Back
Home » ಚಿತ್ರವಿಮರ್ಶೆ
ಅಮ್ಮಚ್ಚಿ ಎಂಬ ನೆನಪು - ಕನ್ನಡ ಚಿತ್ರದ ವಿಶ್ಲೇಷಣೆ ಕನ್ನಡ ಚಿತ್ರ ಪ್ರೇಮಿಯಿಂದ
Oneindia | 3rd Nov, 2018 06:02 PM
 • ಚಿತ್ರದಲ್ಲಿ ಕುಂದಗನ್ನಡದ ಕಂಪು

  ಚಿತ್ರದ ಪೂರ್ತಿ ವಿಶಿಷ್ಟವಾದ ಕುಂದಗನ್ನಡ ಕೇಳಿ ತುಂಬಾ ಸಂತೋಷವಾಯಿತು. ಇದು ಬಹುಶಃ ಸಂಪೂರ್ಣ ಕುಂದಗನ್ನಡದ ಸಂಭಾಷಣೆ ಇರುವ ಮೊದಲ ಕನ್ನಡ ಚಿತ್ರವಿರಬಹುದು. ಇದರಲ್ಲಿ ಮೂರು ಪಾತ್ರಗಳ ಕಥೆಯನ್ನು ನಿರ್ದೇಶಕರು ಜೊತೆ ಜೊತೆಯಾಗಿ ಹೇಳಲು ಹೊರಟಿದ್ದಾರೆ. ಅಮ್ಮಚ್ಚಿಯ ಕಥೆಯೊಂದಿಗೆ ಅಕ್ಕುವಿನ ಮನಕಲಕುವ ಕಥೆ ಮತ್ತು ಪುಟ್ಟಮ್ಮಕ್ಕಳ ಫ್ಲಾಶ್ ಬ್ಯಾಕ್ ಕಥೆ. ಮೂರು ಕಥೆಗಳನ್ನು ಪೂರಕವಾಗಿ ಹೊಂದಿಸಿ ನಿರೂಪಿಸಿದ್ದಾರೆ ಚಂಪಾ ಶೆಟ್ಟಿಯವರು. ಅವರ ರಂಗ ನಿರ್ದೇಶನದ ಅನುಭವ ಇದನ್ನು ಸಾಧ್ಯವಾಗಿಸಿದೆ ಎನ್ನಬಹುದು. ಪ್ರಖ್ಯಾತ ಕಾದಂಬರಿಗಾರ್ತಿ ವೈದೇಹಿ ಅವರ ಸಣ್ಣ ಕಥೆಗಳಧಾರಿತ ಈ ಚಿತ್ರ ಒಂದು ವಿಭಿನ್ನ ಪ್ರಯತ್ನ ಎಂದು ಹೇಳಬಹುದು.

