Back
Home » ಆರೋಗ್ಯ
ದೇಹದಲ್ಲಿ ಕೊಬ್ಬು ಉಂಟು ಮಾಡದ ಟಾಪ್ 8 ಆಹಾರಗಳು
Boldsky | 22nd Feb, 2019 11:33 AM
 • ಸೆಲೆರಿ ಎಲೆಗಳು

  ಒಂದು ಕಪ್ ನಷ್ಟು ಚಿಕ್ಕದಾಗಿ ಕತ್ತರಿಸಿದ ಎಲೆಗಳಲ್ಲಿರುವ ಕ್ಯಾಲೋರಿಗಳು: 16 ಸಾಮಾನ್ಯವಾಗಿ ಈ ಎಲೆಗಳು ದಷ್ಟಪುಷ್ಟವಾಗಿರುವ ಕಾರಣ ಇವುಗಳ ಸೇವನೆಯಿಂದ ನಾವೂ ದಷ್ಟಪುಷ್ಟರಾಗುತ್ತೇವೆ ಎಂಬ ಕುತರ್ಕವನ್ನೇ ಹೆಚ್ಚಿನವರು ಹೊಂದಿದ್ದಾರೆ. ವಾಸ್ತವವಾಗಿ ಇದೊಂದು ಋಣಾತ್ಮಕ-ಕ್ಯಾಲೋರಿ ಆಹಾರವಾಗಿದೆ ( "negative-calorie"), ಅಂದರೆ ಸಾಮಾನ್ಯವಾಗಿ ಆಹಾರಗಳನ್ನು ಸೇವಿಸುವ ಮೂಲಕ ನಾವು ಕ್ಯಾಲೋರಿಗಳೆಂಬ ಶಕ್ತಿಯನ್ನು ಪಡೆದರೆ ಈ ಆಹಾರವನ್ನು ಜೀರ್ಣಿಸಿಕೊಳ್ಳಬೇಕಾದರೆ ಈ ಆಹಾರದಿಂದ ಪಡೆಯಬಹುದಾದುದಕ್ಕಿಂತಲೂ ಹೆಚ್ಚಿನ ಕ್ಯಾಲೋರಿಗಳನ್ನು ಖರ್ಚು ಮಾಡಬೇಕಾಗಿ ಬರುತ್ತದೆ. ಇದೇ ತೂಕ ಇಳಿಕೆಯ ಗುಟ್ಟು. ಎಂದು Academy of Nutrition and Dietetics ಸಂಸ್ಥೆಯ ವಕ್ತಾರರಾದ ಆಂಜೆಲಾ ಲೆಮಾಂಡ್, R.D.N. ರವರು ತಿಳಿಸುತ್ತಾರೆ. "ಆದರೆ ಈ ಕ್ಷಮತೆ ಪ್ರತಿ ವ್ಯಕ್ತಿಗೂ ಬೇರೆಬೇರೆಯಾಗಿದ್ದು ಅವರ ಶಾರೀರ ಮತ್ತು ಅನುವಂಶಿಕ ಗುಣಗಳನ್ನು ಅವಲಂಬಿಸಿರುತ್ತದೆ. ಆದರೂ ಬಹುತೇಕ ಎಲ್ಲರಲ್ಲಿಯೂ ಈ ಋಣಾತ್ಮಕ ಕ್ಯಾಲೋರಿ ಗುಣಗಳು ಕೊಂಚ ಹೆಚ್ಚೂ-ಕಡಿಮೆ ಪ್ರಮಾಣದಲ್ಲಿದ್ದರೂ ಸರಿ, ಇದ್ದೇ ಇರುವ ಕಾರಣ ತೂಕ ಇಳಿಕೆಯ ಪ್ರಯತ್ನಗಳಿಗೆ ಹೆಚ್ಚಿನ ಪ್ರೋತ್ಸಾಹವಂತೂ ದೊರಕಿಯೇ ದೊರಕುತ್ತದೆ" ಎಂದು ಅವರು ವಿವರಿಸುತ್ತಾರೆ.


