Back
Home » ಆರೋಗ್ಯ
ಸೀಬೆ ಎಲೆಗಳ ಟೀ ಕುಡಿಯುವುದರಿಂದ ಬರೋಬ್ಬರಿ 15 ಆರೋಗ್ಯ ಪ್ರಯೋಜನಗಳಿವೆ
Boldsky | 11th Jan, 2019 11:01 AM
 • ಅತಿಸಾರಕ್ಕೆ ಮದ್ದು

  ಅಧ್ಯಾಯನದ ಪ್ರಕಾರ ಅತಿಸಾರಕ್ಕೆ ಕಾರಣವಾದ ಸ್ಟಾಫಿಲೋಕಾಕಸ್ ಏರಿಯಸ್ ಎಂಬ ಬ್ಯಾಕ್ಟೀರಿಯಾದ ವೃದ್ದಿಯನ್ನು ಪೇರಳೆ ಎಲೆಯಲ್ಲಿರುವ ಪೋಷಕಾಂಶಗಳು ನಿಗ್ರಹಿಸುತ್ತವೆ. ಅತಿಸಾರ ತೊಂದರೆ ಇರುವ ವ್ಯಕ್ತಿಗಳು ನಿಯಮಿತವಾಗಿ ಪೇರಳೆ ಎಲೆಗಳ ಟೀ ಕುಡಿಯುತ್ತಾ ಬಂದರೆ ಹೊಟ್ಟೆನೋವು ಕಡಿಮೆಯಾಗುತ್ತದೆ ಹಾಗೂ ಮಲವಿಸರ್ಜನೆಯಲ್ಲಿ ನೀರು ನಷ್ಟವಾಗುವುದು ಕಡಿಮೆಯಾಗುತ್ತದೆ ಹಾಗೂ ಶೌಚಾಲಯಕ್ಕೆ ಧಾವಿಸುವ ಆತುರವೂ ಕಡಿಮೆಯಾಗುತ್ತದೆ ಹಾಗೂ ಶೀಘ್ರವೇ ಅತಿಸಾರ ಇಲ್ಲವಾಗುತ್ತದೆ ಎಂದು ಡ್ರಗ್ಸ್ . ಕಾಂ ವರದಿ ಮಾಡಿದೆ. ಒಂದು ಕಪ್ ನೀರನ್ನು ಕುದಿಸಿ ಇದರಲ್ಲಿ ಪೇರಳೆ ಎಲೆಗಳು ಮತ್ತು ಬೇರನ್ನೂ ಬೆರೆಸಿ ಕೊಂಚ ಕಾಲ ಹಾಗೇ ತಣಿಯಲು ಬಿಟ್ಟು ಬಳಿಕ ಸೋಸಿ ಈ ನೀರನ್ನು ಬೆಳಗ್ಗಿನ ಪ್ರಥಮ ಆಹಾರವಾಗಿ ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ಅತ್ಯುತ್ತಮ ಪರಿಹಾರ ದೊರಕುತ್ತದೆ.


 • ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ

  ನಮ್ಮ ರಕ್ತದಲ್ಲಿರುವ LDL ಅಥವಾ Low-density lipoprotein ಗಳನ್ನು ಕೆಟ್ಟ ಕೊಲೆಸ್ಟ್ರಾಲ್ ಎಂದು ಪರಿಗಣಿಸಲಾಗಿದ್ದು ಇವು ಕೊಬ್ಬಿನ ಕಣಗಳಾಗಿವೆ ಹಾಗೂ ನಮ್ಮ ರಕ್ತದ ಮೂಲಕ ದೇಹದಲ್ಲೆಲ್ಲಾ ಚಲಿಸುತ್ತಿರುತ್ತವೆ. ಇದಕ್ಕೆ ಕೆಟ್ಟ ಎಂಬ ವಿಶೇಷಣವನ್ನು ಏಕೆ ಬಳಸಲಾಗಿದೆ ಎಂದರೆ ಇದರ ಅಂಟುವ ಗುಣದಿಂದಾಗಿ! ಎಲ್ಲೆಲ್ಲಿ ನರಗಳು ಕವಲೊಡೆದಿವೆಯೋ, ತಿರುವು ಪಡೆದಿವೆಯೋ ಅಲ್ಲೆಲ್ಲಾ ಇವು ಒಳ ಅಂಚುಗಳಲ್ಲಿ ಅಂಟಿಕೊಂಡು ಸತತವಾಗಿ ಇತರ ಕಣಗಳನ್ನು ತಮಗೆ ಅಂಟಿಸಿಕೊಳ್ಳುತ್ತಾ ನರಗಳ ಒಳವ್ಯಾಸವನ್ನು ಕಿರಿದಾಗಿಸುತ್ತವೆ. ಈ ಕಿರಿದಾಗಿರುವ ನಾಳದೊಳಗಿನಿಂದ ರಕ್ತವನ್ನು ಸಾಗಿಸಲು ಹೃದಯಕ್ಕೆ ಅನಿವಾರ್ಯವಾಗಿ ಒತ್ತಡವನ್ನು ಹೆಚ್ಚಿಸಬೇಕಾಗುತ್ತದೆ. ಹಾಗಾಗಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಿದ್ದಷ್ಟೂ ಹೃದಯಕ್ಕೆ ಅಪಾಯವೂ ಹೆಚ್ಚು! Nutrition and Metabolism ಎಂಬ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಎಂಟು ವಾರಗಳ ನಿಯಮಿತವಾಗಿ ಪೇರಳೆ ಎಲೆಗಳ ಟೀ ಕುಡಿದರೆ ದೇಹದಲ್ಲಿ ಈ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಆರೋಗ್ಯಕರ ಮಟ್ಟಕ್ಕೆ ಇಳಿಯುತ್ತದೆ.

  Most Read: ಕೂದಲುದುರುವುದು ತಡೆಯಬೇಕಾ? ಹಾಗಿದ್ದರೆ ಸೀಬೆ ಎಲೆಯನ್ನು ಬಳಸಿ


 • ಮಧುಮೇಹದ ನಿಯಂತ್ರಣ ಸುಲಭವಾಗುತ್ತದೆ.

  ಮಧುಮೇಹ ಆವರಿಸುವ ಸಾಧ್ಯತೆ ತಗ್ಗಿಸುವ ಹಾಗೂ ಮಧುಮೇಹಿಗಳಿಗೆ ತಮ್ಮ ಸ್ಥಿತಿಯನ್ನು ನಿಯಂತ್ರಣದಲ್ಲಿರಿಸಲು ಪೇರಳೆ ಎಲೆಗಳ ಟೀ ಅತ್ಯುತ್ತಮ ಎಂದು ಜಪಾನ್ ಈಗಾಗಲೇ ಘೋಷಿಸಿದೆ. ಈ ಎಲೆಗಳಲ್ಲಿರುವ ಪೋಷಕಾಂಶಗಳು ಆಹಾರ ಸೇವನೆಯ ಬಳಿಕ ರಕ್ತದಲ್ಲಿ ಸಕ್ಕರೆಯ ಮಟ್ಟ ಥಟ್ಟನೇ ಏರುವುದನ್ನು ತಡೆಯುತ್ತದೆ. Nutrition and Metabolism ಪ್ರಕಟಿಸಿದ ವರದಿಯ ಪ್ರಕಾರ ಈ ಪೋಷಕಾಂಶಗಳು ಜೀರ್ಣಕ್ರಿಯೆಯ ಸಮಯದಲ್ಲಿ ಕೆಲವಾರು ಕಿಣ್ವಗಳನ್ನು ಬಿಡುಗಡೆ ಮಾಡುತ್ತದೆ, ಇವು ಕಾರ್ಬೋ ಹೈಡ್ರೇಟುಗಳನ್ನು ಸಕ್ಕರೆಯನ್ನಾಗಿ ಪರಿವರಿಸುವ ಕಾರ್ಯವನ್ನು ತಡವಾಗಿಸುತ್ತದೆ ಹಾಗೂ ಈ ಸಕ್ಕರೆಗಳಲ್ಲಿ ಸುಕ್ರೋ ಮತ್ತು ಮಾಲ್ಟೋಸ್ ಇರುತ್ತವೆ. ಪರಿಣಾಮವಾಗಿ ಈ ಸಕ್ಕರೆಗಳು ರಕ್ತಕ್ಕೆ ಅತಿ ನಿಧಾನವಾಗಿ ಲಭಿಸುವ ಮೂಲಕ ಮಧುಮೇಹದ ನಿಯಂತ್ರಣವೂ ಸುಲಭವಾಗುತ್ತದೆ.


