Back
Home » ಆರೋಗ್ಯ
ಆಯುರ್ವೇದ ಅನುಮೋದಿಸಿದ ಬೆಳಗ್ಗಿನ ದಿನಚರಿ-ತಪ್ಪದೇ ದಿನಾ ಅನುಸರಿಸಿ
Boldsky | 11th Dec, 2018 02:30 PM
 • ಡಿಜಿಟಲ್ ಚಿತ್ತವಿಕ್ಷೇಪಗಳು

  ಇಂದಿನ ದಿನಗಳಲ್ಲಿ ನಮ್ಮೆಲ್ಲಾ ಸಮಯವನ್ನು ಒಂದಲ್ಲಾ ಒಂದು ರೀತಿಯಲ್ಲಿ ಡಿಜಿಟಲ್ ತಂತ್ರಜ್ಞಾನ ಕಸಿದುಕೊಂಡಿದೆ ಎಂದರೆ ಉತ್ಪ್ರೇಕ್ಷೆಯಾಗಲಾರದು. ಪ್ರತಿ ಎರಡನೆಯ ಕ್ಷಣ ನಮ್ಮ ಮನ ಯಾವುದಾದರೊಂದು ಡಿಜಿಟಲ್ ವ್ಯವಸ್ಥೆಯ ಬಗ್ಗೆ ಗಮನ ಹರಿಸುವುದೇ ಚಿತ್ತವಿಕ್ಷೇಪ (digital distraction)ವಾಗಿದೆ. ವಾಸ್ತವವಾಗಿ ನಿಸರ್ಗ ನಮ್ಮ ದೇಹವನ್ನು ಪ್ರಕೃತಿ ನಿಯಮಕ್ಕನುಸಾರವಾಗಿ ಕಾರ್ಯನಿರ್ವಹಿಸುವಂತೆ ನಿರ್ಮಿಸಿದೆ. ಆ ಪ್ರಕಾರ, ಬೆಳಗ್ಗಿನ ಹೊತ್ತು ಶಾಂತಿ, ನಿರಾಳತೆ, ತಾಜಾ ಹವೆ ಮತ್ತು ಹೊಂಬಿಸಿಲನ್ನು ಆಸ್ವಾದಿಸುವ ಸಮಯವಾಗಿದೆ. ಈ ಮೂಲಕ ಮನಸ್ಸು ಮತ್ತು ದೇಹ ನಿರಾಳವಾಗಿ ಶಾಂತ ಮತ್ತು ನಿರುಮ್ಮಳವಾಗಿರಲು ಸಾಧ್ಯವಾಗುತ್ತದೆ. ಒಂದು ವೇಳೆ ಈಗಾಗಲೇ ನೀವು ಈ ಚಿತ್ತವಿಕ್ಷೇಪಕ್ಕೆ ಗುಲಾಮರಾಗಿದ್ದು ಈಗಲಾದರೂ ನಿಸರ್ಗದ ನಿಯಮಕ್ಕೆ ಬದ್ದರಾಗಿ ಉತ್ತಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹೊಂದಬಯಸುವಿರಾದರೆ ಆಯುರ್ವೇದ ಸೂಚಿಸಿರುವ ಈ ದಿನಚರಿಯನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಪ್ರಪ್ರಥಮವಾಗಿ ಮುಂಜಾನೆಯ ಸವಿನಿದ್ದೆಯನ್ನು ಕೊಂಚ ತ್ಯಾಗ ಮಾಡಬೇಕಾಗುತ್ತದೆ ಬನ್ನಿ, ಈ ದಿನಚರಿ ಹೇಗಿರುತ್ತದೆ ಎಂಬುದನ್ನು ನೋಡೋಣ..

  Most Read: ಬೆಳಿಗ್ಗೆದ್ದ ಎದ್ದ ತಕ್ಷಣ ಮುಖ ಫ್ರೆಶ್ ಆಗಿ ಕಾಣಬೇಕೇ?


