Back
Home » ಆರೋಗ್ಯ
ಕಚ್ಚಾ ಮಾವು : ಬೇಸಿಗೆಯ ಆಹಾರದಲ್ಲಿ ಅಳವಡಿಸಿಕೊಳ್ಳಲು ಆರು ಕಾರಣಗಳು
Boldsky | 17th May, 2019 10:38 AM
 • ಬಿಸಿಲಿನ ಝಳ ಮತ್ತು ನಿರ್ಜಲೀಕರಣದಿಂದ ರಕ್ಷಣೆ ಒದಗಿಸುತ್ತದೆ

  ಬೇಸಿಗೆಯಲ್ಲಿ ಹುಳಿಮಾವಿನ ರಸವನ್ನು ಕುಡಿಯುವುದರಿಂದ ಕೇವಲ ಬಾಯಾರಿಕೆ ಮತ್ತು ನಾಲಿಗೆಯ ಚಪಲ ಮಾತ್ರ ತೀರುವುದಲ್ಲ, ಇನ್ನೂ ಕೆಲವು ಪ್ರಯೋಜನಗಳಿವೆ. ಮುಖ್ಯವಾಗಿ ಬೇಸಿಗೆಯ ಬಿಸಿಯಿಂದ ಬೆವರಿನ ಮೂಲಕ ಹೊರಹರಿಯುವ ನೀರಿನಲ್ಲಿ ಹೆಚ್ಚುವರಿ ಸೋಡಿಯಂ ಮತ್ತು ಕಬ್ಬಿಣದ ಅಂಶಗಳು ನಷ್ಟವಾಗದಂತೆ ತಡೆಯುವ ಮೂಲಕ ತಾಪವನ್ನು ತಣಿಸಲು ಹಾಗೂ ನಿರ್ಜಲೀಕರಣಕ್ಕೆ ಒಳಗಾಗುವುದನ್ನು ತಡೆಯುತ್ತದೆ. ಸಾಮಾನ್ಯವಾಗಿ ಬಿಸಿಲಿನ ಧಗೆಗೆ ಹೊರಹರಿಯುವ ಬೆವರಿನ ಮೂಲಕ ಈ ಲವಣಗಳು ಸಹಾ ಹೊರಹರಿದು ದೇಹದಲ್ಲಿ ನೀರಿನಂಶದ ಕೊರತೆಯಾಗುವಂತೆ ಮಾಡುವ ಮೂಲಕ ನಿರ್ಜಲೀಕರಣ ಉಂಟಾಗುತ್ತದೆ.

  Most Read: ಹಲಸಿನ ಹಣ್ಣು-ತುಂಬಾನೇ ರುಚಿಯೇನೋ ಹೌದು, ಆದರೆ ಹೃದಯಕ್ಕೆ ಒಳ್ಳೆಯದೇ?


 • ಹೊಟ್ಟೆಯ ತೊಂದರೆಗಳನ್ನು ನಿವಾರಿಸುತ್ತದೆ

  ಹಸಿ ಮಾವು ಜಠರ ಮತ್ತು ಕರುಳಿನ ತೊಂದರೆಗಳನ್ನು ಸರಿಪಡಿಸುತ್ತದೆ. ವಿಶೇಷವಾಗಿ ಬೇಸಿಗೆಯ ದಿನಗಳಲ್ಲಿಯೇ ಈ ತೊಂದರೆ ಹೆಚ್ಚಾಗುತ್ತದೆ ಹಾಗೂ ಇದನ್ನು ಸರಿಪಡಿಸುವ ಔಷಧಿಯನ್ನು ನಿಸರ್ಗವೇ ಈ ಸಮಯದಲ್ಲಿ ಸಕಾಲಿಕವಾಗಿ ಒದಗಿಸಿರುವುದನ್ನು ಕಾಣಬಹುದು. ಬೇಸಿಗೆಯ ದಿನಗಳಲ್ಲಿ ಎದುರಾಗುವ ಬೆಳಗ್ಗಿನ ವಾಕರಿಕೆ, ಮಲಬದ್ದತೆ, ಅತಿಸಾರ, ಅಜೀರ್ಣತೆ ಹಾಗೂ ಗಂಭೀರರೂಪದ ಅಜೀರ್ಣತೆ (chronic dyspepsia)ಮೊದಲಾದ ತೊಂದರೆಗಳಿಗೆ ಔಷಧಿಯಾಗಿ ಹಸಿಮಾವನ್ನು ಸೇವಿಸಲು ನೀಡಲಾಗುತ್ತದೆ.


