Back
Home » ಸೌಂದರ್ಯ
ಮೀನು-ಹಾಲನ್ನು ಜೊತೆಯಲ್ಲಿಯೇ ಸೇವಿಸಿದರೆ ಚರ್ಮದಲ್ಲಿ ಬಿಳಿ ಮಚ್ಚೆ ಮೂಡುತ್ತದೆಯಂತೆ! ನಿಜವೇ? ಇಲ್ಲಿದೆ ಉತ್ತರ
Boldsky | 18th Apr, 2019 08:00 AM

ನಮ್ಮ ಅಜ್ಜಿಯರು ನಮ್ಮ ಕೆಲವಾರು ಆಹಾರಾಭ್ಯಾಸಗಳ ಬಗ್ಗೆ ಆಗಾಗ ತಕರಾರು ಎತ್ತುತ್ತಲೇ ಇರುತ್ತಾರೆ. ಮೀನಿನ ಊಟ ಮಾಡಿದ ಹಾಲು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲ, ಇದರಿಂದ ಚರ್ಮದ ಮೇಲೆ ಬಿಳಿ ಮಚ್ಚೆಗಳು ಮೂಡುತ್ತವೆ ಎಂದು ಎಚ್ಚರಿಸುತ್ತಾರೆ. ಈ ಮಾಹಿತಿ ಎಷ್ಟು ಸತ್ಯ ಎಂದು ಯಾರಿಗೂ ಗೊತ್ತಿಲ್ಲದಿದ್ದರೂ ಈ ಮಾಹಿತಿಯನ್ನು ನಾವು ನಮ್ಮ ಆಪ್ತರಿಗೆಲ್ಲಾ ಹರಡುವ ಮೂಲಕ ಎಲ್ಲರೂ ಇದು ನಿಜವೇ ಎಂದು ನಂಬಿಬಿಟ್ಟಿದ್ದಾರೆ. ಆದರೆ ಈ ಮಾತು ಎಷ್ಟರ ಮಟ್ಟಿಗೆ ಸತ್ಯ? ಹಿಂದಿನವರು ನಿಜವಾಗಿ ಕಂಡುಕೊಂಡಿದ್ದು ಮುಂದಿನವರಿಗೆ ಈ ತೊಂದರೆ ಎದುರಾಗಬಾರದೆಂದು ಎಚ್ಚರಿಸಿದ್ದರೇ ಅಥವಾ ಇದೊಂದು ಮೂಢನಂಬಿಕೆಯೇ?

ಸಾಮಾನ್ಯ ನಂಬಿಕೆ

ಎರಡು ಭಿನ್ನ ಪರಿಣಾಮ ಬೀರುವ ಆಹಾರಗಳನ್ನು ಏಕಕಾಲಕ್ಕೆ ಸೇವಿಸುವುದರಿಂದ ಕೆಲವಾರು ಪರಿಣಾಮಗಳು ಎದುರಾಗಬಹುದು, ಇದರಲ್ಲೊಂದು ಬಿಳಿಯ ಮಚ್ಚೆಗಳು (vitiligo).ಇನ್ನೊಂದು ಸಿದ್ದಾಂತದ ಪ್ರಕಾರ ಮೀನು ಮತ್ತು ಡೈರಿ ಉತ್ಪನ್ನಗಳೆರಡೂ ಪ್ರೋಟೀನ್ ಭರಿತ ಆಹಾರಗಳಾಗಿದ್ದು ಇವುಗಳನ್ನು ಒಡೆಯಲು ಭಿನ್ನವೇ ಆದ ಕಿಣ್ವಗಳ ಅಗತ್ಯವಿದೆ. ಹಾಗಾಗಿ ಇವೆರಡನ್ನೂ ಜೊತೆಯಾಗಿ ಸೇವಿಸಿದಾಗ ದೇಹ ಅನಿವಾರ್ಯವಾಗಿ ಎರಡೂ ಬಗೆಯ ಅಹಾರಗಳನ್ನು ಜೀರ್ಣೀಸಿಕೊಳ್ಳಲು ಅಗತ್ಯವಿರುವ ಕಿಣ್ವಗಳನ್ನು ಮತ್ತು ಅಪಾರ ಪ್ರಮಾಣದ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಇದು ನಮ್ಮ ಜೀರ್ಣಾಂಗಗಳ ಮೇಲೆ ಹೆಚ್ಚಿನ ಹೊರೆಯನ್ನು ಹೇರುತ್ತದೆ. ಪರಿಣಾಮವಾಗಿ ಹೊಟ್ಟೆಯುಬ್ಬರಿಕೆ, ಅಪಾನವಾಯು ಹಾಗೂ ಅಜೀರ್ಣತೆ ಮೊದಲಾದ ತೊಂದರೆಗಳು ಎದುರಾಗುತ್ತವೆ.

