Back
Home » ಆರೋಗ್ಯ
ಅಪಾರವಾಗಿ ಪೀಡಿಸುವ ತಲೆನೋವು : ನಿಮಗೆ ಈ ಎಂಟರಲ್ಲಿ ಯಾವ ಬಗೆ ಬಾಧಿಸುತ್ತಿದೆ ಗೊತ್ತೇ?
Boldsky | 12th Dec, 2018 05:31 PM
 • ಮೈಗ್ರೇನ್ ತಲೆನೋವು (MIGRAINE HEADACHE)

  ತಲೆನೋವಿನ ಅತ್ಯುಗ್ರ ರೂಪವಾದ ಈ ವಿಧ ಆತ್ಮಹತ್ಯೆಗೆ ಪ್ರಚೋದಿಸುವಷ್ಟು ಪ್ರಬಲವಾಗಿರುತ್ತದೆ ಹಾಗೂ ನಿರಾಶಾದಾಯಕ ಸಂಗತಿ ಎಂದರೆ ಒಮ್ಮೆ ಆವರಿಸಿದರೆ ಇದು ಕೆಲವು ದಿನಗಳವರೆಗೆ ಸತತವಾಗಿ ಕಾಡಬಹುದು. ಸಾಮಾನ್ಯವಾಗಿ ಇದು ತಲೆಯ ಕೇಂದ್ರಭಾಗದ ಎಡ ಅಥವಾ ಬಲ ಪಕ್ಕದಲ್ಲಿ ಕೇಂದ್ರೀಕೃತವಾಗಿದ್ದು ಬೆಳಕು, ಧ್ವನಿಗಳಿಗೆ ತೀವ್ರ ಸಂವೇದಿಯಾಗಿರುತ್ತದೆ. ತೀಕ್ಷ್ಣ ಬೆಳಕು ಅಥವಾ ತೀವ್ರ ತರಂಗಗಳ ಧ್ವನಿ (ಕಿರಿಚಾಟ, ಪಿಟೀಲಿನ ಉನ್ನತ ದನಿ ತರಂಗ ಮೊದಲಾದವು) ಈ ನೋವನ್ನು ಬೆಂಕಿಯಂತೆ ಉಲ್ಬಣಿಸುತ್ತವೆ. ವಾಕರಿಕೆ ಮತ್ತು ವಾಂತಿಯೂ ಕೆಲವರಲ್ಲಿ ಕಂಡುಬರಬಹುದು. ನೋವು ಗರಿಷ್ಟ ಮಟ್ಟದಲ್ಲಿದ್ದಾಗ ಕಣ್ಣಿನ ದೃಷ್ಟಿಯ ಕೇಂದ್ರ ಭಾಗ ಮಾಯವಾಗುತ್ತದೆ, ಅಂದರೆ ಆ ಸಮಯದಲ್ಲಿ ವ್ಯಕ್ತಿಯೊಬ್ಬರನ್ನು ನೋಡಿದರೆ ಅವರಿಗೆ ತಲೆಯೇ ಇರುವುದಿಲ್ಲ!

