Back
Home » ಆರೋಗ್ಯ
ಯಮಸ್ವರೂಪಿ ಸಾವಿಗೆ 10 ಕಾರಣಗಳು ಮತ್ತು ಪರಿಹಾರಗಳು
Boldsky | 13th May, 2019 04:02 PM
 • ಸ್ಟ್ರೋಕ್ ಅಥವಾ ಪ್ಯಾರಾಲಿಸಿಸ್ ಅಥವಾ ಲಕ್ವ ಹೊಡೆಯುವುದು

  ಹಿಂದಿನ ಕಾಲಕ್ಕಿಂತ ಈ ಆಧುನಿಕ ಕಲಿಗಾಲದಲ್ಲಿ ಇದರ ಚದುರಂಗದಾಟ ಸ್ವಲ್ಪ ಜೋರಾಗಿಯೇ ಇರುವಂತೆ ಕಾಣುತ್ತದೆ . ಇದಕ್ಕೆ ಕಾರಣ ನಮ್ಮ ಬದಲಾದ ಜೀವನ ಶೈಲಿ ಎಂದರೂ ತಪ್ಪಾಗಲಿಕ್ಕಿಲ್ಲ . ವರ್ಷಕ್ಕೆ ಹೋಲಿಸಿದರೆ ಸರಿಸುಮಾರು 135 ಸಾವಿರ ಮಂದಿ ಈ ಕಾಯಿಲೆಯಿಂದ ವಿಶ್ವದಾದ್ಯಂತ ಅಸುನೀಗುತ್ತಿದ್ದಾರೆ . ಮನುಷ್ಯನಿಗೆ ಲಕ್ವ ಹೊಡೆಯಲು ಕಾರಣ ಆತನ ಮೆದುಳಿನ ರಕ್ತ ನಾಳ ಒಡೆದು ಹೋಗಿರುವುದು ಒಂದು ಕಾರಣ . ಇದರಿಂದ ಮೆದುಳಿನಲ್ಲಿ ಸರಿಯಾದ ಜಾಗಕ್ಕೆ ರಕ್ತ ಸಂಚಾರ ಆಗುತ್ತಿರುವುದಿಲ್ಲ . ಇನ್ನೊಂದು ಕಾರಣ ಏನೆಂದರೆ ಹೃದಯದಿಂದ ಮೆದುಳಿಗೆ ರಕ್ತ ಸಂಚಾರ ನಿಂತು ಹೋಗಿರುತ್ತದೆ . ಇದಕ್ಕೆ ರಕ್ತ ನಾಳಗಳಲ್ಲಿ ಶೇಖರಣೆಯಾದ ಅತಿಯಾದ ಬ್ಯಾಡ್ ಕೊಲೆಸ್ಟರಾಲ್ ರಕ್ತವನ್ನು ಮುಂದಕ್ಕೆ ಹೋಗದಂತೆ ತಡೆದಿರುತ್ತದೆ . ಸ್ಟ್ರೋಕ್ ನಿಂದ ಸಾವೇ ಸಂಭವಿಸಬೇಕೆಂದೇನೂ ಇಲ್ಲ . ದೇಹದ ಒಂದು ಕಡೆಯ ಭಾಗ ಸಂಪೂರ್ಣ ನಿಶ್ಚಲವಾಗಿರುತ್ತದೆ . ಮಾತು ಬಿದ್ದು ಹೋಗಿರುತ್ತದೆ ಅಂದರೆ ಮಾತನಾಡಲು ಆಗುವುದಿಲ್ಲ . ಒಟ್ಟಿನಲ್ಲಿ ಬದುಕಿದ್ದರೂ ಸತ್ತ ಹಾಗೆ ಜೀವಂತ ಶವ ಮಾಡುತ್ತದೆ .
  ಇದರಿಂದ ತಪ್ಪಿಸಿಕೊಳ್ಳುವುದು ಹೇಗೆ ?
  ಇಲ್ಲಿರುವ ಕೆಲವೊಂದು ಸಲಹೆಗಳನ್ನು ಪಾಲಿಸಿ .
  * ದಯವಿಟ್ಟು ಧೂಮಪಾನ ತ್ಯಜಿಸಿ .
  * ಮದ್ಯಪಾನ ಸಂಪೂರ್ಣವಾಗಿ ಬಿಡಲು ಮನಸ್ಸಿಲ್ಲದವರು ಆದಷ್ಟು ಕಡಿಮೆ ಮಾಡಲು ಪ್ರಯತ್ನಿಸಿ .
  * ಆರೋಗ್ಯಕರ ಮತ್ತು ಮಿತ ಉಪಹಾರ ಮತ್ತು ನಿಗದಿತ ಸಮಯಕ್ಕೆ ಪ್ರತಿದಿನ ವ್ಯಾಯಾಮ ಮಾಡಿ .
  * ನಿಮ್ಮ ಕೊಲೆಸ್ಟರಾಲ್ ಅಂಶವನ್ನು ಆಗಾಗ ವೈದ್ಯರ ಬಳಿ ಪರೀಕ್ಷಿಸಿ .
  * ನಿಮ್ಮ ರಕ್ತದ ಒತ್ತಡದ ಮೇಲೆ ಗಮನವಿಡಿ .
  * ನಿಮಗೆ ಮಧುಮೇಹ ಇದೆಯೇ ಎಂದು ಖಾತ್ರಿ ಪಡಿಸಿಕೊಳ್ಳಿ ಮತ್ತು ಇದ್ದರೆ ಯಾವ ಮಟ್ಟದಲ್ಲಿದೆ ಎಂದು ತಿಳಿಯಿರಿ.ಯಾವುದೇ ಕಾರಣಕ್ಕೂ ನಿರ್ಲಕ್ಷಿಸದೆ ಈ ಎಲ್ಲಾ ಕ್ರಮಗಳನ್ನು ಕೈಗೊಂಡು ನಿಮ್ಮ ದೇಹ ಸ್ಟ್ರೋಕ್ ಗೆ ಗುರಿಯಾಗುವುದನ್ನು ತಪ್ಪಿಸಿ .


