Back
Home » ಆರೋಗ್ಯ
ಮಧುಮೇಹಿಗಳು ಮೊಟ್ಟೆ ತಿನ್ನಬಹುದೇ? ಮಧುಮೇಹಿಗಳಿಗೆ ಸೂಕ್ತವಾದ 7 ಆಹಾರಗಳು
Boldsky | 21st May, 2019 10:59 AM
 • ಮಧುಮೇಹಿಗಳ ಆಹಾರ ಹೀಗಿರಬೇಕು

  "ಒಂದು ವೇಳೆ ರಕ್ತದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿದ್ದರೆ ಹಣ್ಣುಗಳಾದ ಮಾವು ಮತ್ತು ಬಾಳೆಹಣ್ಣುಗಳು ಸಹಾ ಮಧುಮೇಹಿಗಳು ಸೇವಿಸಬಹುದು. ಮಧುಮೇಹಿಗಳ ಆಹಾರವನ್ನು ಪರಿಗಣಿಸುವಾಗ ಇದರಲ್ಲಿ ಅತಿ ಹೆಚ್ಚು ಸಕ್ಕರೆಯೂ ಇರಬಾರದು ಅಥವಾ ತೀರಾ ಕಡಿಮೆ ಸಕ್ಕರೆಯೂ ಇರಬಾರದು. ಅಲ್ಲದೇ ಎಷ್ಟು ಪ್ರಮಾಣದ ಆಹಾರವನ್ನು ಸೇವಿಸಿದರು ಎಂಬುದನ್ನೂ ಪರಿಗಣಿಸಬೇಕಾಗುತ್ತದೆ. ಒಂದು ವೇಳೆ ಒಂದೇ ಬಾರಿ ಒಂದು ಕೇಜಿ ಕಲ್ಲಂಗಡಿ ಹಣ್ಣನ್ನು ತಿಂದರೆ ಕೆಲವೇ ನಿಮಿಷಗಳಲ್ಲಿ ರಕ್ತದಲ್ಲಿ ಸಕ್ಕರೆಯ ಮಟ್ಟ ಮಿತಿಮೀರಿ ಏರಿರುತ್ತದೆ. ಆದರೆ ಒಂದು ತುಂಡು ಮಾವಿನ ಹಣ್ಣನ್ನು ಸೇವಿಸಿದರೆ, ಇದರಲ್ಲಿ ಸಕ್ಕರೆಯ ಸಾಂದ್ರತೆ ಹೆಚ್ಚಿದ್ದರೂ ಸೇವಿಸುವ ಪ್ರಮಾಣ ಕಡಿಮೆ ಇರುವ ಮೂಲಕ ರಕ್ತದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಣದ ಮಟ್ಟಕ್ಕಿಂತೇನೂ ಏರಲಾರದು. ಹಾಗಾಗಿ, ಮಧುಮೇಹಿಗಳು ತಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಣದ ಮಟ್ಟಕ್ಕೂ ಕೆಳಕ್ಕಿರಿಸುವಂತೆ ತಮ್ಮ ಆಹಾರ ಮತ್ತು ಪ್ರಮಾಣವನ್ನು ಆಯ್ದುಕೊಳ್ಳುವುದು ಜಾಣತನದ ಕ್ರಮವಾಗಿದೆ. ಈ ಮೂಲಕ ಒಂದು ಬಾರಿಯ ಆಹಾರ ಸೇವನೆಯಲ್ಲಿ ದೇಹ ಪಡೆಯುವ ಕ್ಯಾಲೋರಿಗಳು ಮತ್ತು ಸಕ್ಕರೆಯ ಅಂಶವೇ ಪ್ರಮುಖವಾಗುತ್ತದೆಯೇ ವಿನಃ ಪ್ರತಿ ಬಾರಿ ಎಷ್ಟು ಪ್ರಮಾಣದ ಆಹಾರ ಸೇವಿಸುತ್ತೀದಿ ಎಂಬುದಾಗಿ ಅಲ್ಲ" ಬನ್ನಿ, ಈಗ ಮಧುಮೇಹಿಗಳು ಸುರಕ್ಷಿತವಾಗಿ ಸೇವಿಸಬಹುದಾದ ಏಳು ಅತ್ಯುತ್ತಮಾ ಆಹಾರಗಳ ಬಗ್ಗೆ ಅರಿಯೋಣ...