ಈ ಬಗ್ಗೆ ಆಯುರ್ವೇದ ಏನು ಹೇಳುತ್ತದೆ?

ಆಯುರ್ವೇದದ ಪ್ರಕಾರ, ಸಸ್ಯಾಹಾರ ಮತ್ತು ಮಾಂಸಾಹಾರದ ಈ ಬಗೆಯ ಮಿಶ್ರಣವನ್ನು ಸೇವಿಸಬಾರದು. ಮೀನು ಅಪ್ಪಟ ಮಾಂಸಾಹಾರಿ ಹಾಗೂ ಹಾಲು ಸಸ್ಯಾಹಾರಿಯಾಗಿದೆ. ಇವೆರಡೂ ಪರಸ್ಪರ ಹೊಂದದ ಆಹಾರಗಳಾಗಿವೆ. ಹಾಗಾಗಿ ಇವೆರಡನ್ನೂ ಜೊತೆಯಾಗಿ ಸೇವಿಸಿದರೆ ಇದು ದೇಹದಲ್ಲಿ "ತಾಮಸ ಗುಣ"ವನ್ನು ಹೆಚ್ಚಿಸುತ್ತದೆ ಹಾಗೂ ಇದರಿಂದ ದೇಹದ ಸಮತೋಲನ ಏರುಪೇರಾಗುತ್ತದೆ.

ವೈಜ್ಞಾನಿಕ ವಿಶ್ಲೇಷಣೆ

ಆದರೆ ಮೀನು ಮತ್ತು ಹಾಲನ್ನು ಜೊತೆಯಾಗಿ ಸೇವಿಸುವುದರಿಂದ ಏನಾದರೂ ತೊಂದರೆಯಾಗುತ್ತದೆ ಎಂಬುದಕ್ಕೆ ವೈದ್ಯವಿಜ್ಞಾನದ ಬಳಿ ಯಾವುದೇ ಆಧಾರವಿಲ್ಲ. ಮುಂಬೈಯಲ್ಲಿ ಸ್ಥಿತ ಆಹಾರತಜ್ಞೆ ನಿತಿ ದೇಸಾಯಿಯವರ ಪ್ರಕಾರ "ಈ ಎರಡೂ ಆಹಾರಗಳನ್ನು ಜೊತೆಯಾಗಿ ತಿನ್ನಬಾರದು ಎನ್ನುವುದನ್ನು ಖಚಿತಪಡಿಸಲು ವಿಜ್ಞಾನದ ಬಳಿ ಯಾವುದೇ ಆಹಾರವಿಲ್ಲ. ಆದರೆ ಸಾಮಾನ್ಯವಾಗಿ ಈ ಜೊತೆಯನ್ನು ಸೇವಿಸುವುದು ಅಪರೂಪ. ಆದರೆ ಮೀನು ಮತ್ತು ಹಾಲಿನ ಸೇವನೆಯ ಬಳಿಕ ಚರ್ಮ ಬಿಳಿಯಾಗುವ ಲ್ಯೂಕೋಡರ್ಮಾ ಎಂಬ ತೊಂದರೆ ಎದುರಾಗುತ್ತದೆ ಎಂಬುದು ಮಾತ್ರ ಕೇವಲ ಊಹಾಪೋಹವಾಗಿದೆ"