 • ಮುಂಜಾನೆ ಬೇಗನೇ ಏಳುವುದು

  ಆಯುರ್ವೇದ ಮುಂಜಾನೆಯ 'ಬ್ರಹ್ಮ ಮುಹೂರ್ತ'ದಲ್ಲಿ ಏಳಬೇಕೆಂದು ಸೂಚಿಸುತ್ತದೆ. ಈ ಮುಹೂರ್ತ ಎಂದರೆ ಸೂರ್ಯೋದಯಕ್ಕೆ ಸರಿಯಾಗಿ ಎರಡು ಘಂಟೆ ಹಿಂದೆ. ಎರಡು ಘಂಟೆಯೇ ಏಕೆ ಆಗಬೇಕೆಂದರೆ, ದಿನದ ಚಟುವಟಿಕೆಯನ್ನು ಪೂರ್ಣ ಚೈತನ್ಯದೊಂದಿಗೆ ಪ್ರಾರಂಭಿಸಬೇಕೆಂದರೆ ಇದಕ್ಕೆ ಅಗತ್ಯವಾದ ಶಕ್ತಿಯನ್ನು ಕೋಢೀಕರಿಸಿಕೊಳ್ಳಲು ಇಷ್ಟು ಸಮಯ ಬೇಕಾಗುತ್ತದೆ ಎಂದು ಆಯುರ್ವೇದದಲ್ಲಿ ವಿವರಿಸಲಾಗಿದೆ. ಈ ಅವಧಿಯಲ್ಲಿ ದೇಹದ ಕಲ್ಮಶಗಳನ್ನು ವಿಸರ್ಜಿಸಿ ಅಗತ್ಯ ಶಕ್ತಿಯನ್ನು ಪೂರೈಸಿಕೊಳ್ಳಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಮುಂಜಾನೆಯ ಸವಿನಿದ್ದೆ ಎಲ್ಲರಿಗೂ ಇಷ್ಟವಾಗಿರುವುದರಿಂದಲೇ ಪ್ರಾತಃಕಾಲದಲ್ಲಿ ಇಡಿಯ ಜಗತ್ತೇ ಖಾಲಿ ಖಾಲಿಯಾಗಿರುತ್ತದೆ. ಮೊದ ಮೊದಲು ಈ ಸವಿನಿದ್ದೆಯನ್ನು ತ್ಯಾಗ ಮಾಡಲು ಭಾರೀ ಕಷ್ಟವಾಗಬಹುದು. ಆದರೆ ಈ ತ್ಯಾಗದಿಂದ ದೊರಕುವ ಸಂತೋಷ-ಚೈತನ್ಯ ಏನೆಂದು ಕೆಲವೇ ದಿನಗಳಲ್ಲಿ ಮನವರಿಕೆಯಾಗುತ್ತದೆ ಹಾಗೂ ಆ ಬಳಿಕ ಬೇಕೆಂದರೂ ಈ ಸಮಯವನ್ನು ನಿದ್ದೆಯ ಮೂಲಕ ಕಳೆದುಕೊಳ್ಳಲು ನೀವೇ ಇಚ್ಛಿಸಲಾರಿರಿ!


