Back
Home » ಆರೋಗ್ಯ
ಇತರರಿಗೆ ಕಾಣದ ದೃಶ್ಯಗಳು ಕೇವಲ ನಿಮಗೆ ಮಾತ್ರವೇ ಕಾಣುತ್ತಿವೆಯೇ? ಯಾಕೆ ಹೀಗೆ?
Boldsky | 17th Sep, 2018 07:33 PM
 • ಮದ್ಯವ್ಯಸನ

  ಯಾವುದೇ ವ್ಯಸನ ಆವರಿಸಿಕೊಂಡಾಗ ವ್ಯಕ್ತಿ ಆ ವ್ಯಸನದ ಪರವಾಗಿಯೇ ವಾದಿಸತೊಡಗುತ್ತಾನೆ. ಉದಾಹರಣೆಗೆ ಸಿಗರೇಟಿನ ವ್ಯಸನ ಇರುವ ವ್ಯಕ್ತಿಗೆ ಈ ಅಭ್ಯಾಸವನ್ನು ಬಿಡಲು ಹಿತವಚನ ನೀಡಿದರೆ ಆತ ಈಗಾಗಲೇ ಈ ಅಭ್ಯಾಸವಿರುವ ಮತ್ತು ಉತ್ತಮ ಆರೋಗ್ಯ ಹೊಂದಿರುವ ವ್ಯಕ್ತಿಗಳನ್ನು ಉಲ್ಲೇಖಿಸತೊಡಗುತ್ತಾನೆ. ಮದ್ಯಪಾನದ ವ್ಯಸನ ಇದಕ್ಕೂ ಗಂಭೀರವಾಗಿದ್ದು Alcohol-induced psychotic disorder ಎಂಬ ಮಾನಸಿಕವಾದ ತೊಂದರೆಯನ್ನು ತಂದೊಡ್ಡುತ್ತದೆ. ಈ ತೊಂದರೆಗೆ ಒಳಗಾದ ವ್ಯಕ್ತಿ ಸದಾ ಮದ್ಯದ ಅಮಲಿನಲ್ಲಿಯೇ ಇರಬಯಸುತ್ತಾನೆ ಹಾಗೂ ಸತತ ಭ್ರಾಂತಿಗೆ ಒಳಗಾಗುತ್ತಾ ಇರುತ್ತಾನೆ. ಅಮಲು ಹೆಚ್ಚುತ್ತಿದ್ದಂತೆಯೇ ಮೆದುಳಿನ ಮೇಲೆ ಬೀರುವ ಮದ್ಯದ ವಿಷಕಾರಿ ಪರಿಣಾಮ psychosis ಎಂಬ ಸ್ಥಿತಿಗೆ ತಲುಪುವಂತೆ ಮಾಡುತ್ತದೆ. ಈ ಸ್ಥಿತಿಗೆ ಒಳಗಾದ ವ್ಯಕ್ತಿಗೆ ಯಾರಿಗೂ ಕಾಣದ, ಕೇಳದ, ವಾಸನೆ ಬರದ, ರುಚಿ ಇಲ್ಲದ ಸಂಗತಿಗಳು ಗೋಚರವಾಗತೊಡಗುತ್ತವೆ ಹಾಗೂ ಭ್ರಾಂತಿ ಮತ್ತು ಭ್ರಮೆಗಳು ಮೂಡತೊಡಗುತ್ತವೆ. ಈ ವ್ಯಕ್ತಿಗೆ ವಾಸ್ತವ ಮತ್ತು ಕಾಲ್ಪನಿಕ ಸಂಗತಿಗಳಿಗೆ ವ್ಯತ್ಯಾಸವೇ ಗೊತ್ತಾಗುವುದಿಲ್ಲ. ಅಸಾಧ್ಯವಾದ ಮತ್ತು ಅಪಾಯಕಾರಿ ಕೆಲಸಗಳನ್ನು ಮಾಡಿಸುವ ಮುನ್ನ ಕಾರ್ಮಿಕರಿಗೆ ಕಂಠಪೂರ್ತಿ ಕುಡಿಸಿಯೇ ಕೆಲಸಕ್ಕೆ ಏಕೆ ಕಳಿಸುತ್ತಾರೆ ಎಂದು ಈಗ ಅರ್ಥವಾಯಿತೇ?


