Back
Home » ಆರೋಗ್ಯ
ಸ್ವಯಂ ಡಾಕ್ಟರ್ ಆಗಲು ಹೋಗಬೇಡಿ! ಇಲ್ಲಾಂದ್ರೆ ಇಂತಹ ಅಪಾಯಗಳು ಎದುರಾಗಬಹುದು
Boldsky | 15th Apr, 2019 05:00 PM
 • ಕ್ಷಣಾರ್ಧದಲ್ಲಿ ನಮಗೆ ಉತ್ತರವನ್ನು ಕೊಡುವ ತಂತ್ರಜ್ಞಾನ ನಂಬಬಹುದೇ?

  ನಾವು ಎಷ್ಟೇ ವಿದ್ಯಾವಂತರಾದರೂ ನಮ್ಮಲ್ಲಿ ಏನೆಲ್ಲಾ ಸಲಕರಣೆ ಸೌಕರ್ಯಗಳಿದ್ದರೂ ಕ್ಷಣಾರ್ಧದಲ್ಲಿ ನಮಗೆ ಉತ್ತರವನ್ನು ಕೊಡುವ ತಂತ್ರಜ್ಞಾನ ನಿಜಕ್ಕೂ ನಮ್ಮ ಬದುಕಿಗೆ ಒಳ್ಳೆಯದಾ ? ನಾವೂ ನೀವು ಇದರ ಮೇಲೆ ಇಷ್ಟೊಂದು ಅವಲಂಬಿತರಾಗಬೇಕೇ ? ಖಂಡಿತ ಇಲ್ಲ . ಯಾಕೆಂದರೆ ನಮ್ಮ ಬಗ್ಗೆ ನಮಗೆ ಎಷ್ಟೇ ತಿಳಿದಿದ್ದರೂ ನಮ್ಮ ದೇಹದ ನಿಜವಾದ ಗುಣ ಲಕ್ಷಣ , ಅದರ ಆ ಕ್ಷಣದ ಆರೋಗ್ಯ ಸ್ಥಿತಿ ತಿಳಿಯುವುದು ವೈದ್ಯರು ನಮ್ಮನ್ನು ಎದುರಿಗೆ ಕಣ್ಣಾರೆ ಕಂಡು ಪರೀಕ್ಷಿಸಿದಾಗ . ಅವರು ಅವರ ವೈದ್ಯಕೀಯ ವೃತ್ತಿಯ ಅನುಭವದಿಂದ ಅದಕ್ಕೆ ಸರಿಯಾದ ಔಷಧಗಳನ್ನು ಕೊಟ್ಟು ನಮ್ಮನ್ನು ಆರೋಗ್ಯವಂತರನ್ನಾಗಿ ಮಾಡುತ್ತಾರೆ . ಅದನ್ನು ಬಿಟ್ಟು ಯಾವುದೋ ವೆಬ್ಸೈಟ್ ಅನ್ನು ನೋಡಿ ಅದರಲ್ಲಿ ಯಾರೋ ಕೊಟ್ಟಿರುವ ಸಲಹೆಯನ್ನು ಓದಿ ಯಾವುದೋ ಕಾಯಿಲೆಗೆ ಇನ್ನಾವುದೋ ಔಷಧಿಗಳನ್ನು ತೆಗೆದುಕೊಂಡರೆ ಬಂದಿರುವ ಕಾಯಿಲೆ ಇನ್ನಷ್ಟು ಉಲ್ಬಣಗೊಳ್ಳುತ್ತದೆಯೇ ಹೊರತು ನಾವು ಮಾತ್ರ ಮೊದಲಿನಂತಾಗುವುದಿಲ್ಲ.ಹಾಗಾದರೆ ನಾವು ಈ ರೀತಿ ನಮಗೆ ನಾವೇ ವೈದ್ಯರಾಗಲು ಹೊರಟಾಗ ಆಗುವ ದುಷ್ಪರಿಣಾಮಗಳ ಬಗ್ಗೆ ಸ್ವಲ್ಪ ಗಮನ ಹರಿಸೋಣವೇ .