 • ಮುಖಕ್ಕೆ ತಣ್ಣೀರಿನ ಪ್ರೋಕ್ಷಾಳನೆ

  ಬೆಳಿಗ್ಗೆದ್ದ ತಕ್ಷಣ ಮೊದಲು ಮಾಡಬೇಕಾದ ಕೆಲಸವೆಂದರೆ ತಣ್ಣೀರನ್ನು ಮುಖಕ್ಕೆ ಚಿಮುಕಿಸಿಕೊಳ್ಳುವುದು. ಆದರೆ ಹಾಸಿಗೆಯಿಂದ ಎದ್ದ ತಕ್ಷಣವೇ ಧಾವಿಸಬಾರದು, ಬದಲಿಗೆ ಹಾಸಿಗೆಯಲ್ಲಿಯೇ ಕುಳಿತು ಒಂದೆರಡು ನಿಮಿಷ ಬಿಟ್ಟು ಇಂದ್ರಿಯಗಳೆಲ್ಲವೂ ನಿಧಾನವಾಗಿ ತಮ್ಮ ಗ್ರಹಿಕೆಯನ್ನು ಪಡೆದ ಬಳಿಕವೇ ಎದ್ದು ಶೌಚಾಲಯದತ್ತ ನಡೆದು ತಣ್ಣೀರಿನಿಂದ ಮುಖಕ್ಕೆ ಪ್ರೋಕ್ಷಾಳನೆ ಪಡೆಯಬೇಕು. ಈ ಸಮಯದಲ್ಲಿ ಕೊಂಚ ನೀರನ್ನು ಕಣ್ಣುಗಳನ್ನು ತೆರೆದುಕೊಂಡು ಚಿಮುಕಿಸಿಕೊಳ್ಳುವ ಮೂಲಕ ಕಣ್ಣುಗಳನ್ನು ಸ್ವಚ್ಛಗೊಳಿಸುವ ಜೊತೆಗೇ ಕಣ್ಣುಗಳಿಗೆ ಉತ್ತಮ ವ್ಯಾಯಾಮವನ್ನೂ ಪಡೆಯಬಹುದು. ಈ ನೀರು ಸಾದಾ ತಾಪಮಾನದಲ್ಲಿರುವ ನೀರೇ ಆಗಬೇಕೇ ವಿನಃ ಅತಿ ತಣ್ಣಗೂ ಇರಬಾರದು ಅಥವಾ ಬೆಚ್ಚಗೂ ಇರಬಾರದು.


 • ಪ್ರಾತಃವಿಧಿ

  ಪ್ರಾತಃವಿಧಿಗಳಿಗೆ ಸೂಕ್ತ ಸಮಯ ನೀಡಬೇಕಾದುದು ಆಯುರ್ವೇದ ಸೂಚಿಸುವ ಕಟ್ಟುಪಾಡಾಗಿದೆ ಹಾಗೂ ಈ ಮೂಲಕ ರಾತ್ರಿ ದೇಹದಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳು ಪೂರ್ಣವಾಗಿ ಹೊರಹೋಗುವುದು ಅತ್ಯಂತ ಅಗತ್ಯವಾಗಿದೆ. ಆಯುರ್ವೇದ ಸೂಚಿಸುವ ಪ್ರಕಾರ ನಿತ್ಯವೂ ಪ್ರಾತಃಕಾಲದ ವಿಸರ್ಜನೆ ಆರೋಗ್ಯಕರವಾಗಿದೆ. ಒಂದು ವೇಳೆ ನಿಮಗಿನ್ನೂ ಅಭ್ಯಾಸವಾಗದೇ ಪ್ರಾತಃವಿಧಿಗೆ ಅಗತ್ಯವಾದ ಒತ್ತಡ ಸ್ವಾಭಾವಿಕವಾಗಿ ಬರದೇ ಹೋದರೆ ಇದಕ್ಕೆ ಒತ್ತಡ ನೀಡಬಾರದು. ಎಚ್ಚರಾದ ಬಳಿಕ ಕೊಂಚ ಹೆಚ್ಚು ಹೊತ್ತು ಹಾಗೇ ಪವಡಿಸಿದ್ದು ಒತ್ತಡವೇನಾದರೂ ಬರುತ್ತದೆಯೇ ಗಮನಿಸಿ. ಇಲ್ಲದಿದ್ದರೆ ಮರುದಿನ ಪ್ರಯತ್ನಿಸಬಹುದು. ಸಾಮಾನ್ಯವಾಗಿ ಈ ಸಮಯದಲ್ಲಿ ಮತ್ತೆ ನಿದ್ದೆ ಹೋಗಲು ಮನ ಪ್ರೇರೇಪಿಸುವುದರಿಂದ ಮನಸ್ಸನ್ನು ಹತೋಟಿಯಲ್ಲಿಡುವುದು ಅವಶ್ಯ. ಸೂಚನೆ: ಸ್ವಾಭಾವಿಕ ಒತ್ತಡ ಸಾಕಾಗದೇ ಮಲವಿಸರ್ಜನೆಗೆ ಹೆಚ್ಚಿನ ಒತ್ತಡ ನೀಡಬೇಕಾಗಿ ಬಂದರೆ ತ್ರಿಫಲವನ್ನು ಸೇವಿಸುವ ಮೂಲಕ ಈ ಕಾರ್ಯವನ್ನು ಸುಗಮವಾಗಿಸಬಹುದು. ಬೆಳಗ್ಗಿನ ಸಮಯದಲ್ಲಿಯೇ ಎಲ್ಲಾ ವಿಸರ್ಜನೆಗಳನ್ನು ಮುಗಿಸುವ ಮೂಲಕ ಕೇವಲ ದೇಹ ಕಲ್ಮಶರಹಿತವಾಗುವುದು ಮಾತ್ರವಲ್ಲ, ಮನಸ್ಸೂ ನಿರಾಳವಾಗುತ್ತದೆ ಹಾಗೂ ಚೈತನ್ಯಭರಿತ ಮತ್ತು ಆರೋಗ್ಯಕರವಾಗುತ್ತದೆ.

