Back
Home » Business
ಇಎಂಐ ಹೊರೆ ಕಡಿಮೆಗೊಳಿಸುವುದು ಹೇಗೆ? ತಜ್ಞರು ಹೇಳುವ ಈ ಟಿಪ್ಸ್ ಪಾಲಿಸಿ
Good Returns | 17th Apr, 2019 10:03 AM
 • ಮೊದಲ ಮಾತು

  ಮೊಬೈಲ್ ಫೋನ್, ಬಟ್ಟೆ, ಆರೋಗ್ಯ ಸೇವೆ, ಒಂದು ಸಾಲ ತೀರಿಸಲು ಮತ್ತೊಂದು ಸಾಲ ಅಥವಾ ಇನ್ನಾವುದೋ ಶಾಪಿಂಗ್ ಹೀಗೆ ಎಲ್ಲದಕ್ಕೂ ಸಾಲ ಪಡೆಯಲು ಜನ ಮುಂದಾಗುತ್ತಿದ್ದಾರೆ. ಕ್ರೆಡಿಟ್ ಕಾರ್ಡು ಹಾಗೂ ಇನ್ನಿತರ ಸಾಲಗಳ ಆಕರ್ಷಕ ಆಫರ್‌ಗಳಿಂದ ಕೆಲವೊಮ್ಮೆ ಬೇಡವಾದ ವಸ್ತುಗಳನ್ನು ಖರೀದಿಸಲು ಸಹ ಜನ ಸಾಲ ಪಡೆಯುತ್ತಿದ್ದಾರೆ. ಏನೇ ಆದರೂ ತಮ್ಮ ಆದಾಯಕ್ಕೂ ಮೀರಿ ಸಾಲ ಮಾಡುವುದು ಮಾತ್ರ ಯಾವತ್ತೂ ಅಪಾಯಕಾರಿ.
  ತಿಳಿದೋ ತಿಳಿಯದೆಯೋ ನೀವೂ ಇಂಥದೊಂದು ಸಾಲದ ಸುಳಿಗೆ ಸಿಲುಕಿ ಇಎಂಐಗಳ ಚಕ್ರವ್ಯೂಹದಲ್ಲಿ ಸಿಕ್ಕಿ ಹಾಕಿಕೊಂಡಿದ್ದರೆ ಅದರ ಒತ್ತಡ ಒಂದಿಷ್ಟು ಕಡಿಮೆ ಮಾಡಿಕೊಳ್ಳಲು ಏನು ಮಾಡಬಹುದು ಎಂಬ ಬಗ್ಗೆ ಇಲ್ಲಿ ತಿಳಿಸಿದ್ದೇವೆ. ನೀವೂ ನೋಡಿ ತಿಳಿದುಕೊಳ್ಳಿ.


 • 1. ಬೇರೊಬ್ಬರ ಅನುಕರಣೆ ಬೇಡ

  ಬೇರೊಬ್ಬರ ಜೀವನ ಶೈಲಿಯನ್ನು ಅನುಕರಣೆ ಮಾಡುವುದು ಎಂದಿಗೂ ಸೂಕ್ತವಲ್ಲ. ಯಾವಾಗಲೂ ನಮ್ಮ ಆದಾಯದ ಇತಿ ಮಿತಿಗಳಲ್ಲೇ ಬದುಕಬೇಕು. ಹೆಚ್ಚು ಉಳಿತಾಯ ಮಾಡುವುದು, ಕ್ರೆಡಿಟ್ ಕಾರ್ಡ್ ಅಥವಾ ಕಾರ್ ಲೋನ್‌ಗಳಿಂದ ದೂರವಿರುವುದು, ಆಗಾಗ ದುಬಾರಿ ಹೋಟೇಲ್‌ಗಳಿಗೆ ಹೋಗಿ ಶೋಕಿ ಮಾಡುವುದನ್ನು ನಿಲ್ಲಿಸಿದಲ್ಲಿ ದುಬಾರಿ ಇಎಂಐಗಳಿಂದ ದೂರವಿರಬಹುದಾಗಿದೆ ಎನ್ನುತ್ತಾರೆ ಜಾಹೀರಾತು ತಜ್ಞೆ ಅನೀಶಾ ಮೋತ್ವಾನಿ.