 • ತೂಕ ಇಳಿಕೆಯನ್ನು ಸುಲಭವಾಗಿಸುತ್ತದೆ

  ಸ್ಥೂಲಕಾಯ ಕಡಿಮೆಗೊಳಿಸಲು ಯತ್ನಿಸುತ್ತಿರುವ ವ್ಯಕ್ತಿಗಳಿಗೆ ಈ ಟೀ ಅಧ್ಭುತವಾದ ಪ್ರಯೋಜನ ನೀಡುತ್ತದೆ. ಆಹಾರದಲ್ಲಿರುವ ಸಂಕೀರ್ಣ ಕಾರ್ಬೋಹೈಡ್ರೇಟುಗಳನ್ನು ಸುಲಭ ಸಕ್ಕರೆಗಳನ್ನಾಗಿ ಒಡೆಯುವ ಮೂಲಕ ಶೀಘ್ರವಾಗಿ ತೂಕ ಇಳಿಯಲು ಸಾಧ್ಯವಾಗುತ್ತದೆ. ಇದಕ್ಕಾಗಿ ನಿತ್ಯವೂ ಪೇರಳೆ ಎಲೆಗಳ ಜ್ಯೂಸ್ ಅಥವಾ ಟೀ ಯನ್ನು ಕುಡಿಯಿರಿ.


 • ಕ್ಯಾನ್ಸರ್ ವಿರುದ್ದ ಹೋರಾಡುತ್ತದೆ

  ತಜ್ಞರ ಪ್ರಕಾರ "ಪೇರಳೆ ಎಲೆಗಳು ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ತಗ್ಗಿಸಬಹುದು" ವಿಶೇಷವಾಗಿ ಸ್ತನ, ಪ್ರಾಸ್ಟ್ರೇಟ್ ಹಾಗೂ ಬಾಯಿಯ ಕ್ಯಾನ್ಸರ್ ಗೆ ಇದರಲ್ಲಿ ಅಧಿಕ ಪ್ರಮಾಣದಲ್ಲಿರುವ ಲೈಕೋಪೀನ್ ಎಂಬ ಆಂಟಿ ಆಕ್ಸಿಡೆಂಟ್ ಕಾರಣವಾಗಿದೆ. ಈ ಬಗ್ಗೆ ನಡೆದ ಹಲವು ಅಧ್ಯಯನಗಳ ಪ್ರಕಾರ ಕ್ಯಾನ್ಸರ್ ಆವರಿಸುವ ಸಾಧ್ಯತೆ ಇರುವ ಪೋಷಕಾಂಶಗಳಲ್ಲಿ ಲೈಕೋಪೀನ್ ಪ್ರಮುಖವಾಗಿದೆ.


