Back
Home » ಆರೋಗ್ಯ
ಮೊಟ್ಟೆ ಸೇವನೆಯಿಂದ ಹೃದಯದ ತೊಂದರೆಗಳು ಎದುರಾಗಬಹುದೇ? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ?
Boldsky | 26th Mar, 2019 10:42 AM

ಮೊಟ್ಟೆ ಎಂದರೆ ನಮಗೆಲ್ಲಾ ಇಷ್ಟ. ಅತಿ ಸುಲಭವಾಗಿ ಲಭ್ಯವಿರುವ, ಸಸ್ಯಾಹಾರಿ ಎಂದೇ ಪರಿಗಣಿಸಲ್ಪಟ್ಟಿರುವ ಮೊಟ್ಟೆಗಳನ್ನು ಆಮ್ಲೆಟ್, ಬೇಯಿಸಿ, ಬುರ್ಜಿ ಮೊದಲಾದ ಸುಲಭ ಪದಾರ್ಥಗಳ ರೂಪದಲ್ಲಿ ಸೇವಿಸುತ್ತಾ ಬಂದಿದ್ದೇವೆ. ಬೆಳಗ್ಗಿನ ಉಪಾಹಾರವಾಗಲಿ, ಮದ್ಯಾಹ್ನದ ಊಟ, ರಾತ್ರಿಯ ಊಟ ಎಲ್ಲಾ ಹೊತ್ತಿಗೂ ಸಲ್ಲುವ ಮೊಟ್ಟೆಯನ್ನು ನಮ್ಮ ಆಹಾರದ ಅವಿಭಾಜ್ಯ ಅಂಗವಾಗಿಸಿಕೊಂಡಿದ್ದೇವೆ. ಸಾಮಾನ್ಯವಾಗಿ ನಾವು ಮೊಟ್ಟೆ ಎಂದರೆ ಚಿಪ್ಪು ಒಡೆದ ಬಳಿಕ ಲಭಿಸುವ ಎಲ್ಲಾ ದ್ರವ ಪದಾರ್ಥವನ್ನೇ ಪರಿಗಣುಸುತ್ತೇವೆಯೇ ಹೊರತು ಇದರ ಹಳದಿ ಭಾಗ ಬಿಳಿಭಾಗ ಎಂದು ಪ್ರತ್ಯೇಕಿಸುವುದಿಲ್ಲ.

ಆದರೆ ಇತ್ತೀಚೆಗೆ ಬಂದಿರುವ ಕೆಲವು ವರದಿಗಳ ಪ್ರಕಾರ ಮೊಟ್ಟೆಗಳು ಹೃದಯದ ತೊಂದರೆ ಎದುರಾಗಲು ಪ್ರಮುಖ ಕಾರಣ! ಇಷ್ಟೊಂದು ವರ್ಷ ಮೊಟ್ಟೆ ಸೇವಿಸುತ್ತಾ ಬರುತ್ತಿದ್ದರೂ ಇಲ್ಲದ ಈ ಸೂಚನೆ ಈಗೇಕೆ ಬಂತು? ಈ ಬಗ್ಗೆ ತಜ್ಞರಲ್ಲಿ ವಿಚಾರಿಸಿದಾಗ ಲಭಿಸಿದ ವಿವರಗಳನ್ನು ಇಂದಿನ ಲೇಖನದಲ್ಲಿ ಒದಗಿಸಲಾಗಿದೆ. ಈ ನಿಟ್ಟಿನಲ್ಲಿ ನಡೆಸಿದ ಸಂಶೋಧನೆಯಲ್ಲಿ ಸಂಶೋಧಕರು ಒಟ್ಟು 29,615 ವಯಸ್ಕರ ಆಹಾರಾಭ್ಯಾಸ, ಆರೋಗ್ಯ ಮಾಹಿತಿ ಮೊದಲಾದವುಗಳನ್ನು ಕಳೆದ ಹದಿನೇಳೂವರೆ ವರ್ಷಗಳ ದೀರ್ಘಾವಧಿಯಲ್ಲಿ ಸಂಗ್ರಹಿಸಿ ಸೂಕ್ಷ್ಮವಾಗಿ ವಿಶ್ಲೇಷಿಸಿ ಅಂಕಿ ಅಂಶಗಳ ಪುರಾವೆಯ ಸಹಿತ ವಿವರಿಸಿದ್ದಾರೆ.