  ಈ ತಲೆನೋವು ಪುರುಷರಿಗಿಂತ ಮಹಿಳೆಯರನ್ನು ಮೂರು ಪಟ್ಟು ಹೆಚ್ಚು ಬಾಧಿಸುತ್ತದೆ. ಅಲ್ಲದೇ PTSD (Post-traumatic stress disorder ಅಥವಾ ಮಾನಸಿಕ ಆಘಾತದಿಂದ ಚೇತರಿಸಿಕೊಳ್ಳುತ್ತಿರುವ ಸ್ಥಿತಿ) ಎಂಬ ಸ್ಥಿತಿಯಲ್ಲಿರುವ ವ್ಯಕ್ತಿಗಳಿಗೆ ಈ ತಲೆನೋವು ಆವರಿಸುವ ಸಾಧ್ಯತೆ ಹೆಚ್ಚು. ಈ ತಲೆನೋವಿಗೆ ಸರಿಯಾದ ನಿದ್ದೆಯ ಕ್ರಮದ ಕೊರತೆ, ಸೂಕ್ತ ಸಮಯಕ್ಕೆ ಸೇವಿಸದ ಆಹಾರವನ್ನು ಸೇವಿಸದೇ ಹೋಗುವುದು, ನಿರ್ಜಲೀಕರಣ, ರಸದೂತಗಳ ಏರುಪೇರು ಹಾಗೂ ಕೆಲವು ವಸ್ತುಗಳಿಗೆ ಎದುರಾಗುವ ಅಲರ್ಜಿ ಸಹಾ ಕಾರಣವಾಗಬಹುದು. ನಿಧಾನವಾಗಿ ತಲೆಯ ಹಿಂಭಾಗ (ಕುತ್ತಿಗೆಯ ಮೇಲಿನ ಭಾಗ) ದಿಂದ ಪ್ರಾರಂಭವಾಗುವ ಈ ನೋವು ಕೆಲವು ನಿಮಿಷಗಳಲ್ಲಿಯೇ ತಲೆಯ ಕೇಂದ್ರಭಾಗದ ಒಂದು ಪಕ್ಕಕ್ಕೆ ಆಗಮಿಸುತ್ತದೆ ಹಾಗೂ ಈ ಸಮಯದಲ್ಲಿ ಕಣ್ಣುಗಳ ಮುಂದೆ ಮಿಂಚು ಹೊಳೆದಂತೆ, ಅಡ್ಡಾದಿಡ್ಡಿ ರೇಖೆಗಳು, ಕಾಣುತ್ತಿರುವ ಬೆಳಕಿನ ಮೂಲಗಳೆಲ್ಲಾ ಕೋಲು ಕೋಲಾಕೃತಿ ಪಡೆದಂತೆ, ಚಿಕ್ಕ ಚಿಕ್ಕ ಚುಕ್ಕಿಗಳು ಕಂಡಂತಾಗುತ್ತವೆ. ಈ ಹಂತ ಬರುವ ಮೊದಲೇ ತಲೆನೋವಿಗೆ ನೀಡಿರುವ ಮಾತ್ರೆ ಅಥವಾ ಅಮೃತಾಂಜನ ಮೊದಲಾದ ನೋವಿನ ಎಣ್ಣೆಯನ್ನು ಹಣೆಗೆ ಹಚ್ಚಿಕೊಂಡರೆ ಇದು ತೀವ್ರಗತಿಗೆ ಏರುವುದನ್ನು ತಡೆಯಬಹುದು. ಇಲ್ಲದಿದ್ದರೆ ಒಮ್ಮೆ ಈ ನೋವು ಉಗ್ರ ರೂಪ ಪಡೆಯಿತೋ, ಆಗ ನೋವನ್ನು ಪೂರ್ಣ ಪ್ರಮಾಣದಲ್ಲಿ ಅನುಭವಿಸಬೇಕಾಗುವುದು ಅನಿವಾರ್ಯವಾಗುತ್ತದೆ.

  ಅಂಕಿ ಅಂಶಗಳ ಮೂಲಕ ಕಂಡು ಬಂದ ಪ್ರಕಾರ ಮೈಗ್ರೇನ್ ತಲೆನೋವು ಆವರಿಸಿದ ಬಳಿಕ ಇವರಲ್ಲಿ ಕೇವಲ ಮೂರರಿಂದ ಹದಿಮೂರು ಶೇಡಡಾದಷ್ಟು ಜನರು ಮಾತ್ರವೇ ತಲೆನೋವು ಬರುವ ಮುನ್ನವೇ ಸೂಕ್ತ ಔಷಧಿಗಳನ್ನು ಸೇವಿಸುತ್ತಾರೆ. ವಾಸ್ತವವಾಗಿ ಇವರಲ್ಲಿ 38 ಶೇಖಡಾ ಜನರಿಗೆ ಔಷಧಿಯ ಅಗತ್ಯವಿದೆ. ಈ ನೋವು ಯಾವುದೇ ಮಟ್ಟದಲ್ಲಿರಲಿ, ವಿಶೇಷವಾಗಿ ತಿಂಗಳಲ್ಲಿ ಕನಿಷ್ಟ ಮೂರು ದಿನದಿಂದ ಆರು ದಿನಗಳವರೆಗಾದರೂ ಈ ಬಗೆಯ ನೋವನ್ನು ಅನುಭವಿಸಿದರೆ ವೈದ್ಯರ ನೆರವು ಅನಿವಾರ್ಯವಾಗಿದೆ.