 • ಶೀತ ಮತ್ತು ಕೆಮ್ಮನ್ನು ನಿವಾರಿಸುತ್ತದೆ

  ಇದರಲ್ಲಿರುವ ವಿಟಮಿನಿ ಸಿ ಮತ್ತು ಕಬ್ಬಿಣ ಶೀತ ಮತ್ತು ಕೆಮ್ಮು ಕಡಿಮೆಯಾಗಲು ನೆರವಾಗುತ್ತವೆ. ಅಲ್ಲದೇ ಗಂಟಲಿನಲ್ಲಿ ಕಟ್ಟಿಕೊಂಡಿದ್ದ ಕಫ ಕರಗಿ ನೀರಾಗಲು ನೆರವಾಗುವ ಜೊತೆಗೇ ಗಂಟಲು, ಶ್ವಾಸಕೋಶ ಮತ್ತು ಶ್ವಾಸನಳಿಕೆಗಳಲ್ಲಿರುವ ಸೋಂಕುಗಳನ್ನು ನಿವಾರಿಸಿ ಉಸಿರಾಟವನ್ನು ನಿರಾಳವಾಗಿಸುತ್ತದೆ.

  Most Read: ಸೀಬೆ ಎಲೆಗಳು ಸೌಂದರ್ಯದ ವಿಷಯದಲ್ಲಿ ಎತ್ತಿದ ಕೈ!


 • ಮೊಡವೆಯನ್ನು ತಗ್ಗಿಸುತ್ತದೆ

  ಪೇರಳೆ ಎಲೆಗಳಲ್ಲಿರುವ ಅಧಿಕ ಪ್ರಮಾಣದ ವಿಟಮಿನ್ ಸಿ ಮೊಡವೆಗಳನ್ನು ನಿವಾರಿಸಲು ನೆರವಾಗುತ್ತದೆ. ಇದಕ್ಕಾಗಿ ಕೆಲವು ಎಲೆಗಳನ್ನು ನುಣ್ಣಗೆ ಅರೆದು ಮೊಡವೆಗಳ ಮೇಲೆ ದಪ್ಪನಾಗಿ ರಾತ್ರಿ ಹಚ್ಚಿ ಬೆಳಿಗ್ಗೆ ತೊಳೆದುಕೊಳ್ಳಬೇಕು.


 • ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ

  ಪೇರಳೆ ಹಣ್ಣಿನಲ್ಲಿ ಗಾಯಗಳನ್ನು ಮಾಗಿಸುವ ಗುಣವಿವೆ ಹಾಗೂ ಈ ಗುಣ ಎಲೆಗಳಲ್ಲಿ ಇನ್ನೂ ಹೆಚ್ಚೇ ಇದೆ. ಇದಕ್ಕಾಗಿ ಕುದಿನೀರಿನಲ್ಲಿ ಪೇರಳೆ ಎಲೆಗಳನ್ನು ಕೊಂಚ ಕಾಲ ಕುದಿಸಿ ಈ ನೀರಿನಿಂದ ತ್ವಚೆಯನ್ನು ತೊಳೆದುಕೊಂಡರೆ ಕಾಂತಿ ಹೆಚ್ಚುವ ಜೊತೆಗೇ ಮುಖದ ಸ್ನಾಯುಗಳೂ ಬಲಗೊಂಡು ಸೆಳೆತ ಪಡೆಯುವ ಮೂಲಕ ತ್ವಚೆಯ ಆರೋಗ್ಯವೂ ಉತ್ತಮಗೊಳ್ಳುತ್ತದೆ.


 • ಕೂದಲು ಉದುರುವುದನ್ನು ತಡೆಯುತ್ತದೆ:

  ಕೂದಲು ಉದುರುವುದು ನಿಲ್ಲುತ್ತಿಲ್ಲವೇ? ಈ ಎಲೆಗಳು ನಿಮ್ಮ ಕೂದಲ ಎಲ್ಲ ತೊಂದರೆಗಳನ್ನು ನಿವಾರಿಸಬಲ್ಲವು. ಕೊಂಚ ಪೇರಳೆ ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ತಣಿಸಿದ ಬಳಿಕ ಸೋಸಿ ಈ ನೀರಿನಿಂದ ನೆತ್ತಿಯನ್ನು ಚೆನ್ನಾಗಿ ಮಸಾಜ್ ಮಾಡಿ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಕೂದಲ ಬುಡಕ್ಕೆ ಅತ್ಯುತ್ತಮವಾದ ಆರೈಕೆ ಒದಗಿಸುತ್ತವೆ.