 • ತಪ್ಪಾದ ರೋಗ ನಿರ್ಣಯ

  "ಆಸ್ಪತ್ರೆಗೆ ಸುಮ್ಮನೆ ನೆಗಡಿ ಎಂದು ಹೋದರೆ ವೈದ್ಯರು ಇಪ್ಪತ್ತೆಂಟು ಟೆಸ್ಟ್ ಗಳಿಗೆ ಬರೆದುಕೊಡುತ್ತಾರೆ . ಅವರಿಗೆ ಫೀಸೂ ಕೊಟ್ಟು ಯಾರಪ್ಪಾ ಅಷ್ಟೊಂದು ಟೆಸ್ಟ್ ಮಾಡಿಸೋರು . ಅದಕ್ಕೆಲ್ಲಾ ಸಮಯ ತಾನೇ ಎಲ್ಲಿದೆ ? ಅದರ ಬದಲು ಇಂಟರ್ನೆಟ್ ನಲ್ಲಿ ಸಿಗುವ ಸಲಹೆಯಂತೆ ಮನೆ ಬಳಿಯಿರುವ ಮೆಡಿಕಲ್ ಶಾಪ್ ಗೆ ಹೋಗಿ ಮಾತ್ರೆಗೆಳನ್ನು ತೆಗೆದುಕೊಂಡರೆ ಅಷ್ಟೇ ಸಾಕು . ಕಾಯಿಲೆ ವಾಸಿ " . ಇದು ಈಗಿನ ಜನರ ಮನಸ್ಥಿತಿ . ಇದರಿಂದ ಯಾರಿಗೇನೂ ತೊಂದರೆ ಇಲ್ಲ ನಿಜ . ಸಮಯ , ಹಣ ಎಲ್ಲವೂ ಉಳಿತಾಯವೇ . ಆದರೆ ಆ ಕ್ಷಣ ವಾಸಿಯಾದ ನೆಗಡಿ ಮುಂದೆಲ್ಲೋ ನಿಮ್ಮನ್ನು ಅಡ್ಡಡ್ಡ ಮಲಗಿಸಿದರೆ ? ಹೌದು . ಒಂದು ಸಣ್ಣ ಖಾಯಿಲೆಯಾದರೂ ಸರಿ . ಅದಕ್ಕೆ ತನ್ನದೇ ಆದ ಗುಣ ಲಕ್ಷಣಗಳಿರುತ್ತವೆ . ಅದಕ್ಕೇ ವೈದ್ಯರು ಇಪ್ಪತ್ತೆಂಟು ಟೆಸ್ಟ್ ಗಳಿಗೆ ಬರೆದು ಕೊಡುವುದು ಮತ್ತು ಮುಂದೆ ಬರುವ ದೊಡ್ಡ ಕಾಯಿಲೆಯನ್ನು ಆರಂಭದಲ್ಲೇ ತಡೆಗಟ್ಟುವುದು . ಒಂದು ಉದಾಹರಣೆ ತೆಗೆದುಕೊಂಡು ಹೇಳಬೇಕೆಂದರೆ , ಒಂದು ವೇಳೆ ನೀವು ವಿಪರೀತ ಬಾಯಾರಿಕೆಯಿಂದ ಬಳಲುತ್ತಿದ್ದರೆ ಅದನ್ನು ಕಡೆಗಣಿಸಿ ಒಂದು ಲೋಟ ನೀರು ಕುಡಿದು ಸುಮ್ಮನಾದೀರಿ ಜೋಕೆ !!! ಅದು ಸಕ್ಕರೆ ಕಾಯಿಲೆ ಅಂದರೆ " ಡಯಾಬಿಟಿಸ್ " ನ ಲಕ್ಷಣವಾಗಿದ್ದರೂ ಇರಬಹುದು .


