Back
Home » ಆರೋಗ್ಯ
ಮೈಗ್ರೇನ್ ತಲೆನೋವೇ? ಹಾಗಾದರೆ ಈ ಕರಿಮೆಣಸು ಬಳಸಿ ಮಾಡಿದ ಮನೆಮದ್ದು ಬಳಸಿ
Boldsky | 16th Apr, 2019 10:35 AM

ಈ ನೋವು ಶತ್ರುವಿಗೂ ಬೇಡ ಎನ್ನಿಸುವಂತಹ ನೋವಿದ್ದರೆ ಅದು ಹೆರಿಗೆ ನೋವು, ಆ ಬಳಿಕ ಮೈಗ್ರೇನ್ ತಲೆನೋವಾಗಿದೆ. ಯೋಚನಾ ಸಾಮರ್ಥ್ಯವನ್ನೇ ಕಸಿದುಬಿಡುವ ಈ ತಲೆನೋವು ಧಿಗ್ಗನೇ ಎದುರಾಗಿ ಇಡಿಯ ದಿನ ಆವರಿಸಿ ರೋಗಿಯ ದಿನಚರಿಯನ್ನೇ ಬದಲಿಸಿಬಿಡುತ್ತದೆ. ತಲೆನೋವುಗಳಲ್ಲಿ ಹಲವು ಪ್ರಕಾರಗಳಿದ್ದು ಇದರಲ್ಲಿ ಮೈಗ್ರೇನ್ ಅತ್ಯುಗ್ರ ರೂಪವಾಗಿದೆ. ತಲೆನೋವು ವಿಪರೀತಕ್ಕೇರುತ್ತಿದ್ದಂತೆಯೇ ವಾಕರಿಕೆ, ವಾಂತಿ ಹಾಗೂ ಬವಳಿ ಬೀಳುವುದು ಮೊದಲಾದವು ಎದುರಾಗುತ್ತದೆ. ಸಾಮಾನ್ಯವಾಗಿ ಇದು ತಲೆಯ ಒಂದು ಬದಿಯಲ್ಲಿ ಕಾಣಬರುತ್ತದೆ ಹಾಗೂ ಸಾಮಾನ್ಯ ತಲೆನೋವಿಗೂ ಭಿನ್ನವಾಗಿರುತ್ತದೆ.

ಸಾಮಾನ್ಯವಾಗಿ ತಲೆನೋವು ಎದುರಾದ ತಕ್ಷಣ ಹೆಚ್ಚಿನವರು ಮಾಡುವುದೆಂದರೆ ಒಂದು ಮಾತ್ರೆ ನುಂಗಿಬಿಡುವುದು. ಆದರೆ ಇದು ತಾತ್ಕಾಲಿಕ ಶಮನ ನೀಡಬಲ್ಲುದೇ ಹೊರತು ದೀರ್ಘಾವಧಿಯಲ್ಲಿ ಇವು ಹಾನಿಕಾರಕವಾಗಿವೆ. ಅಲ್ಲದೇ ಕೆಲವೇ ದಿನಗಳಲ್ಲಿ ನಮ್ಮ ದೇಹ ಈ ಮಾತ್ರೆಗಳಿಗೆ ಒಗ್ಗಿಬಿಡುತ್ತದೆ ಹಾಗೂ ಕೆಲದಿನಗಳ ಬಳಿಕ ಈ ಮಾತ್ರೆಗಳ ಪ್ರಭಾವ ಆಗುವುದೇ ಇಲ್ಲ. ಹಾಗಾಗಿ ಇವುಗಳ ಬದಲಿಗೆ ಸುರಕ್ಷಿತವಾದ, ಮನೆಯಲ್ಲಿಯೇ ತಯಾರಿಸಿದ ಕೆಲವು ಮನೆಮದ್ದುಗಳು ಉತ್ತಮ ಆಯ್ಕೆಯಾಗಿವೆ ಹಾಗೂ ಉತ್ತಮ ಫಲಿತಾಂಶ ನೀಡಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಈ ವಿಧಾನದ ಗುಟ್ಟೇನು ಗೊತ್ತೇ? ಕಾಳುಮೆಣಸು!

ಜೀವನಕ್ರಮ ಮತ್ತು ಆರೋಗ್ಯಕರ ಜೀವನ ತರಬೇತಿ ತಜ್ಞರು ಇತ್ತೀಚೆಗೆ ತಮ್ಮ ಅನುಭವದಿಂದ ಮೈಗ್ರೇನ್ ತಲೆನೋವಿಗೆ ಸೂಕ್ತವಾದ ಮನೆಮದ್ದನ್ನು ತಯಾರಿಸುವುದು ಹೇಗೆ ಎಂದು ವಿವರಿಸಿದ್ದಾರೆ. ಅವರ ಪ್ರಕಾರ ಮೈಗ್ರೇನ್ ನಿವಾರಣೆಗೆ ಕಾಳುಮೆಣಸು ಅತ್ಯುತ್ತಮ ಔಷಧಿಯಾಗಿದೆ. ಈ ತೊಂದರೆ ಇರುವ ವ್ಯಕ್ತಿಗಳು ನಿಯಮಿತವಾಗಿ ತಮ್ಮ ಆಹಾರದಲ್ಲಿ ಕಾಳುಮೆಣಸನ್ನು ಸೇವಿಸುತ್ತಾ ಬಂದರೆ ಮೈಗ್ರೇನ್ ಇಲ್ಲವಾಗುತ್ತದೆ. ಈ ವಿವರಗಳನ್ನು ಅವರು ಹೀಗೆ ವಿವರಿಸಿದ್ದಾರೆ...

