Back
Home » ಆರೋಗ್ಯ
ರಾತ್ರಿ ಮಲಗುವ ಮುನ್ನ ಇಂತಹ ಆಹಾರಗಳನ್ನು ತಿಂದರೆ, ಆರೋಗ್ಯ ವೃದ್ಧಿಯಾಗುತ್ತದೆ!
Boldsky | 16th Nov, 2018 11:05 AM
 • ಆಯುರ್ವೇದದ ಪ್ರಕಾರ

  ಆಯುರ್ವೇದದ ಪ್ರಕಾರ, ರಾತ್ರಿಯ ಊಟದಲ್ಲಿ ನಾವು ಹೆಚ್ಚು ಜಾಗರೂಕರಾಗಿರಬೇಕು. ಇದು ದಿನದ ಅಂತಿಮ ಆಹಾರವಾದ ಕಾರಣ ಇದನ್ನು ಸೂಕ್ತ ಸಮಯಕ್ಕೆ ಮತ್ತು ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಅಗತ್ಯವಾಗಿದೆ. ಅಷ್ಟೇ ಅಲ್ಲ, ರಾತ್ರಿಯೂಟಕ್ಕೆ ಸೂಕ್ತವಾದ ಆಹಾರವನ್ನು ಆಯ್ದುಕೊಳ್ಳುವುದೂ ಅಷ್ಟೇ ಮುಖ್ಯವಾಗಿದೆ. ಆಯುರ್ವೇದದ ಪ್ರಕಾರ ದಿನದ ಅಂತಿಮ ಘಂಟೆಗಳಲ್ಲಿ 'ಕಫ' ಪ್ರಕೃತಿ ಪ್ರಾಬಲ್ಯವನ್ನು ಹೊಂದಿರುತ್ತದೆ ಹಾಗೂ ಈ ಸಮಯದಲ್ಲಿ ಸೇವಿಸುವ ಆಹಾರ ಕಫವನ್ನು ಸಮತೋಲನದಲ್ಲಿರಿಸಬೇಕೇ ಹೊರತು ಇದನ್ನು ಹೆಚ್ಚಿಸಬಾರದು.

  Most Read: ರಾತ್ರಿ ಊಟದ ನಂತರ ಅಪ್ಪಿತಪ್ಪಿಯೂ ಹೀಗೆಲ್ಲಾ ಮಾಡಬೇಡಿ!


 • ಕಫ ದೋಷವನ್ನು ಹೆಚ್ಚಿಸುವ ಆಹಾರಗಳು

  ಕೆಲವು ಆಹಾರಗಳು ಕಫ ದೋಷವನ್ನು ಹೆಚ್ಚಿಸುವ ಗುಣವನ್ನು ಹೊಂದಿದ್ದು ದೇಹದಲ್ಲಿ ಅಸಮತೋಲನವನ್ನುಂಟು ಮಾಡುವುದರಿಂದ ಈ ಆಹಾರಗಳನ್ನು ರಾತ್ರಿಯ ವೇಳೆ ಸೇವಿಸದಿರುವಂತೆ ಆಯುರ್ವೇದ ಸೂಚಿಸುತ್ತದೆ. ಸಿದ್ಧ ಆಹಾರಗಳು, ಎಣ್ಣೆಯುಕ್ತ ಆಹಾರಗಳು, ಮಾಂಸಾಹಾರ, ಘನೀಕೃತ ಆಹಾರಗಳು, ಜೀರ್ಣಗೊಳ್ಳಲು ಕಠಿಣವಾದ ಆಹಾರಗಳು, ಮೊಸರು, ಐಸ್ ಕ್ರೀಂ ಮೊದಲಾದವುಗಳನ್ನು ರಾತ್ರಿ ಹೊತ್ತು ತಿನ್ನಬಾರದು. ಒಂದು ವೇಳೆ ಇವುಗಳನ್ನು ಸೇವಿಸಲೇಬೇಕಾದ ಸಂದರ್ಭ ಎದುರಾದರೆ ಇವುಗಳ ಪ್ರಮಾಣ ಅಲ್ಪವಾಗಿರಬೇಕು. ಇವುಗಳ ಪ್ರಮಾಣ ಹೆಚ್ಚಾದಷ್ಟೂ ದೇಹದಲ್ಲಿ ಅಸಮತೋಲನವೂ ಹೆಚ್ಚುತ್ತದೆ ಹಾಗೂ ದೇಹದಲ್ಲಿ ಕೆಲವೊಂದು ತೊಂದರೆಗಳು ಎದುರಾಗಬಹುದು.


