Back
Home » ಇತ್ತೀಚಿನ
ಪರಿಸರಕ್ಕೆ ಮಾರಕ ಇ-ತ್ಯಾಜ್ಯ..! ಇ-ತ್ಯಾಜ್ಯದ ಬಗ್ಗೆ ನಿಮಗೆಷ್ಟು ಗೊತ್ತು..?
Gizbot | 9th Nov, 2018 10:50 AM
 • ಪರಿಸರಕ್ಕೆ ಹಾನಿ ಏನು..?

  ಇ-ತ್ಯಾಜ್ಯದಲ್ಲಿ ಸೀಸ, ಪಾದರಸ,ಆರ್ಸೆನಿಕ್‌, ಕ್ಯಾಡ್ಮಿಯಂನಂತಹ ಕ್ಯಾನ್ಸರ್‌ಕಾರಕ ಅಂಶಗಳು ಇವೆ. ಇವು ಶೇ.38ರಷ್ಟು ರಾಸಾಯನಿಕ ವಸ್ತುಗಳಿಂದ ಮಾಡಲ್ಪಟ್ಟಿರುವುದರಿಂದ ಪರಿಸರಕ್ಕೆ ಬಹಳಷ್ಟು ಹಾನಿಯನ್ನುಂಟು ಮಾಡುತ್ತವೆ. ಅನಿಯಂತ್ರಿತ ಸುಡುವಿಕೆ, ನಿಸಂಯೋಜನೆ ಮತ್ತು ಬಿಸಾಡುವಿಕೆಯಿಂದ ಅನೇಕ ಪರಿಸರ ತೊಂದರೆಗಳು ಉಂಟಾಗುತ್ತವೆ. ಅಂತರ್ಜಲ, ವಾತಾವರಣ ಕಲುಷಿತಗೊಳ್ಳುವುದು, ಬಿಸಾಡುವುದರಿಂದ ಜಲಮಾಲಿನ್ಯ, ಸುಡುವುದರಿಂದ ವಾಯುಮಾಲಿನ್ಯ ಮತ್ತು ಸಂಸ್ಕರಣೆಯಲ್ಲಿ ಭಾಗಿಯಾಗುವ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.


 • ಭಾರತ 5ನೇಯ ದೇಶ

  ಇಡೀ ವಿಶ್ವದಲ್ಲಿ ಭಾರತ ಇ-ತ್ಯಾಜ್ಯ ಉತ್ಪಾದನೆಯಲ್ಲಿ 5ನೇ ದೊಡ್ಡ ದೇಶವಾಗಿ ಹೊರಹೊಮ್ಮಿದೆ. ಪ್ರತಿ ವರ್ಷ ಸುಮಾರು 18.5 ಲಕ್ಷ ಟನ್‌ ಇ-ತ್ಯಾಜ್ಯವನ್ನು ಭಾರತ ಉತ್ಪಾದಿಸುತ್ತದೆ ಎಂಬುದನ್ನು ಅಧ್ಯಯನದ ವರದಿಯೊಂದು ಹೇಳುತ್ತದೆ.


 • ಯಾವುದು ಜಾಸ್ತಿ..?

  ಭಾರತದಲ್ಲಿ ಕಂಪ್ಯೂಟರ್‌ ಡಿವೈಸ್‌ಗಳು ಇ-ತ್ಯಾಜ್ಯಕ್ಕೆ ಭಾರೀ ಕೊಡುಗೆದಾರರಾಗಿವೆ. ಅಂದರೆ, ಶೇ.70ರಷ್ಟು ಕಂಪ್ಯೂಟರ್‌ ಡಿವೈಸ್‌ಗಳು ಇ-ತ್ಯಾಜ್ಯವಾಗುತ್ತವೆ. ಟೆಲಿಕಾಂ ಸೆಕ್ಟರ್‌ ಅಂದರೆ, ಸ್ಮಾರ್ಟ್‌ಫೋನ್‌, ಸಿಮ್‌ಗಳು ಶೇ.12ರಷ್ಟು, ವೈದ್ಯಕೀಯ ಉಪಕರಣಗಳು ಶೇ.8ರಷ್ಟು, ವಿದ್ಯುತ್‌ ಉಪಕರಣಗಳು ಶೇ.7ರಷ್ಟು ವಾರ್ಷಿಕ ಇತ್ಯಾಜ್ಯದಲ್ಲಿ ತಮ್ಮ ಪಾಲನ್ನು ಹೊಂದಿವೆ.


