Back
Home » ಆರೋಗ್ಯ
ಪ್ರತಿ ದಿನದ ಇಂತಹ ಕೆಟ್ಟ ಹವ್ಯಾಸಗಳೇ ನಿಮ್ಮ ಮೂಳೆಗಳಿಗೆ ಮಾರಕ !!!
Boldsky | 21st May, 2019 08:00 PM
 • ನಮ್ಮ ಮೂಳೆಗಳ ರಕ್ಷಣೆ ಮಾಡುವುದು ಹೇಗೆ ?

  ನಾವು ಬೆಳಗ್ಗೆ ಏಳುವಾಗಿನಿಂದ ನಮ್ಮ ಪ್ರತಿದಿನದ ಕೆಲಸ ಕಾರ್ಯಗಳನ್ನು ಶುರುಮಾಡುವುದು ನಮ್ಮ ದೇಹದಲ್ಲಿನ ಮೂಳೆಗಳ ಸಹಾಯದಿಂದ . ಆದರೆ ಅವುಗಳ ರಕ್ಷಣೆಯ ವಿಷಯಕ್ಕೆ ಬಂದರೆ ಮಾತ್ರ ನಾವು ನಿರ್ಲಕ್ಷ್ಯ ಮಾಡಿ ಸುಮ್ಮನಾಗುತ್ತೇವೆ . ಮೂಳೆಗಳ ಬಗ್ಗೆ ವಯಸ್ಸಾದ ಮೇಲೆ ತಲೆ ಕೆಡಿಸಿಕೊಂಡರಾಯಿತು ಎಂದು ತಾತ್ಸಾರ ಭಾವದಿಂದ ಅದನ್ನು ಅಲ್ಲಗಳೆಯುತ್ತೇವೆ . ಇಲ್ಲೇ ನಾವು ಎಡವುವುದು . ಏಕೆಂದರೆ ನಮ್ಮ ಎಲ್ಲಾ ಕೆಲಸಗಳಲ್ಲೂ ಸಹಾಯ ಮಾಡುವ ಮೂಳೆಗಳು ಒಳಗೊಳಗೇ ಸವೆಯತೊಡಗಿರುತ್ತವೆ . ಆದರೆ ನಾವು ಗಟ್ಟಿಮುಟ್ಟಾಗಿದ್ದಾಗ ಅದರ ಪ್ರಭಾವವೇನೂ ನಮ್ಮ ದೇಹದ ಮೇಲೆ ಆಗುವುದಿಲ್ಲ . ನಮಗೆ ಯಾವ ಕುರುಹಾಗಲೀ ಅಥವಾ ನೋವೂ ಕೂಡ ಕಾಣಿಸುವುದಿಲ್ಲ . ಎಲ್ಲಾ ರೀತಿಯ ಮೂಳೆ ಅಥವಾ ಕೀಲು ನೋವು ನಮ್ಮನ್ನು ಕಿತ್ತು ತಿನ್ನುವುದು ನಮಗೆ ಸ್ವಲ್ಪ ವಯಸ್ಸಾಗುತ್ತಿದ್ದಂತೆ . ಆಗ ಅನ್ನಿಸುತ್ತದೆ . ನಾನು ನಿನ್ನೆ ಮೊನ್ನೆ ಯಾವ ಭಾರ ಎತ್ತುವ ಕೆಲಸವಾಗಲೀ ಅಥವಾ ಕಷ್ಟದ ಕೆಲಸವಾಗಲೀ ಮಾಡಿಯೇ ಇಲ್ಲ . ಆದರೂ ಈ ನೋವು ಏಕೆ ಬಂತಪ್ಪಾ ಎಂದು ಬೈದುಕೊಂಡು ಓಡಾಡುತ್ತಿರುತ್ತೇವೆ . ಇತ್ತೀಚೆಗಂತೂ ಯಾರೊಬ್ಬರ ಬಾಯಲ್ಲೂ ಕಾಲು ನೋವು , ಮಂಡಿ ನೋವು ಎಂಬ ಮಾತೇ ಕೇಳುತ್ತೇವೆ . ಇದನ್ನೇ ವೈದ್ಯಕೀಯ ಭಾಷೆಯಲ್ಲಿ " ಓಸ್ಟೆಯೋಪೋರೊಸಿಸ್ " ಎಂದು ಕರೆಯುತ್ತಾರೆ . ಓಸ್ಟೆಯೋಪೋರೊಸಿಸ್ ಬಂದವರ ಮೂಳೆಗಳು ಅಷ್ಟು ಗಟ್ಟಿಮುಟ್ಟಾಗಿರುವುದಿಲ್ಲ . ತುಂಬಾ ದುರ್ಬಲವಾಗಿರುತ್ತವೆ . ಸಣ್ಣ ಏಟಾದರೂ ಮೂಳೆ ಮುರಿಯುತ್ತವೆ . ಓಸ್ಟೆಯೋಪೋರೊಸಿಸ್ ನಿಧಾನವಾಗಿ ನಮಗರಿವಿಲ್ಲದಂತೆ ನಮ್ಮ ದೇಹವನ್ನು ದುರ್ಬಲಗೊಳಿಸುತ್ತಾ ಹೋಗುತ್ತದೆ . ಹಾಗಾದರೆ ಇದನ್ನು ನಾವು ಹೇಗೆಲ್ಲಾ ನಮ್ಮ ಕೆಟ್ಟ ಜೀವನ ಶೈಲಿಗಳಿಂದ ಬೆಳೆಸಿಕೊಳ್ಳುತ್ತೇವೆ ಎಂಬುದನ್ನು ನೋಡೋಣ....