 • ಮಾನಸಿಕ ಒತ್ತಡದ ತಲೆನೋವು: (tension headache)

  ಇವು ಭಾರೀ ಎನಿವುಷ್ಟಿಲ್ಲದಿದ್ದರೂ ತಲೆಯ ಒಳಗಿನ ಎಲ್ಲಾ ಭಾಗವನ್ನು ಆವರಿಸಿ ಮಂಕಾಗಿಸುವಷ್ಟು ಪ್ರಬಲವಾಗಿರುತ್ತದೆ. ಒಂದು ಬಗೆಯಲ್ಲಿ ಮೆದುಳನ್ನು ಒಂದು ರಬ್ಬರ್ ಬ್ಯಾಂಡ್ ನ ಒತ್ತಡದಲ್ಲಿ ಸುತ್ತಿಟ್ಟಂತೆ ತೋರುತ್ತದೆ. ಮಾನಸಿಕ ಒತ್ತಡಕ್ಕೆ ಒಳಗಾಗುವ ಯಾವುದೇ ವ್ಯಕ್ತಿಗೆ ಈ ನೋವು ಎದುರಾಗಬಹುದು. ತಲೆಬಿಸಿಯಾಯ್ತು ಎಂದು ನಾವು ಕರೆಯುವ ಯಾವುದೇ ಸಂದರ್ಭದ ಕಾರಣ ಈ ನೋವು ಎದುರಾದರೆ ಔಷಧಿ ಅಂಗಡಿಯಲ್ಲಿ ಮುಕ್ತವಾಗಿ ಸಿಗುವ ಯಾವುದೇ ನೋವು ನಿವಾರಕ ಮಾತ್ರೆಯೊಂದನ್ನು ತಕ್ಷಣವೇ ಸೇವಿಸಿದರೆ ಈ ನೋವು ಸಹಾ ಕೊಂಚ ಸಮಯದಲ್ಲಿಯೇ ಇಲ್ಲವಾಗುತ್ತದೆ. ಒಂದು ವೇಳೆ ಕಡಿಮೆಯಾಗದೇ ಇದ್ದಲ್ಲಿ ಮಾತ್ರ ಇದು ಉಲ್ಬಣಿಸುವುದಕ್ಕೂ ಮುನ್ನವೇ ವೈದ್ಯರ ಸಲಹೆ ಪಡೆಯುವುದು ಅಗತ್ಯ.


 • ಕುಹರ ತಲೆನೋವು (Sinus headaches)

  ಈ ಬಗೆಯ ತಲೆನೋವು ಆವರಿಸಿದರೆ ಮೂಗಿನ ಹಿಂದೆ ಮತ್ತು ಹಣೆಯ ನಡುವೆ (ಕಣ್ಣುಗಳ ನಡುವಣ ಭಾಗ) ಮತ್ತು ಕಣ್ಣುಗಳ ಕೆಳಗಿನ ಮೂಳೆಗಳ ಭಾಗದ ಹಿಂಭಾಗದಲ್ಲಿ ನೋವು ಎದುರಾಗುತ್ತದೆ. ಇದರೊಂದಿಗೇ ಮೇಲ್ದವಡೆಯಲ್ಲಿಯೂ ನೋವು ಮತ್ತು ಕಚ್ಚುವಾಗ ಮೇಲಿನ ಹಲ್ಲುಗಳಲ್ಲಿ ಹೆಚ್ಚಿನ ಸಂವೇದನೆ ಮತ್ತು ಅಪರೂಪದಲ್ಲಿ ಈ ಸಮಯದಲ್ಲಿ ವಾಸನಾ ಗ್ರಹಣದ ಶಕ್ತಿಯನ್ನೂ ತಾತ್ಕಾಲಿಕವಾಗಿ ಕಳೆದುಕೊಳ್ಳುವುದು ಗಮನಕ್ಕೆ ಬರುತ್ತದೆ. ಸೈನಸ್ ಅಥವಾ ಕುಹರ ಎಂದರೆ ನಮ್ಮ ಮೂಗಿನ ಮೇಲ್ಭಾಗದಲ್ಲಿ, ಹಣೆಯ ನಡುವೆ ಇರುವ ಟೊಳ್ಳುಭಾಗವಾಗಿದ್ದು ಈ ಭಾಗದಲ್ಲಿ ಕಫ ಸಂಗ್ರಹವಾಗಿ ಎದುರಾಗುವ ಸೋಂಕಿನಿಂದ ತಲೆನೋವು ಕಾಣಿಸಿಕೊಳ್ಳುತ್ತದೆ. ಈ ನೋವಿನ ತೀವ್ರತೆ ಸೋಂಕಿನ ತೀವ್ರತೆಯನ್ನು ಅನುಸರಿಸಿರುತ್ತದೆ. ಸಾಮಾನ್ಯವಾಗಿ ಮೈಗ್ರೇನ್ ತಲೆನೋವಿನ ಲಕ್ಷಣಗಳು ಸಹಾ ಸೈನಸ್ ತಲೆನೋವಿನ ಲಕ್ಷಣಗಳನ್ನು ಹೋಲುವುದರಿಂದ ಇವನ್ನು ಸೈನಸ್ ತಲೆನೋವು ಎಂದು ತಪ್ಪಾಗಿ ಪರಿಗಣಿಸಲ್ಪಡುತ್ತವೆ. ವಾಸ್ತವವಾಗಿ 90ಶೇಖಡಾದಷ್ಟು ಸೈನಸ್ ತಲೆನೋವುಗಳು ವಾಸ್ತವವಾಗಿ ಮೈಗ್ರೇನ್ ತಲೆನೋವೇ ಆಗಿರುತ್ತದೆ.