 • ಹೃದಯಕ್ಕೂ ಒಳ್ಳೆಯದು

  ಎಲ್ಲರ ನೆಚ್ಚಿನ ಮಾವು ಹೃದಯಕ್ಕೂ ಒಳ್ಳೆಯದೇ ಮಾಡುತ್ತದೆ. ಮಾವಿನಲ್ಲಿರುವ ನಿಯಾಸಿನ್ ಇದನ್ನೊಂದು ಹೃದಯಸ್ನೇಹಿ ಆಹಾರವನ್ನಾಗಿಸಿದೆ. ನಿಯಾಸಿನ್ ಯುಕ್ತ ಆಹಾರ ಸೇವನೆಯಿಂದ ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟಗಳು ಸಮತೋಲನದಲ್ಲಿರುತ್ತವೆ ಹಾಗೂ ಹೃದಯಸಂಬಂಧಿ ತೊಂದರೆಗಳ ಸಾಧ್ಯತೆಯನ್ನು ಕಡಿಮೆಗೊಳಿಸುತ್ತವೆ.


 • ಸ್ಕರ್ವಿ ರೋಗದಿಂದ ಕಾಪಾಡುತ್ತದೆ

  ವಿಟಮಿನ್ ಸಿ ಅಥವಾ ಅಸ್ಕಾರ್ಬಿಕ್ ಆಮ್ಲದ ಕೊರತೆಯಿಂದ ಎದುರಾಗುವ ಸ್ಕರ್ವಿ ರೋಗ (Scurvy) ಎದುರಾದಾಗ ಒಸಡುಗಳಿಂದ ರಕ್ತ ಒಸರುವುದು, ಚರ್ಮದಲ್ಲಿ ಕೆಂಪು ದದ್ದುಗಳೇಳುವುದು, ಅತಿಯಾದ ಆಯಾಸ ಹಾಗೂ ಚೈತನ್ಯವಿಲ್ಲದಿರುವುದು ಮೊದಲಾದವು ಕಾಣಿಸಿಕೊಳ್ಳುತ್ತವೆ. ಈ ತೊಂದರೆಯನ್ನು ನಿವಾರಿಸಲು ಹಸಿ ಮಾವಿನ ಪುಡಿ ಅಥವಾ ಆಮ್ ಚೂರ್ ಸೇವನೆ ಸೂಕ್ತವಾಗಿದೆ. ಈ ಪುಡಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು ಸ್ಕರ್ವಿ ರೋಗವನ್ನು ಶೀಘ್ರವೇ ಗುಣಪಡಿಸುತ್ತದೆ. ಅಲ್ಲದೇ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸಲು ಅಗತ್ಯವಾಗಿರುವ ಪೋಷಕಾಂಶವಾಗಿದೆ. ಅಲ್ಲದೇ ನಮ್ಮ ರಕ್ತನಾಳಗಳ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಿ ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ ಹಾಗೂ ಕೆಂಪುರಕ್ತಕಣಗಳ ಉತ್ಪಾದನೆಯನ್ನೂ ಹೆಚ್ಚಿಸುತ್ತದೆ.


 • ಯಕೃತ್ ಮತ್ತು ಕರುಳುಗಳ ಆರೋಗ್ಯ ವೃದ್ಧಿಸುತ್ತದೆ

  ಹಸಿ ಮಾವಿನ ಸೇವನೆ ನಮ್ಮ ಯಕೃತ್ ಗೆ ಅತ್ಯುತ್ತಮವಾಗಿದೆ ಹಾಗೂ ಈಗಾಗಲೇ ಎದುರಾಗಿದ್ದ ಕಾಯಿಲೆಗಳನ್ನು ಸರಿಪಡಿಸಲು ನೆರವಾಗುತ್ತದೆ. ಹಸಿಮಾವಿನ ತುಂಡನ್ನು ಜಗಿದು ನುಂಗುವ ಮೂಲಕ ಪಿತ್ತರಸಗಳ ಸ್ರವಿಸುವಿಕೆ ಹೆಚ್ಚುತ್ತದೆ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಕರುಳುಗಳಿಗೆ ಲಭ್ಯವಾಗುತ್ತವೆ. ತನ್ಮೂಲಕ ಹೆಚ್ಚು ಹೆಚ್ಚು ಕೊಬ್ಬುಗಳನ್ನು ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೇ ಆಹಾರದಲ್ಲಿದ್ದ ಆಪಾಯಕಾರಿ ಸೂಕ್ಷ್ಮಕ್ರಿಮಿಗಳನ್ನು ಕೊಂದು ವಿಸರ್ಜಿಸಲು ನೆರವಾಗುತ್ತದೆ.