 • 2. ಸಾಲ ಮಾಡಿ ಖರೀದಿಸುವ ಮುನ್ನ ಒಮ್ಮೆ ಯೋಚಿಸಿ

  ಮಾನ್ಯತೆ ಪಡೆದ ಹಣಕಾಸು ತಜ್ಞ ಹರ್ಷ ರುಂಗ್ಟಾ ಹೇಳುವ ಪ್ರಕಾರ, ಎಲ್ಲ ಸಾಲಗಳು ಕೆಟ್ಟದ್ದಾಗಿರುವುದಿಲ್ಲ. ಕೆಲಸದಲ್ಲಿ ಬಡ್ತಿ ಪಡೆಯುವ ಸಲುವಾಗಿ ಹೋಸ ತರಬೇತಿಗಾಗಿ ಸಾಲ ಮಾಡಿದಲ್ಲಿ ಅದು ಒಳ್ಳೆಯದು. ಬಾಡಿಗೆ ಖರ್ಚು ಕಡಿಮೆ ಮಾಡುವ ಗೃಹ ಸಾಲ ಪಡೆಯುವುದು ಸಹ ಕೆಟ್ಟದ್ದಲ್ಲ. ಜೊತೆಗೆ ದಿನನಿತ್ಯದ ಪ್ರಯಾಣ ವೆಚ್ಚ ಕಡಿಮೆಯಾಗುವುದಾದರೆ ಕಾರ್ ಲೋನ್ ಮಾಡಿದರೆ ತಪ್ಪಿಲ್ಲ. ಆದರೆ ಗೃಹಬಳಕೆ ವಸ್ತುಗಳು, ಬೇಡವಾದ ಮೋಜಿನ ಪ್ರವಾಸ, ಶೋಕಿ ಜೀವನ ಮುಂತಾದ ಕಾರಣಗಳಿಗೆ ಸಾಲ ಮಾಡಿದರೆ ಸಮಸ್ಯೆಗಳನ್ನು ನಾವೇ ಮೈಮೇಲೆ ಎಳೆದುಕೊಂಡಂತೆ. ಎನ್ನುತ್ತಾರೆ ಹರ್ಷ ರುಂಗ್ಟಾ.

  ಹಣ ಉಳಿತಾಯ ಮಾಡುವುದು ಉತ್ತಮ ಹವ್ಯಾಸವಾಗಿದೆ. ಇದನ್ನೊಂದು ಅಭ್ಯಾಸವಾಗಿ ಬೆಳೆಸಿಕೊಳ್ಳಬೇಕು. ಬೇಡವಾದ ಖರ್ಚುಗಳಿಗೆ ಮುಂದಾಗುವುದು ಬೇಡ. ಜೊತೆಗೆ ಒಳ್ಳೆಯ ಜೀವನಶೈಲಿ ಅಳವಡಿಸಿಕೊಳ್ಳುವುದು ಜಾಣತನ. ಜಂಕ್ ಫುಡ್, ಪ್ರಯಾಣ, ದುಬಾರಿ ಬಟ್ಟೆ ಮುಂತಾದುವುಗಳ ಮೇಲಿನ ಖರ್ಚು ಆದಷ್ಟೂ ಕಡಿಮೆ ಮಾಡಿಕೊಳ್ಳಬೇಕು.


 • 3. ಸಾಲದ ಬಡ್ಡಿ ಹೋಲಿಸಿ

  ಸಾಲವನ್ನು ಪಡೆಯುವ ಮೊದಲು ವಿವಿಧ ಬ್ಯಾಂಕುಗಳು ನೀಡುವ ಬಡ್ಡಿ ಮತ್ತು ಇಎಂಐಗಳನ್ನು ಯಾವಾಗಲೂ ಹೋಲಿಸಿ ನೋಡಬೇಕು. ಹೆಚ್ಚಿನ ಬಡ್ಡಿ ದರಗಳನ್ನು ಹೊಂದಿರುವ ಸಾಲ ದೀರ್ಘಾವಧಿಯಲ್ಲಿ ನಿಮ್ಮ ಜೀವನದ ಮೇಲೆ ಪರಿಣಾಮ ಬೀರಬಹುದು. ನಿಮಗೆ ಅಗತ್ಯವಿರುವಾಗ, ಏನಾದರೂ ಖರೀದಿಸಲು ಹಣ ಬೇಕಾದಾಗ ಮಾತ್ರ ಸಾಲ ಪಡೆಯಿರಿ. ಆದರೆ ಆಕರ್ಷಕ ಆಫರ್ ಮತ್ತು ಇಎಂಐಗಳಿಗೆ ಮಾರು ಹೋಗಬೇಡಿ.