 • ಶೇ.25ರಷ್ಟು ಮೊಬೈಲ್‌ ಇ-ತ್ಯಾಜ್ಯ

  ವಾರ್ಷಿಕವಾಗಿ ಮೊಬೈಲ್‌ ಬಳಕೆದಾರರ ಸಂಖ್ಯೆ ಹೆಚ್ಚುತ್ತಲೆ ಇದೆ. ಸದ್ಯ ಭಾರತದಲ್ಲಿ 100 ಕೋಟಿಗೂ ಹೆಚ್ಚು ಮೊಬೈಲ್‌ಗಳು ಬಳಕೆಯಲ್ಲಿದ್ದು, ಅದರಲ್ಲಿ ವಾರ್ಷಿಕ ಶೇ.25ರಷ್ಟು ಮೊಬೈಲ್‌ಗಳು ಇ-ತ್ಯಾಜ್ಯಗಳಾಗುತ್ತವೆ ಎಂದರೆ ನಂಬಲೇಬೇಕು. ಮಾರುಕಟ್ಟೆಗೆ ದಿನಕ್ಕೊಂದರಂತೆ ಹೊಸ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುತ್ತಿದ್ದು, ಜನರು ಸಹ ಅವುಗಳಿಗೆ ಮಾರುಹೋಗಿ ಹಳೇ ಫೋನ್‌ಗಳನ್ನು ಇ-ತ್ಯಾಜ್ಯ ಮಾಡುತ್ತಿದ್ದಾರೆ.


 • ಸರ್ಕಾರ, ಬೃಹತ್ ಕಂಪನಿಗಳ ಪಾಲು ಜಾಸ್ತಿ..!

  ಭಾರತದಲ್ಲಿ ವ್ಯಾಪಕವಾಗಿ ಇ-ತ್ಯಾಜ್ಯ ಹೆಚ್ಚಾಗಲು ಸರ್ಕಾರ, ಸರ್ಕಾರಿ ಸ್ವಾಮ್ಯದ ಕಂಪನಿಗಳು ಮತ್ತು ಖಾಸಗಿ ಕಂಪನಿಗಳು ಕಾರಣವಾಗಿವೆ. ಇವು ಮೂರುಗಳಿಂದ ಶೇ.75ರಷ್ಟು ಇ-ತ್ಯಾಜ್ಯ ಭಾರತದಲ್ಲಿ ಉತ್ಪಾದನೆಯಾಗುತ್ತಿದೆ. ಮನೆಯಿಂದ ಉತ್ಪಾದನೆಯಾಗುವ ಇ-ತ್ಯಾಜ್ಯದ ಪ್ರಮಾಣ ಶೇ.16ರಷ್ಟು ಎಂದರೆ ನಂಬಲೆಬೇಕು.


 • ಮಹಾರಾಷ್ಟ್ರ ಫಸ್ಟ್..!

  ಭಾರತದಲ್ಲಿ ಇ-ತ್ಯಾಜ್ಯ ಹೆಚ್ಚು ಉತ್ಪಾದನೆಯಾಗುವುದು ಮಹಾರಾಷ್ಟ್ರದಲ್ಲಿ ಎಂದು ASSOCHAM ಮತ್ತು IT ಸಂಸ್ಥೆ NEC Technologiesಯ ಜಂಟಿ ಅಧ್ಯಯನ ಹೇಳಿದೆ. ಮಹಾರಾಷ್ಟ್ರ ಶೇ.19.8ರಷ್ಟು ಇ-ತ್ಯಾಜ್ಯ ಉತ್ಪಾದಿಸಿದರೆ, ನಂತರದ ಸ್ಥಾನಗಳಲ್ಲಿ ತಮಿಳುನಾಡು ಶೇ.13, ಉತ್ತರಪ್ರದೇಶ ಶೇ.10.1, ಪಶ್ಚಿಮ ಬಂಗಾಳ ಶೇ.9.8, ದೆಹಲಿ ಶೇ.9.5, ಕರ್ನಾಟಕ ಶೇ.8.9, ಗುಜರಾತ್‌ ಶೇ.8.8 ಮತ್ತು ಮಧ್ಯಪ್ರದೇಶ ಶೇ.7.6ರಷ್ಟು ಇ-ತ್ಯಾಜ್ಯವನ್ನು ಉತ್ಪಾದಿಸುತ್ತವೆ.


