Back
Home » ಆರೋಗ್ಯ
ಇದು ಫ್ಯಾಮಿಲಿ ಪ್ಲಾನಿಂಗ್ ಅಲ್ಲ , ಮೊಟ್ಟೆ ಪ್ಲಾನಿಂಗ್ : ಒಂದು ಬೇಕು ಎರಡು ಸಾಕು !!!
Boldsky | 7th Jun, 2019 03:55 PM

ನಾವು ಪ್ರತಿ ನಿತ್ಯ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಅನೇಕ ಬಗೆಯ ಆಹಾರ ಸೇವನೆ ಮಾಡುತ್ತೇವೆ . ಹೇಗೆ ಗಿಡಕ್ಕೆ ಪಲವತ್ತತೆ ಕಾಪಾಡಿಕೊಳ್ಳಲು ವಿಧ ವಿಧವಾದ ಗೊಬ್ಬರ ಮತ್ತು ನೀರಿನ ಅವಶ್ಯಕತೆ ಇದೆಯೋ , ಹಾಗೇ ನಮಗೂ ದಿನ ನಿತ್ಯದ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ನಮ್ಮ ದೇಹಕ್ಕೆ ಶಕ್ತಿಯ ಅವಶ್ಯಕತೆ ಇದೆ . ಆ ಶಕ್ತಿ ವೈದ್ಯರ ಸಲಹೆ ಮೇರೆಗೆ ನಾವು ತೆಗೆದುಕೊಳ್ಳುವ ಹಾಲು , ಹಣ್ಣು , ಮೊಟ್ಟೆ , ಸೊಪ್ಪು , ಹಸಿರು ತರಕಾರಿಗಳು ಎಂಬ ಇತ್ಯಾದಿ ಆಹಾರದಿಂದಲೇ ಬರುತ್ತದೆ . ನಮಗೆ ಹುಷಾರು ತಪ್ಪಿದಾಗ ಮಾತ್ರ ಬಾಯಿ ಕೆಟ್ಟಂತಾಗಿರುತ್ತದೆ .

ಆಗ ಪ್ರತಿ ಬಾರಿ ತೆಗೆದುಕೊಳ್ಳುವ ಆಹಾರಕ್ಕಿಂತ ಕಡಿಮೆ ಪ್ರಮಾಣದ ಆಹಾರದ ಮೊರೆ ಹೋಗುತ್ತೇವೆ . ಇಂತಹ ಕ್ಷಣದಲ್ಲಿ ವೈದ್ಯರು ನಮಗೆ ದೇಹದಲ್ಲಿ ಶಕ್ತಿಯ ಕುಂದು ಕೊರತೆ ಉಂಟಾಗಬಾರದು ಎಂಬ ಸದುದ್ದೇಶದಿಂದ ನಮಗೆ ದಿನಕ್ಕೆ ಒಂದು ಅಥವಾ ಎರಡು ಕೋಳಿ ಮೊಟ್ಟೆಯನ್ನು ತಿನ್ನಲು ಹೇಳಿರುತ್ತಾರೆ. ಆದರೆ ಆ ಮಿತಿಯನ್ನು ಮೀರಿ ನಾವು ದಿನಕ್ಕೆ ಎರಡಕ್ಕಿಂತ ಹೆಚ್ಚು ಕೋಳಿ ಮೊಟ್ಟೆಯನ್ನು ತಿಂದಿದ್ದೇ ಆದರೆ , ಆಗುವ ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿ ಎನ್ನುತ್ತಿದೆ ಸಂಶೋಧನೆ !!! ಹೌದು ಇದು ಪ್ರತಿ ದಿನ ಮೊಟ್ಟೆ ಮತ್ತು ಅದರಿಂದ ಬಗೆ ಬಗೆಯ ತಿನಿಸುಗಳನ್ನು ತಯಾರಿಸಿಕೊಂಡು ಸೇವಿಸುವ ಮೊಟ್ಟೆ ಪ್ರಿಯರಿಗಂತೂ ಒಂದು ಬಗೆಯ ಕಹಿ ಸುದ್ದಿಯೇ ಸರಿ . ಕೇವಲ ಕೋಳಿ ಜ್ವರದ ಆರ್ಭಟ ಹೆಚ್ಚಾಗಿದ್ದಾಗ ಮಾತ್ರ ಮೊಟ್ಟೆ ತಿನ್ನಬೇಡಿ ಎಂದು ಹೇಳುತ್ತಿದ್ದ ವೈದ್ಯ ಲೋಕ ಈಗ ಅದನ್ನು ನಮ್ಮ ದಿನ ನಿತ್ಯದ ಜೀವನದೆಡೆಗೆ ಇದ್ದಕ್ಕಿದ್ದಂತೆ ವರ್ಗಾಯಿಸಿದಂತಿದೆ .

