Back
Home » ಇತ್ತೀಚಿನ
ಮೈಕ್ರೊಸಾಫ್ಟ್‌ ಸಿಇಒ ನಾದೆಲ್ಲಾ ಈ ರೀತಿ ಹೇಳಿದ್ದು ಯಾಕೆ..? ನಮ್ಮ ಮಾಹಿತಿ ಏನಾಗುತ್ತಿದೆ..?
Gizbot | 8th Nov, 2018 10:01 AM
 • ವೈಯಕ್ತಿಕ ಮಾಹಿತಿಯಿಂದ ಲಾಭ ಮಾಡಲ್ಲ

  ಮೈಕ್ರೊಸಾಫ್ಟ್‌ನ ಬಿಂಗ್‌ ಸರ್ಚ್‌ ಇಂಜಿನ ಮತ್ತು 2016ರಲ್ಲಿ ಮೈಕ್ರೊಸಾಫ್ಟ್‌ ಸಮೂಹ ಸೇರಿಕೊಂಡ ಲಿಂಕ್ಡ್‌ಇನ್‌ನಿಂದಲೂ ಯಾವುದೇ ವೈಯಕ್ತಿಕ ಮಾಹಿತಿಯನ್ನು ಸೋರಿಕೆಯಾಗದಂತೆ ನೋಡಿಕೊಂಡಿದ್ದೇವೆ. ಬಳಕೆದಾರರ ವೈಯುಕ್ತಿಕ ಮಾಹಿತಿಯಿಂದ ಕಂಪನಿ ಲಾಭ ಮಾಡಿಕೊಳ್ಳುವುದಿಲ್ಲ ಎಂದು ಸಂದರ್ಶನವೊಂದರಲ್ಲಿ ಸತ್ಯ ನಾದೆಲ್ಲಾ ಹೇಳಿದ್ದಾರೆ.


 • ಲಿಂಕ್ಡ್‌ಇನ್‌ನಲ್ಲಿ 560 ಮಿಲಿಯನ್‌ ಬಳಕೆದಾರರು

  2016ರಲ್ಲಿ 26 ಬಿಲಿಯನ್‌ ಡಾಲರ್‌ಗೆ ಲಿಂಕ್ಡ್‌ಇನ್‌ ಸಾಮಾಜಿಕ ಜಾಲತಾಣವನ್ನು ಮೈಕ್ರೊಸಾಫ್ಟ್‌ ಖರೀದಿಸಿತ್ತು. ಲಿಂಕ್ಡ್‌ಇನ್‌ ಈಗ 560 ಮಿಲಿಯನ್‌ಗೂ ಹೆಚ್ಚು ಬಳಕೆದಾರರನ್ನು ಹೊಂದಿದ್ದು, ವೃತ್ತಿಪರರ ಸಾಮಾಜಿಕ ಜಾಲತಾಣವೆಂದೆ ಖ್ಯಾತಿಯಾಗಿದೆ. ಅದರ ಜತೆ ಬಿಂಗ್‌ ಜಾಗತಿಕವಾಗಿ 3ನೇ ಅತಿ ಹೆಚ್ಚು ಬಳಸುವ ಸರ್ಚ್‌ ಇಂಜಿನ್‌ ಆಗಿದೆ.


 • ಹೆಚ್ಚು ಹಣಕಾಸು ಕೇಂದ್ರಿತವಾಗಲ್ಲ

  ನಾವು ಒವರ್‌ ಮಾನಟೈಸ್‌ ಮಾಡಲು ಇಷ್ಟಪಡುವುದಿಲ್ಲ. ಆ ರೀತಿ ಯಾವುದಾದರೂ ಇದ್ದರೆ, ಅದನ್ನು ಬಳಕೆದಾರರಿಗೆ ಹೆಚ್ಚು ಉಪಯುಕ್ತವಾಗುವಂತೆ ರೂಪಿಸಿದ್ದೇವೆ ಎಂಬ ಖಚಿತತೆ ನಮಗಿದೆ. ಮೈಕ್ರೊಸಾಫ್ಟ್‌ ಮತ್ತು ಅಮೇರಿಕಾದ ಇತರ ಟೆಕ್‌ ಕಂಪನಿಗಳ ನಡುವೆ ಭಾರೀ ವ್ಯತ್ಯಾಸವಿದೆ. ಅವುಗಳು ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡಿರುವ ಆರೋಪ ಹೊಂದಿವೆ ಎಂದು ನಾದೆಲ್ಲಾ ಹೇಳಿದ್ದಾರೆ.


