Back
Home » ಆರೋಗ್ಯ
ಡೊಳ್ಳು ಹೊಟ್ಟೆಗಳಲ್ಲಿ ಎಷ್ಟು ವಿಧ? ಇದರಿಂದ ಬಿಡುಗಡೆ ಹೇಗೆ?
Boldsky | 16th Jan, 2019 10:26 AM
 • ಮದ್ಯಸೇವನೆಯ ಪ್ರಭಾವದಿಂದ ಲಭಿಸಿದ ಡೊಳ್ಳುಹೊಟ್ಟೆ

  ಎದೆಯ ಮಟ್ಟಸವಾಗಿದ್ದು ಹೊಟ್ಟೆಯ ಮೇಲ್ಭಾಗ ಒಳಗಿನಿಂದ ಗುದ್ದಿ ಹೊರದೂಡಿದಂತೆ ತೀರಾ ದೊಡ್ಡದಲ್ಲದ ಹೊಟ್ಟೆ ಇದ್ದರೆ ಇದು ಮದ್ಯಪಾನದ ಪ್ರಭಾವವೆಂದು ಸ್ಪಷ್ಟವಾಗಿಯೇ ಹೇಳಬಹುದು. ಇದನ್ನು ಹಿಂದೆ ಕಳುಹಿಸಲು ಬಂದ ದಾರಿಯಲ್ಲಿಯೇ ಹಿಂದಿರುಗಿದರಾಯ್ತು ಅಷ್ಟೇ, ಅಂದರೆ ಮದ್ಯಪಾನಕ್ಕೆ ವಿದಾಯ ಹೇಳುವುದು. ಆದರೆ ಮದ್ಯಪಾನ ಮಾನಸಿಕ ಪಿಡುಗಾಗಿದ್ದು ಇದರಿಂದ ಹೊರಬರಲು ದೃಢ ಮನೋಭಾವ ಅಗತ್ಯ.


 • ಮದ್ಯಸೇವನೆಯ ಪ್ರಭಾವದಿಂದ ಲಭಿಸಿದ ಡೊಳ್ಳುಹೊಟ್ಟೆ

  ಹೊಟ್ಟೆ ಮುಂದೆ ಬರುವುದಕ್ಕೂ ಮದ್ಯಪಾನನ್ನೂ ಏನು ಸಂಬಂಧ? ಮೊದಲಾಗಿ, ಮದ್ಯ ನಮ್ಮ ಹೊಟ್ಟೆಯಿಂದ ನೇರವಾಗಿ ರಕ್ತವನ್ನು ಸೇರುತ್ತದೆ ಹಾಗೂ ಜೀರ್ಣಕ್ರಿಯೆಯನ್ನೇ ಏರುಪೇರುಗೊಳಿಸುತ್ತದೆ. ಪರಿಣಾಮವಾಗಿ ಆಹಾರ ಸರಿಯಾಗಿ ಜೀರ್ಣಗೊಳ್ಳದೇ ಕೊಬ್ಬು ಸಂಗ್ರಹವಾಗಲು ಕಾರಣವಾಗುತ್ತದೆ. ಎರಡನೆಯದಾಗಿ ಮದ್ಯದಲ್ಲಿ ಭಾರೀ ಪ್ರಮಾಣದ ಕ್ಯಾಲೋರಿಗಳೂ ಇವೆ. ಇವೇ ಕೊಬ್ಬಿನ ಕಣಗಳ ಸಂಗ್ರಹ ಹೆಚ್ಚಳಕ್ಕೆ ನೆರವಾಗುತ್ತವೆ. ಹಾಗಾಗಿ ಮದ್ಯಪಾನ ವರ್ಜನೆ ಅತ್ಯುತ್ತಮ ನಿರ್ಧಾರ. ಆದರೆ ಇದು ಕಷ್ಟಸಾಧ್ಯವೂ ಆದುದರಿಂದ ಒಮ್ಮೆಲೇ ಬಿಡದೇ ಪ್ರಮಾಣವನ್ನು ಮಿತಗೊಳಿಸಿ ಮದ್ಯಕ್ಕೆ ಆಹ್ವಾನ ನೀಡುವ ಸ್ನೇಹಿತರಿಗೆ ನಿಮ್ಮ ದೃಢನಿರ್ಧಾರವನ್ನು ಪ್ರಕಟಿಸಿ. ಒಂದು ವೇಳೆ ನಿಮ್ಮ ನಿರ್ಧಾರ ದೃಢವಾಗಿದ್ದರೆ ಮಾತ್ರ ನಿಮ್ಮಿಂದ ಇದು ಸಾಧ್ಯವಾಗುತ್ತದೆ ಹಾಗೂ ನಿಮ್ಮ ನಿರ್ಧಾರವನ್ನು ನಿಮ್ಮ ಸ್ನೇಹಿತರೂ ಗೌರವಿಸುತ್ತಾರೆ.