  Most Read: ಮುಟ್ಟಿನ ದಿನಗಳಲ್ಲಿ ಮಹಿಳೆಯರ ದೇಹದ ತೂಕ ಏರುತ್ತದೆ! ಏಕೆಂದು ಗೊತ್ತೇ?


 • ಗುಡುಗು ಚಪ್ಪಾಳೆ ತಲೆನೋವು!(Thunderclap headaches)

  ಚಪ್ಪಾಳೆ ಹೊಡೆದಾಗ ಆ ಕ್ಷಣದಲ್ಲಿ ಆಸ್ಪೋಟಿಸಿದಂತೆ ಶಬ್ದ ಹೊಮ್ಮುತ್ತದೆಯಲ್ಲವೇ ಅದೇ ಪ್ರಕಾರ ಈ ಬಗೆಯ ತಲೆನೋವು ಸಹಾ ಥಟ್ಟನೇ ಎದುರಾಗಿ ನೋವಿನಿಂದ ತಲೆ ಸಿಡಿಯುವಂತೆ ಮಾಡಿ ಒಂದೇ ನಿಮಿಷದಲ್ಲಿ ಇರಲೇ ಇಲ್ಲ ಎಂಬಂತೆ ಮಾಯವಾಗಿಬಿಡುತ್ತದೆ. ಸಾಮಾನ್ಯವಾಗಿ ನಿಧಾನವಾಗಿ ತೀವ್ರಗತಿಗೆ ಏರಿ ಬಳಿಕ ನಿಧಾನವಾಗಿ ಇಳಿಯುತ್ತಾ ಪೂರ್ಣವಾಗಿ ಇಲ್ಲವಾಗಲು ಸುಮಾರು ಐದು ನಿಮಿಷ ತೆಗೆದುಕೊಳ್ಳುತ್ತದೆ. ಆದರೆ ಈ ಬಗೆಯ ತಲೆನೋವು ಆರೋಗ್ಯಕ್ಕೆ ಎದುರಾದ ಬೇರಾವುದೋ ಗಂಭೀರ ಮತ್ತು ತುರ್ತು ಅಗತ್ಯದ ಮತ್ತು ಪ್ರಾಣಕಂಟಕ ಸ್ಥಿತಿಯ ಸಾಧ್ಯತೆಯನ್ನು ಪ್ರಕಟಿಸುತ್ತಿದ್ದು ತಕ್ಷಣವೇ ವೈದ್ಯರಿಂದ ಸೂಕ್ತ ಪರೀಕ್ಷೆಗೊಳಪಡುವುದು ಅಗತ್ಯ. ಪಾರ್ಶ್ವವಾಯು, ಮೆದುಳಿನಲ್ಲಿ ರಕ್ತಸ್ರಾವ, ಮೆದುಳಿನಲ್ಲಿ ಹಾದು ಹೋಗಿರುವ ರಕ್ತನಾಳ ಬಿರಿದು ರಕ್ತ ಹೊರಚಿಮ್ಮುತ್ತಿರುವುದು ( brain aneurysm), ಮೆದುಳಿನಲ್ಲಿ ಎದುರಾಗಿರುವ ಸೋಂಕು, ಮೆದುಳಿನಲ್ಲಿರುವ ನರದಲ್ಲಿ ರಕ್ತದ ಹರಿವಿಗೆ ಉಂಟಾಗಿರುವ ತಡೆ ಅಥವಾ ಮೆದುಳುಬಳ್ಳಿಯಿಂದ ಅಗತ್ಯ ದ್ರವ ಎಲ್ಲೋ ಸೋರುತ್ತಿರುವುದು ಮೊದಲಾದ ಗಂಭೀರ ತೊಂದರೆಗಳನ್ನು ಈ ಬಗೆಯ ತಲೆನೋವು ಪ್ರಕಟಿಸುತ್ತದೆ.