 • ಮೊಟ್ಟೆಗಳು

  ಇತ್ತೀಚಿನ ಅಧ್ಯಯನಗಳ ಪ್ರಕಾರ ಟೈಪ್ 2 ಮಧುಮೇಹ ಇರುವ ವ್ಯಕ್ತಿಗಳು ವಾರದಲ್ಲಿ ಸುಮಾರು ಹನ್ನೆರಡು ಮೊಟ್ಟೆಗಳನ್ನು ಸುರಕ್ಷಿತವಾಗಿ ಸೇವಿಸಬಹುದು. ಮೊಟ್ಟೆಯ ಸೇವನೆಯಿಂದ ರಕ್ತದಲ್ಲಿ ಸಕ್ಕರೆಯ ಮಟ್ಟ ಥಟ್ಟನೇ ಏರುವುದಿಲ್ಲ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಸಾಧ್ಯತೆಯೂ ಏರುವುದಿಲ್ಲ ಮತ್ತು ತೂಕ ಏರದಂತೆಯೂ ತಡೆಯುತ್ತದೆ. ಈ ಮಾಹಿತಿ ಇದುವರೆಗೆ ಹೆಚ್ಚಿನವರು ತಿಳಿದಿರುವ ಮಾಹಿತಿಗೆ ವ್ಯತಿರಿಕ್ತವಾಗಿದ್ದು ಈ ಗೊಂದಲವನ್ನು ಆರೋಗ್ಯ ತಜ್ಞರು ಹೀಗೆ ವಿವರಿಸುತ್ತಾರೆ: "ವಾಸ್ತವದಲ್ಲಿ ಮೊಟ್ಟೆಗಳು ಅಧಿಕ ಪ್ರೋಟೀನ್ ಯುಕ್ತ ಆಹಾರವಾಗಿದ್ದು ಪ್ರತಿಯೊಬ್ಬರಿಗೂ ಸೂಕ್ತವಾಗಿದೆ. ಆದರೆ ಮೊಟ್ಟೆಯಲ್ಲಿ ಕೊಂಚ ಅಧಿಕ ಪ್ರಮಾಣದ ಕ್ಯಾಲೋರಿಗಳು ಮತ್ತು ಕೊಂಚ ಪ್ರಮಾಣದ ಕೊಬ್ಬುಗಳೂ ಇವೆ. ಹಾಗಾಗಿ ಮೊಟ್ಟೆಗಳನ್ನು ಮಿತಪ್ರಮಾಣದಲ್ಲಿಯೇ ಸೇವಿಸಬೇಕು. ಹೆಚ್ಚು ಪ್ರಮಾಣದ ಮೊಟ್ಟೆಗಳನ್ನು ಒಮ್ಮೆಲೇ ಸೇವಿಸಬೇಕಾಗಿ ಬಂದರೆ ಇತರ ಆಹಾರಗಳ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬೇಕಾಗುತ್ತದೆ. ಈ ಪ್ರಕಾರ ಆಹಾರದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಒಂದು ವೇಳೆ ನಿತ್ಯವೂ ಮೊಟ್ಟೆಯನ್ನು ಸೇವಿಸಿಯೂ ಆರೋಗ್ಯಕರ ಸಕ್ಕರೆಯ ಮಟ್ಟಗಳನ್ನು ಕಾಪಾಡಿಕೊಂಡು ಬಂದರೆ ಇದರಿಂದೇನೋ ತೊಂದರೆಯಾಗದು. ದಿನಕ್ಕೆ ಒಂದರಿಂದ ಎರಡು ಮೊಟ್ಟೆಗಳು, ಅದೂ ಹಳದಿಭಾಗದ ಸಹಿತ, ಸೇವಿಸಿದರೆ ಏನೂ ತೊಂದರೆಯಿಲ್ಲ"

  Most Read: ಮಧುಮೇಹಿಗಳು ಬಾಳೆಹಣ್ಣು ಸೇವಿಸಬಹುದೇ? ಇದರಿಂದ ಏನಾದರೂ ತೊಂದರೆ ಇದೆಯೇ?


