Back
Home » ಇತ್ತೀಚಿನ
'996' ರೀತಿಯಲ್ಲಿ ದುಡಿಯಿರಿ ಎಂದ ಅಲಿಬಾಬಾ ಸಂಸ್ಥಾಪಕ 'ಜಾಕ್ ಮಾ'!..ಏನಿದು ವಿವಾದ?
Gizbot | 15th Apr, 2019 02:01 PM
 • 'ಯುವಕನಾಗಿದ್ದಾಗ ನಾನು ಬಿಲ್‌ಗೇಟ್ಸ್​ ಅವರನ್ನು ದ್ವೇಷಿಸುತ್ತಿದ್ದೆ': ಜಾಕ್ ಮಾ!!

  ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಬೆಳೆದು ನಿಂತಿರವ ಆಲಿಬಾಬ ಸಂಸ್ಥೆಯ ಸಹ ಸಂಸ್ಥಾಪಕ ಜಾಕ್​ ಮಾ ಅವರು ಯುವಕರಾಗಿದ್ದಾಗ ತಾನು ಬಿಲ್‌ಗೇಟ್ಸ್​ ಅವರನ್ನು ದ್ವೇಷಿಸುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ಇಸ್ರೇಲ್​ನಲ್ಲಿ ನಡೆದ ಇನ್ನೋವೇಶನ್​ ಸಮಿಟ್​ನಲ್ಲಿ ತಮ್ಮ ಹಳೆಯ ದಿನಗಳನ್ನು ಸ್ಮರಿಸಿಕೊಂರುವ ಅವರು ಇಂತಹದೊಂದು ವಿಶೇಷ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.

  ಹೌದು, ಗುರುವಾರ ನಡೆದ ಇನ್ನೋವೇಶನ್​ ಸಮಿಟ್​ನಲ್ಲಿ ಜಾಕ್​ ಮಾ ಅವರು, 'ಮೈಕ್ರೊಸಾಫ್ಟ್​ ಎಲ್ಲ ಅವಕಾಶಗಳನ್ನು ಕಸಿದುಕೊಂಡು ಬಿಟ್ಟಿತ್ತು ಎಂಬ ಕಾರಣಕ್ಕೆ ನಾನು ಯುವಕನಾಗಿದ್ದಾಗ ಬಿಲ್​ ಗೇಟ್ಸ್​ರನ್ನು ದ್ವೇಷಿಸುತ್ತಿದ್ದೆ. ಐಬಿಎಂ, ಒರಾಕಲ್​ ಕೂಡ ಯುವಕರಿಗಿದ್ದ ಅವಕಾಶಗಳನ್ನು ಕಸಿದುಕೊಂಡಿತ್ತು ಎಂದು ಭಾವಿಸಿದ್ದೆ ಎಂದು ಹೇಳಿಕೊಂಡಿದ್ದಾರೆ. ಇದು ಈಗ ವೈರಲ್ ಆಗಿದೆ.

  ಆದರೆ, ಸಮಯ ಹೋದಂತೆ ನನಗೆ ಹಲವಾರು ವಿಷಯಗಳ ಅರಿವಾಯಿತು. 'ನೀವು ದೂರುಗಳನ್ನು ಪರಿಹರಿಸುವುದಾದರೆ ಸಮಸ್ಯೆಗಳನ್ನು ಪರಿಹರಿಸುವುದಾದರೆ ಅದೇ ಅವಕಾಶ' ಎಂದು ಕಿವಿಮಾತು ಹೇಳಿದ್ದಾರೆ. ಹಾಗಾದರೆ, ಕೆಎಫ್​ಸಿ ಸೇರಿ ಸೇರಿದಂತೆ 30ಕ್ಕೂ ಕಂಪನಿಗಳು ನಿರಾಕರಿಸಿದ್ದ ಜಾಕ್​ ಮಾ ಅವರ ಜೀವನದ ರೋಚಕ ಕಥೆ ಹೇಗಿತ್ತು ಎಂಬುದನ್ನು ಮುಂದೆ ಓದಿ.


