Back
Home » ಆರೋಗ್ಯ
ಮಂಗನ ಕಾಯಿಲೆ ಎಂದರೇನು? ಈ ಕಾಯಿಲೆಯ ಲಕ್ಷಣಗಳೇನು?
Boldsky | 7th Jan, 2019 10:00 AM
 • ಮಲೇರಿಯಾ ಜ್ವರದ ಲಕ್ಷಣವನ್ನೇ ಹೋಲುವ ಈ ವೈರಸ್

  ಮಲೇರಿಯಾ ಜ್ವರದ ಲಕ್ಷಣವನ್ನೇ ಹೋಲುವ ಈ ವೈರಸ್ ಆಧಾರಿತ ಜ್ವರ Flaviviridae ಎಂಬ ಕುಟುಂಬಕ್ಕೆ ಸೇರಿದ ವೈರಸ್ ನಿಂದ ಎದುರಾಗುತ್ತದೆ. ಹಳದಿ ಜ್ವರ ಮತ್ತು ಡೆಂಘಿ ಜ್ವರಗಳೂ ಇದೇ ಕುಟುಂಬಕ್ಕೆ ಸೇರಿವೆ. ವೈರಸ್ ಪೀಡಿತ ಪ್ರಾಣಿಯ ರಕ್ತವನ್ನು ಹೀರುವ ಹೇನು, ಚಿಗಟ ಮೊದಲಾದವು ಇತರ ಪ್ರಾಣಿಗಳನ್ನು ಕಡಿದಾದ ರಕ್ತದ ಮೂಲಕ ಈ ವೈರಸ್ ಹರಡುತ್ತದೆ. ಹೇನಿನ ಕಾಟ ಹೆಚ್ಚೇ ಇರುವ ಮಂಗ, ಇಲಿ, ಹಕ್ಕಿಗಳು ಮೊದಲಾದಗಳಲ್ಲಿ ಈ ವೈರಸ್ ಅತಿ ಸುಲಭವಾಗಿ ಹರಡುತ್ತದೆ. ಚಿಗಟ ಕಚ್ಚಿದ ಮನುಷ್ಯರಿಗೂ ಹರಡುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಈ ಪ್ರಾಣಿಗಳಿರುವ ಸ್ಥಳಕ್ಕೆ ಭೇಟಿ ನೀಡಿದ ಮನುಷ್ಯರಿಗೆ ಚಿಗಟ, ಹೇನು ಅಥವಾ ಬೇರಾವುದೇ ರಕ್ತ ಹೀರುವ ಕೀಟಗಳು ಕಡಿದರೆ ಈ ರೋಗ ಹರಡುತ್ತದೆ. ಸೊಳ್ಳೆ, ತಿಗಣೆ, ಮರಳುನೊಣ, ಟ್ಸೇಟ್ಸೆ ನೊಣ, ಬಸವನ ಹುಳ, ಹೇನು ಮೊದಲಾದ ಕ್ರಿಮಿಗಳ ಮೂಲಕ ಹರಡುವ ಈ ರೋಗಗಳನ್ನು vector-borne disease ಎಂದು ಕರೆಯಲಾಗುತ್ತದೆ.


 • ಪಶ್ಚಿಮ ಘಟ್ಟಗಳ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ ಈ ರೋಗ

  ಕ್ಯಾಸನೂರು ಕಾಡಿನ ಕಾಯಿಲೆ ಈ ಕೀಟಗಳ ಉಪಟಳ ಹೆಚ್ಚಿರುವ ಚಳಿಗಾಲದ ದಿನಗಳಲ್ಲೇ ಹೆಚ್ಚಾಗಿ ಕಾಣಬರುತ್ತದೆ. ಡಿಸೆಂಬರ್ ನಿಂದ ಮೇ ತಿಂಗಳ ಅವಧಿಯಲ್ಲಿ ಪಶ್ಚಿಮ ಘಟ್ಟಗಳಲ್ಲಿ ಕಾಡಿನ ಆಸುಪಾಸಿನಲ್ಲಿರುವ ವ್ಯಕ್ತಿಗಳಿಗೆ ಈ ರೋಗ ಹೆಚ್ಚಾಗಿ ಆವರಿಸುತ್ತದೆ. ಪಶ್ಚಿಮ ಘಟ್ಟಗಳು ಹಾದು ಹೋಗುವ ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಭಾಗಗಳಲ್ಲೇ ಇದು ವ್ಯಾಪಕವಾಗಿ ಕಂಡುಬರುತ್ತದೆ.