 • ಗರ್ಭಾವಸ್ಥೆಯಲ್ಲಿ ಎದುರಾಗುವ ಡೊಳ್ಳುಹೊಟ್ಟೆ

  ಗರ್ಭಾವಸ್ಥೆಯ ಪ್ರಾರಂಭದ ದಿನಗಳಲ್ಲಿ ಕಾಣಬರುವ ಈ ಹೊಟ್ಟೆ ಅತ್ಯಂತ ಆಕರ್ಷಕ ಹಾಗೂ ವಿಶೇಷವಾಗಿ ತಾಯಿಯಾಗುವವಳಿಗೆ ಹೆಚ್ಚು ಸಂತಸ ನೀಡುವ ಹೊಟ್ಟೆಯೂ ಆಗಿದೆ. ವಾಸ್ತವವಾಗಿ ಈ ಹೊಟ್ಟೆ ಗರ್ಭದಲ್ಲಿರುವ ಮಗುವಿಗೆ ಹೆಚ್ಚಿನ ರಕ್ಷಣೆ ಒದಗಿಸಲೆಂದು ದೇಹ ನಿರ್ಮಿಸಿದ ಕೊಬ್ಬಿನ ಪದರವಾಗಿದೆ. ಆದರೆ ಹೆರಿಗೆಯ ಬಳಿಕ ಈ ಕೊಬ್ಬಿನ ಪದರದ ಅಗತ್ಯ ಉಳಿಯುವುದಿಲ್ಲವಾದರೂ ಹೆಚ್ಚಿನ ತಾಯಂದಿರಲ್ಲಿ ಈ ಭಾಗದ ಕೊಬ್ಬು ಮಾತ್ರ ಹಾಗೇ ಉಳಿದುಕೊಳ್ಳುತ್ತದೆ. ಈ ಕೊಬ್ಬನ್ನು ಕರಗಿಸುವ ಪ್ರಯತ್ನವನ್ನು ಬಾಣಂತನದ ಅವಧಿಯಲ್ಲಿ ಮಾಡಬಾರದು. ಕೆಲವು ತಿಂಗಳುಗಳ ಬಳಿಕ ಸೂಕ್ತ ವ್ಯಾಯಾಮ, ಯೋಗಾಸನ ಮೊದಲಾದವುಗಳನ್ನು ನಿಮ್ಮ ವೈದ್ಯರ ಸಲಹೆಯ ಮೇರೆಗೆ ನಿತ್ಯವೂ ಅನುಸರಿಸುತ್ತಾ ಬರಬೇಕು. ಏಕೆಂದರೆ ನಿಮ್ಮ ಮತ್ತು ನಿಮ್ಮ ಮಗುವಿನ ಆರೋಗ್ಯಕ್ಕೆ ಮಿಗಿಲಾಗಿರುವುದು ಯಾವುದೂ ಇಲ್ಲ, ಈ ಡೊಳ್ಳುಹೊಟ್ಟೆಯ ಸಹಿತ!