 • ಬಳಕೆದಾರರ ಖಾಸಗಿತನ ಕಾಪಾಡಿ

  ಕಳೆದ ವಾರ ಲಂಡನ್‌ನಲ್ಲಿ ಆಯೋಜಿಸಿದ್ದ ಮೈಕ್ರೊಸಾಫ್ಟ್‌ ಕಾರ್ಯಕ್ರಮದಲ್ಲಿ ಮಾನವ ಹಕ್ಕು ಎಂದು ಬಳಕೆದಾರರ ಖಾಸಗಿತನವನ್ನು ಕಾಪಾಡಬೇಕು ಎಂದು ಟೆಕ್‌ ಕಂಪನಿಗಳಿಗೆ ಮನವಿ ಮಾಡಿದರು. ಸಮಾಜದಲ್ಲಿನ ಅತ್ಯಂತ ದುರ್ಬಲ ವಿಭಾಗವನ್ನು ರಕ್ಷಿಸಲು ಒಟ್ಟಾಗಿ ಕೆಲಸ ಮಾಡಲು ಸಂಸ್ಥೆಗಳು ಮತ್ತು ಸರ್ಕಾರಗಳು ಜತೆಗೂಡಬೇಕು ಎಂದು ಒತ್ತಾಯಿಸಿದ್ದರು.


 • ಮಾಹಿತಿ ರಕ್ಷಣೆ ಪ್ರಾಧಿಕಾರಕ್ಕೆ ಶ್ಲಾಘನೆ

  ಮಾಹಿತಿಯ ಗೌಪ್ಯತೆ ಕಾಪಾಡಲು ಮೊದಲ ಹೆಜ್ಜೆಯಂತೆ ಯುರೋಪಿಯನ್ ಒಕ್ಕೂಟದ ಜನರಲ್ ಡಾಟಾ ಪ್ರೊಟೆಕ್ಷನ್ ರೆಗ್ಯುಲೇಷನ್ (GDPR)ಆರಂಭವನ್ನು ನಾದೆಲ್ಲಾ ಶ್ಲಾಘಿಸಿದ್ದು, ಗೌಪ್ಯತೆಯನ್ನು ಮಾನವ ಹಕ್ಕು ಎಂದು ಪರಿಗಣಿಸಲು ನಾವು ಸೃಷ್ಟಿಸುವ ಡಿಜಿಟಲ್ ಅನುಭವಗಳ ಬಗ್ಗೆ ನಾವೆಲ್ಲರೂ ಚಿಂತನೆ ಮಾಡಬೇಕು. GDPR ಕಾನೂನಿನ ಒಂದು ತುಂಡು ಅಷ್ಟೇ, ಅದು ಉತ್ತಮ ಆರಂಭವನ್ನು ಪಡೆದಿದೆ ಎಂದು ನಾದೆಲ್ಲಾ ಹೇಳಿದ್ದಾರೆ.


 • ಮಾಹಿತಿ ನಮ್ಮ ಜವಾಬ್ದಾರಿ

  ಹೆಚ್ಚುತ್ತಿರುವ ಮಾಹಿತಿ ಸೋರಿಕೆಯ ಮಧ್ಯೆ ಟೆಕ್‌ ದೈತ್ಯರು ಬಳಕೆದಾರರ ಗೌಪ್ಯತೆ ಮತ್ತು ಭದ್ರತೆಯ ಖಾತರಿ ಬಗ್ಗೆ ಚರ್ಚಿಸುತ್ತಿದ್ದಾರೆ. ಗ್ರಾಹಕರು ತಮ್ಮ ಮಾಹಿತಿಯನ್ನು ನಿಯಂತ್ರಿಸುವ ಅಧಿಕಾರ ಹೊಂದಿರಬೇಕು. ಮಾಹಿತಿ ಸುರಕ್ಷಿತವಾಗಿಟ್ಟುಕೊಳ್ಳುವುದು ನಮ್ಮ ಸಂಪೂರ್ಣ ಜವಾಬ್ದಾರಿಯಾಗಿದೆ ಎಂದು ಸತ್ಯ ನಾದೆಲ್ಲಾ ಮೇ ತಿಂಗಳಿನಲ್ಲಿ ಹೇಳಿದ್ದರು.


 • ನಮ್ಮ ಮಾಹಿತಿ ಏನಾಗುತ್ತಿದೆ..?