  ವಿಮರ್ಶೆ: 'ಅಮ್ಮಚ್ಚಿ'ಯ ನೆನಪು ಮನರಂಜನೆಯ ಸರಕಲ್ಲ, ಇದೊಂದು ಭಾವನೆ


 • ಪುರುಷ ಪ್ರಧಾನ ಸಮಾಜದ ದುರಂತ ಕಥೆ

  ಅಮ್ಮಚ್ಚಿಯ ಜೊತೆಗಾತಿ ನೆನಪಿಸಿಕೊಳ್ಳುವ ಅಮ್ಮಚ್ಚಿಯ ಕಥೆ ಇದು. ಅಮ್ಮಚ್ಚಿ ಹಳ್ಳಿಯ ಇಂದಿನ ಕಾಲದ ದಿಟ್ಟ ಹೆಣ್ಣು. ತನ್ನ ಪುಟ್ಟಮ್ಮಜ್ಜಿಯ ಜೀವನದ ದುರಂತ ಕಥೆ ಕೇಳಿದ್ದ ಆಕೆ ತನ್ನಿಷ್ಟದಂತೆ ಉಡುಪು ಧರಿಸಬೇಕು, ತಣ್ಣಗೆ ಒಪ್ಪುವಂತ ಹುಡುಗನನ್ನೇ ಮದುವೆಯಾಗಬೇಕು ಎಂಬ ಆಸೆ ಹೊತ್ತಿರುತ್ತಾಳೆ. ಜೊತೆಗೆ ಪಕ್ಕದ ದೊಡ್ಡ ಮನೆಮಗಳು ಅಕ್ಕುವಿನ ಮನಕಲಕುವಂತ ಮಾನಸಿಕ ಸ್ಥಿತಿ, ಸಹೋದರರು ಮತ್ತು ಮನೆಯ ಎಲ್ಲರೂ ಅವಳನ್ನು ಕೆಟ್ಟದಾಗಿ ತಿರಸ್ಕಾರದಿಂದ ನೋಡುವ ಹೀಗೆಳೆಯುವ ಸ್ಥಿತಿ ನೋಡಿ ಅಮ್ಮಚ್ಚಿಗೆ ಕನಿಕರವಿರುತ್ತೆ. ಅವಳ ಆ ಸ್ಥಿತಿಗೆ ಅವಳನ್ನು ಬಿಟ್ಟು ಹೋದ ಗಂಡನೇ ಕಾರಣ ಎಂಬುದು ಅವಳ ನಂಬಿಕೆ. ಒಟ್ಟಿನಲ್ಲಿ ಈ ಚಿತ್ರದಲ್ಲಿ ಎಲ್ಲರ ಕಥೆಯೂ ಪುರುಷ ಪ್ರಧಾನ ಸಮಾಜದ, ಸ್ವಾರ್ಥದ ದುರಂತ ಕಥೆಯೇ ಆಗಿದೆ. ಒಂದು ರೀತಿ ಪುರುಷರೆಲ್ಲರೂ ಕೆಟ್ಟವರೆಂದು ಬಿಂಬಿಸುವಂತಿದೆ ಈ ಚಿತ್ರದ ಕಥೆ. ಉದಾಹರಣೆಗೆ ಮನೆಯ ಮಗಳ ಮದುವೆಯ ಏರ್ಪಾಡು ಮಾಡಿದ್ದ ಕುಟುಂಬ ಅಕ್ಕುವಿನ ವೃಥಾ ಕಾಟದಿಂದ ತಪ್ಪಿ ಹೋಗುತ್ತೆ. ಇದರಿಂದ ಸಿಟ್ಟಿಗೇಳುವ ಸಹೋದರ ಅವಳನ್ನು ಹೊಡೆದೋಡಿಸುವ ಸಂಧರ್ಭದಲ್ಲಿ ಅಕ್ಕು ತನ್ನ ಸಹೋದರನ ಪರಸ್ತ್ರೀ ಸಂಗದ ಗುಟ್ಟನ್ನು ರಟ್ಟು ಮಾಡಿ ಬಿಡುತ್ತಾಳೆ. ಅದ್ದರೆ ಒಟ್ಟಿನಲ್ಲಿ ಹಳ್ಳಿಯ ಮಡಿವಂತಿಕೆಯ ಬ್ರಾಹ್ಮಣ ಕುಟುಂಬದ ಹೆಣ್ಣು ಮಕ್ಕಳ ಜೀವನ ಜಂಜಾಟ ಹಾಗೂ ಬ್ರಾಹ್ಮಣ ಮನೆತನದ ವೈರುಧ್ಯಗಳನ್ನು ಎತ್ತಿ ತೋರಿಸುತ್ತದೆ ಈ ಚಿತ್ರ. ಈ ಕಾಲದಲ್ಲೂ ಈ ರೀತಿಯ ಕುಟುಂಬಗಳಿವೆಯೇ ಎಂದು ಆಶ್ಚರ್ಯ ಪಡುವಂತಾಗುತ್ತದೆ.

  'ಅಮ್ಮಚ್ಚಿಯೆಂಬ ನೆನಪು' ಚಿತ್ರ ನೋಡಿ ಭೇಷ್ ಎಂದ್ರಾ ವಿಮರ್ಶಕರು.?


 • ಎಲ್ಲರ ಅಭಿನಯ ಹೇಗಿದೆ.?

