Back
Home » ಆರೋಗ್ಯ
ನಿಮ್ಮನ್ನು ಆರೋಗ್ಯದಾಯಕವಾಗಿ ಹಾಗೂ ಫಿಟ್‌ ಆಗಿಡುವ ಭಾರತೀಯ ಆಹಾರಗಳು
Boldsky | 14th Mar, 2019 10:39 AM
 • ಇಂದಿನ ಕಾಲದಲ್ಲಿ ತೂಕ ಇಳಿಸಿಕೊಳ್ಳುವುದೇ ದೊಡ್ಡ ಸಮಸ್ಯೆ!

  ಇಂದು ಹೆಚ್ಚಿನ ಜನರ ಕಾಳಜಿಯ ವಿಷಯವಾಗಿರುವ ಸ್ಥೂಲಕಾಯ ಇಳಿಕೆ ಈ ಆಹಾರಕ್ಕೆ ಒಗ್ಗಿ ಹೋಗಿರುವ ನಮಗೆ ಕೊಂಚ ಕಷ್ಟವೇ ಹೌದು, ಏಕೆಂದರೆ ತೂಕವಿಳಿಸಲು ತಜ್ಞರು ಒದಗಿಸುವ ಕಡಿಮೆ ಪೋಷಕಾಂಶಗಳ ಆಹಾರಪಟ್ಟಿಯಲ್ಲಿ ನಮ್ಮ ನೆಚ್ಚಿನ ಆಹಾರಗಳೇ ಇರುವುದಿಲ್ಲ. ಕಷ್ಟಪಟ್ಟು ಒಂದು ವಾರ ಈ ಹೊಸ ಆಹಾರ ಸೇವನೆಯ ಕ್ರಮ ಅನುಸರಿಸಿದರೆ ಅದೇ ಹೆಚ್ಚು, ಮರುದಿನವೇ ನಮಗೆ ಮತ್ತೆ ಇಡ್ಲಿ ಸಾಂಬಾರ್ ಬೇಕೆನಿಸುತ್ತದೆ. ಅಂದರೆ ಭಾರತೀಯ ರುಚಿಕರ ಅಡುಗೆಯನ್ನು ತ್ಯಜಿಸಿಯೇ ತೂಕ ಇಳಿಸಿಕೊಳ್ಳಬೇಕಾದ ಅನಿವಾರ್ಯತೆ ಹೆಚ್ಚಿನ ಭಾರತೀಯರಿಗೆ ಕಾಣಬರುವುದಿಲ್ಲ. ಆದರೆ ತೂಕದ ಇಳಿಕೆಗೂ ನಮ್ಮ ಭಾರತೀಯ ಅಡುಗೆಗಳು ನೆರವಾಗುತ್ತವೆ ಎಂದರೆ ನಂಬಲಿಕ್ಕೆ ಸಾಧ್ಯವೇ? ಹೌದು, ಈ ಆಹಾರಗಳನ್ನೇ ಸೂಕ್ತವಾಗಿ ಅಯ್ದು ಸರಿಯಾದ ಕ್ರಮದಲ್ಲಿ ಸೇವಿಸುವ ಮೂಲಕ ತೂಕವನ್ನು ಇಳಿಸುವ ನಿಮ್ಮ ಪ್ರಯತ್ನಗಳಿಗೆ ಖಂಡಿತಾ ಫಲ ದೊರಕಿಯೇ ದೊರಕುತ್ತದೆ. ಅಷ್ಟೇ ಅಲ್ಲ, ಈ ಆಹಾರಗಳು ಪೌಷ್ಟಿಕ ಮತ್ತು ಗುಣಪಡಿಸುವ ಗುಣವನ್ನೂ ಹೊಂದಿವೆ. ಆರೋಗ್ಯಕರ ಭಾರತೀಯ ಆಹಾರಗಳು ನಮ್ಮ ಸೊಂಟದ ಸುತ್ತಳತೆಯನ್ನು ಕಡಿಮೆಗೊಳಿಸಿ ಆರೋಗ್ಯವನ್ನು ಹೆಚ್ಚಿಸಲು ಕೆಲವು ಭಾರತೀಯ ಆಹಾರಗಳು ನೆರವಾಗುತ್ತವೆ. ಬನ್ನಿ, ನೋಡೋಣ....