 • ಮಾನಸಿಕ ಒತ್ತಡಕ್ಕೆ ಮಣಿದು ಎದುರಾದ ಡೊಳ್ಳುಹೊಟ್ಟೆ

  ಇಲ್ಲೇನೋ ಎಡವಟ್ಟಾದಂತಿದೆ? ಮಾನಸಿಕ ಒತ್ತಡ ಎದುರಾದರೆ ದೇಹ ಸೊರಗಬೇಕು, ಅದು ಬಿಟ್ಟು ಡೊಳ್ಳು ಹೊಟ್ಟೆ ಎದುರಾಗುತ್ತದೆ ಎಂದರೆ? ಆದರೆ ವಾಸ್ತವದಲ್ಲಿ ಇದಕ್ಕೆ ವಿರುದ್ದವಾದುದೇ ಸತ್ಯವಾಗಿದೆ ಏಕೆಂದರೆ ಮಾನಸಿಕ ಒತ್ತಡವಿದ್ದಾಗ ದೇಹ ಅಗತ್ಯಕ್ಕೂ ಹೆಚ್ಚಿನ ಆಹಾರವನ್ನು ಬೇಡುತ್ತದೆ. ಮಾನಸಿಕ ಒತ್ತಡದ ಸಮಯದಲ್ಲಿ ಮೆದುಳಿಗೆ ಹೆಚ್ಚಿನ ರಕ್ತಪರಿಚಲನೆಯ ಅಗತ್ಯವಿದೆ ಹಾಗೂ ಹೆಚ್ಚಿನದನ್ನು ಒದಗಿಸಲು ಆಹಾರವನ್ನೂ ಹೆಚ್ಚೇ ಸೇವಿಸಬೇಕಾಗುತ್ತದೆ.


 • ಮಾನಸಿಕ ಒತ್ತಡಕ್ಕೆ ಮಣಿದು ಎದುರಾದ ಡೊಳ್ಳುಹೊಟ್ಟೆ

  ಅಲ್ಲದೇ ಈ ಸಮಯದಲ್ಲಿ ನೋಡಿದರೇ ಮನಸ್ಸಿಗೆ ಮುದನೀಡುವ ಆಹಾರವೇ ಇಷ್ಟವಾಗುತ್ತದೆ. ಸಿದ್ದ ಆಹಾರಗಳು ನೋಡಲಿಕ್ಕೆ ಅತ್ಯಂತ ಸುಂದರವಾಗಿದ್ದು ಇವುಗಳನ್ನು ಸೇವಿಸುವುದು ಅವ್ಯಾಹತವಾಗುತ್ತದೆ. ಇವು ನಮಗೆ ಅಗತ್ಯವಿದ್ದಷ್ಟು ಆರಾಮ ಮತ್ತು ಜೀರ್ಣಗೊಳ್ಳಲು ಸಮಯ ನೀಡದೇ ಕೊಬ್ಬಿನ ಕಣಗಳಾಗಿ ಸೊಂಟದ ಸುತ್ತ ತುಂಬತೊಡಗುತ್ತವೆ. ಈ ಕೊಬ್ಬು ಅತ್ಯಂತ ಅಪಾಯಕಾರಿಯಾಗಿದೆ. ವಿಶೇಷವಾಗಿ ಯಕೃತ್ ನಲ್ಲಿ (fatty liver)ತುಂಬಿದ ಕೊಬ್ಬು ಅನಾರೋಗ್ಯಕ್ಕೆ ಮೂಲ! ಹಾಗಾಗಿ ಮಾನಸಿಕ ಒತ್ತಡದಲ್ಲಿದ್ದಾಗ ಆಹಾರ ಸೇವಿಸದೇ, ಆದಷ್ಟೂ ಮನಸ್ಸಿಗೆ ನಿರಾಳತೆ ನೀಡುವ ಕ್ರಿಯೆಗಳಲ್ಲಿ ಒಳಗೊಂಡು ಉತ್ತಮ ಜೀವನ ಸಾಗಿಸುವ ಮೂಲಕ ಈ ಕೊಬ್ಬಿನಿಂದ ಬಿಡುಗಡೆ ಪಡೆಯಬಹುದು.