 • ಒಂದು ಕ್ಷಣ ನಿಮ್ಮನ್ನೇ ದಾರಿ ತಪ್ಪಿಸುವಂತಹ ನಿಮ್ಮ ತೀರ್ಮಾನ

  ಇದು ಹೇಗೆಂದರೆ " ಇಲಿ ಹೋದರೆ ಹುಲಿಯೇ ಹೋಯಿತು " ಎಂಬಂತೆ . ಉದಾಹರಣೆಗೆ ಹೈಪರ್ ಥೈರಾಯಿಡ್ , ಮೈಗ್ರಾಯ್ನ್ ತಲೆನೋವು ಎಂಬಂತಹ ಲಕ್ಷಣಗಳು ಮಾನಸಿಕ ರೋಗ ಲಕ್ಷಣಗಳಂತೆ ಕಂಡರೂ ಅವು ನಿಜಕ್ಕೂ ಮಾನಸಿಕ ಖಾಯಿಲೆಗೆ ಸಂಬಂಧ ಪಟ್ಟವಾಗಿರುವುದಿಲ್ಲ . ಆದರೆ ಮನುಷ್ಯ ಅದರಿಂದ ನಿಜವಾಗಿಯೂ ಬಳಲುತ್ತಾನೋ ಇಲ್ಲವೋ ಗೊತ್ತಿಲ್ಲ , ಆದರೆ ಇಂಟರ್ನೆಟ್ ನಲ್ಲಿ ತನಗೆ ಪ್ರಸ್ತುತ ಕಾಡುತ್ತಿರುವ ರೋಗ ಲಕ್ಷಣಗಳನ್ನು ತಾಳೆ ಹಾಕಿ ಅದರಿಂದ ಬಂದ ಉತ್ತರ ಕಂಡು ಅದರ ಬಗ್ಗೆಯೇ ಯೋಚನೆ ಮಾಡಿ ಮಾಡಿ ನಿಜವಾಗಿಯೂ ಹುಚ್ಚನಾಗಿ ಬಿಡುತ್ತಾನೆ . ಇದು ಇಂಟರ್ನೆಟ್ ನಮ್ಮನ್ನು ದಾರಿ ತಪ್ಪಿಸುತ್ತಿರುವ ರೀತಿ .


 • ಆಸ್ಪಿರಿನ್ ಔಷಧದ ಪ್ರತಿನಿತ್ಯ ಸೇವನೆ

  ಯಾರಿಗೆ ಹೃದಯಾಘಾತ ಮತ್ತು ಪಾರ್ಶ್ವವಾಯು ಸಂಭವಿಸುವ ಲಕ್ಷಣ ಹೆಚ್ಚಿರುತ್ತದೋ ಅಂತಹವರಿಗೆ ಮಾತ್ರ ವೈದ್ಯರು ಅವರ ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಆಸ್ಪಿರಿನ್ ಮಾತ್ರೆಗಳನ್ನು ಶಿಫಾರಸ್ಸು ಮಾಡುತ್ತಾರೆ ಅದೂ ಷರತ್ತುಭದ್ಧವಾಗಿ . ಕೆಲವರು ತಮ್ಮಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ನಿರೋಧಕತೆಯನ್ನು ಸ್ವಾಭಾವಿಕವಾಗಿಯೇ ಹೊಂದಿರುತ್ತಾರೆ .ಅಂಥವರಿಗೆ ಆಸ್ಪಿರಿನ್ ನ ದಿನ ನಿತ್ಯ ಸೇವನೆಯಿಂದ ಹೊಟ್ಟೆಯಲ್ಲಿ ರಕ್ತ ಸ್ರಾವ ವಾಗುವ ಸಾಧ್ಯತೆ ಬಹಳ ಹೆಚ್ಚಿರುತ್ತದೆ ಆದ್ದರಿಂದ ರೋಗ ಲಕ್ಷಣಗಳಿದ್ದ ಮಾತ್ರಕ್ಕೆ ವೈದ್ಯರನ್ನು ಕೂಡ ಸಂಪರ್ಕಿಸದೇ ಯಾವುದೇ ತಪ್ಪು ನಿರ್ಣಯಕ್ಕೆ ಬಂದು ಆಸ್ಪಿರಿನ್ ತೆಗೆದುಕೊಂಡರೆ ಆಗುವ ಅನಾಹುತಕ್ಕೆ ಅವರೇ ನೇರ ಹೊಣೆಗಾರರು ನಿಜ ತಾನೇ ?