  Most Read: ಸದೃಢವಾದ ಮೂಳೆಗಳಿಗಾಗಿ ಅತ್ಯುತ್ತಮವಾದ ವ್ಯಾಯಾಮಗಳು


 • ಸೂರ್ಯನ ಕಿರಣಗಳಿಂದ ದೂರವಿರುವುದು

  ಇದೊಂದು ಎಲ್ಲರಲ್ಲೂ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿರುವ ವಿಷಯವಾಗಿದೆ . ಏಕೆಂದರೆ ಒತ್ತಡದ ಹಾಗು ಸಮಯದ ಆಭಾವದಿಂದ ಜನರು ಬೆಳಗ್ಗೆ ವಾಕಿಂಗ್ ಮಾಡುವುದನ್ನೇ ಮರೆತಿದ್ದಾರೆ . ಇದರ ಕಾರಣ ಎಳೆ ಬಿಸಿಲಿನಲ್ಲಿ ಮೈಯೊಡ್ಡುವುದು ಇಲ್ಲದಾಗಿ ನಮ್ಮ ಮೂಳೆಗಳಿಗೆ ಬೇಕಾದ ವಿಟಮಿನ್ 'ಡಿ' ಕೊರತೆಯಾಗುತ್ತದೆ . ಸಾಮಾನ್ಯವಾಗಿ ವಿಟಮಿನ್ ' ಡಿ ' ನಮ್ಮ ದೇಹದ ಮೂಳೆಗಳ ರಕ್ಷಣೆ ಮಾಡಿ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ . " ಅಮೆರಿಕನ್ ನ್ಯಾಷನಲ್ ಓಸ್ಟೆಯೋಪೋರೊಸಿಸ್ ಫೌಂಡೇಶನ್ " ನ ಪ್ರಕಾರ ಒಂದು ದಿನಕ್ಕೆ 50 ವರ್ಷ ಒಳಗಿನವರಿಗೆ 400 IU ನಿಂದ 800 IU ಮತ್ತು 50 ವರ್ಷ ಮೇಲ್ಪಟ್ಟಿರುವವರಿಗೆ ಸುಮಾರು 800 IU ನಿಂದ 1000 IU ವರೆಗೆ ವಿಟಮಿನ್ ' ಡಿ ' ಅವಶ್ಯಕತೆಯಿರುತ್ತದೆ. ಒಂದು ವೇಳೆ ನಿಮ್ಮ ದೇಹಕ್ಕೆ ವಿಟಮಿನ್ ' ಡಿ ' ಕೊರತೆಯಾಗಿದ್ದರೆ , ನಿಮ್ಮ ವೈದ್ಯರ ಬಳಿಯಲ್ಲಿ ಸಪ್ಲಿಮೆಂಟ್ಗಳನ್ನು ಕೇಳಿ ಪಡೆಯಿರಿ .