 • ಕೆಲವು ಔಷಧಿಗಳು

  ಕೆಲವು ಔಷಧಿಗಳ ಅಡ್ಡಪರಿಣಾಮಗಳಲ್ಲಿ ಭ್ರಾಂತಿ ಎದುರಾಗುವ ಸಾಧ್ಯತೆಯೂ ಇರುತ್ತದೆ. ವಿಶೇಷವಾಗಿ ಮನೋಕಾಯಿಲೆಗಳ ಚಿಕಿತ್ಸೆಗಾಗಿ ನೀಡುವ ಔಷಧಿಗಳಾದ haloperidol, olanzapine ಮತ್ತು quetiapine ಮೊದಲಾದ ಔಷಧಿಗಳಿಗೆ ಈ ಗುಣಗಳಿವೆ. ಫಿಟ್ಸ್ ರೋಗವನ್ನು ತಡೆಯಲು ನೀಡುವ ಔಷಧಿಗಳಲ್ಲಿಯೂ ಈ ಅಡ್ಡಪರಿಣಾಮವಿದ್ದು ವ್ಯಕ್ತಿ ಇಲ್ಲದ ಸಂಗತಿಗಳನ್ನು ಇದೆ ಎಂದು ಭ್ರಮಿಸಬಹುದು. ಈ ಚಿಕಿತ್ಸೆಗಳ ಔಷಧಿಗಳಿಗೂ ಹೊರತಾಗಿ ಖಿನ್ನತೆ, ಉದ್ವೇಗ ಮೊದಲಾದ ಮಾನಸಿಕ ತೊಂದರೆಗಳಿಗೆ ನೀಡುವ ಔಷಧಿಗಳಲ್ಲಿಯೂ ಭ್ರಾಂತಿ ಎದುರಾಗುವ ಅಡ್ಡಪರಿಣಾಮಗಳಿದ್ದು ಈ ಔಷಧಿಗಳನ್ನು ನೀಡುವ ಮುನ್ನ ವೈದ್ಯರು ತೀರಾ ಎಚ್ಚರಿಕೆ ವಹಿಸುತ್ತಾರೆ ಹಾಗೂ ಇವುಗಳ ಸೇವನೆಯ ಪ್ರಮಾಣ ಮತ್ತು ಅವಧಿಯನ್ನು ಕಟ್ಟುನಿಟ್ಟಾಗಿ ಪಾಲಿಸಲು ನಿರ್ದೇಶನ ನೀಡುತ್ತಾರೆ.


 • ಮೈಗ್ರೇನ್ ತಲೆನೋವು

  ತಲೆನೋವಿನ ಅತ್ಯುಗ್ರ ರೂಪವಾದ ಮೈಗ್ರೇನ್ ತಲೆನೋವಿಗೆ ಒಳಗಾದ ವ್ಯಕ್ತಿಯೂ ಕೆಲವೊಮ್ಮೆ ಭ್ರಾಂತಿಗೆ ಒಳಗಾಗುತ್ತಾರೆ. ಮೈಗ್ರೇನ್ ತಲೆನೋವು ವಿಪರೀತ ಮಟ್ಟಕ್ಕೆ ಏರಿದಾಗ ತಲೆ ಸಿಡಿಯುವಂತಹ ಅನುಭವವಾಗುತ್ತದೆ ಹಾಗೂ ಈ ಸಮಯದಲ್ಲಿ ರೋಗಿಗೆ ಪ್ರಖರ ಬೆಳಕುಗಳ ಭ್ರಾಂತಿ ಮೂಡಲು ತೊಡಗುತ್ತದೆ. ವೈದ್ಯಕೀಯ ಭಾಷೆಯಲ್ಲಿ ಈ ಭ್ರಾಂತಿಗಳನ್ನು "aura" ಎಂದು ಕರೆಯುತ್ತಾರೆ. ವ್ಯಕ್ತಿಗೆ ಬೆಳಕು ಒಂದು ಕಾಮನಬಿಲ್ಲಿನಂತೆ ಕಾಣತೊಡಗುತ್ತದೆ. ಮೈಗ್ರೇನ್ ತಲೆನೋವಿಗೆ ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ತಲೆನೋವು ವಾಸಿಯಾಗುತ್ತಿದ್ದಂತೆಯೇ ಈ ಭ್ರಾಂತಿಗಳೂ ಇಲ್ಲವಾಗುತ್ತವೆ.


