Back
Home » ಇತ್ತೀಚಿನ
ಫ್ಲಿಪ್‌ಕಾರ್ಟ್ ಸಮೂಹದಿಂದ ಹೊರಬಂದ 'ಸಚಿನ್ ಬನ್ಸಾಲ್' ಮಾಡಿದ್ದೇನು ಗೊತ್ತಾ?
Gizbot | 16th Jan, 2019 12:30 PM

ಇತ್ತೀಚಿಗಷ್ಟೇ 699 ಕೋಟಿಯಷ್ಟು ಭಾರೀ ತೆರಿಗೆ ಪಾವತಿಸುವ ಮೂಲಕ ಗಮನಸೆಳೆದಿದ್ದ ಫ್ಲಿಪ್‌ಕಾರ್ಟ್ ಸಹ-ಸಂಸ್ಥಾಪಕ ಸಚಿನ್ ಬನ್ಸಾಲ್, ಇದೀಗ ಆಪ್ ಆಧಾರಿತ ಟ್ಯಾಕ್ಸಿ ಸಂಸ್ಥೆ ಓಲಾದಲ್ಲಿ ಹೂಡಿಕೆ ಮಾಡಿರುವ ವಿಷಯ ತಿಳಿದುಬಂದಿದೆ. ಸಚಿನ್ ಬನ್ಸಾಲ್ ಅವರು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಕ್ಕೆ ಸಲ್ಲಿಸಿದ ದಾಖಲೆಗಳಲ್ಲಿ ಈ ವಿಶೇಷ ಮಾಹಿತಿ ಬಹಿರಂಗವಾಗಿದೆ.

ಅಮೆರಿಕದ ರಿಟೇಲ್ ದಿಗ್ಗಜ ವಾಲ್‌ಮಾರ್ಟ್, ಫ್ಲಿಪ್‌ಕಾರ್ಟ್ ಅನ್ನು ಸ್ವಾಧೀನಪಡಿಸಿದ ನಂತರ ಸಚಿನ್‌ ಬನ್ಸಾಲ್ ಕಂಪನಿಯಿಂದ ನಿರ್ಗಮಿಸಿದ್ದರು. ಇದಾದ ನಂತರ ಭಾರತದ ಜನಪ್ರಿಯ ಆಪ್ ಆಧಾರಿತ ಟ್ಯಾಕ್ಸಿ ಸೇವೆಯಾದ ಓಲಾ ಸಂಸ್ಥೆಯಲ್ಲಿ ಬನ್ಸಾಲ್ ಅವರು 150 ಕೋಟಿ ರೂ.ಹೂಡಿಕೆ ಮಾಡಿದ್ದಾರೆ ಎಂಬುದು ಅವರು ಸಚಿವಾಲಯಕ್ಕೆ ಸಲ್ಲಿಸಿದ ದಾಖಲೆಗಳಲ್ಲಿ ತಿಳಿದುಬಂದಿದೆ.

70,588 ಸಂಪೂರ್ಣ ಮತ್ತು ಕಡ್ಡಾಯವಾಗಿ ಬದಲಿಸಬಲ್ಲ ರೂ. 10ರ ಮುಖಬೆಲೆಯು ಶೇರುಗಳನ್ನು ಅವರು ಖರೀದಿಸಿದ್ದಾರೆ ಎಂದು ದಾಖಲೆಗಳಲ್ಲಿ ಬಹಿರಂಗವಾಗಿದೆ. ಮತ್ತೊಂದು ಖಚಿತ ಮೂಲಗಳ ಪ್ರಕಾರ ಸಚಿನ್‌ ಬನ್ಸಾಲ್ ಅವರು ಒಲಾದಲ್ಲಿ ಒಟ್ಟು 650 ಕೋಟಿ ರೂ.ಹೂಡಿಕೆ ಮಾಡುವ ನಿರೀಕ್ಷೆ ಇದ್ದು, ಮೊದಲ ಹಂತದಲ್ಲಿ 150 ಕೋಟಿ ರೂ.ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ.

ತನ್ನದೇ ಫ್ಲಿಪ್‌ಕಾರ್ಟ್ ಸಮೂಹದಿಂದ ಹೊರಬಂದಿದ್ದ ಸಚಿನ್ ಬನ್ಸಾಲ್ ಅವರು ಮುಂದೇನು ಮಾಡುತ್ತಾರೆ ಎಂಬುದು ಇಲ್ಲಿಯವರೆಗೂ ಪ್ರಶ್ನೆಯಾಗಿ ಉಳಿದಿತ್ತು. ಆದರೆ, ಇದೀಗ ಮೊದಲ ಹೆಜ್ಜೆಯಾಗಿ ಸಚಿನ್‌ ಬನ್ಸಾಲ್ ಅವರು ಒಲಾದಲ್ಲಿ ಹೂಡಿಕೆ ಮಾಡಿದ್ದಾರೆ. ಇದೇ ರೀತಿಯಲ್ಲಿ ಹಲವಾರು ಭಾರತೀಯ ಕಂಪೆನಿಗಳಲ್ಲಿ ಅವರು ಹೂಡಿಕೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಜಾಗತಿಕ ಪ್ರತಿಸ್ಪರ್ಧಿ ಉಬರ್ ಜೊತೆ ಭಾರತದಲ್ಲಿ ಆಕ್ರಮಣಕಾರಿಯಾಗಿ ಪೈಪೋಟಿ ನಿಡುತ್ತಿರುವ ಓಲಾಗೆ ಈ ಸಮಯದಲ್ಲಿ ಸಚಿನ್ ಬನ್ಸಾಲ್ ಅವರ ಹೂಡಿಕೆ ಬಲತಂದಿದೆ. ವಿಶ್ವದಾದ್ಯಂತ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲು ಮುಂದಾಗಿರುವ ಬೆಂಗಳೂರು ಮೂಲದ ಓಲಾ ಹೂಡಿಕೆದಾರರ ಅನ್ವೇಷಣೆಯಲ್ಲಿರುವ ಸಂದರ್ಭದಲ್ಲಿಯೇ ಬನ್ಸಾಲ್ ಅವರು ಹೂಡಿಕೆ ಮಾಡುತ್ತಿದ್ದಾರೆ.

   
 
ಹೆಲ್ತ್