 • ಮೈಯೊಳಗಿನ ರಕ್ತವೇ ವಿಷಮಯ,ಎಂತಹ ವಿಸ್ಮಯ!

  ಬ್ಯಾಕ್ಟೀರಿಯಾ ಗಳು ಮೈ ಒಳಗಿನ ರಕ್ತಕ್ಕೆ ನುಗ್ಗಿದ್ದೇ ಆದರೆ ಕೋತಿ ತಾನು ಕೆಡುವುದಲ್ಲದೆ ವನವನ್ನೆಲ್ಲಾ ಕೆಡಿಸಿತು ಎಂಬಂತೆ ಇಡೀ ಮನುಷ್ಯನ ದೇಹದ ರಕ್ತವನ್ನೆಲ್ಲಾ ವಿಷವಾಗಿ ಪರಿವರ್ತಿಸುತ್ತದೆ . ಇದಕ್ಕೆ ವೈದ್ಯರ ಭಾಷೆಯಲ್ಲಿ " ಸೆಪ್ಟಿಸಿಮಿಯಾ " ಎಂದು ಕರೆಯುತ್ತಾರೆ . ಇದರಿಂದ ರಕ್ತದ ಒತ್ತಡ ಕಡಿಮೆಯಾಗಿ ಮನುಷ್ಯ ಬಹು ಅಂಗಾಂಗ ವೈಫಲ್ಯದಿಂದ ಕೊನೆಗೆ ಸಾವನ್ನಪ್ಪುತ್ತಾನೆ . ಅಮೇರಿಕಾ ದಲ್ಲಿ ಒಂದು ವರ್ಷಕ್ಕೆ ಸರಿ ಸುಮಾರು 30,000 ಜನರು ಈ ಸೆಪ್ಟಿಸಿಮಿಯಾ ದಿಂದ ಸಾವನ್ನಪ್ಪುತ್ತಾರೆ . ಮೈ ಮೇಲೆ ಸಣ್ಣ ಗಾಯವಾದರೂ ಸರಿ ಅದು ಇನ್ಫೆಕ್ಷನ್ ಆಗದಂತೆ ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ .ಹಾಗೊಂದು ವೇಳೆ ನಮ್ಮ ಗಮನಕ್ಕೆ ಬರದೇ ಇನ್ಫೆಕ್ಷನ್ ಆಗಿ ರಕ್ತದ ಒತ್ತಡ ನಿಯಂತ್ರಣಕ್ಕೆ ಬರದೇ , ಮೂತ್ರ ವಿಸರ್ಜನೆ ಕಡಿಮೆಯಾಗಿ ಜ್ವರ ಜಾಸ್ತಿ ಇದ್ದರೆ ಅದು ಸೆಪ್ಟಿಸಿಮಿಯಾ ಆಗಿದ್ದರೂ ಆಗಿರಬಹುದು . ಆದ್ದರಿಂದ ಈ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ .


 • ಅಲ್ಝಿಮಾರ್ ಡಿಸೀಸ್

  ಅಲ್ಝಿಮಾರ್ ಖಾಯಿಲೆ ಸಾಮಾನ್ಯವಾಗಿ ವಯಸ್ಸಾದವರಲ್ಲಿ ಕಂಡು ಬರುತ್ತದೆ ಅದು ಸುಮಾರು ಅರವತ್ತು ವರ್ಷವಾದ ಮೇಲೆ . ಎಲ್ಲವನ್ನೂ ಮರೆಯುವುದು , ಮಾತಿನಲ್ಲಿ ತೊದಲು ಮತ್ತು ಏನೇನೋ ಆಲೋಚನೆ ತಲೆಗೆ ಬರುವುದು ಜೊತೆಗೆ ತಮ್ಮ ಸ್ವಂತ ಕೆಲಸ ಕಾರ್ಯ ಗಳನ್ನೂ ಮಾಡಿಕೊಳ್ಳಲು ಅಸಮರ್ಥರಾಗುವುದು ಈ ಖಾಯಿಲೆಯ ಗುಣ ಲಕ್ಷಣಗಳು . ವಯಸ್ಸಾದವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆಗಿರುವುದರಿಂದ ಈ ಖಾಯಿಲೆ ಬಂತೆಂದರೆ ಸಾವು ಖಚಿತ . ಇನ್ಫೆಕ್ಷನ್ ನ ವಿರುದ್ಧ ಹೋರಾಡುವುದಕ್ಕೆ ಸಾಧ್ಯವಾಗದೆ , ಏನನ್ನೂ ತಿನ್ನಲೂ ಆಗದೆ ಕಷ್ಟ ಪಡುತ್ತಾರೆ . ಮತ್ತು ದೇಹದ ಒಳಗಡೆ ಹೃದಯದಲ್ಲಿ ಮತ್ತು ಶ್ವಾಸಕೋಶದಲ್ಲಿ ರಕ್ತ ಹೆಪ್ಪು ಗಟ್ಟುವ ಸಾಧ್ಯತೆ ಬಹಳ ಜಾಸ್ತಿ ಇರುತ್ತದೆ . ಆದ್ದರಿಂದ ಈ ಖಾಯಿಲೆಯಿಂದ ತಪ್ಪಿಸಿಕೊಳ್ಳಬೇಕಾದರೆ ಒಳ್ಳೆಯ ವ್ಯಾಯಾಮ , ಮಿತವಾದ ಆರೋಗ್ಯಕರ ಆಹಾರ ಮತ್ತು ಯಾವಾಗಲೂ ಹೃದಯವನ್ನು ಆರೋಗ್ಯದಿಂದ ಇಟ್ಟುಕೊಳ್ಳುವುದು ಒಳ್ಳೆಯದು .


 • ಕಿಡ್ನಿಯ ಅಥವಾ ಮೂತ್ರಪಿಂಡದ ಸಮಸ್ಯೆಗಳು

  ಮನುಷ್ಯನ ಸಾವಿಗೆ ಇನ್ನೊಂದು ಪ್ರಮುಖ ಕಾರಣ ಅವನ ಕಿಡ್ನಿ ಫೇಲ್ ಆಗುವುದು . ಕಿಡ್ನಿ ಹೇಗೆಲ್ಲಾ ಫೇಲ್ ಆಗುತ್ತದೆ ಗೊತ್ತಾ ? ಅತಿಯಾದ ಔಷಧಿಗಳ ಸೇವನೆ , ಆರ್ಥ್ರೈಟಿಸ್ , ಏಡ್ಸ್ ಮತ್ತು ಲ್ಯೂಪಸ್ ಮನುಷ್ಯನ ಕಿಡ್ನಿಗಳನ್ನು ಹಾಳು ಮಾಡುತ್ತವೆ . ಒಮ್ಮೆ ಕಿಡ್ನಿ ಹಾಳಾದರೆ ಮೂತ್ರದಲ್ಲಿ ಪ್ರೋಟೀನ್ ಅಂಶ ಸೇರುತ್ತಾ ಹೋಗುತ್ತದೆ . ಇದಕ್ಕೆ " nನೆಫ್ರಯೋಟಿಕ್ ಸಿಂಡ್ರೋಮ್ " ಎಂದು ಕರೆಯುತ್ತಾರೆ . ಈ ರೀತಿಯ ಸಮಸ್ಯೆಗಳೇನಾದರೂ ಕಂಡು ಬಂದರೆ ಯಾವುದೇ ನಿರ್ಲಕ್ಷ್ಯ ಮಾಡದೇ ತಕ್ಷಣ ವೈದ್ಯರನ್ನು ಭೇಟಿ ಆಗಿ . ನೆಫ್ರೋಸಿಸ್ ಎನ್ನುವುದು ಕಿಡ್ನಿ ಹಾಳುಮಾಡುವ ಇನ್ನೊಂದು ಖಾಯಿಲೆ . ಇದರಿಂದ ಮಧುಮೇಹ , ನಿಯಂತ್ರಣಕ್ಕೆ ಬಾರದ ರಕ್ತದ ಒತ್ತಡ ಮತ್ತು ಲ್ಯೂಪಸ್ ನಂತಹ ಸಮಸ್ಯೆ ಎದುರಾಗುತ್ತದೆ . ಯಾವಾಗ ಮನುಷ್ಯ ನೋವು ನಿವಾರಕ ಔಷಧಿಗಳನ್ನು ಯಥೇಚ್ಛವಾಗಿ ತೆಗೆದುಕೊಳ್ಳುತ್ತಾನೋ ಆತನಿಗೆ ಕಿಡ್ನಿಯ ಸಮಸ್ಯೆ ಕಟ್ಟಿಟ್ಟ ಬುತ್ತಿ . ಆದ್ದರಿಂದ ಇದರಿಂದ ಪಾರಾಗಬೇಕಾದರೆ ಇಂತಹ ಔಷಧಿಗಳನ್ನು ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಉಪಯೋಗಿಸುವುದು ಒಳ್ಳೆಯದು .