  Most Read: ಎರಡು ವಾರಗಳಲ್ಲಿಯೇ ಹೊಟ್ಟೆಯ ಬೊಜ್ಜು ಕರಗಿಸುವ ಅದ್ಭುತ ಜ್ಯೂಸ್‌ಗಳು


 • ಆರೋಗ್ಯಕರ ಆಹಾರ ಸೇವಿಸಿ

  ಮಾನಸಿಕ ಒತ್ತಡವಿರುವವರು ತಮ್ಮ ನಿತ್ಯದ ದಿನಚರಿಯನ್ನು ಕೊಂಚವಾಗಿ ಬದಲಿಸಿಕೊಂಡು ಸಾಕಷ್ಟು ವ್ಯಾಯಾಮ ಅಳವಡಿಸಿಕೊಳ್ಳುವುದು, ಆಹಾರಕ್ರಮವನ್ನು ಬದಲಿಸಿ ಆರೋಗ್ಯಕರ ಆಹಾರ ಸೇವಿಸುವುದು, ಸಾಕಷ್ಟು ನೀರು, ಆರಾಮ, ನಿದ್ದೆ ಪಡೆಯುವುದು, ನೆಮ್ಮದಿ ನೀಡುವ ಕ್ರಿಯೆಗಳಲ್ಲಿ, ಚಟುವಟಿಕೆಗಳಲ್ಲಿ ಭಾಗಿಯಾಗುವುದು ಮೊದಲಾದವು ಅದ್ಬುತವನ್ನೇ ಸಾಧಿಸುತ್ತವೆ. ಕೇವಲ ನಿಮ್ಮ ಹೊಟ್ಟೆ ಕಡಿಮೆಯಾಗುವುದು ಮಾತ್ರವಲ್ಲ, ಇಡಿಯ ದೇಹ ಮತ್ತು ಮನಸ್ಸು ಸಹಾ ಉತ್ತಮ ಆರೋಗ್ಯದಿಂದ ಕಳೆ ಪಡೆಯುತ್ತವೆ.


 • ರಸದೂತದ ಪರಿಣಾಮ / ಅನುವಂಶಿಕವಾಗಿ ಎದುರಾದ ಡೊಳ್ಳು ಹೊಟ್ಟೆ

  ಕೆಲವರಲ್ಲಿ ಸ್ಥೂಲಕಾಯ ಯಾವುದೇ ಸ್ಪಷ್ಟ ಕಾರಣವಿಲ್ಲದೇ ಎದುರಾಗಿರುತ್ತದೆ. ಇವರು ಸಾಮಾನ್ಯರಿಗಿಂತ ಅರ್ಧದಷ್ಟು ಊಟ ಮಾಡಿಯೂ ಇತರರಿಗಿಂತ ನಾಲ್ಕು ಪಟ್ಟು ಹೆಚ್ಚು ವ್ಯಾಯಾಮ ಮಾಡಿದರೂ ಸರಿ, ಡೊಳ್ಳುಹೊಟ್ಟೆ ಸೊಂಟದ ಎಲ್ಲಾ ಕಡೆಯಿಂದ ಜಾರುತ್ತಿರುವಂತೆ ಜೋಲು ಬಿದ್ದಿರುತ್ತದೆ. ಈ ಪರಿಯ ಡೊಳ್ಳುಹೊಟ್ಟೆಯನ್ನು ನಿವಾರಿಸುವುದು ಅಸಾಧ್ಯದ ಮಾತು. ಏಕೆಂದರೆ ಈ ಸೂಚನೆ ಇವರ ದೇಹದಲ್ಲಿ ಅನುವಂಶಿಕವಾಗಿ ಬಂದಿದ್ದು, ಒಂದು ವೇಳೆ ಹಠಕಟ್ಟಿ ನಾಲ್ಕಾರು ಕೇಜಿ ಇಳಿಸಿಕೊಂಡರೂ ಕೆಲವೇ ದಿನಗಳಲ್ಲಿ ದೇಹ ಮತ್ತೆ ಹಿಂದಿನ ತೂಕವನ್ನು ಪಡೆದೇ ಪಡೆಯುತ್ತದೆ. ಹಾಗಾಗಿ ಈ ವ್ಯಕ್ತಿಗಳು ತಮ್ಮ ಸ್ಥೂಲದೇಹವನ್ನು ದೇವರು ಕೊಟ್ಟ ಪ್ರಸಾದ ಎಂದೇ ಪರಿಗಣಿಸಿ ವೈದ್ಯರು ನೀಡುವ ಔಷಧಿಗಳನ್ನು ಕಾಲಕಾಲಕ್ಕೆ ಸರಿಯಾಗಿ ಸೇವಿಸುತ್ತಾ, ಉತ್ತಮ ಆರೋಗ್ಯ ಉಳಿಸಿಕೊಳ್ಳಲು ಸಾಕಷ್ಟು ವ್ಯಾಯಾಮ, ಆರೋಗ್ಯಕರ ಆಹಾರ ಸೇವಿಸಿ ಈಗಿರುವ ದೇಹವನ್ನು ಇನ್ನಷ್ಟು ತೂಕವೇರದಂತೆ ನೋಡಿಕೊಳ್ಳಬೇಕು.