  ಇತ್ತೀಚಿನ ಸುದ್ದಿಗಳನ್ನು ಗಮನಿಸಿದರೆ ಇಂಟರ್‌ನೆಟ್‌ನಲ್ಲಿರುವ ನಮ್ಮ ಮಾಹಿತಿ ಏನಾಗುತ್ತದೆ ಎಂಬುದು ಗೊತ್ತಾಗಿರುತ್ತದೆ. ಫೇಸ್‌ಬುಕ್‌ನ ಕೇಂಬ್ರಿಡ್ಜ್‌ ಅನಾಲಿಟಿಕಾ ಮಾಹಿತಿ ಸೋರಿಕೆ, ಹ್ಯಾಕರ್‌ಗಳಿಂದ ಮಾಹಿತಿ ಹ್ಯಾಕ್‌, ದುಡ್ಡಿಗಾಗಿ ಮಾಹಿತಿ ಮಾರಾಟ ಹೀಗೆ ಹತ್ತು ಹಲವು ರೀತಿಯಲ್ಲಿ ನಮ್ಮ ವೈಯಕ್ತಿಕ ಮಾಹಿತಿ ಯಾರ ಕೈಗೋ ಸೇರುತ್ತಿರುವುದಂತೂ ಸತ್ಯ. ಗೂಗಲ್‌ ತನ್ನ ಗೂಗಲ್‌ ಪ್ಲಸ್‌ ಸಾಮಾಜಿಕ ಜಾಲತಾಣವನ್ನು ಸ್ಥಗಿತಗೊಳಿಸಿದ್ದು, ಬಳಕೆದಾರರ ಮಾಹಿತಿ ಹ್ಯಾಕ್‌ ಆಗಿದೆಯೆಂಬುದನ್ನು ಸಹ ನೆನಪಿನಲ್ಲಿಟ್ಟುಕೊಳ್ಳಬೇಕು.
ಟೆಕ್‌ ಲೋಕದಲ್ಲಿ ಸಾಲು ಸಾಲು ಮಾಹಿತಿ ಸೋರಿಕೆಯ ಹಗರಣಗಳು ಬಯಲಿಗೆ ಬರುತ್ತಿವೆ. ಫೇಸ್‌ಬುಕ್‌ ಮತ್ತು ಗೂಗಲ್‌ನಂತಹ ಕಂಪನಿಗಳು ಹ್ಯಾಕಿಂಗ್‌ ಹಗರಣಗಳ ಬಗ್ಗೆ ತಲೆ ಕೆಡಿಸಿಕೊಂಡಂತಿಲ್ಲ. ಆದರೆ, ಮೈಕ್ರೊಸಾಫ್ಟ್‌ ಸಿಇಒ ಸತ್ಯ ನಾದೆಲ್ಲಾರ ಹೇಳಿಕೆ ಟೆಕ್‌ ಲೋಕದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಟೆಕ್‌ ಜಗತ್ತಿನಲ್ಲಿ ನಿಜವಾಗಲೂ ಏನು ನಡೆಯುತ್ತಿದೆ ಎಂಬುದನ್ನು ಜನರು ಊಹಿಸುವುದು ಕೂಡ ಕಷ್ಟವಾಗಿದೆ.

ಹೌದು, ಇತರೆ ಕಂಪನಿಗಳಂತೆ ನಮ್ಮ ಕಂಪನಿ ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಲಾಭಕ್ಕೆ ಬಳಸಿಕೊಳ್ಳುವುದಿಲ್ಲ ಎಂದು ಮೈಕ್ರೊಸಾಫ್ಟ್‌ ಸಿಇಒ ಸತ್ಯ ನಾದೆಲ್ಲಾ ಹೇಳಿದ್ದಾರೆ. ಈ ಹೇಳಿಕೆ ಗೂಗಲ್‌ ಮತ್ತು ಫೇಸ್‌ಬುಕ್‌ಗೆ ನುಂಗಲಾರದ ತುತ್ತಾಗಿದೆ. ಈ ಹೇಳಿಕೆಯಿಂದ ವಿಶ್ವದ ದಿಗ್ಗಜ ಟೆಕ್‌ ಕಂಪನಿಗಳು ಗ್ರಾಹಕರ ಮಾಹಿತಿಯನ್ನು ಮಾರಿಕೊಳ್ಳುತ್ತಿವೆ ಎಂಬುದು ಪರೋಕ್ಷವಾಗಿ ಗೊತ್ತಾಗಿದೆ. ಹಾಗಾದ್ರೆ ನಮ್ಮ ವೈಯಕ್ತಿಕ ಮಾಹಿತಿಗೆ ಯಾವುದೇ ರಕ್ಷಣೆಯಿಲ್ಲ ಎನ್ನುವುದು ಸಾಬೀತಾಗಿದೆ.

   
 
ಹೆಲ್ತ್