 • ಕೆಲವು ಅಕ್ರಮ ಔಷಧಿಗಳು

  ಆಪಾಯಕಾರಿ ಪರಿಣಾಮಗಳಿಂದಾಗಿಯೇ ಕಾನೂನು ನಿಷೇಧಿಸಿರುವ ಕೆಲವು ಔಷಧಿಗಳಾದ LSD, cocaine ಹಾಗೂ amphetamine ಮೊದಲಾದವುಗಳನ್ನು ಮಾರುರುವುದು ಅಕ್ರಮವಾಗಿದೆ. ಈ ಎಚ್ಚರಿಕೆಗಳ ಹೊರತಾಗಿಯೂ ಕೆಲವು ವ್ಯಸನಿಗಳು ಇವುಗಳನ್ನು ಹೇಗೋ ದೊರಕಿಸಿಕೊಂಡು ಸೇವಿಸುವ ಮೂಲಕ ಮತ್ತು ಪಡೆಯುತ್ತಾರೆ ಹಾಗೂ ಈ ಸ್ಥಿತಿಯಲ್ಲಿ ಭ್ರಾಂತಿಗಳನ್ನು ಅನುಭವಿಸುತ್ತಾರೆ. ಈ ಪದಾರ್ಥಗಳ ವ್ಯಸನ ಭಾರೀ ಅಪಾಯಕಾರಿಯಾಗಿದ್ದು ಇವುಗಳಿಂದ ವ್ಯಕ್ತಿಯನ್ನು ಹೊರತರುವುದೂ ಭಾರೀ ಪ್ರಯಾಸಕರ ಕೆಲಸವಾಗಿದ್ದು ಇವುಗಳಿಂದ ಹೊರತರುವ ಪ್ರಯತ್ನಗಳಲ್ಲಿಯೂ ವ್ಯಕ್ತಿ ಭ್ರಾಂತಿಗಳನ್ನು ಅನುಭವಿಸುತ್ತಾನೆ. ಇವರು ಹೆಚ್ಚಾಗಿ ದೃಶ್ಯಭ್ರಾಂತಿಗಳನ್ನೇ ಹೆಚ್ಚಾಗಿ ಅನುಭವಿಸುತ್ತಾರೆ. ಕೆಲವೊಮ್ಮೆ ಇವರ ಶ್ರವಣ, ರುಚಿ, ಘ್ರಾಣ ಮೊದಲಾದ ಇಂದ್ರಿಯಗಳೂ ತಪ್ಪಾದ ಸಂವೇದನೆ ಪಡೆಯುತ್ತವೆ ಹಾಗೂ ಮುಖ್ಯವಾಗಿ ಇವರ ಮಾನಸಿಕ ಸ್ಥಿತಿಯೂ ವಿವೇಕಕ್ಕೆ ಮೀರುತ್ತದೆ. ಈ ವ್ಯಕ್ತಿಗಳಿಂದ ಭಯಾನಕ ಕೃತ್ಯಗಳೂ ನಡೆಯುವ ಸಂಭವವಿದೆ.


 • ಮರೆಗುಳಿತನ

  ಮರೆಗುಳಿತನಕ್ಕೆ ಒಳಗಾದ ವ್ಯಕ್ತಿಗಳಿಗೂ ಕೆಲವು ಭ್ರಾಂತಿಗಳು ಸಾಮಾನ್ಯವಾಗಿ ಎದುರಾಗುತ್ತವೆ. ಇವುಗಳಲ್ಲಿ ಪ್ರಮುಖವಾಗಿ ಪಾರ್ಕಿನ್ಸನ್ ಕಾಯಿಲೆಯ ಮರೆಗುಳಿತನ ಹಾಗೂ ಲೂಯಿ ಬಾಡಿ ಮರೆಗುಳಿತನ ಕಾಯಿಲೆಗೆ ಒಳಗಾದವರು ಹೆಚ್ಚಾಗಿ ಭ್ರಾಂತಿ ಅನುಭವಿಸುತ್ತಾರೆ. ಇವರ ಮೆದುಳಿನಲ್ಲಿ ಕೆಲವು ಚಟುವಟಿಕೆಗಳು ಹೇಗೆ ಜರುಗಬೇಕೋ ಅದಕ್ಕೆ ವಿರುದ್ದವಾಗಿ ಜರುಗುವುದು ಈ ಬಗೆಯ ಭ್ರಾಂತಿ ಎದುರಾಗಲು ಕಾರಣವಾಗಿದೆ. ಇವರಿಗೆ ವಿಚಿತ್ರವಾದ ಘಟನೆಗಳು ಗೋಚರಿಸತೊಡಗುತ್ತವೆ. ಉದಾಹರಣೆಗೆ ಎಲ್ಲೆಲ್ಲೂ ಕೀಟಗಳು ಹರಿದಾಡುತ್ತಿರುವಂತೆ, ತೀರಿಕೊಂಡ ವ್ಯಕ್ತಿಯೊಬ್ಬರ ಮುಖ ಸತತವಾಗಿ ಕಂಡಂತೆ ಮೊದಲಾದ ಅನುಭವಗಳನ್ನು ಇವರು ಹೇಳಿಕೊಳ್ಳುತ್ತಾರೆ.