 • ಮಾನಸಿಕ ಆತಂಕ ದೂರ ಮಾಡಿಕೊಳ್ಳಲು ಔಷಧಿ ತೆಗೆದುಕೊಳ್ಳುತ್ತಿದ್ದೀರಾ ? ಹಾಗಾದರೆ ಥಟ್ಟನೆ ಬಿಡಬೇಡಿ

  ನಮ್ಮ ಮಾನಸಿಕ ಸ್ಥಿತಿಯೇ ಹಾಗೆ . ನಾವು ಒಂದೆರಡು ದಿನ ಮಾತ್ರೆ ಅಥವಾ ಔಷಧ ತೆಗೆದುಕೊಂಡು ನಮ್ಮ ದೇಹಕ್ಕೆ ಸ್ವಲ್ಪ ಆರಾಮಾಗಿದೆ ಅನಿಸಿದ ಕೂಡಲೇ ಮಾತ್ರೆ ತೆಗೆದುಕೊಳ್ಳುವುದನ್ನು ಬಿಟ್ಟುಬಿಡುತ್ತೇವೆ . ಅದು ತಪ್ಪು . ವೈದ್ಯರು ನಮ್ಮನ್ನು ಪರೀಕ್ಷೆ ಮಾಡಿ ನಮ್ಮ ದೇಹ ಸ್ಥಿತಿಯನ್ನು ಗಮನಿಸಿ ಎಷ್ಟು ದಿನ ಔಷಧ ತೆಗೆದುಕೊಂಡರೆ ಇವರು ಹುಷಾರಾಗುತ್ತಾರೆ ಎಂದು ಅರಿವಾದ ಮೇಲೆಯೇ ನಿರ್ದಿಷ್ಟ ಅವಧಿಗೆ ಸರಿಯಾಗಿ ಮಾತ್ರೆ ಗಳನ್ನು ಬರೆದಿರುತ್ತಾರೆ . ಆದರೆ ಮಾತ್ರೆ ತೆಗೆದುಕೊಂಡ ಮೇಲೆ ಖಾಯಿಲೆ ಕಡಿಮೆ ಆಗಲೇ ಬೇಕಲ್ಲವೇ ? ಒಂದೆರಡು ದಿನಕ್ಕೆ ಅದರ ಲಕ್ಷಣ ತೋರಿಸಿರುತ್ತದೆ ಅಷ್ಟೇ . ಅದನ್ನೇ ನಾವು ಪೂರ್ತಿ ಗುಣ ಆಗಿದ್ದೇವೆ ಎಂದು ಹೇಗೆ ಅಂದುಕೊಳ್ಳಲು ಸಾಧ್ಯ ? ಅದರಲ್ಲೂ ಮಾನಸಿಕ ಒತ್ತಡ ಅಥವಾ ಆತಂಕ ದೂರ ಮಾಡಿಕೊಳ್ಳಲು ಔಷಧ ತೆಗೆದುಕೊಳ್ಳುತ್ತಿದ್ದರೆ ಬಹಳ ಎಚ್ಚರದಿಂದ ಇರಬೇಕು . ಇಂತಹ ಔಷಧಗಳನ್ನು ನಿಧಾನವಾಗಿ ಕಡಿಮೆ ಮಾಡುತ್ತಾ ಬರಬೇಕೇ ಹೊರತು ಒಮ್ಮೆಲೇ ಬಿಟ್ಟರೆ ತುಂಬಾ ಗಂಭೀರ ಆರೋಗ್ಯ ಸಮಸ್ಯೆಗೆ ಒಳಗಾಗಬೇಕಾದೀತು . ಎಚ್ಚರ !!!

