Back
Home » ಇತ್ತೀಚಿನ
ಬಾಹ್ಯಾಕಾಶಕ್ಕೆ ತೆರಳುತ್ತಿದೆ ಮೈಸೂರಿನಲ್ಲಿ ತಯಾರಾಗುವ ಇಡ್ಲಿ-ಸಾಂಬರ್!!
Gizbot | 14th Sep, 2018 04:00 PM
 • ಭಾರತದ ಗಗನಯಾನ..?

  ಮೋದಿ ಭಾಷಣದಲ್ಲಿ ಪ್ರಸ್ತಾಪಿಸಲ್ಪಟ್ಟ ಗಗನಯಾನ ಯೋಜನೆಯು ಇಸ್ರೋದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು, ದೇಶದ 75ನೇ ಸ್ವಾತಂತ್ರ್ಯ ಸಂಭ್ರಮಕ್ಕೆ ಅಂದರೆ 2022ರ ಹೊತ್ತಿಗೆ ಇಸ್ರೋ ಮಾನವ ಸಹಿತ ಗಗನಯಾನ ಮಾಡುವ ಯೋಜನೆಯಾಗಿದೆ. ಇಷ್ಟು ದಿನ ಮಾನವ ರಹಿತ ಉಪಗ್ರಹಗಳನ್ನು ಉಡಾವಣೆ ಮಾಡಿ ಅನೇಕ ಮೈಲಿಗಲ್ಲುಗಳನ್ನು ನೆಟ್ಟಿರುವ ಇಸ್ರೋಗೆ ಗಗನಯಾನ ಪ್ರಮುಖವಾಗಿದೆ.


 • ವಿಶ್ವದ ನಾಲ್ಕನೇ ರಾಷ್ಟ್ರ

  ಉದ್ದೇಶಿತ ಗಗನಯಾನ ಯೋಜನೆಯ ಮೂಲಕ ಭಾರತ ಮಾನವ ಸಹಿತ ಬಾಹ್ಯಾಕಾಶ ಯೋಜನೆಯನ್ನು ಯಶಸ್ವಿಗೊಳಿಸಿದರೆ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಲಿದೆ. ಇದಕ್ಕೂ ಮೊದಲು ಅಮೇರಿಕಾ ಸಂಯುಕ್ತ ಸಂಸ್ಥಾನ, ರಷ್ಯಾ ಹಾಗೂ ಚೀನಾ ದೇಶಗಳು ಮಾತ್ರ ಈ ಸಾಧನೆಯನ್ನು ಮಾಡಿವೆ.


 • ಮೋದಿ ಹೇಳಿದ್ದೇನು..?

  ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ಹೇಳಿದ್ದು ಹೀಗೆ, "ನಾನೀವತ್ತು ಘೋಷಿಸುತ್ತಿದ್ದೇನೆ, 2022ರ ವೇಳೆಗೆ ಅಥವಾ ಅದಕ್ಕಿಂತಲೂ ಮುಂಚೆ ಅಂದರೆ 75ನೇ ಸ್ವಾತಂತ್ರ್ಯ ಸಂಭ್ರಮಕ್ಕೆ ಭಾರತ ಮಾತೆಯ ಪುತ್ರ ಅಥವಾ ಪುತ್ರಿ ಬಾಹ್ಯಾಕಾಶಕ್ಕೆ ಹೋಗಲಿದ್ದಾರೆ. ಅವರ ಜತೆ ಭಾರತದ ರಾಷ್ಟ್ರ ಧ್ವಜವಿರಲಿದ್ದು, 75ನೇ ಸ್ವಾತಂತ್ರ್ಯ ಸಂಭ್ರಮಕ್ಕೆ ಮಹತ್ತರ ಕೊಡುಗೆಯಾಗಲಿದೆ" ಎಂದು ಉದ್ದೇಶಿತ ಗಗನಯಾನದ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.


 • ಪರೀಕ್ಷೆಯಲ್ಲಿ ಯಶಸ್ವಿ

  ಮಾನವ ಸಹಿತ ಬಾಹ್ಯಾಕಾಶ ಯಾನ ಮಾಡಲು ಇಸ್ರೋ ಹೀಗಾಗಲೇ ಅನೇಕ ಪರೀಕ್ಷಾರ್ಥ ಪ್ರಯೋಗಗಳನ್ನು ಆರಂಭಿಸಿದ್ದು, ಕಳೆದ ತಿಂಗಳು ಪ್ಯಾಡ್‌ ಅಬಾರ್ಟ್‌ ಎಂಬ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಪ್ಯಾಡ್‌ ಅಬಾರ್ಟ್‌ ಅಥವಾ ಕ್ರೂ ಎಸ್ಕೇಪ್‌ ಸಿಸ್ಟಮ್‌ ತುರ್ತು ಪಾರಾಗುವ ವ್ಯವಸ್ಥೆಯಾಗಿದ್ದು, ಉಡಾವಣಾ ವಾಹನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದಾಗ ಬಾಹ್ಯಾಕಾಶಯಾನಿಗಳು ಪಾರಾಗಲು ಇರುವ ಉತ್ತಮ ಮಾರ್ಗವಾಗಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಈ ಪರೀಕ್ಷೆಯನ್ನು ಮಾಡಲಾಯಿತು.


