Back
Home » ಆರೋಗ್ಯ
ಪವಿತ್ರ ರಂಜಾನ್ ತಿಂಗಳಲ್ಲಿ ನೀರು ಕೂಡ ಕುಡಿಯುವಂತಿಲ್ಲ-ಯಾಕೆ ಗೊತ್ತೇ?
Boldsky | 10th May, 2019 10:36 AM
 • ರಮಧಾನ್ ಮತ್ತು ನೀರು ಕುಡಿಯುವುದು

  ಪವಿತ್ರ ರಮಧಾನ್ ತಿಂಗಳು ಈಗಾಗಲೇ ಪ್ರಾರಂಭವಾಗಿದ್ದು ಉಪವಾಸ, ಪ್ರಾರ್ಥನೆ ಮತ್ತು ವಿಶೇಷ ಅಡುಗೆಗಳು ಮುಸ್ಲಿಮರ ನಿತ್ಯದ ದಿನಚರಿಯನ್ನು ಆಕ್ರಮಿಸಿಕೊಂಡಿವೆ. ಮುಸ್ಲಿಮರ ಪಾಲಿಗೆ ಈ ಮಾಸದಲ್ಲಿ ಹಲವಾರು ಕಟ್ಟುಪಾಡುಗಳನ್ನು ಅನುಸರಿಸಬೇಕಾಗಿದ್ದು ಈ ಮೂಲಕ ದೇವರ ಅನುಗ್ರಹ ಪಡೆಯಲು ಹಾಗೂ ಜೀವನ ಸುಲಭವಾಗಿ ಮುಂದುವರೆಯಲು ಸಾಧ್ಯವಾಗುತ್ತದೆ. ಚಂದ್ರನ ಚಲನೆಯನ್ನು ಆಧರಿಸಿ ಈ ತಿಂಗಳು ಇಪ್ಪತ್ತೊಂಭತ್ತು ಅಥವಾ ಮೂವತ್ತು ದಿನಗಳ ಕಾಲ ಆಚರಿಸಲಾಗುತ್ತದೆ. ಅಷ್ಟೂ ದಿನಗಳಲ್ಲಿ ಸೂರ್ಯೋದಯಕ್ಕೂ ಸುಮಾರು ಒಂದು ಘಂಟೆಗೂ ಮುನ್ನವೇ ಪ್ರಾತಃಕಾಲದ ಆಹಾರ ಸೇವಿಸಿ (ಸುಹೂರ್) ಸೂರ್ಯಾಸ್ತದ ಸಮಯಕ್ಕೆ ಸರಿಯಾಗಿ ಖರ್ಜೂರ ಸಹಿತ ಸರಳ ಅಹಾರ ಸೇವನೆಯೊಂದಿಗೆ (ಇಫ್ತಾರ್) ಉಪವಾಸವನ್ನು ಸಂಪನ್ನಗೊಳಿಸಲಾಗುತ್ತದೆ. ಹಲವೆಡೆ ಇಫ್ತಾರ್ ಗೆ 'ಉಪವಾಸ ತೊರೆಯುವುದು'ಎಂದು ಕರೆಯುತ್ತಾರೆ. ಆದರೆ ಉಪವಾಸ ತೊರೆಯುವುದೆಂದರೆ ಉಪವಾಸದ ಅವಧಿ ಮುಗಿಯುವ ಮುನ್ನವೇ ಐಚ್ಛಿಕವಾಗಿ ಆಹಾರ ಸೇವಿಸಿ ಆ ದಿನದ ಉಪವಾಸದಿಂದ ವಂಚಿತರಾಗುವುದಾಗಿದೆ. ಭಾರತದಲ್ಲಿ ಉಪವಾಸದ ಅವಧಿ ಸುಮಾರು ಹದಿನಾಲ್ಕು ಘಂಟೆಗಳಾಗಿದ್ದು ಈ ಅವಧಿಯಲ್ಲಿ ಮಾನಸಿಕವಾಗಿ ಅಥವಾ ದೈಹಿಕವಾಗಲೀ ಬಯಕೆಗಳನ್ನು ಕಟ್ಟುನಿಟ್ಟಾಗಿ ನಿಗ್ರಹಿಸಿಕೊಳ್ಳಬೇಕು. ನೀರನ್ನೂ ಕುಡಿಯದಿರುವುದು ಈ ಕಟ್ಟುಪಾಡಿನಲ್ಲಿ ಒಂದು .


 • ಅಷ್ಟಕ್ಕೂ ಈ ತಿಂಗಳಲ್ಲಿ ಉಪವಾಸ ಇರುವುದೇಕೆ?