 • ಧಾಲ್ ಅಥವಾ ಬೇಳೆತೊವ್ವೆ

  ದ್ವಿದಳ ಧಾನ್ಯಗಳು ವಿಟಮಿನ್ ಹಾಗೂ ಖನಿಜಗಳ ಪ್ರಮುಖ ಆಗರಗಳಾಗಿವೆ ಎಂದು ನಾವು ಅರಿತಿದ್ದೇವೆ. ಇದೇ ಕಾರಣಕ್ಕೆ ಭಾರತೀಯ ಅಡುಗೆಗಳಲ್ಲಿ ಬೇಳೆಗಳಿಗೆ ಪ್ರಮುಖ ಸ್ಥಾನವಿದೆ. ಈ ಧಾನ್ಯಗಳಲ್ಲಿ ವಿಟಮಿನ್ ಎ, ಬಿ, ಸಿ ಮತ್ತು ಈ ಹಾಗೂ ಖನಿಜಗಳಾದ ಕ್ಯಾಲ್ಸಿಯಂ, ಪೊಟ್ಯಾಶಿಯಂ ಮತ್ತು ಕಬ್ಬಿಣ ಸಹಾ ಉತ್ತಮ ಪ್ರಮಾಣದಲ್ಲಿವೆ. ಅಲ್ಲದೇ ಇವುಗಳು ಅಮೈನೋ ಆಮ್ಲದ ಉತ್ತಮ ಮೂಲವೂ ಆಗಿವೆ. ಒಂದು ವೇಳೆ ನೀವು ತೂಕ ಇಳಿಸುವ ಯತ್ನವನ್ನು ಈಗಾಗಲೇ ಪ್ರಾರಂಭಿಸಿದ್ದರೆ ನಿಮ್ಮ ಅಡುಗೆಯಲ್ಲಿ ತೊಗರಿ ಹಾಗೂ ಕಡ್ಲೆಬೇಳೆಗಳು ಇರುವಲ್ಲಿ ಹೆಸರು ಬೇಳೆಯನ್ನು ಬಳಸತೊಡಗಿರಿ ಹಾಗೂ ಕೆಲವು ತಿಂಗಳುಗಳ ಕಾಲ ಮುಂದುವರೆಸಿ. ಹೆಸರುಬೇಳೆ ಸಹಿತ ಎಲ್ಲಾ ಬೇಳೆಗಳಲ್ಲಿ ಪ್ರೋಟೀನ್ ಮತ್ತು ಕರಗುವ ನಾರು ಉತ್ತಮ ಪ್ರಮಾಣದಲ್ಲಿದ್ದು ಇವುಗಳ ಸೇವನೆಯಿಂದ ರಕ್ತದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿರುತ್ತದೆ, ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ರಕ್ತದಲ್ಲಿರುವ ಹೆಚ್ಚಿನ ಕೊಲೆಸ್ಟಾಲ್ ಗಳೂ ನಿಯಂತ್ರಣಕ್ಕೆ ಬರುತ್ತವೆ. ಬೇಳೆಗಳಲ್ಲಿ ಹೆಸರುಬೇಳೆ ಕನಿಷ್ಟ ಕೊಬ್ಬು ಹೊಂದಿದೆ ಹಾಗೂ ಇದೇ ಕಾರಣಕ್ಕೆ ತೂಕ ಇಳಿಸುವವರಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಅಲ್ಲದೇ ಹೆಸರು ಬೇಳೆ ಅತಿ ಕಡಿಮೆ ಎಣ್ಣೆಯಲ್ಲಿ ತಯಾರಿಸಬಹುದಾದ, ಸುಲಭವಾಗಿ ಬೇಯುವ ಮತ್ತು ಇತರ ತರಕಾರಿಗಳೊಂದಿಗೆ ಹೊಂದಿಕೊಂಡು ಹೋಗುವ ಗುಣ ಹೊಂದಿರುವ ಕಾರಣ ಈ ಬೇಳೆಯ ಖಾದ್ಯಗಳು ತೂಕ ಇಳಿಸುವವರಿಗೆ ಸೂಕ್ತವಾಗಿದೆ.