 • ಕೊಬ್ಬುಯುಕ್ತ ಮೀನುಗಳು

  ಸಾಲ್ಮನ್, ಬೂತಾಯಿ, ಬಂಗಡೆ ಹಾಗೂ ಹೆರ್ರಿಂಗ್ ನಂತಹ ಮೀನುಗಳು ಈ ವಿಶ್ವದಲ್ಲಿಯೇ ಅತಿ ಆರೋಗ್ಯಕರ ಆಹಾರಗಳಾಗಿವೆ. ಇವುಗಳಲ್ಲಿ ಗರಿಷ್ಟ ಪ್ರಮಾಣದ ಒಮೆಗಾ 3 ಕೊಬ್ಬಿನ ಆಮ್ಲಗಳಿದ್ದು ಈ ಪೋಷಕಾಂಶ ಹೃದಯದ ಆರೋಗ್ಯಕ್ಕೆ ಅತಿ ಅವಶ್ಯವಾಗಿದೆ. ವಿಶೇಷವಾಗಿ ಹೃದಯ ಸ್ತಂಭನ ಹಾಗೂ ಕಾಯಿಲೆಗಳ ಸಾಧ್ಯತೆ ಅಧಿಕ ಇರುವ ವ್ಯಕ್ತಿಗಳಿಗೆ ಹೆಚ್ಚು ಅಗತ್ಯವಾಗಿವೆ. ಅಲ್ಲದೇ ಈ ಮೀನುಗಳಲ್ಲಿ ಕಡಿಮೆ ಕೊಬ್ಬಿನ ಪ್ರೋಟೀನ್ ಸಹಾ ಉತ್ತಮ ಪ್ರಮಾಣದಲ್ಲಿದ್ದು ಅಗತ್ಯ ಪ್ರಮಾಣದ ಕ್ಯಾಲೋರಿಗಳನ್ನು ಒದಗಿಸುತ್ತವೆ. ಈ ಆಹಾರವನ್ನು ಸೇವಿಸಿದ ಬಳಿಕ ಹೆಚ್ಚಿನ ಹೊತ್ತಿನವರೆಗೆ ಹೊಟ್ಟೆ ತುಂಬಿರುವ ಭಾವನೆ ಮೂಡಿ ಅನಗತ್ಯ ಅಹಾರ ಸೇವನೆ ತಡೆದಂತಾಗುತ್ತದೆ ಹಾಗೂ ಜೀವ ರಾಸಾಯನಿಕ ಕ್ರಿಯೆಯೂ ಉತ್ತಮಗೊಳ್ಳುತ್ತದೆ.


 • ಹಸಿರು ಮತ್ತು ದಪ್ಪನೆಯ ಎಲೆಗಳ ತರಕಾರಿಗಳು

  ಈ ತರಕಾರಿಗಳಲ್ಲಿ ಕ್ಯಾಲೋರಿಗಳು ಕಡಿಮೆ ಇದ್ದು ಇತರ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಈ ತರಕಾರಿಗಳಲ್ಲಿ ಸುಲಭವಾಗಿ ಜೀರ್ಣವಾಗಿ ಶೀಘ್ರವೇ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಏರಿಸಬಲ್ಲ ಕಾರ್ಬೋಹೈಡ್ರೇಟುಗಳು ಕಡಿಮೆ ಇದ್ದು ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತವೆ. ಈ ತರಕಾರಿಗಳಲ್ಲಿ ಉತ್ತಮ ಪ್ರಮಾಣದ ಸತು, ಕ್ಯಾಲ್ಸಿಯಂ, ಮೆಗ್ನೇಶಿಯಂ ಹಾಗೂ ವಿಟಮಿನ್ ಸಿ ಇವೆ. ಇತ್ತೀಚಿನ ಅಧ್ಯಯನವೊಂದರ ಪ್ರಕಾರ ವಿಟಮಿನ್ ಸಿ ಯುಕ್ತ ಆಹಾರಗಳನ್ನು ಸೇವಿಸುವ ಮೂಲಕ ಟೈಪ್ 2 ಮಧುಮೇಹಿಗಳ ರಕ್ತದ ಸಕ್ಕರೆಯ ಮಟ್ಟ ಇಳಿಕೆಯಾಗುತ್ತದೆ. ಅಲ್ಲದೇ ಈ ಅಹಾರಗಳು ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು ಹಾಗೂ ರೋಗ ನಿರೋಧಕ ಶಕ್ತಿ ಉತ್ತಮಗೊಂಡು ಮಧುಮೇಹ ಉಲ್ಬಣಗೊಂಡು ಎದುರಾಗುವ ಇತರ ತೊಂದರೆಗಳ ಸಾಧ್ಯತೆಯನ್ನೂ ಕಡಿಮೆಗೊಳಿಸುತ್ತವೆ.