  ಇಸ್ಲಾಂ ಧರ್ಮ ಐದು ಮೂಲಸ್ತಂಭಗಳ ಆಧಾರದ ಮೇಲೆ ನಿಂತಿದೆ. ಏಕದೇವನಿಷ್ಠೆ, ದಿನಕ್ಕೆ ಐದು ಹೊತ್ತಿನ ಪ್ರಾರ್ಥನೆ, ರಂಜಾನ್ ತಿಂಗಳ ಉಪವಾಸ, ತನ್ನ ಸಂಪಾದನೆಯಲ್ಲಿ ಒಂದು ಭಾಗವನ್ನು ಕಡ್ಡಾಯವಾಗಿ ದಾನ ಮಾಡುವುದು (ಜಕಾತ್) ಹಾಗೂ ಜೀವಮಾನದಲ್ಲೊಂದು ಬಾರಿ (ಆರ್ಥಿಕ ಅರ್ಹತೆ ಪಡೆದ ಬಳಿಕ) ಹಜ್ ಯಾತ್ರೆ ನಿರ್ವಹಿಸುವುದು, ಇವೇ ಈ ಐದು ಸ್ತಂಭಗಳಾಗಿವೆ. ರಂಜಾನ್ ನಲ್ಲಿ ಉಪವಾಸ ಆಚರಿಸುವುದು ಎಂದರೆ ದೈಹಿಕ ಮತ್ತು ಮಾನಸಿಕವಾಗಿ ಕಲ್ಮಶ ಮತ್ತು ದುರಾಲೋಚನೆಗಳನ್ನು ಹೊರಹಾಕಿ ನಿಷ್ಕಲ್ಮಶ ದೇಹ ಮತ್ತು ಮನಸ್ಸನ್ನು ಪಡೆಯುವುದಾಗಿದ್ದು ಒಂದು ಬಗೆಯಲ್ಲಿ ಮನಸ್ಸನ್ನು ನಿಯಂತ್ರಣ ದಲ್ಲಿರಿಸಿಕೊಳ್ಳುವ ತರಬೇತಿಯಾಗಿದೆ. ತರಬೇತಿಯ ಅವಧಿ ಮುಗಿದ ಬಳಿಕ ಕಟ್ಟುಪಾಡುಗಳು ಮುಗಿದರೂ ಮಾನಸಿಕವಾಗಿ ತಪ್ಪು ಹಾದಿ ತುಳಿಯದಂತೆ ದೃಢಗೊಳಿಸುವುದು ಅಗತ್ಯವಾಗಿದೆ. ರಮಧಾನ್ ನ ಉಪವಾಸದ ಅವಧಿಯಲ್ಲಿ ಮಾನಸಿಕ ಬಯಕೆಗಳನ್ನೆಲ್ಲಾ ನಿಗ್ರಹಿಸುವುದು ಅಗತ್ಯ. ಈ ಬಯಕೆಗಳಲ್ಲಿ ಲೈಂಗಿಕ ಬಯಕೆ, ಸುವಾಸನೆಯ ಆಘ್ರಣೆ, ಹೊಡೆದಾಟದ, ಇನ್ನೊಬ್ಬರಿಗೆ ಮೋಸ ಮಾಡುವ, ಸುಳ್ಳಾಡುವ, ಹಿಂಸೆ ನೀಡುವ, ನೋವು ನೀಡುವ ಮಾತುಗಳನ್ನಾಡುವ, ಇನ್ನೊಬ್ಬರ ಹಕ್ಕನ್ನು ಕಸಿಯುವ ಮೊದಲಾದ ಯಾವುದೇ ಬಯಕೆಗಳನ್ನು ಮೂಲದಲ್ಲಿಯೇ ಚಿವುಟಿ ಹಾಕುವುದು ಉಪವಾಸದ ಉದ್ದೇಶ. ಜೊತೆಗೇ ಹಸಿವು ಮತ್ತು ನೀರಡಿಕೆಗಳ ಬಯಕೆಯನ್ನೂ ನಿಗ್ರಹಿಸುವುದು ಈ ಉದ್ದೇಶದ ಒಂದು ಭಾಗವೇ ಹೊರತು ಕೇವಲ ಆಹಾರ ಮತ್ತು ನೀರನ್ನು ಸೇವಿಸದಿರುವುದು ಮಾತ್ರವೇ ಉಪವಾಸವಲ್ಲ.