 • ಮುಂಬೈ ಪ್ರಥಮ, ಬೆಂಗಳೂರು ತೃತೀಯ

  ಇ-ತ್ಯಾಜ್ಯ ಉತ್ಪಾದನೆಯಲ್ಲಿ ಮಹಾರಾಷ್ಟ್ರ ರಾಜ್ಯಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಹೊಂದಿದ್ದರೆ, ಅದರ ರಾಜಧಾನಿ ಮುಂಬೈ ನಗರಗಳ ಸ್ಥಾನದಲ್ಲಿ ಮೊದಲ ಸ್ಥಾನ ಹೊಂದಿದೆ. ಮುಂಬೈ ನಂತರ ನವದೆಹಲಿ ಎರಡನೇ ಸ್ಥಾನ ಪಡೆದಿದ್ದರೆ, ಉದ್ಯಾನ ನಗರಿ ಬೆಂಗಳೂರು ಮೂರನೇ ಅತಿದೊಡ್ಡ ಇ-ತ್ಯಾಜ್ಯ ಕೊಡುಗೆದಾರನಾಗಿದೆ. ಚೆನ್ನೈ ನಾಲ್ಕನೇ ಸ್ಥಾನದಲ್ಲಿದೆ.


 • ಪರಿಹಾರ..?

  ಇ-ತ್ಯಾಜ್ಯ ಸಮಸ್ಯೆಗೆ ಪರಿಹಾರ ಎಂದರೆ ಮರು ಬಳಕೆ ಮಾತ್ರ. ಇ-ತ್ಯಾಜ್ಯಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಿ ಮರುಬಳಕೆ ಮಾಡಲು ಉಪಯೋಗಿಸಿದರೆ, ಇ-ತ್ಯಾಜ್ಯ ಸಮಸ್ಯೆ ನಿಯಂತ್ರಣವಾಗುತ್ತದೆ. ಭಾರತದಲ್ಲಿ ದೆಹಲಿ ಮತ್ತು ಬೆಂಗಳೂರಿನಲ್ಲಿ ಇ-ತ್ಯಾಜ್ಯ ಮರು ಸಂಸ್ಕರಣ ಘಟಕಗಳು ತಲೆಯೆತ್ತಿದ್ದು, ಇ-ತ್ಯಾಜ್ಯ ಸಮಸ್ಯೆಗೆ ಪರಿಹಾರ ಹುಡುಕುತ್ತಿವೆ.


 • ಚೀನಾ ಮಾದರಿ..!

  ಇ-ತ್ಯಾಜ್ಯ ನಿರ್ವಹಣೆಗೆ ಚೀನಾ ಮಾದರಿಯೆಂದು ತಜ್ಞರು ಹೇಳುತ್ತಾರೆ. ಚೀನಾ ಮತ್ತು ಸಿಂಗಾಪುರದಲ್ಲಿ ಇ-ತ್ಯಾಜ್ಯವನ್ನು ವೈಜ್ಞಾನಿಕ ವಿಂಗಡಣೆ ಮಾಡಿ ಮರುಬಳಕೆ ಮಾಡಲಾಗುತ್ತದೆ. ಅದಲ್ಲದೇ ಅಲ್ಲಿನ ಕಾರ್ಮಿಕರ ದಕ್ಷತೆಯೂ ಉತ್ತಮವಾಗಿದ್ದು, ದಿನಕ್ಕೆ 800 ಕೆ.ಜಿಯಷ್ಟು ತ್ಯಾಜ್ಯವನ್ನು ಕಾರ್ಮಿಕನೊಬ್ಬ ವಿಂಗಡಿಸುತ್ತಾನಂತೆ.
ಹೊಸ ಫೋನ್‌ ಖರೀದಿಸಿದ್ದು ಆಯ್ತು, ಹಳೇ ಫೋನ್‌ ಏನ್ಮಾಡೋದು ಅಂತ ಯೋಚನೆ ಮಾಡಿ, ಉಪಯೋಗಕ್ಕೆ ಬರಲ್ಲ ಅಂದ್ರೇ ಬಿಸಾಕ್ತಿರಿ. ಅದರಂತೆ ಕಂಪ್ಯೂಟರ್‌ ಕೂಡ. ಹೀಗೆ ಬಳಕೆಗೆ ಯೋಗ್ಯವಿಲ್ಲ ಎಂದು ಎಸೆಯುವ ಎಲೆಕ್ಟ್ರಾನಿಕ್‌ ವಸ್ತುಗಳು ಪರಿಸರಕ್ಕೆ ಎಷ್ಟರ ಮಟ್ಟಿಗೆ ಹಾನಿ ಮಾಡುತ್ತವೆ ಎಂಬುದನ್ನು ಯಾರು ಯೋಚನೆ ಮಾಡುವುದಿಲ್ಲ.

