Back
Home » ಆರೋಗ್ಯ
ಸಾವಯವ ಆಹಾರ ಸೇವನೆಯ ಆರೋಗ್ಯ ಪ್ರಯೋಜನಗಳು
Boldsky | 23rd May, 2019 10:33 AM

ನಮ್ಮೆಲ್ಲರೊಂದು ಅಗೋಚರವಾದ ದೌರ್ಬಲ್ಯವಿದೆ. ಅದೆಂದರೆ ಖ್ಯಾತನಾಮರ ಅಭ್ಯಾಸಗಳನ್ನು ಗಮನಿಸುವುದು ಹಾಗೂ ಅದನ್ನೇ ಅನುಸರಿಸುವುದು. ಖ್ಯಾತನಾಮರು ಬಂದು ಒಂದು ಉತ್ಪನ್ನದ ಬಗ್ಗೆ ಯಾವುದೇ ಮಾಹಿತಿ ಇಲ್ಲದಿದ್ದರೂ ಸರಿ, ಈ ಉತ್ಪನ್ನವನ್ನು ನಾನು ಉಪಯೋಗಿಸುತ್ತೇನೆ ಎಂದು ಒಂದು ಜಾಹೀರಾತು ನೀಡಿದ್ದೇ ತಡ, ಆ ಉತ್ಪನ್ನದ ಮಾರಾಟ ಲಕ್ಷ ಪಟ್ಟು ಹೆಚ್ಚುತ್ತದೆ. ಇತ್ತೀಚೆಗೆ ಹಲವಾರು ಖ್ಯಾತನಾಮರು ತಮ್ಮ ಅಂಗಸೌಷ್ಠವದಿಂದ ಜಗತ್ತಿನ ಗಮನ ಸೆಳೆಯುತ್ತಿದ್ದು ಇದಕ್ಕೆ ತಾವು ಮಾಡುವ ವ್ಯಾಯಾಮ ಹಾಗೂ ಸೇವಿಸುವ ಸಾವಯವ ಆಹಾರಗಳೇ ಕಾರಣ ಎಂದು ಹೇಳಿಕೊಂಡಿದ್ದಾರೆ.

ಯಾವಾಗ ಈ ವ್ಯಕ್ತಿಗಳು ತೆಳ್ಳನೆಯ ದೇಹ, ಹುರಿಗಟ್ಟಿದ ಹೊಟ್ಟೆಯ ಸ್ನಾಯುಗಳನ್ನು ಪ್ರದರ್ಶಿಸತೊಡಗಿದರೋ ಆಗಲೇ ಜನಸಾಮಾನ್ಯರಲ್ಲಿಯೂ ಈ ಬಗೆಯ ದೇಹದಾರ್ಢ್ಯವನ್ನು ಪಡೆಯುವ ಉಮೇದು ತಲೆದೋರಿದೆ. ಪರಿಣಾಮವಾಗಿ ಎಲ್ಲಾ ಕಡೆ ಸಾವಯವ ಆಹಾರಗಳ ಮಾರಾಟ ಹೆಚ್ಚಿದೆ ಹಾಗೂ ಹೆಚ್ಚು ಹೆಚ್ಚು ಜನರು ಈ ಆಹಾರಗಳತ್ತ ಆಕರ್ಷಿತರಾಗುತ್ತಿದ್ದಾರೆ. ವಾಸ್ತವದಲ್ಲಿ ಸಾವಯವ (ಆರ್ಗ್ಯಾನಿಕ್) ಎಂಬ ವಿಭಾಗದಲ್ಲಿ ದೊರಕುವ ಈ ಆಹಾರಗಳು ಇತರ ಆಹಾರಗಳಿಗಿಂತಲೂ ಹೆಚ್ಚು ದುಬಾರಿಯಾಗಿದ್ದು ಜನಸಾಮಾನ್ಯರಿಗೆ ಎಟುಕದಂತಿವೆ. ಅಷ್ಟಕ್ಕೂ ಈ ಆಹಾರಗಳೆಷ್ಟು ಆರೋಗ್ಯಕರ ಹಾಗೂ ಪೌಷ್ಟಿಕ? ಬನ್ನಿ ಇಂದಿನ ಲೇಖನದಲ್ಲಿ ಇವುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿಯೋಣ.

ಸಾವಯವ ಆಹಾರವೆಂದರೇನು?

