Back
Home » ಆರೋಗ್ಯ
ಕನಿಷ್ಠ ಪಕ್ಷ ವಾರದಲ್ಲಿ ಎರಡು ಬಾರಿಯಾದರೂ ಚಿಕನ್ ತಿಂದ್ರೆ-ಬರೋಬ್ಬರಿ 5 ಆರೋಗ್ಯ ಪ್ರಯೋಜನಗಳಿವೆ
Boldsky | 16th Feb, 2019 01:14 PM
 • ಪ್ರೋಟೀನ್ ಲಭ್ಯ

  ಚಿಕನ್ ನಲ್ಲಿ ಪ್ರೋಟೀನ್ ಅಂಶವು ಸಮೃದ್ಧವಾಗಿದೆ ಮತ್ತು ಇದು ನಮ್ಮ ಸ್ನಾಯುಗಳನ್ನು ಬಲಿಷ್ಠಗೊಳಿಸುವಲ್ಲಿ ಅತೀ ಮುಖ್ಯ ಪ್ರಾತ್ರ ವಹಿಸುವುದು. ದೇಹದಲ್ಲಿ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎಂದು ಬಯಸುವವರು ಖಂಡಿತವಾಗಿಯೂ ಚಿಕನ್ ಸೇವನೆ ಮಾಡಲೇಬೇಕು.

  Most Read: ಘಮಘಮಿಸುವ ಚಿಕನ್ ಕರಿ: ಬರೀ 20 ನಿಮಿಷ ಸಾಕು!


 • ತೂಕ ಇಳಿಸಲು

  ಚಿಕನ್ ಇಲ್ಲದೆ ಇರುವಂತಹ ಯಾವುದೇ ಆರೋಗ್ಯಕರ ಆಹಾರದ ಪ್ಲೇಟ್ ನ್ನು ನೋಡಿದ್ದೀರಾ? ಚಿಕನ್ ನ್ನು ಯಾವಾಗಲೂ ಆರೋಗ್ಯಕಾರಿ ಆಹಾರದಲ್ಲಿ ಸೇರಿಸಿಕೊಳ್ಳಲಾಗುತ್ತದೆ. ಯಾಕೆಂದರೆ ಇದು ತುಂಬಾ ತೆಳು ಮಾಂಸ ಮತ್ತು ಇದರಲ್ಲಿ ಹೆಚ್ಚಿನ ಕೊಬ್ಬಿ ನಾಂಶವು ಇಲ್ಲ ಎಂದು ಹೇಳಲಾಗಿದೆ. ಇದರಿಂದ ನೀವು
  ನಿಯಮಿತವಾಗಿ ಅಂದರೆ ವಾರದಲ್ಲಿ ಒಂದೆರಡು ಬಾರಿಯಾದರೂ ಚಿಕನ್ ತಿಂದರೆ ಆಗ ಆರೋಗ್ಯಕರ ರೀತಿಯಲ್ಲಿ ತೂಕ ಇಳಿಸಿ ಕೊಳ್ಳಬಹುದು.


 • ಆರೋಗ್ಯಕರ ಮೂಳೆಗಳಿಗಾಗಿ

  ಚಿಕನ್ ನಲ್ಲಿ ಪ್ರೋಟೀನ್ ಹೊರತಾಗಿ ಉನ್ನತ ಮಟ್ಟದ ಕ್ಯಾಲ್ಸಿಯಂ ಮತ್ತು ಫೋಸ್ಪರಸ್ ಇದೆ. ಈ ಎರಡು ಖನಿಜಾಂಶಗಳು ಆರೋಗ್ಯಕಾರಿ ಮೂಳೆಗಳಿಗೆ ತುಂಬಾ ಸಹಕಾರಿಯಾಗಿರುವುದು. ನಿಯಮಿತವಾಗಿ ಚಿಕನ್ ಸೇವನೆ ಮಾಡಿದರೆ ಅದರಿಂದ ಸಂಧಿವಾತದ ಸಮಸ್ಯೆಯು ದೂರವಾಗುವುದು.