 • ಸೋಮಾರಿತನದಿಂದ ಮೂಳೆಗಳು ದುರ್ಬಲಗೊಳ್ಳುತ್ತವೆ

  ನಮಗೆಲ್ಲಾ ತಿಳಿದಿರುವ ಹಾಗೆ ನಾವು ಎಷ್ಟು ಮೈ ಬಗ್ಗಿಸಿ ಕೆಲಸ ಮಾಡುತ್ತೇವೋ ಅಷ್ಟೂ ನಮ್ಮ ದೇಹ ಸದೃಢವಾಗುತ್ತದೆ . ಇದು ಮೂಳೆಗಳ ವಿಚಾರದಲ್ಲೂ ಅಷ್ಟೇ . ಇತ್ತೀಚಿಗೆ ಕೆಲಸದ ಬದಲು ವ್ಯಾಯಾಮ ಮಾಡುವ ಹವ್ಯಾಸ ರೂಢಿ ಮಾಡಿಕೊಂಡಿದ್ದೇವೆ . ವ್ಯಾಯಾಮ ಮಾಡಿದಷ್ಟೂ ನಮ್ಮ ಮೂಳೆಗಳು ಬಲಗೊಳ್ಳುತ್ತವೆ . ಇಷ್ಟು ತಿಳಿದ ಮೇಲೆ ಆರಾಮವಾಗಿ ಮಂಚದ ಮೇಲೆ ಮಲಗಿಕೊಂಡು ಒದ್ದಾಡುವ ಬದಲು ವಾಕಿಂಗ್ , ರನ್ನಿಂಗ್ , ಡಾನ್ಸ್ ಅಥವಾ ಇನ್ನೇನಾದರೂ ಮಾಡಿ . ಒಟ್ಟಿನಲ್ಲಿ ಸೋಮಾರಿಯಾಗಿರುವುದನ್ನು ಬಿಟ್ಟು ಸದಾ ಸಕ್ರೀಯವಾಗಿರಿ .


 • ಸ್ಮೋಕಿಂಗ್ ಅಥವಾ ಧೂಮಪಾನ

  ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂಬ ತಿಳುವಳಿಕೆ ಮಾಹಿತಿಯನ್ನು ನಾವು ಎಲ್ಲಾ ಕಡೆ ನೋಡಿರುತ್ತೇವೆ . ಖಂಡಿತ , ಧೂಮಪಾನ ಕೇವಲ ಶ್ವಾಸಕೋಶಕ್ಕೆ ಮಾತ್ರ ಹಾನಿ ಮಾಡುವುದಲ್ಲದೆ ದೇಹದ ಮೂಳೆಗಳಿಗೂ ಹಾನಿ ಉಂಟು ಮಾಡುತ್ತವೆ . ಧೂಮಪಾನದಿಂದ ಓಸ್ಟೆಯೋಪೋರೊಸಿಸ್ ಸಮಸ್ಯೆ ಹೆಚ್ಚಾಗುತ್ತದೆ . ಧೂಮಪಾನ ಮಾಡುವುದರಿಂದ ಆಸ್ಟಿಯೋಬ್ಲಾಸ್ಟ್ ( ಮೂಳೆ ಬೆಳೆಯುವ ಪ್ರಕ್ರಿಯೆ ) ಮತ್ತು ಆಸ್ಟೆಯೋಕ್ಲಾಸ್ಟ್ ( ಹಳೆಯದಾದ ಮೂಳೆಗಳ ಬದಲಾವಣೆ)ಗೆ ತೊಂದರೆ ಉಂಟಾಗಿ ಮೂಳೆಗಳು ದುರ್ಬಲಗೊಳ್ಳುತ್ತವೆ .