 • ಈತನ ಜೀವನವೇ ಒಂದು ರೋಚಕ ಕಥೆ

  ತನ್ನ ಇಂಗ್ಲೀಷ್ ಭಾಷಾಜ್ಞಾನ ಮತ್ತು ಉದ್ದಿಮೆಯ ಗುಣಗಳಿಂದಲೇ ಚೀನಾದ ನಂಬರ್ ಒನ್ ಶ್ರೀಮಂತನಾಗಿ ಬೆಳೆದುನಿಂತ. ವಿಶ್ವದ ಟಾಪ್ ಇ-ಕಾಮರ್ಸ್ ಕಂಪೆನಿಯೊಂದನ್ನು ಕಟ್ಟಿ ಬೆಳೆಸಿದ ಜಾಕ್ ಮಾ ಬಗ್ಗೆ ಹೇಳುತ್ತಾ ಹೋದರೆ ಅವನ ಜೀವನವೇ ಒಂದು ರೋಚಕ ಕಥೆ. ಆತ್ಮವಿಶ್ವಸವೊಂದಿದ್ದರೆ ಒಬ್ಬ ವ್ಯಕ್ತಿ ಏನೆಲ್ಲಾ ಸಾಧಿಸಬಹುದು ಎಂಬುದನ್ನು ಇವನೇ ಉದಾಹರಣೆ.!!


 • ಮಾ ಯುನ್ ಬದಲಾಗಿ ಜಾಕ್ ಮಾ

  ಅವನ ಮೊದಲ ಹೆಸರು ಮಾ ಯುನ್ ಎಂದು. ಆದರೆ, ಅವನು ಇಂಗ್ಲೀಷ್ ಕಲಿಯಲು ಪ್ರವಾಸಿಗರ ಬಳಿ ತೆರಳುತ್ತಿದ್ದಾಗ ಹಲವರು ಮಾ ಯುನ್ ಎಂಬ ಹೆಸರನ್ನು ಉಚ್ಚರಿಸಲು ಕಷ್ಟವಾಗಿ ಜಾಕ್ ಎಂದು ಕರೆಯಲು ಪ್ರಾರಂಭಿಸಿದರು. ನಂತರ ಜಾಕ್ ಮಾ ಎಂಬ ಹೆಸರೇ ಅವನಿಗೆ ಫೈನಲ್ ಆಯಿತು.


 • ಜಾಕ್ ಮಾ ಬಾಲ್ಯ ಹೀಗಿತ್ತು.

  ಬಡಕುಟುಂಬದಲ್ಲಿ ಹುಟ್ಟಿ ಹನ್ನೆರಡರ ಪೋರ ಮಾ ಯುನ್‌ಗೆ ಇಂಗ್ಲಿಷ್ ಕಲಿಯುವ ಆಸೆ ಹೆಚ್ಚಿತ್ತು. ಹಾಗಾಗಿ, ತನ್ನೂರಿನ ಹತ್ತಿರದ ನಗರವೊಂದಕ್ಕೆ ಆತ ನಲವತ್ತು ನಿಮಿಷಗಳ ಕಾಲ ಸೈಕಲ್ ತುಳಿದುಕೊಂಡು ಬರುತ್ತಿದ್ದ. ಅಲ್ಲಿಗೆ ಬರುತ್ತಿದ್ದ ವಿದೇಶಿ ಯಾತ್ರಿಗಳಿಗೆ ಹಣಪಡೆಯದೇ ಮಾರ್ಗದರ್ಶಿಯಾಗಿ ಕೆಲಸ ಮಾಡುತ್ತಿದ್ದ. ಇದೇ ಅವನನ್ನು ಇಷ್ಟು ಎತ್ತರಕ್ಕೆ ತಂದುನಿಲ್ಲಿಸಿತು.


 • ಇಂಗ್ಲೀಷ್ ಪದವಿ ಗಳಿಸಿದ.

  ಜಾಕ್ ಮಾಗೆ ಇಂಗ್ಲೀಷ್ ಕಲಿಯುವ ಕನಸಿತ್ತು. ಅದರಂತೆಯೇ ಜಾಕ್ ಮಾ ಇಂಗ್ಲಿಷ್​ನಲ್ಲಿ ಪದವಿ ಪಡೆದ. ಇಂಗ್ಲಿಷ್​ನಲ್ಲಿ ಪದವಿ ಪಡೆದ ನಂತರ ಕಾಲೇಜೊಂದರಲ್ಲಿ ಕೆಲಸ ಸಿಕ್ಕಿತು. ರಾತ್ರಿ ತರಗತಿಗಳನ್ನೂ ತೆಗೆದುಕೊಳ್ಳುತ್ತಿದ್ದ ಜಾಕ್ ಕಾಲೇಜು ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಸುಕೊಡುವ ಕೆಲಸ ಮಾಡುತ್ತಿದ್ದ.