 • 4. ಹೆಚ್ಚು ಉಳಿತಾಯಕ್ಕೆ ಪ್ರಯತ್ನಿಸಿ

  ಉಳಿತಾಯ ಮಾಡುವುದು ಉತ್ತಮ ಹವ್ಯಾಸ. ಹೆಚ್ಚಿನದಾಗಿ ಉಳಿತಾಯ ಮಾಡಲು ಪ್ರಯತ್ನಿಸಿ. ಇದು ನಿಮಗೆ ಅಭ್ಯಾಸವಾಗಲಿ. ನೀವು ಅಗತ್ಯವಿಲ್ಲದ ವಸ್ತುಗಳ ಖರೀದಿ ನಿಲ್ಲಿಸುವ ಮೂಲಕ ಇದನ್ನು ಆರಂಭಿಸಬಹುದು. ಪ್ಲಾನ್ ಮಾಡಿ ಮಾಡಿ ಮತ್ತು ನಿಮ್ಮ ಜೀವನ ಶೈಲಿಗೆ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಿ. ಉದಾಹರಣೆಗೆ, ನಿಮ್ಮ ಜಂಕ್ ಪುಡ್, ರಜಾ ದಿನಗಳು, ದುಬಾರಿ ಬಟ್ಟೆ ಮತ್ತು ಇನ್ನಿತರೆಗಳಿಗಾಗಿ ಖರ್ಚು ಮಾಡುವುದನ್ನು ನಿಲ್ಲಿಸಿ.


 • 5. ಹೂಡಿಕೆ ಮಾಡಿ ಆದಾಯ ಹೆಚ್ಚಿಸಿಕೊಳ್ಳಿ

  ದುಡಿದ ಹಣವನ್ನು ಹೂಡಿಕೆ ಮಾಡುವುದು ಸಹ ಅತಿ ಅಗತ್ಯ. ಆದಾಯ ಹೆಚ್ಚಿಸಿಕೊಳ್ಳಬೇಕಾದರೆ ಹೂಡಿಕೆ ಮಾಡಲೇಬೇಕು. ಆದಾಯ ಹೆಚ್ಚಾದಂತೆ ಬೇರೆಯವರ ಮೇಲೆ ಅವಲಂಬನೆ ಕಡಿಮೆಯಾಗಿ ನಮ್ಮ ಸಾಮರ್ಥ್ಯ ಹೆಚ್ಚಾಗುತ್ತದೆ. ಮ್ಯೂಚುವಲ್ ಫಂಡ್, ಫಿಕ್ಸೆಡ್ ಡಿಪಾಸಿಟ್, ಸರಕಾರಿ ಯೋಜನೆಗಳು ಹೀಗೆ ಸೂಕ್ತ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿರಬೇಕು. ಇದರಿಂದ ಆದಾಯ ಹೆಚ್ಚಾಗುವುದಲ್ಲದೆ ತೆರಿಗೆ ಉಳಿಸಲು ಸಹ ದಾರಿಯಾಗುತ್ತದೆ. ನೀವು ಸಾಲ ಪಡೆದಿದ್ದಿರಾ? ಹಾಗಿದ್ದರೆ ಇಲ್ಲಿ ನೋಡಿ..
ಕೆಲವೇ ವರ್ಷಗಳ ಹಿಂದೆ ಸಾಲ ಪಡೆಯುವುದು ತೀರಾ ಕಷ್ಟದ ಕೆಲಸವಾಗಿತ್ತು. ಆದರೆ ತಂತ್ರಜ್ಞಾನ ಬೆಳೆದಂತೆ ಹಾಗೂ ಹಣಕಾಸು ಹರಿವು ಹೆಚ್ಚಾದಂತೆ ಸಾಲ ಪಡೆಯುವುದು ಇತ್ತೀಚಿನ ದಿನಗಳಲ್ಲಿ ಸುಲಭವಾಗುತ್ತಿದೆ. ಸುಲಭ ಇಎಂಐ ಆಯ್ಕೆಗಳು, ಕ್ರೆಡಿಟ್ ಕಾರ್ಡ್‌ಗಳು ಹೀಗೆ ಹಲವಾರು ಆಫರ್‌ಗಳನ್ನು ಹಣಕಾಸು ಕಂಪನಿಗಳು ಗ್ರಾಹಕರಿಗೆ ನೀಡುತ್ತಿವೆ.