 • ಇವುಗಳಲ್ಲಿ ಪ್ರಮುಖವಾದವು ಎಂದರೆ

  * ತೂಕದಲ್ಲಿ ಏರಿಕೆ
  * ಬೆಳಿಗ್ಗೆದ್ದಾಗ ಕಾಣಿಸಿಕೊಳ್ಳುವ ಸೋರುವ ಮೂಗು
  * ಕೆಮ್ಮು ಮತ್ತು ಶೀತ. ಒಂದು ವೇಳೆ ಈಗಾಗಲೇ ಕೆಮ್ಮು ಶೀತ ಇದ್ದರೆ ಇದು ಇನ್ನಷ್ಟು ಉಲ್ಬಣಗೊಳ್ಳಬಹುದು
  * ವಾಕರಿಕೆ
  * ಅಜೀರ್ಣತೆ
  * ಬೆಳಗ್ಗಿನ ಸಮಯದಲ್ಲಿ ಬಾಯಿಯಲ್ಲಿ ಹೆಚ್ಚುವ ಲಾಲಾರಸ
  * ವಿವಿಧ ಅಲರ್ಜಿಗಳು


 • ದೇಹದಲ್ಲಿ ವಿಷಕಾರಿ ವಸ್ತುಗಳ ಸಂಗ್ರಹ ಹೆಚ್ಚುತ್ತದೆ

  ರಾತ್ರಿಯ ವೇಳೆ ತಿನ್ನಬಾರದ ಆಹಾರಗಳನ್ನು ಸೇವಿಸುವ ಮೂಲಕ ಎದುರಾಗುವ ಪರಿಣಾಮಗಳಿಂದ ದೇಹದಲ್ಲಿ ವಿಷಕಾರಿ ವಸ್ತುಗಳ ಸಂಗ್ರಹ ಹೆಚ್ಚುತ್ತದೆ ಹಾಗೂ ಈ ಮೂಲಕ ಕೆಲವಾರು ಅನಾರೋಗ್ಯಗಳು ಎದುರಾಗುತ್ತವೆ.
  ಒಂದು ವೇಳೆ ನೀವು ಈಗಾಗಲೇ ಬೇರಾವುದೋ ಅನಾರೋಗ್ಯ ಹೊಂದಿದ್ದರೆ ಈ ಕ್ಷಣದಿಂದಲೇ ನಿಮ್ಮ ಆರೋಗ್ಯದ ಕಾಳಜಿಯನ್ನು ವಹಿಸತೊಡಗುವುದು ಅಗತ್ಯ. ಕೆಲವೊಮ್ಮೆ, ಆಹಾರಕ್ರಮದಲ್ಲಿ ಆಗುವ ಕೊಂಚ ಬದಲಾವಣೆ ಸಹಾ ಆರೋಗ್ಯದ ಮೇಲೆ ಭಾರೀ ಪ್ರಮಾಣದ ಪ್ರಭಾವ ಬೀರುತ್ತದೆ ಹಾಗೂ ಆಶ್ಚರ್ಯಕರ ರೀತಿಯಲ್ಲಿ ಆರೋಗ್ಯ ಉತ್ತಮಗೊಳ್ಳುತ್ತದೆ.

  Most Read: ರಾತ್ರಿ ಸೇವಿಸಬಹುದಾದ ಉತ್ತಮ ಆಹಾರಗಳ ಪಟ್ಟಿ ಇಲ್ಲಿದೆ ನೋಡಿ...


 • ಹಾಗಾದರೆ ರಾತ್ರಿಯೂಟದಲ್ಲಿ ಏನನ್ನು ಸೇವಿಸಬೇಕು?

  ಈ ಕ್ಷಣದಲ್ಲಿ ನಿಮ್ಮ ಮನದಲ್ಲಿ ನೀವು ಇದುವರೆಗೆ ರಾತ್ರಿಯ ಸಮಯದಲ್ಲಿ ಸೇವಿಸುತ್ತಿದ್ದ ಆಹಾರದ ಬಗ್ಗೆ ಅನುಮಾನ ಮೂಡಿದ್ದು ಇನ್ನು ಮುಂದೆ ಯಾವ ಆಹಾರವನ್ನು ಸೇವಿಸಿದರೆ ಉತ್ತಮ ಎಂದು ಯೋಚಿಸುತ್ತಿದ್ದರಬಹುದು. ಅಲ್ಲವೇ? ಚಿಂತಿಸದಿರಿ, ಈ ಪ್ರಶ್ನೆಗೆ ಆಯುರ್ವೇದ ಸರಳ ಉಪಾಯವನ್ನು ಒದಗಿಸಿದೆ.