 • ರೋಡಿನಲ್ಲಿ ಹೂ ಮಾರುತ್ತಿದ್ದ.

  ಜಾಕ್ ಮಾಗೆ ಇಂಗ್ಲೀಷ್ ಪಾಠ ಹೇಳಿಕೊಡುವುದು ಶಾಶ್ವತವಾದ ಕೆಲಸವೇನು ಆಗಿರಲಿಲ್ಲ. ಮತ್ತು ಆದಾಯವಿಲ್ಲದ ಬಳಲಿದ್ದ. ನಂತರ ಜೀವನ ನಿರ್ವಹಣೆಗಾಗಿ ಜಾಕ್ ರಸ್ತೆಯ ಮೇಲೆ ಪುಸ್ತಕ, ಹೂವು, ಬಟ್ಟೆ ಎಲ್ಲವನ್ನೂ ಮಾರಾಟ ಮಾಡಿದ್ದನೆಂದರೆ ಅಂದು ಜಾಕ್ ಮಾ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಊಹಿಸಬಹುದು.


 • ಅಮೆರಿಕಾಕ್ಕೆ ತೆರಳುವ ಆಫರ್.

  ಮೊದಲೇ ಹೇಳಿದಂತೆ ಜಾಕ್‌ಮಾನ ಇಂಗ್ಲೀಷ್ ಕಲಿಕೆಯೇ ಅವನನ್ನು ಇಷ್ಟು ಎತ್ತರಕ್ಕೆ ತಂದು ನಿಲ್ಲಿಸಿತು ಎನ್ನಬಹುದು. 1995ರಲ್ಲಿ ಅಮೆರಿಕದ ಹೂಡಿಕೆದಾರನೊಬ್ಬನಿಗೆ ಭಾಷಾಂತರಕಾರನಾಗಿ ಜಾಕ್ ಅಮೆರಿಕಕ್ಕೆ ಕಳುಹಿಸಲ್ಪಟ್ಟ. ಜಾಕ್ ಇಂಗ್ಲಿಷ್​ನಲ್ಲಿ ಪರಿಣಿತನೇ ಹೊರತು ಕಂಪ್ಯೂಟರ್​ನಲ್ಲ. ಹಾಗಾಗಿ, ಅವನು ಅಲ್ಲಿ ಕಂಪ್ಯೂಟರ್ ಭವಿಷ್ಯವನ್ನು ತಿಳಿದುಕೊಂಡನು.


 • ಇಂಟರ್‌ನೆಟ್ ತಲೆಕೆಡಿಸಿತು.

  ಇಂಟರ್​ನೆಟ್​ನಲ್ಲಿ ಶಬ್ದವೊಂದನ್ನು ಹುಡುಕುವಾಗ ಚೀನಾಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಇಲ್ಲದಿರುವುದು ಆತನ ಗಮನಕ್ಕೆ ಬಂತು. ಜಾಕ್​ಗೆ ಆ ಕ್ಷಣವೇ ತನ್ನ ಮುಂದಿನ ಹಾದಿ ಗೋಚರಿಸಿತು!ಅಂತರ್ಜಾಲದ ಅಪಾರ ಸಾಮರ್ಥ್ಯದ ಬಗ್ಗೆ ನಂಬಿಕೆ ಮೂಡಿದ್ದರಿಂದ ಇಂಟರ್‌ನೆಟ್ ಅವನ ತಲೆಕೆಡಿಸಿತು.


 • ಇ-ಕಾಮರ್ಸ್ ಸಂಸ್ಥೆ ಶುರು.