  Most Read: ಬೊಜ್ಜು ಕರಗಿಸಲು ಟಿಪ್ಸ್-ಕಡಿಮೆ ವೆಚ್ಚ ಅಧಿಕ ಲಾಭ!


 • ವಾಯುಪ್ರಕೋಪದಿಂದಾಗಿ ಎದುರಾದ ಹೊಟ್ಟೆ

  ಹೊಟ್ಟೆಯೊಳಗೆ ವಾಯು ತುಂಬಿ ಉಬ್ಬಿದ ಹೊಟ್ಟೆಗಿಂತ ಕೆಟ್ಟ ಹೊಟ್ಟೆ ಇನ್ನೊಂದಿಲ್ಲ. ಒಳಗಿನಲ್ಲಿ ಉರಿ ಉರಿಯಾಗಿರುವ ವಾಯು ಮತ್ತು ದ್ರವಗಳು ತುಂಬಿ ಹೊಟ್ಟೆ ಬೆಲೂನಿನಂತೆ ಉಬ್ಬಿದ್ದು ನೋಡುವವರಿಗೆ ಅಸಹ್ಯವಾಗಿರುವಂತೆ ಇರುವ ಈ ಹೊಟ್ಟೆ ಅತ್ಯಂತ ಅನಾರೋಗ್ಯಕರವೂ ಆಗಿದೆ. ಸಾಮಾನ್ಯವಾಗಿ ಈ ಬಗೆಯ ಹೊಟ್ಟೆ ಎದೆಯ ಕೆಳಗಿನಿಂದಲೇ (ಅಂದರೆ ವಪೆ ಇರುವಲ್ಲಿಂದ) ಉಬ್ಬಲು ಪ್ರಾರಂಭವಾಗಿದ್ದು ಕೆಳಹೊಟ್ಟೆ ಪ್ರಾರಂಭವಾಗುವಲ್ಲಿ ಮುಗಿದಿರುತ್ತದೆ. ಈ ಉಬ್ಬರಿಕೆಗೆ ಕಾರಣವಾಗಿರುವ ಆಮ್ಲಗಳು ಹೊಟ್ಟೆಯಲ್ಲಿ ಹುಣ್ಣುಗಳನ್ನೂ ಉಂಟುಮಾಡಬಹುದು. ಈ ಹೊಟ್ಟೆಯನ್ನು ಉಪೇಕ್ಷಿಸದೇ ತಕ್ಷಣ ವೈದ್ಯರ ಬಳಿ ಚಿಕಿತ್ಸೆ ಪಡೆಯಬೇಕು.

  Most Read: ಬರೀ ಎರಡು ವಾರಗಳಲ್ಲಿ ಎರಡು ಇಂಚಿನಷ್ಟು ಬೊಜ್ಜು ಕರಗಿಸಿ!