  Most Read: ರಂಜಾನ್ ಬಗ್ಗೆ ಇರುವ ತಪ್ಪುಕಲ್ಪನೆಗಳು - ವಿದ್ವಾಂಸರ ಸ್ಪಷ್ಟನೆ


 • ಉಪವಾಸದ ಅವಧಿಯಲ್ಲಿ ನೀರು ಕುಡಿಯದಂತೇಕೆ ಕಟ್ಟುಪಾಡು?

  ನಮ್ಮ ದೇಹಕ್ಕೆ ನೀರು ಸತತವಾಗಿ ಬೇಕಾಗುವ ದ್ರವವಾಗಿದ್ದು ಇದರ ಕೊರತೆಯಾದಾಗ ದೇಹ ನೀರು ಕೇಳುತ್ತದೆ. ಇದೇ ಬಾಯಾರಿಕೆ. ಆದರೆ ಇದು ಸಹಾ ಒಂದು ಬಗೆಯ ಪ್ರಲೋಭನೆಯಾಗಿದ್ದು ಈ ಪ್ರಲೋಭನೆಗೆ ಬಗ್ಗದೇ ತಾಳ್ಮೆ ವಹಿಸುವುದು ಉಪವಾಸದ ಮುಖ್ಯ ಉದ್ದೇಶವಾಗಿದೆ. ಈ ತಾಳ್ಮೆಗೆ 'ಸಬ್ರ್' ಎಂದು ಕರೆಯುತ್ತಾರೆ. ದೈಹಿಕ ತಜ್ಞರಾದ ಶಹಾದತ್ ಹುಸೇನ್ ರವರು ಸಹಾ ಉಪವಾಸದ ಕಟ್ಟುಪಾಡುಗಳನ್ನು ಅನುಸರಿಸುವವರಾಗಿದ್ದು ಈ ಬಗ್ಗೆ ಹೀಗೆ ವಿವರಿಸುತ್ತಾರೆ: "ನಮ್ಮ ಧರ್ಮದ ಪ್ರಕಾರ ನೀರನ್ನು ಕುಡಿಯದಿರುವುದು ಸಬ್ರ್ (ಅಥವಾ ತಾಳ್ಮೆಯ) ಸಂಕೇತವಾಗಿದ್ದು ಇದು ದೇವರನ್ನು ನೆನಪಿಸಿಕೊಳ್ಳುವುದರೊಂದಿಗೆ ಸಂಭಂದ ಹೊಂದಿದೆ. ಆದರೆ ನಿಮ್ಮ ಆರೋಗ್ಯವನ್ನು ಪಣವಾಗಿಟ್ಟು ಉಪವಾಸ ಆಚರಿಸುವಂತೆ ರೋಜಾ (ಉಪವಾಸ) ಕಟ್ಟುಪಾಡು ಹೇರುವುದಿಲ್ಲ. ಇದು ಕೇವಲ ಉಪವಾಸ ನಿರ್ವಹಿಸಲು ಸೂಕ್ತ ಆರೋಗ್ಯ ಇದ್ದವರಿಗೆ ಮಾತ್ರವೇ ಕಡ್ಡಾಯವಾಗಿದ್ದು ಉಳಿದವರಿಗೆ ವಿನಾಯಿತಿ ನೀಡಲಾಗಿದೆ. ಉಪವಾಸ ನಿರ್ವಹಿಸಲು ಸಾಧ್ಯವಾದಷ್ಟು ಆರೋಗ್ಯವಂತರು ಉಪವಾಸ ಆಚರಿಸುವ ಮೂಲಕ ದೇವರಿಗೆ ಇನ್ನಷ್ಟು ಹತ್ತಿರಾಗುತ್ತಾರೆ ಹಾಗೂ ಮುಂದಿನ ದಿನಗಳಲ್ಲಿ ಶಾಂತಿಯುತ ಜೀವನ ಸಾಗಿಸಲು ಸಾಧ್ಯವಾಗುತ್ತದೆ"


 • ಹಾಗಾದರೆ ರಮಧಾನ್ ತಿಂಗಳಲ್ಲಿ ಯಾವ ಮುನ್ನೆಚ್ಚರಿಕೆಗಳನ್ನು ವಹಿಸಬೇಕು?