ಈ ವರದಿಯ ಮುಖ್ಯಾಂಶದಲ್ಲಿ ಹೀಗೆ ವಿವರಿಸಲಾಗಿದೆ "ಅತಿ ಹೆಚ್ಚಿನ ಕೊಲೆಸ್ಟ್ರಾಲ್ ಇರುವ ಆಹಾರ ಅಥವಾ ಮೊಟ್ಟೆಗಳ ಸೇವನೆ ಹೃದಯ ಸಂಬಂಧಿ ತೊಂದರೆಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಹಾಗೂ ನಿಯಮಿತವಾಗಿ ಸೇವಿಸುತ್ತಾ ಬಂದಿದ್ದರೆ ಸಾವು ಎದುರಾಗುವ ಸಾಧ್ಯತೆಯೂ ಹೆಚ್ಚುತ್ತದೆ" ಸುಲಭ ಪದಗಳಲ್ಲಿ ಹೇಳಬೇಕೆಂದರೆ ಪ್ರತಿದಿನ 300 ಮಿಲಿಗ್ರಾಂ ನಷ್ಟು ಕೊಲೆಸ್ಟ್ರಾಲ್ ಅನ್ನು ಸೇವಿಸುತ್ತಾ ಬರುವ ವ್ಯಕ್ತಿಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಹೃದಯಸ್ತಂಭನದ ಸಾಧ್ಯತೆಗಳು ಹೆಚ್ಚುತ್ತವೆ. ಒಂದು ಸಮೀಕ್ಷೆಯ ಪ್ರಕಾರ ಪ್ರತಿ ಮೊಟ್ಟೆಯಲ್ಲಿ 186 ಮಿಲಿಗ್ರಾಂ ಕೊಲೆಸ್ಟ್ರಾಲ್ ಇರುತ್ತದೆ.

ಹಾಗಾಗಿ ದಿನವೊಂದಕ್ಕೆ ಎರಡು ಅಥವಾ ಇದಕ್ಕೂ ಹೆಚ್ಚು ಮೊಟ್ಟೆ ಸೇವಿಸಿದರೆ ಇದು ಹೃದಯ ಕಾಯಿಲೆಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಅಮೇರಿಕಾದ ಆಹಾರ ಸೇವನೆ ಸೂಚ್ಯಂಕಗಳ ಪ್ರಕಾರ ಆರೋಗ್ಯವಂತ ವಯಸ್ಕ ವ್ಯಕ್ತಿಯೊಬ್ಬರಿಗೆ ದಿನವೊಂದಕ್ಕೆ ಒಂದು ಮೊಟ್ಟೆ ಸಾಕಾಗುತ್ತದೆ. ಅಚ್ಚರಿಯ ವಿಷಯ ಎಂದರೆ ಈಗ ತಜ್ಞರು ಮೊಟ್ಟೆಯ ಹಳದಿ ಭಾಗವನ್ನು ಬಿಟ್ಟು ಕೇವಲ ಬಿಳಿ ಭಾಗವನ್ನು ಮಾತ್ರವೇ ತಿನ್ನಿ ಎಂದು ಹೇಳುತ್ತಿಲ್ಲ. ಮೊಟ್ಟೆಯ ಎಲ್ಲಾ ದ್ರವಪದಾರ್ಥವನ್ನು ಸೇವಿಸಿದಾಗ ಇದರಲ್ಲಿ ಸಮೃದ್ಧವಾಗಿರುವ ಒಮೆಗಾ 3 ಕೊಬ್ಬಿನಾಮ್ಲ, ವಿಟಮಿನ್ ಎ, ಡಿ ಮತ್ತು ಕೊಲೆಸ್ಟ್ರಾಲ್ ಲಭಿಸುತ್ತವೆ.

ಹಾಗಾದರೆ ಮೊಟ್ಟೆಯನ್ನು ಸೇವಿಸುವುದನ್ನೇ ನಿಲ್ಲಿಸಬೇಕೇ? ಆಹಾರತಜ್ಞೆ ಮಾನಸಿ ಛಾತ್ರಾರವರ ಪ್ರಕಾರ "ಮೊಟ್ಟೆಯನ್ನು ಆಹಾರವಾಗಿ ಸೇವಿಸುವವರು ತಾವು ಸೇವಿಸುವ ಇತರ ಆಹಾರದಲ್ಲೂ ಇರುವ ಒಟ್ಟು ಕೊಲೆಸ್ಟ್ರಾಲ್ ಪ್ರಮಾಣವನ್ನು ಪರಿಗಣಿಸಬೇಕಾಗುತ್ತದೆ. ಅಂದರೆ ನೀವು ಆ ದಿನದಲ್ಲಿ ಸೇವಿಸುವ ಮಾಂಸ ಹಾಗೂ ಮೀನಿನ ಪದಾರ್ಥಗಳಲ್ಲಿರುವ ಕೊಲೆಸ್ಟ್ರಾಲ್. ಅಲ್ಲದೇ ಮೊಟ್ಟೆಯನ್ನು ಯಾವ ರೂಪದಲ್ಲಿ ಸೇವಿಸುತ್ತೀರಿ ಎಂಬುದೂ ಅಗತ್ಯ.