 • ಹಲ್ಲುನೋವನ್ನು ಕಡಿಮೆ ಮಾಡುತ್ತದೆ

  " ಪೇರಳೆ ಎಲೆಗಳಲ್ಲಿರುವ ಉರಿಯೂತ ನಿವಾರಕ ಗುಣ ಬಾಯಿಯ ಆರೋಗ್ಯವನ್ನು ಕಾಪಡಲು ಶಕ್ತವಾಗಿವೆ" ಎಂದು ತಜ್ಞರು ತಿಳಿಸುತ್ತಾರೆ. ಊದಿಕೊಂಡ ಒಸಡು, ಒಸಡುಗಳಲ್ಲಿ ಹುಣ್ಣು ಹಾಗೂ ಹಲ್ಲು ನೋವಿಗೆ ಇದೊಂದು ಅತ್ಯುತ್ತಮ ಮನೆ ಮದ್ದಾಗಿದೆ. ಇದರ ಪ್ರಬಲ ಬ್ಯಾಕ್ಟೀರಿಯಾ ನಿರೋಧಕ ಗುಣ ಈ ತೊಂದರೆಗಳಿಗೆ ಕಾರಣವಾದ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಶಕ್ತವಾಗಿವೆ. ಇದಕ್ಕಾಗಿ ಹಸಿ ಪೇರಳೆ ಎಲೆಗಳನ್ನು ನುಣ್ಣಗೆ ಅರೆದು ನೇರವಾಗಿ ಒಸಡುಗಳ ಮೇಲೆ ದಪ್ಪನಾಗಿ ಹಚ್ಚಿಕೊಂಡು ಆದಷ್ಟೂ ಹೊತ್ತು ಹಾಗೇ ಇರಲು ಬಿಡಬೇಕು.


 • ಗಾಢ ನಿದ್ದೆ ಆವರಿಸಲು ನೆರವಾಗುತ್ತದೆ

  "ನಿಯಮಿತವಾಗಿ ಪೇರಳೆ ಎಲೆಗಳ ಟೀ ಕುಡಿಯುವ ಮೂಲಕ ಗಾಢ ನಿದ್ದೆ ಆವರಿಸಲು ಸಾಧ್ಯವಾಗುತ್ತದೆ" ಎಂದು ತಜ್ಞರು ವಿವರಿಸುತ್ತಾರೆ. ಇವು ನರಗಳನ್ನು ಶಾಂತಗೊಳಿಸಿ ಮನವನ್ನು ನಿರಾಳವಾಗಿಸುತ್ತದೆ ಹಾಗೂ ಈ ಮೂಲಕ ಗಾಢ ನಿದ್ದೆ ಆವರಿಸಲು ಸಾಧ್ಯವಾಗುತ್ತದೆ.


 • ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

  ಆಹಾರತಜ್ಞರ ಪ್ರಕಾರ "ಪೇರಳೆ ಎಲೆಗಳ ಟೀ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ" ಈ ಮೂಲಕ ಹಲವು ರೋಗಗಳು ಬರದಂತೆ ತಡೆಗಟ್ಟಬಹುದು.