 • ದೊಣ್ಣೆ ಮೆಣಸಿನ ಕಾಯಿ

  ಮಧ್ಯಮ ಗಾತ್ರದ ಒಂದು ದೊಣ್ಣೆ ಮೆಣಸಿನಲ್ಲಿರುವ ಕ್ಯಾಲೋರಿಗಳು: 30
  ನಿಮ್ಮ ಇಷ್ಟದ ಬಣ್ಣದ ದೊಣ್ಣೆ ಮೆಣಸೊಂದನ್ನು ಕತ್ತರಿಸಿ ಚಿಕ್ಕ ಚಿಕ್ಕ ಕಡ್ಡಿಗಳಾಗಿಸಿ ಮಧ್ಯಮ ಉರಿಯಲ್ಲಿ, ಕಡಿಮೆ ಎಣ್ಣೆಯೊಡನೆ ಹುರಿದು ಸೇವಿಸಬಹುದು. ಅಥವಾ ಸಾಂಪ್ರಾದಾಯಿಕ ವಿಧಾನದಂತೆ ಉದ್ದಕ್ಕೆ ಎರಡಾಗಿ ಸೀಳಿ ಇದರೊಳಗಿನ ಟೊಳ್ಳು ಭಾಗದಲ್ಲಿ ಕಡಿಮೆ ಕೊಬ್ಬಿನ ಅಂಶವಿರುವ ನಿಮ್ಮ ಇಷ್ಟದ ತರಕಾರಿ, ಮಾಂಸ ಅಥವಾ ಬೇರೆ ಖಾದ್ಯಗಳನ್ನು ತುಂಬಿ ಬೇಯಿಸಿಯೂ ಸೇವಿಸಬಹುದು. ಯಾವುದೇ ಬಗೆಯ ಅಡುಗೆ ರೂಪದಲ್ಲಿಯಾದರೂ ಸರಿ,
  ದೊಣ್ಣೆಮೆಣಸಿನ ಸೇವನೆಯಿಂದ ರುಚಿಕರ ಊಟ ದೊರಕುವ ಜೊತೆಗೇ ಕ್ಯಾಲೋರಿಗಳೂ ಕಡಿಮೆ ಲಭಿಸುತ್ತವೆ.


 • ಕೇಲ್ ಎಲೆಗಳು

  ಒಂದು ಕಪ್ ನಷ್ಟು ಚಿಕ್ಕದಾಗಿ ಕತ್ತರಿಸಿದ ಎಲೆಗಳಲ್ಲಿರುವ ಕ್ಯಾಲೋರಿಗಳು: 33
  ಇತ್ತೀಚಿನ ದಿನಗಳಲ್ಲಿ ಈ ವಿದೇಶೀ ಸೊಪ್ಪು ಭಾರತದ ಮಾರುಕಟ್ಟೆಯಲ್ಲಿಯೂ ಲಗ್ಗೆಯಿಡಲು ಕಾರಣ ಇದರ ಆರೋಗ್ಯಕರ ಗುಣಗಳೇ ಆಗಿವೆ. "ತೂಕವನ್ನು ಇಳಿಸುವವರ ಆಹಾರದಲ್ಲಿ ಸಾಕಷ್ಟು ಸೊಪ್ಪು ಮತ್ತು ತರಕಾರಿಗಳಿರುವುದು ಅವಶ್ಯವಾಗಿದೆ ಹಾಗೂ ಇವುಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವ ಸ್ಥೂಲದೇಹಿಗಳ ತೂಕ ಕಡಿಮೆಯಾಗುವುದೇ ಇರಲು ಇದೇ ಪ್ರಮುಖ ಕಾರಣವಾಗಿದೆ. ನಮಗೆ ತರಕಾರಿ ಸೊಪ್ಪುಗಳು ಇಷ್ಟವಾಗುವುದಿಲ್ಲ ಎಂದು ಹೇಳುವ ವ್ಯಕ್ತಿಗಳು ಈ ಮೂಲಕ ತಮ್ಮ ಆರೋಗ್ಯವನ್ನು ಯಾವ ಅಪಾಯಕ್ಕೆ ಒಡ್ಡಿಕೊಳ್ಳುತ್ತಿದ್ದಾರೆ ಎಂಬುದೇ ಅವರಿಗೆ ತಿಳಿದಿರುವುದಿಲ್ಲ. ಏಕೆಂದರೆ ಈ ಆಹಾರಗಳು ದಿನದ ಆಹಾರದಲ್ಲಿ ದೇಹಕ್ಕೆ ಲಭಿಸುವ ಕ್ಯಾಲೋರಿಗಳನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡುತ್ತವೆ.


