Back
Home » ಇತ್ತೀಚಿನ
ನಿಮ್ಮ ಡಿಎಲ್ ಮತ್ತು ಆರ್‌.ಸಿ ಬದಲಾಗುತ್ತಿರುವುದೇಕೆ ಗೊತ್ತಾ?..ಇಲ್ಲಿದೆ ಫುಲ್ ಡೀಟೇಲ್ಸ್!!
Gizbot | 15th Oct, 2018 01:31 PM
 • ಏನೆಲ್ಲಾ ಬದಲಾವಣೆಗಳು ಕಾಣಲಿವೆ?

  ಮುಂದಿನ ವರ್ಷದ ಜುಲೈನಿಂದ ಹೊಸದಾಗಿ ನೀಡಲಾಗುವ ವಾಹನ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್) ಮತ್ತು ವಾಹನ ನೋಂದಣಿ ಪತ್ರಗಳು (ರಿಜಿಸ್ಟ್ರೇಷನ್ ಸರ್ಟಿಫಿಕೇಟ್) ದೇಶದಾದ್ಯಂತ ಏಕರೂಪತೆ ಪಡೆದುಕೊಳ್ಳಲಿವೆ. ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿತರಿಸಲಾಗುವ ಡಿಎಲ್ ಹಾಗೂ ಆರ್‌ಸಿಗಳು ಬಣ್ಣ, ವಿನ್ಯಾಸ, ನೋಟವನ್ನು ಹೊಂದಲಿದ್ದು, ಒಂದೇ ರೀತಿಯ ಭದ್ರತಾ ಸೌಲಭ್ಯಗಳನ್ನು ಹೊಂದಿರಲಿವೆ.


 • ಎಲ್ಲವನ್ನೂ ನವೀಕರಿಸಲಾಗುತ್ತಿದೆ.

  ಹಳೆಯದರ ನವೀಕರಣ ದೇಶದಾದ್ಯಂತ ಪ್ರತಿನಿತ್ಯ 32,000 ಡಿಎಲ್‌ಗಳನ್ನು ವಿತರಿಸಲಾಗುತ್ತಿದೆ ಅಥವಾ ನವೀಕರಿಸಲಾಗುತ್ತಿದೆ. ಮತ್ತು ನಿತ್ಯವೂ ಸುಮಾರು 43,000 ವಾಹನಗಳನ್ನು ನೋಂದಣಿ ಅಥವಾ ಮರುನೋಂದಣಿ ಮಾಡಲಾಗುತ್ತಿದೆ. ಹೀಗಾಗಿ ಜುಲೈನಿಂದ ಯಾವುದೇ ನವೀಕರಣ ಅಥವಾ ಮರುನೋಂದಣಿಗೆ ಹೋದರೆ ಸಾರಿಗೆ ಅಧಿಕಾರಿಗಳು ಹೊಸ ಡಿಎಲ್ ಮತ್ತು ಆರ್‌ಸಿಗಳನ್ನು ವಿತರಿಸಿ ಹಳೆಯದನ್ನು ಬದಲಿಸುತ್ತಾರೆ.


 • ಹೊಸ ಆರ್‌.ಸಿ.ಯಲ್ಲಿನ ವ್ಯವಸ್ಥೆ ಹೇಗಿರಲಿದೆ?

  ಹೊಸದಾಗಿ ನೀಡುವ ಆರ್‌.ಸಿ.ಯಲ್ಲಿ ಕೇಂದ್ರ, ರಾಜ್ಯ ಸರಕಾರಗಳ ಚಿಹ್ನೆ, ನೀಡುವ ಪ್ರಾಧಿಕಾರದ ವಿವರ ಮತ್ತು ಅದನ್ನು ನೀಡುವ ದಿನಾಂಕ ಮತ್ತು ಯಾವ ದಿನಾಂಕದ ವರೆಗೆ ಮಾನ್ಯತೆಯನ್ನು ನಮೂದಿಸಿರುತ್ತಾರೆ. ಹಾಗೆಯೇ, ಚಾಸಿಸ್‌ ಮತ್ತು ಎಂಜಿನ್‌ ನಂಬರ್‌, ಇಂಧನ ಬಳಕೆ ಮತ್ತು ಪರಿಸರಾತ್ಮಕ ನಿಯಮಗಳ ಅನುಸರಣೆ ಜೊತೆಗೆ ವಾಹನದ ವಿಧ- ವಾಣಿಜ್ಯಿಕವೋ ಅಥವಾ ವಾಣಿಜ್ಯೇತರವೋ? ಎಂಬುದು ಕೂಡ ಹೊಸ ಆರ್‌.ಸಿ.ಯಲ್ಲಿ ಇರುತ್ತದೆ.