Most Read: ಮುಖದಲ್ಲಿ ಮತ್ತು ಮೈಯಲ್ಲಿ ಕಾಣಿಸಿಕೊಳ್ಳುವ ಬಿಳಿ ಕಲೆಗಳಿಗೆ ಸರಳ ಮನೆಮದ್ದುಗಳು

ಮೀನಿನ ಖಾದ್ಯ ತಯಾರಿಕೆಯಲ್ಲಿ ಡೈರಿ ಉತ್ಪನ್ನಗಳೂ ಬಳಕೆಯಾಗುತ್ತವೆ

ವಿಜ್ಞಾನದ ಪ್ರಕಾರ ಮೀನು ಮತ್ತು ಡೈರಿ ಉತ್ಪನ್ನಗಳನ್ನು ಜೊತೆಯಾಗಿ ಸೇವಿಸುವುದರಿಂದ ಯಾವುದೇ ಹಾನಿಯಿಲ್ಲ. ಅಲ್ಲದೇ ಹಲವಾರು ರುಚಿಕರ ಮೀನಿನ ಖಾದ್ಯಗಳನ್ನು ತಯಾರಿಸುವಾಗ ಮೊಸರನ್ನು ಸೇರಿಸಲಾಗುತ್ತದೆ, ಅಲ್ಲದೇ ಮೊಸರು ಸಹಾ ಡೈರಿ ಉತ್ಪನ್ನವಾಗಿದೆ ಹಾಗೂ ಈ ಖಾದ್ಯವನ್ನು ಸೇವಿಸಿದವರಿಗೆ ಯಾವುದೇ ಅನಾರೋಗ್ಯ ಅಥವಾ ಬಿಳಿಯ ಮಚ್ಚೆಗಳು ಉಂಟಾಗದಿರುವುದು ಈ ಊಹಾಪೋಹವನ್ನು ತಳ್ಳಿಹಾಕುತ್ತದೆ. ಕೆಲವರಲ್ಲಿ ಇದು ಅಜೀರ್ಣತೆಯನ್ನು ಉಂಟುಮಾಡಬಹುದಾದರೂ ಎಲ್ಲರಿಗೂ ಅಲ್ಲ. ವಾಸ್ತವದಲ್ಲಿ, ಜಗತ್ತಿನಲ್ಲಿಯೇ ಅತಿ ಆರೋಗ್ಯಕರ ಆಹಾರ ಎಂದು ಪರಿಗಣಿಸಲ್ಪಟ್ಟಿರುವ ಮೆಡಿಟರೇನಿಯನ್ ವಿಧಾನದ ಅಡುಗೆಗಳಲ್ಲಿ ಮೀನು, ಮೊಸರು ಅಥವಾ ಹಾಲನ್ನು ಜೊತೆಯಾಗಿಯೇ ಬಳಸಲಾಗುತ್ತದೆ.

ಹಾಗಾದರೆ ಬಿಳಿಯ ಮಚ್ಚೆಗಳಿಗೆ ಕಾರಣವೇನು?