ಒಂದು ವೇಳೆ ನಿಮ್ಮ ಮನೆಯ ಹಿತ್ತರಲ್ಲಿ ಟೊಮೆಟೋ ಬೀಜಗಳನ್ನು ಹಾಕಿ ಸಸಿಯಾಗಿಸಿ ನೀರು ಗೊಬ್ಬರ ಹಾಕಿ ಬೆಳಸಿದ ಬಳಿಕ ಈ ಗಿಡದಲ್ಲಿ ಬರುವ ಹಣ್ಣೇ ಸಾವಯವ ಆಹಾರ. ಏಕೆಂದರೆ ಈ ಬೆಳೆಯಲ್ಲಿ ನೀವು ಕೃತಕವಾಗಿ ಬೆಳೆಯು ಬೆಳೆಯುವ ವೇಗವನ್ನು ಹೆಚ್ಚಿಸಲು ಯಾವುದೇ ರಾಸಾಯನಿಕಗಳನ್ನಾಗಲೀ, ಪರಾಗಸ್ಪರ್ಶವಾಗದೇ ಬೀಜವಿಲ್ಲದ ಹಣ್ಣಾಗಲು ಕೃತಕ ರಸದೂತಗಳನ್ನಾಗಲೀ, ಕೀಟನಾಶಕಗಳನ್ನಾಗಲೀ, ಕೃತಕ ಗೊಬ್ಬರಗಳನ್ನಾಗಲೀ, ಕೃತಕ ಬೆಳಕಿನ ವ್ಯವಸ್ಥೆ ಮೊದಲಾದ ಯಾವುದನ್ನೇ ಉಪಯೋಗಿಸದೇ ಟೊಮಾಟೋ ಬೆಳಿಸಿದ್ದೀರಿ. ಒಂದು ವೇಳೆ ಇವುಗಳಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ವಿಧಾನಗಳನ್ನು ಅನುಸರಿಸಿ ಬೆಳೆದ ಬೆಳೆಯಾದರೆ ಇದು ಕೃತಕ ಆಹಾರವಾಗುತ್ತದೆ. ಮಾಂಸಾಹಾರದಲ್ಲಿಯೂ ಅಷ್ಟೇ, ಹಾಲು, ಮಾಂಸ, ಮೊಟ್ಟೆ ಮೊದಲಾದವುಗಳನ್ನು ನೈಸರ್ಗಿಕ ರೂಪದಲ್ಲಿ ಪಡೆದಾಗ ಇವು ಸಾವಯವ ಆಹಾರಗಳಾಗುತ್ತವೆ. ಒಂದು ವೇಳೆ ಹೆಚ್ಚು ಲಾಭಕರವಾಗಿಸಲು ಆಂಟಿಬಯಾಟಿಕ್ (ಪ್ರತಿಜೀವಕ) ಔಷಧಿಗಳು, ಕೃತಕ ರಸದೂತಗಳು ಅಥವಾ ಇವುಗಳಿಗೆ ಒಗ್ಗದ, ಆದರೆ ದೇಹ ಅತಿ ಶೀಘ್ರವಾಗಿ ಬೆಳೆಯುವಂತೆ ಮಾಡುವ ಕೃತಕ ಆಹಾಗಳನ್ನು ಬಲವಂತವಾಗಿ ತಿನ್ನಿಸುವ ಮೂಲಕ ಪಡೆಯುವ ಯಾವುದೇ ಉತ್ಪನ್ನ ಕೃತಕವಾಗುತ್ತದೆ.

ಸಾವಯವ ಆಹಾರಗಳು ಆರೋಗ್ಯಕರ ಎನ್ನಲು ವೈಜ್ಞಾನಿಕ ಆಧಾರಗಳೂ ಇವೆ. ಇವು ಇತರ ಆಹಾರಗಳಿಗಿಂತ ಆರೋಗ್ಯಕರವಾಗಿವೆ ಹಾಗೂ ಸುರಕ್ಷಿತವಾಗಿವೆ. ಒಂದು ಸಂಶೋಧನೆಯ ಪ್ರಕಾರ ಸಾವಯವ ಹಾಲಿನಲ್ಲಿ ಹೆಚ್ಚಿನ ಆಂಟಿ ಆಕ್ಸಿಡೆಂಟುಗಳೂ, ಒಮೆಗಾ 3 ಕೊಬ್ಬಿನ ಆಮ್ಲಗಳೂ, ಸಿ ಎಲ್ ಎ ಹಾಗೂ ಹಲವು ವಿಟಮಿನ್ನುಗಳೂ ಇತರ ಹಾಲಿಗಿಂತ ಹೆಚ್ಚಿರುತ್ತವೆ. ಸಾವಯವ ಹಾಲು ಪಡೆಯುವ ಹಸುಗಳು ಹಸಿರು ಹುಲ್ಲುಗಾವಲಿನಲ್ಲಿ ಮೇಯುತ್ತವೆ ಹಾಗೂ ಅತ್ಯುತ್ತಮ ಗುಣಮಟ್ಟದ ಹಾಲನ್ನು ನೀಡುತ್ತವೆ.