  ಆರೋಗ್ಯ ತಜ್ಞರ ಪ್ರಕಾರ, ಈ ತಿಂಗಳಲ್ಲಿ ಆದಷ್ಟೂ ಉಪ್ಪು ಮತ್ತು ಕೆಫೀನ್ ಪ್ರಮಾಣವನ್ನು ತಗ್ಗಿಸಬೇಕು. ಇವೆರಡೂ ಬಾಯಾರಿಕೆ ಯನ್ನು ಹೆಚ್ಚಿಸುತ್ತದೆ ಹಾಗೂ ನಿರ್ಜಲೀಕರಣದ ಭಾವನೆಯನ್ನು ಮೂಡಿಸುತ್ತವೆ. ರಾತ್ರಿಯ ಸಮಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು ಹಾಗೂ ಸಂಸ್ಕರಿತ ಮತ್ತು ಹೆಚ್ಚಿನ ಸಕ್ಕರೆ ಇರುವ ಆಹಾರಗಳ ಬದಲಿಗೆ ಪೌಷ್ಟಿಕ ಮತ್ತು ಸಮತೋಲನ ಕಾಪಾಡಿಕೊಳ್ಳುವ ಮತ್ತು ಹೆಚ್ಚಿನ ನೀರಿನಂಶವಿರುವ ಆಹಾರಗಳನ್ನು ಸೇವಿಸಬೇಕು.


 • ರಂಜಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು ಕಡ್ಡಾಯವೇ?

  ಧಾರ್ಮಿಕ ಪಂಡಿತರ ಪ್ರಕಾರ, ಪವಿತ್ರ ರಮಧಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು ಪ್ರತಿಯೊಬ್ಬರಿಗೂ ಕಡ್ಡಾಯವಲ್ಲ. ಚಿಕ್ಕ ಮಕ್ಕಳು, ವೃದ್ದರು, ಗರ್ಭಿಣಿಯರು ಇವರಿಗೆ ಉಪವಾಸದಿಂದ ವಿನಾಯಿತಿ ಇದೆ. ರೋಗ ನಿರೋಧಕ ಶಕ್ತಿ ಉಡುಗಿರುವವರು ಅಥವಾ ಬೇರಾವುದೋ ಅನಾರೋಗ್ಯದ ಕಾರಣ ಸ್ವತಃ ಉಪವಾಸ ಆಚರಿಸಲಾಗದವರಿಗೆ ಉಪವಾಸದಿಂದ ವಿನಾಯಿತಿ ಇದೆಯಾದರೂ ಇವರು ತಮ್ಮ ಬದಲಿಗೆ ಬೇರೊಬ್ಬ ಉಪವಾಸಿಗನ ಊಟದ ಖರ್ಚನ್ನು ವಹಿಸಿಕೊಳ್ಳುವುದು ಅಗತ್ಯವಾಗಿದೆ. ಮಹಿಳೆಯರಿಗೆ ಮಾಸಿಕ ದಿನಗಳಲ್ಲಿ ಉಪವಾಸ ಆಚರಿಸುವಂತಿಲ್ಲ, ಆದರೆ ಮುಂದಿನ ದಿನಗಳಲ್ಲಿ ಇವರು ಉಪವಾಸಗಳನ್ನು ಆಚರಿಸಿ ಈ ದಿನಗಳನ್ನು ತುಂಬಿಕೊಳ್ಳಬೇಕು. ಉಳಿದಂತೆ ಆರೋಗ್ಯವಂತರಿಗೆ ಕಾರಣಾಂತರಗಳಿಂದ ನಡುನಡುವೆ ಒಂದೆರಡು ಉಪವಾಸಗಳನ್ನು ಮೊಟಕುಗೊಳಿಸಬೇಕಾಗಿ ಬಂದರೂ ಇವರು ರಂಜಾನ್ ಅವಧಿ ಕಳೆದ ಬಳಿಕ ಉಳಿದ ದಿನಗಳಲ್ಲಿ ಉಪವಾಸ ಆಚರಿಸಿ ಈ ಕೊರತೆಯನ್ನು ತುಂಬಿಕೊಳ್ಳಬೇಕು.

  Most Read: ಇಸ್ಲಾಂ ಧರ್ಮದ ಪವಿತ್ರ ರಂಜಾನ್ ಹಬ್ಬದ ವಿಶೇಷತೆ ಏನು?