 • 9000 ಕೋಟಿ ರೂ. ಯೋಜನೆ

  ಇಸ್ರೋ ಉದ್ದೇಶಿತ ಗಗನಯಾನ ಯೋಜನೆಗೆ 9000 ಕೋಟಿ ರೂ. ಖರ್ಚು ಮಾಡಲು ಉದ್ದೇಶಿಸಿದ್ದು, ಇದುವರೆಗೂ 173 ಕೋಟಿ ರೂ.ಗಳನ್ನು ಹ್ಯೂಮನ್ ಸ್ಪೇಸ್‌ ಪ್ಲೈಟ್‌ನಲ್ಲಿ ಸೂಕ್ಷ್ಮ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಖರ್ಚು ಮಾಡಿದ್ದು, ಯಶಸ್ವಿಯಾಗಿ ಗಗನಯಾನ ಮಾಡುವ ಉತ್ಸಾಹದಲ್ಲಿ ಇಸ್ರೋ ಇದೆ.


 • ಸ್ಫೂರ್ತಿಯಾದ ಚಂದ್ರಯಾನ - 1

  ಇಸ್ರೋದ ಉದ್ದೇಶಿತ ಗಗನಯಾನಕ್ಕೆ ಚಂದ್ರಯಾನ -1 ರ ಯಶಸ್ಸು ಸ್ಫೂರ್ತಿಯಾಗಿದೆ. ಅಕ್ಟೋಬರ್ 2008ರಲ್ಲಿ ಚಂದ್ರಯಾನ -1 ಉಪಗ್ರಹ ಉಡಾವಣೆ ಮಾಡಲಾಯಿತು. ಅದು 2009ರ ಅಕ್ಟೋಬರ್‌ನಿಂದ ತನ್ನ ಕಾರ್ಯನಿರ್ವಹಣೆಯನ್ನು ಆರಂಭಿಸಿ ಸುಮಾರು ಒಂದು ವರ್ಷದ ಕಾಲ ಅನೇಕ ಅಂಶಗಳನ್ನು ಕಂಡುಹಿಡಿಯಲು ಸಹಾಯವಾಯಿತು. ಚಂದ್ರನ ಮೇಲೆ ನೀರಿರುವುದನ್ನು ಪತ್ತೆ ಹಚ್ಚಿದ ಚಂದ್ರಯಾನ- 1 ತನ್ನ ಉದ್ದೇಶಿತ ಕಾರ್ಯಯೋಜನೆಯ ಶೇ.95ರಷ್ಟು ಕಾರ್ಯವನ್ನು ಪೂರ್ಣಗೊಳಿಸಿದೆ.


 • ಗಗನಯಾನಕ್ಕೂ ಮುಂಚೆ ಚಂದ್ರಯಾನ -2

  ಚಂದ್ರಯಾನ-1ರ ಯಶಸ್ವಿ ನಂತರ ಚಂದ್ರನ ಮೇಲ್ಮೈನ್ನು ಇನ್ನು ಹೆಚ್ಚಿನ ಅಧ್ಯಯನ ಮಾಡಲು ಇಸ್ರೋ ಚಂದ್ರಯಾನ-2 ಯೋಜನೆ ಕೈಗೆತ್ತಿಕೊಂಡಿದೆ. 2019ರ ಜನೇವರಿ ಮತ್ತು ಮಾರ್ಚ್ ನಡುವಿನ ಅವಧಿಯಲ್ಲಿ ಇಸ್ರೋ ಚಂದ್ರಯಾನ-2 ಉಡಾವಣೆ ಮಾಡಲಿದೆ. ಇದೇ ವರ್ಷ ಉಡಾವಣೆಯಾಗಬೇಕಿದ್ದ ಚಂದ್ರಯಾನ-2 ಚಂದ್ರನ ಮೇಲೆ ಸುರಕ್ಷಿತವಾಗಿ ಲ್ಯಾಂಡ್‌ ಆಗಲಿ ಎಂದು ಸ್ಪೇಸ್‌ಕ್ರಾಫ್ಟ್‌ನಲ್ಲಿ ಅನೇಕ ಬದಲಾವಣೆ ತರುತ್ತಿರುವುದರಿಂದ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದೆ.


 • ಅಂಗಾರಕನ ಅಂಗಳಕ್ಕೂ ಹೋಗಿ ಬಂದ ಇಸ್ರೋ

  ಇಸ್ರೋ ಚಂದ್ರಯಾನದ ನಂತರ ಮಂಗಳಯಾನವನ್ನು ಸಹ ಮಾಡಿದ್ದು, ಮಾರ್ಸ್‌ ಆರ್ಬಿಟರ್ ಮಿಷನ್‌ ಅಥವಾ ಮಂಗಳಯಾನ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಿದ ಇಸ್ರೋ ಬಾಹ್ಯಾಕಾಶ ಲೋಕದಲ್ಲಿ ಹೊಸ ಕ್ರಾಂತಿಯನ್ನು ಉಂಟು ಮಾಡಿತು. ನವೆಂಬರ್ 05, 2013ರಲ್ಲಿ ಮಂಗಳಯಾನ ಯೋಜನೆಗೆ ರಾಕೆಟ್ ಉಡಾವಣೆ ಮಾಡಲಾಯಿತು.