 • ಬ್ರೋಕೋಲಿ

  ಒಂದು ಕಪ್ ನಷ್ಟು ಚಿಕ್ಕದಾಗಿ ಕತ್ತರಿಸಿದ ಪ್ರಮಾಣದಲ್ಲಿರುವ ಕ್ಯಾಲೋರಿಗಳು: 31
  'ಸೊನ್ನೆ-ಕ್ಯಾಲೋರಿ' ಆಹಾರ ಎಂದರೆ ಸೇವಿಸಿದ ಆಹಾರದಿಂದ ಪಡೆಯುವ ಕ್ಯಾಲೋರಿಗಳಷ್ಟೇ ಪ್ರಮಾಣದ ಕ್ಯಾಲೋರಿಗಳನ್ನು ಇದನ್ನು ಜೀರ್ಣಿಸಿಕೊಳ್ಳಲು ಬಳಸಬೇಕಾಗಿ ಬಂದಾಗ ಈ ಆಹಾರಗಳಿಗೆ ಸೊನ್ನೆ ಕ್ಯಾಲೋರಿ ಎಂದು ಕರೆಯುತ್ತಾರೆ. ಬ್ರೋಕೋಲಿ ಇಂತಹ ಒಂದು ಆಹಾರವಾಗಿದ್ದು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ಅಪ್ಪಟ ಹಸಿರು ಹೂಕೋಸಿನಂತಿರುವ ಈ ತರಕಾರಿ ಕೇವಲ ಆರೋಗ್ಯ ಕಾಪಾಡಿಕೊಳ್ಳಲು ಮಾತ್ರವಲ್ಲ, ಕ್ಯಾನ್ಸರ್ ವಿರುದ್ದ ಹೋರಾಡುವ ಫೈಟೋ ಕೆಮಿಕಲ್ಸ್ ಎಂಬ ಪೋಷಕಾಂಶಗಳನ್ನೂ ಹೊಂದಿದೆ. ಅಲ್ಲದೇ ಇದರಲ್ಲಿ ಹೆಚ್ಚಿನ ಪ್ರಮಾಣದ ಕರಗದ ನಾರು ಇದ್ದು ಹೆಚ್ಚಿನ ಹೊತ್ತು ಜೀರ್ಣಾಂಗಗಳಲ್ಲಿ ಇರುವ ಕಾರಣ ಅಷ್ಟೂ ಹೊತ್ತು ಹಸಿವಾಗದಂತೆ ತಡೆಯುತ್ತದೆ. ಇದನ್ನು ಹಸಿಯಾಗಿಯೂ, ಹಬೆಯಲ್ಲಿ ಬೇಯಿಸಿಯೂ, ನಿಮ್ಮ ಇಷ್ಟದ ಖಾದ್ಯದ ರೂಪದಲ್ಲಿಯೂ ಸೇವಿಸಬಹುದು ಎಂದು ಲೆಮಾಂಡ್ ರವರು ವಿವರಿಸುತ್ತಾರೆ.


 • ನೇರಳೆ ಬಣ್ಣದ ಎಲೆಕೋಸು

  ಒಂದು ಕಪ್ ನಷ್ಟು ಚಿಕ್ಕದಾಗಿ ಕತ್ತರಿಸಿದ ಪ್ರಮಾಣದಲ್ಲಿರುವ ಕ್ಯಾಲೋರಿಗಳು: 22 ಲೆಮಾಂಡ್ ರವರ ಪ್ರಕಾರ ಪ್ರತಿ ಆಹಾರವೂ ತನ್ನದೇ ಆದ ಗುಣಗಳನ್ನು ಹೊಂದಿದ್ದು ವಿಶೇಷವಾಗಿ ಪ್ರಖರ ಬಣ್ಣದ ಆಹಾರಗಳಲ್ಲಿ ಕ್ಯಾನ್ಸರ್ ವಿರುದ್ದ ಹೋರಾಡುವ ಗುಣವಿರುತ್ತದೆ. ಈ ಗುಣಗಳು ಬಿಳಿ ಕೋಸಿಗಿಂತಲೂ ನೇರಳೆ ಕೋಸಿನಲ್ಲಿ ಹೆಚ್ಚಿರುತ್ತವೆ. ಹಾಗಾಗಿ ಎಲೆಕೋಸನ್ನು ನಿಮ್ಮ ನಿತ್ಯದ ಸಾಲಾಡ್ ಹಾಗೂ ಇತರ ಖಾದ್ಯಗಳ ರೂಪದಲ್ಲಿ ಸೇವಿಸುವುದು ಉತ್ತಮ. ಈ ಹೆಚ್ಚುವರಿ ಆಹಾರ ಹೊಟ್ಟೆಯನ್ನು ಹೆಚ್ಚಿನ ಹೊತ್ತು ತುಂಬಿರುವಂತೆ ಮಾಡುವ ಮೂಲಕ ಇನ್ನಷ್ಟು ಆಹಾರದ ಸೇವನೆಯಿಂದ ತಡೆಯುತ್ತದೆ.


