Back
Home » ಆರೋಗ್ಯ
ಜಿಮ್‌ಗೆ ಹೋಗದೆಯೂ 150 ನಿಮಿಷ ವ್ಯಾಯಾಮವನ್ನು ಹೀಗೂ ಮಾಡಬಹುದು
Boldsky | 23rd May, 2019 01:00 PM
 • ಊಟದ ಬಳಿಕ ಇಪ್ಪತ್ತು ನಿಮಿಷದ ನಡಿಗೆ

  ಸಾಮಾನ್ಯವಾಗಿ ಊಟವಾದ ಬಳಿಕ ಎಲ್ಲರಿಗೂ ವಿರಮಿಸುವ ಮನಸ್ಸಾಗುತ್ತದೆ ಹಾಗೂ ಸಾಮಾಜಿಕ ಜಾಲತಾಣವನ್ನು ಗಮನಿಸುವ, ಸುತ್ತ ಮುತ್ತಲೇನಾಗುತ್ತಿದೆ ಎಂದು ಇಣುಕುನೋಟ ಬೀರುವ ಸಮಯವಾಗುತ್ತದೆ. ಕೆಲವರಂತೂ ಮಲಗಿ ನಿದ್ದೆಯನ್ನೇ ಮಾಡಿಬಿಡುತ್ತಾರೆ. ವಾಸ್ತವದಲ್ಲಿ ಊಟದ ಬಳಿಕ ವಿರಮಿಸುವುದು ಒಂದು ಅನಾರೋಗ್ಯಕರ ಅಭ್ಯಾಸ ಎಂದು ನಿಮಗೆ ಗೊತ್ತಿತ್ತೇ? ಆರೋಗ್ಯದ ದೃಷ್ಟಿಯಿಂದ ಊಟದ ಬಳಿಕ ಸುಮಾರು ಇಪ್ಪತ್ತು ನಿಮಿಷ ನಡೆದಾಡುವುದು ಅತ್ಯುತ್ತಮ ವ್ಯಾಯಾಮವಾಗಿದೆ. ಊಟದ ಬಳಿಕದ ನಡಿಗೆ ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಕಾರಿಯಾಗಿದೆ ಹಾಗೂ ಜೀವರಾಸಾಯನಿಕ ಕ್ರಿಯೆಯನ್ನೂ ಚುರುಕುಗೊಳಿಸುತ್ತದೆ. ಅಷ್ಟೇ ಅಲ್ಲ, ನಿತ್ಯವೂ ಊಟದ ಬಳಿಕ ಇಪ್ಪತ್ತು ನಿಮಿಷ ನಡೆದಾಡುವ ಮೂಲಕ ಸ್ಥೂಲಕಾಯ ಆವರಿಸದಂತೆ ತಡೆಯಬಹುದು, ಏಕೆಂದರೆ ಈ ನಡೆದಾಡುವಿಕೆಯಲ್ಲಿ ದೇಹ ಆಹಾರದಲ್ಲಿದ್ದ ಕೊಬ್ಬನ್ನು ಬಳಸಿಕೊಳ್ಳುತ್ತದೆ ಹಾಗೂ ಸಂಗ್ರಹಗೊಳ್ಳುವುದನ್ನು ತಪ್ಪಿಸುತ್ತದೆ.