  Most Read: ಮಲಗುವ ಮುನ್ನ ಇದನ್ನು ಮಾಡೋದರಿಂದ ನಿಮ್ಮ ಸೌಂದರ್ಯ ಹೆಚ್ಚುತ್ತದೆ


 • ಸರಿಯಾದ ಕ್ರಮದಲ್ಲಿಯೇ ಹಲ್ಲುಜ್ಜಿ

  ಸರಿಯಾದ ಕ್ರಮದಲ್ಲಿ ಹಲ್ಲು ಮತ್ತು ನಾಲಿಗೆಗಳನ್ನು ಸ್ವಚ್ಛಗೊಳಿಸಲು ಆಯುರ್ವೇದ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ. ಬಾಯಿಯ ಆರೋಗ್ಯ ಚೆನ್ನಾಗಿರಬೇಕೆಂದರೆ ನೀವು ಹಲ್ಲುಜ್ಜುವ ಬ್ರಶ್ ಮೃದು ರೋಮಗಳನ್ನು ಹೊಂದಿರಬೇಕು. ಸಾಮಾನ್ಯವಾಗಿ ಹಲ್ಲುಜ್ಜುವ ಪೇಸ್ಟ್ ಗಳಿಗೆ ಕೃತಕವಾಗಿ ಸಕ್ಕರೆಯನ್ನು ಹಾಕಿ ಸಿಹಿಯಾಗಿರುವಂತೆ ಮಾಡಿರುತ್ತಾರೆ. ಆದರೆ ಆಯುರ್ವೇದ ಈ ಕೆಲಸಕ್ಕೆ ಹೆಚ್ಚು ಕಹಿಯಾಗಿದ್ದು ಕೊಂಚವೇ ಸಿಹಿಯಾಗಿರುವ ಚೂರ್ಣಗಳನ್ನು ಬಳಸುವಂತೆ ಸೂಚಿಸುತ್ತದೆ. ಗಳಗಳ: ಸಾಮಾನ್ಯವಾಗಿ ನಮಗೆ ಗಂಟಲ ಬೇನೆ ಅಥವಾ ಬೇರಾವುದೋ ತೊಂದರೆ ಎದುರಾಗದ ಹೊರತಾಗಿ ನಾವು ಗಳಗಳ ಮಾಡುವುದೇ ಇಲ್ಲ. ಆದರೆ ಈ ಕ್ರಿಯೆಯನ್ನು ನಿತ್ಯವೂ ಅನುಸರಿಸುವಂತೆ ಆಯುರ್ವೇದ ಸೂಚಿಸುತ್ತದೆ ಹಾಗೂ ಈ ಮೂಲಕ ಗಂಟಲ ಹಿಂಭಾಗ, ಕಿರುನಾಲಿಗೆ, ಬಾಯಿಯ ಮೇಲ್ಭಾಗ ಹಾಗೂ ಒಸಡುಗಳೂ ಸ್ವಚ್ಛಗೊಳ್ಳುತ್ತವೆ.


