Back
Home » ಆರೋಗ್ಯ
ಬೆಲ್ಲ ತಿಂದೂ ದೇಹದ ತೂಕ ಇಳಿಸಿಕೊಳ್ಳಬಹುದಂತೆ! ಹೇಗೆ ಗೊತ್ತಾ?
Boldsky | 16th Jan, 2019 01:02 PM
 • ತೂಕ ಇಳಿಕೆಗೆ ಬೆಲ್ಲದ ಬಳಕೆ

  ತೂಕ ಇಳಿಸಬೇಕೆಂದರೆ ಸಕ್ಕರೆಯನ್ನೇ ತಿನ್ನಬಾರದು ಎಂದು ಹೇಳುತ್ತಾರೆ, ಹಾಗಾದರೆ ಬೆಲ್ಲ ತಿನ್ನಬಹುದೇ? ವಾಸ್ತವವಾಗಿ ಬೆಲ್ಲದಲ್ಲಿರುವ ಸಕ್ಕರೆಯ ಅಂಶಕ್ಕಿಂತಲೂ ಇತರ ಪೋಷಕಾಂಶಗಳು ಜೀರ್ಣಕ್ರಿಯೆಗೆ ನೆರವಾಗುವ ಜೊತೆಗೇ ರಕ್ತ ಮತ್ತು ಜೀರ್ಣಾಂಗಗಳನ್ನು ಶುದ್ದೀಕರಿಸಿ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ. ಅಲ್ಲದೇ ತೂಕ ಇಳಿಸಲು ಈ ಕೆಳಗೆ ವಿವರಿಸಿದ ವಿಧಾನಗಳಿಂದ ನೆರವಾಗುತ್ತದೆ:


 • ದೇಹದಲ್ಲಿ ನೀರಿನಂಶವನ್ನು ಉಳಿಸಿಕೊಳ್ಳುತ್ತದೆ

  ಬೆಲ್ಲದಲ್ಲಿ ಪೊಟ್ಯಾಶಿಯಂ ಸಹಿತ ಹಲವಾರು ಪ್ರಮುಖ ಖನಿಜಗಳಿವೆ. ಇವು ದೇಹದಲ್ಲಿ ನೀರಿನಂಶವನ್ನು ಉಳಿಸಿಕೊಳ್ಳಲು ನೆರವಾಗುತ್ತವೆ. ದೇಹದ ಯಾವುದೇ ಕ್ರಿಯೆ ಜರುಗಲು ನೀರು ಅಗತ್ಯವಾಗಿದ್ದು ತೂಕ ಇಳಿಕೆಗೂ ಅಂದರೆ, ಕೊಬ್ಬಿನಾಂಶವನ್ನು ಬಳಸಿಕೊಳ್ಳಲೂ ನೀರು ಅಗತ್ಯವಾಗಿದ್ದು ಈ ಮೂಲಕ ತೂಕ ಇಳಿಕೆಗೆ ಪರೋಕ್ಷವಾಗಿ ನೆರವು ನೀಡುತ್ತದೆ. ಹಾಗಾಗಿ ಬೆಲ್ಲವನ್ನು ನಿತ್ಯವೂ ಮಿತಪ್ರಮಾಣದಲ್ಲಿ ಸೇವಿಸುವುದು ಉತ್ತಮವಾಗಿದೆ.


 • ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ

  ಬೆಲ್ಲದಲ್ಲಿ ವಿಟಮಿನ್ನುಗಳು ಹಾಗೂ ಖನಿಜಗಳು ಅಧಿಕ ಪ್ರಮಾಣದಲ್ಲಿದ್ದು ದೇಹದಲ್ಲಿರುವ ಎಲೆಕ್ಟ್ರೋಲೈಟುಗಳ ಸಮತೋಲನ ಸಾಧಿಸಲು ಹಾಗೂ ತನ್ಮೂಲಕ ಜೀವ ರಾಸಾಯನಿಕ ಕ್ರಿಯೆ ಉತ್ತಮಗೊಳ್ಳಲು ನೆರವಾಗುತ್ತದೆ. ಹಾಗಾಗಿ, ವ್ಯಾಯಾಮ ಮತ್ತು ಆಹಾರ ನಿಯಂತ್ರಣದಿಂದ ದೇಹವನ್ನು ಹುರಿಗಟ್ಟಿಸಲು ನಿತ್ಯದ ಅಹಾರಗಳಲ್ಲಿ ಸಕ್ಕರೆಯ ಬದಲು ಬೆಲ್ಲವನ್ನು ಬಳಸುವುದು ಜಾಣತನವಾಗಿದೆ.