 • ಹೊಸ ಡಿ.ಎಲ್‌.ನಲ್ಲಿರುವ ವ್ಯವಸ್ಥೆ ಹೇಗಿರಲಿದೆ?

  ಹೊಸದಾಗಿ ನೀಡುವ ಡಿಎಲ್‌ನಲ್ಲಿ ಕೇಂದ್ರ, ರಾಜ್ಯ ಸರಕಾರಗಳ ಚಿಹ್ನೆ, ನೀಡುವ ಪ್ರಾಧಿಕಾರದ ವಿವರ ಹಾಗೂ ಅದನ್ನು ನೀಡುವ ದಿನಾಂಕ ಮತ್ತು ಎಷ್ಟರ ವರೆಗೆ ಅದರ ಅವಧಿ ಇದೆ ಎಂಬ ಮಾಹಿತಿಯನ್ನು ನೀಡಲಾಗಿರುತ್ತದೆ. ಜೊತೆಗೆ ಡಿಎಲ್ ಹೊಂದಿರುವ ವ್ಯಕ್ತಿಯ ಹೆಸರು, ರಕ್ತದ ಗುಂಪು, ಅಂಗಾಂಗ ದಾನ ಮಾಡುವ ಘೋಷಣೆ ಸೇರಿದಂತೆ, ತುರ್ತು ಪರಿಸ್ಥಿತಿಯ ನಂಬರ್‌, ವಾಹನದ ಮಾದರಿ, ಕ್ಯೂ.ಆರ್‌.ಕೋಡ್‌ ಆಯ್ಕೆ ಮತ್ತು ಮಾಹಿತಿಗಳು ಸಹ ಇರುತ್ತವೆ.


 • ಅಷ್ಟಕ್ಕೂ ನವೀಕರಿಸುತ್ತಿರುವುದು ಏಕೆ?

  ಡ್ರೈವಿಂಗ್ ಲೈಸನ್ಸ್‌ ಮತ್ತು ವಾಹನಗಳ ಪ್ರಮಾಣ ಪತ್ರ ವಿಷಯದಲ್ಲಿ ದೇಶದಾದ್ಯಂತ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಸರ್ಕಾರ ಈ ಹೆಜ್ಜೆಯನ್ನು ಇಟ್ಟಿದೆ. ಸ್ಮಾರ್ಟ್‌ ದಾಖಲೆಗಳಿಂದ ಸಾರ್ವಜನಿಕರೂ ಹಾಗೂ ಪೊಲೀಸರಿಗೂ ತೊಂದರೆಯಾಗದಂತೆ ವ್ಯವಹರಿಸಲು ಸಹಾಯವಾಗುವಂತೆ ಮಾಡುವ ಉದ್ದೇಶವನ್ನು ನಾವಿಲ್ಲಿ ಕಾಣಬಹುದಾಗಿದೆ. ಜೊತೆಗೆ ಸ್ಮಾರ್ಟ್‌ ಡಿಎಲ್ ಹಾಗೂ ಆರ್‌ಸಿಯಲ್ಲಿ ಹೊಸದಾಗಿ ಭದ್ರತಾ ವ್ಯವಸ್ಥೆಯನ್ನು ತರಲಾಗುತ್ತಿದೆ.


 • ಏನೇನು ಹೊಸ ಭದ್ರತಾ ವ್ಯವಸ್ಥೆ ?

  ಹೊಸದಾಗಿ ನೀಡಲಾಗುವ ಡ್ರೈವಿಂಗ್ ಲೈಸನ್ಸ್‌ ಮತ್ತು ವಾಹನಗಳ ಪ್ರಮಾಣ ಪತ್ರಗಳು ಸ್ಮಾರ್ಟ್‌ ಆಗಿರಲಿದ್ದು, ಅವುಗಳ ಮೇಲೆ ಮೈಕ್ರೋ ಮುದ್ರಿತ ಅಕ್ಷರ ಗಳನ್ನು ಕಾಣಬಹುದಾಗಿದೆ. ಮೈಕ್ರೋ ಲೈನ್‌, ನಕಲಿಸಲಾಗದಂತೆ ಅಲ್ಟ್ರಾ ಫ್ಲೋರೋಸೆಂಟ್ ಬಣ್ಣ, ಹೋಲೋಗ್ರಾಂ ಹಾಗೂ ವಾಟರ್‌ ಮಾರ್ಕ್‌ಗಳನ್ನು ಹಾಕಿರಲಾಗುತ್ತದೆ ಎಂದು ಹೇಳಲಾಗಿದೆ. ಇದರಿಂದ ಸ್ಮಾರ್ಟ್‌ ಆಗಿ ಎಲ್ಲಾ ವಿವರಗಳು ಪೊಲೀಸರ ಹಾಗೂ ಸಾರ್ವಜನಿಕರ ನಡುವೆ ಹಂಚಿಕೆಯಾಗುತ್ತವೆ.