 • ಆಲ್ಕೋಹಾಲ್ ಮತ್ತು ಸೋಡಾದ ಸೇವನೆ ನಿಮ್ಮ ಮೂಳೆಗಳಿಗೆ ವೇದನೆ

  ಧೂಮಪಾನದಂತೆ ಮಧ್ಯಪಾನ ಕೂಡ ಆರೋಗ್ಯಕ್ಕೆ ಹಾನಿಕರ . ಅತಿ ಹೆಚ್ಚು ಮದ್ಯಪಾನ ಸೇವನೆಯಿಂದ ಕ್ಯಾಲ್ಸಿಯಂ ಹೀರಿಕೊಳ್ಳುವುದಕ್ಕೆ ಮತ್ತು ಮೂಳೆಗಳ ಬಲಿಯುವಿಕೆಗೂ ಕಾರಣವಾದ ಹಾರ್ಮೋನುಗಳು ಉತ್ಪತ್ತಿ ಆಗುವುದು ನಿಲ್ಲುತ್ತದೆ . ಇದರಿಂದ ಮೂಳೆಗಳು ದುರ್ಬಲ ಆಗುತ್ತವೆ . ಕಾರ್ಬೊನೇಟೆಡ್ ಕೋಲ್ಡ್ ಡ್ರಿಂಕ್ ಕುಡಿಯುವುದರಿಂದ ಕೂಡ ಈ ಸಮಸ್ಯೆ ತಪ್ಪಿದ್ದಲ್ಲ.

  Most Read: ಮೂಳೆ ಸಮಸ್ಯೆಗಳ ಬಗ್ಗೆ ನಮ್ಮಲ್ಲಿರುವ ಅಪನಂಬಿಕೆಗಳು


 • ಅಸಮತೋಲಿತ ಆಹಾರ ಕೂಡ ಮೂಳೆಗಳಿಗೆ ಮಾರಕ

  ಕ್ಯಾಲ್ಸಿಯಂ ನಿಮಗೆಲ್ಲ ಗೊತ್ತಿರುವ ಹಾಗೆ ನಮ್ಮ ದೇಹಕ್ಕೆ ಬೇಕಾದ ಅತ್ಯಂತ ಅವಶ್ಯವಾದ ಅಂಶ . ಇದು ಮೂಳೆಗಳ ಬಲ ಮತ್ತು ಅವುಗಳ ಸ್ವಾಸ್ತ್ಯವನ್ನು ಕಾಪಾಡುತ್ತದೆ . ನಾವು ತಿನ್ನುವ ಆಹಾರದಲ್ಲಿ ಕ್ಯಾಲ್ಸಿಯಂ ಅಂಶ ಕೂಡ ಅಡಗಿರುತ್ತದೆ . ಅದು ಸರಿಯಾದ ರೀತಿಯಲ್ಲಿ ನಮ್ಮ ದೇಹಕ್ಕೆ ಸಮತೋಲನವಾಗಿ ಸೇರದಿದ್ದರೆ ಮೇಲೆ ಹೇಳಿದ ಎಲ್ಲ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು . ಆದ್ದರಿಂದ ನಮಗೆ ನಮ್ಮ ಮೂಳೆಗಳು ಬಲವಾಗಿರಬೇಕಿದ್ದರೆ ದಿನಕ್ಕೆ ಬೇಕಾದ ಇಂತಿಷ್ಟು ಪ್ರಮಾಣದ ಕ್ಯಾಲ್ಸಿಯಂ ಅನ್ನು ತೆಗೆದುಕೊಳ್ಳುವುದು ಕಡ್ಡಾಯ .