 • ತೂಕ ಇಳಿಕೆಗೆ ಬೆಲ್ಲವಿರುವ ಆಹಾರಗಳು

  ತೂಕ ಇಳಿಕೆಗೆ ಬೆಲ್ಲ ಸಹಕಾರಿ ಎಂದು ನಾವು ಈಗ ಅರಿತೆವು. ಆದರೆ ಬೆಲ್ಲವನ್ನು ಸೇವಿಸುವುದು ಹೇಗೆ? ನೇರವಾಗಿ ಬೆಲ್ಲವನ್ನು ಸೇವಿಸುವುದು ತರವಲ್ಲ. ಬದಲಿಗೆ ಈ ಕೆಳಗಿನ ವಿಧಾನಗಳಿಂದ ಆಹಾರ ಸ್ವಾದಿಷ್ಟ ಮತ್ತು ಆರೋಗ್ಯಕರವೂ ಆಗುತ್ತದೆ:


 • ಬೆಲ್ಲದ ಕಂಬರಕಟ್ಟು (ಚಿಕ್ಕಿ)

  ನೆಲಗಡಲೆ ಮತ್ತು ಬೆಲ್ಲವನ್ನು ಮಿಶ್ರಣ ಮಾಡಿ ತಯಾರಿಸಿದ ಚಿಕ್ಕಿ ಸಾಮಾನ್ಯವಾಗಿ ಎಲ್ಲಾ ಸಮಯದಲ್ಲಿ ಎಲ್ಲೆಡೆಯೂ ಅಗ್ಗದ ದರದಲ್ಲಿ ಲಭಿಸುತ್ತದೆ. ನಿತ್ಯವೂ ಕೊಂಚ ಪ್ರಮಾಣದಲ್ಲಿ ಚಿಕ್ಕಿಯನ್ನು ಸೇವಿಸಬಹುದು. ವಿಶೇಷವಾಗಿ ಚಳಿಗಾಲದಲ್ಲಿ ದೇಹಕ್ಕೆ ಈ ಬೆಲ್ಲದಿಂದ ಹೆಚ್ಚಿನ ಪ್ರಯೋಜನವಿದೆ.

  Most Read: ತೂಕ ಇಳಿಸುವ ಟಿಪ್ಸ್: ಬೆಲ್ಲ ಬೆರೆಸಿದ ಉಗುರುಬೆಚ್ಚನೆಯ ನೀರು ಕುಡಿಯಿರಿ


 • ಚಿಕ್ಕಿಯನ್ನು ಮನೆಯಲ್ಲಿಯೇ ತಯಾರಿಸಲು ಈ ವಿಧಾನ ಅನುಸರಿಸಿ

  ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಸಾವಯವ ಬೆಲ್ಲ ಸಮಪ್ರಮಾಣದ ನೆಲಗಡಲೆ, ಸಿಪ್ಪೆರಹಿತವಾಗಿಸಿದರೆ ಉತ್ತಮ ಬೆಲ್ಲದ ಪ್ರಮಾಣದ ಸುಮಾರು ಕಾಲುಭಾಗದಷ್ಟು ಎಳ್ಳು ತಟ್ಟೆಗೆ ಸವರಲು ಕೊಂಚ ತುಪ್ಪ