ಮೊಟ್ಟೆಯನ್ನು ಹುರಿದು ಸೇವಿಸಿದರೆ ಗರಿಷ್ಟ ಕೊಲೆಸ್ಟ್ರಾಲ್ ಇರುತ್ತದೆ ಹಾಗೂ ಬೇಯಿಸಿದಾಗ ಕನಿಷ್ಟವಾಗುತ್ತದೆ." ಹಾಗಾಗಿ, ಮೊಟ್ಟೆಯ ಸೇವನೆಯನ್ನು ಪೂರ್ಣವಾಗಿ ತ್ಯಜಿಸುವುದನ್ನು ಪರಿಗಣಿಸುವ ಮೊದಲು ನಿಮ್ಮ ನಿತ್ಯದ ಆಹಾರದಲ್ಲಿ ಎಷ್ಟು ಕೊಲೆಸ್ಟ್ರಾಲ್ ಇದೆ ಹಾಗೂ ಎಷ್ಟು ಸಂತೃಪ್ತ ಕೊಬ್ಬು ಇದೆ ಎಂಬುದನ್ನು ಪರಿಗಣಿಸಬೇಕಾಗುತ್ತದೆ. ಮುಂಬೈಯ ಏಶಿಯನ್ ಹಾರ್ಟ್ ಇನ್ಸ್ ಟಿ ಟ್ಯೂಟ್ ನ ಹಿರಿಯ ಹೃದಯತಜ್ಞರ ಪ್ರಕಾರ "ಹೃದಯದ ತೊಂದರೆ ಎದುರಾಗಲು ಕೇವಲ ನಾವು ಸೇವಿಸುವ ಮೊಟ್ಟೆ ಮಾತ್ರವೇ ಕಾರಣವಲ್ಲ, ನಾವು ಸೇವಿಸುವ ಇತರ ಅಹಾರಗಳೂ ಇದಕ್ಕೆ ಸರಿಸಮನಾದ ಅಥವಾ ಇದಕ್ಕೂ ಹೆಚ್ಚಿನ ಅಪಾಯವನ್ನು ತಂದೊಡ್ಡಬಲ್ಲವು.

ಹಾಗಾಗಿ ನಾವು ಸೇವಿಸುವ ಆಹಾರದ ಒಟ್ಟು ಕ್ಯಾಲೋರಿಗಳು, ಕೊಬ್ಬುಗಳು, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟುಗಳನ್ನು ಸಹಾ ಪರಿಗಣಿಸಬೇಕಾಗುತ್ತದೆ. ಕೊಬ್ಬಿನ ವಿಷಯ ಬಂದಾಗ ಇದರಲ್ಲಿ ಸಂತೃಪ್ತ ಹಾಗೂ ಅಸಂತೃಪ್ತ ಕೊಬ್ಬುಗಳನ್ನು ಪರಿಗಣಿಸಬೇಕಾಗುತ್ತದೆ ಅತಿಯಾದ ಸಂತೃಪ್ತ ಕೊಬ್ಬು ಮತ್ತು ಕಾರ್ಬೋಹೈಡ್ರೇಟುಗಳು ಅನಾರೋಗ್ಯಕರ ಎಂದು ಪರಿಗಣಿಸಲ್ಪಟ್ಟಿವೆ". ಹಾಗಾಗಿ, ಮೊಟ್ಟೆಯ ಸೇವನೆಯನ್ನು ಸಂಪೂರ್ಣವಾಗಿ ತ್ಯಜಿಸುವ ಮುನ್ನ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆ ಪಡೆಯುವುದು ಉತ್ತಮ. ಹಾಗೂ ಅವರ ಸಲಹೆಯ ಪ್ರಕಾರ ನಿಮಗೆ ಅತಿ ಸೂಕ್ತವಾದ ಅಹಾರಾಭ್ಯಾಸವನ್ನು ನೀವೇ ರೂಪಿಸಿಕೊಳ್ಳುವುದು ಒಳ್ಳೆಯದು. ಆದರೂ, ನಿಮ್ಮ ವೈದ್ಯರು ಸ್ಪಷ್ಟವಾಗಿ ಹೇಳದ ಹೊರತು ದಿನಕ್ಕೆ ಒಂದು ಮೊಟ್ಟೆಯನ್ನು ಸೇವಿಸಿವುದರಲ್ಲೇನೋ ಹಾನಿಯಿಲ್ಲ.

   
 
ಹೆಲ್ತ್