 • ಹೃದಯ ಸಂಬಂಧಿ ಕಾಯಿಲೆ

  ಹೃದಯದ ಖಾಯಿಲೆ ಮೇಲಿರುವ ಸ್ವರ್ಗಕ್ಕೆ ತನ್ನದೇ ಆದ ಕೊಡುಗೆ ನೀಡಿದೆ . ವರ್ಷಕ್ಕೆ ಏನಿಲ್ಲಾ ಅಂದರೂ ಸುಮಾರು 600 ಸಾವಿರ ಜನರನ್ನು ಯಾವುದೇ ಮುಲಾಜಿಲ್ಲದೆ ಸ್ವರ್ಗಕ್ಕೆ ಪಾರ್ಸೆಲ್ ಮಾಡುತ್ತದೆ ಎಂದು 2011 ರ ಸೆಂಟರ್ ಫ಼ಾರ್ ಡಿಸೀಸ್ ಕಂಟ್ರೋಲ್ ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ . ಇದನ್ನು " ಕೊರೋನರಿ ಆರ್ಟರಿ ಡಿಸೀಸ್ " ಎಂದೂ ಕರೆಯುತ್ತಾರೆ . ಹೃದಯದಿಂದ ಪ್ರಾರಂಭವಾಗಿರುವ ರಕ್ತ ನಾಳಗಳನ್ನು ಕಿರಿದು ಮಾಡಿ ಎದೆಯಲ್ಲಿ ಒಂದು ರೀತಿಯ ಬಿಗಿಯಾದಂತೆ ಮಾಡಿ ಉಸಿರಾಟಕ್ಕೂ ತೊಂದರೆ ಕೊಡುತ್ತದೆ . ಅದರಲ್ಲೂ ಮನಸ್ಸಿಗೆ ಯಾವುದಾದರೂ ಯೋಚನೆ ತುಂಬಿಕೊಂಡು ಕೊರಗುವುದಕ್ಕೆ ಶುರು ಮಾಡಿದರಂತೂ ಕಥೆ ಮುಗಿಯಿತು . ಇಂತಹ ಭಯಾನಕ ಕಾಯಿಲೆಯಿಂದ ನೀವು ಪಾರಾಗಬೇಕಾದರೆ ಮೊದಲು ಧೂಮಪಾನ ನಿಲ್ಲಿಸಿ ಮತ್ತು ನಲವತ್ತು ವರ್ಷ ವಯಸ್ಸಾದ ಬಳಿಕ ಆಗಾಗ ಕೊಲೆಸ್ಟರಾಲ್ ಅನ್ನು ಪರೀಕ್ಷೆ ಮಾಡಿಸುತ್ತಿರಿ .


