Back
Home » ಚಿತ್ರವಿಮರ್ಶೆ
ವಿಮರ್ಶೆ: 'ಅಮ್ಮಚ್ಚಿ'ಯ ನೆನಪು ಮನರಂಜನೆಯ ಸರಕಲ್ಲ, ಇದೊಂದು ಭಾವನೆ
Oneindia | 2nd Nov, 2018 02:57 PM
 • ಮೂರು ಮುಖ್ಯಪಾತ್ರಗಳ ಸುತ್ತಾ...

  ಪುಟ್ಟಮ್ಮತ್ತೆ, ಅಕ್ಕು ಹಾಗು ಅಮ್ಮಚ್ಚಿ ಎನ್ನುವ ಮೂರು ಪ್ರಧಾನ ಪಾತ್ರಗಳು ಮೂರು ತಲೆಮಾರಿನ ಕಥೆಯನ್ನು ನಮಗೆ ಹೇಳುತ್ತವೆ. ಪಾತ್ರಗಳು ಮೂರಾದರೂ ಅವುಗಳ ಆತ್ಮದ ಕೂಗು ಒಂದೇ. ಸಿನಿಮಾ ನಿರೂಪಣೆಯೇ ಹೇಳುವಂತೆ ಧಾರುಣ ಬದುಕಿನ ಪುಟಗಳು ಒಂದೊಂದಾಗಿ ತೆರೆದುಕೊಳ್ಳುವುದನ್ನು ಕೆನ್ನೆಗೆ ಕೈ ಅಂಟಿಕೊಂಡು ನೋಡುವುದೇ ನಮ್ಮ ಕೆಲಸ.


 • ಗಂಭೀರವಾದ ವಿಷ್ಯ ಪ್ರಸ್ತಾಪ

  ಹಾಗಂತ ಇದು ಗೋಳಿನ ಕಥೆಗಳನ್ನು ಹೇಳುವ ಸಿನೆಮಾವಲ್ಲ. ನಿರ್ದೇಶಕಿ ಗಂಭೀರ ವಿಚಾರವನ್ನು ಆಪ್ತ ಹಾಗೂ ಭಾವಪೂರ್ಣವಾಗಿ ಸಿನೆಮಾದ ಚೌಕಟ್ಟಿಗೆ ಇಳಿಸಿದ್ದಾರೆ. ಪುರುಷ ಪ್ರಾಧಾನ್ಯ ಸಮಾಜದ ಹೇರಿಕೆಗಳ ನಡುವೆ ದೂರದಲ್ಲೆಲ್ಲೋ ಕಣ್ಣು ಕೆಂಪಾಗಿಸಿಕೊಂಡ ಸಿಡಿಲಿನಂತೆ ಅನಿಸಿದರು ಹೆಣ್ಣಿನ ಬಂಡಾಯ, ಆಕೆ ಎತ್ತುವ ಪ್ರಶ್ನೆಗಳಿಗೆ ತೂಕವಿದೆ.


 • ಸ್ಥಳೀಯ ಸಂಪ್ರಾದಾಯದ ಪ್ರತೀಕ

  ಕುಂದಾಪುರ ಪರಿಸರದಲ್ಲಿ ಕಥೆ ವಿಸ್ತರಿಸಿಕೊಳ್ಳುವುದರಿಂದ ಅಲ್ಲಿನ ಭಾಷೆಯ ಬಳಕೆಯಾಗಿದೆ. ಮುಖ್ಯವಾಗಿ ಕಥೆ ಹರಡಿಕೊಳ್ಳುವ ಕಾಲಘಟ್ಟದ ಪರಿಸರವನ್ನು ಬಹಳ ನೈಜವಾಗಿ ಕಟ್ಟಿಕೊಡುವ ಕಾರ್ಯವನ್ನು ನಿರ್ದೇಶಕಿ ಮಾಡಿದ್ದಾರೆ. ಆಚರಣೆಗಳಿಂದ ಹಿಡಿದು ಅಡುಗೆ ಮನೆಯವರೆಗೆ ಅಂದಿನ ಚಿತ್ರಣವನ್ನು ನಾಜೂಕಾಗಿ ತೆರೆಯ ಮೇಲೆ ತರಲಾಗಿದೆ. ದೀಪಾವಳಿ ಹಬ್ಬದ ಆಚರಣೆ, ತೊಟ್ಟಿಲು ಶಾಸ್ತ್ರ, ಭಜನೆ, ಕೊಟ್ಟೆ ಕಡುಬು ಕಟ್ಟುವುದು, ಚನ್ನೆಮಣೆ (ಅಳಗುಳಿಮಣೆ), ದೊಡ್ಡ ಪಾತ್ರೆಗಳು, ಬೀಸುವ ಕಲ್ಲು, ಸೌದೆ ಒಲೆ, ಚಿತ್ರೀಕರಣಕ್ಕಾಗಿ ಬಳಸಿದ ಮನೆಗಳು, ದೃಶ್ಯ ಪರಿಕರಗಳು, ಪಾತ್ರವರ್ಗ, ಪ್ರಸಾಧನ ಎಲ್ಲವೂ ಕೂಡ ಅಷ್ಟು ಸಹಜ ಅನಿಸುತ್ತದೆ.