ಕೋಳಿ ಮೊಟ್ಟೆ ಮನುಷ್ಯನ ಪಾಲಿಗೆ ಚಿನ್ನದ ಮೊಟ್ಟೆ!!!

ನಮ್ಮೆಲ್ಲರಿಗೂ ತಿಳಿದಿರುವ ಹಾಗೆ ಪೋಷಕಾಂಶದ ವಿಷಯಕ್ಕೆ ಬಂದರೆ ಮೊಟ್ಟೆ ಕೇವಲ ಕೋಳಿ ಮೊಟ್ಟೆಯಲ್ಲ . ಅದು ಚಿನ್ನದ ಮೊಟ್ಟೆ ಎಂದರೂ ತಪ್ಪಾಗಲಿಕ್ಕಿಲ್ಲ. ಏಕೆಂದರೆ ಅದರಲ್ಲಿ ಪ್ರೋಟೀನ್, ನಿಯಾಸಿನ್, ರಿಬೋಫ್ಲಾವಿನ್, ಕ್ಲೋರೀನ್, ಮೆಗ್ನೀಸಿಯಮ್ , ಪೊಟ್ಯಾಸಿಯಮ್ , ಸೋಡಿಯಂ, ಸಲ್ಫರ್ , ಜಿಂಕ್ ಮತ್ತು ಮಿನರಲ್ ಗಳಾದ ಐರನ್, ಕ್ಯಾಲ್ಸಿಯಂ, ಕಾಪರ್ ಮತ್ತು ಫಾಸ್ಪರಸ್ ಮತ್ತು ವಿಟಮಿನ್ ಗಳಾದ ವಿಟಮಿನ್ 'ಎ' , ವಿಟಮಿನ್ 'ಬಿ 12', ಮತ್ತು ನಿಸರ್ಗದತ್ತವಾಗಿ ಸೂರ್ಯನ ಕಿರಣಗಳಿಂದ ನಮ್ಮ ದೇಹಕ್ಕೆ ಬೆಳಗಿನ ಜಾವದಲ್ಲಿ ಸಿಗುವ ವಿಟಮಿನ್ ' ಡಿ ' ಕೂಡ ನಮಗೆ ಕೋಳಿ ಮೊಟ್ಟೆಯಲ್ಲೇ ಲಭ್ಯವಿದೆ. ಮೊಟ್ಟೆ ಮನೆಯಲ್ಲಿದ್ದರೆ ಅನೇಕ ಹಣ್ಣು ಆಹಾರಗಳನ್ನು ಹುಡುಕಿಕೊಂಡು ಹೋಗಿ ನಮ್ಮ ದೇಹಕ್ಕೆ ಶಕ್ತಿ ಕೊಡಿಸುವ ಅಗತ್ಯತೆಯೇ ಬರುವುದಿಲ್ಲ. ಕೇವಲ ಒಂದು ಮೊಟ್ಟೆ ನಮ್ಮ ಇಡೀ ದೇಹದ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ .

Most Read: ಮೊಟ್ಟೆ ತಿನ್ನುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಉಂಟಾಗುತ್ತದೆಯೇ?

" ಕೊಲೆಸ್ಟ್ರಾಲ್" ಎಂಬ ಭೂತ ಮೊಟ್ಟೆ ಸೇವನೆಗೆ ಅಂತೂ ಹಾಕಿತಲ್ಲ ಕತ್ತರಿ !!!

ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರಿಗೂ ಮೊಟ್ಟೆಯನ್ನು ದೇಹದ ಆರೋಗ್ಯಕ್ಕಾಗಿ ಸೂಚಿಸುತ್ತಿದ್ದ ವೈದ್ಯಲೋಕ ಇಂದು ಮೊಟ್ಟೆ ಸೇವನೆಯನ್ನು ದಿನಕ್ಕೆ ಎರಡರಂತೆ ಕಟ್ಟಪ್ಪಣೆ ಹೊರಡಿಸಿದೆ . ಅದಕ್ಕೆ ಕಾರಣ ಮೊಟ್ಟೆಯಲ್ಲಿ ಇರುವ ಕೊಲೆಸ್ಟರಾಲ್ ಅಂಶ . ಹೌದು ಒಂದು ಮಧ್ಯಮ ಗಾತ್ರದ ಮೊಟ್ಟೆಯಲ್ಲಿ ಸುಮಾರು 200 ಮಿಲಿ ಗ್ರಾಮ್ ನಷ್ಟು ಕೊಲೆಸ್ಟರಾಲ್ ಇರುತ್ತದಂತೆ . ಒಬ್ಬ ಆರೋಗ್ಯವಂತ ಮನುಷ್ಯ ಒಂದು ದಿನಕ್ಕೆ 300 ಮಿಲಿ ಗ್ರಾಂ ಗಿಂತ ಅಧಿಕ ಕೊಲೆಸ್ಟರಾಲ್ ಸೇವಿಸುವಂತಿಲ್ಲ . ಏಕೆಂದರೆ ಇದು ಶೇಖಡಾ 17 ರಷ್ಟು ಹೃದಯ ರಕ್ತನಾಳದ ಸಮಸ್ಯೆಗೆ ಕಾರಣವಾಗುತ್ತದೆ ಮತ್ತು ಇಂತಹವರು ಶೇಖಡಾ 18 ರಷ್ಟು ಬಹು ಬೇಗನೆ ಸಾವಿಗೆ ಹತ್ತಿರವಾಗುತ್ತಾರೆ ಎನ್ನುತ್ತದೆ ಸಂಶೋಧನೆಯ ವರದಿ .

ಇದು ಅಂತಿಂತಹ ಸಂಶೋಧನೆಯಲ್ಲ!!!

ಇದು ಕೇವಲ ಎರಡು ಮೂರು ದಿನದ ಅಥವಾ ಮೂರು ನಾಲ್ಕು ತಿಂಗಳ ಸಂಶೋಧನೆ ಖಂಡಿತ ಅಲ್ಲ . " ಜರ್ನಲ್ ಒಫ್ ದಿ ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ " ಪ್ರಕಟಿಸಿರುವ ವರದಿಯಲ್ಲಿ ಹೇಳಿರುವಂತೆ ಅಲ್ಲಿನ ವೈದ್ಯ ತಂಡ ಈ ಪರೀಕ್ಷೆಗೆ ಸುಮಾರು 30000 ಜನರನ್ನು 31 ವರ್ಷಗಳ ಕಾಲ ಅಬ್ಸರ್ವಷನ್ ನಲ್ಲಿ ಇಟ್ಟು ಅವರ ಪ್ರತಿ ದಿನದ ಡಯಟ್ , ಲೈಫ್ ಸ್ಟೈಲ್ ಮತ್ತು ಆರೋಗ್ಯದ ವ್ಯತ್ಯಾಸಗಳನ್ನು ಗಮನಿಸಿ ಈ ತೀರ್ಮಾನಕ್ಕೆ ಬಂದಿದೆಯಂತೆ . ಆ ತಂಡದ ಸಂಶೋಧಕರು ಎಚ್ಚರಿಸಿರುವಂತೆ ಒಬ್ಬ ಮನುಷ್ಯ ಒಂದು ದಿನಕ್ಕೆ ಎರಡಕ್ಕಿಂತ ಹೆಚ್ಚಿಗೆ ಮೊಟ್ಟೆ ತಿಂದರೆ ಅವರ ದೇಹದಲ್ಲಿ ಕೊಲೆಸ್ಟರಾಲ್ ಅಂಶ ಹೆಚ್ಚಾಗಿ ಬಹು ಬೇಗನೆ ಹೃದಯ ಸಂಬಂಧಿ ಮತ್ತು ಹೃದಯ ರಕ್ತನಾಳದ ರೋಗಗಳಿಗೆ ತುತ್ತಾಗಿ ಸಾವನ್ನಪ್ಪುತ್ತಾರೆ . ಅಮೆರಿಕಾದ ಲೊವೆಲ್ಲ್ ನಲ್ಲಿರುವ ಪ್ರತಿಷ್ಠಿತ ಮಸಾಚುಸೆಟ್ಸ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿರುವ ಕಥೆರಿನ್ ಟಕ್ಕರ್ ಹೇಳುವಂತೆ ಕೋಳಿ ಮೊಟ್ಟೆಯಲ್ಲಿ ಅಡಗಿರುವ ಕೊಲೆಸ್ಟರಾಲ್ ದಿನ ನಿತ್ಯ ಮಿತಿಗಿಂತ ಅಧಿಕವಾಗಿ ಸೇವಿಸುತ್ತಾ ಬಂದರೆ ಮನುಷ್ಯನ ಆರೋಗ್ಯವನ್ನು ಕ್ಷೀಣವಾಗುವಂತೆ ಮಾಡಿ ದೇಹವನ್ನು ಸಾವಿನ ದವಡೆಗೆ ತಳ್ಳುತ್ತದಂತೆ.