ಮಲಬದ್ಧತೆ, ಆಮ್ಲೀಯತೆ, ನಿದ್ರಾರಾಹಿತ್ಯ, ವಿಟಮಿನ್ ಕೊರತೆ, ಕಣ್ಣಿನ ತೊಂದರೆಗಳು, ಉದ್ವೇಗ ಹಾಗೂ ಅತಿಯಾದ ಮಾನಸಿಕ ಒತ್ತಡ, ನೀರಿನ ಕೊರತೆ, ಇವೆಲ್ಲವೂ ತಲೆನೋವು ಮತ್ತು ಮೈಗ್ರೇನ್‌ಗೂ ಕಾರಣವಾಗಬಹುದು. ಈ ಸುಲಭ ಮನೆಮದ್ದನ್ನು ಬಳಸುವ ಹಾಗೂ ಆರೋಗ್ಯಕರ ಜೀವನಕ್ರಮವನ್ನು ಅನುಸರಿಸುವ ಮೂಲಕ ಈ ತಲೆನೋವನ್ನು ಮೂಲದಿಂದಲೇ ನಿವಾರಿಸಬಹುದು.

Most Read: ಮೈಗ್ರೇನ್ ತಲೆನೋವಿಗೆ ಅಡುಗೆ ಮನೆಯಲ್ಲಿಯೇ ಇದೆ ಔಷಧಿ!

ಈ ಸುಲಭ ಪೇಯ ತಲೆನೋವು ನಿವಾರಿಸುವ ಜೊತೆಗೇ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳನ್ನೂ ನಿವಾರಿಸಿ ಕರುಳುಗಳಲ್ಲಿ ಆಹಾರದ ಚಲನೆ ಸುಲಭವಾಗಿಸಲು ನೆರವಾಗುತ್ತದೆ. ಅಲ್ಲದೇ ರಾತ್ರಿ ಗಾಢ ನಿದ್ದೆ ಆವರಿಸಲೂ ಸಾಧ್ಯವಾಗುತ್ತದೆ. ಹಾಗಾಗಿ ಕಾಳುಮೆಣಸನ್ನು ನಿಮ್ಮ ನಿತ್ಯದ ಆಹಾರದಲ್ಲಿ ಅಳವಡಿಸಿಕೊಳ್ಳಬೇಕಾದ ಅಪ್ರತಿಮ ಆಹಾರ ಎಂದು ಖಚಿತವಾಗಿ ಹೇಳಬಹುದು. ಕಾಳುಮೆಣಸಿನಿಂದ ಈ ಪ್ರಯೋಜಗಳ ಹೊರತಾಗಿ ಇನ್ನೂ ಹಲವಾರು ಪ್ರಯೋಜನಗಳಿವೆ.

ಕಾಳುಮೆಣಸು ಹೇಗೆ ನೆರವಾಗುತ್ತದೆ?

ಸಾಮಾನ್ಯವಾಗಿ ಕಾಳುಮೆಣಸನ್ನು ನಾವು ಆಹಾರದ ಖಾರ ಹೆಚ್ಚಿಸಿ ರುಚಿಯಾಗಿಸುವ ನಿಟ್ಟಿನಲ್ಲಿ ಮಾತ್ರವೇ ಬಳಸುತ್ತೇವೆ. ಆದರೆ ಇದರಲ್ಲಿ ಹಲವಾರು ಅವಶ್ಯಕ ಖನಿಜಗಳು ಮತ್ತು ಪೋಷಕಾಂಶಗಳಿವೆ. ಈ ಪೋಷಕಾಂಶಗಳಲ್ಲಿ ಕೆಲವುಗಳಿಗೆ ಮೈಗ್ರೇನ್ ಅನ್ನೂ ನಿವಾರಿಸುವ ಗುಣವಿದ್ದು ಈ ಗುಣವನ್ನೇ ಲ್ಯೂಕ್ ರವರು ಸಮರ್ಥವಾಗಿ ಬಳಸುವ ವಿಧಾನವನ್ನು ವಿವರಿಸಿದ್ದಾರೆ.