 • ಅಲ್ಜೀಮರ್ಸ್ ಕಾಯಿಲೆ

  ಈ ಕಾಯಿಲೆಗೆ ತುತ್ತಾದ ವ್ಯಕ್ತಿಗಳ ಮೆದುಳಿನಲ್ಲಿ ಕೆಲವು ಬದಲಾವಣೆಗಳು ಕಂಡುಬರುತ್ತವೆ ಹಾಗೂ ಇವೇ ಭ್ರಾಂತಿಗೆ ಮೂಲವಾಗುತ್ತವೆ. ಇದೊಂದು ಸತತವಾಗಿ ಶಿಥಿಲವಾಗುತ್ತಾ ಸಾಗುವ ಒಂದು ಕಾಯಿಲೆಯಾಗಿದ್ದು ಸಾಮಾನ್ಯವಾಗಿ ವೃದ್ದಾಪ್ಯದಲ್ಲಿ ಕಾಣಿಸಿಕೊಂಡರೂ ಕೆಲವು ವ್ಯಕ್ತಿಗಳಲ್ಲಿ ನಡುವಯಸ್ಸಿನಿಂದಲೇ ಕಾಣಿಸಿಕೊಳ್ಳಲು ತೊಡಗುತ್ತದೆ. ಮೆದುಳಿನ ಸವೆತ ಅಥವಾ ಮೆದುಳಿನ ಜೀವಕೋಶಗಳು ವೇಗವಾಗಿ ನಷ್ಟಹೊಂದುತ್ತಾ ಮತ್ತೆ ಹೊಸ ಜೀವಕೋಶಗಳು ಹುಟ್ಟದೇ ಇರುದು ಈ ಕಾಯಿಲೆಯ ಲಕ್ಷಣವಾಗಿದೆ. ಸಾಮಾನ್ಯವಾಗಿ ಈ ಕಾಯಿಲೆ ಉಲ್ಬಣಾವಸ್ಥೆ ತಲುಪಿದ ಬಳಿಕವೇ ಭ್ರಾಂತಿಗಳು ಎದುರಾಗತೊಡಗುತ್ತವೆ.


 • ಸ್ಕೀಜೋಫ್ರೀನಿಯಾ

  ಈ ಕಾಯಿಲೆ ಇರುವ ವ್ಯಕ್ತಿಗಳಿಗೂ ಭ್ರಾಂತಿಗಳು ಎದುರಾಗುತ್ತವೆ. ಈ ಬಗ್ಗೆ ನಡೆಸಿದ ಅಧ್ಯಯನಗಳಲ್ಲಿ ಈ ಕಾಯಿಲೆಗೆ ತುತ್ತಾದವರರಲ್ಲಿ 70 ಶೇಖಡಾ ರೋಗಿಗಳಿಗೆ ಭ್ರಾಂತಿ ಎದುರಾಗಿರುವುದನ್ನು ಕಂಡುಕೊಳ್ಳಲಾಗಿದೆ. 60 ರಿಂದ 90 ಶೇಖಡಾ ರೋಗಿಗಳಲ್ಲಿ ಈ ಬ್ರಾಂತಿಗಳು ಶ್ರವಣಭ್ರಾಂತಿಗಳ ರೂಪದಲ್ಲಿದ್ದು ಯಾರಿಗೂ ಕೇಳದ ಧ್ವನಿಗಳು ಇವರಿಗೆ ಕೇಳತೊಡಗುತ್ತವೆ. ಕೆಲವರಿಗೆ ಯಾರಿಗೂ ಅನುಭವಕ್ಕೆ ಬರದ ವಾಸನೆಗಳು ಮತ್ತು ರುಚಿಗಳೂ ಅನುಭವಕ್ಕೆ ಬರುತ್ತವೆ.


 • ಅಪಸ್ಮಾರ (Epilepsy)

  ಈ ಕಾಯಿಲೆಗೆ ತುತ್ತಾದ ವ್ಯಕ್ತಿಗಳು ಆಗಾಗ ನಿಷ್ಟೇಷ್ಟತೆ ಅಥವಾ ಸೆಳವುಗಳಿಗೆ ಒಳಗಾಗುತ್ತಾ ಇರುತ್ತಾರೆ. ಇದೊಂದು ನರವ್ಯವಸ್ಥೆಗೆ ಸಂಬಂಧಿಸಿದ ತೊಂದರೆಯಾಗಿದ್ದು ಇಂದ್ರಿಯಗಳು ತಮ್ಮ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗದೇ ಹೋಗುತ್ತದೆ ಹಾಗೂ ಮೆದುಳಿನ ಸೂಚನೆ ಪಡೆಯದೇ ದೇಹದ ಅಂಗಗಳು ಚಲನೆ ಪಡೆಯದೇ ಹೋಗುತ್ತವೆ. ಈ ಸ್ಥಿತಿಗೆ ಮೆದುಳಿನಲ್ಲಿ ಜರುಗುವ ಅಸಾಮಾನ್ಯ ವಿದ್ಯುತ್ ಚಟುವಟಿಕೆಗಳೇ ಕಾರಣ. ಅಪಸ್ಮಾರದ ತೊಂದರೆ ಇರುವ ವ್ಯಕ್ತಿಗೆ ಸೆಳವಿನ ಸಹಿತ ಭ್ರಾಂತಿಗಳೂ ಎದುರಾಗುತ್ತವೆ. ಮೆದುಳಿನ ಯಾವ ಭಾಗದಲ್ಲಿ ತೊಂದರೆ ಎದುರಾಗಿದೆಯೋ ಅದಕ್ಕೆ ಸಂಬಂಧಿಸಿದ ಅಂಗವೇ ಸೆಳವಿಗೆ ತುತ್ತಾಗುತ್ತದೆ ಹಾಗೂ ಇದೇ ಅಂಗಕ್ಕೆ ಸಂಬಂಧಿಸಿದ ಭ್ರಾಂತಿಗಳೂ ಎದುರಾಗುತ್ತವೆ.