vitiligo ಅಥವಾ ಅಗಲವಾದ ಬಿಳಿಯ ಮಚ್ಚೆಗಳು ಶಿಲೀಂಧ್ರದ ಸೋಂಕಿನಿಂದ ಎದುರಾಗುತ್ತವೆ. ಈ ಸೋಂಕು ಆವರಿಸಿದ ಭಾಗದ ಚರ್ಮದಲ್ಲಿ ಚರ್ಮಕ್ಕೆ ಬಣ್ಣ ನೀಡುವ ಮೆಲನೋಸೈಟ್ಸ್ ಎಂಬ ವರ್ಣದ್ರವ್ಯಗಳು ನಷ್ಟಗೊಳ್ಳುತ್ತವೆ. ಹಾಗಾಗಿ ಈ ಭಾಗದ ಬಣ್ಣ ಬಿಳಿಯಾಗುತ್ತದೆ. ಆದರೆ ಈ ಸ್ಥಿತಿ ಎದುರಾಗಲು ಮೀನು ಮತ್ತು ಹಾಲಿನ ಸೇವನೆಯೇ ಏಕಮಾತ್ರ ಕಾರಣವಾಗಲು ಖಂಡಿತವಾಗಿಯೂ ಸಾಧ್ಯವಿಲ್ಲ.

ಈ ಆಹಾರದ ಅಡ್ಡಪರಿಣಾಮಗಳೇನು?

ಒಂದು ವೇಳೆ ಹಾಲು ಮತ್ತು ಮೀನನ್ನು ಜೊತೆಯಾಗಿ ಸೇವಿಸಿದ ಬಳಿಕ ವಾಕರಿಕೆ, ತುರಿಕೆ ಅಥವಾ ಹೊಟ್ಟೆನೋವು ಎದುರಾದರೆ ಇದರ ಅರ್ಥ ಈ ವ್ಯಕ್ತಿಗೆ ಲ್ಯಾಕ್ಟೋಸ್ ಅಸಹಿಷ್ಟುತೆ (lactose intolerant)ಅಥವಾ ಲ್ಯಾಕ್ಟೋಸ್ ಸಹಿಸಿಕೊಳ್ಳುವ ಶಕ್ತಿ ಇಲ್ಲ ಎಂದು ತಿಳಿದುಕೊಳ್ಳಬೇಕು. ಕೆಲವು ವ್ಯಕ್ತಿಗಳಿಗೆ ಲ್ಯಾಕ್ಟೋಸ್ ಅಸಹಿಷ್ಟುತೆ ಇಲ್ಲದಿದ್ದರೂ ಮೀನು ಸೇವಿಸಿ ಅಪಾರ ಪ್ರಮಾಣದ ಹಾಲನ್ನು ಸೇವಿಸಿದ ಬಳಿಕ ಹೊಟ್ಟೆಯುಬ್ಬರಿಕೆ ಹಾಗೂ ಅಪಾನವಾಯುವಿನ ತೊಂದರೆ ಎದುರಾಗಬಹುದು. ಹಾಗಾಗಿ ಈ ತೊಂದರೆಗೆ ಮೀನು ಮತ್ತು ಹಾಲನ್ನು ಜೊತೆಯಾಗಿ ಸೇವಿಸಿದ್ದೇ ಕಾರಣ ಎಂದು ಹೇಳಲು ಸಾಧ್ಯವಿಲ್ಲ.

Most Read: ಮುಖದಲ್ಲಿ ಕಂಡು ಬರುವ ಬಿಳಿ ಚುಕ್ಕಿಗಳನ್ನು ನಿವಾರಿಸುವುದು ಹೇಗೆ?

ಅಂತಿಮ ನಿರ್ಣಯ

ಮೀನಿನ ಖಾದ್ಯವನ್ನು ಸೇವಿಸಿದ ಬಳಿಕ ಹಾಲನ್ನು ಕುಡಿದರೆ ಇದು ಆರೋಗ್ಯಕ್ಕೆ ಹಾನಿಕರ ಎಂಬ ಮಾತಿಗೆ ಯಾವುದೇ ವೈಜ್ಞಾನಿಕ ಪುರಾವೆಯಿಲ್ಲ. ಹಾಗಾಗಿ ಈ ಆರೋಗ್ಯಕರ ಆಹಾರಗಳನ್ನು ಜೊತೆಯಾಗಿ ಯಾವುದೇ ಭೀತಿಯಿಲ್ಲದೇ ಸೇವಿಸಬಹುದು.

   
 
ಹೆಲ್ತ್