 • ಹೂಕೋಸು

  ಒಂದು ಕಪ್ ನಷ್ಟು ಚಿಕ್ಕದಾಗಿ ಕತ್ತರಿಸಿದ ಪ್ರಮಾಣದಲ್ಲಿರುವ ಕ್ಯಾಲೋರಿಗಳು: 27 ಸಾಮಾನ್ಯವಾಗಿ ದೊರಕುವ ಆಲೂಗಡ್ಡೆ ಮತ್ತು ಹೂಕೋಸುಗಳ ಬಗ್ಗೆ ನಮಗೊಂದು ತರಹದ ಅಸಡ್ಡೆ ಇದೆ. ಏಕೆಂದರೆ ಈ ತರಕಾರಿಗಳೇ ಹೆಚ್ಚು ಸಾಮಾನ್ಯವಾಗಿ ಬಳಕೆಯಾಗುತ್ತವೆ ಮತ್ತು ಹೊಸತನ ಬಯಸುವ ನಾಲಿಗೆಗೆ ಬೇಡವೆನಿಸುತ್ತದೆ. ವಾಸ್ತವವಾಗಿ ತೂಕ ಇಳಿಸಿಕೊಳ್ಳುವವರಿಗೆ ಹೂಕೋಸು ಸಹಾ ಉತ್ತಮ ಆಯ್ಕೆಯಾಗಿದೆ. ಆದರೆ ಹಸಿಯಾಗಿ ತಿನ್ನಲು ಇದರ ರುಚಿ ಯಾರಿಗೂ ಹಿಡಿಸುವುದಿಲ್ಲ. ಹಾಗಾಗಿ ಇವುಗಳಿಗೆ ರುಚಿ ನೀಡಲು ಒಂದು ಕಪ್ ಗೆ ಒಂದು ಚಿಕ್ಕ ಚಮಚ ಆಲಿವ್ ಎಣ್ಣೆ ಬೆರೆಸಿದರೆ ಒಟ್ಟು ಕ್ಯಾಲೋರಿಗಳು ಎಣ್ಣೆಯಲ್ಲಿರುವ 45ಕ್ಯಾಲೋರಿಗಳನ್ನು ಕೂಡಿಸುವ ಮೂಲಕ ಹೆಚ್ಚೇ ಏರುತ್ತವೆ. ಹಾಗಾಗಿ ಹೂಕೋಸನ್ನು ಹಬೆಯಲ್ಲಿ ಬೇಯಿಸಿ ಇತರ ಸೊಪ್ಪು ಮತ್ತು ಸಾಂಬಾರ ವಸ್ತುಗಳ ಜೊತೆಗೆ ಹಾಗೂ ಕೊಂಚ ಲಿಂಬೆರಸವನ್ನು ಬೆರೆಸಿ ಸೇವಿಸುವುದರಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದು ಎಂದು ಲೆಮಾಂಡ್ ರವರು ವಿವರಿಸುತ್ತಾರೆ.