 • ಟೀವಿ ವೀಕ್ಷಣೆಯ ಸಮಯದಲ್ಲಿಯೇ ಭಾರವನ್ನು ಎತ್ತುವ ವ್ಯಾಯಾಮ ಮಾಡುವುದು

  ದೇಹದಾರ್ಢ್ಯ ತಜ್ಞರ ಪ್ರಕಾರ ಸ್ನಾಯುಗಳಿಗೆ ಕೆಲಸ ನೀಡುವ ವ್ಯಾಯಾಮಗಳನ್ನು ನಿತ್ಯವೂ ನಿರ್ವಹಿಸುವುದು ಅತಿ ಅಗತ್ಯವಾಗಿದೆ. ಈ ವ್ಯಾಯಾಮಗಳಲ್ಲಿ ಸ್ನಾಯುಗಳ ಶಕ್ತಿಯನ್ನು ಬಳಸಿಕೊಳ್ಳುವ ಮೂಲಕ ಸ್ನಾಯುಗಳು ದೃಢಗೊಳ್ಳಬೇಕಾದ ಅಗತ್ಯತೆಯನ್ನು ದೇಹಕ್ಕೆ ಮನದಟ್ಟು ಮಾಡುವುದೇ ಸ್ನಾಯುಗಳನ್ನು ಹುರಿಗಟ್ಟಿಸುವ ಪರಿಯಾಗಿದೆ. ಸ್ನಾಯುಗಳ ಜೊತೆಗೇ ಮೂಳೆಗಳೂ ದೃಢಗೊಳ್ಳುತ್ತವೆ. ಅಲ್ಲದೇ ದೇಹದ ಅಂಗಗಳು ಹೆಚ್ಚು ಬಳುಕಲು ಸಾಧ್ಯವಾಗುತ್ತದೆ. ಇದಕ್ಕಾಗಿ ಮನೆಯಲ್ಲಿ ಡಂಬೆಲ್ ಅಥವಾ ಕೈಯಲ್ಲಿ ಹಿಡಿದುಕೊಳ್ಳುವ ಭಾರವನ್ನು ಇರಿಸಿಕೊಂಡಿರಬೇಕು. ಯಾವಾಗೆಲ್ಲಾ ನೀವು ಮನೆಯವರೊಂದಿಗೆ ಟೀವಿ ವೀಕ್ಷಿಸುತ್ತೀರೋ, ಆಗೆಲ್ಲಾ ಈ ಡಂಬೆಲ್ ಅನ್ನು ಎತ್ತುವ ವ್ಯಾಯಾಮಗಳನ್ನು ನಿರ್ವಹಿಸುವ ಮೂಲಕ ಎರಡೂ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ.


 • ಮೆಟ್ಟಿಲುಗಳನ್ನು ಬಳಸಿ

  ಇಂದು ಹೆಚ್ಚಿನ ಮನೆಗಳೆಲ್ಲಾ ಬಹುಮಹಡಿ ಕಟ್ಟಡದಲ್ಲಿದ್ದು ತಲುಪಲು ಲಿಫ್ಟ್ ಗಳ ವ್ಯವಸ್ಥೆಯನ್ನೂ ಮಾಡಲಾಗಿರುತ್ತದೆ. ಆದರೆ ಪ್ರತಿಬಾರಿಯೂ ಲಿಫ್ಟ್ ಅನ್ನೇ ಬಯಸುವ ಮೂಲಕ ನಾವು ನಮ್ಮ ಆರೋಗ್ಯವನ್ನೇ ಶಿಥಿಲಗೊಳಿಸುತ್ತಿರುವುದು ನಮಗೇ ತಿಳಿಯುತ್ತಿಲ್ಲ. ಆದಷ್ಟೂ ಮೆಟ್ಟಿಲುಗಳನ್ನು ಬಳಸುವುದು ಅತ್ಯುತ್ತಮವಾದ ವ್ಯಾಯಾಮವಾಗಿದೆ ಹಾಗೂ ಜಾಣತನದ ಕ್ರಮವೂ ಆಗಿದೆ. ಮೆಟ್ಟಿಲುಗಳನ್ನು ಏರುವಾಗ ಮನಸ್ಸು ಇಲ್ಲಿಲ್ಲದಂತೆ ಹಿಂಜರಿಕೆ ಎದುರಿಸಿದರೂ ಸರಿ, ದೇಹಕ್ಕೆ ಮಾತ್ರ ಪರಿಪೂರ್ಣ ವ್ಯಾಯಾಮ ದೊರಕುತ್ತದೆ ಹಾಗೂ ಹೃದಯ ಬಡಿತ ಹೆಚ್ಚುವ ಮೂಲಕ ಹೆಚ್ಚಿನ ರಕ್ತಪರಿಚಲನೆ ಸಾಧ್ಯವಾಗುತ್ತದೆ. ತನ್ಮೂಲಕ ಉತ್ತಮ ಪ್ರಮಾಣದ ಆಮ್ಲಜನಕ ಹಾಗೂ ಪೋಷಕಾಂಶಗಳು ದೇಹದ ಅಂಗಾಂಗಳಿಗೆ ತಲುಪಲು ಸಾಧ್ಯವಾಗುತ್ತದೆ. ವಾರದಲ್ಲಿ ಐದು ದಿನ, ಪ್ರತಿಬಾರಿ ಕೇವಲ ಎರಡು ನಿಮಿಷಗಳ ಕಾಲ ಮೆಟ್ಟಿಲುಗಳನ್ನು ಏರಿದರೆ ಸುಮಾರು ಮೂವತ್ತಾರು ನಿಮಿಷ ನಡೆದಾಡುವಾಗ ಖರ್ಚಾಗುವಷ್ಟೇ ಕ್ಯಾಲೋರಿಗಳು ಖರ್ಚಾಗುತ್ತವೆ.