  Most Read: ಮೆಡಿಕಲ್‌ಗಳ ಔಷಧಿ ಸೇವಿಸುವ ಮುಂಚೆ ಸ್ವಲ್ಪ ಆಲೋಚಿಸಿ!


 • ಹೊಸದಾಗಿ ಶುರುವಾದ ಸೋಂಕಿಗೆ ಹಳೆಯ ಆಂಟಿಬಯೋಟಿಕ್ ಉಪಯೋಗಿಸಲೇಬೇಡಿ

  ನಮಗೇನಾದರೂ ಸುಟ್ಟ ಗಾಯಗಳಾಗಿದ್ದರೆ ಅಥವಾ ಚರ್ಮ ಸ್ವಲ್ಪ ಕಟ್ ಆಗಿದ್ದರೆ ನಾವು ಮಾಡುವ ಮೊದಲ ಕೆಲಸ ಅದಕ್ಕೆ ಚಿಕಿತ್ಸೆ ತೆಗೆದುಕೊಳ್ಳುವುದು . ಅದು ಯಾವುದರಿಂದ ? ಮನೆಯಲ್ಲಿ ಮೊದಲೇ ತಂದಿಟ್ಟುಕೊಂಡಿರುವ ಆಂಟಿಬಯೋಟಿಕ್ ಔಷಧದಿಂದ . ಇದು ನಿಜಕ್ಕೂ ತುಂಬಾ ಅಪಾಯಕಾರಿ . ಒಂದೊಂದು ಆಂಟಿಬಯೋಟಿಕ್ ಒಂದೊಂದು ರೋಗಗಳಿಗೆ ಮತ್ತು ನಿರ್ಧಿಷ್ಟ ಉದ್ದೇಶಗಳಿಗೆ ಮಾತ್ರ ಸೀಮಿತವಾಗಿರುತ್ತದೆ . ಎಲ್ಲಾ ಕೆಲಸಕ್ಕೂ ಒಂದೇ ಆಯುಧ ಎಂಬಂತೆ ವೈದ್ಯರನ್ನು ಕಾಣದೆ ಇಲ್ಲಿ ನಾವು ಎಡವಿದರೆ ಆಗಿರುವ ಸೋಂಕು ಇನ್ನಷ್ಟು ದೊಡ್ಡದಾಗುತ್ತದೆ .