 • ನಿರ್ದೇಶಕರ ಕೆಲಸಕ್ಕೆ ಮೆಚ್ಚುಗೆ

  ರಂಗ ಭೂಮಿಯ ಹಿನ್ನೆಲೆಯ ನಿರ್ದೇಶಕಿ ಚಂಪಾ ಪಿ ಶೆಟ್ಟಿ ಈ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಭರವಸೆಯಾಗಿ ಬಂದಿದ್ದಾರೆ. ಒಂದಷ್ಟು ವರ್ಗಕ್ಕೆ ಮಾತ್ರ ಸೀಮಿತ ಎನಿಸುವ ಕಥೆಯನ್ನು ವಾಣಿಜ್ಯ ಸಿನೆಮಾದ ರೂಪಕ್ಕೆ ಕಥೆಯ ಮೂಲ ಆಶಯಗಳಿಗೆ ದಕ್ಕೆ ಆಗದಂತೆ ಚಿತ್ರಕಥೆ ಬರೆದು ನಿರ್ದೇಶಿಸುವುದು ನಿಜಕ್ಕೂ ಸವಾಲಿನ ಕೆಲಸ. ಮೂರು ಕಥೆಗಳನ್ನು ಒಂದು ಚಿತ್ರಕಥೆಗೆ ಬೆಸೆದಿರುವ ಅವರ ನಾಜುಕುತನ ಪ್ರಶಂಸನೀಯ.


 • ಅಮ್ಮಚ್ಚಿ ಪಾತ್ರದಲ್ಲಿ ವೈಜಯಂತಿ

  ಅಮ್ಮಚ್ಚಿ ಪಾತ್ರದಲ್ಲಿ ನಟಿಸಿರುವ ವೈಜಯಂತಿ ಅಡಿಗ ಅಂದವಾಗಿ ಕಾಣಿಸುವುದರ ಜೊತೆಗೆ ಪ್ರಬುದ್ಧ ನಟನೆಯ ಮೂಲಕ ಸಿನೆಮಾದುದ್ದಕ್ಕೂ ಮಿಂಚುತ್ತಾರೆ, ಪ್ರಶ್ನಿಸುವ ಸ್ವಭಾವದ ಹುಡುಗಿ ಇನ್ಯಾರದ್ದೋ ಪ್ರಶ್ನೆಗಳಿಗೆ ಅನಿವಾರ್ಯ ಉತ್ತರವಾಗುವುದನ್ನು ನೀವು ತೆರೆಯ ಮೇಲೆ ನೋಡಲೇಬೇಕು. ಬದುಕಿನ ಮುಖ್ಯ ಭಾಗದ ಪುಟಗಳನ್ನೂ ಬದುಕೇ ಆಗಿದ್ದವರು ಕಿತ್ತುಕೊಂಡು ಓಡಿ ಹೋದ ನಂತರದ ಗೊಂದಲವನ್ನು ಜೀವಿಸುವ ಅಕ್ಕು ಪಾತ್ರದಲ್ಲಿ ದೀಪಿಕಾ ಆರಾಧ್ಯ ಹಾಗು ತನ್ನಿಡೀ ಬದುಕನ್ನು ನೋವನ್ನು ಹೊತ್ತುಕೊಂಡೆ ಬದುಕಿ ಕುಗ್ಗಿರುವ ಪುಟ್ಟಮತ್ತೆ ಪಾತ್ರದಲ್ಲಿ ನಟಿಸಿರುವ ರಾಧಾಕೃಷ್ಣ ಉರಾಳ ಸಿನೆಮಾ ಮುಗಿದ ನಂತರವೂ ಕಾಡುತ್ತಾರೆ.