  'ನಾವೊಂದು ಐತಿಹಾಸಿಕ ಇ-ಕಾಮರ್ಸ್ ಕಂಪನಿಯನ್ನು ಸ್ಥಾಪಿಸಲಿದ್ದೇವೆ. ಆ ಇ-ಕಾಮರ್ಸ್ ಸಂಸ್ಥೆ ಕನಿಷ್ಠ 100 ವರ್ಷಗಳ ಕಾಲ ಅದು ಬಾಳಬೇಕು. ವಿಶ್ವದ ಅಂತರ್ಜಾಲ ಸೈಟ್​ಗಳಲ್ಲಿ ಮೊದಲ ಹತ್ತರೊಳಗಿರಬೇಕು ಎಂದು ಹೇಳಿದ. ಅದೇ ರೀತಿ ವಿಶ್ವದ ಟಾಪ್ 10 ಅಂತರ್ಜಾಲ ಸೈಟ್‌ಗಳಲ್ಲಿ ಒಂದಾದ ಅಲಿಬಾಬ.ಕಾಮ್ ಅನ್ನು ಜಾಕ್ ಮಾ ರೂಪಿಸಿದ.


 • ಚೀನಾದಲ್ಲಿ ಅಲಿಬಾಬ.

  ಈವರೆಗೂ ಹಲವರಿಗೆ ಪ್ರರ್ಶನೆಯಾಗಿಯೇ ಉಳಿದಿರುವುದು ಚೀನಾದಲ್ಲಿ ಅಲಿಬಾಬ ಎಂಬ ಹೆಸರು ಬಂದಿದ್ದೇಗೆ ಎಂಬುದು. ಆದರೆ, ನಿಮಗೆ ಗೊತ್ತಾ? ಜಾಕ್ ಈ ಹೆಸರನ್ನು ಕಂಪನಿಗೆ ಇಟ್ಟ ಉದ್ದೇಶವೆಂದರೆ ಅರೇಬಿಯನ್ ನೈಟ್ಸ್​ನಲ್ಲಿ ಬರುವ ಅಲಿಬಾಬನ ಹೆಸರು ಜಗತ್ತಿನ ಜನರೆಲ್ಲರಿಗೂ ತೀರಾ ಪರಿಚಿತ ಎನ್ನುವುದು! ವಿವಿಧ ದೇಶಗಳ 30 ಜನರನ್ನು ನಿಮಗೆ ಅಲಿಬಾಬಾ ಗೊತ್ತೇ ಎಂದು ಕೇಳಿದಾಗ ಎಲ್ಲರೂ ಗೊತ್ತಿದೆ ಎಂದೇ ಹೇಳಿದ್ದರಂತೆ.


 • ಅಲಿಬಾಬ.ಕಾಮ್!

  18 ಜನರ ಟೀಮ್ ತಮ್ಮ ಉಳಿತಾಯದ 60,000 ಡಾಲರ್​ಗಳನ್ನು ಕೂಡಿಸಿದ ನಂತರ ಜಾಕ್ ಮಾ ನೇತೃತ್ವದಲ್ಲಿ 1999ರಲ್ಲಿ ಅಲಿಬಾಬ.ಕಾಮ್ ಶುರುವಾಯಿತು. ಅಲಿಬಾಬಾ.ಕಾಮ್‌ನಲ್ಲಿ ಮಾರಾಟಗಾರನೊಬ್ಬ ಆನ್‌ಲೈನ್ ಮೂಲಕ ಎಕೆ 47 ಅನ್ನು ಮಾರಾಟ ಮಾಡಲು ಹೊರಟಿದ್ದು ನೆಗೆಟಿವ್ ಪ್ರಚಾರವಾದರೂ ಕಂಪೆನಿ ಹೆಸರು ನಿಧಾನಕ್ಕೆ ಬೆಳೆಯುತ್ತಾ ಹೋಯಿತು.


 • ಹಿಂದಿರುಗಿ ನೋಡಲೇ ಇಲ್ಲ.

