Back
Home » ಆರೋಗ್ಯ
ಹಲಸಿನ ಹಣ್ಣು-ತುಂಬಾನೇ ರುಚಿಯೇನೋ ಹೌದು, ಆದರೆ ಹೃದಯಕ್ಕೆ ಒಳ್ಳೆಯದೇ?
Boldsky | 16th May, 2019 10:40 AM
 • ಆಂಟಿ ಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿದೆ

  ಹಲಸಿನ ಹಣ್ಣಿನಲ್ಲಿ ಪ್ರಮುಖವಾಗಿ ಆಂಟಿ ಆಕ್ಸಿಡೆಂಟ್ ವಿಟಮಿನ್ ಎ ಮತ್ತು ಸಿ ಇವೆ. ಜೊತೆಗೇ ಇತರ ಫೈಟೋನ್ಯೂಟ್ರಿಯೆಂಟ್ ಅಥವಾ ದೇಹಕ್ಕೆ ರಕ್ಷಣೆ ಒದಗಿಸುವ ಪೋಷಕಾಂಶಗಳೂ ಇವೆ. ಈ ಪೋಷಕಾಂಶಗಳು ಕ್ಯಾನರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡುತ್ತವೆ. ನಮ್ಮ ಜೀವಕೋಶಗಳು ಸತತವಾಗಿ ಸಾಯುತ್ತಾ ಹೊಸ ಜೀವಕೋಶಗಳು ಹುಟ್ಟುತ್ತಾ ಇರುತ್ತವೆ, ಹುಟ್ಟುವ ಜೀವಕೋಶಗಳು ಸವೆಯದಂತೆ ಹಾಗೂ ವಿರೂಪಗೊಳ್ಳದಂತೆ ಈ ಆಂಟಿ ಆಕ್ಸಿಡೆಂಟುಗಳು ನೆರವಾಗುತ್ತವೆ. ಅಲ್ಲದೇ ವಿಶೇಷವಾಗಿ ಫ್ರೀ ರ್‍ಯಾಡಿಕಲ್ ಕಣಗಳು ನಮ್ಮ ನರಗಳ ಅತಿ ಒಳಗಿನ ಪದರದ ಮೇಲೆ ಮಾಡುವ ಧಾಳಿಯಿಂದ ರಕ್ಷಿಸುತ್ತವೆ. ರಕ್ತದ ಮೂಲಕ ಆಗಮಿಸುವ ಕೆಟ್ಟ ಕೊಲೆಸ್ಟ್ರಾಲ್ ಜಿಡ್ಡಿನಿಂದ ಕೂಡಿದ್ದು ನರಗಳು ಕವಲೊಡೆದಿರುವಲ್ಲಿ ಅಥವಾ ತಿರುವು ಪಡೆದಿರುವಲ್ಲೆಲ್ಲಾ ಅಂಟಿಕೊಂಡಿರುತ್ತವೆ. ಹಲಸಿನ ಹಣ್ಣಿನ ಪೋಷಕಾಂಶಗಳು ಈ ಜಿಡ್ಡು ಅಂಟಿಕೊಳ್ಳದಂತೆ ತಡೆದು ಹೀಗೇ ಜಿಡ್ಡು ಹೆಚ್ಚಾಗುತ್ತಾ ಆಮ್ಲಜನೀಕರಣಕ್ಕೆ ಕೆಟ್ಟ ಕೊಲೆಸ್ಟ್ರಾಲ್ ಒಳಗಾಗುವುದನ್ನು (oxidation of LDL cholesterol) ತಡೆಗಟ್ಟುತ್ತದೆ.