ಆದರೆ ಸುಲಭ ಇಎಂಐ (EMI) ಎಂಬುದು ಅನೇಕರ ಜೀವನದಲ್ಲಿ ಉರುಳಾಗಿ ಪರಿಣಮಿಸುತ್ತಿದ್ದು ಜೀವನ ನರಕವಾಗುತ್ತಿದೆ. ಹೀಗಾಗಿ ಸುಲಭವಾಗಿ ಸಾಲ ಸಿಗುತ್ತದೆ ಎಂದು ಇಎಂಐಗಳ ಸುಳಿಯಲ್ಲಿ ಸಿಲುಕಿ ಒದ್ದಾಡುವುದನ್ನು ತಪ್ಪಿಸಿಕೊಳ್ಳಲು ಗ್ರಾಹಕರು ಜಾಗೃತರಾಗಬೇಕಿದೆ. ಮಹಾನಗರಗಳ ಅನೇಕ ಜನ ಇಎಂಐಗಳ ವ್ಯಸನ ಅಂಟಿಸಿಕೊಂಡವರಂತೆ ಮಾಡುತ್ತಿರುವುದು ಗಂಭೀರ ವಿಷಯವಾಗಿದೆ. ಮನೆ, ಕಾರು ಕೊಳ್ಳಲು ಅಥವಾ ಮೋಜಿಗಾಗಿ ವಿದೇಶ ಪ್ರಯಾಣಕ್ಕಾಗಿ ಜನ ದೊಡ್ಡ ಮೊತ್ತದ ಸಾಲಗಳನ್ನು ಪಡೆಯುವುದು ಕಂಡು ಬರುತ್ತಿದೆ.

ಕಡಿಮೆ ಖರ್ಚು ಹೆಚ್ಚು ಉಳಿತಾಯ ಎಂಬ ಮೊದಲಿನ ಧೋರಣೆ ಇತ್ತೀಚೆಗೆ ಮಾಯವಾಗುತ್ತಿದೆ. ದುಬಾರಿ ಜೀವನ ಶೈಲಿಗೆ ಆಕರ್ಷಿತವಾಗುತ್ತಿರುವ ಇಂದಿನ ಜನತೆಗೆ ಉಳಿತಾಯದ ಬಗ್ಗೆ ಮೋಹ ಇಲ್ಲವಾಗಿದೆ. ಕ್ರೆಡಿಟ್ ಕಾರ್ಡ್ ಅಥವಾ ಇನ್ನಾವುದೇ ರೀತಿಯಲ್ಲಿ ಸಾಲ ಪಡೆದು ಮೋಜಿನಿಂದ ಬದುಕುವುದೇ ಜೀವನದ ಗುರಿಯಾಗುತ್ತಿದೆ. ಆದರೆ ಇಂದಿನ ಜನ ಹಣದ ಮೌಲ್ಯವನ್ನು ತಿಳಿದುಕೊಳ್ಳುವುದು ಎಂದಿಗಿಂತ ಹೆಚ್ಚು ಅಗತ್ಯವಾಗಿದೆ. ಹಾಗೆಯೇ ಉಳಿತಾಯ ಮಾಡುವುದು ಈಗ ಮೊದಲಿಗಿಂತ ಹೆಚ್ಚು ಅವಶ್ಯಕ. ಒಂದು ಕಾಲಕ್ಕೆ ಶೇ.೩೦ಕ್ಕೂ ಹೆಚ್ಚು ಉಳಿತಾಯ ಮಾಡುವ ದೇಶವಾಗಿದ್ದ ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಉಳಿತಾಯ ಪ್ರವೃತ್ತಿ ಒಂದೇ ಸಮನೆ ಇಳಿಮುಖವಾಗುತ್ತಿದೆ.

   
 
ಹೆಲ್ತ್