 • ಗೊಂಚಲು ತಲೆನೋವು (Cluster headaches)

  ಸಾಮಾನ್ಯವಾಗಿ ಈ ಬಗೆಯ ತಲೆನೋವು ಎರಡರಲ್ಲೊಂದು ಕಣ್ಣುಗಳ ಹಿಂಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ನೋವು ಎದುರಾದಾಗ ಕಣ್ಣುಗಳು ಉರಿಯುವುದು, ಕಣ್ಣುಕೆಂಪಗಾಗುವುದು, ಮೈಯಿಡೀ ಬೆವರುವುದು ಹಾಗೂ ಕಣ್ಣುಗಳು ಊದಿಕೊಳ್ಳುವುದು ಕಾಣಿಸಿಕೊಳ್ಳುತ್ತದೆ. ಅಪರೂಪದಲ್ಲಿ ಮೂಗು ಕಟ್ಟಿಕೊಳ್ಳುವುದು ಹಾಗೂ ಕಣ್ಣೀರ ಧಾರೆ ಸತತವಾಗಿರುವುದು ಸಹಾ ಕಂಡುಬರಬಹುದು. ಈ ನೋವು ಸುಮಾರು ಹದಿನೈದು ನಿಮಿಷದಿಂದ ಮೂರು ಘಂಟೆಗಳವರೆಗೆ ಬಾಧಿಸುತ್ತದೆ ಹಾಗೂ ಒಂದು ವೇಳಾಪಟ್ಟಿಯನ್ನು ಅನುಸರಿಸಿದಂತೆ ಕ್ರಮವಾಗಿ ಮರುಕಳಿಸುತ್ತಿರುತ್ತದೆ. ಕೆಲವರಲ್ಲಿ ಇದು ದಿನಕ್ಕೆ ನಾಲ್ಕು ಬಾರಿಯಾದರೂ ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ಇದು ಚಳಿಗಾಲದಲ್ಲಿ ಹೆಚ್ಚಾಗಿ ಕಾಣಬರುತ್ತದೆ ಹಾಗೂ ಮಹಿಳೆಯರಿಗಿಂತಲೂ ಪುರುಷರಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ನೋವು ಆವರಿಸಿದ ಬಳಿಕ ತಕ್ಷಣವೇ ವೈದ್ಯರನ್ನು ಕಾಣದೇ ನಿರ್ವಾಹವಿಲ್ಲ.

  Most Read: ಸಪಾಟಾದ ಹೊಟ್ಟೆ ಪಡೆಯಲು ಕೇವಲ 14 ದಿನ ಎಳೆನೀರು ಸೇವಿಸಿ ಸಾಕು!


 • ಅಲರ್ಜಿ ತಲೆನೋವು (​Allergy headaches)