 • ಅಭ್ಯಂಗ

  ಅಭ್ಯಂಗ ಅಥವಾ ಉಗುರುಬೆಚ್ಚಗಿನ ಎಣ್ಣೆಯನ್ನು ದೇಹಕ್ಕೆ ಕೊಂಚ ಮಸಾಜ್ ಮೂಲಕ ಹಚ್ಚಿಕೊಳ್ಳುವುದನ್ನು ಆಯುರ್ವೇದ ಸೂಚಿಸುತ್ತದೆ. ಈ ಮೂಲಕ ಯಾವುದೇ ತೇವಕಾರಕ ಅಥವಾ ಮಾಯಿಶ್ಚರೈಸರ್ ನೀಡದೇ ಇರುವ ಆರೈಕೆಯನ್ನು ಪಡೆಯಬಹುದು. ಆದರೆ ಈ ಕಾರ್ಯವನ್ನು ನಿತ್ಯವೂ ಅನುಸರಿಸುವ ಅಗತ್ಯವಿಲ್ಲ. ಚಳಿಗಾಲದಲ್ಲಿ ದಿನ ಬಿಟ್ಟು ದಿನ, ಅಂದರೆ ವಾರಕ್ಕೆ ಕನಿಷ್ಟ ಮೂರು ಬಾರಿ ಹಾಗೂ ಬೇಸಿಗೆಯಲ್ಲಿ ಎರಡು ದಿನ ಬಿಟ್ಟು ಮರುದಿನ ಅಂದರೆ ವಾರಕ್ಕೆ ಕನಿಷ್ಟ ಎರಡು ಬಾರಿಯಾದರೂ ನಿರ್ವಹಿಸಿಕೊಳ್ಳುವುದು ಅಗತ್ಯ. ಇಡಿಯ ದೇಹವನ್ನು ಉಗುರುಬೆಚ್ಚನೆಯ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳುವುದು ಅಗತ್ಯ. ಆದರೆ ಸಮಯದ ಆಭಾವವಿದ್ದರೆ ದೇಹದ ಈ ಐದು ಅಂಗಗಳಿಗಾದರೂ ಅಭ್ಯಂಗ ಒದಗಿಸಬೇಕು.ಇವೆಂದರೆ: ಹೊಕ್ಕಳು, ಪಾದಗಳ ಹಿಮ್ಮಡಿ, ತಲೆ, ಕಿವಿಗಳು, ಕೈಗಳು ಮತ್ತು ಮೊಣಕಾಲುಗಳು. ಅಭ್ಯಂಗವನ್ನು ಸ್ನಾನಕ್ಕೂ ಮುನ್ನ ಮಾಡಿಕೊಳ್ಳುವುದು ಅತ್ಯುತ್ತಮ. ಹಚ್ಚಿಕೊಳ್ಳಲು ಕೊಬ್ಬರಿ ಎಣ್ಣೆ ಶ್ರೇಷ್ಠ. ಬದಲಿಗೆ ಆಲಿವ್ ಎಣ್ಣೆ, ಸಾಸಿವೆ ಎಣ್ಣೆ ಹಾಗೂ ಎಳ್ಳೆಣ್ಣೆಯನ್ನೂ ಬಳಸಬಹುದು

  Most Read: ಬೆಳಗ್ಗೆ ಕಡ್ಡಾಯವಾಗಿ ಮಾಡಬೇಕಾದ 9 ಹವ್ಯಾಸಗಳು


 • ಲಘು ವ್ಯಾಯಾಮ:

  ನಿತ್ಯವೂ ಲಘು ವ್ಯಾಯಾಮ ಹಾಗೂ ಯೋಗಾಸನಗಳನ್ನು ಅನುಸರಿಸುವಂತೆ ಆಯುರ್ವೇದ ಸೂಚಿಸುತ್ತದೆ. ಇದರಿಂದ ದೇಹದಲ್ಲಿ ರಕ್ತಸಂಚಾರ ಹೆಚ್ಚುವುದು ಮಾತ್ರವಲ್ಲ, ಶರೀರ ಸುಲಭವಾಗಿ ಬಳುಕಲೂ ಸಾಧ್ಯವಾಗುತ್ತದೆ.
  ನಿಮ್ಮ ಆದ್ಯತೆಗೆ ತಕ್ಕಂತೆ ನಡಿಗೆ, ಸರಳ ವ್ಯಾಯಾಮಗಳು, ಸೂಕ್ತ ಯೋಗಾಸನಗಳು ಮೊದಲಾದವುಗಳನ್ನು ನಿರ್ವಹಿಸಬಹುದು. ಆದರೆ ನೆನಪಿರಲಿ, ಈ ಕ್ರಿಯೆಗೆ ದೇಹದ ಅರ್ಧದಷ್ಟು ಮಾತ್ರವೇ ಶಕ್ತಿಯನ್ನು ಬಳಸಿಕೊಳ್ಳುವಂತಹ ವ್ಯಾಯಾಮಗಳೇ ಆಗಿರಬೇಕು. ಅಗತ್ಯಕ್ಕೂ ಹೆಚ್ಚು ಶ್ರಮದಾಯಕ ವ್ಯಾಯಾಮ ಅಥವಾ ಯೋಗಾಸನಗಳನ್ನು ಅನುಸರಿಸಬಾರದು. ಹೀಗೆ ಮಾಡಿದರೆ ದಿನದ ಇತರ ಕೆಲಸಗಳಿಗೆ ಶಕ್ತಿ ಸಾಕಾಗದೇ ಅಪಾರವಾದ ಆಯಾಸವುಂಟಾಗಬಹುದು. ಪರಿಣಾಮವಾಗಿ ದಿನದ ಗುರಿಗಳನ್ನು ತಲುಪಲು ಹಿಂದೆ ಬೀಳಬಹುದು. ಅಲ್ಲದೇ ಇದು ವ್ಯಾಯಾಮದ ಮೂಲ ಉದ್ದೇಶವನ್ನೇ ನಿರರ್ಥಕವಾಗಿಸಬಹುದು.


 • ಎಲ್ಲವನ್ನೂ ಒಮ್ಮೆಲೇ ಮಾಡದಿರಿ

  ಮೇಲೆ ಸೂಚಿಸಿದ ವಿವರಗಳನ್ನು ಗಮನಿಸಿದ ಬಳಿಕ ನಾಳೆಯಿಂದಲೇ ಮುಂಜಾನೆ ಏಳಲು ಪ್ರೇರಣೆ ಸಿಕ್ಕರೆ ಎಚ್ಚರಿಕೆಯ ಮಾತೊಂದನ್ನು ಪಾಲಿಸಬೇಕಾಗುತ್ತದೆ. ಯಾವುದನ್ನೂ ಒಮ್ಮೆಲೇ ಒಂದೇ ದಿನ ಪ್ರಾರಂಭಿಸದಿರಿ. ನಿಧಾನವಾಗಿ ಒಂದೊಂದನ್ನೇ ಕ್ರಮೇಣವಾಗಿ ಅನುಸರಿಸುತ್ತಾ ಬನ್ನಿ ಹಾಗೂ ಕೆಲವೇ ದಿನಗಳಲ್ಲಿ ಮುಂಜಾನೆ ಏಳುವುದೆಷ್ಟು ಹಿತಕರ ಹಾಗೂ ಆರೋಗ್ಯಕರ ಎಂಬುದನ್ನು ಮನಗಾಣುವಿರಿ.
ಬೆಳಗ್ಗಿನ ಹೊತ್ತನ್ನು ಆರಾಮವಾಗಿ, ಯಾವುದೇ ಗಡಿಬಿಡಿಯಿಲ್ಲದೇ ನಿರಾಳವಾಗಿ ಎಲ್ಲಾ ಕೆಲಸಗಳನ್ನು ಪೂರೈಸಿಕೊಳ್ಳುತ್ತಿದ್ದ, ಮುಂಜಾನೆಯ ನಡಿಗೆಯ, ತಣ್ಣನೆಯ ಗಾಳಿಯನ್ನು ಹೀರುತ್ತಾ ಹೂವಿನ ಸುಗಂಧವನ್ನು ಆಸ್ವಾದಿಸುತ್ತಾ, ಜೊತೆಗೊಂದು ಕಪ್ ಬಿಸಿ ಬಿಸಿ ಟೀ/ಕಾಫಿ ಹೀರುತ್ತಾ ಪತ್ರಿಕೆಯನ್ನು ಓದುವ ದಿನಗಳು ಈಗ ಸರಿದಿವೆ.