 • ವಾಯುಪ್ರಕೋಪದಿಂದಾಗಿ ಎದುರಾದ ಹೊಟ್ಟೆ

  ಕೆಲವೊಮ್ಮೆ ಈ ಬಗೆಯ ಹೊಟ್ಟೆ ಕ್ಯಾನ್ಸರ್ ನ ಸೂಚನೆಯನ್ನೂ ಪ್ರಕಟಿಸುತ್ತದೆ. ಈ ಹೊಟ್ಟೆ ವಾಸ್ತವವಾಗಿ ತಾತ್ಕಾಲಿಕವಾಗಿದ್ದು ಹಿಂದೆ ತಿಂದಿದ್ದ ಯಾವುದೋ ಆಹಾರ ಅಥವಾ ಹೊಟ್ಟೆಯ ಅನಾರೋಗ್ಯದ ಕಾರಣದಿಂದ ಎದುರಾಗಿರುತ್ತದೆ. ಇಲ್ಲಿ ವಾಯು ತುಂಬಿಕೊಂಡಿರಲು ಸೂಕ್ತ ಕಾರಣವನ್ನು ವೈದ್ಯರು ಕೆಲವು ಪರೀಕ್ಷೆಗಳಿಂದ ಖಚಿತಪಡಿಸಿ ಔಷಧಿ ನೀಡುತ್ತಾರೆ. ಈ ಸ್ಥಿತಿಗೆ ಕಾರಣವಾಗಿರುವ ಆಹಾರಗಳನ್ನು ಸಂಪೂರ್ಣವಾಗಿ ವರ್ಜಿಸಿ ಸೂಕ್ತ ಆಹಾರಗಳನ್ನು ಮಿತಪ್ರಮಾಣದಲ್ಲಿ ಸೇವಿಸಿದಾಗ ಈ ತೊಂದರೆ ಶೀಘ್ರವೇ ಇಲ್ಲವಾಗುತ್ತದೆ ಹಾಗೂ ಆರೋಗ್ಯವೂ ವೃದ್ಧಿಸುತ್ತದೆ. ಸಾಮಾನ್ಯವಾಗಿ ಎಣ್ಣೆಯಲ್ಲಿ ಹುರಿದ, ಕರಿದ, ಖಾರವಾದ ಆಹಾರಗಳು ಈ ತೊಂದರೆಗೆ ಕಾರಣವಾಗುತ್ತವೆ.
ಆಹಾರ ಇಷ್ಟವಾದರೂ ಡೊಳ್ಳು ಹೊಟ್ಟೆ ಯಾರಿಗೂ ಇಷ್ಟವಿಲ್ಲ! ಅದರಲ್ಲೂ ಕೆಲವು ಸಂದರ್ಭಗಳಲ್ಲಿ ಡೊಳ್ಳುಹೊಟ್ಟೆಯನ್ನು ತೋರಿಸಿಕೊಳ್ಳಲು ಭಾರೀ ಮುಜುಗರ ಎದುರಾಗುತ್ತದೆ. ಅಲ್ಲದೇ ಒಮ್ಮೆ ಹೊಟ್ಟೆ ಡೊಳ್ಳಾಗಲು ಪ್ರಾರಂಭವಾಗುತ್ತಿದ್ದಂತೆಯೇ ಇನ್ನಷ್ಟು ಮುಂದೆ ಮುಂದೆ ಬರುತ್ತಾ ಹೋಗುತ್ತದೆ ಹಾಗೂ ಅದುವರೆಗೆ ನಮಗೆ ಸರಿಯಾಗುತ್ತಿದ್ದ ಉಡುಗೆಗಳೆಲ್ಲಾ ಬಿಗಿಯಾಗುತ್ತಾ ಹೋಗುತ್ತವೆ ಹಾಗೂ ಇವನ್ನು ತೊಡಲಾಗದೇ ವಸ್ತ್ರಗಳ ಸಂಗ್ರಹದ ಹಿಂದೆ ದೂಡಲ್ಪಡುತ್ತವೆ. ಡೊಳ್ಳು ಹೊಟ್ಟೆಯ ಬಗ್ಗೆ ಕುಹಕನುಡಿ ಎದುರಾದರಂತೂ ಸರಿ, ಇದನ್ನು ನಿವಾರಿಸಲೇಬೇಕೆಂಬ ಹಠ ಮೂಡುತ್ತದೆ. ಆದರೆ ಹಠತೊಟ್ಟವರಲ್ಲಿ ಹೆಚ್ಚಿನವರು ಜಂಬಕೊಚ್ಚಿದ ಉತ್ತರಕುಮಾರರು! ಆದರೂ ಛಲಬಿಡದೇ ವ್ಯಾಯಾಮ ಮುಂದುವರೆಸಿದವರು ನಡೆಸಿದ ಕಠಿಣ ಪ್ರಯತ್ನಗಳ ಬಳಿಕ ಕೈಕಾಲುಗಳು ಸಣಕಲಾಗುತ್ತವೆಯೇ ಹೊರತು ಹೊಟ್ಟೆ ಮಾತ್ರ ಹೆಚ್ಚೂ ಕಡಿಮೆ ಹಾಗೇ ಇರುತ್ತದೆ.