  ಯಾವುದೇ ಅಲರ್ಜಿಕಾರಕ ವಸ್ತುವಿಗೆ ದೇಹ ನೀಡುವ ಪ್ರತಿಕ್ರಿಯೆಗಳಲ್ಲಿ ತಲೆನೋವು ಸಹಾ ಒಂದು. ಕೆಲವು ಹೂವುಗಳನ್ನು (ಸಂಪಿಗೆ, Madagascar Jasmine, Jasmine Sambac, Hyacinths/Paper white Hyacinths, Narcissus ಇತ್ಯಾದಿ) ಮೂಸಿ ನೋಡಬಾರದು ಎಂದು ಹಿರಿಯರು ಹೇಳುವುದು ಇದೇ ಕಾರಣಕ್ಕೆ. ತಲೆನೋವು ಎದುರಾದ ಬಳಿಕ ಮೂಗು ಸತತವಾಗಿ ಸೋರುವುದು, ಸತತ ಸೀನು ಮತ್ತು ಕಣ್ಣುಗಳಿಂದ ನೀರು ಸತತವಾಗಿ ಹರಿಯುವುದು ಕಾಣಬರುತ್ತದೆ. ಸಾಮಾನ್ಯವಾಗಿ ಹೂವುಗಳ ಪರಾಗಗಳು ಗಾಳಿಯಲ್ಲಿ ಅತಿ ಹೆಚ್ಚು ತೇಲಾಡುವ ವಸಂತಕಾಲದಲ್ಲಿ ನಮಗಾಗದ ಯಾವುದೋ ಒಂದು ಹೂವಿನ ಪರಾಗ ಆಲರ್ಜಿಯುಂಟುಮಾಡುತ್ತದೆ ಹಾಗೂ ತಲೆನೋವಿಗೆ ಪ್ರಚೋದನೆ ನೀಡಬಹುದು. ನಿಮ್ಮ ತಲೆನೋವಿಗೆ ಕಾರಣವಾದ ಕಣ ಯಾವುದು ಎಂಬುದನ್ನು ಕಂಡುಕೊಳ್ಳಲು ನೀವು ಆ ಸಮಯದಲ್ಲಿ ಎಲ್ಲಾ ಚಿಕ್ಕ ಚಿಕ್ಕ ವಿಷಯಗಳಿಗೂ ಗಮನ ನೀಡಬೇಕಾಗುತ್ತದೆ. ಅದರಲ್ಲೂ ಇಂದು ವಿದೇಶದಿಂದ ತರಿಸಿ ನಾವು ನಮ್ಮ ಮನೆಯಂಗಳ, ರಸ್ತೆಬದಿ ಬೆಳೆಸಿರುವ ಹೂವಿನ ಮರಗಳು (ಉದಾಹರಣೆಗೆ ಅಕೇಶಿಯಾ) ಅಲರ್ಜಿಕಾರಕ ಪರಾಗಗಳನ್ನು ಹೊಂದಿದ್ದು ಈ ಮರ ಹೂವು ಬಿಟ್ಟಾಗ ನಿಮಗೆ ತಲೆನೋವು ಆವರಿಸಿತೇ (ಅಥವಾ ನಿಮಗೆ ತಲೆನೋವು ಆವರಿಸಿದಾಗ ಯಾವುದಾದರೂ ಮರ ಹೂ ಬಿಟ್ಟಿತ್ತೇ) ಎಂಬುದನ್ನು ಗಮನಿಸಿದರೆ ಕಾರಣ ಹುಡುಕುವುದು ಸುಲಭವಾಗುತ್ತದೆ.

  MOst Read: ಪುರುಷರು ಟಾಯ್ಲೆಟ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಾರಂತೆ! ಯಾಕೆ ಗೊತ್ತೇ?


 • ವಿಮಾನಯಾನದ ತಲೆನೋವು (Airplane headache)

  ವಿಮಾನಯಾನದಲ್ಲಿರುವ ಪ್ರತಿ ಹನ್ನೆರಡರಲ್ಲಿ ಒಬ್ಬರಿಗೆ ವಿಮಾನ ಮೇಲೇರುತ್ತಿದ್ದಂತೆಯೇ ನಿಧಾನವಾಗಿ ತಲೆನೋವು ಆವರಿಸುತ್ತದೆ. ವಿಮಾನದೊಳಗಿನ ಕೃತಕ ಒತ್ತಡ ನೆಲದ ಮೇಲಿನ ಒತ್ತಡಕ್ಕಿಂತ ಕೊಂಚವೇ ವ್ಯತ್ಯಾಸವಿರುವುದು ಇದಕ್ಕೆ ಪ್ರಮುಖ ಕಾರಣ. ಸಾಮಾನ್ಯವಾಗಿ ಇದು ತಲೆಯ ಬಲ ಅಥವಾ ಎಡಭಾಗದಲ್ಲಿ ಕೇಂದ್ರದಿಂದ ದೂರವಾಗಿರುತ್ತದೆ. ಈ ಸ್ಥಿತಿಯಿಂದ ಪಾರಾಗಲು ವಿಮಾನಯಾನಕ್ಕೂ ಮುನ್ನ ಸಾಕಷ್ಟು ನೀರು ಕುಡಿದಿರುವುದು, ಯಾವುದೇ ಉದ್ವೇಗಕ್ಕೆ ಒಳಗಾಗದಿರುವುದು ಅಗತ್ಯ. ತಲೆನೋವು ಎದುರಾದಾಗ ಸಾಮಾನ್ಯ ತಲೆನೋವಿನ ಮಾತ್ರೆಯನ್ನು ಸೇವಿಸಿದರೆ ಸಾಕಾಗುತ್ತದೆ.