ಇಂದಿನ ದಿನಗಳಲ್ಲಿ ಬೆಳಗ್ಗಿನ ಸಮಯವೆಂದರೆ ಪ್ರತಿ ಮನೆಯಲ್ಲಿಯೂ ಗಡಿಬಿಡಿಯ ವಾತಾವರಣ! ಮನೆಯ ಪ್ರತಿ ಸದಸ್ಯರಿಗೂ ತಮ್ಮ ಗಮ್ಯಸ್ಥಾನಕ್ಕೆ ತಲುಪಲು ಸಿದ್ದರಾಗಬೇಕಾದ ತವಕ, ಬೇಗ ಹೊರಡುವ ಆತುರ. ಇಂದಿನ ಕೆಲಸಗಳೆಲ್ಲವೂ ಒಂದು ಗಡುವಿನಲ್ಲಿ ಪೂರೈಸಿಕೊಳ್ಳಲೇಬೇಕಾದ ಅನಿವಾರ್ಯತೆಯನ್ನು ಹೊಂದಿವೆ. ಬೆಳಿಗ್ಗೆದ್ದ ಕ್ಷಣದಿಂದ ತೊಡಗಿ ರಾತ್ರಿ ಪವಡಿಸುವವರೆಗಿನ ಕೆಲಸಗಳೆಲ್ಲವೂ ಈ ಗಡುವಿನೊಳಗೇ ಮುಗಿಸುವ ಆತುರವಿರುತ್ತದೆ. ಶಾಲೆ/ಕಛೇರಿಗೆ ಸಮಯಕ್ಕೆ ಮುನ್ನವೇ ತಲುಪುವುದು, ಒಪ್ಪಿಸಿದ ಕಾರ್ಯಗಳನ್ನು ಅವಧಿ ಮೀರುವ ಮುನ್ನವೇ ಮುಗಿಸುವುದು, ರೈಲು/ಬಸ್ಸು/ಮೆಟ್ರೋ ತಪ್ಪಿಸಿಕೊಳ್ಳದಿರಲು ಧಾವಿಸುವುದು ನೆಚ್ಚಿನ ಧಾರಾವಾಹಿಯನ್ನು ತಪ್ಪಿಸಿಕೊಳ್ಳಬಾರದೆಂದು ಲಗುಬಗನೆ ಧಾವಿಸುವುದು ಇವೆಲ್ಲದರ ನಡುವೆ ಮೊಬೈಲಿನಲ್ಲಿ ಸಾಮಾಜಿಕ ತಾಲತಾಣದಲ್ಲಿ ತಮ್ಮ ಇರುವಿಕೆಯನ್ನು ಆಗಾಗ ಸಾದರಪಡಿಸುತ್ತಾ ಇರುವುದು, ಇದೇ ನಮ್ಮ ಜೀವನವಾಗಿಬಿಟ್ಟಿದೆ. ಈ ಧಾವಂತಗಳೆಲ್ಲವೂ ನಮ್ಮ ನಿತ್ಯದ ಸಮಯವನ್ನು ಕಬಳಿಸಿಬಿಟ್ಟು ನಮಗಾಗಿ ಸಮಯವನ್ನೇ ಇರದಂತಾಗಿಸಿದೆ.

   
 
ಹೆಲ್ತ್