 • ಖನಿಜಗಳು

  ಹಲಸಿನ ಹಣ್ಣಿನಲ್ಲಿ ಹೃದಯಕ್ಕೆ ಅಗತ್ಯವಾದ ಎರಡು ಪ್ರಮುಖ ಖನಿಜಗಳಿವೆ. ಪೊಟ್ಯಾಶಿಯಂ ಮತ್ತು ಮೆಗ್ನೇಶಿಯಂ. ನಮ್ಮ ದೇಹದ ರಕ್ತಪರಿಚಲನೆಗೆ ಅಗತ್ಯವಿರುವಷ್ಟು ಒತ್ತಡವನ್ನು ಕಾಪಾಡಿಕೊಳ್ಳಲು ಮತ್ತು ಹೃದಯದ ಬಡಿತದ ಗತಿಯನ್ನು ನಿಯಂತ್ರಣದಲ್ಲಿರಿಸಲು ಪೊಟ್ಯಾಶಿಯಂ ಅತಿ ಅವಶ್ಯವಾದ ಖನಿಜವಾಗಿದೆ. ಅಲ್ಲದೇ ದೇಹದಲ್ಲಿ ಅಗತ್ಯವಿರುವಷ್ಟು ಪ್ರಮಾಣದ ದ್ರವವನ್ನು ಇರಿಸಿಕೊಳ್ಳಲೂ ಸೂಕ್ತ ಪ್ರಮಾಣದ ಪೊಟ್ಯಾಶಿಯಂ ನಮಗೆ ನಿತ್ಯವೂ ಬೇಕು. ಅಲ್ಲದೇ ಹೃದಯದ ಸ್ನಾಯುಗಳು ಸಂಕುಚಿತಗೊಂಡು ರಕ್ತವನ್ನು ದೂಡಿಕೊಡಲೂ ಪೊಟ್ಯಾಶಿಯಂ ಅಗತ್ಯವಾಗಿದೆ. ಹೃದಯದ ಬಡಿತದ ವೇಗವನ್ನು ಅಗತ್ಯಪ್ರಮಾಣದಲ್ಲಿರಿಸಲು ಮೆಗ್ನೀಶಿಯಂ ಅಗತ್ಯವಾಗಿದ್ದು ತನ್ಮೂಲಕ ಹೃದಯದ ಒತ್ತಡವನ್ನು ಆರೋಗ್ಯಕರ ಮಿತಿಗಳಲ್ಲಿರಿಸಲು ನೆರವಾಗುತ್ತದೆ.


 • ವಿಟಮಿನ್ ಬಿ6

  ಇತರ ವಿಟಮಿನ್ನುಗಳಿಗೆ ಹೊರತಾಗಿ ಹಲಸಿನ ಹಣ್ಣಿನಲ್ಲಿ ಆರೋಗ್ಯಕರ ಪ್ರಮಾಣದ ವಿಟಮಿನಿ ಬಿ6 ಅನ್ನು ಹೊಂದಿದೆ. ಇದು ವಿಟಮಿನ್ ಬಿ12 ಮತ್ತು ಫೋಲೇಟ್ ಗಳ ವರ್ಗಕ್ಕೆ ಸೇರಿದ್ದು ಈ ವಿಟಮಿನ್ ಹೃದಯದ ತೊಂದರೆಗೆ ಕಾರಣವಾಗುವ ಹೋಮೋಸಿಸ್ಟೀನ್ (homocysteine) ಎಂಬ ರಸದೂತದ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ತನ್ಮೂಲಕ ಹೃದಯದ ಕಾಯಿಲೆಗಳು ಆವರಿಸುವ ಸಾಧ್ಯತೆಯನ್ನು ತಗ್ಗಿಸುತ್ತದೆ.