ಸಾವಯವ ಆಹಾರ ಸೇವನೆಯ ಪ್ರಯೋಜನಗಳು

ಈ ಆಹಾರಗಳನ್ನು ಬೆಳೆಸುವ ವಿಧಾನ ಇವನ್ನು ಸೇವಿಸುವವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವಂತೆಯೇ ವಾತಾವರಣದ ಮೇಲೂ ಧನಾತ್ಮಕ ಪರಿಣಾಮ ಬೀರುತ್ತದೆ. ವಿಶೇಷವಾಗಿ ಕೆಲವು ಆಹಾರಗಳಿಗೆ ಅಲರ್ಜಿ ಹೊಂದಿರುವ ವ್ಯಕ್ತಿಗಳಿಗೆ ಸಾವಯವ ಆಹಾರಗಳು ಹೆಚ್ಚು ಸೂಕ್ತವಾಗಿವೆ. ಏಕೆಂದರೆ ಕೃತಕ ವಿಧಾನದಲ್ಲಿ ಬೆಳೆಸಿದ ಆಹಾರಗಳಲ್ಲಿರುವ ರಾಸಯನಿಕಗಳು, ಸಂರಕ್ಷಕಗಳು ಈ ಅಲರ್ಜಿಗೆ ಕಾರಣವಾಗಿದ್ದು ಇವು ಇಲ್ಲದ ಆಹಾರಗಳ ಸೇವನೆಯಿಂದ ಅಲರ್ಜಿಯೂ ಸ್ವಾಭಾವಿಕವಾಗಿಯೇ ಇಲ್ಲವಾಗುತ್ತದೆ. ಸಾವಯವ ಆಹಾರಗಳ ಸೇವನೆಯ ಕೆಲವು ಪ್ರಮುಖ ಪ್ರಯೋಜನಗಳು ಇಂತಿವೆ:

ಅತ್ಯುತ್ತಮ ಆಂಟಿ ಆಕ್ಸಿಡೆಂಟ್ ಸಾಮರ್ಥ್ಯ ಪಡೆದಿದೆ

ಒಂದು ಸಂಶೋಧನೆಯ ಪ್ರಕಾರ, ಸಾವಯವ ವಿಧಾನದಲ್ಲಿ ಬೆಳೆಸಿದ ಹಣ್ಣುಗಳು, ತರಕಾರಿಗಳು ಹಾಗೂ ಧಾನ್ಯಗಳಲ್ಲಿ ಇತರ ವಿಧಾನದಲ್ಲಿ ಬೆಳೆದಿರುವುದಕ್ಕಿಂತಲೂ ಹೆಚ್ಚಿನ ಸಾಂದ್ರತೆಯಲ್ಲಿ ಆಂಟಿ ಆಕ್ಸಿಡೆಂಟುಗಳಿವೆ. ವಾಸ್ತವವಾಗಿ ಆಂಟಿ ಆಕ್ಸಿಡೆಂಟುಗಳ ಕೊರತೆಯೇ ಹೃದಯಸಂಬಂಧಿ ಕಾಯಿಲೆ, ನರವ್ಯವಸ್ಥೆಗೆ ಸಂಬಂಧಿಸಸಿದ ಹಾಗೂ ಕ್ಯಾನ್ಸರ್ ಸಹಿತ ಹಲವಾರು ಕಾಯಿಲೆಗಳು ಆವರಿಸುವ ಸಾಧ್ಯತೆಗೆ ಮೂಲ ಕಾರಣವಾಗಿವೆ.