 • ಚಿಯಾ ಬೀಜಗಳು

  ಮಧುಮೇಹಿಗಳಿಗೆ ಈ ಬೀಜಗಳು ಅತ್ಯುತ್ತಮ ಆಹಾರವಾಗಿವೆ. ಇವುಗಳಲ್ಲಿ ಹೆಚ್ಚಿನ ಪ್ರಮಾಣದ ಕರಗದ ನಾರು ಹಾಗೂ ಅತಿ ಕಡಿಮೆ ಪ್ರಮಾಣದ ಕಾರ್ಬೋಹೈಡ್ರೇಟುಗಳಿವೆ. ಸುಮಾರು ಇಪ್ಪತ್ತೆಂಟು ಗ್ರಾಂ ಚಿಯಾ ಬೀಜಗಳನ್ನೊಳಗೊಂಡ ಆಹಾರದ ಒಂದು ಪ್ರಮಾಣದಲ್ಲಿ ಸುಮಾರು ಹನ್ನೆರಡು ಗ್ರಾಂ ಕರಗದ ನಾರು ಇದೆ. ಈ ನಾರು ಆಹಾರವನ್ನು ಅತಿ ನಿಧಾನವಾಗಿ ಜೀರ್ಣಗೊಳ್ಳುವಂತೆ ಮಾಡುವ ಮೂಲಕ ರಕ್ತದಲ್ಲಿ ಸಕ್ಕರೆ ಸೇರ್ಪಡೆಗೊಳ್ಳುವುದನ್ನೂ ನಿಧಾನಗೊಳಿಸುತ್ತದೆ. ಅಲ್ಲದೇ ಈ ನಾರು ಹೆಚ್ಚು ಹೊತ್ತು ಹೊಟ್ಟೆ ತುಂಬಿರುವ ಭಾವನೆ ಮೂಡಿಸಿ ಅನಗತ್ಯ ಆಹಾರಸೇವನೆಯಿಂದ ತಡೆಯುತ್ತದೆ. ತನ್ಮೂಲಕ ಕ್ಯಾಲೋರಿಗಳ ಸೇವನೆಯನ್ನೂ ಮಿತವಾಗಿಸಿ ಆರೋಗ್ಯಕರ ಬಿ ಎಂ ಐ ಪಡೆಯಲು ನೆರವಾಗುತ್ತದೆ.

  ಈ ಬೀಜಗಳು ನೋಡಲು ಚಿಕ್ಕದಾದರೂ, ಕಾರುಬಾರು ಮಾತ್ರ ದೊಡ್ಡದು!!


 • ಗ್ರೀಕ್ ಮೊಸರು (Greek yogurt)

  ಮಧುಮೇಹಿಗಳಿಗೆ ಉತ್ತಮ ಆಯ್ಕೆಯಾಗಿರುವ ಇನ್ನೊಂದು ಆಹಾರವೆಂದರೆ ಗ್ರೀಕ್ ಮೊಸರು. ಇದರ ಸೇವನೆಯಿಂದ ರಕ್ತದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿರಿಸಲು ಸಾಧ್ಯವಾಗುತ್ತದೆ ಹಾಗೂ ಇದರಲ್ಲಿರುವ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳ ಕಾರಣ ಹೃದಯದ ಕಾರ್ಯಕ್ಷಮತೆಯೂ ಅತ್ಯುತ್ತಮವಾಗಿರುತ್ತದೆ. ಅಧ್ಯಯನಗಳ ಮೂಲಕ ಕಂಡುಕೊಂಡಂತೆ ತೂಕ ಇಳಿಸಲು ಹಾಗೂ ದೇಹದಾರ್ಢ್ಯವನ್ನು ಹೆಚ್ಚಿಸಲು ಯತ್ನಿಸುವ ಟೈಪ್ 2 ಮಧುಮೇಹಿ ವ್ಯಕ್ತಿಗಳಿಗೆ ಈ ಮೊಸರು ಉತ್ತಮ ಆಯ್ಕೆಯಾಗಿದೆ. ಈ ಮೊಸರಿನ ಸವಿಯನ್ನು ಹೆಚ್ಚಿಸಲು ಕೊಂಚ ಪ್ರಮಾಣದ ಹಣ್ಣುಗಳ ತುಂಡುಗಳನ್ನು ಸೇರಿಸಬಹುದು, ಆದರೆ ನಿಮ್ಮ ಆರೋಗ್ಯಕ್ಕೆ ಮಿತವಾಗಿರುವ ಪ್ರಮಾಣದಲ್ಲಿ ಮಾತ್ರ.