 • ಒತ್ತಡ ನಿವಾರಿಸುವುದು

  ಒತ್ತಡ ನಿವಾರಣೆ ಮಾಡಲು ಯಾವ ಅಂಶವು ನೆರವಾಗುವುದು ಎಂದು ನಿಮಗೆ ತಿಳಿದಿದೆಯಾ? ಟ್ರಿಪ್ಟೋಫೇನ್ ಮತ್ತು ವಿಟಮಿನ್ ಬಿ5 ಒತ್ತಡ ನಿವಾರಣೆಗೆ ಸಹಕಾರಿ. ಈ ಎರಡು ಅಂಶಗಳು ಚಿಕನ್ ನಲ್ಲಿ ಸಮೃದ್ಧವಾಗಿದೆ. ಕೋಳಿಯಲ್ಲಿ ಮೆಗ್ನಿಶಿಯಂ ಕೂಡ ಅಧಿಕವಾಗಿರುವ ಕಾರಣದಿಂದಾಗಿ ಇದು ಋತುಚಕ್ರದ ಮೊದಲಿನ ಕೆಲವು ಲಕ್ಷಣಗಳನ್ನು ಕೂಡ ನಿವಾರಣೆ ಮಾಡುವುದು. ಇದರಿಂದ ಚಿಕನ್ ತಿನ್ನುವುದರಿಂದ ಅದು ಒತ್ತಡ ರಹಿತ ಜೀವನ ಸಾಗಿಸಲು ಖಂಡಿತವಾಗಿಯೂ ನೆರವಾಗುವುದು.


 • ಪ್ರತಿರೋಧಕ ಶಕ್ತಿ ಹೆಚ್ಚಳ

  ನಿಮಗೆ ತುಂಬಾ ಶೀತ ಅಥವಾ ಜ್ವರ ಬಂದಿದ್ದರೆ ಆಗ ವೈದ್ಯರು ನಿಮಗೆ ಚಿಕನ್ ಸೂಪ್ ಸೇವಿಸಲು ಯಾಕೆ ಸಲಹೆ ನೀಡುತ್ತಾರೆ ಎಂದು ನಿಮಗೆ ತಿಳಿದಿದೆಯಾ? ಯಾಕೆಂದರೆ ಚಿಕನ್ ದೇಹದಲ್ಲಿ ಪ್ರತಿರೋಧಕ ಕೋಶಗಳನ್ನು ಬಲಗೊಳಿಸಲು ನೆರವಾಗುವುದು. ಸೂಪ್ ನ ಹಬೆಯು ಮೂಗಿನ ನಾಳಗಳನ್ನು ಶುಚಿ ಗೊಳಿಸುವುದು. ಕೋಳಿ ಮಾಂಸವನ್ನು ಸೂಪ್ ಮೂಲಕ ತಿಂದರೆ ಆಗ ಸೋಂಕು ಮತ್ತು ಶೀತದ ಸಮಸ್ಯೆಯು ನಿವಾರಣೆಯಾಗುವುದು. ಚಿಕನ್ ಸೇವನೆ ಮಾಡುವುದರಿಂದ ದೇಹಕ್ಕೆ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಇದರೊಂದಿಗೆ ಒಳ್ಳೆಯ ರುಚಿಯು ಚಿಕನ್ ನಲ್ಲಿದೆ. ಆದರೆ ಹೈಬ್ರಿಡ್ ಚಿಕನ್ ಅಥವಾ ಕರಿದಿರುವ ಚಿಕನ್ ನಿಂದ ನಿಮಗೆ ಇಷ್ಟೆಲ್ಲಾ ಆರೋಗ್ಯ ಲಾಭಗಳು ಸಿಗದೆ ಇರಬಹುದು. ಬೇರೆ ರೀತಿಯಲ್ಲಿ ಅಂದರೆ ಬೇಯಿಸಿದ ಅಥವಾ ತಂದೂರಿ ಮಾಡಿದ ಚಿಕನ್ ಒಳ್ಳೆಯದು. ಇದರಿಂದ ನೀವು ಚಿಕನ್ ನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡು ಅದರಿಂದ ಹೆಚ್ಚಿನ ಆರೋಗ್ಯ ಲಾಭಗಳನ್ನು ಪಡೆದುಕೊಳ್ಳಿ.
ಮಾಂಸಾಹಾರಿಗಳಿಗೆ ಅತಿಪ್ರಿಯ ಖಾದ್ಯವೆಂದರೆ ಕೋಳಿಮಾಂಸದ ಪದಾರ್ಥ. ಕೋಳಿ ಮಾಂಸ ಬರೆಯ ಭಾರತದಲ್ಲಲ್ಲ, ಇಡಿಯ ವಿಶ್ವದಲ್ಲಿಯೇ ಅತ್ಯಂತ ಹೆಚ್ಚಾಗಿ ಬಳಸಲ್ಪಡುವ ಆಹಾರ, ಸರಿಸುಮಾರು ಗೋಧಿ ಮತ್ತು ಅಕ್ಕಿಯ ಬಳಿಕದ ಸ್ಥಾನ. ಈ ಬೇಡಿಕೆಗೆ ಅನುಗುಣವಾಗಿ ಕೋಳಿ ಫಾರಮ್ಮುಗಳಿಂದ ಪ್ರತಿದಿನವೂ ಲಕ್ಷಾಂತರ ಕೋಳಿಗಳು ಮಾರುಕಟ್ಟೆಗೆ ಬಂದು ಬಾಣಸಿಗನ ಬಾಣಲೆಗೆ ಬೀಳುತ್ತವೆ. ಇದಕ್ಕೆ ನೆರವಾಗಿರುವುದು ಕುಕ್ಕುಟ ತಂತ್ರಜ್ಞಾನ.