 • ಓ . ಟಿ . ಸಿ . ಅಥವಾ " ಓವರ್ ದಿ ಕೌಂಟರ್ ಮೆಡಿಸಿನ್ " ಗಳ ಬಗ್ಗೆ ಎಚ್ಚರಿಕೆ ವಹಿಸಿ

  ಜನರು ತಮಗೆ ಸ್ವಲ್ಪ ತಲೆನೋವು , ನೆಗಡಿ , ಶೀತ ಹಾಗು ಜ್ವರ ಇಂತಹ ಸಾಧಾರಣ ಸಮಸ್ಯೆಗಳಿಗೆ ಕ್ಲಿನಿಕ್ ಗೆ ಹೋಗುವ ಬದಲು ಮೆಡಿಕಲ್ ಶಾಪ್ಗಳ ಕಡೆ ಮುಖ ಮಾಡುತ್ತಾರೆ . ಅಲ್ಲಿ ಕೊಡುವ ಹತ್ತಿಪ್ಪತ್ತು ರೂಪಾಯಿಗಳ ಮಾತ್ರೆಗಳನ್ನು ತೆಗೆದುಕೊಂಡು ಅದರಲ್ಲಿರುವ ಲೇಬಲ್ ಸಹ ಓದದೇ ಇದರಿಂದ ತಮಗೇನೂ ತೊಂದರೆ ಆಗುವುದಿಲ್ಲ ಎಂದು ತಿಳಿದು ಬಂದಿರುವ ಸಮಸ್ಯೆಯನ್ನು ಸರಿಪಡಿಸಿಕೊಳ್ಳುತ್ತಾರೆ . ಆದರೆ ಜ್ವರ ವಾಸಿಯಾಗದೆ ಹೋದ ಪಕ್ಷದಲ್ಲಿ ಈ ರೀತಿಯ ಔಷಧ ಅದಾಗಲೇ ಅವರ ದೇಹದಲ್ಲಿ ತನ್ನ ಕೆಲಸ ಶುರುಮಾಡಿರುತ್ತದಾದ್ದರಿಂದ ವೈದ್ಯರ ಬಳಿಗೆ ಹೋಗಿ ಪರೀಕ್ಷಿಸಿ ಅವರು ಕೊಡುವ ಔಷಧಗಳನ್ನು ತೆಗೆದುಕೊಂಡರೆ ಎರಡೂ ಔಷಧಗಳು ಒಂದಕ್ಕೊಂದು ರಿಯಾಕ್ಷನ್ ಆಗಿ ಆ ವ್ಯಕ್ತಿಯ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಲ್ಲಿ ಯಾವುದೇ ಸಂದೇಹವಿಲ್ಲ .


 • ಜ್ವರ ಬಂದರೆ ಭೇದಿ ಮಾತ್ರೆ . ಅದರಿಂದ ಖಂಡಿತಾ ನಿಮ್ಮ ಪರಲೋಕದ ಯಾತ್ರೆ

  ನಿಮಗೆ ಅತಿಸಾರ , ಭೇದಿ ಜೊತೆಗೆ ರಕ್ತ ಬೀಳುವುದು ಇವುಗಳ ಜೊತೆಗೆ ಜ್ವರದ ಲಕ್ಷಣವೇನಾದರೂ ಕಂಡುಬಂದರೆ ಬರೀ ಭೇದಿ ನಿಲ್ಲುವ ಮಾತ್ರೆ ತೆಗೆದುಕೊಂಡು ಸುಮ್ಮನಾದೀರಿ ಎಚ್ಚರ !!! ಅದು ಬೇರೆ ಯಾವ ರೋಗದ ಲಕ್ಷಣವೋ ಯಾರಿಗೆ ಗೊತ್ತು . ವೈದ್ಯರ ಬಳಿ ಹೋಗುವುದನ್ನು ಮಾತ್ರ ನಿರ್ಲಕ್ಷಿಸಬೇಡಿ . ನೋಡಿದಿರಲ್ಲ ನಿಮಗೆ ನೀವೇ ಡಾಕ್ಟರ್ ಆಗಲು ಹೊರಟರೆ ಏನೆಲ್ಲಾ ಅನರ್ಥವಾಗುತ್ತದೆ ಎಂದು . ಇಷ್ಟಲ್ಲದೆ ದೊಡ್ಡವರು ವೈದ್ಯರನ್ನು ದೇವರಿಗೆ ಹೋಲಿಸಿ " ವೈದ್ಯೋ ನಾರಾಯಣೀ ಹರಿ " ಎಂದು ಸುಮ್ಮನೆ ಹೇಳಿದ್ದಾರೆಯೇ ?
ಈಗಿನ ಆಧುನಿಕ ಯುಗದಲ್ಲಿ " ಅಂತರ್ಜಾಲ " ಅಥವಾ " ಇಂಟರ್ನೆಟ್ " ನಮ್ಮ ಬೆಸ್ಟ್ ಫ್ರೆಂಡ್ . ಕೈಯಲ್ಲೊಂದು ಸ್ಮಾರ್ಟ್ ಫೋನ್ ಇದ್ದರೆ ಸಾಕು .ಯಾರೂ ಬೇಡ , ಏನೂ ಬೇಡ . ಇಡೀ ಪ್ರಪಂಚವೇ ನಮ್ಮ ಅಂಗೈಯಲ್ಲಿ . ಮನುಷ್ಯ ಬೆಳೆದಂತೆಲ್ಲಾ ತಂತ್ರಜ್ಞಾನ ಕೂಡ ಬೆಳೆಯಲಾರಂಭಿಸಿದೆ . ಎಷ್ಟರ ಮಟ್ಟಿಗೆ ಅಂದರೆ ನಮಗೆ ಯಾವುದೇ ಸಮಸ್ಯೆ ಎದುರಾದರೂ ನಾವು ಇನ್ನೊಬ್ಬರ ಬಳಿಗೆ ಹೋಗಿ ಅವರನ್ನು ಹುಡುಕಿ , ಕಂಡು ಅವರಲ್ಲಿ ಸಲಹೆ ಕೇಳುವ ತಾಳ್ಮೆಯಾಗಲಿ ಯೋಚನೆಯಾಗಲೀ ನಮಗೆ ಎಂದಿಗೂ ಬರುವುದೇ ಇಲ್ಲ . ಎಲ್ಲದಕ್ಕೂ ಸೆಲ್ ಫೋನ್ ನ ಮೊರೆ ಹೋಗುತ್ತೇವೆ .