 • ಕರುಳು ವ್ಯವಸ್ಥೆಯ ತೊಂದರೆಗಳನ್ನು ಸರಿಪಡಿಸುತ್ತದೆ

  ಜೀರ್ಣಾಂಗಗಳಲ್ಲಿ ಎದುರಾಗುವ ತೊಂದರೆಗೆ ಇಲ್ಲಿ ಸಾಗುವ ಆಹಾರದ ಆಮ್ಲೀಯತೆ ಪ್ರಮುಖ ಕಾರಣವಾಗಿದೆ. ಪೇರಳೆ ಎಲೆಗಳಲ್ಲಿರುವ ಪೋಷಕಾಂಶಗಳು ಜೀರ್ಣಾಂಗಗಳಲ್ಲಿ ಒಂದು ಬಗೆಯ ಸ್ನಿಗ್ಧ ದ್ರವವನ್ನು ಹೆಚ್ಚುವರಿಯಾಗಿ ಉತ್ಪಾದಿಸುವ ಮೂಲಕ ಈ ಆಮ್ಲೀಯತೆ ಜೀರ್ಣಾಂಗಗಳ ಒಳಭಾಗವನ್ನು ಸುಡದಂತೆ ರಕ್ಷಿಸುತ್ತವೆ. ತನ್ಮೂಲಕ ಈ ಕಾರಣದಿಂದ ಎದುರಾಗಬಹುದಾಗಿದ್ದ ಉರಿ ಹಾಗೂ ಇದರ ಬ್ಯಾಕ್ಟೀರಿಯಾ ನಿವಾರಕ ಗುಣ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ತಡೆಯುತ್ತವೆ.

  Most Read: ಮುಖ ಸುಂದರವಾಗಿ ಕಾಣಬೇಕೆಂದರೆ, ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಹೀಗೆ ಮಾಡಿ...


 • ಹೃದಯದ ಆರೋಗ್ಯ ವೃದ್ಧಿಸುತ್ತದೆ

  ಈ ಟೀ ಸೇವನೆಯಿಂದ ಹೃದಯ ಮತ್ತು ರಕ್ತಪರಿಚಲನೆಯೂ ಉತ್ತಮಗೊಳ್ಳುತ್ತದೆ ಎಂದು ಅನ್ಶುಲ್ ಜೈಭಾರತ್ ವಿವರಿಸುತ್ತಾರೆ.


 • ಮೆದುಳಿಗೂ ಒಳ್ಳೆಯದು

  ಈ ಎಲೆಗಳಲ್ಲಿರುವ ವಿಟಮಿನ್ ಬಿ 33 ಅಥವಾ ನಿಯಾಸಿನ್, ವಿಟಮಿನ್ ಬಿ6 ಅಥವಾ ಪೈರಿಡಾಕ್ಸಿನ್ ಮೆದುಳಿಗೆ ತಲುಪುವ ರಕ್ತಪರಿಚಲನೆಯನ್ನು ಹೆಚ್ಚಿಸುತ್ತವೆ ಹಾಗೂ ಈ ಮೂಲಕ ಮೆದುಳಿನ ಯೋಚನಾ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ ಹಾಗೂ ನರಗಳನ್ನೂ ನಿರಾಳಗೊಳಿಸುತ್ತವೆ ಎಂದು ಡಾ. ಮನೋಜ್ ಕೆ ಅಹುಜಾರವರು ತಿಳಿಸುತ್ತಾರೆ.
ಪೇರಳೆ ಅಥವಾ ಸೀಬೆ ಎಲೆಗಳ ಮಹತ್ವ ಇದುವರೆಗೆ ನಿಮಗೆ ತಿಳಿದಿರದೇ ಇದ್ದರೆ ಈ ಲೇಖನ ನೀವು ಖಂಡಿತವಾಗಿಯೂ ಓದಲೇಬೇಕು. ಸಾಮಾನ್ಯವಾಗಿ ಎಲ್ಲೆಡೆ ಸುಲಭವಾಗಿ, ಸುಲಭದರದಲ್ಲಿ ಲಭಿಸುವ ಪೇರಳೆ ಹಣ್ಣು (ಹಿಂದಿಯಲ್ಲಿ ಅಮ್ರೂದ್) ಒಂದು ಅತ್ಯುತ್ತಮ ಫಲವಾಗಿದೆ ಹಾಗೂ ಇದರ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಇದರಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ, ಲೈಕೋಪೀನ್ ಹಾಗೂ ತ್ವಚೆಯ ಆರೋಗ್ಯವನ್ನು ವೃದ್ದಿಸುವ ಆಂಟಿ ಆಕ್ಸಿಡೆಂಟುಗಳಿವೆ. ಅಲ್ಲದೇ ಇದರಲ್ಲಿರುವ ಪೊಟ್ಯಾಶಿಯಂ ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಈ ಹಣ್ಣಿನಲ್ಲಿ ಸುಮಾರು ಎಂಭತ್ತು ಭಾಗ ನೀರು ಹಾಗೂ ಉಳಿದ ಭಾಗದಲ್ಲಿ ಬಹುತೇಕ ಕರಗದ ನಾರು ಇರುವ ಕಾರಣ ತೂಕ ಇಳಿಸುವವರಿಗೆ ಅತಿ ಸೂಕ್ತವಾದ ಆಹಾರವಾಗಿದೆ.