  Most Read: ಮಾನವನ ದೇಹದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಹದಿನೈದು ಸಂಗತಿಗಳು


 • ಈ ರೋಗ ಹೇಗೆ ಹರಡುತ್ತದೆ

  ಈ ರೋಗ ಬೇರಾವುದೇ ಕೀಟದ ಮೂಲಕ ಹರಡುವುದಕ್ಕಿಂತ ಎಷ್ಟೂ ಪಾಲು ವೇಗವಾಗಿ ಕೆಂಪು ಚಿಗಟ (Hemaphysalis spinigera) ಎಂಬ ಕೀಟದ ಕಡಿತದ ಮೂಲಕ ಹರಡುತ್ತದೆ. ಈ ಕೀಟದ ದೇಹದಲ್ಲಿ ಒಮ್ಮೆ ಈ ವೈರಸ್ ಸೇರಿಕೊಂಡಿತೋ, ಆ ಕೀಟದ ಜೀವಮಾನವಿಡೀ ಬಿಟ್ಟುಹೋಗುವುದಿಲ್ಲ. ಹಾಗಾಗಿ ಈ ಚಿಗಟ ಕಡಿದ ಅಷ್ಟೂ ಜೀವಿಗಳಿಗೆ ರೋಗ ಬರುವುದು ಖಚಿತ! ಈ ಚಿಗಟಗಳು ಕಚ್ಚುವ ಇಲಿ, ಹೆಗ್ಗಣ, ಮಂಗಗಳಿಗೂ ರೋಗ ಹರಡುತ್ತವೆ. ವೈರಸ್ ಸೋಂಕು ತಗುಲಿದ ಬಳಿಕ ಈ ಚಿಕ್ಕ ಸಸ್ತನಿಗಳು ಕೆಲವೇ ದಿನಗಳಲ್ಲಿ ಸಾಯುತ್ತವೆ.


 • ಮೊದಲು ಜ್ವರ ಆವರಿಸುತ್ತದೆ

  ಚಿಗಟದಿಂದ ಕಡಿಸಿಕೊಂಡ ಮನುಷ್ಯರಿಗೆ ಮೊದಲು ಜ್ವರ ಆವರಿಸುತ್ತದೆ ಹಾಗೂ ಹನ್ನೆರಡು ದಿನಗಳವರೆಗೆ ಸತತವಾಗಿ ಕಾಡುತ್ತದೆ. ಇದರ ಜೊತೆಗೇ ಕೆಮ್ಮು, ತಲೆನೋವು, ಅತಿಸಾರ ಹಾಗೂ ವಾಂತಿ ಸಹಾ ಕಾಣಿಸಿಕೊಳ್ಳುತ್ತದೆ. ಜ್ವರ ವಿಪರೀತವಾದಾಗ ಮಾನಸಿಕ ಅಸ್ವಸ್ಥತೆ, ಭಾರೀ ನಡುಕ ಹಾಗೂ ದೃಷ್ಟಿಮಾಂದ್ಯತೆಯೂ ಕಾಣಿಸಿಕೊಳ್ಳುತ್ತದೆ. ಈ ಲಕ್ಷಣಗಳು ಕಾಣಿಸಿಕೊಂಡ ಬಳಿಕ ಎಷ್ಟು ಬೇಗನೇ ಸಾಧ್ಯವೋ ಅಷ್ಟೂ ಬೇಗನೇ ಆಸ್ಪತೆಗೆ ಕರೆದೊಯ್ದು ಲಸಿಕೆ ನೀಡಬೇಕಾಗುತ್ತದೆ. ಇಂದು ಕರ್ನಾಟಕದ ಎಲ್ಲಾ ಆಸ್ಪತ್ರೆಗಳಲ್ಲಿಯೂ ಈ ಲಸಿಕೆ ಸುಲಭವಾಗಿ ದೊರಕುತ್ತದೆ. ಆದರೆ ಈ ರೋಗದ ಇರುವಿಕೆ ಖಚಿತವಾದರೆ ಆರೋಗ್ಯ ಇಲಾಖೆಯಿಂದ ರೋಗ ಕಂಡುಬಂದ ಪ್ರದೇಶದ ಅಷ್ಟೂ ಜನರಿಗೆ ಲಸಿಕೆ ನೀಡುವುದು ಅನಿವಾರ್ಯವಾಗುತ್ತದೆ ಹಾಗೂ ಈ ವ್ಯಕ್ತಿಗಳನ್ನು ಬೇರೆ ಊರುಗಳಿಗೆ ತೆರಳದಂತೆ ಸೂಚಿಸಲಾಗುತ್ತದೆ.