 • ಮೆನಿಂಜೈಟಿಸ್

  ಈ ಕಾಯಿಲೆಯ ಲಕ್ಷಣಗಳಲ್ಲಿ ಅತಿಯಾದ ಜ್ವರದ ಜೊತೆಗೇ ಭ್ರಾಂತಿಗಳೂ ಕಾಣಿಸಿಕೊಳ್ಳುತ್ತವೆ. ಇತರ ಲಕ್ಷಣಗಳೆಂದರೆ ಸ್ವಭಾವದಲ್ಲಿ ಮತ್ತು ವ್ಯಕ್ತಿತ್ವದಲ್ಲಿ ಭಾರೀ ಏರುಪೇರು ಸಹಾ ಕಾಣಿಸುತ್ತದೆ. ಈ ಕಾಯಿಲೆಯ ಪರಿಣಾಮವಾಗಿ ನರವ್ಯವಸ್ಥೆಯ ರಕ್ಷಣಾ ಪದರಗಳು ಊದಿಕೊಳ್ಳುತ್ತವೆ. ವಿಶೇಷವಾಗಿ ಈ ಕಾಯಿಲೆಯಿಂದಾಗಿ ಮೆದುಳಿನಲ್ಲಿ ಎದುರಾಗುವ ಊತ ಭ್ರಾಂತಿಯುಂಟುಮಾಡುತ್ತವೆ. ಈ ಕಾಯಿಲೆ ಆವರಿಸಿಕೊಳ್ಳುವ ಪ್ರಾರಂಭಿಕ ಹಂತದಲ್ಲಿ ವ್ಯಕ್ತಿಗೆ ಸತತವಾಗಿ ತಲೆನೋವು ಎದುರಾಗುತ್ತದೆ.


 • ಮೆದುಳಿನ ಗಡ್ಡೆಗಳು:

  ಮೆದುಳಿನ ಯಾವ ಭಾಗದಲ್ಲಿ ಆಗಿದೆ, ಎಷ್ಟು ದೊಡ್ಡದಾಗಿದೆ ಹಾಗೂ ಯಾವ ಬಗೆಯದ್ದಾಗಿದೆ ಎಂಬ ಅಂಶಗಳನ್ನು ಆಧರಿಸಿ ವ್ಯಕ್ತಿಯ ಭ್ರಾಂತಿಗಳೂ ಬದಲಾಗುತ್ತವೆ. ಒಂದು ವೇಳೆ ದೃಶ್ಯಕ್ಕೆ ಸಂಬಂಧಿಸಿದ ಮೆದುಳಿನ ಭಾಗದಲ್ಲಿ ಗಡ್ಡೆಯಾಗಿದ್ದರೆ ದೃಶ್ಯಕ್ಕೆ ಸಂಬಂಧಿಸಿದ ಭ್ರಾಂತಿಗಳು ಕಾಣಿಸಿಕೊಳ್ಳುತ್ತವೆ ಹಾಗೂ ಯಾರಿಗೂ ಕಾಣಿಸದ ದೃಶ್ಯಗಳು ಇವರಿಗೆ ಕಾಣಿಸಿಕೊಳ್ಳುತ್ತದೆ. ಬೆಳಕಿನ ಪ್ರಖರ ಬಿಂದುಗಳು ಮತ್ತು ಬೆಳಕಿನ ಆಕೃತಿಗಳು ಇವರಿಗೆ ಕಾಣಿಸಿಕೊಳ್ಳುತ್ತವೆ. ಮೆದುಳಿನ ಗಡ್ಡೆಗಳು ರುಚಿ ಮತ್ತು ವಾಸನೆಗೆ ಸಂಬಂಧಿಸಿದ ಭ್ರಾಂತಿಗಳಿಗೂ ಕಾರಣವಾಗಬಹುದು.