  Most Read: ಬಾರ್ಲಿ ನೀರು ಕುಡಿದರೆ, ದೇಹದ ಕ್ಯಾಲೋರಿ ಇಳಿಯುತ್ತೆ ಹಾಗೂ ಸಪಾಟಾದ ಹೊಟ್ಟೆ ಪಡೆಯಿರಿ!


 • ರೋಟಿ ಅಥವಾ ಚಪಾತಿ

  ದಕ್ಷಿಣ ಭಾರತದಲ್ಲಿ ಅನ್ನ ಪ್ರಮುಖ ಆಹಾರವಾಗಿದ್ದರೆ ಉತ್ತರ, ಮಧ್ಯ, ಪಶ್ಚಿಮ ಮತ್ತು ಪೂರ್ವ ಭಾರತಗಳಲ್ಲಿ ಗೋಧಿಯಿಂದ ತಯಾರಾದ ರೋಟಿ ಅಥವಾ ಚಪಾತಿಗಳೇ ಪ್ರಮುಖ ಆಹಾರಗಳಾಗಿವೆ. ಸಾಂಪ್ರಾದಾಯಿಕವಾಗಿ ಇವುಗಳನ್ನು ಗೋಧಿಹಿಟ್ಟಿನಿಂದಲೇ ತಯಾರಿಸಲಾಗುತ್ತಿದ್ದು ಇಂದು ವಿವಿಧ ಧಾನ್ಯಗಳ ಹಿಟ್ಟಿನ ಮಿಶ್ರಣದಿಂದಲೂ ರೊಟ್ಟಿಗಳನ್ನು ತಯಾರಿಸಲಾಗುತ್ತಿದೆ ಹಾಗೂ ಇವು ಹೆಚ್ಚು ಜನಪ್ರಿಯವಾಗುತ್ತಿವೆ. ಮಲ್ಟಿಗ್ರೇನ್ ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಬರುವ ಈ ಹಿಟ್ಟಿನಲ್ಲಿ ಸಟ್ಟು (ವಿವಿಧ ಧಾನ್ಯಗಳ ಹಿಟ್ಟಿನ ಮಿಶ್ರಣ), ಮುಸುಕಿನ ಜೋಳ, ಗೋಧಿ ಹಾಗೂ ಬಾರ್ಲಿ ಗಳನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಹಿಟ್ಟು ಮಾಡಲಾಗುತ್ತದೆ. ಈ ಎಲ್ಲಾ ಸಾಮಾಗ್ರಿಗಳಲ್ಲಿ ಕರಗದ ನಾರು ಹೆಚ್ಚಿನ ಪ್ರಮಾಣದಲ್ಲಿದೆ ಹಾಗೂ ಜೀರ್ಣಕ್ರಿಯೆಯಲ್ಲಿ ನೆರವಾಗುತ್ತವೆ ಹಾಗೂ ಇವುಗಳಲ್ಲಿ ಸಮೃದ್ದವಾಗಿರುವ ಕಾರ್ಬೋಹೈಡ್ರೇಟುಗಳು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತವೆ. ಈ ಹಿಟ್ಟಿನಿಂದಲೇ ಚಪಾತಿ ಮತ್ತು ಪರಾಠಾಗಳನ್ನು ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ರೋಟಿ ಎಂದರೆ ಹಿಟ್ಟನ್ನು ಲಟ್ಟಿಸಿದ ಬಳಿಕ ನೇರವಾಗಿ ಬೆಂಕಿಯ ಮೇಲಿಟ್ಟು ಬೇಯಿಸಿದರೆ ಪರಾಠಾವನ್ನು ಹಿಟ್ಟನ್ನು ಲಟ್ಟಿಸಿ ಬಿಸಿಯಾದ ಕಾವಲಿಯ ಮೇಲಿಟ್ಟು ಎರಡೂ ಬದಿ ಬೇಯಿಸಿ ಕೊಂಚ ಎಣ್ಣೆ ಅಥವಾ ಬೆಣ್ಣೆಯನ್ನು ಲೇಪಿಸಿ ತಯಾರಿಸಲಾಗುತ್ತದೆ. ಆದರೆ ತೂಕವಿಳಿಸುವ ಪ್ರಯತ್ನದಲ್ಲಿರುವವರು ಈ ಎಣ್ಣೆ ಲೇಪಿಸಿದ ಪರಾಠಾಗಳ ಬದಲು ಎಣ್ಣೆಯಿಲ್ಲದ ಒಣ ರೊಟ್ಟಿಗಳನ್ನೇ ಸೇವಿಸುವುದು ಒಳಿತು. ಆದರೆ ಪರಾಠ ಸೇವಿಸಿದರೆ ತೂಕ ಹೆಚ್ಚುತ್ತದೆ ಎಂದು ಅರ್ಥವಲ್ಲ, ತೂಕ ಇಳಿಕೆಯ ಗತಿ ಕೊಂಚ ನಿಧಾನವಾಗಬಹುದಷ್ಟೇ.


