Back
Home » ಇತ್ತೀಚಿನ
ದೇಶದಲ್ಲಿ ಮತ್ತೊಂದು ಬಿಗ್ ಪ್ರಾಜೆಕ್ಟ್‌ಗೆ ಕೈಹಾಕಿದ ಫ್ಲಿಪ್‌ಕಾರ್ಟ್!
Gizbot | 24th May, 2019 01:50 PM

ಭಾರತದ ನಂ 1 ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ಮತ್ತೊಂದು ಬಿಗ್ ಪ್ರಾಜೆಕ್ಟ್‌ಗೆ ಅಡಿಗಲ್ಲು ಇಟ್ಟಿದೆ. ದೇಶದಲ್ಲಿ ಆಹಾರ ವಸ್ತುಗಳನ್ನು ಮಾರಾಟ ಮಾಡುವ ಸಲುವಾಗಿ ಫ್ಲಿಪ್‌ಕಾರ್ಟ್ ಮಳಿಗೆಗಳನ್ನು ತೆರೆಯಲು ಸಿದ್ಧತೆ ನಡೆಸುತ್ತಿದ್ದು, ಫುಡ್‌ ರಿಟೇಲ್‌ನಲ್ಲಿ ಬಂಡವಾಳ ಹೂಡಿಕೆಗೆ ಫ್ಲಿಪ್‌ಕಾರ್ಟ್ ಒಡೆತನದ ವಾಲ್‌ ಮಾರ್ಟ್ ನಿರ್ಧರಿಸಿದೆ ಎಂಬ ಹೊಸ ಸುದ್ದಿ ಹೊರಬಿದ್ದಿದೆ.

ಹೌದು, ಅಮೆರಿಕಾದ ರೀಟೆಲ್ ದಿಗ್ಗಜ ವಾಲ್‌ಮಾರ್ಟ್ ಇದೀಗ ಭಾರತದಲ್ಲೂ ಫುಡ್‌ ರಿಟೇಲ್‌ನಲ್ಲಿ ಬಂಡವಾಳ ಹೂಡಿಕೆಗೆ ನಿರ್ಧರಿಸಿದೆ ಎನ್ನಲಾಗಿದೆ. ದೇಶದಲ್ಲಿ ಫುಡ್‌ ರಿಟೇಲ್‌ಗೆ ಶೇ. 100ರಷ್ಟು ಹೂಡಿಕೆಗೆ ಅವಕಾಶ ಇರುವುದರಿಂದ ವಾಲ್‌ಮಾರ್ಟ್ ದೇಶದಲ್ಲೂ ಕೂಡ ಬಲಿಷ್ಠ ರಿಟೇಲ್ ಮಾರುಕಟ್ಟೆಯನ್ನು ಸ್ಥಾಪಿಸಲು ಮುಂದಾಗಿದೆ ಎಂದು ಮಾಧ್ಯಮ ಮೂಲಗಳು ತಿಳಿಸಿವೆ.

ಈಗಾಗಲೇ ಭಾರತದಲ್ಲಿ ಬಿಸಿನೆಸ್‌ ಟು ಬಿಸಿನೆಸ್‌ (ಬಿ2ಬಿ) ಸಗಟು ವಲಯದಲ್ಲಿ ವಹಿವಾಟು ನಡೆಸುತ್ತಿರುವ ವಾಲ್‌ಮಾರ್ಟ್‌ 20ಕ್ಕೂ ಹೆಚ್ಚು ಕ್ಯಾಶ್‌ ಆಂಡ್‌ ಕ್ಯಾರಿ ಮಳಿಗೆಗಳನ್ನು ಹೊಂದಿದೆ. ಇದೀಗ ಫ್ಲಿಪ್‌ಕಾರ್ಟ್ ಮೂಲಕ ಫುಡ್‌ ರಿಟೇಲ್ ವಲಯದಲ್ಲಿ ಮಳಿಗೆಗೆಳನ್ನು ತೆರೆದು ವಹಿವಾಟು ಮಾಡುವ ಮೂಲಕ ವಾಲ್‌ಮಾರ್ಟ್ ತನ್ನ ವ್ಯಾಪಾರವನ್ನು ಹೆಚ್ಚಿಸಿಕೊಳ್ಳಲು ಮುಂದಾಗಿದೆ.

ಜಾಗತಿಕವಾಗಿ ವಾಲ್‌ಮಾರ್ಟ್ ತನ್ನ ವಹಿವಾಟಿನಲ್ಲಿ ಶೇ.50ಕ್ಕೂ ಹೆಚ್ಚು ಪಾಲನ್ನು ಆಹಾರ ಮಾರಾಟದಿಂದ ಪಡೆಯುತ್ತದೆ. ಹಾಗಾಗಿ ಭಾರತದಲ್ಲಿ ಆಹಾರ ವಸ್ತುಗಳ ಮಾರಾಟ ಮಳಿಗೆಗಳನ್ನು ತೆರೆಯುತ್ತಿದೆ. ಇದಕ್ಕಾಗಿ ನಗರದ ನಾಮ್‌ಧಾರೀಸ್ ಫ್ರೆಶ್ ಹಣ್ಣು ತರಕಾರಿಗಳ ಮಾರಾಟ ಮಳಿಗೆಗಳನ್ನು ಖರೀದಿಸಲು ಫ್ಲಿಪ್‌ಕಾರ್ಟ್ ಜೊತೆ ಸೇರಿ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ.

ವಾಲ್‌ಮಾರ್ಟ್‌ನ ಪ್ರತಿಸ್ಪರ್ಧಿ ಅಮೆಜಾನ್‌ ಕೂಡ ಫುಡ್‌ ರಿಟೇಲ್ ವಲಯದಲ್ಲಿ 50 ಕೋಟಿ ಡಾಲರ್‌ ಹೂಡಿಕೆಗೆ ಮುಂದಾಗಿದ್ದು, ಆನ್‌ಲೈನ್‌ ಮತ್ತು ಆಫ್‌ಲೈನ್‌ ಎರಡರಲ್ಲೂ ಅಮೆಜಾನ್‌ ಹೂಡಿಕೆ ಮಾಡಲಿದೆ. ಇದಕ್ಕಾಗಿ ಅಮೆಜಾನ್‌ 'ರಿಟೇಲ್ ಇಂಡಿಯಾ' ಎಂಬ ಅಧೀನ ಸಂಸ್ಥೆಯನ್ನೂ ಹೊಂದಿದೆ. ಹಾಗಾಗಿ, ಈ ಕ್ಷೇತ್ರದಲ್ಲಿ ಮತ್ತಷ್ಟು ಪೈಪೋಟಿ ಹೆಚ್ಚಲಿದೆ ಎಂದು ಹೇಳಲಾಗಿದೆ.

ಓದಿರಿ: 'ಬಿಜೆಪಿ' ಗೆದ್ದ ನಂತರ ಗೂಗಲ್ 'ಪಾರದರ್ಶಕ ವರದಿ' ನೋಡಿ ಶಾಕ್ ಆಗಬೇಡಿ!

 
ಹೆಲ್ತ್