 • ಯಕೃತ್ / ಮೂತ್ರಪಿಂಡ ವೈಫಲ್ಯ

  ಯಕೃತ್ / ಮೂತ್ರಪಿಂಡ ವೈಫಲ್ಯಕ್ಕೆ ಒಳಗಾದ ವ್ಯಕ್ತಿಗಳಿಗೂ ಭ್ರಾಂತಿಗಳು ಎದುರಾಗುತ್ತವೆ. ಒಂದು ವೇಳೆ ಈ ರೋಗದೊಂದಿಗೇ ಅತಿಯಾದ ಜ್ವರವಿದ್ದರೆ ಈ ಭ್ರಾಂತಿಗಳೂ ಅತಿ ಎನಿಸುವಷ್ಟು ಹೆಚ್ಚುತ್ತವೆ. ಈ ವೈಫಲ್ಯಕ್ಕೆ ದೇಹದಲ್ಲಿ ಅತಿಯಾಗಿ ಸಂಗ್ರಹವಾಗುವ Gabapentin (ಮೂತ್ರಪಿಂಡದ ಕಾಯಿಲೆ ಇರುವ ವ್ಯಕ್ತಿಗಳ ರಕ್ತದಲ್ಲಿ ಕಾಣಿಸಿಕೊಳ್ಳುವ ಒಂದು ಅಂಶ) ಎಂಬ ವಿಷಕಾರಿ ರಾಸಾಯನಿಕ ನರವ್ಯವಸ್ಥೆಯಲ್ಲಿ ವಿಷಕಾರಿ ಪರಿಣಾಮಗಳನ್ನು ಉಂಟುಮಾಡುವುದೇ ಈ ಭ್ರಾಂತಿಗಳು ಎದುರಾಗಲು ಪ್ರಮುಖ ಕಾರಣವಾಗಿದೆ.


 • ನಿದ್ದೆಯ ತೊಂದರೆಗಳು

  ನಿದ್ದೆಯ ತೊಂದರೆ ಇರುವ ವ್ಯಕ್ತಿಗಳಲ್ಲಿಯೂ ಭ್ರಾಂತಿಗಳು ಎದುರಾಗುತ್ತವೆ. ಸಾಮಾನ್ಯವಾಗಿ ನಿದ್ರಾರಾಹಿತ್ಯದ ತೊಂದರೆ ಮಾನಸಿಕ ಒತ್ತಡ ಮತು ಉದ್ವೇಗವನ್ನುಂಟುಮಾಡುತ್ತವೆ. ಇನ್ಸೋಮ್ನಿಯಾ ಎಂಬ ಈ ತೊಂದರೆ ಎದುರಾದರೆ ರಾತ್ರಿ ನಿದ್ದೆ ಬರುವುದಿಲ್ಲ ಹಾಗೂ ದಿನದ ಅವಧಿಯಲ್ಲಿ ನಿದ್ದೆ ಆವರಿಸತೊಡಗುತ್ತದೆ. narcolepsy ಅಥವಾ ವಿಛಿದ್ರಕಾರಕ ಎಂಬ ಸ್ಥಿತಿಯ ಇರುವಿಕೆಯನ್ನೂ ಈ ಭ್ರಾಂತಿಗಳು ಪ್ರಕಟಿಸುತ್ತವೆ. ಯಾವಾದ ನಿದ್ದೆ ಬಾಧೆಗೊಳ್ಳುತ್ತದೆಯೋ ಭ್ರಾಂತಿ ಆವರಿಸುವುದೂ ಸಾಮಾನ್ಯವಾಗುತ್ತದೆ. ಒಂದು ವೇಳೆ ನಿದ್ದೆಯ ಇಲ್ಲದಿರುವಿಕೆ ಸತತವಾದರೆ ಇದು ತೀವ್ರಗತಿಯ ಭ್ರಾಂತಿಗೆ ಕಾರಣವಾಗಬಹುದು. ಈ ಸ್ಥಿತಿ ಎದುರಾದರೆ ತಕ್ಷಣವೇ ಸೂಕ್ತ ತಪಾಸಣೆ ಮತ್ತು ಅಗತ್ಯ ಚಿಕಿತ್ಸೆ ಪಡೆದು ನಿದ್ರಾರಾಹಿತ್ಯದ ತೊಂದರೆಯಿಂದ, ಜೊತೆಗೇ ಭ್ರಾಂತಿಗಳಿಂದಲೂ ಮುಕ್ತಿ ಪಡೆಯಬಹುದು.
ನಮಗೆ ಆಗಾಗ, ಹಿಂದೆಂದೋ ಆದ, ಅಥವ ಮುಂದೆ ಆಗಲಿರುವ ಯಾವುದೋ ಘಟನೆ ಥಟ್ಟನೇ ಮನಸ್ಸಿನಲ್ಲಿ ಗೋಚರಿಸಬಹುದು. ಸಾಮಾನ್ಯವಾಗಿ ನಾವಿದನ್ನು ಸ್ವಪ್ನ ಎಂದುಕೊಂಡು ನಿರ್ಲಕ್ಷಿಸಿಬಿಡುತ್ತೇವೆ. ಹೆಚ್ಚಿನವು ನಮಗೆ ನೆನಪೂ ಇರದ, ಯಾವ ಪ್ರಸ್ತುತ ಸಂಗತಿಗೂ ಸಂಬಂಧಿಸಿದ್ದಲ್ಲದ ದೃಶ್ಯಗಳಾದ ಕಾರಣ ಇದನ್ನು ಒಂದು ಸ್ವಪ್ನವೆಂದೇ ತಿಳಿದು ಇದು ಖುಷಿ ನೀಡಿದರೆ ನಕ್ಕೂ, ಆತಂಕ ನೀಡಿದರೆ 'ದೇವರೇ ಕಾಪಾಡಪ್ಪಾ' ಎಂದು ನಮ್ಮ ಭಾರವನ್ನು ದೇವರಿಗೆ ವರ್ಗಾಯಿಸಿ ನಿರುಮ್ಮಳರಾಗುತ್ತೇವೆ.