 • ಅನ್ನ

  ಪಂಚಭಕ್ಷ ಪರಮಾನ್ನದಲ್ಲಿ ಪ್ರಮುಖವಾದ ಆಹಾರವಾಗಿರುವುದೆಂದರೆ ಅನ್ನ. ಇಂದು ಸಿಗುವ ಬೆಳ್ತಿಗೆ ಅಕ್ಕಿಯನ್ನು ಚೆನ್ನಾಗಿ ಪಾಲಿಶ್ ಮಾಡಿ ಅಂದರೆ ಇದರ ಹೊರಕವಚವನ್ನು ಉಜ್ಜಿ ಇಲ್ಲಿದ್ದ ನಾರಿನ ಭಾಗವನ್ನು ತೌಡಿನ ರೂಪದಲ್ಲಿ ನಿವಾರಿಸಿ ಬೆಳ್ಳಗಾಗಿಸಲಾಗಿರುತ್ತದೆ. ಈ ಅಕ್ಕಿಯಿಂದ ಮಾಡಿದ ಅನ್ನವನ್ನು ಹಾಗೇ ತಿನ್ನಬಹುದು. ಆದರೆ ಅನ್ನದಲ್ಲಿ ಕ್ಯಾಲೋರಿಗಳು ಹೆಚ್ಚಿರುತ್ತವೆ. ಅಲ್ಲದೇ ಇದರ ಬಣ್ಣವೂ ಬಿಳಿಯಾಗಿರುವ ಕಾರಣ ನಮಗೆ ಅನ್ನ ಅತಿ ಆಕರ್ಷಕವಾಗಿ ಕಾಣುತ್ತದೆ. ಅಲ್ಲದೇ ಬಿಳಿ ಅಕ್ಕಿಯಿಂದ ಮಾಡಿದ ಅನ್ನದಲ್ಲಿ ಕರಗುವ ಅಥವಾ ಕರಗದ ನಾರು ಕಡಿಮೆ ಇರುವ ಕಾರಣ ಪಾಲಿಶ್ ಮಾಡದ ಅಥವಾ ಕಂದು ಅಕ್ಕಿಯಿಂದ ತಯಾರಿಸಿದ ಅನ್ನವೇ ತೂಕ ಇಳಿಸುವವರಿಗೆ ಉತ್ತಮ ಆಯ್ಕೆಯಾಗಿದೆ. ಹಾಗಾಗಿ, ಒಂದು ವೇಳೆ ನಿಮಗೆ ಕಂದು ಅಕ್ಕಿ ಇಷ್ಟವಿಲ್ಲದೇ ಇದ್ದರೆ ಪ್ರತಿ ಹೊತ್ತಿನ ಊಟದಲ್ಲಿ ಒಂದು ಕಪ್ ನಷ್ಟು ಮಿತಿಯಲ್ಲಿ ಅನ್ನ ಸೇವಿಸಿದರೆ ಸಾಕು. ಇದರೊಂದಿಗೆ ಎರಡು ಚಪಾತಿಗಳನ್ನು ಸೇವಿಸಿ. ಅಂದರೆ ಕರಗದ ನಾರು ಮತ್ತು ಕಾರ್ಬೋಹೈಡ್ರೇಟುಗಳ ಅತ್ಯುತ್ತಮ ಮಿಶ್ರಣ. ಈ ಮೂಲಕ ಎರಡೂ ಅಗತ್ಯತೆಗಳನ್ನು ಪೂರೈಸಿಕೊಳ್ಳುವ ಜೊತೆಗೇ ಆರೋಗ್ಯವೂ ಉತ್ತಮಗೊಳ್ಳುತ್ತದೆ ಮತ್ತು ಇದಕ್ಕಾಗಿ ರುಚಿಯನ್ನು ತ್ಯಜಿಸಬೇಕಾಗಿಯೂ ಬರುವುದಿಲ್ಲ.