 • ಇನ್ಫ್ಲುಯೆಂಜಾ

  ಇದು ಒಂದು ರೀತಿಯ ಫ್ಲೂ . ಈ ಜ್ವರ ಮಾರಣಾಂತಿಕ . ತೀರಾ ಎಳೆ ಮಕ್ಕಳಿಗೆ ಮತ್ತು ತೀರಾ ವಯಸ್ಸಾದವರ ಮೇಲೆ ಇದರ ಕಣ್ಣು .ನ್ಯೂಮೋನಿಯಾ ವೈರಸ್ ಗೂ ಈ ಫ್ಲೂ ಜ್ವರಕ್ಕೂ ಬಹಳ ಹತ್ತಿರದ ನಂಟಿದೆ . ನ್ಯೂಮೋನಿಯಾ ದ ಲಕ್ಷಣವೆಂದರೆ ಶ್ವಾಸಕೋಶದಲ್ಲಿನ ಅಲ್ವೇಒಲಿ ಗಳನ್ನು ಊದಿಕೊಳ್ಳುವಂತೆ ಮಾಡಿ ದೇಹದ ಉಸಿರಾಟದ ವ್ಯವಸ್ಥೆಯನ್ನು ಸಂಪೂರ್ಣ ತನ್ನ ಹಿಡಿತಕ್ಕೆ ತೆಗೆದುಕೊಂಡು ಸಾವಿನ ಮನೆಗೆ ಕರೆದೊಯ್ಯುತ್ತದೆ . ನೀವು ಈ ಫ್ಲೂ ಜ್ವರದಿಂದ ಉಳಿಯಬೇಕಾದರೆ ಕಾಲಕ್ಕೆ ತಕ್ಕಂತೆ ಲಸಿಕೆ ಹಾಕಿಸಿಕೊಂಡು ಫ್ಲೂ ಜ್ವರ ಬರದಂತೆ ತಡೆಗಟ್ಟಬಹುದು .


 • ಸಕ್ಕರೆಕಾಯಿಲೆ ಅಥವಾ ಮಧುಮೇಹ

  ದೇಹದಲ್ಲಿನ ಬ್ಲಡ್ ಶುಗರ್ ಲೆವೆಲ್ ನಿಯಂತ್ರಣಕ್ಕೆ ಬಾರದೆ ಜಾಸ್ತಿ ಆದರೆ ಖಂಡಿತಾ ಹೃದಯ ಅಥವಾ ಕಿಡ್ನಿ ಫೇಲ್ ಆಗುವ ಅವಕಾಶ ಬಹಳಷ್ಟಿದೆ . ವಿಪರೀತ ಬಾಯಾರಿಕೆ , ವಿಪರೀತ ಮೂತ್ರ ವಿಸರ್ಜನೆ ಮತ್ತು ಸುಸ್ತು ಇದರ ಗುಣ ಲಕ್ಷಣಗಳು . ಆದರೆ ಖುಷಿಯ ವಿಷಯವೆಂದರೆ ಟೈಪ್ 2 ಮಧುಮೇಹಕ್ಕೆ ದೇಹ ಗುರಿಯಾಗುವುದನ್ನು ತಪ್ಪಿಸಲು ಅನೇಕ ದಾರಿಗಳಿವೆ ಎಂಬುದು . ಅದರಲ್ಲೂ ನಿಮ್ಮ ಕುಟುಂಬದಲ್ಲಿ ಸಕ್ಕರೆ ಖಾಯಿಲೆಯ ಚರಿತ್ರೆ ಹೊಂದಿದ್ದರೆ ನೀವು ಬಹಳ ಜಾಗರೂಕರಾಗಿದ್ದು ನಿಮ್ಮ ದೇಹದ ತೂಕದ ಬಗ್ಗೆ ಹೆಚ್ಚು ಗಮನ ವಹಿಸಬೇಕು . ತೂಕ ಹೆಚ್ಚು ಮಾಡಿಕೊಳ್ಳದೆ ಪ್ರತಿ ದಿನ ವ್ಯಾಯಾಮ ಮಾಡುತ್ತಾ ಆಗಾಗ ಬ್ಲಡ್ ಶುಗರ್ ಚೆಕ್ ಅಪ್ ಮಾಡಿಸುತ್ತಿದ್ದರೆ , ಖಂಡಿತ ಈ ಮಧುಮೇಹದಿಂದ ಮುಕ್ತಿ ಪಡೆಯಬಹುದು . ಅದರಲ್ಲೂ ಮಹಿಳೆಯರು ಪೋಲಿಸಿಸ್ಟಿಕ್ ಓವರಿ ಸಿಂಡ್ರೋಮ್ ನಿಂದ ಬಳಲುತ್ತಿದ್ದರೆ ಮಧುಮೇಹ ಮತ್ತು ಇನ್ಸುಲಿನ್ ನ ಬಗ್ಗೆ ವಿಶೇಷ ಗಮನ ಕೊಡಬೇಕಾಗುತ್ತದೆ ಮತ್ತು ಮೇಲೆ ಹೇಳಿದ ಎಲ್ಲಾ ಕಾರ್ಯಗಳನ್ನೂ ಮಾಡಬೇಕಾಗುತ್ತದೆ .