ಆದರೆ ಕೆಲವರಿಗೆ, ಕೆಲವು ಸಮಯದಲ್ಲಿ ಗೋಚರವಾಗುವ ನಿರ್ದಿಷ್ಟ ದೃಶ್ಯಗಳು ಕಾಲ್ಪನಿಕಕ್ಕೂ ವಿಪರೀತವಾಗಿರುತ್ತದೆ. (ನಮ್ಮ ಸಿನೇಮಾ ಕಥೆ ಬರೆಯುವವರಿಗೆ ಸೂಕ್ತ ವಸ್ತು). ಇವು ಮಾನಸಿಕ ರೋಗಿಯೊಬ್ಬರ ಪರಿಗಣಿಸಲಾಗದ ಲಕ್ಷಣವೆಂದು ನಮಗೆ ಅನ್ನಿಸಿದರೂ ವೈದ್ಯಕೀಯವಾಗಿ ಈ ವಿದ್ಯಮಾನವನ್ನು 'ಭ್ರಾಂತಿ' ಅಥವಾ hallucinations ಎಂದು ಕರೆಯುತ್ತಾರೆ. ಭ್ರಾಂತಿ ಎಂದರೆ ಇಲ್ಲದುದನ್ನು ಇದೆ ಎಂದೇ ಬಿಂಬಿಸುವ ಒಂದು ಪ್ರಯತ್ನವೆಂದೇ ನಾವು ಅಂದುಕೊಂಡಿದ್ದೇವೆ. ವಾಸ್ತವವೇನು? ನೋಡೋಣ:

ಭ್ರಾಂತಿ ಎಂದರೇನು?

ಸಾಮನ್ಯರ ಮಟ್ಟಿಗೆ ಇಲ್ಲದ ವಿಷಯವನ್ನು ಇದೆ ಎಂದು ಬಿಂಬಿಸಲು ತೋರುವ ಪ್ರಯತ್ನವಾದರೂ, ಈ ವಿಷಯವನ್ನು ಆಳವಾಗಿ ಅಧ್ಯಯನ ಮಾಡಿದರೆ ಇದಕ್ಕೆ ಬಹಳಷ್ಟೇ ವಿಷಯಗಳು ಸಂಬಂಧಪಟ್ಟಿರುವುದು ಕಂಡುಬರುತ್ತದೆ. ಭ್ರಾಂತಿಗೆ ಒಳಗಾದ ವ್ಯಕ್ತಿಗಳು ಕೇವಲ ಮನಸ್ಸಿನಲ್ಲಿ ದೃಶ್ಯವನ್ನು ನೋಡುವುದು ಮಾತ್ರವಲ್ಲ, ಇದಕ್ಕೆ ಸಂಬಂಧಿಸಿದ ವಸ್ತುಗಳ ಸ್ಪರ್ಶ ಅಥವಾ ವಾಸನೆಯನ್ನೂ ಅನುಭವಿಸುತ್ತಾರೆ. ಮಾನಸಿಕ ಕಾಯಿಲೆಗಳಾದ ಸ್ಕೀಜೋಫ್ರೀನಿಯಾ ಅಥವಾ ನರವ್ಯವಸ್ಥೆಗೆ ಸಂಬಂಧಪಟ್ಟ ಪಾರ್ಕಿನ್ಸನ್ಸ್ ಕಾಯಿಲೆಗೆ ಒಳಗಾದ ವ್ಯಕ್ತಿಗಳು ಹೆಚ್ಚು ಹೆಚ್ಚಾಗಿ ಈ ಭ್ರಾಂತಿಯನ್ನು ಅನುಭವಿಸುತ್ತಾರೆ.