ಇವುಗಳಲ್ಲಿ ಕೃತಕ ಬಣ್ಣ ಅಥವಾ ಸ್ವಾದವಿರುವುದಿಲ್ಲ

ಇಂದು ಸುಪರ್ ಮಾರ್ಕೆಟ್ಟುಗಳಲ್ಲಿ ಲಭ್ಯವಿರುವ ಕೆಂಪು ಕೆಂಪಾದ ಸೇಬು ಹಣ್ಣನ್ನು ನೋಡಿದಾಕ್ಷಣ ಇವನ್ನು ತಿನ್ನದಿರಲೇ ಸಾಧ್ಯವಿಲ್ಲವೆನ್ನುವಷ್ಟು ಮನಸ್ಸಾಗುತ್ತದೆ. ಆದರೆ ಒಂದು ತುಂಡನ್ನು ಕಚ್ಚಿದ ಬಳಿಕವೇ ಇದರಲ್ಲಿ ಸಾಮಾನ್ಯವಾಗಿರುವಷ್ಟು ರುಚಿ ಇರುವುದಿಲ್ಲ ಎಂದು ಅರಿವಾಗುತ್ತದೆ. ಏಕೆಂದರೆ ಈ ಹಣ್ಣಿನಲ್ಲಿ ಕೃತಕ ಬಣ್ಣ ಬರಿಸಲು ಜಲಜನೀಕೃತ ಕೊಬ್ಬುಗಳನ್ನು (hydrogenated fats) ಇಂಜೆಕ್ಷನ್ ಮೂಲಕ ಚು಼ಚ್ಚಲಾಗಿರುತ್ತದೆ. ಆದರೆ ಸಾವಯವ ಆಹಾರಗಳಲ್ಲಿ ಇಂತಹ ಯಾವುದೇ ಕೃತಕ ವಿಧಾನಗಳನ್ನು ಅನುಸರಿಸಿರದ ಕಾರಣ ಇವು ನೈಸರ್ಗಿಕ ಬಣ್ಣ ಮತ್ತು ಸ್ವಾದಗಳನ್ನೇ ಹೊಂದಿರುತ್ತವೆ.

ಕೀಟನಾಶಕಗಳಿರುವುದಿಲ್ಲ

ಹೆಚ್ಚಿನ ಜನರು ಸಾವಯವ ಆಹಾರ ಕೊಳ್ಳಲು ಇದು ಪ್ರಮುಖ ಕಾರಣವಾಗಿದೆ. ಕೀಟಗಳನ್ನು ದೂರವಿರಿಸಲು ಸಿಂಪಡಿಸುವ ಔಷಧಿಗಳು ಈ ಕಾರ್ಯದಲ್ಲಿ ಯಶಸ್ವಿಯಾದರೂ ಆಹಾರದಲ್ಲಿಯೇ ಗಟ್ಟಿಯಾಗಿ ಅಂಟಿಕೊಂಡಿದ್ದು ತೊಳೆದರೂ ಸುಲಭವಾಗಿ ಹೋಗುವುದಿಲ್ಲ ಹಾಗೂ ಇವುಗಳ ಸೇವನೆ ಅನಾರೋಗ್ಯಕ್ಕೆ ಮೂಲವಾಗಿದೆ. ಬೆಳೆಯನ್ನು ಕೀಟಗಳಿಂದ ಉಳಿಸಿಕೊಳ್ಳಲು ಹೆಚ್ಚಿನ ಸಂಸ್ಥೆಗಳು ಪ್ರಬಲ ರಾಸಾಯನಿಕಗಳನ್ನು ಉಪಯೋಗಿಸುವುದು ಹೆಚ್ಚು ಸಾಮಾನ್ಯವಾಗಿದೆ.

ಹೃದಯದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ

ಯಾವಾಗ ಹಸು ಹಸಿರು ಹುಲ್ಲುಗಾವಲಿನಲ್ಲಿ ಇಡಿಯ ದಿನ ಮೇಯ್ದು ತನ್ನ ಹೊಟ್ಟೆ ತುಂಬಿಸಿಕೊಂಡಿತ್ತೋ ಆ ಹಸುವಿನ ಹಾಲಿನಲ್ಲಿ CLA (Conjugate Linoleic Acid)ಎಂಬ ಆಮ್ಲದ ಅಂಶವೂ ಹೆಚ್ಚುತ್ತದೆ. ಈ ಆಮ್ಲ ಹೃದಯಕ್ಕೆ ಅತ್ಯುತ್ತಮ ಎಂದು ಪರಿಗಣಿಸಲ್ಪಟ್ಟಿದ್ದು ಈ ಹಾಲಿನ ಸೇವನೆಯಿಂದ ಹೃದಯದ ಕಾರ್ಯಕ್ಷಮತೆ ಹಾಗೂ ಆರೋಗ್ಯ ಹೆಚ್ಚುತ್ತದೆ.

