ಎಟಿಎಂನಲ್ಲಿ ಡೆಬಿಡ್ ಕಾರ್ಡ್ ಸ್ವೈಪ್ ಮಾಡುವ ಮೂಲಕ ಹಣ ಪಡೆಯುತ್ತಿದ್ದ ಕಾಲ ಇನ್ಮುಂದೆ ಮರೆಯಾಗಬಹುದು. ಏಕೆಂದರೆ, ಸಾರ್ವಜನಿಕರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಇನ್ಮುಂದೆ ಎಟಿಎಂಗಳಲ್ಲಿ ಹಣ ಪಡೆಯಲು ಡೆಬಿಟ್ ಕಾರ್ಡ್ ಬೇಕೆಂದಿಲ್ಲ. ಬದಲಾಗಿ, ಸ್ಮಾರ್ಟ್ಫೋನ್ ಮೂಲಕವೇ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಇನ್ಮುಂದೆ ಹಣ ಪಡೆಯಬಹುದಾಗಿದೆ.
ಹೌದು, ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಆಧಾರಿತ ಪರಿಹಾರದ ಮೂಲಕ ಕಾರ್ಡ್ ಅನ್ನು ಸ್ವೈಪ್ ಮಾಡುವ ಬದಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಹಣ ಪಡೆಯುವ ತಂತ್ರಜ್ಞಾನ ಅಭಿವೃದ್ದಿಯಾಗಿದೆ. ಇದನ್ನು ಎಲ್ಲಾ ಬ್ಯಾಂಕ್ ಎಟಿಎಂಗಳಲ್ಲಿ ಅಳವಡಿಸಲು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾದ ಅನುಮತಿಗಾಗಿ ನಿರೀಕ್ಷಿಸಲಾಗುತ್ತಿದೆ.
ಬ್ಯಾಂಕುಗಳಿಗೆ ಎಟಿಎಂ ಸೇವೆಗಳನ್ನು ಒದಗಿಸುವ ಕಂಪೆನಿ 'ಎಟಿಎಸ್ ಟ್ರಾನ್ಕ್ಯಾಕ್ಟ್ ಟೆಕ್ನಾಲಜೀಸ್' ಕಂಪೆನಿ, ಎಟಿಎಂಗಳಿಂದ ಹಣವನ್ನು ಪಡೆಯಲು ಯುಪಿಐ ವೇದಿಕೆ ಬಳಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿಯೊಂದು ತಿಳಿಸಿದೆ. ಈ ಬಗ್ಗೆ 'ಎಟಿಎಸ್ ಟ್ರಾನ್ಕ್ಯಾಕ್ಟ್ ಟೆಕ್ನಾಲಜೀಸ್' ಉತ್ಸುಕತೆಯನ್ನು ಹೊಂದಿದೆ ಎಂದು ಹೇಳಲಾಗಿದೆ.
ಸ್ಮಾರ್ಟ್ಫೋನಿನಲ್ಲಿ ಯುಪಿಐ ಸೇವೆಯನ್ನು ಬಳಸುವವವರಿಗೆ ಈ ಸೌಲಭ್ಯ ಲಭ್ಯವಾಗಲಿದ್ದು, ನೂತನ ತಂತ್ರಜ್ಞಾನ ಅಳವಡಿಸಿದ ಬಳಿಕ ಇದಕ್ಕಾಗಿ ಅಭಿವೃದ್ಧಿಪಡಿಸಿರುವ ಆಪ್ ಅನ್ನು ಫೋನಿನಲ್ಲಿ ಅಳವಡಿಸಿಕೊಂಡರೆ ಎಟಿಎಂ ಯಂತ್ರದ ಮುಂದೆ ಮೊಬೈಲ್ನ ಆಪ್ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಹಣ ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.
ಕೆಲವೇ ಕೆಲವು ವರ್ಷಗಳ ಹಿಂದೆಯಷ್ಟೇ ಹಣ ಪಡೆದುಕೊಳ್ಳಲು ಸುಲಭದ ಮಾರ್ಗವಾಗಿದ್ದ ಎಟಿಎಂ ಸೌಲಭ್ಯ ಈಗ ಮತ್ತಷ್ಟು ಸರಳವಾಗುತ್ತಿದ್ದು, ಈ ತಂತ್ರಜ್ಞಾನ ಜಾರಿಗೆ ಬಂದ ಬಳಿಕ, ಎಟಿಎಂ ಕಾರ್ಡ್ ಬಳಕೆ ವೇಳೆ ಕಾರ್ಡ್ ಸ್ಕಿಮ್ಮಿಂಗ್ ಸೇರಿದಂತೆ ಹಲವು ರೂಪದಲ್ಲಿ ನಡೆಯುತ್ತಿರುವ ನಡೆಯುತ್ತಿರುವ ವಂಚನೆ ಪ್ರಕರಣಗಳಿಗೆ ಕಡಿವಾಣ ಬೀಳುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.