 • ತೀರ್ಪು

  ಉಪವಾಸ ಪ್ರತಿ ಆರೋಗ್ಯವಂತ ಮುಸ್ಲಿಮರಿಗೆ ಕಡ್ಡಾಯವಾಗಿದ್ದು ಇದನ್ನು ಆಚರಿಸಲು ಸ್ವತಃ ದೇವರಲ್ಲಿರುವ ನಂಬಿಕೆ ಹಾಗೂ ಭಕ್ತಿಗಳೇ ಮಾನದಂಡಗಳಾಗಿವೆ ಹಾಗೂ ಇವೇ ಮಾನವ ಕುಲವನ್ನು ಮುನ್ನಡೆಸುತ್ತವೆ. ಸನ್ಮಾರ್ಗದಲ್ಲಿ ನಡೆಸುವ ದೇವರ ಶಕ್ತಿಗೆ ಶರಣಾಗುವುದು ಒಳ್ಳೆಯದೇ ಹೌದು ಹಾಗೂ ಜೊತೆಗೇ ಉಪವಾಸ ಆಚರಿಸುವಾಗ ಅರೋಗ್ಯದ ಬಗ್ಗೆ ಕಾಳಜಿ ವಹಿಸುವುದೂ ಅಷ್ಟೇ ಅಗತ್ಯ. ರಂಜಾನ್ ತಿಂಗಳಲ್ಲಿ ನೀರು ಕುಡಿಯುವಂತಿಲ್ಲ ಎಂದು ಹೇಳಿದರೆ ಇದು ತಾಳ್ಮೆಯನ್ನು ವಹಿಸುವ ಒಂದು ಪರೀಕ್ಷೆ ಹಾಗೂ ಈ ಮೂಲಕ ದೇವರಿಗೆ ನೀಡುವ ಗೌರವವೂ ಆಗಿದೆ. ಆದರೆ ಯಾವುದೇ ಕಾರಣಕ್ಕೆ ನೀರು ಕುಡಿಯದೇ ಗತ್ಯಂತರವಿಲ್ಲ ಎನ್ನುವಷ್ಟು ಕಠೋರ ಪರಿಸ್ಥಿತಿ ಎದುರಾದರೆ ಬಲವಂತವಾಗಿ ಜೀವವನ್ನು ಪಣವಾಗಿಡಲು ಇಸ್ಲಾಂ ಧರ್ಮ ಸಮ್ಮತಿಸುವುದಿಲ್ಲ. ಈ ಸಂದರ್ಭದಲ್ಲಿ ನೀರು ಕುಡಿದು ಉಪವಾಸವನ್ನು ಮೊಟಕುಗೊಳಿಸಿ ಅರೋಗ್ಯ ಕಾಪಾಡಬೇಕು. ಈ ಮೂಲಕ ತಪ್ಪಿಹೋದ ಉಪವಾಸವನ್ನು ರಂಜಾನ್ ತಿಂಗಳು ಕಳೆದ ಬಳಿಕ ನಿಮಗೆ ಉಪವಾಸ ಆಚರಿಸಲು ಸಾಧ್ಯವಾಗುವ ಯಾವುದಾದರೊಂದು ದಿನದಲ್ಲಿ ಆಚರಿಸಿ ಕೊರತೆಯನ್ನು ತುಂಬಿಕೊಳ್ಳಬಹುದು.
ರಮಧಾನ್ (ರಂಜಾನ್ ಎಂದೂ ಕರೆಯುತ್ತಾರೆ, ಆದರೆ ರಮಧಾನ್ ಸರಿಯಾದ ಉಚ್ಛಾರಣೆಯಾಗಿದೆ) ಮುಸ್ಲಿಮರ ಪಾಲಿಗೆ ಪವಿತ್ರವಾದ ಮಾಸವಾಗಿದ್ದು ಇಡಿಯ ತಿಂಗಳು ದಿನದ ಸುಮಾರು ಹದಿನಾಲ್ಕು ಘಂಟೆ ಕಾಲ ಅನ್ನ ನೀರು ಏನೊಂದೂ ಇಲ್ಲದೇ ಉಪವಾಸ ಆಚರಿಸುತ್ತಾರೆ. ಮೂಲತಃ ಉಪವಾಸ ಎಂದರೆ ಬಯಕೆಗಳ ನಿಗ್ರಹವಾಗಿದ್ದು ಅನ್ನಾಹಾರಗಳ ಬಯಕೆಯನ್ನು ವರ್ಜಿಸುವುದು ಉಪವಾಸದ ಒಂದು ಭಾಗ ಮಾತ್ರ, ಉಳಿದಂತೆ ಮಾನಸಿಕವಾಗಿ ಯಾವುದೇ ಬಯಕೆಯನ್ನು ಬಯಸದೇ ಪ್ರಾರ್ಥನೆ, ಕುರಾನ್ ಪಠಣ, ಜಪ, ದಾನ, ಮೊದಲಾದವುಗಳ ಮೂಲಕ ದಿನವನ್ನು ಕಳೆಯಬೇಕಾಗುತ್ತದೆ.

   
 
ಹೆಲ್ತ್