ರೋಗ ನಿರೋಧಕ ಶಕ್ತಿ ಇನ್ನಷ್ಟು ಬಲಗೊಳ್ಳುತ್ತದೆ

ಕೀಟನಾಶಕಗಳಿಂದ ತುಂಬಿದ ಆಹಾರಗಳನ್ನು ಸೇವಿಸಿದಾಗ ಈ ರಾಸಾಯನಿಕಗಳು ದೇಹವನ್ನು ಸೇರಿ ಹಲವು ರೋಗಗಳ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಅಲ್ಲದೇ ರೋಗ ನಿರೋಧಕ ಶಕ್ತಿಯ ಮೇಲೆ ಅತಿಯಾದ ಭಾರವನ್ನು ಹೇರುತ್ತವೆ. ಈ ಆಹಾರಗಳನ್ನು ಸತತವಾಗಿ ಸೇವಿಸುತ್ತಿದ್ದರೆ ರೋಗ ನಿರೋಧಕ ವ್ಯವಸ್ಥೆ ಅತಿಯಾಗಿ ಕಾರ್ಯನಿರ್ವಹಿಸುವ ಮೂಲಕ ಶೀಘ್ರಕಾಲದಲ್ಲಿಯೇ ಶಿಥಿಲಗೊಳ್ಳುತ್ತಾ ಹೋಗುತ್ತದೆ. ಹೀಗೆ ಶಿಥಿಲವಾದ ರೋಗ ನಿರೋಧಕ ಶಕ್ತಿಯ ಪರಿಣಾಮವಾಗಿ ಹುಟ್ಟುವ ಮಕ್ಕಳು ಸಾವನ್ನಪ್ಪುವ ಸಾಧ್ಯತೆ ಹೆಚ್ಚುತ್ತದೆ, ಲೈಂಗಿಕ ಅಸಾಮರ್ಥ್ಯ, ಕೆಲವಾರು ಬಗೆಯ ಕ್ಯಾನ್ಸರ್ ಆವರಿಸುವ ಸಾಧ್ಯತೆ ಹೆಚ್ಚುವುದು, ಹೆಚ್ಚು ಹೆಚ್ಚು ಬಗೆಯ ಅಲರ್ಜಿಕಾರಕ ಕಣಗಳಿಗೆ ಸೂಕ್ಷ್ಮಸಂವೇದಿಯಾಗುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ. ಹಾಗಾಗಿ ಸಾಧ್ಯವಿದ್ದಷ್ಟೂ ಸಾವಯವ ಆಹಾರಗಳನ್ನೇ ಸೇವಿಸುವುದು ಉತ್ತಮ.

ಪ್ರತಿಜೀವಕ ಸಹಿಷ್ಣುತೆ (Antibiotic resistance)

ಸಾವಯವವಲ್ಲದ ಆಹಾರಗಳಲ್ಲಿ ಹೆಚ್ಚಿನ ಪ್ರಮಾಣದ ಪ್ರತಿಜೀವಕಗಳಿರುತ್ತವೆ. ಇವು ನಮ್ಮ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತವೆ ಹಾಗೂ ತನ್ಮೂಲಕ ಹಲವಾರು ಕಾಯಿಲೆಗಳು ಆವರಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಸಾವಯವ ಆಹಾರಗಳನ್ನೇ ಆಯ್ದುಕೊಳ್ಳುವುದು ಜಾಣತನದ ಕ್ರಮವಾಗಿದೆ.

ಉತ್ತಮಗೊಳ್ಳುವ ಆರೋಗ್ಯ

ಈ ಆಹಾರಗಳಲ್ಲಿ ಯಾವುದೇ ರಾಸಾಯನಿಕ ಗೊಬ್ಬರಗಳಿಲ್ಲದ ಕಾರಣ ಇವು ದೇಹದ ಮೇಲೆ ಯಾವುದೇ ಋಣಾತ್ಮಕ ಪರಿಣಾಮವನ್ನುಂಟುಮಾಡುವುದಿಲ್ಲ. ಇವುಗಳನ್ನು ಬೆಳೆಸಲು ನೈಸರ್ಗಿಕ ಗೊಬ್ಬರಗಳನ್ನೇ ಉಪಯೋಗಿಸಲಾಗುತ್ತದೆ. ಈ ಗೊಬ್ಬರ ವಾಸನೆಯಿಂದ ಕೂಡಿದ್ದರೂ ಸರಿ, ಇವುಗಳನ್ನೇ ಬಳಸಲು ನಮ್ಮ ರೈತರು ಹಿಂಜರಿಯುವುದಿಲ್ಲ.