 • ಚೆರ್ರಿ ಟೊಮಾಟೋಗಳು

  ಒಂದು ಕಪ್ ನಷ್ಟು ಚಿಕ್ಕದಾಗಿ ಕತ್ತರಿಸಿದ ಪ್ರಮಾಣದಲ್ಲಿರುವ ಕ್ಯಾಲೋರಿಗಳು: 27
  ಈ ಪಟ್ಟಿಯಲ್ಲಿ ನೀವು ನೋಡಬಹುದಾದ ಹಣ್ಣು ಎಂದರೆ ಇದೊಂದೇ. ವಾಸ್ತವವಾಗಿ ಟೊಮಾಟೋ ಒಂದು ಹಣ್ಣೇ ಆಗಿದೆ, ನಾವು ಇದನ್ನು ತರಕಾರಿಯಾಗಿ ಉಪಯೋಗಿಸುತ್ತಿದ್ದೇವೆ ಅಷ್ಟೇ. ಸಾಮಾನ್ಯ ಟೊಮಾಟೋ ಒಂದು ಕಪ್ ನಲ್ಲಿ 60ರಷ್ಟು ಕ್ಯಾಲೋರಿಗಳನ್ನು ಹೊಂದಿದ್ದರೂ ಉಳಿದ ಹಣ್ಣುಗಳಿಗೆ
  ಹೋಲಿಸಿದರೆ ಕಡಿಮೆ ಪ್ರಮಾಣದಲ್ಲಿವೆ. ಹಾಗಾಗಿ ನಿಮ್ಮ ಸಾಲಾಡ್ ನಲ್ಲಿ ಹಣ್ಣುಗಳ ಸ್ಥಾನದಲ್ಲಿ ಈ ಪುಟ್ಟ ದ್ರಾಕ್ಷಿಯಂತಿರುವ ಚೆರ್ರಿ ಟೊಮಾಟೋಗಳನ್ನು ಸೇವಿಸುವ ಮೂಲಕ ರುಚಿಕರ, ಆದರೆ ಕಡಿಮೆ ಕ್ಯಾಲೋರಿಗಳಿರುವ, ಕಡಿಮೆ ಸಕ್ಕರೆ ಇರುವ ಆಹಾರವನ್ನು ಪಡೆದಂತಾಯಿತು.


 • ಪಾಲಕ್ ಸೊಪ್ಪು

  ಒಂದು ಕಪ್ ನಷ್ಟು ಚಿಕ್ಕದಾಗಿ ಕತ್ತರಿಸಿದ ಪ್ರಮಾಣದಲ್ಲಿರುವ ಕ್ಯಾಲೋರಿಗಳು: 7
  ಅತ್ಯಂತ ಸುರಕ್ಷಿತವಾದ ಆಹಾರಗಳ ಪಟ್ಟಿಯಲ್ಲಿ ದಪ್ಪನೆಯ ಎಲೆಗಳ ಆಹಾರಗಳು ಪ್ರಮುಖ ಸ್ಥಾನ ಪಡೆಯುತ್ತವೆ. ಅಂದರೆ ಇವುಗಳಲ್ಲಿ ಕ್ಯಾಲೋರಿಗಳು ಕಡಿಮೆ ಇರುತ್ತವೆ ಹಾಗೂ ಅಗತ್ಯ ಪೋಷಕಾಂಶಗಳು ಹೆಚ್ಚಿರುತ್ತವೆ. ಪಾಲಕ್ ಸೊಪ್ಪು ಮತ್ತು ಬಸಲೆ ಸೊಪ್ಪು ವ್ಯಾಯಾಮ ನಿರತ ವ್ಯಕ್ತಿಗಳಿಗೆ ಹೇಳಿ ಮಾಡಿಸಿದಂತಹ ಆಹಾರಗಳಾಗಿವೆ. ವ್ಯಾಯಾಮದ ಮೂಲಕ ನಮ್ಮ ಸ್ನಾಯುಗಳಲ್ಲಿರುವ ಜೀವಕೋಶಗಳು ತುಂಡಾಗುತ್ತವೆ ಹಾಗೂ ಇವುಗಳನ್ನು ಮರುದುಂಬಿಸಲು ಕೆಲವು ಅವಶ್ಯಕ ಪೋಷಕಾಂಶಗಳು ಅಗತ್ಯವಾಗಿವೆ. ಇದರಲ್ಲಿ ಪ್ರಮುಖವಾದುದು ಕಬ್ಬಿಣ. ಹಾಗಾಗಿ ಈ ಅಂಶಗಳು ಹೆಚ್ಚಿರುವ ಆಹಾರಗಳನ್ನು ಸೇವಿಸುವ ಮೂಲಕ ಸ್ನಾಯುಗಳನ್ನು ಬೆಳೆಸಲು ಮತ್ತು ಕೊಬ್ಬನ್ನು ಹೆಚ್ಚಿಸಿಕೊಳ್ಳದೇ ಇರಲು ಸಾಧ್ಯವಾಗುತ್ತದೆ. ಹಾಗಾಗಿ ಹಸಿರು ಸೊಪ್ಪು ತರಕಾರಿಗಳೇ ಆರೋಗ್ಯ ಮತ್ತು ತೂಕ ಕಾಪಾಡಿಕೊಳ್ಳಲು ಅತ್ಯುತ್ತಮ ಆಹಾರಗಳಾಗಿವೆ.
ಕೆಲವು ಸಂಗತಿಗಳ ಬಗ್ಗೆ ನಿಜಾಂಶವೂ ಉತ್ರೇಕ್ಷೆಯಂತೆಯೇ ತೋರುತ್ತದೆ. ಆದರೆ ಎಲ್ಲಿಯವರೆಗೆ ಇದರ ನಿಜಾಂಶ ಗೊತ್ತಾಗುವುದಿಲ್ಲವೋ ಅಲ್ಲಿಯವರೆಗೆ ಈ ಸಂಗತಿಯನ್ನು ನಾವು ಹಿಂದಿನ ನಂಬಿಕೆಯ ಆಧಾರದಲ್ಲಿಯೇ ಪರಿಗಣಿಸುತ್ತೇವೆ. ಉದಾಹರಣೆಗೆ ಕೆಲವು ಆಹಾರಗಳು. ಸಾಮಾನ್ಯವಾಗಿ ಇವುಗಳ ಬಗ್ಗೆ ನಮ್ಮಲ್ಲಿರುವ ತಪ್ಪು ಗ್ರಹಿಕೆಯಿಂದ ಇವು ಸಹಾ ನಮ್ಮ ತೂಕವನ್ನು ಹೆಚ್ಚಿಸುತ್ತವೆ ಎಂಬ ನಂಬಿಕೆಯಿಂದ ಇವುಗಳನ್ನು ಸೇವಿಸಲು ನಾವು ಹಿಂದೇಟು ಹಾಕುತ್ತೇವೆ. ಆದರೆ ನಾಲಿಗೆಗೂ ಮನಸ್ಸಿಗೂ ಬಹಳವೇ ಇಷ್ಟವಾಗುವ ಸಕ್ಕರೆಭರಿತ ತಿನಿಸುಗಳನ್ನು ಮಾತ್ರ ಇವುಗಳು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಗೊತ್ತಿದ್ದೂ ಸೇವಿಸುತ್ತೇವೆ.