 • ಕರಗದ ನಾರು

  ಹಲಸಿನ ಹಣ್ಣು ಅತ್ಯುತ್ತಮ ಪ್ರಮಾಣದ ಕರಗುವ ಮತ್ತು ಕರಗದ ನಾರನ್ನು ಹೊಂದಿದೆ. ಎಳೆಯ ಹಲಸಿನ ಸುಮಾರು ನೂರು ಗ್ರಾಂ ತಿರುಳಿನಲ್ಲಿ ಮೂರು ಗ್ರಾಂ ಇದ್ದರೆ ಚೆನ್ನಾಗಿ ಹಣ್ಣಾದ ತಿರುಳಿನಲ್ಲಿ ಒಂದೂವರೆ ಗ್ರಾಂ ಇರುತ್ತದೆ. ಒಟ್ಟಾರೆ ನಾರಿನಂಶದಲ್ಲಿ ಮುಕ್ಕಾಲು ಪಾಲು ಕರಗದ ನಾರು ಹಾಗೂ ಕಾಲು ಭಾಗ ಕರಗುವ ನಾರು ಇರುತ್ತದೆ. ಈ ಅನುಪಾತ ಆರೋಗ್ಯಕರ ಜೀರ್ಣಕ್ರಿಯೆಗೆ ಹೇಳಿ ಮಾಡಿಸಿದಂತಹದ್ದಾಗಿದ್ದು ಮಲಬದ್ದತೆ, ಹೃದಯದ ಕಾಯಿಲೆಗಳು ಮೊದಲಾದವುಗಳನ್ನು ಕಡಿಮೆಗೊಳಿಸುವ ಜೊತೆಗೇ ತೂಕ ಇಳಿಸುವ ಪ್ರಯತ್ನಗಳಿಗೆ ಹೆಚ್ಚಿನ ಫಲ ಸಿಗುತ್ತದೆ.


 • ಆದರೆ ಇಂತಹ ಸಂಗತಿಗಳು ನೆನಪಿರಲಿ..

  ಆದರೆ, ಯಾವುದೇ ಆಹಾರವಾಗಲಿ, ಅತಿಯಾದರೆ ಅಮೃತವೂ ವಿಷ ಎಂಬಂತೆ ಅತಿ ಪ್ರಮಾಣದಲ್ಲಿ ಅನಾರೋಗ್ಯಕರವೇ ಹೌದು. ಹಲಸಿನ ಹಣ್ಣು ಹಲವಾರು ಬಗೆಗಳಲ್ಲಿ ಆರೋಗ್ಯಕ್ಕೆ ಪೂರಕವಾದರೂ ಸುಮಾರು ನೂರು ಗ್ರಾಂ ಹಣ್ಣಿನಲ್ಲಿ 23 ಕಾರ್ಬೋಹೈಡ್ರೇಟುಗಳೂ, 95 ಕ್ಯಾಲೋರಿಗಳೂ ಇರುತ್ತವೆ. ಹಾಗಾಗಿ ಹಲಸಿನ ಹಣ್ಣು ಇಷ್ಟವಾಗುತ್ತದೆಂದು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು. ಈ ಅಂಕಿ ಅಂಶಗಳನ್ನು ಪರಿಗಣಿಸಿ ನಿಮ್ಮ ಆಹಾರದಲ್ಲಿ ಎಷ್ಟು ಕಾರ್ಬೋಹೈಡ್ರೇಟುಗಳು ಮತ್ತು ಕ್ಯಾಲೋರಿಗಳಿರಬೇಕೆಂಬ ಲೆಕ್ಕಾಚಾರಕ್ಕನುಗುಣವಾಗಿಯೇ ಸೇವಿಸಬೇಕು. ಅದರಲ್ಲೂ ಹಲಸಿನ ಹಣ್ಣಿನಲ್ಲಿರುವ ಸಕ್ಕರೆಯ ಅಂಶ ಮಧುಮೇಹಿಗಳಿಗೆ ಸೂಕ್ತವಲ್ಲ. ಹಾಗಾಗಿ, ಎಷ್ಟರವರೆಗೆ ಈ ಪೋಷಕಾಂಶಗಳು ನಿಮ್ಮ ಆರೋಗ್ಯಕರ ಆಹಾರದ ಮಿತಿಗಳ ಒಳಗಿರುತ್ತವೆಯೋ ಅಲ್ಲಿಯವರೆಗೆ ಹಲಸಿನ ಹಣ್ಣು ಸಹಾ ಇತರ ಯಾವುದೇ ಹಣ್ಣಿನಂತೆ ಆರೋಗ್ಯಕರವೇ ಹೌದು.
ಸಾಮಾನ್ಯವಾಗಿ ಹೆಚ್ಚಿನವರಿಗೆ ಇಷ್ಟವಾಗದೇ ಇರುವ, ಬಾಂಗ್ಲಾದೇಶದ ರಾಷ್ಟ್ರೀಯ ಫಲವಾಗಿರುವ ಹಲಸಿನ ಹಣ್ಣು ರುಚಿಯಾದ, ಸ್ವಾದಿಷ್ಟ ಮತ್ತು ನಾರಿನಿಂದ ಕೂಡಿದ ಹಣ್ಣಾದಿದ್ದು ಹಲವಾರು ಪೋಷಕಾಂಶಗಳನ್ನು ಒಳಗೊಂಡಿದೆ. ಹಲವು ಪ್ರಮುಖ ವಿಟಮಿನ್ನುಗಳು, ಖನಿಜಗಳು, ಫೈಟೋನ್ಯೂಟ್ರಿಯೆಂಟ್ ಗಳು, ಪೊಟ್ಯಾಶಿಯಂ, ಕರಗದ ನಾರು, ಕೊಬ್ಬುಗಳಿಂದ ಸಮೃದ್ದವಾಗಿದ್ದು ಯಾವುದೇ ಕೊಲೆಸ್ಟ್ರಾಲ್ ಅಥವಾ ಸಂತೃಪ್ತ ಕೊಬ್ಬು ಇಲ್ಲದೇ ಇರುವ ಹಣ್ಣಾಗಿದೆ. ಇದೇ ಗುಣಗಳು ಇದನ್ನೊಂದು ಹೃದಯಸ್ನೇಹಿ ಆಹಾರವನ್ನಾಗಿಸಿದೆ.