ಅದೂ ಅಷ್ಟೇ ನಮ್ಮನ್ನು ಒಂದು ಕ್ಷಣವೂ ಬಿಟ್ಟಿರುವುದಿಲ್ಲ . ಅಷ್ಟೊಂದು ನಂಟು - ಭಾಂದವ್ಯ ನಮ್ಮಿಬ್ಬರ ಮದ್ಯೆ . ಹೀಗಿರುವಾಗ ನಮಗೆ ಏನಾದರೂ ಸ್ವಲ್ಪ ತಲೆನೋವು , ನೆಗಡಿ ಅಥವಾ ಕೆಮ್ಮು ಇಂತಹ ಯಾವುದಾದರೂ ಸಣ್ಣ ಪುಟ್ಟ ಕಾಯಿಲೆ ಬಂದರೆ ಬಿಡುತ್ತೇವೆಯೇ ? ಅದಕ್ಕೂ ಫೋನ್ ನಲ್ಲೆ ಉತ್ತರ ಸದಾ ಸಿದ್ದ . ಏಕೆಂದರೆ ಬಿಡುವಿಲ್ಲದ ಸಮಯ , ಕೆಲಸದ ಒತ್ತಡ ಅಥವಾ ನಾವು ರೂಢಿಸಿಕೊಂಡಿರುವ ನಮ್ಮ ಜೀವನ ಶೈಲಿಯೋ ಏನೋ ನಮ್ಮನ್ನು ಡಾಕ್ಟರ್ ಬಳಿ ಹೋಗುವುದಕ್ಕೂ ಬಿಡದೆ ಪರಿಹಾರಕ್ಕಾಗಿ ಸ್ಮಾರ್ಟ್ ಫೋನ್ ನ ಮುಂದೆ ಕೂರಿಸುತ್ತದೆ . ಈಗಂತೂ ಜನ ಯಾವ ಮಟ್ಟಿಗೆ ಅಂತರ್ಜಾಲದ ಮೊರೆ ಹೋಗಿದ್ದಾರೆ ಎಂದರೆ ಯಾವುದೇ ದೊಡ್ಡ ಕಾಯಿಲೆಗೂ ಸಹ ವೈದ್ಯರ ಬಳಿಗೆ ಹೋಗಲು ನಿರ್ಲಕ್ಷ್ಯ ಮಾಡಿ ಇಂಟರ್ನೆಟ್ ನಲ್ಲಿ ಯಾರೋ ಪೋಸ್ಟ್ ಮಾಡಿರುವ ಸಲಹೆ ನೋಡಿ ಅದನ್ನೇ ಅನುಸರಿಸುತ್ತಾರೆ ಕೂಡ .

 
ಹೆಲ್ತ್