ಹೌದು, ಮೊಬೈಲ್‌, ಕಂಪ್ಯೂಟರ್‌, ಟಿವಿ ಇತ್ಯಾದಿ ಎಲೆಕ್ಟ್ರಾನಿಕ್‌ ವಸ್ತುಗಳ ತ್ಯಾಜ್ಯದ ಸಮಸ್ಯೆ ಇಡೀ ಜಗತ್ತಿನ ತಲೆನೋವಾಗಿದೆ. ಇದು ಪರಿಸರಕ್ಕೆ ಭಾರೀ ಹಾನಿಯನ್ನುಂಟು ಮಾಡುತ್ತದೆ. ಎಲೆಕ್ಟ್ರಾನಿಕ್‌ ವಸ್ತುಗಳು ಹೆಚ್ಚು ಪ್ಲಾಸ್ಟಿಕ್‌, ಅಲ್ಯೂಮಿನಿಯಂ, ತಾಮ್ರ, ರಾಸಾಯನಿಕದಂತಹ ಅನೇಕ ಅಂಶಗಳನ್ನು ಹೊಂದಿರುವುದರಿಂದ ಎಲ್ಲೆಂದರಲ್ಲಿ ಬೀಸಾಡುವುದರಿಂದ ಪರಿಸರಕ್ಕೆ ನೇರ ಹಾನಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸದ್ಯ, ದೇಶದಲ್ಲಿ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಈ ಸಲ ಸುಪ್ರಿಂ ಕೋರ್ಟ್‌ ಪಟಾಕಿ ಹೊಡೆಯಲು ಸಮಯ ಫಿಕ್ಸ್‌ ಮಾಡಿ ಪರಿಸರ ರಕ್ಷಣೆಗೆ ಮುಂದಾಗಿದೆ. ಪರಿಸರ ಮಾಲಿನ್ಯಕ್ಕೆ ಪಟಾಕಿ ಒಂದೇ ಕಾರಣ ಎಂದರೇ ಯಾರು ನಂಬಲ್ಲ. ಆದರೆ, ಪರಿಸರದ ರಕ್ಷಣೆಗೆ ಈ ಕ್ರಮ ಅನಿವಾರ್ಯ. ಇದರ ಜತೆ ವಾಹನಗಳು, ಕಾರ್ಖಾನೆಗಳು, ಕೃಷಿ ಮತ್ತು ಎಲೆಕ್ಟಾನಿಕ್‌ ವಸ್ತುಗಳು ಪರಿಸರ ಮಾಲಿನ್ಯಕ್ಕೆ ಭಾರೀ ಕೊಡುಗೆಯನ್ನು ನೀಡುತ್ತಿವೆ. ಅದರಂತೆ, ನಾವು ತಂತ್ರಜ್ಞಾನಕ್ಕೆ ಸಂಬಂಧಿಸಿದ ಇ-ತ್ಯಾಜ್ಯವನ್ನು ಮಾತ್ರ ಗಮನಿಸುವುದಾದರೆ, ಭಾರತದಲ್ಲಿ ಎಷ್ಟು ಇ-ತ್ಯಾಜ್ಯ ಉತ್ಪಾದನೆಯಾಗುತ್ತದೆ..? ಇ-ತ್ಯಾಜ್ಯದಿಂದಾಗುವ ಸಮಸ್ಯೆಗಳೇನು..? ಹೇಗೆ ನಿರ್ವಹಣೆ ಮಾಡಬಹುದು ಎಂಬುದನ್ನು ಮುಂದೆ ವಿವರಿಸಲಾಗಿದೆ.

   
 
ಹೆಲ್ತ್