 • ಅತಿಪರಿಶ್ರಮದ ತಲೆನೋವು (Exertional headaches)

  ಹೆಸರೇ ವಿವರಿಸುವಂತೆ ದೇಹಕ್ಕೆ ಮತ್ತು ವಿಶೇಷವಾಗಿ ಮೆದುಳಿಗೆ ಅತಿಯಾದ ಶ್ರಮವನ್ನು ನೀಡಿದಾಗ (ಅವಿಶ್ರಾಂತ ದುಡಿಮೆ) ಈ ಬಗೆಯ ತಲೆನೋವು ಎದುರಾಗುತ್ತದೆ. ಕೆಲವೊಮ್ಮೆ ದೇಹವನ್ನು ಅತಿಯಾಗಿ ದಂಡಿಸಿದಾಗಲೂ ಈ ಬಗೆಯ ತಲೆನೋವು ಎದುರಾಗುತ್ತದೆ. ಈ ನೋವು ಐದು ನಿಮಿಷದಿಂದ ಹಿಡಿದು ಗಂಭೀರವಾದ ಸಂದರ್ಭಗಳಲ್ಲಿ ಸತತ ಮೂರು ದಿನಗಳವರೆಗೂ ಬಾಧಿಸಬಹುದು ಎಂದು American Migraine Foundation ತಿಳಿಸುತ್ತದೆ. ವಿಶೇಷವಾಗಿ ಅತಿ ಭಾರವನ್ನು ಸತತವಾಗಿ ಎತ್ತುವುದು, ಲೈಂಗಿಕ ಕ್ರಿಯೆಯಲ್ಲಿ ಅತಿಯಾಗಿ ತೊಡಗಿಕೊಳ್ಳುವುದು ಸಹಾ ಈ ತಲೆನೋವಿಗೆ ಕಾರಣವಾಗಬಹುದು. ಈ ನೋವು ಸಾಮಾನ್ಯವಾಗಿ ತಲೆಯ ಒಂದೇ ಭಾಗ ಅಥವಾ ಎರಡೂ ಭಾಗದಲ್ಲಿ, ವಿಶೇಷವಾಗಿ ಹಣೆಯ ಪಕ್ಕ ಮತ್ತು ಕಿವಿಯ ನಡುವಣ ಭಾಗದಲ್ಲಿ ಚಿಟಿಕೆ ಹೊಡೆದಂತೆ ತಡೆತಡೆದು ಬರುತ್ತಿರುತ್ತದೆ. ಹಣೆಯ ಪಕ್ಕದ ನರ ಕಣ್ಣಿಗೆ ಕಾಣುವಷ್ಟು ಸ್ಪಷ್ಟವಾಗಿ ಹೊಡೆದುಕೊಳ್ಳುತ್ತಿರುತ್ತದೆ. ಸಾಮಾನ್ಯವಾಗಿ ಈ ನೋವು ಅಪರೂಪದ ಸಂದರ್ಭಗಳಲ್ಲಿ ಮಾತ್ರವೇ ಎದುರಾಗುತ್ತದೆ ಮತ್ತು ಗರಿಷ್ಟ ಆರು ವಾರಗಳ ಬಳಿಕ ತನ್ನಿಂತಾನೇ ಮಾಯವಾಗುತ್ತದೆ. ಹಾಗಾಗಿ ಈ ನೋವು ಯಾವ ಕಾರಣದಿಂದ ಬಂದಿದೆ ಎಂದು ಅರಿತು ಆ ಸ್ಥಿತಿಗೆ ಆಸ್ಪದ ನೀಡದಿರುವುದೇ ಅತ್ಯಂತ ಸೂಕ್ತ ಮುನ್ನೆಚ್ಚರಿಕೆ ಮತ್ತು ಚಿಕಿತ್ಸೆಯೂ ಆಗಿದೆ. ಶ್ರಮದಾಯಕ ಕಾರ್ಯಗಳ ನಡುವೆ ಸಾಕಷ್ಟು ವಿಶ್ರಾಂತಿ ಮತ್ತು ನಿದ್ದೆ ಪಡೆಯುವುದೂ ಅವಶ್ಯವಾಗಿದೆ.
ತಲೆನೋವು ಎಂದರೆ ತಲೆಯ ಒಳಗೆ ಯಾವುದೋ ನಿರ್ದಿಷ್ಟ ಭಾಗದಲ್ಲಿ ಎದುರಾಗುವ ನೋವು. ಯಾವ ಭಾಗದಲ್ಲಿ ನೋವು ಕೇಂದ್ರೀಕೃತವಾಗಿದೆ ಎಂಬ ಅಂಶವನ್ನು ಆಧರಿಸಿ ಇದಕ್ಕೆ ಚಿಕಿತ್ಸೆಯನ್ನು ಒದಗಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ತಮಗೆ ಆಗಾಗ ತಲೆನೋವು ಎದುರಾಗುತ್ತದೆ ಎಂದು ವಿಶ್ವದ ಬಹುತೇಕ ಜನರು ತಿಳಿಸುತ್ತಾರೆ. ಕೆಲವು ಸಮಯದಲ್ಲಿ ಈ ನೋವು ಹೆರಿಗೆ ನೋವಿನಷ್ಟು ತೀಕ್ಷ್ಣವಾಗಿದ್ದರೆ ಕೆಲವು ಕಚಗುಳಿಯಿಟ್ಟಷ್ಟು ಲಘುವಾಗಿದ್ದು ಮಾತ್ರೆಯೊಂದರ ಸೇವನೆಯಿಂದ ಸುಲಭವಾಗಿ ಗುಣವಾಗುತ್ತದೆ.