 • ಸ್ಟ್ರಾಬೆರಿಗಳು

  ಮಧುಮೇಹಿಗಳು ಸುರಕ್ಷಿತವಾಗಿ ಸೇವಿಸಬಹುದಾದ ಹಣ್ಣು ಎಂದರೆ ಸ್ಟ್ರಾಬೆರಿ. ಇದರಲ್ಲಿ ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟುಗಳು ಉತ್ತಮ ಪ್ರಮಾಣದಲ್ಲಿವೆ. ವಿಶೇಷವಾಗಿ ಸ್ಟ್ರಾಬೆರಿಯಲ್ಲಿರುವ ಆಂಥೋಸೈಯಾನಿನ್ ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ ಹಾಗೂ ಕೊಲೆಸ್ಟ್ರಾಲ್ ಮಟ್ಟಗಳನ್ನೂ ತಗ್ಗಿಸುತ್ತದೆ. ಅಲ್ಲದೇ ವಿಶೇಷವಾಗಿ ಟೈಪ್ 2 ಮಧುಮೇಹಿಗಳಲ್ಲಿ ಹೃದಯ ಸಂಭನದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.


 • ಅಗಸೆ ಬೀಜಗಳು (Flax seeds)

  ಮಧುಮೇಹಿಗಳಿಗೆ ಅಗಸೆ ಬೀಜಗಳೂ ಅತ್ಯುತ್ತಮ ಆಯ್ಕೆಯಾಗಿದೆ. ಇದರಲ್ಲಿರುವ ಕರಗದ ನಾರಿನಲ್ಲಿ ಲಿಂಗ್ಯಾನ್ಸ್ (lingans) ಎಂಬ ಪೋಷಕಾಂಶವಿದ್ದು ಇವು ಹೃದಯದ ಕಾಯಿಲೆಗಳ ಸಾಧ್ಯತೆಯನ್ನು ತಗ್ಗಿಸುತ್ತವೆ ಹಾಗೂ ರಕ್ತದಲ್ಲಿ ಸಕ್ಕರೆಯ ಮಟ್ಟಗಳನ್ನು ನಿಯಂತ್ರಣದಲ್ಲಿರಿಸುತ್ತವೆ. ಇದರ ನಾರು ಜೀರ್ಣಿಸಿಕೊಳ್ಳಲು ಹೆಚ್ಚು ಹೊತ್ತು ತೆಗೆದುಕೊಳ್ಳುವ ಕಾರಣ ಹೆಚ್ಚಿನ ಸಮಯದವರೆಗೆ ಹೊಟ್ಟೆ ತುಂಬಿರುವ ಅನುಭವದಿಂದ ಅನಗತ್ಯ ಆಹಾರ ಸೇವನೆ ತಡೆಯುತ್ತದೆ ಹಾಗೂ ಜೀರ್ಣಾಂಗಗಳ ಕ್ಷಮತೆಯನ್ನು ಉತ್ತಮಗೊಳಿಸುತ್ತದೆ ಹಾಗೂ ಇನ್ಸುಲಿನ್ ಸಂವೇದನಾಶೀಲತೆಯನ್ನು ಉತ್ತಮಗೊಳಿಸುತ್ತದೆ. ಇದರ ಪೂರ್ಣ ಪ್ರಯೋಜನವನ್ನು ಪಡೆಯಲು ಅಗಸೆ ಬೀಜಗಳನ್ನು ಮೂಲರೂಪದಲ್ಲಿಯೂ ಸೇವಿಸಬಹುದು ಅಥವಾ ಕುಟ್ಟಿ ಪುಡಿ ಮಾಡಿ ಆಹಾರದಲ್ಲಿ ಬೆರೆಸಿಯೂ ಸೇವಿಸಬಹುದು.