  2000ದ ಹೊತ್ತಿಗೆ ಅಲಿಬಾಬಾದಲ್ಲಿ 25 ಮಿಲಿಯನ್​ಗಿಂತ ಹೆಚ್ಚು ಹೂಡಿಕೆಯಾಗಿತ್ತು. ಅಲ್ಲಿಂದ ಮುಂದೆ ಜಾಕ್ ಮತ್ತು ಸ್ನೇಹಿತರು ಹಿಂದಿರುಗಿ ನೋಡಲೇ ಇಲ್ಲ. ಇಂದು ಅಲಿಬಾಬಾ, ವಾಲ್​ವಾರ್ಟ್ ಅನ್ನೂ ಹಿಂದಿಕ್ಕಿ 200ಕ್ಕೂ ಅಧಿಕ ದೇಶಗಳಲ್ಲಿ ಕಾರ್ಯನಿರ್ವಹಿಸುವ ಜಗತ್ತಿನ ಅತೀ ದೊಡ್ಡ ರೀಟೇಲರ್ ಕಂಪನಿಯಾಗಿದೆ 2017ರಲ್ಲಿ ಅಲಿಬಾಬಾದ ಮಾರುಕಟ್ಟೆ ಮೌಲ್ಯ 360 ಬಿಲಿಯನ್ ಅಮೆರಿಕನ್ ಡಾಲರ್​ಗಳು ಎಂದರೆ ನೀವು ನಂಬಲೇಬೇಕು.
ಓರ್ವ ಸಾಮಾನ್ಯ ವ್ಯಕ್ತಿ ಬೆಳೆದರೆ ಹೀಗೆ ಬೆಳೆಯಬೇಕು ಎನ್ನುವಷ್ಟು ಬೆಳೆದಿರುವ ಚೀನಾ ಮೂಲದ ಅಲಿಬಾಬ ಕಂಪೆನಿ ಸಂಸ್ಥಾಪಕ ಜಾಕ್ ಮಾ ಅವರ ಒಂದು ಹೇಳಿಕೆ ಇದೀಗ ವಿವಾದಾತ್ಮಕವಾಗಿ ಬದಲಾಗಿದೆ. ಚೀನಾದ ಬಹು ರಾಷ್ಟ್ರೀಯ ಇ-ಕಾಮರ್ಸ್ ಕಂಪನಿ ಅಲಿಬಾಬ ಗ್ರೂಪ್‌ನ ಸ್ಥಾಪಕ ಜಾಕ್‌ ಮಾ ಅವರು, ದಿನಕ್ಕೆ 12 ಗಂಟೆಗಳಂತೆ ವಾರದ 6 ದಿನಗಳಲ್ಲಿ ಶ್ರಮಿಸಬಲ್ಲ ಉದ್ಯೋಗಿಗಳು ಮಾತ್ರ ತಮ್ಮ ಕಂಪನಿಗೆ ಬೇಕು, ಉಳಿದವರಿಗೆ ಇಲ್ಲಿ ಜಾಗವಿಲ್ಲ ಎಂದು ಹೇಳಿದ್ದಾರೆ.

ಹೌದು, ಅಲಿಬಾಬ ಕಂಪನಿಯ ಆಂತರಿಕ ಸಭೆಯೊಂದರಲ್ಲಿ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದ ಜಾಕ್‌ ಮಾ ಅವರು, 8 ಗಂಟೆಗಳ ಆಫೀಸ್‌ ಲೈಫ್ ಸ್ಟೈಲ್ ಬಯಸುವ ಉದ್ಯೋಗಿಗಳು ಆಲಿಬಾಬಾ ಗ್ರೂಪ್‌ಗೆ ಅಗತ್ಯವಿಲ್ಲ ಎಂದಿದ್ದಾರೆ. ಈ ಮೂಲಕ ಚೀನಿ ಇಂಟರ್‌ನೆಟ್‌ ಕಂಪನಿಗಳಲ್ಲಿ ಕಂಡು ಬರುವ ಓವರ್‌ಟೈಮ್‌ ವರ್ಕ್‌ ಕಲ್ಚರ್ ಅನ್ನು ಅವರು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆದರೆ, ಅವರ ಹೇಳಿಕೆ ಮತ್ತು ಸಮರ್ಥನೆಗಳು ಇದೀಗ ವಿವಾದಾತ್ಮಕವಾಗಿವೆ.