 • ಜೀರ್ಣವಾಗುವ ಆಹಾರಗಳನ್ನು ಸೇವಿಸಿ

  ರಾತ್ರಿಯೂಟದಲ್ಲಿ ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನು ಸೇವಿಸಲು ಸಲಹೆ ಮಾಡಲಾಗುತ್ತದೆ. ಈ ಊಟ ಕಡಿಮೆ ಕಾರ್ಬೋಹೈಡ್ರೇಟುಗಳನ್ನು ಹೊಂದಿದ್ದು ಸುಲಭವಾಗಿ ಜೀರ್ಣವಾಗುವಂತಿರಬೇಕು. ಒಂದು ವೇಳೆ ರಾತ್ರಿ ಮೊಸರನ್ನು ಸೇವಿಸುವ ಅಭ್ಯಾಸವಿದ್ದರೆ ಇದರ ಬದಲು ಮಜ್ಜಿಗೆಯನ್ನು ಸೇವಿಸಲು ಪ್ರಾರಂಭಿಸಿ. ಅನ್ನದ ಬದಲು ಚಪಾತಿಯನ್ನು ಸೇವಿಸಿ. ಇಡಿಯ ಗೋಧಿಯ ಹಿಟ್ಟಿನ ಚಪಾತಿಗಳು ಸುಲಭವಾಗಿ ಜೀರ್ಣವಾಗುತ್ತವೆ.


 • ರಾತ್ರಿಯ ಊಟದ ಪ್ರಮಾಣ ಹೆಚ್ಚಾಗದಿರಲಿ

  ಯಾವುದೇ ಕಾರಣಕ್ಕೂ ರಾತ್ರಿಯ ಊಟದ ಪ್ರಮಾಣ ಹೆಚ್ಚಾಗದಿರಲಿ, ಆಹಾರದ ಪ್ರಮಾಣ ಮಿತವಾಗಿರಲಿ.
  ಊಟದಲ್ಲಿ ಹೆಚ್ಚು ಹೆಚ್ಚು ಬೇಳೆ, ಹಸಿರು ಎಲೆಗಳು ಮತ್ತು ತರಕಾರಿಗಳು, ಬೇವಿನ ಎಲೆ ಮತ್ತು ಹಸಿಶುಂಠಿಯ ಚಿಕ್ಕ ತುಂಡೊಂದು ಇರಲಿ. ಊಟದಲ್ಲಿ ಉಪ್ಪು ಹೆಚ್ಚಿದ್ದಷ್ಟೂ ಇದನ್ನು ಹೊರಕಳಿಸಲು ದೇಹ ನೀರನ್ನು ಹಿಡಿದಿಡಬೇಕಾಗುತ್ತದೆ. ಹಾಗಾಗಿ ರಾತ್ರಿಯೂಟದಲ್ಲಿ ಉಪ್ಪು ಕನಿಷ್ಟ ಪ್ರಮಾಣದಲ್ಲಿರಲಿ.
  ಮಸಾಲೆ ವಸ್ತುಗಳು ದೇಹದ ತಾಪಮಾನವನ್ನು ಏರಿಸುತ್ತವೆ. ಹಾಗಾಗಿ ನಿಮ್ಮ ಆಹಾರದಲ್ಲಿ ಮಸಾಲೆ ವಸ್ತುಗಳು ಇಲ್ಲದಂತೆ ಅಥವಾ ಅತಿ ಕಡಿಮೆ ಇರುವಂತೆ ನೋಡಿಕೊಳ್ಳಿ.