 • ವಿಶೇಷತೆ ಇನ್ನೂ ಇದೆ.!

  ಆಹಾರ ಪದಾರ್ಥಗಳನ್ನು ಸೂಕ್ತ ರೀತಿಯಲ್ಲಿ ಪ್ಯಾಕ್ ಮಾಡಿ ಪೂರೈಸುವ ಬಗ್ಗೆ ಡಿಎಫ್ಆರ್ಎಲ್ ಜೊತೆ ಇಸ್ರೋ ಮಾತುಕತೆ ನಡೆಸಿದರುವ ಸುದ್ದಿ ಅಷ್ಟೇನು ವಿಶೇಷವಾಗಿ ತೆಗೆದುಕೊಳ್ಳಬೇಕಿಲ್ಲ.! ಏಕೆಂದರೆ, ಡಿಎಫ್ಆರ್ಎಲ್ 1984ರಲ್ಲೇ ರಷ್ಯಾದ ಸೊಯುಜ್ ಟಿ-11 ಅಂತರಿಕ್ಷ ಯೋಜನೆ ಕೈಗೊಂಡ ವೇಳೆ ಗಗನಯಾತ್ರಿಗಳಿಗೆ ಆಹಾರ ಪೂರೈಸಿತ್ತು.!!
ಸ್ವಾತಂತ್ರ್ಯ ಸಂಭ್ರಮದಲ್ಲಿ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಉದ್ದೇಶಿತ ಗಗನಯಾನ ಯೋಜನೆಯನ್ನು ಪ್ರಸ್ತಾಪಿಸಿದ ವಿಷಯ ನಿಮಗೆಲ್ಲಾ ಇಗಾಗಲೇ ತಿಳಿಸಿದೆ. ಇದೇ ಸುದ್ದಿಗೆ ಈಗ ಸಿಕ್ಕಿರುವ ಮತ್ತೊಂದು ಅಪ್‌ಡೇಟ್ ಸುದ್ದಿ ಏನೆಂದರೆ, ಭಾರತೀಯ ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಮೈಸೂರಿನಲ್ಲಿ ತಯಾರಾಗುವ ಇಡ್ಲಿ-ಸಾಂಬರ್ ಸವಿಯಲಿದ್ದಾರೆ.!

ಹೌದು, 2022ಕ್ಕೆ ಮಾನವಸಹಿತ ಗಗನಯಾನದಲ್ಲಿ ಪಾಲ್ಗೊಳ್ಳುವ ಭಾರತೀಯ ಗಗನಯಾತ್ರಿಗಳು ಬಾಹ್ಯಾಕಾಶದಲ್ಲೇ ಮೈಸೂರಿನ ಇಡ್ಲಿ-ಸಾಂಬರ್ ಸವಿಯಲಿದ್ದಾರೆ ಎಂಬ ಮಾಹಿತಿ ಈಗ ಸಿಕ್ಕಿದೆ ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳ ಉಪಾಹಾರ ಸೇವನೆಯ ಮ್ಯಾಜಿಕ್‌ಗೆ ರಕ್ಷಣಾ ಇಲಾಖೆಯ ಸಂಶೋಧನಾ ಪ್ರಯೋಗಾಲಯ(ಡಿಎಫ್ಆರ್ಎಲ್) ಪ್ರಮುಖ ಪಾತ್ರ ವಹಿಸುತ್ತಿದೆ.

ಇಡ್ಲಿ-ಸಾಂಬರ್, ಶೈತ್ಯೀಕರಿಸಿದ ಹಣ್ಣಿನ ಜ್ಯೂಸ್ ,ಮಾವಿನ ಹಣ್ಣಿನ ರಸ ಮತ್ತು ಮತ್ತಿತರ ಆಹಾರ ಪದಾರ್ಥಗಳನ್ನು ಸೂಕ್ತ ರೀತಿಯಲ್ಲಿ ಪ್ಯಾಕ್ ಮಾಡಿ ಪೂರೈಸುವ ಬಗ್ಗೆ ಡಿಎಫ್ಆರ್ಎಲ್ ಜೊತೆ ಇಸ್ರೋ ಮಾತುಕತೆ ನಡೆಸಿದೆ ಎನ್ನಲಾಗಿದೆ. ಹಾಗಾದರೆ, ಏನಿದು ವೈರಲ್ ಸ್ಟೋರಿ? ಭಾರತೀಯ ಗಗನಯಾನದ ಬಗ್ಗೆ ನಿಮಗೆಷ್ಟು ಗೊತ್ತು ಎಂಬುದನ್ನು ಮುಂದೆ ಓದಿ ತಿಳಿಯಿರಿ.

   
 
ಹೆಲ್ತ್