 • ತಯಾರಿಕಾ ವಿಧಾನ

  *ಮೊದಲು ಎಳ್ಳನ್ನು ಚಿಕ್ಕ ಉರಿಯಲ್ಲಿ ಕೊಂಚವೇ ಹುರಿದು, ಅಂದರೆ ಬಿಳಿಬಣ್ಣ ಕೊಂಚವೇ ಕಂದುಬಣ್ಣ ಬಂದರೆ ಸಾಕು, ಪಕ್ಕದಲ್ಲಿರಿಸಿ ತಣಿಯಲು ಬಿಡಿ..
  *ಒಂದು ತಳ ಅಂಟದ ಪಾತ್ರೆಯಲ್ಲಿ ಬೆಲ್ಲವನ್ನಿಟ್ಟು ಉರಿಯನ್ನು ಚಿಕ್ಕದಾಗಿಸಿ, ಬಿಸಿಯಿಂದ ಬೆಲ್ಲ ಕರಗತೊಡಗುತ್ತದೆ. ಪೂರ್ತಿಯಾಗಿ ಕರಗಲು ಸುಮಾರು ಎರಡು ನಿಮಿಷ ಬೇಕಾಗುತ್ತದೆ. ಬೆಲ್ಲ ಪೂರ್ತಿಯಾಗಿ ಕರಗಿದ ತಕ್ಷಣವೇ ಉರಿಯನ್ನು ಆರಿಸಿ. ಇಲ್ಲದಿದ್ದರೆ ಬೆಲ್ಲ ವಿಪರೀತ ಗಟ್ಟಿಯಾಗಿ ಹಲ್ಲುಗಳಿಗೆ ಸವಾಲೆಸೆಯುತ್ತದೆ.
  *ಈಗ ಹುರಿದ ಎಳ್ಳು ಮತ್ತು ನೆಲಗಡಲೆಯನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
  *ಒಂದು ಸಮತಳ ಮತ್ತು ಅಗಲವಾದ ತಟ್ಟೆಗೆ ಕೊಂಚ ತುಪ್ಪ ಸವರಿ ಈ ಮಿಶ್ರಣವನ್ನು ಹರಡಿ ತಣಿಯಲು ಬಿಡಿ.
  ಬಳಿಕ ನಿಮ್ಮ ಆಯ್ಕೆಯ ವಿನ್ಯಾಸದಲ್ಲಿ ಕತ್ತರಿಸಿ ತುಂಡುಗಳನ್ನಾಗಿದಿ.
  *ಬಾಯಲ್ಲಿ ನೀರೂರಿಸುವ ಚಿಕ್ಕಿ ಅಥವಾ ಕಂಬರಕಟ್ಟು ಈಗ ತಯಾರಾಗಿದೆ. ಇದನ್ನು ಇನ್ನೂ ಗರಮುರಿಯಾಗಿಸಲು ನಿಮ್ಮ ಇಷ್ಟದ ಒಣಫಲಗಳನ್ನೂ ಸೇರಿಸಬಹುದು.

  Most Read: 2019ರಲ್ಲಿ ಗುರು ಗ್ರಹದ ಪ್ರಯಾಣ-ರಾಶಿಚಕ್ರದ ಮೇಲೆ ಹೇಗೆ ಪ್ರಭಾವ ಬೀರಲಿದೆ? ಇಲ್ಲಿದೆ ಡಿಟೇಲ್ಸ್


 • ಬೆಲ್ಲದ ಟೀ

  ಈ ಟೀ ತಯಾರಿಸುವುದು ಸುಲಭ ಹಾಗೂ ನಿತ್ಯದ ಇತರ ಪೇಯಗಳ ಬದಲಿಗೆ ಸೇವಿಸಲು ಸೂಕ್ತವಾಗಿದೆ.
  ಅಗತ್ಯವಿರುವ ಸಾಮಾಗ್ರಿಗಳು
  ಟೀ ಪುಡಿ, ಬೆಲ್ಲ