 • ಸಕ್ಕರೆಯ ಪ್ರಮಾಣ

  ಊಟದಲ್ಲಿ ಸಕ್ಕರೆಯ ಪ್ರಮಾಣವೂ ಕನಿಷ್ಟವಾಗಿರಲಿ. ಸಕ್ಕರೆಯ ಬದಲು ಜೇನನ್ನು ಸೇವಿಸಿ. ಇದರಿಂದ ಗಂಟಲಿನಲ್ಲಿ ಕಫವಾಗುವುದನ್ನು ತಪ್ಪಿಸಬಹುದು. ಒಂದು ವೇಳೆ ರಾತ್ರಿ ಮಲಗುವ ಮುನ್ನ ಹಾಲು ಸೇವಿಸುವ ಅಭ್ಯಾಸವಿದ್ದರೆ ಈ ಹಾಲು ಕಡಿಮೆ ಕೊಬ್ಬಿನಿಂದ ಕೂಡಿರಲಿ. ಕುಡಿಯುವ ಮುನ್ನ ಸದಾ ಹಾಲನ್ನು ಕುದಿಸಿ ಕುಡಿಯಿರಿ. ಈ ಮೂಲಕ ಹಾಲನ್ನು ಜೀರ್ಣೀಸಿಕೊಳ್ಳುವುದು ಸುಲಭವಾಗುತ್ತದೆ. ಕುದಿಸುವ ಮುನ್ನ ಈ ಹಾಲಿಗೆ ಚಿಕ್ಕ ತುಂಡು ಹಸಿಶುಂಠಿ ಅಥವಾ ಏಲಕ್ಕಿಯೊಂದನ್ನು ಸೇರಿಸುವುದೂ ಒಳ್ಳೆಯದು, ಇದರಿಂದ ಗಂಟಲಿನಲ್ಲಿ ಕಫ ಸಂಗ್ರಹವಾಗುವುದನ್ನು ತಡೆಯಬಹುದು. ಎಂದಿಗೂ ತಣ್ಣನೆಯ ಹಾಲನ್ನು ಕುಡಿಯದಿರಿ. ಹಾಲು ಬೆಚ್ಚಗಿರುವಂತೆಯೇ ಕುಡಿಯಿರಿ. ರಾತ್ರಿಯ ಆಹಾರ ಹೇಗಿರಬೇಕು ಎಂದರೆ ಈ ಊಟ ಭಾರಿ ಅಥವಾ ಗಡದ್ದು ಎಂದು ನಮ್ಮ ದೇಹಕ್ಕೆ ಅನ್ನಿಸಬಾರದು. ಬದಲಿಗೆ ಊಟದ ಬಳಿಕವೂ ದೇಹ ಹಗುರವಾಗಿದ್ದಂತೆ ಅನ್ನಿಸುತ್ತಿದ್ದು ಮಲಗಿದ ತಕ್ಷಣವೇ ನಿದ್ದೆ ಬರುವಂತಿರಬೇಕು.

  Most Read: ನಿಮ್ಮ ನಿದ್ದೆಯನ್ನು ಹಾಳು ಮಾಡುವ ಆಹಾರಗಳಿವು!- ಆದಷ್ಟು ರಾತ್ರಿ ಹೊತ್ತು ಇವುಗಳನ್ನೆಲ್ಲಾ ತಿನ್ನಬೇಡಿ


 • ರಾತ್ರಿಯ ಊಟ ಸ್ಥೂಲಕಾಯಕ್ಕೆ ಕಾರಣವೇ?

  ಈ ಪ್ರಶ್ನೆಗೆ ಉತ್ತರ ನೀಡುವುದು ಕೊಂಚ ಕಷ್ಟ ಏಕೆಂದರೆ ಸ್ಥೂಲಕಾಯಕ್ಕೆ ಹಲವಾರು ಕಾರಣಗಳಿವೆ. ರಾತ್ರಿಯ ಊಟ ಹೆಚ್ಚಾದರೆ ಸ್ಥೂಲಕಾಯವೂ ಹೆಚ್ಚುವ ಸಾಧ್ಯತೆಯನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ. ರಾತ್ರಿಯ ನಿದ್ದೆಯ ಸಮಯದಲ್ಲಿ ಹಲವಾರು ಅನೈಚ್ಛಿಕ ಕಾರ್ಯಗಳು ನಡೆಯುತ್ತವೆ. ಆದರೆ ಐಚ್ಛಿಕ ಕಾರ್ಯಗಳಿಗಿಂತ (ನಡಿಗೆ, ದೈಹಿಕ ವ್ಯಾಯಾಮ ಇತ್ಯಾದಿ) ಕಡಿಮೆ ಶಕ್ತಿ ವ್ಯಯವಾಗುತ್ತದೆ. ಹಾಗಾಗಿ ರಾತ್ರಿಯ ಊಟ ಅಲ್ಪವಾಗಿದ್ದರೆ ಈ ಅನೈಚ್ಛಿಕ ಕಾರ್ಯಗಳು ಪೂರ್ಣವಾಗಿ ಜರುಗಲು ಬೇಕಾದಷ್ಟಾಯಿತು. ಹಾಗಾಗಿ ಅಗತ್ಯ ಪ್ರಮಾಣಕ್ಕೂ ಮೀರಿದ ಆಹಾರ ಸೇವನೆಯಿಂದ ಉತ್ಪತ್ತಿಯಾದ ಶಕ್ತಿ ದೇಹದಲ್ಲಿ ಕೊಬ್ಬಿನ ರೂಪದಲ್ಲಿ ಸಂಗ್ರಹಗೊಳ್ಳುತ್ತದೆ ಹಾಗೂ ಇದು ತೂಕದ ಹೆಚ್ಚಳಕ್ಕೆ ಕಾರಣವಾಗುತ್ತದೆ.