 • ಮುನ್ನೆಚ್ಚರಿಕೆ ಕ್ರಮಗಳು

  ಈ ರೋಗ ಕಂಡುಬಂದ ಪ್ರದೇಶಗಳಲ್ಲಿರುವ ವ್ಯಕ್ತಿಗಳು ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕಾಗುತ್ತದೆ. ಸೊಳ್ಳೆ ನಿರೋಧಕ ಪರದೆಗಳ ಬಳಕೆ, ಕೀಟಗಳು ನುಸುಳಲು ಸಾಧ್ಯವಾಗದ ಬಟ್ಟೆಗಳನ್ನು ತೊಡುವುದು, ಪ್ರಾಣಿಗಳನ್ನು ಮುಟ್ಟಬೇಕಾಗಿ ಬಂದರೆ ಗವಸು ತೊಟ್ಟುಕೊಳ್ಳುವುದು, ಸ್ವಚ್ಛತೆಗೆ ಅತಿ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯ.

  MOst Read: ದಿನಕ್ಕೆ ಎರಡೇ ಎರಡು ಒಣ ಖರ್ಜೂರ ತಿಂದರೂ ಸಾಕು-ಆರೋಗ್ಯಕ್ಕೆ ಬಹಳ ಒಳ್ಳೆಯದು


 • ಪ್ರಾಥಮಿಕ ಲಕ್ಷಣಗಳು

  -ಅತಿ ಹೆಚ್ಚು ಜ್ವರ
  -ಹಣೆಯ ಭಾಗದಲ್ಲಿ ಭಾರೀ ತಲೆನೋವು
  -ಮೆದುಳುಸ್ರಾವದ ಲಕ್ಷಣಗಳು, ಉದಾಹರಣೆಗೆ ಮೂಗಿನ ಒಳಹೊಳ್ಳೆಯ ಮೇಲ್ಭಾಗದಿಂದ ರಕ್ತ ಜಿನುಗುವುದು, ಗಂಟಲ ಭಾಗ ಮತ್ತು ಒಸಡುಗಳಿಂದ ರಕ್ತಸ್ರಾವ, ಮಲವಿಸರ್ಜನೆಯ ಸಮಯದಲ್ಲಿಯೂ ರಕ್ತಸ್ರಾವ ಕಂಡುಬರಬಹುದು.


 • ಆನಂತರದ ಲಕ್ಷಣಗಳು:

  -ವಾಂತಿ
  -ಸ್ನಾಯುಗಳು ಪೆಡಸಾಗುವುದು
  -ನಡುಕ
  -ಪ್ರತಿವರ್ತನೆ ತೋರದೇ ಹೋಗುವುದು
  -ಮಾನಸಿಕ ತೊಳಲಾಟ


 • ಚಿಕಿತ್ಸೆ ಮತ್ತು ಚೇತರಿಕೆ

  -ಮೊತ್ತ ಮೊದಲು ಲಸಿಕೆಯನ್ನು ಪಡೆಯುವುದು
  -ಸಾಕಷ್ಟು ವಿಶ್ರಾಂತಿ
  -ಪ್ರೋಟೀನ್ ಯುಕ್ತ ಆಹಾರ ಸೇವನೆ


 • ಮುನ್ನೆಚ್ಚರಿಕೆಗಳು

  -ರಕ್ಷಣೆ ಒದಗಿಸುವ ಉಡುಪುಗಳನ್ನು ತೊಡುವುದು
  -ಕೀಟಗಳ ಕಡಿತದಿಂದ ರಕ್ಷಣೆ
  -ಸೊಳ್ಳೆಗಳ ಹಾವಳಿಯಿಂದ ರಕ್ಷಣೆ ಮತ್ತು ನಿರ್ಮೂಲನೆಯ ಕ್ರಮಗಳು
ನಮ್ಮ ಕರ್ನಾಟಕದ ಕ್ಯಾಸನೂರಿನಲ್ಲಿ ಮೊದಲಾಗಿ ಒಂದು ಕೋತಿಯಲ್ಲಿ ಕಂಡುಬಂದ ಸಾಂಕ್ರಾಮಿಕ ವೈರಸ್ ನ ಮೂಲಕ ಹರಡುವ ಈ ರೋಗವನ್ನು Kyasanoor Forest Disease (KFD) ಅಥವಾ ಕ್ಯಾಸನೂರು ಕಾಡಿನ ಕಾಯಿಲೆ (ಮಂಗನ ಕಾಯಿಲೆ) ಎಂದೇ ಗುರುತಿಸಲಾಗುತ್ತಿದೆ.

ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಈ ಕುಗ್ರಾಮದಲ್ಲಿ ಪತ್ತೆಯಾದ ಈ ವೈರಸ್ಸಿನಿಂದ ಕುಖ್ಯಾತಿಯನ್ನು ಪಡೆದುಕೊಂಡಿದ್ದು ಇದುವರೆಗೆ ಭಾರತದಲ್ಲಿ ಹಲವಾರು ಜನರಲ್ಲಿ ಈ ವೈರಸ್ಸಿನ ಸೋಂಕು ತಗಲಿರುವುದು ಪತ್ತೆಯಾಗಿದೆ... ಮುಂದೆ ಓದಿ

   
 
ಹೆಲ್ತ್