  Most Read:ಅಧ್ಯಯನ ವರದಿ: ಮಾವಿನ ಹಣ್ಣು ಕ್ಯಾನ್ಸರ್ ರೋಗವನ್ನು ನಿಯಂತ್ರಿಸುತ್ತದೆಯಂತೆ!


 • ತಕ್ಷಣವೇ ಶಕ್ತಿಯನ್ನು ಒದಗಿಸುತ್ತದೆ

  ಸಾಮಾನ್ಯವಾಗಿ ಮದ್ಯಾಹ್ನದ ಊಟದ ಬಳಿಕ ಹೆಚ್ಚಿನವರಿಗೆ ನಿದ್ದೆಯ ಜೊಂಪು ಹತ್ತುತ್ತದೆ. ಈ ಸಮಯದಲ್ಲಿ ಚಿಕ್ಕ ಹಸಿ ಮಾವಿನ ತುಂಡನ್ನು ಸೇವಿಸಿದರೆ ಈ ಜೊಂಪು ಇಲ್ಲವಾಗುತ್ತದೆ. ಏಕೆಂದರೆ ಮಾವಿನ ಸೇವನೆಯಿಂದ ದೇಹಕ್ಕೆ ತಕ್ಷಣವೇ ಹೆಚ್ಚಿನ ಶಕ್ತಿ ಲಭಿಸುತ್ತದೆ ಹಾಗೂ ಇದು ಊಟದ ಬಳಿಕವೂ ನಿದ್ದೆಗೆ ಜಾರದಂತೆ ತಡೆದು ಪೂರ್ಣ ಚೈತನ್ಯದಿಂದ ಕಾರ್ಯನಿರ್ವಹಿಸಲು ನೆರವಾಗುತ್ತದೆ.
ಕಚ್ಚಾ ಮಾವು ಅಥವಾ ಇನ್ನೂ ಕಾಯಿಯಾಗಿಯೇ ಹುಳಿಯಾಗಿರುವ ಎಳೆಯ ಮಾವಿನ ಫಲವನ್ನು ನೋಡುತ್ತಿದ್ದಂತೆ ನಮಗೆಲ್ಲಾ ನಮ್ಮ ಬಾಲ್ಯದ ದಿನಗಳು ನೆನಪಾಗುತ್ತವೆ. ವಿಶೇಷವಾಗಿ ಬೇಸಿಗೆಯ ಬಿಸಿಲಿನ, ಬೀಸುವ ಗಾಳಿಯ ಹಾಗೂ ಸುರಿಯುವ ಬೆವರಿನ ದಿನಗಳಲ್ಲಿ ಮಾವಿನ ಕಾಯಿಯನ್ನು ಉಪ್ಪು-ಮೆಣಸಿನ ಪುಡಿ ಬೆರೆಸಿ ತಿಂದಿದ್ದನ್ನು ಮರೆಯಲು ಸಾಧ್ಯವಿಲ್ಲ. ಭಾರತ ಸಮಶೀತೋಷ್ಣ ವಲಯದ ನಾಡಾಗಿದ್ದು ಬೇಸಿಗೆಯ ದಿನಗಳಲ್ಲಿಯೇ ಕೆಲವು ಮರಗಳು ಫಲ ನೀಡುತ್ತವೆ. ಕಲ್ಲಂಗಡಿ, ನೇರಳೆ ಮಾವು ಮೊದಲಾದವು ಇದರಲ್ಲಿ ಪ್ರಮುಖವಾದವು. ಆದರೆ ಇವುಗಳಲ್ಲೆಲ್ಲಾ ಹುಳಿಮಾವಿಗೇ ಹೆಚ್ಚಿನ ಬೇಡಿಕೆ. ಹಸಿ ಮಾವನ್ನು ತುರಿದು ಗೊಟಾಯಿಸಿ ತಯಾರಿಸಿದ 'ಕೇರೀ ಕಾ ಪನ್ನಾ' ಎಂಬ ಶರಬತ್ತು ಈ ಸಮಯದಲ್ಲಿ ಸೇವಿಸಲು ಅತ್ಯಂತ ಅಪ್ಯಾಯಮಾನವಾದ ಪೇಯವಾಗಿದ್ದು ಭಾರತದಾದ್ಯಂತ ಎಲ್ಲರ ನೆಚ್ಚಿನ ಪೇಯವಾಗಿದೆ.