 • ರಾತ್ರಿಯೂಟ ಸರಳವಾಗಿರಲಿ

  ರಾತ್ರಿಯೂಟ ಸರಳವಾಗಿರಲಿ ಎಂದು ಕೇವಲ ಆಯುರ್ವೇದ ಮಾತ್ರ ಹೇಳುತ್ತಿಲ್ಲ, ಬದಲಿಗೆ ಆಧುನಿಕ ವಿಜ್ಞಾನವೂ ಹೇಳುತ್ತಿದೆ. ನಿಮ್ಮ ಆರೋಗ್ಯವನ್ನು ಉತ್ತಮಗೊಳಿಸಲು ಈ ಲೇಖನ ಸಾಕಷ್ಟು ಉಪಯುಕ್ತ ಮಾಹಿತಿ ನೀಡಿದೆ ಎಂದು ನಾವು ಭಾವಿಸುತ್ತೇವೆ. ನಿಮ್ಮ ಅನಿಸಿಕೆಗಳನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ನಮಗೆ ಖಂಡಿತಾ ತಿಳಿಸಿ.
ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಚೆನ್ನಾಗಿರಬೇಕೆಂದರೆ ನಾವು ಸೇವಿಸುವ ಆಹಾರವೂ ಚೆನ್ನಾಗಿಯೇ ಇರಬೇಕು. ಅಷ್ಟೇ ಅಲ್ಲ, ಆಹಾರ ಸೇವನೆಯ ಸಮಯವನ್ನು ಕ್ಲುಪ್ತಕಾಲದಲ್ಲಿ ನಿರ್ವಹಿಸುವುದೂ ದೇಹದ ಎಲ್ಲಾ ಚಟುವಟಿಕೆಗಳನ್ನು ಸರಿಯಾಗಿ ನಿರ್ವಹಿಸಲು ಅಗತ್ಯವಾಗಿದೆ.

ದಿನದ ಎಲ್ಲಾ ಆಹಾರಗಳಲ್ಲಿ ಬೆಳಗ್ಗಿನ ಉಪಾಹಾರವನ್ನು 'ಎಲ್ಲಾ ಊಟಗಳ ರಾಜ'ಎಂದು ಹೇಳಲಾಗುತ್ತದೆ. ಹೆಚ್ಚಿನ ಆಹಾರತಜ್ಞರೂ ಬೆಳಗ್ಗಿನ ಉಪಾಹಾರ ಸೇವಿಸುವುದಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಬೆಳಗ್ಗಿನ ಉಪಾಹಾರ ಅತ್ಯಮೂಲ್ಯವೇನೂ ಸರಿ, ಇದರರ್ಥ ಉಳಿದ ಸಮಯದ ಆಹಾರಗಳನ್ನು ಸೇವಿಸದೇ ಬಿಡಬಹುದೆಂದು ಸರ್ವಥಾ ಅರ್ಥವಲ್ಲ. ಸಾಮಾನ್ಯವಾಗಿ ರಾತ್ರಿ ಮಾಡುವ ಊಟದಿಂದಲೇ ಹೆಚ್ಚು ದಪ್ಪಗಾಗುತ್ತೇವೆ ಎಂದು ತಿಳಿದು ರಾತ್ರಿಯೂಟವನ್ನು ಮಾಡದೇ ಮಲಗುವವರಿದ್ದಾರೆ.

   
 
ಹೆಲ್ತ್