 • ಭಾರತೀಯ ಸಾರು

  ಭಾರತೀಯ ಸಾರುಗಳು ತಮ್ಮ ರುಚಿ, ಬಣ್ಣ, ಪರಿಮಳ, ಸಾಂಬಾರ ಪದಾರ್ಥಗಳು ಹಾಗೂ ಕೊಂಚ ಎಣ್ಣೆಯುಕ್ತವಾಗಿದ್ದು ವಿಶ್ವದ ಎಲ್ಲೆಡೆ ಮೆಚ್ಚುಗೆ ಪಡೆದಿವೆ. ದಪ್ಪನೆಯ ಸಾರಿನ ಮೇಲೆ ತೆಳ್ಳಗಿನ ಎಣ್ಣೆಯ ಪದರವನ್ನು ನೋಡುತ್ತಿದ್ದರೆ ಸಾಕು, ಆಹಾರಪ್ರಿಯರ ಬಾಯಲ್ಲಿ ಜೊಲ್ಲು ಸುರಿಯತೊಡಗುತ್ತದೆ. ಆದರೆ ಹೆಚ್ಚಿನ ಎಣ್ಣೆ ತೂಕ ಇಳಿಸುವವರಿಗೆ ಸೂಕ್ತವಲ್ಲದ ಕಾರಣ ಈ ಸಾರುಗಳನ್ನು ತಯಾರಿಸುವಾಗ ಎಣ್ಣೆ ಕನಿಷ್ಟವಾಗಿರುವಂತೆ ಹಾಗೂ ನಾನ್ ಸ್ಟಿಕ್ ಪಾತ್ರೆಗಳನ್ನು ಬಳಸಿ ಹಾಗೂ ಮಸಾಲೆಗಳನ್ನು ಒಣದಾಗಿಯೇ ಹುರಿದುಕೊಳ್ಳುವಂತೆ ನೋಡಿಕೊಂಡರೆ ರುಚಿಯನ್ನು ತ್ಯಜಿಸದೇ ಕಡಿಮೆ ಕ್ಯಾಲೋರಿಗಳ ಸಾರನ್ನು ತಯಾರಿಸಬಹುದು. ಮಸಾಲೆ ಪುಡಿಯನ್ನು ಬಳಸುವ ಬದಲು ಇಡಿಯ ಸಾಂಬಾರ ವಸ್ತುಗಳನ್ನು ಬಳಸುವ ಮೂಲಕ ರುಚಿಯನ್ನು ಹೆಚ್ಚಿಸಬಹುದು ಹಾಗೂ ಆರೋಗ್ಯವೂ ವೃದ್ದಿಯಾಗುತ್ತದೆ. ಈ ಕ್ರಮಗಳನ್ನು ಅನುಸರಿಸುವ ಮೂಲಕ ಭಾರತೀಯ ಅಡುಗೆಗಳಿಂದ ಮೈತೂಕ ಹೆಚ್ಚುತ್ತದೆ ಎಂಬ ಮಿಥ್ಯಾಭಾವವನ್ನು ತೊಡೆಯಬಹುದು.