 • ರಾಜ್ ಬಿ ಶೆಟ್ಟಿ ಪಾತ್ರದ ಬಗ್ಗೆ...

  ಒಂದು ಮೊಟ್ಟೆಯ ಕಥೆ ಸಿನಿಮಾದ ಪಾತ್ರದಿಂದ ಈ ಸಿನಿಮಾದ ಪಾತ್ರಕ್ಕೆ ರಾಜ್ ಬಿ ಶೆಟ್ಟಿ ಒಗ್ಗಿಕೊಂಡಿರುವ ರೀತಿ ಬೆರಗು ಹುಟ್ಟಿಸುತ್ತದೆ. ವೆಂಕಪ್ಪಯ್ಯನ ಪಾತ್ರವನ್ನು ಅವರು ನಟಿಸಿದಂತೆ ಕಾಣಿಸದೆ ಅವರೇ ಆ ಪಾತ್ರವಾಗಿದ್ದಾರೆ. ಇತರ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ವಿಶ್ವನಾಥ ಉರಾಳ, ದೇವರಾಜ್ ಕರಬ, ದಿಲೀಪ್ ಶೆಟ್ಟಿ, ಸ್ನೇಹ ಶರ್ಮಾ, ಅನುಪಮ ವರ್ಣೇಕರ್, ದಿವ್ಯಾ ಪಾಲಕ್ಕಲ್ ಹೀಗೆ ಎಲ್ಲರೂ ಅವರವರ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.


 • ತಾಂತ್ರಿಕವಾಗಿ ಸಿನಿಮಾ ಹೇಗಿದೆ

  ವೈದೇಹಿ ಅವರ ಸಾಹಿತ್ಯಕ್ಕೆ ಕಾಶೀನಾಥ್ ಪತ್ತಾರ್ ರಾಗ ಸಂಯೋಜಿಸಿದ್ದು ಹಾಡುಗಳು ಕೇಳಲು ಹಿತವಾಗಿವೆ. ಸಂಗೀತ ಥಾಮಸ್ ಅವರ ಹಿನ್ನಲೆ ಸಂಗೀತವು ಕೂಡ ಚಿತ್ರಕಥೆಯ ಅಗತ್ಯಕ್ಕೆ ತಕ್ಕಂತೆ ಇದ್ದು ಎಲ್ಲಿಯೂ ಗದ್ದಲ ಅನಿಸುವುದಿಲ್ಲ. ನವೀನ್ ಕುಮಾರ್ ಕ್ಯಾಮರಾ ಕಣ್ಣು ಸಿನೆಮಾವನ್ನು ನಿಜವಾಗಿಯೂ ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಜೊತೆಗೆ ಹರೀಶ್ ಕೊಮ್ಮೆ ಸಂಕಲನ ಸಿನೆಮಾದ ಓಟವನ್ನು ಪ್ರೇಕ್ಷಕನಿಗೆ ಸಹ್ಯವಾಗುವ ವೇಗದಲ್ಲಿಟ್ಟಿದೆ.


 • ಕೊನೆಯದಾಗಿ ಸಿನಿಮಾ ಹೇಗಿದೆ ಅಂದ್ರೆ....