 • ತಯಾರಿಕಾ ವಿಧಾನ

  *ಈ ಟೀ ತಯಾರಿಸುವುದು ಸಾಮಾನ್ಯ ಟೀ ಯಂತೆಯೇ ಇರುತ್ತದೆ. ಸಕ್ಕರೆಯ ಬದಲಿಗೆ ಬೆಲ್ಲವನ್ನು, ಆದರೆ ಪುಡಿ ಮಾಡಿ ಸೇರಿಸಬೇಕು.
  ಆದರೆ ಕೊಂಚ ವ್ಯತ್ಯಾಸವೆಂದರೆ ಸಾಮಾನ್ಯ ಟೀ ಯಲ್ಲಿ ಸಕ್ಕರೆಯನ್ನು ಕಡೆಯದಾಗಿ ಸೇರಿಸಲಾಗುತ್ತದೆ. ಆದರೆ ಬೆಲ್ಲದ ಟೀ ಯಲ್ಲಿ ಬೆಲ್ಲವನ್ನು ಟೀಪುಡಿಯೊಂದಿಗೇ ಕೊಂಚ ಕುದಿಸಬೇಕು. ಆಗಲೇ ಇದು ಪೂರ್ಣವಾಗಿ ಕರಗಿ ಇದರ ಪೋಷಕಾಂಶಗಳು ಲಭ್ಯವಾಗುತ್ತವೆ ಹಾಗೂ ಬೆಲ್ಲದ ಪೂರ್ಣರುಚಿಯೂ ಲಭಿಸುತ್ತದೆ.
  *ಒಂದು ಲೋಟ ಟೀಗೆ ಬೇಕಾಗುವಷ್ಟು ಸಕ್ಕರೆಗಿಂತಲೂ ಕೊಂಚ ಕಡಿಮೆ ಪ್ರಮಾಣದ ಬೆಲ್ಲ ಸಾಕಾಗುತ್ತದೆ. ಈ ಟೀಯನ್ನು ನಿತ್ಯದ ಟೀ (ಅಥವಾ ಕಾಫಿ) ಯ ಜೊತೆಗೆ ಸೇವಿಸುವ ಮೂಲಕ ದೇಹಕ್ಕೆ ಅನಗತ್ಯ ಕ್ಯಾಲೋರಿಗಳನ್ನು ಸೇರಿಸುವುದನ್ನು ತಡೆಗಟ್ಟಬಹುದು. ಅಲ್ಲದೇ ಬೆಲ್ಲದಲ್ಲಿರುವ ಸುಕ್ರೋಸ್ ಆರೋಗ್ಯಕರ ಸಕ್ಕರೆಯಾಗಿದ್ದು ಸಕ್ಕರೆಯಲ್ಲಿರುವ ಇತರ ಹಾನಿಕರ ಅಂಶಗಳಿಂದಲೂ ರಕ್ಷಣೆ ಪಡೆದಂತಾಗುತ್ತದೆ.


 • ತೂಕ ಇಳಿಕೆಗೆ ಬೆಲ್ಲ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು?

  ತೂಕ ಇಳಿಸಲು ಬೆಲ್ಲದ ಸೇವನೆಯ ಪ್ರಮಾಣವನ್ನು ಅರಿತುಕೊಳ್ಳುವುದು ಅತಿ ಅಗತ್ಯವಾಗಿದೆ. ಬೆಲ್ಲ ಆರೋಗ್ಯಕರವಾಗಿದ್ದರೂ ಮಿತಿಯ ಒಳಗಿದ್ದರೆ ಮಾತ್ರ ಇದರ ಗರಿಷ್ಟ ಪ್ರಯೋಜನವನ್ನು ಪಡೆಯಬಹುದು. ಸಾಮಾನ್ಯ ಆರೋಗ್ಯದ ವ್ಯಕ್ತಿಗಳು ಪ್ರತಿದಿನ ಎರಡು ಚಿಕ್ಕ ಚಮಚದಷ್ಟು ಬೆಲ್ಲವನ್ನು ಸೇವಿಸಬಹುದು.

  Most Read: ಚಳಿಗಾಲದಲ್ಲಿ ಪ್ರತಿ ದಿನ ಸಣ್ಣ ತುಂಡು ಬೆಲ್ಲ ತಿನ್ನಿ! ಆರೋಗ್ಯಕ್ಕೆ ಒಳ್ಳೆಯದು...


 • ಪಾಲಿಸಬೇಕಾದ ಎಚ್ಚರಿಕೆಗಳು

  ಬೆಲ್ಲದ ಪ್ರಮಾಣ ದಿನದ ಮಿತಿಯನ್ನು ಮೀರಿದರೆ ಇದರಿಂದ ಆರೋಗ್ಯಕ್ಕೆ ಪ್ರತಿಕೂಲ ಪರಿಣಾಮಗಳಾಗಬಹುದು. ತೂಕ ಇಳಿಯುವ ಬದಲಿಗೆ ಇನ್ನಷ್ಟು ಏರಬಹುದು. ಕೆಲವರಲ್ಲಿ ಯಾವಾಗ ಸಕ್ಕರೆಯಿಂದ ಬೆಲ್ಲಕ್ಕೆ ಆಹಾರಕ್ರಮ ಬದಲಾಯಿತೋ ಆಗ ಗಮನಾರ್ಹ ಮಟ್ಟದಲ್ಲಿ ತೂಕ ಏರಬಹುದು. ಮಧುಮೇಹಿಗಳಿಗೆ ಸಕ್ಕರೆಯಂತೆ ಬೆಲ್ಲವೂ ವರ್ಜಿತವೇ ಹೌದು. ಏಕೆಂದರೆ ಮಧುಮೇಹಿಗಳಿಗೆ ಗ್ಲೂಕೋಸ್ ನಂತೆಯೇ ಸುಕ್ರೋಸ್ ಸಕ್ಕರೆಯನ್ನೂ ಸಹಿಸಿಕೊಳ್ಳಲು ಸಾಧ್ಯವಿಲ್ಲ.