ಬೆಳಿಗ್ಗೆ ಹೆಚ್ಚಿನ ಪ್ರಮಾಣದಲ್ಲಿ ಈ ಶರಬತ್ತನ್ನು ತಯಾರಿಸಿ ಇಡಿಯ ದಿನ ಮನೆಯ ಸದಸ್ಯರ ಮತ್ತು ಅತಿಥಿಗಳ ಬಾಯಾರಿಕೆ ತಣಿಸಲು ಬಳಕೆಯಾಗುತ್ತದೆ. ಇದರ ಜೊತೆಗೇ ಖಟ್ಟಾ ಮೀಠಾ ಎಂಬ ಇನ್ನೊಂದು ಮಂಜುಗಡ್ಡೆಯನ್ನು ತುರಿದು ಹುಣಸೆಹುಳಿಯ ರಸ-ಬೆಲ್ಲ ಬೆರೆಸಿದ ನೀರಿನಲ್ಲಿ ತೋಯ್ದು ತಯಾರಿಸಿದ, ಕಲ್ಲುಪ್ಪು, ಜೀರಿಗೆ ಪುಡಿ, ಶುಂಠಿ ಪುಡಿ ಸಿಂಪಡಿಸಿರುವ ಇನ್ನೊಂದು ಖಾದ್ಯವನ್ನು ಸವಿಯುವುದೆಂದರೆ ಎಲ್ಲಿಲ್ಲದ ಖುಷಿ. ಅಷ್ಟೇ ಅಲ್ಲ, ಬೇಸಿಗೆಯಲ್ಲಿಯೇ ತಳ್ಳುಗಾಡಿಯಲ್ಲಿ ಮಾವಿನ ಕಾಯಿಗಳನ್ನು ಸುಂದರವಾಗಿ ಜೋಡಿಸಿ ಒಂದೆರಡನ್ನು ನೀಳವಾಗಿ ಕತ್ತರಿಸಿ ತುಂಡುಮಾಡಿ ಮಾರುವ ಮಾರಾಟಗಾರರೂ ಕಾಣಸಿಗುತ್ತಾರೆ. ಬೇಸಿಗೆಯಲ್ಲಿ ಬಳಲಿರುವ ಪ್ರಯಾಣಿಕರಿಗೆ ಈ ತಳ್ಳುಗಾಡಿಗಳೆಂದರೆ ಮರುಭೂಮಿಯ ನಡುವೆ ಸಿಗುವ ಓಯಸಿಸ್ ಗಳಂತೆ. ತೆರೆದ ಗಾಡಿಗಳಲ್ಲಿ ಮಾರಲ್ಪಡುತ್ತಿದ್ದರೂ ಸರಿ, ಇವುಗಳು ಆರೋಗ್ಯಕರವೋ ಅಲ್ಲವೇ ಎಂಬ ಅನುಮಾನವೇ ಇಲ್ಲದೇ ನಾವೆಲ್ಲಾ ಹಸಿಮಾವಿನ ತುಂಡುಗಳನ್ನು ಸವಿಯುತ್ತೇವೆ. ನಮ್ಮ ಹಿರಿಯರು ಬೇಸಿಗೆಯ ದಿನದಲ್ಲಿ ವಿಫುಲವಾಗಿ ಸಿಗುತ್ತಿದ್ದ ಮಾವಿನ ಕಾಯಿಗಳನ್ನು ಭರಣಿಗಳಲ್ಲಿ ಉಪ್ಪು ಹಾಕಿ ಇಡುತ್ತಿದ್ದರು. ಇಂದಿನ ದಿನಗಳಲ್ಲಿ ಹಸಿಯಾಗಿದ್ದಂತೆಯೇ ಫ್ರಿಜ್ಜಿನಲ್ಲಿಟ್ಟು ಮುಂದಿನ ದಿನಗಳಿಗಾಗಿ ಇರಿಸಲಾಗುತ್ತಿದೆ. ಈ ಮಾವಿನ ಕಾಯಿಗಳು ಆರೋಗ್ಯಕರವಾಗಿದ್ದು ಇವುಗಳ ಸೇವನೆಯಿಂದ ಲಭಿಸುವ ಪ್ರಯೋಜನಗಳು ಇಂತಿವೆ...

   
 
ಹೆಲ್ತ್