  ಅಮ್ಮಚ್ಚಿ ಪಾತ್ರ ಮಾಡಿರುವ ಸುಂದರ ಮುದ್ದು ಮುಖದ ವೈಜಯಂತಿ ಹಳ್ಳಿಯ ದಿಟ್ಟ ಹೆಣ್ಣಾಗಿ ಅತ್ಯುತ್ತಮ ಅಭಿನಯ ನೀಡಿದ್ದಾರೆ. ತಮ್ಮ ತುಂಟ ಕಣ್ಣೋಟ ಮತ್ತು ನಗುವಿನಲ್ಲೇ ಎಲ್ಲರ ಮನಗೆಲ್ಲುತ್ತಾರೆ. ಅಮ್ಮಚ್ಚಿಯ ಜೊತೆಗಾತಿಯಾಗಿ ನಟಿಸಿರುವ ದಿಯಾ ಪಳಕ್ಕಲ್ ಕೂಡ ಮುಗ್ಧ ಹುಡುಗಿಯಾಗಿ ನಟಿಸಿದ್ದಾಳೆ. ಈ ಚಿತ್ರದಲ್ಲಿ ನಟಿಸಿರುವ ಎಲ್ಲ ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆದರೆ ಎರಡು ಪಾತ್ರಗಳು ಎದ್ದು ಕಾಣುತ್ತವೆ ಒಂದು ಪುಟ್ಟಮತ್ತೆಯ ಪಾತ್ರ ಮತ್ತು ಅಕ್ಕುವಿನ ಪಾತ್ರ. ಹಳ್ಳಿಯ ಪುಟ್ಟಮ್ಮತ್ತೆಯ ಮಡಿ ಅಜ್ಜಿ ಪಾತ್ರವನ್ನು ಗಂಡು ರಾಧಾಕೃಷ್ಣ ಉರಾಳ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಅವರ ಅಜ್ಜಿಯ ಮೇಕ್ ಅಪ್ ಇನ್ನೂ ಚೆನ್ನಾಗಿ ಮಾಡಬಹುದಿತ್ತು ಎಂದನಿಸಿತು, ಏಕೆಂದರೆ ಆ ಅಜ್ಜಿಯ ಪಾತ್ರ ಮಾಡಿರುವುದು ಗಂಡಸೆಂದು ಸುಲಭವಾಗಿ ಗುರುತಿಸಬಹುದು.


 • ದೀಪಿಕಾ ಆರಾಧ್ಯ ನಟನೆಗೆ ಹ್ಯಾಟ್ಸ್ ಆಫ್

  ಗಂಡ ತೊರೆದ ಮಾನಸಿಕ ಅಸ್ವಸ್ಥೆಯಾದ ಅಕ್ಕುವಿನ ಪಾತ್ರಧಾರಿ ದೀಪಿಕಾ ಆರಾಧ್ಯ ನಟನೆ ಅಮೋಘವಾಗಿದೆ. ಅವರ ನಟನೆಗೆ ಹ್ಯಾಟ್ಸ್ ಆಫ್ ಎನ್ನಬಹುದು. ಕುಂದಾಪುರ ತಾಲೂಕಿನ ಹಳ್ಳಿಗಳ ನೈಜ ಚಿತ್ರಣ ಸೊಗಸಾಗಿ ಸೆರೆ ಹಿಡಿದ್ದಾರೆ ಚಿತ್ರದ ಛಾಯಾಗ್ರಾಹಕರಾದ ನವೀನ ಕುಮಾರ್. ಸುಮಧುರ ಅರ್ಥಗರ್ಭಿತ ಮತ್ತು ಸಮಯೋಚಿತ ಹಾಡುಗಳು ಚಿತ್ರದ ಹೈಲೈಟ್ ಎನ್ನಬಹುದು. ಪಂಡಿತ್ ಕಾಶೀನಾಥ್ ಪತ್ತಾರ್ ಅವರ ಸಂಗೀತ ಸಂಯೋಜನೆ ಸೊಗಸಾಗಿದೆ. ಸ್ವಲ್ಪ ಮನರಂಜನೆಗೆ ಹಾಸ್ಯ ಕಲಾವಿದರ ಸದಭಿರುಚಿಯ ಹಾಸ್ಯವನ್ನು ಸೇರಿಸಿದ್ದರೇ ಯುವ ಪ್ರೇಕ್ಷರನ್ನು ಸೆರೆಹಿಡಿಯಬಹುದಿತ್ತು ಎಂದು ನನ್ನ ಅನಿಸಿಕೆ.