 • ಸಾವಯವ ಬೆಲ್ಲ

  ಸಾವಯವ ಬೆಲ್ಲ ಕೆಲವು ಕಡೆಗಳಲ್ಲಿ ಮಾತ್ರವೇ ಇಂದು ದೊರಕುತ್ತಿದೆ. ನಂಬಲರ್ಹ ಅಂಗಡಿಗಳು ಮತ್ತು ಮೂಲಗಳಿಂದಲೇ ಬೆಲ್ಲವನ್ನು ಖರೀದಿಸಿ ಬಳಸಿ. ಎಂದಿಗೂ ಬೆಲ್ಲದ ಬಣ್ಣಕ್ಕೆ ಮಾರುಹೋಗದಿರಿ. ಹಳದಿ ಚಿನ್ನದಂತೆ ಹೊಳೆಯುವ ಬೆಲ್ಲವಂತೂ ಬೇಡವೇ ಬೇಡ, ಏಕೆಂದರೆ ಹೀಗೆ ಹೊಳೆಹೊಳೆಯಲು ಈ ಬೆಲ್ಲಕ್ಕೆ ಸುಣ್ಣ ಸೇರಿಸಿರುತ್ತಾರೆ. ತೂಕ ಇಳಿಸುವ ವ್ರಯತ್ನದಲ್ಲಿರುವವರು ಸಕ್ಕರೆಯ ಬದಲಿಗೆ ಬೆಲ್ಲವನ್ನೇ ತಮ್ಮ ನಿತ್ಯದ ಆಹಾರಗಳಲ್ಲಿ ಅಳವಡಿಸಿಕೊಳ್ಳುವುದು ಸೂಕ್ತ, ಆದರೆ ಮಿತಿಯ ಒಳಗಿದ್ದಂತೆ ಮಾತ್ರ!
ಬೆಲ್ಲ ನೈಸರ್ಗಿಕ ಸಿಹಿಕಾರಕವಾಗಿದ್ದು ನಮ್ಮ ಹಲವಾರು ತಿನಿಸುಗಳಿಗೆ ಸಿಹಿಯನ್ನು ನೀಡುವ ಮೂಲವಸ್ತುವಾಗಿದೆ. ನೋಡಲಿಕ್ಕೆ ಸಕ್ಕರೆಯಂತೆ ಬೆಳ್ಳಗಿರದೇ ನುಣ್ಣಗೂ ಇರದೇ ಇರುವ ಕಾರಣಕ್ಕೆ ಹಿಂದಿದ್ದ ಮನ್ನಣೆ ಈಗ ಸಿಗುತ್ತಿಲ್ಲವಾದರೂ ಬೆಲ್ಲದಲ್ಲಿ ಅಡಕಗೊಂಡಿರುವ ಆರೋಗ್ಯಕರ ಪ್ರಯೋಜನಗಳೇನೂ ಕಡಿಮೆಯಾಗಿಲ್ಲ. ಸಾವಯವ ವಿಧಾನದಲ್ಲಿ ತಯಾರಿಸಲಾದ ಬೆಲ್ಲದಲ್ಲಿ ಯಾವುದೇ ರಾಸಾಯನಿಕಗಳಿರದ ಕಾರಣ ಸಕ್ಕರೆ ಅಥವಾ ಸಿಹಿಯ ಅಗತ್ಯವಿರುವಲ್ಲೆಲ್ಲಾ ಬೆಲ್ಲವನ್ನೇ ಬಳಸುವುದು ಆರೋಗ್ಯಕರವಾಗಿದೆ.