ದಿನಕ್ಕೆ '996' ರೀತಿಯಲ್ಲಿ ದುಡಿಯುವ ಸಾಮರ್ಥ್ಯ‌ ಯುವಜನತೆಗೆ ಇರುವುದು ದೊಡ್ಡ ಆಶೀರ್ವಾದ. ಇದನ್ನು ನಾವು ಬಳಸಿಕೊಳ್ಳಬೇಕು ಎಂದು ಜಾಕ್ ಮಾ ಹೇಳಿದ್ದಾರೆ. ಚೀನಾದ ತಂತ್ರಜ್ಞಾನ ಕಂಪನಿಗಳ ವಲಯದಲ್ಲಿ '996 ಗಂಟೆ ದುಡಿಯುವ ಸಿಸ್ಟಮ್‌' ಚಾಲ್ತಿಯಲ್ಲಿದೆ. ಅಂದರೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಗಳ ಕಾಲ ವಾರದ 6 ದಿನಗಳ ದುಡಿಮೆ ಅರ್ಥ ಇದಾಗಿದೆ. ಆದರೆ, ಚೀನಾದ ಕಾರ್ಮಿಕ ಕಾನೂನುಗಳ ಪ್ರಕಾರ ದಿನಕ್ಕೆ 8 ಗಂಟೆಗಿಂತ ಹೆಚ್ಚು ಕಾಲ ಸಿಬ್ಬಂದಿಯನ್ನು ದುಡಿಸುವಂತಿಲ್ಲ. ವಾರಕ್ಕೆ ಸರಾಸರಿ 44 ಗಂಟೆಗಿಂತ ಹೆಚ್ಚು ಕೆಲಸ ಸಲ್ಲದು.

ಹೀಗಾಗಿ, ಜಾಕ್ ಮಾ ಅವರ ಹೇಳಿಕೆ ಇದೀಗ ವಿವಾದಾತ್ಮಕವಾಗಿದೆ. ಚೀನಾದ ಟೆಕ್‌ ಉದ್ದಿಮೆ ವಲಯದಲ್ಲಿ ದೀರ್ಘ ಅವಧಿಯ ಕೆಲಸಗಳು, ಒತ್ತಡದ ಪರಿಣಾಮ ಉದ್ಯೋಗಿಗಳು, ಮುಖ್ಯವಾಗಿ ಸ್ಟಾರ್ಟಪ್‌ಗಳ ಸ್ಥಾಪಕರು ಅಕಾಲಿಕ ಸಾವಿಗೀಡಾಗಿರುವ ಬಗ್ಗೆ ವರದಿಗಳಾಗಿವೆ. ಈ ರೀತಿಯ '996' ವರ್ಕ್‌ ಶೆಡ್ಯೂಲನ್ನು ಅನುಸರಿಸಿದರೆ ಕಂಪೆನಿ ಉದ್ಯೋಗಿಗಳು ಐಸಿಯುಗೆ (ತುರ್ತು ನಿಗಾ ಘಟಕ) ಸ್ಥಳಾಂತರವಾಗುವ ಅಪಾಯ ಹೆಚ್ಚು ಎಂದು ಜಾಕ್ ಮಾ ಅವರ ನಡೆಯಲು ಕೆಲವರು ಟೀಕಿಸಿದ್ದಾರೆ.

ಇನ್ನು ಕೆಲವರು ದಿನಕ್ಕೆ 12 ಗಂಟೆ ದುಡಿಯುವುದು ಅಪರಾಧವಲ್ಲ ಎಂದು ಜಾಕ್‌ ಮಾ ಅವರ ನಿಲುವನ್ನು ಬೆಂಬಲಿಸಿದ್ದಾರೆ. '996 ವರ್ಕಿಂಗ್ ಅವರ್ ಸಿಸ್ಟಮ್‌' ದೇಶವನ್ನು ಆರ್ಥಿಕವಾಗಿ ಬಲಿಷ್ಠ ರಾಷ್ರವೊಂದನ್ನು ರೂಪಿಸಲು ಸಹಾಯವಾಗುತ್ತದೆ ಎಂದು ಅವರನ್ನು ಬೆಂಬಲಿಸುವವರು ಅಭಿಪ್ರಾಯಪಟ್ಟಿದ್ದಾರೆ. ವಿಶ್ವದೆಲ್ಲೆಡೆ ವಾರದಲ್ಲಿ 5 ದಿನಗಳು ಮತ್ತು 8 ಗಂಟೆಗಳ ಉದ್ಯೋಗ ನಿರ್ವಹಣೆಯ ಸಮಯ ಹೆಚ್ಚು ಪ್ರಚಲಿತವಾಗಿರುವುದರಿಂದ ಜಾಕ್ ಮಾ ಅವರ ಹೇಳಿಕೆ ಇದೀಗ ಮಹತ್ವ ಪಡೆದಿದೆ.

   
 
ಹೆಲ್ತ್