ಆದರೆ ಈ ಹಣ್ಣಿನ ಮರದ ಎಲೆಗಳಲ್ಲಿಯೂ ಹಲವರು ಆರೋಗ್ಯಕರ ಪ್ರಯೋಜನಗಳಿವೆ ಎಂದು ಇದಕ್ಕೂ ಮುನ್ನ ನಿಮಗೆ ತಿಳಿದಿತ್ತೇ? ಇದರ ಚಿಗುರು ಎಲೆಗಳನ್ನು ಒಣಗಿಸಿ ಹುರಿದು ಮಾಡಿದ ಪುಡಿಯಿಂದ ತಯಾರಿಸಿದ ಟೀ ಒಂದು ಔಷಧಿಯ ರೂಪದ ಜಾದೂ ಪೇಯವಾಗಿದೆ. ಮೆಕ್ಸಿಕೋ ಹಾಗೂ ಇತರ ದಕ್ಷಿಣ ಅಮೇರಿಕಾ ದೇಶಗಳಲ್ಲಿ ಈ ಟೀಯನ್ನು ನೂರಾರು ವರ್ಷಗಳಿಂದ ಬಳಸಲಾಗುತ್ತಿದೆ. "ಈ ಎಲೆಗಳಲ್ಲಿ ವಿಟಮಿನ್ ಸಿ ನಂತಹ ಪ್ರಬಲ ಆಂಟಿ ಆಕ್ಸಿಡೆಂಟುಗಳ ಆಗರವೇ ಇದೆ ಹಾಗೂ ಕ್ವೆರ್ಸಟಿನ್ ನಂತಹ ಫ್ಲೇವಯಾಯ್ಡ್ ಗಳೂ ಇವೆ " ಎಂದು ದೆಹಲಿಯ ಆಹಾರತಜ್ಞ ಅನ್ಶುಲ್ ಜೈಭಾರತ್ ರವರು ತಿಳಿಸುತ್ತಾರೆ. ಈ ಟೀ ತಯಾರಿಸಲು ಸುಲಭ ವಿಧಾನವೆಂದರೆ ಚಿಗುರು ಎಲೆಗಳನ್ನು ಒಂದು ಲೋಟ ಬಿಸಿನೀರಿನಲ್ಲಿ ಹಾಕಿ ಕೊಂಚ ಕಾಲ ಬಿಟ್ಟು ನೇರವಾಗಿ ಕುಡಿಯುವುದಾಗಿದೆ. ಬನ್ನಿ, ಈ ಟೀ ಕುಡಿದರೆ ಲಭಿಸುವ ಹದಿನೈದು ಪ್ರಯೋಜನಗಳ ಬಗ್ಗೆ ಅರಿಯೋಣ:

   
 
ಹೆಲ್ತ್