 • ನಿತ್ಯದ ಸಮಯಕ್ಕೂ ಇಪ್ಪತ್ತು ನಿಮಿಷ ಮೊದಲೇ ಎದ್ದುಬಿಡಿ

  ಒಂದು ವೇಳೆ ನೀವು ನಿತ್ಯವೂ ಏಳುವ ಸಮಯಕ್ಕೂ ಇಪ್ಪತ್ತು ನಿಮಿಷ ಏಳಲು ನಿಮಗೆ ಸಾಧ್ಯವಾದರೆ ನೀವು ಸರಿಯಾದ ಆರೋಗ್ಯಕ್ರಮವನ್ನು ಅನುಸರಿಸುತ್ತಿದ್ದೀರಿ ಎಂದು ತಿಳಿದುಕೊಳ್ಳ ಬಹುದು. ಹೀಗೆ ಬೇಗನೇ ಏಳುವುದರಿಂದ ವ್ಯಾಯಾಮಕ್ಕೂ ಹೆಚ್ಚಿನ ಸಮಯ ಲಭಿಸಿದಂತಾಗುತ್ತದೆ. ಈ ಸಮಯವನ್ನು ಬೆಳಗ್ಗಿನ ನಡಿಗೆಗೆ ಮೀಸಲಿಡಿ. ಈ ನಡಿಗೆ ಹಲವಾರು ವಿಧದಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಬೆಳಗ್ಗಿನ ತಾಜಾ ಹವೆಯ ಮೂಲಕ ಉತ್ತಮ ಪ್ರಮಾಣದ ಆಮ್ಲಜನಕ ಲಭಿಸಿದರೆ ಬೆಳಗ್ಗಿನ ಎಳೆಬಿಸಿಲು ದೇಹದಲ್ಲಿ ವಿಟಮಿನ್ ಡಿ ಉತ್ಪಾದನೆಗೆ ನೆರವಾಗುತ್ತದೆ. ಒಟ್ಟಾರೆ ಆರೋಗ್ಯ ಉತ್ತಮಗೊಳ್ಳುತ್ತದೆ. ಈ ಸಮಯದ ನಡಿಗೆಯ ಮೂಲಕ ದೊರಕುವ ಚೈತನ್ಯ ಇಡಿಯ ದಿನವನ್ನು ಚೇತೋಹಾರಿ ಯಾಗಿರಿಸಲು ನೆರವಾಗುತ್ತದೆ.


