ಚೀನಾದ ಇ-ಕಾಮರ್ಸ್ ದಿಗ್ಗಜ ಅಲಿಬಾಬಾ ತನ್ನ ವಾರ್ಷಿಕ ಆನ್ಲೈನ್ ಶಾಪಿಂಗ್ ಸೇಲ್ನಲ್ಲಿ ಕೇವಲ 5 ನಿಮಿಷದಲ್ಲಿ 3 ಬಿಲಿಯನ್ ಡಾಲರ್ಸ್( ಅಂದಾಜು 21,744 ಕೋಟಿ) ವ್ಯವಹಾರ ನಡೆಸಿ ದಾಖಲೆ ನಿರ್ಮಿಸಿದೆ. ಕಳೆದ ವರ್ಷ ಒಂದು ದಿನದ ಅವಧಿಯಲ್ಲಿ 25 ಬಿಲಿಯನ್ ಡಾಲರ್ ವ್ಯವಹಾರ ನಡೆಸಿದ್ದ ಅಲಿಬಾಬ ಈ ವರ್ಷ ಮತ್ತೊಂದು ದಾಖಲೆ ವ್ಯವಹಾರ ನಡೆಸಿ ಗಮನಸೆಳೆದಿದೆ.
ಇಲ್ಲಿನ ಬಿಗ್ಬಿಲಿಯನ್ ಡೇಸ್ ಹಾಗೂ ಗ್ರೇಟ್ ಫೆಸ್ಟಿವಲ್ಗಳಂತೆ ಚೀನಾದಲ್ಲಿ ಪ್ರತಿ ವರ್ಷ ಸಿಂಗಲ್ಸ್ ಡೇ ಆಚರಿಸಲಾಗುತ್ತದೆ. ಈ ಸಿಂಗಲ್ಸ್ ಡೇ ಸೇಲ್ನ ಮೊದಲ 5 ನಿಮಿಷದಲ್ಲಿ ಮೂರು ಬಿಲಿಯನ್ ಡಾಲರ್(21 ಸಾವಿರ ಕೋಟಿ) ವ್ಯವಹಾರ ನಡೆದಿದ್ದು, ಮೊದಲ 1 ನಿಮಿಷ 25 ಸೆಕೆಂಡ್ಗಳಲ್ಲೇ 1 ಬಿಲಿಯನ್ ಡಾಲರ್ (7,250 ಕೋಟಿ)ಗಳಿಸಿರುವುದಾಗಿ ಅಲಿಬಾಬ ಸಂಸ್ಥೆ ತಿಳಿಸಿದೆ.
ಅಲಿಬಾಬ ಕಂಪೆನಿ ಪ್ರತಿವರ್ಷದ ನವೆಂಬರ್ 11 ರಂದು ಸಿಂಗಲ್ಸ್ ಡೇ ಆಚರಿಸುತ್ತಿದ್ದು, ಚೀನಾ ಸೇರಿದಂತೆ ವಿಶ್ವದೆಲ್ಲೆಡೇ ಈ ಸಿಂಗಲ್ಸ್ ಡೇ ಮಾರಾಟ ಮೇಳವನ್ನು ಹಮ್ಮಿಕೊಳ್ಳುತ್ತದೆ. ಈ ವರ್ಷದ ಸಿಂಗಲ್ಸ್ ಡೇ ಸೇಲ್ನಲ್ಲಿ ಲಾಸ್ ಏಂಜಲೀಸ್, ಟೋಕಿಯೋ ಮತ್ತು ಫ್ರಾಂಕ್ಫರ್ಟ್ ನಗರಗಳಲ್ಲಿ ಹೆಚ್ಚಿನ ಸರಕುಗಳು ಮಾರಾಟವಾಗಿವೆ ಎಂದು ಅಲಿಬಾಬ ಸಂಸ್ಥೆ ತಿಳಿಸಿದೆ.
ಕೇವಲ 5 ನಿಮಿಷದಲ್ಲಿ 3 ಬಿಲಿಯನ್ ಡಾಲರ್ಸ್( ಅಂದಾಜು 21,744 ಕೋಟಿ) ವ್ಯವಹಾರ ನಡೆಸಿರುವ ಅಲಿಬಾಬ, ಮೊದಲ 1 ನಿಮಿಷ 25 ಸೆಕೆಂಡ್ಗಳಲ್ಲೇ 1 ಬಿಲಿಯನ್ ಡಾಲರ್ (7,250 ಕೋಟಿ) ಹಾಗೂ 1 ಗಂಟೆಯಲ್ಲಿ 10 ಬಿಲಿಯನ್ ಡಾಲರ್ (72,480 ಕೋಟಿ) ವ್ಯವಹಾರ ನಡೆಸಿದೆ. ಇದು ಅಲಿಬಾಬ ಇತಿಹಾಸದಲ್ಲೇ ಮೊದಲು ಎಂಬುದನ್ನು ಸಹ ಅಲಿಬಾಬ ಸ್ಪಷ್ಟಪಡಿಸಿದೆ.
ಇನ್ನು ಅಲಿಬಾಬಾ ಗ್ರೂಪ್ ಕಾರ್ಯನಿರ್ವಾಹಕ ಅಧ್ಯಕ್ಷರಾದ ಜ್ಯಾಕ್ ಮಾ ಅವರು ಕೂಡ ಈ ದಾಖಲೆ ಮಾರಾಟದ ಸಮಯಕ್ಕೆ ಸಾಕ್ಷಿಯಾಗಿದ್ದಾರೆ. ಇತ್ತೀಚಿಗಷ್ಟೇ ಅಲಿಬಾಬದಿಂದ ನಿವೃತ್ತಿ ತೆಗೆದುಕೊಳ್ಳುವುದಾಗಿ ತಿಳಿಸಿರುವ ಜಾಕ್ ಮಾ ಅವರು, ಗ್ಲೋಬಲ್ ಶಾಪಿಂಗ್ ಫೆಸ್ಟಿವಲ್ ಆರಂಭದ ಸಮಯ ರಾತ್ರಿ 11.11ಕ್ಕೆ ಉಪಸ್ಥಿತರಿದ್ದು, ಸಿಂಗಲ್ಸ್ ಡೇ ಕೌಂಟ್ಡೌನ್ಗೆ ಸಾಕ್ಷಿಯಾದರು.