Most Read: ದಿನಕ್ಕೊಂದು ಮೊಟ್ಟೆ ತಿನ್ನುವವರು ಓದಲೇಬೇಕಾದ ಲೇಖನವಿದು...

ಕಥೆರಿನ್ ಟಕ್ಕರ್ ಅವರ ಎಚ್ಚರಿಕೆಯ ಮಾತುಗಳು ಹೀಗಿವೆ

" ಯಾವ ಮನುಷ್ಯ ಮೊಟ್ಟೆ ಪ್ರಿಯನೋ ಅಂದರೆ ಪ್ರತಿ ದಿನ ಮೊಟ್ಟೆ ಅಥವಾ ಆಮ್ಲೆಟ್ ಸೇವಿಸುವ ಅಭ್ಯಾಸ ಇಟ್ಟುಕೊಂಡಿರುತ್ತಾನೋ ಅಂತಹವರಿಗೆ ನನ್ನದೊಂದು ಪುಟ್ಟ ಸಲಹೆ . ಏನೆಂದರೆ ಒಂದು ದಿನಕ್ಕೆ ಪ್ರತಿ ದಿನ ನೀವು ಸೇವಿಸುವ ಆಮ್ಲೆಟ್ ಅಥವಾ ಮೊಟ್ಟೆ 2 ರಷ್ಟಿರಲಿ . ಅದಕ್ಕಿಂತ ಹೆಚ್ಚು ಬೇಡ . ನ್ಯೂಟ್ರಿಷನ್ ಅಂದರೆ ನಮ್ಮ ಸಂಪೂರ್ಣ ದೇಹದ ಸಮತೋಲನ " ಕೇವಲ ಧೂಮಪಾನದಿಂದ ಅಥವಾ ಮದ್ಯಪಾನದಿಂದ ಅಥವಾ ಇನ್ನಾವುದೇ ಕೆಟ್ಟ ಚಟಗಳಿಂದ ಸಾವಿಗೆ ಹತ್ತಿರವಾಗುತ್ತಿದ್ದ ನಮಗೆ ಒಳ್ಳೆಯ ಅಭ್ಯಾಸದ ಮೇಲೂ ಬಂದಿರುವ ಈ ಸುದ್ದಿ ಬರ ಸಿಡಿಲೇ ಆಗಿದೆ . ಅದೇನೇ ಆದರೂ ಅರಗಿಸಿಕೊಳ್ಳಬೇಕು ಮತ್ತು ಅವರ 31 ವರ್ಷಗಳ ಕಾಲ ನಡೆಸಿದ ಸಂಶೋಧನೆಯನ್ನು ನಿಜಕ್ಕೂ ಗೌರವಿಸಬೇಕು . ಹಾಗಾಗಿ ದಿನಕ್ಕೆ ಎರಡು ಮೊಟ್ಟೆ ಮಾತ್ರ ತಿನ್ನಿ ಮತ್ತು ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ .

 
ಹೆಲ್ತ್