 • ಸದಭಿರುಚಿಯ ಕೌಟುಂಬಿಕ ಚಿತ್ರ

  ಒಟ್ಟಿನಲ್ಲಿ ಚಂಪಾ ಶೆಟ್ಟಿಯವರು ಒಂದು ಸದಭಿರುಚಿಯ ಕೌಟುಂಬಿಕ ಚಿತ್ರವನ್ನು ತಮ್ಮ ಮೊದಲ ಪ್ರಯತ್ನದಲ್ಲಿ ನೀಡಿದ್ದಾರೆ ಎನ್ನಬಹುದು. ಇಂಥ ಸದಭಿರುಚಿಯ ಚಿತ್ರವನ್ನು ನಿರ್ಮಿಸಿದ ನಿರ್ಮಾಪಕರಿಗೂ ವಂದನೆಗಳು.

  ಇಂತಿ ಕನ್ನಡ ಚಿತ್ರ ಪ್ರೇಮಿ

  ಸಂಪಿಗೆ ಶ್ರೀನಿವಾಸ ಕಡಬ
ಅಮ್ಮಚ್ಚಿ ಎಂಬ ನೆನಪು... ಇದೇನಿದು ಚಿತ್ರದ ಹೆಸರು ವಿಚಿತ್ರವಾಗಿದೆ, ಹೊಸದಾಗಿದೆ ನೋಡಿಯೇ ಬಿಡೋಣ ಎಂದು ಹೊರಟೆ ಮನೆಯ ಪಕ್ಕದ ಮಾಲ್ ಗೆ. ಕನ್ನಡ ಚಿತ್ರಗಳನ್ನು ಚಿತ್ರಮಂದಿರದಲ್ಲೇ ಅದರಲ್ಲೂ ಮಲ್ಟಿಪ್ಲೆಕ್ಸ್ ನಲ್ಲೇ ನೋಡಬೇಕು ಎಂಬುದು ನನ್ನ ಆಸೆ. ಬರೀ ಪರಭಾಷೆಯ ಚಿತ್ರಗಳು ವಿಜೃಂಭಿಸುತ್ತಿರುವ ಮಲ್ಟಿಪ್ಲೆಕ್ಸ್ ಗಳಲ್ಲಿ ನಮ್ಮ ಕನ್ನಡ ಚಿತ್ರಗಳಿಗೆ ಪ್ರೋತ್ಸಾಹಿಸಬೇಕೆಂದು ಅಲ್ಲೇ ನೋಡುವ ಅಭ್ಯಾಸ ಬೆಳೆಸಿಕೊಂಡಿದ್ದೇನೆ. ಅದೂ ಬುಕ್ ಮೈ ಶೋ ನಲ್ಲೇ ಕಾದಿರಿಸಿ!

ಈಗ ಅಮ್ಮಚ್ಚಿಯ ವಿಷಯಕ್ಕೆ ಬರೋಣ. ಮೊದಲಿಗೆ ಚಿತ್ರ ಶುರುವಾದಾಗ ಇದೇನ್ ಭಯ ಹುಟ್ಟಿಸುವ ಹಾರರ್ ಚಿತ್ರವಿರಬಹುದಾ ಎಂದನಿಸಿತು. ಏಕೆಂದರೆ ಮೊದಲ ದೃಶ್ಯದಲ್ಲೇ ಎಲ್ಲ ಪಾತ್ರಗಳ ಬಾಯಲ್ಲಿ ಭೂತ ಉಲಿಯುತ್ತಿತ್ತು! ಆದರೆ ಸ್ವಲ್ಪ ಹೊತ್ತಿನ ನಂತರ ಅರ್ಥವಾಯಿತು ಇದು ನಮ್ಮ ಕುಂದಾಪುರದ ಬ್ರಾಹ್ಮಣ ಕುಟುಂಬಗಳ ಕಥೆ ಎಂದು.

ಚಿತ್ರದ ಪೂರ್ತಿ ವಿಶಿಷ್ಟವಾದ ಕುಂದಗನ್ನಡ ಕೇಳಿ ತುಂಬಾ ಸಂತೋಷವಾಯಿತು. ಇದು ಸಂಪೂರ್ಣ ಕುಂದಗನ್ನಡದ ಸಂಭಾಷಣೆ ಇರುವ ಬಹುಶಃ ಮೊದಲ ಕನ್ನಡ ಚಿತ್ರವಿರಬಹುದು. ಮುಂದೆ ಓದಿರಿ...

   
 
ಹೆಲ್ತ್