 • ನಿಯರ್ ಫೀಲ್ಡ್‌ ಕಮ್ಯೂನಿಕೇಷನ್ ಫೀಚರ್

  ನೂತನ ಸ್ಮಾರ್ಟ್‌ ಡಿಎಲ್ ಮತ್ತು ಆರ್‌ಸಿಗಳು ಒಂದೇ ಮಾದರಿ, ಬಣ್ಣ, ವಿನ್ಯಾಸ, ಭದ್ರತಾ ವ್ಯವಸ್ಥೆ ಗಳನ್ನು ಹೊಂದಿರಲಿವೆ. ಈ ಸ್ಮಾರ್ಟ್‌ ಡಿ.ಎಲ್‌. ಮತ್ತು ಆರ್‌.ಸಿ.ಗಳು ಚಿಪ್‌ ಹಾಗೂ ಕ್ಯೂ.ಆರ್‌.ಕೋಡ್‌ಗಳನ್ನು ಹೊಂದಿರಲಿವೆ. ಅವುಗಳು ಎಟಿಎಂ ಕಾರ್ಡ್‌ಗಳಲ್ಲಿರುವ ನಿಯರ್ ಫೀಲ್ಡ್‌ ಕಮ್ಯೂನಿಕೇಷನ್ ಫೀಚರ್ ಅನ್ನು ಹೊಂದಿರಲಿವೆ. ಇದರಿಂದ ಅಧಿಕಾರಿಗಳು ಡಿ.ಎಲ್‌. ಅಥವಾ ಆರ್‌.ಸಿ.ಯನ್ನು ಅವರ ಬಳಿ ಇರುವ ಡಿವೈಸ್‌ಗೆ ಹಿಡಿದಾಗ ವಿವರಗಳು ಲಭ್ಯವಾಗುತ್ತವೆ.


 • ಕ್ಯೂ.ಆರ್‌. ಕೋಡ್‌ ಸಹ ಇದೆ!

  ಸ್ಮಾರ್ಟ್ ಆರ್‌.ಸಿ. ಅಥವಾ ಡಿ.ಎಲ್‌ನಲ್ಲಿ ನಿಯರ್ ಫೀಲ್ಡ್‌ ಕಮ್ಯೂನಿಕೇಷನ್ ಫೀಚರ್ ಜೊತೆಗೆ ಕ್ಯೂ.ಆರ್‌. ಕೋಡ್‌ ಅಥವಾ ಚಿಪ್‌ ಅನ್ನು ಸ್ವೈಪ್ ಮಾಡಿದಾಗ ಚಾಲಕನ, ವಾಹನದ ವಿವರ ಗಳು ಲಭಿಸುವಂತಹ ತಂತ್ರಜ್ಞಾನವನ್ನು ತಂದಿರುವುದಾಗಿ ರಸ್ತೆ ಸಾರಿಗೆ ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಇದರಿಂದ ಟ್ರಾಫಿಕ್ ಪೊಲೀಸರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸುವಾಗ ಸಹಾಯವಾಗುತ್ತದೆ.


 • ಸಾರ್ವಜನಿಕರಿಗೆ ಏನು ಲಾಭ?