ಪುರುಷರೇ ಇರಲಿ, ಮಹಿಳೆಯರೆ ಇರಲಿ, ಡೊಳ್ಳುಹೊಟ್ಟೆ ಯಾರಿಗೂ ಇಷ್ಟವಿಲ್ಲ. ಆದರೆ ಇದರಿಂದ ಬಿಡುಗಡೆ ಪಡೆಯುವ ವಿಧಾನವನ್ನೂ ತಲೆಗೆ ಹೊಳೆಯುವುದಿಲ್ಲ. ಏಕೆಂದರೆ ಊಟದಲ್ಲಿ ನಿಯಂತ್ರಣ, ವ್ಯಾಯಾಮ ಮೊದಲಾದವೆಲ್ಲಾ ಸಾಗಿದರೂ ಹೊಟ್ಟೆ ಮಾತ್ರ ಹಿಂದೆ ಬರುವ ಇಚ್ಛೆಯನ್ನೇ ಪ್ರಕಟಿಸುವುದಿಲ್ಲ. ಡೊಳ್ಳು ಹೊಟ್ಟೆ ಸಹಜ ಅಂಗಸೌಷ್ಟವವನ್ನು ಕುಂದಿಸುವುದು ಮಾತ್ರವಲ್ಲ, ಕೆಲವಾರು ಅನಾರೋಗ್ಯಗಳಿಗೂ ಮೂಲವಾಗಿದೆ.

ಆದರೆ, ನಮ್ಮ ಪ್ರಯತ್ನಗಳಿಗೂ ಡೊಳ್ಳು ಹೊಟ್ಟೆ ಜಗ್ಗುತ್ತಿಲ್ಲವೆಂದರೆ ನಾವು ಮಾಡುತ್ತಿರುವ ಪ್ರಯತ್ನಗಳು ಸರಿಯಾದ ಕ್ರಮ ಮತ್ತು ಗುರಿಯಲ್ಲಿವೆಯೇ ಎಂದು ಪ್ರಶ್ನಿಸಿಕೊಳ್ಳಬೇಕು. ಅದಕ್ಕೂ ಮೊದಲು ನಾವು ಪಡೆದಿರುವ ಈ 'ಸೌಭಾಗ್ಯ' ಯಾವ ಬಗೆಯದ್ದು ಎಂದು ಅರಿತುಕೊಳ್ಳಬೇಕು. ವಾಸ್ತವವಾಗಿ, ಡೊಳ್ಳು ಹೊಟ್ಟೆಗಳಲ್ಲಿಯೂ ಹಲವಾರು ವಿಧಗಳಿವೆ ಹಾಗೂ ಇವುಗಳಿಗೆ ಪ್ರತ್ಯೇಕ ಕಾರಣಗಳೂ ಇವೆ. ಇಂದಿನ ಲೇಖನದಲ್ಲಿ ಈ ಡೊಳ್ಳು ಹೊಟ್ಟೆಯ ವಿಧಗಳು ಹಾಗೂ ಇವು ಎದುರಾಗಲು ಇರುವ ಕಾರಣಗಳು ಮತ್ತು ಇವುಗಳಿಂದ ಸಮರ್ಥವಾಗಿ ಬಿಡುಗಡೆ ಪಡೆಯಲು ನಿಮ್ಮ ಪ್ರಯತ್ನ ಯಾವ ನಿಟ್ಟಿನಲ್ಲಿರಬೇಕು ಎಂಬ ಮಾಹಿತಿಯನ್ನು ಒದಗಿಸಲಾಗಿದೆ:

   
 
ಹೆಲ್ತ್