  Most Read: ಬಾಡಿ ಹೀಟ್ ಕಡಿಮೆ ಮಾಡಲು ಸೇವಿಸಬಹುದಾದ ಬೇಸಿಗೆಯ ಆಹಾರಗಳು ಮತ್ತು ಪಾನೀಯಗಳು


 • ಡೋಕ್ಲಾ

  ಭಾರತದ ಪಶ್ಚಿಮ ಭಾಗದಲ್ಲಿರುವ ಗುಜರಾತ್ ನ ಅಡುಗೆಯಲ್ಲಿ ಢೋಕ್ಲಾಕ್ಕೆ ಪ್ರಮುಖ ಸ್ಥಾನವಿದೆ ಹಾಗೂ ಇದೊಂದು ಹುಳಿಬರಿಸಿದ ಮತ್ತು ಹಬೆಯಲ್ಲಿ ಬೇಯಿಸಿದ ಖಾದ್ಯವಾಗಿದೆ. ಬೇಳೆಯನ್ನು ಹುಳಿಬರಿಸಿ ಹಬೆಯಲ್ಲಿ ಬೇಯಿಸಿದ ಈ ಢೋಕ್ಲಾದಲ್ಲಿ ಎಣ್ಣೆಯಂಶವೇ ಇಲ್ಲ. ಇದೇ ಕಾರಣಕ್ಕೆ ಇವುಗಳಲ್ಲಿ ಅತಿ ಕಡಿಮೆ ಕ್ಯಾಲೋರಿಗಳಿರುತ್ತವೆ ಹಾಗೂ ಬೇಳೆಯಲ್ಲಿರುವ ಕ್ಯಾಲೋರಿಗಳು ಮತ್ತು ಕರಗುವ ನಾರು ಈ ಖ್ಯಾದ್ಯವನ್ನು ಅತಿ ಆರೊಗ್ಯಕರವಾಗಿಸುತ್ತವೆ. ಅಲ್ಲದೇ ಢೋಕ್ಲಾ ಮಧುಮೇಹಿಗಳೂ ಸೇವಿಸಬಹುದಾದ ಸುರಕ್ಷಿತ ಆಹಾರವಾಗಿದೆ.
ನಮ್ಮ ಭಾರತದ ಸಂಸ್ಕೃತಿ ಪ್ರತಿ ರಾಜ್ಯಕ್ಕೂ ಭಿನ್ನವಾಗಿರುವಂತೆ ಅಡುಗೆ ಸಹಾ ಭಿನ್ನವಾಗಿದೆ. ಅಲ್ಲದೇ ಕೆಲವು ಆಹಾರಗಳನ್ನು ತಯಾರಿಸುವುದು ಕೊಂಚ ಶ್ರಮದಾಯಕವಾಗಿದ್ದರೂ ಸರಿ, ತಮ್ಮ ರುಚಿ ಮತ್ತು ಆರೋಗ್ಯಕರ ಅಂಶಗಳಿಂದ ಇಂದಿಗೂ ನಮ್ಮ ನೆಚ್ಚಿನ ಅಡುಗೆಗಳಾಗಿಯೇ ಇವೆ. ದಕ್ಷಿಣ ಭಾರತ, ಪಶ್ಚಿಮ ಬಂಗಾಳ, ಗುಜರಾತ್ ಅಥವಾ ಪಂಜಾಬಿ, ಯಾವುದೇ ಬಗೆಯ ಅಡುಗೆಯಾದರೂ ಸರಿ, ಈ ಆಹಾರಗಳನ್ನು ಮಾತ್ರ ನಾವು ಯಾವುದೇ ರಾಜ್ಯಕ್ಕೆ ಸೀಮಿತ ಎಂಬ ಬೇಧವನ್ನೇ ಮಾಡದೇ ನಮ್ಮ ಮನೆಯ ಅಡುಗೆಯೆಂದೇ ಸ್ವೀಕರಿಸಿದ್ದೇವೆ. ಸಾಮಾನ್ಯವಾಗಿ ನೋಡಲಿಕ್ಕೆ ಚೆನ್ನಾಗಿರುವ ಆಹಾರಗಳನ್ನು ತಿನ್ನಲಿಕ್ಕೆ ಇಷ್ಟವಾದರೂ ಇವುಗಳ ಸೇವನೆಯಿಂದ ಕೆಡುವ ಆರೋಗ್ಯದ ಬಗ್ಗೆ ಕಾಳಿಜಿ ಇರುವವರಂತೂ ಖಂಡಿತಾ ಇವುಗಳ ಭರ್ಜರಿ ಪ್ರಚಾರದ ಮೋಡಿಗೊಳಗಾಗದೇ ಕೇವಲ ಆರೋಗ್ಯಕರ ಆಹಾರಗಳನ್ನೇ ಸೇವಿಸುತ್ತಾರೆ.