 • ಕ್ರಾನಿಕ್ ಒಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ ಅಥವಾ ಸಿ ಓ ಪಿ ಡಿ ಎಂದೂ ಕರೆಯುತ್ತಾರೆ

  ಸಿ ಓ ಪಿ ಡಿ ಸಾಮಾನ್ಯವಾಗಿ ಅತಿಯಾದ ಧೂಮ ಪಾನದಿಂದ ಬರುತ್ತದೆ . ಬ್ರಾಂಕೈಟಿಸ್ ಮತ್ತು ಎಫಿಸೆಮಾ ಹೊಂದಿರುವ ರೋಗಿಗೆ ಉಸಿರಾಟದ ತೊಂದರೆ ಜಾಸ್ತಿ ಇರುತ್ತದೆ . ಏಕೆಂದರೆ ಶ್ವಾಸಕೋಶ ದಲ್ಲಿನ ಏರ್ ಬ್ಯಾಗ್ ಗಳು ಮುಚ್ಚಿ ಹೋಗಿರುತ್ತವೆ ಧೂಮಪಾನದಿಂದ . ಶೇಖಡಾ ೯೦ ರಷ್ಟು ಜನರು ಸಿಗರೇಟ್ ಸೇವನೆಯಿಂದ ಈ ಸಿ ಓ ಪಿ ಡಿ ಎಂಬ ಮಹಾಮಾರಿಯನ್ನು ಮೈ ಮೇಲೆ ಎಳೆದುಕೊಂಡಿರುತ್ತಾರೆ . ಇದರಿಂದ ಪಾರಾಗಲು ಧೂಮ ಪಾನವನ್ನು ಸಂಪೂರ್ಣವಾಗಿ ತ್ಯಜಿಸಬೇಕು .


 • ಕ್ಯಾನ್ಸರ್

  ಇತ್ತೀಚಿಗೆ ಈ ಕಾನ್ಸರ್ ಮಹಾಮಾರಿ ಬಹು ದೊಡ್ಡ ರೋಗ ಎಂಬಂತಾಗಿದೆ . ಈ ಖಾಯಿಲೆ ಇದೆ ಎಂದು ತಿಳಿದರೆ ಸಾಕು ಮನುಷ್ಯ ಅರ್ಧ ಸತ್ತು ಹೋಗುತ್ತಾನೆ . ಅಷ್ಟು ಭಯ ಹುಟ್ಟು ಹಾಕಿದೆ ಈ ಕಾನ್ಸರ್ . ಮನುಷ್ಯನ ದೇಹದಲ್ಲಿ ಯಾವುದಾದರೂ ಒಂದು ಭಾಗದಲ್ಲಿ ಅನಿಯಮಿತವಾಗಿ ಮತ್ತು ನಿಯಂತ್ರಣಕ್ಕೆ ಬರದೇ ಬೆಳೆಯುವ ಮಾಂಸಖಂಡವೇ ಮುಂದೊಂದು ದಿನ ಕ್ಯಾನ್ಸರ್ ಆಗಿ ಬದಲಾಗುತ್ತದೆ . ಕೊನೆಗೆ ಮೈಯೆಲ್ಲಾ ಹರಡಲು ಪ್ರಯತ್ನಿಸುತ್ತದೆ . ಯಾವ ಮಟ್ಟಕ್ಕೆಂದರೆ ಸುಮಾರು 567,628 ಅಮೆರಿಕಾದ ಜನರನ್ನು 2011 ಇಸವಿಯಲ್ಲಿ ಬಲಿ ಪಡೆದಷ್ಟು . ಸಾಮಾನ್ಯವಾಗಿ ಗಂಡಸರಿಗೆ ಪ್ರಾಸ್ಟೇಟ್ , ಶ್ವಾಸಕೋಶ ,ಮತ್ತು ಕೋಲನ್ ನಲ್ಲಿ ಕ್ಯಾನ್ಸರ್ ಕಾಣಿಸಿಕೊಂಡರೆ ಹೆಂಗಸರಿಗೆ ಕೋಲನ್ , ಶ್ವಾಸಕೋಶ ಮತ್ತು ಸ್ತನ ಕ್ಯಾನ್ಸರ್ ಜಾಸ್ತಿ ಪ್ರಮಾಣದಲ್ಲಿದೆ ಎಂದು ವೈದ್ಯಲೋಕ ನಂಬಿದೆ ಮತ್ತು ಇದಕ್ಕೆಲ್ಲಾ ಕಾರಣ ಧೂಮ ಪಾನ ಮತ್ತು ತಂಬಾಕಿನ ಪದಾರ್ಥಗಳ ಸೇವನೆ ಎಂಬುದೂ ದೃಢಪಟ್ಟಿದೆ .ಹಾಗೆಂದು ಭಯ ಪಡುವ ಅಗತ್ಯವಿಲ್ಲ . ನೀವು ಆದಷ್ಟು ಒಳ್ಳೆಯ ಶುದ್ಧ ವಾದ ತರಕಾರಿ ಹಣ್ಣುಗಳ ಸೇವನೆ , ನಿತ್ಯ ವ್ಯಾಯಾಮ ಮತ್ತು ಧೂಮಪಾನ ದುಷ್ಟಗಳಿಂದ ದೂರವಾಗಿ ಒಂದು ಆರೋಗ್ಯಕರ ಬದುಕನ್ನು ನಿಮ್ಮದಾಗಿಸಿಕೊಂಡರೆ ಖಂಡಿತ ಕ್ಯಾನ್ಸರ್ ಅನ್ನು ಒದ್ದೋಡಿಸಬಹುದು . ಹಾಗೊಂದು ವೇಳೆ ನಿಮ್ಮ ದೇಹದಲ್ಲಿ ಎಲ್ಲಿಯಾದರೂ ಗಂಟಿನ ರೂಪದಲ್ಲಿ ಏನಾದರೂ ಬೆಳೆವಣಿಗೆ ಕಂಡು ಬಂದರೆ ತಕ್ಷಣ ವೈದ್ಯರನ್ನು ಕಂಡು ಅದು ಕ್ಯಾನ್ಸರ್ ಹೌದೋ ಅಲ್ಲವೋ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ .


 • ಸುಯಿಸೈಡ್

  ಇದು ಇತ್ತೀಚಿನ ಯುವ ಜನತೆಯಲ್ಲಿ ಅತಿ ಹೆಚ್ಚಾಗಿ ಕಂಡು ಬರುತ್ತಿದೆ . ಸ್ವಲ್ಪ ಯಡವಟ್ಟಾದರೂ ಜನರು ಹಿಡಿಯುವುದು ಈ ಕೆಟ್ಟ ಮಾರ್ಗವನ್ನು . ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂತಲೋ , ಮನೆಯಲ್ಲಿ ಅಪ್ಪ ಹೊಡೆದರೆಂತಲೂ ,ಕೆಲಸದ ಒತ್ತಡದಿಂದಲೋ , ಬೀದಿಯಲ್ಲಿ ಕಾಮುಕರ ಕಾಟ ಸಹಿಸಲಾರದೆಯೊ ಹೀಗೆ ಪ್ರತಿನಿತ್ಯ ಟಿವಿ ಯಲ್ಲಿ ಪತ್ರಿಕೆಯಲ್ಲಿ ಒಂದಿಲ್ಲೊಂದು ಸುದ್ದಿ ಇದ್ದೆ ಇರುತ್ತದೆ . ಏಕೆಂದರೆ ಇತ್ತೀಚಿನ ಜನತೆ ಅಷ್ಟೊಂದು ಸೆನ್ಸಿಟಿವ್ . ಇದಕ್ಕೆ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಎಂಬ ಸಂಸ್ಥೆ ಸುಯಿಸೈಡ್ ಅನ್ನೂ ಕೂಡ 2011 ರಲ್ಲಿ ಸಾವಿಗೆ ಕಾರಣ ಎಂದು ಘೋಷಿಸಿ ಆಗಿದೆ . ನಿಮಗೆ ಜೀವನದಲ್ಲಿ ಬೇಜಾರಾಗಿ ನಮಗೆ ಜೀವನವೇ ಬೇಡ ಅನ್ನಿಸಿದಂತಾಗಿ ಮಾನಸಿಕ ಖಿನ್ನತೆಗೆ ಒಳಗಾದರೆ ದಯವಿಟ್ಟು ಮಾನಸಿಕ ತಜ್ಞರ ಬಳಿ ಭೇಟಿ ಕೊಡಿ . ಅವರು ನಿಮ್ಮನ್ನು ಕೋನ್ಸೆಲ್ಲಿಂಗ್ ಮಾಡಿ ನಿಮಗೆ ಸೂಕ್ತ ಸಲಹೆಗಳನ್ನು ಕೊಟ್ಟು ಈ ಮಾನಸಿಕ ಖಾಯಿಲೆಗೆ ಔಷಧಗಳನ್ನೂ ಕೊಡುತ್ತಾರೆ . ಬೇಸರಕ್ಕೆ ಸಾವೇ ಪರಿಹಾರ ಅಲ್ಲ ಅಲ್ಲವೇ ?
ಮನುಷ್ಯನಿಗೆ ಹುಟ್ಟು ಸಾವು ಎರಡೂ ಅವನ ಕೈಯಲ್ಲಿರುವುದಿಲ್ಲ . ಹುಟ್ಟು ಸಾವು ಎರಡೂ ಆಕಸ್ಮಿಕವೇ . ಎಲ್ಲೋ ಹುಟ್ಟುತ್ತಾನೆ , ಮತ್ತೆಲ್ಲೋ ಬೆಳೆಯುತ್ತಾನೆ , ಇನ್ನೆಲ್ಲೋ ಜೀವನ ನಡೆಸುತ್ತಾನೆ ಹಾಗೆ ಬೇರೆ ಎಲ್ಲೋ ಯಾವ ರೀತಿಯಲ್ಲೋ ಸಾಯುತ್ತಾನೆ . ಪ್ಲೇನ್ ಕ್ರ್ಯಾಶ್ ಆಗಿಯೋ , ವಿಷ ಸರ್ಪ ಕಚ್ಚಿಯೋ ಅಥವಾ ಯಾವುದಾದರೂ ಭಯಾನಕ ಖಾಯಿಲೆ ಬಂದೊದಗಿಯೋ ಹೀಗೆ ಸಾವು ಯಾವ ರೂಪದಲ್ಲಿ ಬೇಕಾದರೂ ಬರಬಹುದು ಮತ್ತು ಯಾವ ಸಮಯದಲ್ಲಿ ಬೇಕಾದರೂ ಬರಬಹುದು . ಏಕೆಂದರೆ ಜೀವನ ಎನ್ನುವುದು ನೀರಿನ ಮೇಲಿನ ಗುಳ್ಳೆಯಂತೆ . ಯಾವಾಗ ಬೇಕಾದರೂ ಒಡೆಯಬಹುದು . ಎಷ್ಟೇ ಆಸೆ ಕನಸುಗಳಿದ್ದರೂ ಯಮನ ಕರೆ ಬಂದಾಗ ಎಲ್ಲವನ್ನೂ ಬಿಟ್ಟು ಸದ್ದಿಲ್ಲದಂತೆ ನಡೆಯುತ್ತಿರಬೇಕು .