ಮಧುಮೇಹ ಎದುರಾದ ಬಳಿಕ ಜೀವನ ಹಿಂದಿನಷ್ಟು ಸುಲಭವಾಗಿರುವುದಿಲ್ಲ. ಪ್ರಮುಖವಾಗಿ ಆಹಾರ ಸೇವನೆಯಲ್ಲಿ ಕಟ್ಟುನಿಟ್ಟು ಪಾಲಿಸಬೇಕಾಗುವುದು. ಸಕ್ಕರೆ ಇರಬಾರದು, ಕಾರ್ಬೋಹೈಡ್ರೇಟ್ ಇರಬಾರದು, ಒಟ್ಟಾರೆ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಏರಿಸುವಂತಹ ಅಂಶವಿರಬಾರದು, ಈ ವಿಷಯಗಳನ್ನು ಪರಿಶೀಲಿಸಿಯೇ ಆಹಾರವನ್ನು ಆಯ್ಕೆ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಹೆಚ್ಚಿನವರಿಗೆ ತಮಗೆ ಯಾವುದು ಈಗ ಸಲ್ಲುತ್ತದೆ ಮತ್ತು ಸಲ್ಲುವುದಿಲ್ಲ ಎಂಬ ಮಾಹಿತಿಯನ್ನು ನೆನಪಿಟ್ಟುಕೊಳ್ಳುವುದೇ ದೊಡ್ಡ ಸಮಸ್ಯೆ. ಮಧುಮೇಹಿಗಳಿಗೆ ಆಹಾರದಲ್ಲಿ ಈ ಕಟ್ಟುನಿಟ್ಟು ಏಕಿದೆ ಎಂದರೆ ಇವರ ರಕ್ತದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿರಿಸಿ ಮಧುಮೇಹವನ್ನು ನಿಯಂತ್ರಿಸುವುದೇ ಆಗಿದೆ. ಈ ಮೂಲಕ ಮಧುಮೇಹದಿಂದ ಎದುರಾಗಬಹುದಾದ ಇತರ ಗಂಭೀರ ಸಮಸ್ಯೆಗಲಾದ ಹೃದಯ ಸಂಬಂಧಿ ತೊಂದರೆ, ಕಣ್ಣಿನಲ್ಲಿ ಹೂವು ಮೊದಲಾದವುಗಳು ಆವರಿಸುವ ಸಾಧ್ಯತೆಯನ್ನು ಕಡಿಮೆಯಾಗಿಸಬಹುದು.

ಹಾಗಾಗಿ ಮಧುಮೇಹವನ್ನು ನಿಯಂತ್ರಣದಲ್ಲಿರಿಸಲು ಆಹಾರಕ್ರಮ ಆರೋಗ್ಯಕರ ಹಾಗೂ ರಕ್ತದ ಸಕ್ಕರೆಯ ಮಟ್ಟವನ್ನು ಸಮತೋಲನ ದಲ್ಲಿರಿಸುವಂತಹದ್ದೇ ಆಗಿರಬೇಕು. ಈ ಬಗ್ಗೆ ಆಹಾರತಜ್ಞರ ಪ್ರಕಾರ "ಒಂದು ವೇಳೆ ಮಧುಮೇಹಿಗಳ ರಕ್ತದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿದ್ದರೆ ಇವರು ತರಕಾರಿಗಳನ್ನು ಸೇವಿಸಬಹುದು. ಸಸ್ಯಜನ್ಯ ಪ್ರೋಟೀನ್ ಇರುವ ಕಾಳುಗಳು ಮಧುಮೇಹಿಗಳಿಗೆ ಅತ್ಯುತ್ತಮ ಆಯ್ಕೆಯಾಗಿವೆ. ಉಳಿದಂತೆ ಕಡಿಮೆ ಕೊಬ್ಬಿನ, ಪ್ರೋಟೀನ್ ಯುಕ್ತ ಮಾಂಸಾಹಾರಗಳಾದ ಮೀನು ಮತ್ತು ಕೋಳಿಮಾಂಸವನ್ನು ಕೊಂಚ ಪಮಾಣದಲ್ಲಿ ಸೇವಿಸಿದರೂ ಸುರಕ್ಷಿತವಾಗಿದೆ"

 
ಹೆಲ್ತ್