ಭ್ರಾಂತಿ ದೃಶ್ಯಮಾಧ್ಯಮದ ಮೂಲಕವೇ ಹೆಚ್ಚು ಪ್ರಕಟಗೊಳ್ಳುತ್ತದೆ ಹಾಗೂ ಇವುಗಳನ್ನು 'ದೃಶ್ಯ ಭ್ರಾಂತಿ' ಅಥವಾ "visual hallucinations" ಎಂದು ಕರೆಯಬಹುದು. ಈ ಭ್ರಾಂತಿಗೆ ಒಳಗಾದ ವ್ಯಕ್ತಿಗೆ ಥಟ್ಟನೇ ಇಡಿಯ ಮನೆಯ ಗೋಡೆಯ ಮೇಲೆಲ್ಲಾ ನೂರಾರು ಕೀಟಗಳು ಹರಿದಾಡುತ್ತಿರುವಂತೆ ಕಾಣಿಸಬಹುದು. Occipital ಎಂಬ ಮೆದುಳಿನ ಭಾಗದಲ್ಲಿ ಎದುರಾಗುವ ತೊಂದರೆ ಇರುವ ಅತ್ಯಪರೂಪದ ಸ್ಥಿತಿಯಲ್ಲಿ ವ್ಯಕ್ತಿಗೆ ಮಿಂಚುಗಳಂತೆ ಬೆಳಕಿನ ಕಿರಣಗಳು ಗೋ಼ಚರಿಸಬಹುದು. ಇವು ಪ್ರಖರವಾದ ಬಣ್ಣದ ಚುಕ್ಕೆಗಳು ಅಥವಾ ಯಾವುದಾದರೊಂದು ಆಕೃತಿ ಹೊಂದಿರುವ ಬೆಳಕಾಗಿರಬಹುದು. ಯಾರಿಗೂ ಕೇಳಿಸದ ಧ್ವನಿ ವ್ಯಕ್ತಿಗೆ ಕೇಳಿಸುತ್ತಿದ್ದರೆ ಇವುಗಳನ್ನು 'ಶ್ರವಣಭ್ರಾಂತಿ ಅಥವಾ Auditory hallucinations ಎಂದು ಕರೆಯಬಹುದು. ಈ ದನಿಗಳು ಬೇರಾವುದೋ ವ್ಯಕ್ತಿ ಒಳಗಿನಿಂದ ಈ ವ್ಯಕ್ತಿಗೆ ಏನೋ ಮಾಡುವಂತೆ ನಿರ್ದೇಶನ ನೀಡುತ್ತಿರುವಂತೆ ಅನ್ನಿಸುತ್ತದೆ. ವಾಸ್ತವಭ್ರಾಂತಿ ಅಥವಾ 'Tactile hallucinations' ಎಂಬ ಸ್ಥಿತಿಯಲ್ಲಿ ಕಣ್ಣಮುಂದೆ ಏನೋ ಜರುಗುತ್ತಿರುವಂತೆ ವ್ಯಕ್ತಿಗೆ ಅನ್ನಿಸುತ್ತದೆ. ಯಾರೋ ಕಚಗುಳಿ ಇಟ್ಟಂತೆ ಇವರಿಗೆ ಕಚಗುಳಿಯಾಗುತ್ತಿರುತ್ತದೆ. 'ಜಿಹ್ವಾಭ್ರಾಂತಿ' ಅಥವಾ 'Gustatory hallucination' ಎಂಬ ಭ್ರಾಂತಿಯಲ್ಲಿ ವ್ಯಕ್ತಿಗೆ ಏನು ತಿಂದರೂ ಅಥವಾ ಕುಡಿದರೂ ಆ ಆಹಾರದ ರುಚಿ ಪಡೆಯದೇ ಬೇರೆಯೇ ರುಚಿಯನ್ನು ಅನುಭವಿಸುತ್ತಾರೆ. ಘ್ರಾಣಭ್ರಾಂತಿ ಅಥವಾ 'Olfactory hallucinations' ಎಂಬ ಭ್ರಾಂತಿಯಲ್ಲಿ ವ್ಯಕ್ತಿಗೆ ಇರದ ಯಾವುದೋ ವಾಸನೆ ಆಘ್ರಾಣಿಸುತ್ತಿರುವಂತೆ ಅನ್ನಿಸುತ್ತದೆ.

ಭ್ರಾಂತಿ ಎದುರಾಗಲು ಕಾರಣಗಳು:

ಭ್ರಾಂತಿಗೆ ಕೆಲವಾರು ಕಾರಣಗಳಿದ್ದು ಪ್ರಮುಖವಾದವು ಇಲ್ಲಿವೆ:

   
 
ಹೆಲ್ತ್