ಉತ್ತಮ ಗುಣಮಟ್ಟದ ಬೆಲ್ಲ ಹಳದಿಮಿಶ್ರಿತ ಕಂದು ಬಣ್ಣದಲ್ಲಿರುತ್ತದೆ ಹಾಗೂ ತಿಳಿಹಳದಿಯಿಂದ ಗಾಢಕಪ್ಪುವರ್ಣದರೆಗೂ ಹಲವು ಬಗೆಯ ಬೆಲ್ಲಗಳಿವೆ. ಬೆಲ್ಲಕ್ಕೆ ಸಿಹಿ ಅಂಶ ಒದಗಿಸುವ ಸಕ್ಕರೆ ಎಂದರೆ ಸುಕ್ರೋಸ್. ಬೆಲ್ಲದಲ್ಲಿ ಉತ್ತಮ ಪ್ರಮಾಣದ ಪ್ರೋಟೀನು, ಕರಗುವ ನಾರು, ಖನಿಜಗಳು ಹಾಗೂ ಕ್ಯಾಲೋರಿಗಳಿವೆ. ಬಿಳಿಕಬ್ಬಿನಿಂದ ಸಕ್ಕರೆಯನ್ನು ತಯಾರಿಸಿದರೆ ಕೆಂಪು ಕಬ್ಬಿನಿಂದ ಬೆಲ್ಲವನ್ನು ತಯಾರಿಸಲಾಗುತ್ತದೆ. ಬಿಳಿಕಬ್ಬಿಗೆ ಹೋಲಿಸಿದರೆ ಕೆಂಪುಕಬ್ಬು ಅತಿ ಮೃದು, ಹೆಚ್ಚು ರಸಯುಕ್ತ ಹಾಗೂ ಹೆಚ್ಚು ಆರೋಗ್ಯಕರವಾಗಿದೆ. ಆದರೆ ಲಾಭದ ಅಂಶವನ್ನು ಪರಿಗಣಿಸಿ ಬಿಳಿಕಬ್ಬನ್ನೇ ಸಕ್ಕರೆ ಕಾರ್ಖಾನೆಗಳು ಕೊಳ್ಳುವ ಕಾರಣ ಕೆಂಪು ಕಬ್ಬಿನಿಂದ ತಯಾರಿಸಿದ ಬೆಲ್ಲ ಇಂದು ಅಪರೂಪವಾಗುತ್ತಿದೆ.

ಬಿಳಿಕಬ್ಬಿನಿಂದ ತಯಾರಿಸಿದ ಬೆಲ್ಲ ಹಳದಿ ಬಣ್ಣದಲ್ಲಿದ್ದು ಗಟ್ಟಿಯಾಗಿದ್ದರೆ ಕೆಂಪುಕಬ್ಬಿನಿಂದ ತಯಾರಿಸಿದ ಬೆಲ್ಲ ಕಡುಕಂದು ಅಥವಾ ಗಾಢಕೆಂಪು ಬಣ್ಣದಲ್ಲಿದ್ದು ಬೆರಳುಗಳಿಂದ ಸುಲಭವಾಗಿ ಮುರಿಯುವಷ್ಟು ಮೃದುವಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದ ಕೆಂಪುಕಬ್ಬಿನ ಬೆಲ್ಲವೇ ಉತ್ತಮ. ಬೆಲ್ಲ ತಯಾಸಿರುವ ಸ್ಥಳವನ್ನು 'ಆಲೆಮನೆ' ಎಂದು ಕರೆಯುತ್ತಾರೆ. ದೊಡ್ಡ ಪಾತ್ರೆಯಲ್ಲಿ ಕಬ್ಬಿನ ರಸವನ್ನು ಕುದಿಸಿ ನೀರಿನಂಶ ಆವಿಯಾದ ಬಳಿಕ ಪಾಕವನ್ನು ಅಚ್ಚುಗಳಿಗೆ ಹಾಕುತ್ತಾರೆ ಅಥವಾ ಹಾಗೇ ಬಿಟ್ಟು ಇನ್ನು ಪೂರ್ಣವಾಗಿ ತಣ್ಣಗಾಗುವ ಮೊದಲೇ ಕೈಯಿಂದ ಉಂಡೆ ಮಾಡಲಾಗುತ್ತದೆ. ಈ ಬೆಲ್ಲದಲ್ಲಿ 50% ಸುಕ್ರೋಸ್, 20% ತೇವಾಂಶ, 20% ಇತರ ಸಕ್ಕರೆಗಳು ಮತ್ತು ಪೋಷಕಾಂಶಗಳಿರುತ್ತವೆ. ತೂಕ ಇಳಿಸಲು ಬೆಲ್ಲ ಅತ್ಯುತ್ತಮವಾದ ಆಹಾರವಾಗಿದೆ.

   
 
ಹೆಲ್ತ್