ಉತ್ತಮಗೊಳ್ಳುವ ರುಚಿ

ಈ ಆಹಾರಗಳಿಂದ ತಯಾರಾದ ಖಾದ್ಯಗಳು ಹೆಚ್ಚು ರುಚಿಕರವಾಗಿರುತ್ತವೆ. ಏಕೆಂದರೆ ಇವುಗಳಲ್ಲಿ ಯಾವುದೇ ಸಂರಕ್ಷಕಗಳಿರುವುದಿಲ್ಲ. ಸಾಮಾನ್ಯವಾಗಿ ಈ ಆಹಾರಗಳನ್ನು ಅಲ್ಪ ಪ್ರಮಾಣದಲ್ಲಿ, ಚಿಕ್ಕ ಚಿಕ್ಕ ತೋಟಗಳಲ್ಲಿ ಬೆಳೆಸಿ ಆಯಾ ದಿನಗಳಲ್ಲಿಯೇ ತಾಜಾರೂಪದಲ್ಲಿ ಮಾರಲಾಗುತ್ತದೆ. ಇತರ ಆಹಾರಗಳು ಗ್ರಾಹಕನ ಕೈ ತಲುಪುವ ಮುನ್ನ ಶೀತಲೀಕರಿಸಲ್ಪಟ್ಟು ತುಂಬಾ ದೂರದಿಂದ ಭಾರೀ ಪ್ರಮಾಣದಲ್ಲಿ ಬಂದಿರುತ್ತವೆ.

ವಾತಾವರಣಕ್ಕೂ ಒಳ್ಳೆಯದು

ಸಾವಯವ ವಿಧಾನದ ಬೆಳೆಗಾರಿಕೆ ವಾತಾವರಣಕ್ಕೆ ಯಾವುದೇ ಹಾನಿಯುಂಟು ಮಾಡುವುದಿಲ್ಲ, ನೀರನ್ನೂ ಹೆಚ್ಚು ಬಳಸದೇ ಉಳಿಸುತ್ತದೆ, ಭೂಮಿಯ ಮಣ್ಣಿನ ಮೇಲ್ಪದರ ಕೊಚ್ಚಿಕೊಂಡು ಹೋಗದಂತೆ ತಡೆಯುತ್ತದೆ ಹಾಗೂ ಮಣ್ಣಿನಲ್ಲಿ ಸತ್ವವನ್ನು ಹೆಚ್ಚಿಸುತ್ತದೆ ಹಾಗೂ ಕಡಿಮೆ ಶಕ್ತಿಯನ್ನು ಬಳಸಿಕೊಳ್ಳುತ್ತದೆ. ಇವೆಲ್ಲಾ ಕ್ರಮಗಳನ್ನು ಸತತವಾಗಿ ಅನುಸರಿಸುವ ಮೂಲಕ ಕ್ರಮೇಣ ವಾತಾವರಣವನ್ನು ಆರೋಗ್ಯಕರವಾಗುಸುತ್ತವೆ.

ಕ್ಯಾನ್ಸರ್ ನಿಂದ ರಕ್ಷಿಸುತ್ತದೆ

ಕೆಲವು ವೈದ್ಯಕೀಯ ಸಂಶೋಧನೆಗಳ ಪ್ರಕಾರ ಸಾವಯವ ಆಹಾರಗಳ ಸೇವನೆಯಿಂದ ಕ್ಯಾನ್ಸರ್ ವಿರುದ್ದ ಹೋರಾಡುವ ಶಕ್ತಿ ಹೆಚ್ಚುತ್ತದೆ. ಅಲ್ಲದೇ ಇವುಗಳಲ್ಲಿ ದೇಹದಲ್ಲಿ ಕ್ಯಾನ್ಸರ್ ಉಂಟುಮಾಡುವ ಕ್ಯಾನ್ಸರ್ ಕಾರಕ ಕಣಗಳಿರುವುದಿಲ್ಲ.

ಆರೋಗ್ಯಕರ ಸಂತಾನ

ಈ ಆಹಾರಗಳ ಅಲ್ಲಗಳೆಯಲಾಗದ ಪ್ರಯೋಜನವೆಂದರೆ ಈ ಆಹಾರ ಸೇವಿಸಿದ ವ್ಯಕ್ತಿಗಳ ಸಂತಾನ ಆರೋಗ್ಯದಿಂದ ಕಳಕಳಿಸುವುದಾಗಿದೆ. ವಿಶೇಷವಾಗಿ ಗರ್ಭವತಿಯರು ಕೇವಲ ಸಾವಯವ ಆಹಾರಗಳನ್ನೇ ಸೇವಿಸುವ ಮೂಲಕ ಗರ್ಭದಲ್ಲಿರುವ ಮಗುವಿನ ಬೆಳವಣಿಗೆ ನೈಸರ್ಗಿಕವಾಗಿ ಮುಂದುವರೆಯುತ್ತದೆ.

