿಗೂ ಏನಾದರೊಂದು ಪಾನೀಯವು ಅಭ್ಯಾಸವಾಗಿರುವುದು. ಯಾಕೆಂದರೆ ಬೆಳಗ್ಗೆ ಎದ್ದ ಬಳಿಕ ದೇಹಕ್ಕೆ ಶಕ್ತಿ ನೀಡಬೇಕಾದರೆ ಒಂದಾ ಚಹಾ ಅಥವಾ ಕಾಫಿ ಬೇಕೇಬೇಕು. ಕೆಲವೊಂದು ಪ್ರದೇಶದ ಹವಾಮಾನಕ್ಕೆ ಅನುಗುಣವಾಗಿ ಚಹಾ ಅಥವಾ ಕಾಫಿ ಸೇವನೆ ಮಾಡುವರು. ಆದರೆ ವಿಶ್ವದೆಲ್ಲೆಡೆ ಅತೀ ಹೆಚ್ಚಾಗಿ ಕಾಫಿ ಸೇವನೆ ಮಾಡಲಾಗುತ್ತದೆ. ಇದು ದೇಹದಕ್ಕೆ ಶಕ್ತಿ ನೀಡಿ, ಆಯಾಸ ದೂರಗೊಳಿಸುವುದು. ಕಾಫಿ ಸೇವನೆ ಮಾಡುವುದರಿಂದ ನರಅವನತಿಯ ಕಾಯಿಲೆಗಳಾಗಿರುವ ಅಲ್ಝೆಮೆರ್ ಮತ್ತು ಪರ್ಕಿಸನ್ ನ್ನು ದೂರವಿಡುವುದು. ಯಕೃತ್ ಸಿರೋಸಿಸ್, ಹೊಟ್ಟೆ, ಕೊಲೆರೆಕ್ಟಲ್ ಮತ್ತು ಯಕೃತ್ ಕ್ಯಾನ್ಸರ್ ಇತ್ಯಾದಿಗಳ ಅಪಾಯದಿಂದ ಕಾಪಾಡುವುದು. ಆದರೆ ಅತಿಯಾಗಿ ಸೇವನೆ ಮಾಡಿದರೆ ಅಮೃತ ಕೂಡ ವಿಷ ಎನ್ನುವಂತೆ ಅತಿಯಾಗಿ ಕಾಫಿ ಸೇವನೆ ಮಾಡಿದರೆ ಅದರಿಂದ ಮಹಿಳೆಯರಲ್ಲಿ ಬಂಜೆತನ, ಹೃದಯಾಘಾತ, ಅಜೀರ್ಣ, ತಲೆನೋವು ಇತ್ಯಾದಿ ಕಾಣಿಸಬಹುದು.

ಯಾರು ಏನೇ ಹೇಳಿ, ನಮ್ಮವರಿಗೆ ಚಹಾ ಎಂದರೆ ಪಂಚ ಪ್ರಾಣ!

ಕಾಫಿಯಲ್ಲಿ ಇರುವಂತಹ ಕೆಲವೊಂದು ಪೋಷಕಾಂಶಗಳ ಬಗ್ಗೆ ಹೇಳುವುದಾದರೆ 100ಮಿ.ಲೀ. ಕಾಫಿಯಲ್ಲಿ 92 ಮಿ.ಗ್ರಾಂ ಪೊಟಾಶಿಯಂ, 0.7 ಮಿ.ಗ್ರಾಂ ನಿಯಾಸಿನ್, 0.05 ಮಿ.ಗ್ರಾಂ ಮ್ಯಾಂಗನೀಸ್, 8 ಮಿ.ಗ್ರಾಂ. ಮೆಗ್ನಿಶಿಯಂ, 0.01 ರಿಬೊಫ್ಲಾವಿನ್ ಇದೆ. ಪ್ರತಿನಿತ್ಯವು ಕೆಫಿನ್ ಸೇವನೆಯು 400 ಮಿ.ಗ್ರಾಂ.(4ಕಪ್) ಹೆಚ್ಚಾಗಬಾರದು. ಕಾಫಿ ಬದಲಿಗೆ ನೀವು ಬೇರೆ ಯಾವ ಪಾನೀಯಗಳನ್ನು ಸೇವನೆ ಮಾಡಬಹುದು ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.

   
 
ಹೆಲ್ತ್