ಹೀಗೆ ನೂರಾರು ವರ್ಷಗಳಿಂದ ನಮ್ಮ ಜಿಹ್ವಾಚಾಪಲ್ಯವನ್ನೂ ತಣಿಸಿ ಆರೋಗ್ಯವನ್ನೂ ಉಳಿಸಿರುವ ದಕ್ಷಿಣ ಭಾರತೀಯ ಅನ್ನ ಮತ್ತು ಸಾಸಿವೆ-ಬೇವಿನೆಲೆಯ ಒಗ್ಗರಣೆ ಸಾಂಬಾರ್, ಪಂಜಾಬ್ ನ ಬೆಣ್ಣೆ ಬೆರೆಸಿದ ಖಾದ್ಯ, ಪಶ್ಚಿಮ ಬಂಗಾಳದ ಮಿಶ್ಟಿ ದೋಯ್ ಮತ್ತು ಗುಜರಾತಿನ ಮೃದುವಾದ ಢೋಕ್ಲಾ ಮೊದಲಾದವುಗಳ ಹೆಸರು ಕೇಳಿದರೇ ಸಾಕು, ಬಾಯಲ್ಲಿ ನೀರೂರುತ್ತದೆ. ಈ ಆಹಾರಗಳು ನಮ್ಮ ನಿತ್ಯದ ಅವಶ್ಯಕತೆಯನ್ನು ಪೂರೈಸುವ ಜೊತೆಗೇ ಆರೋಗ್ಯವನ್ನೂ ಕಾಪಾಡಿಕೊಂಡು ಬಂದಿವೆ. ಆದರೆ ವರ್ಷಗಳ ಸೇವನೆಯ ಬಳಿಕ ಸಹಜವಾಗಿಯೇ ಏರುವ ಮೈತೂಕಕ್ಕೆ ಮಾತ್ರ ನಾವು ಈ ಆಹಾರಗಳನ್ನೇ ಹೊಣೆಯಾಗಿಸುತ್ತೇವೆ.

   
 
ಹೆಲ್ತ್