ಇವುಗಳಲ್ಲಿ ತಳಿ ಮಾರ್ಪಾಡು ಆಗಿರುವುದಿಲ್ಲ

ಬಿಟಿ ಬದನೆ ಎಂಬ ವಿಷಯ ಕೆಲವರ್ಷಗಳ ಹಿಂದೆ ಭಾರೀ ಸುದ್ದಿಯಾಗಿತ್ತು. ಏಕೆಂದರೆ ಇದು ತಳಿ ಮಾರ್ಪಾಡು ಮಾಡಿಕೊಂಡ ಆಹಾರವಾಗಿದ್ದು ಸೇವಿಸಲು ಸೂಕ್ತವಲ್ಲ. ಸಾವಯವ ಆಹಾರಗಳಲ್ಲಿ ಯಾವುದೇ ಬಗೆಯ ತಳಿ ಮಾರ್ಪಾಡು ಆಗಿರುವುದಿಲ್ಲ. ಇವುಗಳಲ್ಲಿರುವ ಬೀಜಗಳನ್ನು ನೆಟ್ಟರೆ ಸಸಿಯಾಗುತ್ತದೆ. ಆದರೆ ಸಾವಯವವಲ್ಲದ ಆಹಾರಗಳಲ್ಲಿ ಹೆಚ್ಚಿನವು ಲಾಭ ಹೆಚ್ಚಿಸುವ ಉದ್ದೇಶದಿಂದ ತಳಿ ಮಾರ್ಪಾಡು ಮಾಡಿಕೊಂಡು ಬಂದವೇ ಆಗಿದ್ದು ಇವುಗಲ್ಲಿ ಬೀಜಗಳು ಇನ್ನೂ ಬೆಳೆದೇ ಇಲ್ಲವೆನ್ನುವಷ್ಟು ಚಿಕ್ಕದಿರುತ್ತವೆ ಅಥವಾ ದೊಡ್ಡದಾಗಿದ್ದರೂ ಇವುಗಳಿಂದ ಸಸಿಯಾಗುವುದಿಲ್ಲ. ಹಾಗಾಗಿ ಈ ಆಹಾರಗಳ ಸೇವನೆ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರಬಹುದು.

ಸಾವಯವ ಆಹಾರ: ಇವು ರುಚಿಕರ ಮತ್ತು ಸುರಕ್ಷಿತವೇ?

ಮೇಲೆ ವಿವರಿಸಿದಂತೆ ಈ ಅಹಾರಗಳ ಸೇವನೆಯಿಂದ ಹಲವಾರು ಪ್ರಯೋಜನಗಳಿವೆ. ಅಲ್ಲದೇ ಈ ಆಹಾರಗಳಲ್ಲಿ ನೈಸರ್ಗಿಕ ಪೋಷಕಾಂಶಗಳೂ ಗರಿಷ್ಟ ಪ್ರಮಾಣದಲ್ಲಿರುತ್ತವೆ ಎಂದು ಸಂಶೋಧನೆಗಳು ಸಾಬೀತುಪಡಿಸಿವೆ. ವಿಶೇಷವಾಗಿ ಕೆಲವು ಫ್ಲೇವನಾಯ್ಡುಗಳು ಮತ್ತು ಆಂಟಿ ಆಕ್ಸಿಡೆಂಟ್ ಗುಣ. ಕೃತಕ ರಾಸಾಯನಿಕದಲ್ಲಿರುವ ಕ್ಯಾಡ್ಮಿಯಂ ಎಂಬ ವಿಷವಸ್ತು ಇವುಗಳಲ್ಲಿ ಬೆಳೆದ ತರಕಾರಿಗಳಲ್ಲಿಯೂ ಇರುತ್ತವೆ. ಆದರೆ ಸಾವಯವ ಬೆಳೆಗಳಲ್ಲಿ ಈ ವಿಷ ಇರುವುದಿಲ್ಲ. ಇದ್ದರೂ ಅತಿ ಕಡಿಮೆ ಪ್ರಮಾಣದಲ್ಲಿದ್ದು ಆರೋಗ್ಯವನ್ನು ಬಾಧಿಸುವುದಿಲ್ಲ. ಅಲ್ಲದೇ ಕೀಟನಾಶಕಗಳನ್ನು ಬಳಸಿರದ ಕಾರಣ ಇವುಗಳ ಅಂಶ ಉಳಿದುಕೊಳ್ಳುವುದೂ ಇಲ್ಲ.