 • ಸಾಧ್ಯವಾದ ಆಟಗಳನ್ನು ಆಡಿ

  ಆಟಗಳನ್ನು ಆಡುವ ಮೂಲಕ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ದಿನದ ಜವಾಬ್ದಾರಿಗಳನ್ನು ಮುಗಿಸಿ ಮನೆಗೆ ಹಿಂದಿರುಗಿದ ಬಳಿಕ ಸ್ನೇಹಿತರೊಂದಿಗೆ ಆಡುವ ಆಟ ಮನಸ್ಸನ್ನು ಪ್ರಫುಲ್ಲವಾಗಿಸುವ ಜೊತೆಗೇ ಸುತ್ತಮುತ್ತಲ ವ್ಯಕ್ತಿಗಳೊಂದಿಗೆ ಉತ್ತಮ ಸಂಬಂಧವಿರಿಸಿ ಕೊಳ್ಳಲೂ ನೆರವಾಗುತ್ತದೆ. ನಿತ್ಯವೂ ಮನೆಯವರೊಂದಿಗೆ ಹಾಗೂ ಸ್ನೇಹಿತರೊಂದಿಗೆ ಸುಲಭ ಆಟಗಳನ್ನು ಆಡಿ, ಇದರಿಂದ ಮನಸ್ಸು ದಿನದ ಒತ್ತಡವನ್ನು ಇಲ್ಲವಾಗಿಸುತ್ತದೆ ಹಾಗೂ ದೇಹವನ್ನೂ ಆರೋಗ್ಯಕರವಾಗಿರಿಸುತ್ತದೆ.
ಇಂದಿನ ದಿನಗಳಲ್ಲಿ ದೈಂನಂದಿನ ಜವಾಬ್ದಾರಿಗಳನ್ನು ನಿರ್ವಹಿಸುವುದರಲ್ಲಿಯೇ ದಿನದ ಅವಧಿ ಕಳೆದು ವ್ಯಾಯಾಮಶಾಲೆಗಾಗಿ ನಿಗದಿತ ಸಮಯವನ್ನು ಮೀಸಲಿಡಲು ಹೆಚ್ಚಿನವರಿಗೆ ಸಾಧ್ಯವಾಗುತ್ತಿಲ್ಲ. ವ್ಯಾಯಾಮಶಾಲೆಗೆ ಹೋಗಲು ಇಷ್ಟವಿದ್ದರೂ ಹೋಗಲಾಗದ ಹೆಚ್ಚಿನವರು ನೀಡುವ ಸಬೂಬು ಎಂದರೆ ಸಮಯಾಭಾವ.

ಆರೋಗ್ಯ ತಜ್ಞರು ಹಾಗೂ ಆರೋಗ್ಯ ಸಂಶೋಧನಾ ಕೇಂದ್ರಗಳ ಪ್ರಕಾರ ಉತ್ತಮ ಆರೋಗ್ಯ ಹಾಗೂ ದೇಹದಾರ್ಢತೆಗಾಗಿ ಪ್ರತಿಯೊಬ್ಬರಿಗೂ ದಿನದಲ್ಲಿ ಕನಿಷ್ಟ ಮೂವತ್ತು ನಿಮಿಷಗಳ ವ್ಯಾಯಾಮದ ಅಗತ್ಯವಿದೆ. ಒಂದು ವೇಳೆ ನಿಮಗೂ ವ್ಯಾಯಾಮಶಾಲೆಗೆ ಹೋಗಲು ಸಮಯಾಭಾವವಿದ್ದರೆ ಈ ಲೇಖನದಲ್ಲಿ ವಿವರಿಸಿದ ಮಾಹಿತಿಗಳು ನಿಮಗೆ ನೆರವಾಗಲಿವೆ. ವಾರದಲ್ಲಿ ಒಟ್ಟು ನೂರೈವತ್ತು ನಿಮಿಷಗಳನ್ನು ಸುಲಭ ವ್ಯಾಯಾಮಗಳಿಗೆ ಮೀಸಲಿಡುವ ಮೂಲಕ ವ್ಯಾಯಾಮಶಾಲೆಯಲ್ಲಿ ಪಡೆಯಬಹುದಾದ ಫಲಿತಾಂಶವನ್ನೇ ಇಲ್ಲೂ ಪಡೆಯಬಹುದು. ಬನ್ನಿ, ನೋಡೋಣ...

 
ಹೆಲ್ತ್