ಕೋಳಿಯ ಮಾಂಸದ ಬೆಳವಣಿಗೆ ಧಿಡೀರನೇ ಏರಲು ಕೋಳಿಗಳು ತಿನ್ನುವ ಖಾದ್ಯದಿಂದ ಹಿಡಿದು ಕುಡಿಸುವ ನೀರಿನಲ್ಲಿ ಕೃತಕ ರಾಸಾಯನಿಕಗಳನ್ನು ಸೇರಿಸಿ, ಫಾರಮ್ಮಿನ ತಾಪಮಾನ ಮೊದಲಾದವುಗಳನ್ನು ಮಾರ್ಪಾಡಿಸಿ ಒಂದು ಮಾಂಸದ ಮುದ್ದೆ ತಯಾರಾಗುವಂತೆ ಮಾಡಲಾಗುತ್ತದೆ. ತಿನ್ನಲು ರುಚಿಯಾಗಿರುವ ಈ ಮಾಂಸ ನಿಜಕ್ಕೂ ಆರೋಗ್ಯಕರವೇ? ಈ ಬಗ್ಗೆ ಕುಕ್ಕುಟ ಉದ್ಯಮದಲ್ಲಿ ಪರಿಣಿತರನ್ನು ವಿಚಾರಿಸಿದರೆ ಅವರು ನೀಡುವ ಉತ್ತರ ಹೌದು.

ಏಕೆಂದರೆ ಈ ಕುಕ್ಕುಟಗಳ ಹಿಂದೆ ಬಹಳಷ್ಟು ಸಂಶೋಧನೆ ನಡೆಸಿ ಸಾವಿರಾರು ಪ್ರಯೋಗಗಳ ಮೂಲಕ ಪ್ರಮಾಣಿಸಿದ ಬಳಿಕವೇ ಕೋಳಿಗಳನ್ನು ಮಾರಾಟಕ್ಕೆ ಬಿಡಲಾಗುತ್ತದೆ. ಕೋಳಿ ಫಾರಮ್ಮುಗಳಲ್ಲಿಯೂ ಪ್ರತಿ ಹಂತದಲ್ಲಿಯೂ ಎಲ್ಲಾ ವಿಷಯಗಳ ಬಗ್ಗೆ ಎಚ್ಚರಿಕೆಯನ್ನು ಕಾಯ್ದುಕೊಳ್ಳಲಾಗುತ್ತದೆ. ಆದರೆ ಚಿಕನ್ ನ್ನು ಸಾವಯವಾಗಿ ಬೆಳೆಸಿದಾಗ ಅದರಿಂದ ಹೆಚ್ಚಿನ ಪೋಷಕಾಂಶಗಳು ನಮ್ಮ ದೇಹಕ್ಕೆ ಸಿಗುವುದು ಮತ್ತು ಯಾವುದೇ ರೀತಿಯ ಅಡ್ಡಪರಿಣಾಮಗಳು ಕೂಡ ಇರುವುದಿಲ್ಲ. ಚಿಕನ್ ತಿಂದರೆ ಸಿಗುವ ಕೆಲವೊಂದು ಲಾಭಗಳು ಯಾವುದು ಎಂದು ನೀವು ಈ ಲೇಖನದಲ್ಲಿ ತಿಳಿಯಿರಿ.

   
 
ಹೆಲ್ತ್