  ಈ ನೂತನ ಯೋಜನೆ ಒಂದು ರೀತಿಯಲ್ಲಿ ಸಾರಿಗೆ ಅಧಿಕಾರಿಗಳು ಹಾಗೂ ಪೊಲೀಸರಿಗೆ ಹೆಚ್ಚು ಸಹಾಯವಾಗುವಂತೆ ಕಂಡರೂ ಸಹ ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ಲಾಭಗಳಿವೆ.! ಆರ್‌.ಸಿ. ಅಥವಾ ಡಿ.ಎಲ್‌ಗಳು ಸ್ಮಾರ್ಟ್‌ ಆಗಿರುವುದರಿಂದ ಅವುಗಳನ್ನು ನಕಲನ್ನು ಮಾಡಲು ಇತರರಿಗೆ ಸಾಧ್ಯವಿಲ್ಲ. ಹಾಗೆಯೇ, ಅವುಗಳನ್ನು ಕಳೆದುಕೊಂಡರೂ ಸಹ ವಾಪಸ್ ಪಡೆಯುವುದು ಸುಲಭವಾಗಲಿದೆ. ಇನ್ನು ಅನ್ಯ ರಾಜ್ಯಗಳಲ್ಲಿ ಪೊಲೀಸರು ಅಡ್ಡಹಾಕಿದರೂ ನಿಖರ ದಾಖಲೆಗಳು ನಿಮ್ಮ ಬಳಿ ಇರುತ್ತವೆ. ಸರ್ಕಾರ, ಅಧಿಕಾರಿಗಳೂ,ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಪಾರದರ್ಶಕತೆ ಮೂಡಿಬರುವ ವಿಶ್ವಾಸವಿದೆ.
ಮುಂದಿನ ವರ್ಷದ ಜುಲೈ ತಿಂಗಳಿನಿಂದ ಡ್ರೈವಿಂಗ್ ಲೈಸನ್ಸ್‌ ಮತ್ತು ವಾಹನಗಳ ಪ್ರಮಾಣ ಪತ್ರ (ಆರ್‌ಸಿಗಳು) ಏಕರೂಪತೆ ಪಡೆದುಕೊಳ್ಳಲಿವೆ ಎಂಬ ಸುದ್ದಿ ನಿಮಗೀಗಾಗಲೇ ತಿಳಿದಿದೆ ಎನ್ನಬಹುದು. ದೇಶದೆಲ್ಲೇಡೆ ವೈರಲ್ ಆಗಿರುವ ಈ ಸುದ್ದಿಯಂತೆ, ಹೊಸದಾಗಿ ವಿತರಣೆಯಾಗುವ ಡ್ರೈವಿಂಗ್ ಲೈಸೆನ್ಸ್ ಹಾಗೂ ವಾಹನ ದಾಖಲೆಗಳೆಲ್ಲವೂ ಸ್ಮಾರ್ಟ್‌ ಆಗಿ ನಿಮ್ಮ ಕೈಸೇರಲಿವೆ.

ಈಗಾಗಲೇ ಡ್ರೈವಿಂಗ್ ಲೈಸನ್ಸ್‌ ಅನ್ನು ಹೊಂದಿರುವರಿಗೆ ಮರು ನವೀಕರಣದ ಸಂದರ್ಭದಲ್ಲಿ ಹೊಸ ಮಾದರಿಯ ಡಿ.ಎಲ್‌.ಗಳನ್ನು ನೀಡಲಾಗುತ್ತದೆ. ಹಾಗೆಯೇ, ಅದಕ್ಕಾಗಿ ಸಾರ್ವಜನಿಕರು ಪಾವತಿಸಬೇಕಾದ ಶುಲ್ಕವೂ ಸಹ ಕೇವಲ 15 ರೂ.ಗಳಿಂದ 20 ರೂ. ಮಾತ್ರ ಹೇಳಲಾಗಿದ್ದು, ನಾವು ಸ್ಮಾರ್ಟ್‌ ಪ್ರಪಂಚಕ್ಕೆ ಕಾಲಿಡಲು ಯಾವುದೇ ತೊಂದರೆ ಸಹ ಆಗುವುದಿಲ್ಲ ಎನ್ನಬಹುದು.

ಆದರೆ, ವಿಷಯ ಇದಲ್ಲ. ಬದಲಾಗಿ, ಮುಂದಿನ ವರ್ಷದಿಂದ ದೇಶಾದ್ಯಂತ ಹೊಸದಾಗಿ ಸಾರ್ವಜನಿಕರ ಕೈ ಸೇರಲಿರುವ ಏಕರೂಪ ಡಿಎಲ್ ಹಾಗೂ ಆರ್‌ಸಿ ದಾಖಲೆಗಳ ವಿಶೇಷತೆಗಳು ಯಾವುವು? ಏನೇನು ಹೊಸ ಸ್ಮಾರ್ಟ್‌ ಭದ್ರತಾ ವ್ಯವಸ್ಥೆ? ಸರ್ಕಾರ ಇಂತಹದೊಂದು ಯೋಜನೆಗೆ ಕೈ ಹಾಕಿದ್ದೇಕೆ? ಇದರಿಂದ ನಮಗೇನು ಉಪಯೋಗ? ಎಂಬದನ್ನು ಇಂದು ತಿಳಿಯೋಣ.

   
 
ಹೆಲ್ತ್