ಹಾಗಾಗಿ, ಒಂದು ವೇಳೆ ನೀವು ತೂಕ ಇಳಿಸುವ ಪ್ರಯತ್ನದಲ್ಲಿ ಅಥವಾ ಇರಾದೆಯುಳ್ಳವರಾಗಿದ್ದರೆ ನಿಮ್ಮ ಆಹಾರದಲ್ಲಿ ಕೆಲವು ಆಹಾರವಸ್ತುಗಳನ್ನು ತಪ್ಪದೇ ಅಳವಡಿಸಿಕೊಳ್ಳುವಂತೆ ಆಹಾರತಜ್ಞರು ಸಲಹೆ ಮಾಡಿದ್ದು ಈ ಪಟ್ಟಿಯಲ್ಲಿನ ಪ್ರಮುಖ ಎಂಟು ಆಹಾರಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ. ಈ ಎಲ್ಲವೂ ಸಾಮಾನ್ಯವಾಗಿ ಎಲ್ಲೆಡೆ ಸಿಗುವಂತಹದ್ದೂ, ನಿಮ್ಮ ಆಹಾರಾಭ್ಯಾಸದ ಮೇಲೆ ಭಾರೀ ಪರಿಣಾಮವುಂಟುಮಾಡದ್ದೂ, ಹೆಚ್ಚಿನ ಕರಗುವ ಮತ್ತು ಕರಗರ ನಾರು ಹೊಂದಿದ್ದು ಕಡಿಮೆ ಕ್ಯಾಲೋರಿಗಳನ್ನು ಒಳಗೊಂಡಿವೆ. ತೂಕ ಇಳಿಸುಸುವುದು ಮಾತ್ರವಲ್ಲ, ತಮ್ಮಲ್ಲಿರುವ ಪೋಷಕಾಂಶಗಳಿಂದ ಆರೋಗ್ಯಕ್ಕೆ ಇನ್ನೂ ಹಲವಾರು ಬಗೆಯ ಪ್ರಯೋಜನಗಳನ್ನೂ ನೀಡುತ್ತವೆ.

   
 
ಹೆಲ್ತ್