 • ತೂಕ ಇಳಿಸಿಕೊಳ್ಳುವ ಭರದಲ್ಲಿ ನಿಮ್ಮ ಮೂಳೆಗಳು ಜೋಪಾನ

  ಇತ್ತೀಚಿಗೆ ನಗರ ಪ್ರದೇಶಗಳಲ್ಲಿ ಜನರು ತಮ್ಮ ದೇಹದ ತೂಕ ಇಳಿಸಿಕೊಳ್ಳಲು ಅನೇಕ ರೀತಿಯ ಆರೋಗ್ಯಕರವಲ್ಲದ ವಿಧಾನಗಳನ್ನು ಅನುಸರಿಸುತ್ತಿದ್ದಾರೆ . ದೇಹದ ತೂಕ ಇಳಿಸಿಕೊಳ್ಳುವುದು ಒಳ್ಳೆಯ ವಿಚಾರವೇ . ಆದರೆ ಅದು ಅತಿಯಾದರೆ ಅದರ ನೇರ ಪರಿಣಾಮ ಮೂಳೆಗಳ ಮೇಲೆ ಆಗುತ್ತದೆ . ಅನೇಕ ವರದಿಗಳ ಪ್ರಕಾರ ಬಾಡಿ ಮಾಸ್ ಇಂಡೆಕ್ಸ್ 18.5 ಕ್ಕಿಂತ ಕಡಿಮೆ ಇದ್ದರೆ ಅದು ಓಸ್ಟೆಯೋಪೋರೊಸಿಸ್ ಗೆ ದಾರಿ ಮಾಡಿ ಕೊಡುತ್ತದೆ .
ಮನುಷ್ಯನ ದೇಹದ ನರನಾಡಿಗಳು ಬಳ್ಳಿಯ ರೀತಿಯಲ್ಲಿ ಒಂದಕ್ಕೊಂದು ಸುತ್ತಿಕೊಂಡು ನಿಂತಿರುವುದೇ ಮೂಳೆಗಳೆಂಬ ಆಧಾರದಿಂದ . ಮೂಳೆಗಳು ಇಲ್ಲದಿದ್ದರೆ ಮನುಷ್ಯನ ದೇಹದ ಆಕಾರ ಹೇಗಿರುತ್ತಿತ್ತು ಒಮ್ಮೆ ಊಹಿಸಿಕೊಳ್ಳಿ . ಮನುಷ್ಯನಿಗಷ್ಟೇ ಅಲ್ಲ , ಸಕಲ ಪ್ರಾಣಿ ಪಕ್ಷಿಗಳಿಗೂ ಎಲುಬೇ ಆಧಾರ . " ಮಾನವ ಮೂಳೆ ಮಾಂಸದ ತಡಿಕೆ " ಎಂಬಂತೆ ಮನುಷ್ಯ ಸತ್ತ ಮೇಲೆ ಮಣ್ಣಲ್ಲಿ ಮಣ್ಣಾದರೂ ಕೊನೆಗೆ ಉಳಿಯುವುದು ಮೂಳೆಗಳ ಸಂಗಮವೇ . ಅಂತಹ ಗಟ್ಟಿಮುಟ್ಟಾದ ಮೂಳೆಗಳನ್ನು ಮನುಷ್ಯ ಒಮ್ಮೊಮ್ಮೆ ತನ್ನ ಅಭ್ಯಾಸದಿಂದ ತಾನು ಬದುಕಿರುವಾಗಲೇ ಅವುಗಳನ್ನು ದುರ್ಬಲ ಮಾಡಿಬಿಡುತ್ತಾನೆ . ಅದಕ್ಕೆ ಕಾರಣಗಳು ಹಲವಾರಿರಬಹುದು . ಕೆಲವೊಂದು ಮುಖ್ಯವಾದುವುವನ್ನು ಇಲ್ಲಿ ವಿಮರ್ಶಿಸಲಾಗಿದೆ .

   
 
ಹೆಲ್ತ್