ಆದರೆ ಕೆಲವು ಆಹಾರಗಳಲ್ಲಿ ನೈಸರ್ಗಿಕವಾಗಿಯೇ ಕೆಲವು ವಿಷಕಾರಿ ವಸ್ತುಗಳಿರುತ್ತವೆ. ಹಾಗಾಗಿ ಈ ಆಹಾರಗಳ ಬದಲಿಗೆ ಕೃತಕವಿಧಾನದ ಬೆಳೆ ಸೂಕ್ತ ಎಂದು ಕೆಲವು ತಜ್ಞರು ಅಭಿಪ್ರಾಯಪಡುತ್ತಾರೆ. ಕೀಟನಾಶಕವಿಲ್ಲದೇ ಇರುವ ಕಾರಣ ಈ ಆಹಾರಗಳಲ್ಲಿ ವಿಷಕಾರಿ ವಸ್ತುಗಳು ಗರಿಷ್ಟ ಮಟ್ಟದಲ್ಲಿರುತ್ತವೆ. ಅಲ್ಲದೇ ಸಾವಯವ ಬೆಳೆಗೂ ಕೀಟಬಾಧೆ ಇದ್ದೇ ಇರುತ್ತದೆ ಮತ್ತು ಇವುಗಳನ್ನು ನಿವಾರಿಸಲು ನೈಸರ್ಗಿಕ ವಿಧಾನದ ಕೀಟನಾಶಕಗಳನ್ನೇ ಬಳಸಿದರೂ, ಇವು ಕಾಲಕ್ರಮೇಣ ಬಳಕೆಯಲ್ಲಿ ಹಾನಿಕಾರಕವಾಗಿ ಪರಿಣಮಿಸಬಹುದು. ಉದಾಹರಣೆಗೆ ಆಲುಗಡ್ಡೆಯಲ್ಲಿರುವ ಸೋಲನೈನ್ ಎಂಬ ವಿಷಕಾರಿ ವಸ್ತು ಕೀಟನಾಶಕವಿಲ್ಲದಿರುವಾಗ ಗರಿಷ್ಟವಾಗಿದ್ದು ಆಲುಗಡ್ಡೆಯನ್ನು ನಸು ಹಸಿರು ಬಣ್ಣ ಪಡೆಯುವಂತೆ ಮಾಡುತ್ತದೆ. ಈ ಹಸಿರು ಆಲುಗಡ್ಡೆ ಹೆಚ್ಚು ತಿಂದರೆ ಅನಾರೋಗ್ಯ ಎದುರಾಗುವುದು ಖಚಿತ. ಅಲ್ಲದೇ ಸಾವಯವ ಗೊಬ್ಬರದಲ್ಲಿ ಹಲವಾರು ಬ್ಯಾಕ್ಟೀರಿಯಾಗಳೂ ಇದ್ದು ಇದರಲ್ಲಿ ಮಾರಕ ಈ ಕೊಲೈ ನಂತಹ ಬ್ಯಾಕ್ಟೀರಿಯಾಗಳೂ ಇಲ್ಲದಿರುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಸಾವಯವ ಆಹಾರಗಳು ಸ್ವಾದಿಷ್ಟ ಎಂದು ಪರಿಗಣಿಸಲ್ಪಟ್ಟಿದ್ದರೂ ವಾಸ್ತವದಲ್ಲಿ ಈ ಆಹಾರಗಳ ಇತರ ವಿಧಾನದಲ್ಲಿ ಬೆಳೆದ ಆಹಾರಗಳ ಅಂಕಿ ಅಂಶಗಳನ್ನು ಪರಿಗಣಿಸಿದರೆ ವ್ಯತ್ಯಾಸ ಅತ್ಯಲ್ಪವಾಗಿರುತ್ತದೆ. ಅಲ್ಲದೇ ಸಾವಯವ ಬೆಳೆಗಳನ್ನು ಶೀತಲೀಕರಿಸದೇ ಅಂದೇ ಸೇವಿಸಬೇಕಾಗುತ್ತದೆ. ಹಾಗಾಗಿ ಇವುಗಳ ಬಳಕೆ ಇತರ ವಿಧಾನದ ಬೆಳೆಗಳಷ್ಟು ಗ್ರಾಹಕಸ್ನೇಹಿಯಾಗುವುದಿಲ್ಲ.

 
ಹೆಲ್ತ್