ಒಂದು ವೇಳೆ ತಲೆನೋವು ಆವರಿಸುವುದು ಸತತವಾಗಿ ಮರುಕಳಿಸುತ್ತಿದ್ದರೆ ಇದು ಗಂಭೀರವಾಗಿ ಪರಿಗಣಿಸಬೇಕಾದ ವಿಷಯವಾಗಿದ್ದು ತಜ್ಞ ವೈದ್ಯರಿಂದ ಸೂಕ್ತ ತಪಾಸಣೆಗೆ ಒಳಗಾಗುವುದು ಅಗತ್ಯವಾಗಿದೆ. ತಲೆನೋವು ಯಾವ ಭಾಗದಲ್ಲಿದೆ, ಎಷ್ಟು ತೀವ್ರವಾಗಿದೆ ಹಾಗೂ ಎಷ್ಟು ಕಾಲದವರೆಗೆ ಕಾಡುತ್ತದೆ, ಇದರೊಂದಿಗೆ ಇತರ ಯಾವ ಲಕ್ಷಣಗಳು ಗಮನಕ್ಕೆ ಬರುತ್ತವೆ ಮೊದಲಾದವುಗಳನ್ನು ಗಮನಿಸಿದರೆ ತಲೆನೋವು ಯಾವ ಬಗೆಯದ್ದು ಎಂದು ಕಂಡುಕೊಳ್ಳಲು ಸಾಧ್ಯ. ಈ ಮೂಲಕ ಗಂಭೀರವಾದ ಹಾಗೂ ಗಂಭೀರವಲ್ಲದ ಪ್ರಕಾರಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆಯನ್ನೂ ಪಡೆದುಕೊಳ್ಳಬಹುದು. ಸಾಮಾನ್ಯವಾಗಿ ತಲೆನೋವು ಒಟ್ಟು ಎಂಟು ಬಗೆಯಲ್ಲಿರುತ್ತವೆ. ಬನ್ನಿ, ಪ್ರತಿ ತಲೆನೋವಿನ ಬಗ್ಗೆ ಅಮೂಲ್ಯ ಮಾಹಿತಿಯನ್ನು ಅರಿಯೋಣ....

   
 
ಹೆಲ್ತ್