ಭಾರತೀಯ ವೈದ್ಯಪದ್ದತಿಯಾದ ಆಯುರ್ವೇದದಲ್ಲಿಯೂ ಕಾಳು ಮೆಣಸನ್ನು ಹಲವಾರು ಕಾಯಿಲೆಗಳಿಗೆ ಮದ್ದಿನ ರೂಪದಲ್ಲಿ ಬಳಸಲಾಗುತ್ತಿದೆ. ಕೊಂಚ ತುಪ್ಪದಲ್ಲಿ ಬಿಸಿ ಮಾಡಿ ಅಥವಾ ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು ಅಥವಾ ಪುಡಿಯಾಗಿಸಿ ಆಹಾರದ ಜೊತೆ ಬೆರೆಸಿ ಸೇವಿಸುವ ಮೂಲಕ ತಲೆನೋವು ಮತ್ತು ಸುಲಭವಾಗಿ ಬೆನ್ನುಬಿಡದ ಮೈಗ್ರೇನ್ ಅನ್ನೂ ನಿವಾರಿಸಬಹುದು.ಇದಕ್ಕೆಲ್ಲಾ ಕಾರಣ ಕಾಳುಮೆಣಸಿನಲ್ಲಿರುವ "ಪೈಪರಿನ್' ಎಂಬ ಪೋಷಕಾಂಸ. ಇದರಲ್ಲಿ ಪ್ರಬಲ ಉರಿಯೂತ ನಿವಾರಕ ಗುಣವಿದೆ ಹಾಗೂ ಇದು ಊತವನ್ನು ನಿವಾರಿಸಲು ಮತ್ತು ನೋವು ಇರುವ ಭಾಗವನ್ನು ಶಮನಗೊಳಿಸಿ ನೋವಿಲ್ಲದಂತೆ ಮಾಡಲು ನೆರವಾಗುತ್ತದೆ. ಇದೇ ಕಾರಣಕ್ಕೆ ಪೈಪರಿನ್ ಅನ್ನು ನೈಸರ್ಗಿಕ ನೋವು ನಿವಾರಕವೆಂದೂ ಕರೆಯಲಾಗುತ್ತದೆ.

Most Read: 9 ಭಯಂಕರ ಕಾಯಿಲೆಗೆ ಮನೆಮದ್ದು ಈ ಕರಿಮೆಣಸು!

ಕಾಳುಮೆಣಸಿನಲ್ಲಿ ಹಲವಾರು ವಿಟಮಿನ್ ಮತ್ತು ಖನಿಜಗಳಿವೆ. ವಿಟಮಿನ್ ಎ, ಸಿ ಮತ್ತು ಕೆ ಹಾಗೂ ಖನಿಜಗಳಾದ ಪೊಟ್ಯಾಶಿಯಂ, ಕ್ಯಾಲ್ಸಿಯಂ, ಮೆಗ್ನೀಶಿಯಂ, ರೈಬೋಫ್ಲೇವಿನ್ ಹಾಗೂ ಥಿಯಾಮಿನ್ ಉತ್ತಮ ಪ್ರಮಾಣದಲ್ಲಿವೆ. ಇವೆಲ್ಲವೂ ದೇಹಕ್ಕೆ ಅಗತ್ಯ ಪೋಷಣೆಯನ್ನು ಒದಗಿಸುತ್ತವೆ. ಅಲ್ಲದೇ ಈ ಪೋಷಕಾಂಶಗಳನ್ನು ದೇಹ ಹೀರಿಕೊಳ್ಳುವಂತೆ ಮಾಡಲು ಅಗತ್ಯ ಆಂಟಿ ಆಕ್ಸಿಡೆಂಟುಗಳೂ ಇವೆ. ತನ್ಮೂಲಕ ಆಹಾರದಲ್ಲಿರುವ ಪೋಷಕಾಂಶಗಳನ್ನು ದೇಹ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೇ ಹೃದಯದ ಆರೋಗ್ಯಕ್ಕೂ ಕಾಳುಮೆಣಸು ಪೂರಕವಾಗಿದೆ.

Most Read: ಮೈಗ್ರೇನ್ ನಿಂದ ನೈಸರ್ಗಿಕ ಶಮನ ಪಡೆಯಲು ಬಾದಾಮಿ ಸೇವಿಸಿ ಸಾಕು!

ಈ ಪೇಯವನ್ನು ತಯಾರಿಸುವ ವಿಧಾನ

ಕೆಲವಾರು ಕಾಳುಮೆಣಸುಗಳನ್ನು ಒಂದು ಲೋಟ ನೀರಿನಲ್ಲಿ ಹಾಕಿ ಇಡಿಯ ರಾತ್ರಿ ನೆನೆಸಿಡಿ

ಮರುದಿನ ಬೆಳಿಗ್ಗೆ ಈ ನೀರನ್ನು ಪ್ರಥಮ ಆಹಾರವಾಗಿ ಖಾಲಿಹೊಟ್ಟೆಯಲ್ಲಿ ಸೇವಿಸಿ

ಕಾಳುಮೆಣಸನ್ನು ಕುಟ್ಟಿ ಪುಡಿ ಮಾಡಿಯೂ ಅಥವಾ ಇಡಿಯಾಗಿಯೂ ನೆನೆಸಿಡಬಹುದು. ನಿಮಗೆ ಸೂಕ್ತವಾದುದನ್ನು ಆಯ್ದುಕೊಳ್ಳಿ.

   
 
ಹೆಲ್ತ್