ಹುಟ್ಟಿದ ಮನುಷ್ಯ ಸಾಯಲೇಬೇಕು . ಹಣ್ಣೆಲೆ ಮರದಿಂದ ಉದುರುವ ಹಾಗೆ . ಅದು ಅನಿವಾರ್ಯ ಮತ್ತು ಜಗತ್ತಿನ ನಿಯಮ ಕೂಡ . ಬೇರೆ ಯಾವ ರೀತಿಯಲ್ಲಾದರೂ ಸಾವು ಬಂದರೆ ಅದು ನಮ್ಮ ಕೈಯಲ್ಲಿ ಇರುವುದಿಲ್ಲ . ಅದನ್ನು ತಪ್ಪಿಸಲಿಕ್ಕೂ ಆಗುವುದಿಲ್ಲ . ಆದರೆ ದೇಹಕ್ಕೆ ಖಾಯಿಲೆ ಬಂದು ಸತ್ತರೆ ಅದು ಒಂದು ಕ್ಷಣ ನಮ್ಮನ್ನು ಗೊಂದಲಕ್ಕೆ ನೂಕಿದಂತಾಗುತ್ತದೆ . ಏಕೆಂದರೆ ಜೀವ ಮತ್ತ್ತು ಜೀವನ ಎರಡೂ ಅಮೂಲ್ಯವಲ್ಲವೇ ? ಹೋದ ಜೀವವನ್ನು ಮತ್ತು ಜೀವನವನ್ನು ಯಾರೂ ಹಿಂದಿರುಗಿ ತರಲಾಲರು . ಆಗ ಅರೆ ಹೀಗೆ ಮಾಡಿದ್ದಾರೆ ಬದುಕಬಹುದಿತ್ತೇನೋ ಅಲ್ಲವೇ ಎನ್ನುವ ಅಪರಾಧಿ ಮನೋಭಾವ ಸದಾ ಕಾಡುತ್ತಿರುತ್ತದೆ . ಆದರೆ ಏನೂ ಮಾಡುವುದಕ್ಕೆ ಆಗುವುದಿಲ್ಲ . ಏಕೆಂದರೆ ಜೀವನದ ಕಥೆಯೇ ಮುಗಿದು ಹೋಗಿರುತ್ತದೆ . ನಾವು ಇಲ್ಲಿ ಇಂತಹದೇ ಸಂದರ್ಭ ಎದುರಾದಾಗ ಧೈರ್ಯ ಕೆಡದೆ ಹೇಗೆ ಬರುವ ಸಾವಿನಿಂದ ಬಚಾವಾಗಬಹುದು ಎಂಬುದರ ಕೆಲವೊಂದು ನಿರ್ದೇಶನಗಳನ್ನು ಕೊಡಲು ಬಯಸುತ್ತೇವೆ . ಸಾಧ್ಯವಾದಷ್ಟು ಇದು ನಿಮಗೆ ಸಹಾಯಕವಾದರೆ ಅಷ್ಟೇ ಸಾಕು .

   
 
ಹೆಲ್ತ್