ಹಲಸಿನ ಹಣ್ಣಿನಲ್ಲಿ ಕೆಲವಾರು ಬಗೆಗಳಿದ್ದು ಹೆಚ್ಚಿನವು ಹಣ್ಣಾದ ಬಳಿಕ ತಿನ್ನಲು ಯೋಗ್ಯವಾಗಿವೆ ಮತ್ತು ಆರೋಗ್ಯವರ್ಧಕವೂ ಆಗಿವೆ. ಕೆಲವು ತಳಿಗಳು ಮಾತ್ರ (ಉದಾಹರಣೆಗೆ ತುಳುವೆ) ಭಾರೀ ನಾರಿನಿಂದ ಕೂಡಿದ್ದು ಹೆಚ್ಚಿನವರು ಇದನ್ನು ತಿನ್ನಲು ಇಷ್ಟಪಡುವುದಿಲ್ಲ. ಕೆಲವು ಜಾತಿಯ ಹಲಸು ಕಾಯಿಯಿದ್ದಾಗ ಮಾತ್ರವೇ ಸಾರು ಮಾಡಲು ಯೋಗ್ಯವಾಗಿರುತ್ತವೆ. ಹಲಸಿನ ಸಾರು, ಹುರಿದ ಖಾದ್ಯಗಳು, ಹಪ್ಪಳ, ಸಂಡಿಗೆ ಮೊದಲಾದವು ಸಹಾ ರುಚಿಕರವಾಗಿರುತ್ತವೆ. ಹಲಸಿನ ಬೀಜಗಳನ್ನೂ ಬೇಯಿಸಿ ಅಥವಾ ಸುಟ್ಟು ತಿನ್ನುವ ಮೂಲಕ ಹಲವು ಬಗೆಯ ಪೋಷಕಾಂಶಗಳನ್ನು ಪಡೆಯಬಹುದು. ಬನ್ನಿ, ಹಲಸಿನ ಹಣ್ಣನ್ನು ಸೇವಿಸುವ ಮೂಲಕ ಪಡೆಯಬಹುದಾದ ಪೋಷಕಾಂಶಗಳ ಬಗ್ಗೆ ಅರಿಯೋಣ...

   
 
ಹೆಲ್ತ್