  ಈ ಸಿನೆಮಾ ನಿಮ್ಮ ಮನರಂಜನೆಯ ಸರಕಲ್ಲ. ಒಂದು ಕಾಲದ, ಒಂದು ಪರಿಸರದ ಕಥೆ ಹೇಳುವ ಸಿನೆಮಾವಿದು. ಆದರೆ ವಸ್ತುವಿನ ವ್ಯಾಪ್ತಿ ವಿಶ್ವವ್ಯಾಪಿ. ಸಮಾನತೆ ಹಾಗು ಸ್ವಾತಂತ್ರ್ಯದ ಬಗ್ಗೆ ಎಷ್ಟೇ ಮಾತನಾಡಿದರು ಹೆಣ್ಣು ತನ್ನ ಆಯ್ಕೆಯ ಪ್ರಶ್ನೆ ಕೇಳಿದಾಗೆಲ್ಲ ಈ ಸಮಾಜ ಪ್ರಶ್ನೆಗಳಿಗೆ ಮರು ಪ್ರಶ್ನೆ ಎಸೆದಿದ್ದೆ ಹೆಚ್ಚು. ತಣ್ಣಗೆ ಕುಳಿತು ಸಿನೆಮಾ ನೋಡಿ ಪ್ರಶ್ನೆಗಳೊಂದಿಗೆ ಕುಳಿತ ಖುರ್ಚಿಯಿಂದ ಏಳುವ ಸಿನೆಮಾವಿದು. ಕನ್ನಡ ಸಾಹಿತ್ಯದ ಮತ್ತಷ್ಟು ಕೃತಿಗಳು ತೆರೆಯ ಮೇಲೆ ಬರಲಿ ಎನ್ನುವ ಆಶಯದೊಂದಿಗೆ ಸಿನಿಮಾ ನೋಡಿ ಬನ್ನಿ..
'ಹೂವಾಗಿ ಹುಟ್ಟಿ, ಹೂವಾಗಿ ಬೆಳೆದು, ಹೂವಂತೆ ಬಾಳಲಾರವು.....'ಅಮ್ಮಚ್ಚಿಯೆಂಬ ನೆನಪು' ಸಿನಿಮಾದ ಕಥೆಯನ್ನು ಆ ಸಿನಿಮಾದ ಹಾಡಿನ ಸಾಲು ಹೀಗೆ ಹೇಳಿ ಮುಗಿಸುತ್ತದೆ. ಸ್ತ್ರೀಲೋಕದ ತಲ್ಲಣಗಳು ಕಾಲಕಾಲಕ್ಕೆ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತಿದೆ ಬಿಟ್ಟರೆ ಆ ತಲ್ಲಣ ಸೃಷ್ಟಿಸುವ ಕಂಪನಕ್ಕೆ ಇಂದಿಗೂ ಸರಿಯಾದ ಧ್ವನಿ ಸಿಕ್ಕಿಲ್ಲ.

ಕನ್ನಡ ಸಾಹಿತ್ಯ ತನ್ನ ಓದುಗರನ್ನು ಹಾಗೂ ವಿಮರ್ಶಕರನ್ನು ತಲುಪುವ ಬಗೆಗಳಲ್ಲಿ ವಿಂಗಡನೆಗಳಿವೆ. ಆದರೆ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಹೆಣ್ಣಿನ ನೋವು ನಲಿವುಗಳಿಗೆ ಅಕ್ಷರ ರೂಪ ಕೊಡುವ ಕಾರ್ಯ ನಡೆದಿದೆ. ಕನ್ನಡ ಸಾಹಿತ್ಯ ಲೋಕದ ದೊಡ್ಡ ಹೆಸರು ವೈದೇಹಿ.

ಸ್ತ್ರೀಲೋಕದ ದುಗುಡ ದುಮ್ಮಾನಗಳಿಗೆ ಧ್ವನಿಯಾಗುತ್ತಲೇ ಕುಂದಾಪುರ ಕನ್ನಡದ ಆಡುಭಾಷೆಯನ್ನು ತಮ್ಮ ಬರವಣಿಗೆಯಲ್ಲಿ ಮುಖ್ಯವಾಗಿ ಸಣ್ಣ ಕಥೆಗಳಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಂಡವರು. 'ಅಮ್ಮಚ್ಚಿಯೆಂಬ ನೆನಪು' ಅವರ ಮೂರು ಕಥೆಗಳನ್ನು ಆಧರಿಸಿ ತಯಾರಾಗಿರುವ ಸಿನಿಮಾ. ಪೂರ್ತಿ ವಿಮರ್ಶೆ ಮುಂದೆ ಓದಿ....

   
 
ಹೆಲ್ತ್