Back
Home » ಆರೋಗ್ಯ
ಅಡುಗೆ ಮಾಡುವಾಗ ಚರ್ಮ ಸುಟ್ಟುಕೊಂಡಿದ್ದೀರಾ ? ಇಲ್ಲಿವೆ ಎಮರ್ಜೆನ್ಸಿ ಟಿಪ್ಸ್
Boldsky | 8th Jun, 2019 11:04 AM

ರುಚಿಯಾದ ಬಾಯಿ ಚಪ್ಪರಿಸುವಂತಹ ಅಡುಗೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ . ಅದು ಕರಿದ ತಿಂಡಿಯೇ ಆಗಿರಲಿ ಅಥವಾ ಒಗ್ಗರಣೆಯ ಅಡುಗೆಯೇ ಆಗಿರಲಿ , ತಿನ್ನುವವರಿಗೆ ತಿನ್ನುವುದಷ್ಟೇ ಗೊತ್ತು . ಆದರೆ ಆ ರುಚಿಯಾದ ಅಡುಗೆ ತಯಾರಿಸಲು ಪಟ್ಟ ಶ್ರಮ ಅದನ್ನು ಮಾಡುವವರಿಗೇ ಗೊತ್ತ . ಒಂದು ಒಳ್ಳೆಯ ಅಡುಗೆ ಬಾಯಿ ಚಪ್ಪರಿಸಿಕೊಂಡು ಇನ್ನಷ್ಟು ತಿನ್ನಬೇಕು ಎನ್ನಿಸುವ ಹಾಗೆ ಹೊರ ಬರಬೇಕೆಂದರೆ ಅದಕ್ಕೆ ಖಂಡಿತ ಸಮಯ, ತಾಳ್ಮೆ ಮತ್ತು ಮಾಡುವ ಜಾಣ್ಮೆ ಎಲ್ಲವೂ ಮುಖ್ಯವೇ . ಹಾಗೆ ಆ ರೀತಿ ಅಡುಗೆ ಸಿದ್ದ ಮಾಡುವವರು ಪಡುವ ಕಷ್ಟ ಅಷ್ಟಿಷ್ಟಲ್ಲ.ಒಮ್ಮೊಮ್ಮೆ ಈರುಳ್ಳಿ ಹೆಚ್ಚುವಾಗ ಬೆರಳು ಕತ್ತರಿಸಿಕೊಂಡರೆ , ಇನ್ನೊಮ್ಮೆ ಆತುರದಲ್ಲಿ ಬಿಸಿ ಪಾತ್ರೆ ಮುಟ್ಟಿ ಕೈ ಸುಟ್ಟಿಕೊಂಡಿರುತ್ತಾರೆ.

ಇನ್ನೂ ಕೆಲವರು ಅಕಸ್ಮಾತಾಗಿ ಎಣ್ಣೆ ಮೈ ಮೇಲೆ ಹಾರಿಸಿಕೊಂಡಿರುತ್ತಾರೆ . ಇದು ಅಡುಗೆ ಮನೆಯ ಲೋಕ ಸೇರಿದ ಎಲ್ಲರಿಗೂ ಸರ್ವೇ ಸಾಮಾನ್ಯ . ಇದರ ಬಗ್ಗೆ ಯೋಚನೆ ಮಾಡುತ್ತಾ ಕೂತರೆ ಅಡುಗೆ ಸಿದ್ಧವಾಗುವುದು ತಡವಾಗುತ್ತದೆ ಎಂಬ ಕಾರಣಕ್ಕೆ ಯಾರೂ ಅಷ್ಟಾಗಿ ತಲೆ ಕೆಡಿಸಿಕೊಳ್ಳದೆ ಅಡುಗೆ ಮಾಡುವ ಕಡೆ ಹೆಚ್ಚು ಗಮನ ಕೊಡುತ್ತಾರೆ . ಆದರೆ ಇದು ಚರ್ಮದ ಇನ್ಫೆಕ್ಷನ್ ಗೆ ಕಾರಣವಾಗಬಹುದು ಎಂದರೆ ನೀವು ನಂಬುತ್ತೀರಾ ? ಖಂಡಿತ ನಂಬಲೇಬೇಕು . ಯಾವಾಗಲೇ ಆದರೂ ಚರ್ಮಕ್ಕೆ ಸುಟ್ಟ ಗಾಯವಾಗಿ ಅದು ಅತಿಯಾದ ನೋವು ಕೆರೆತ ಮುಂತಾದ ಸಂಕಟದಿಂದ ಬಳಲುತ್ತಿದ್ದರೆ , ಅದು ನಿಜಕ್ಕೂ ನಿರ್ಲಕ್ಷಿಸುವ ವಿಷಯವೇ ಅಲ್ಲ . ಅದಕ್ಕೆ ಆದಷ್ಟು ಬೇಗನೆ ಶುಶ್ರೂಷೆಯ ಅಗತ್ಯವಿದೆ ಎಂದೇ ಅರ್ಥ. ಇಲ್ಲಿ ಈ ರೀತಿ ಅಡುಗೆ ಮನೆಯಲ್ಲಿ ಅಕಸ್ಮಾತಾಗಿ ಆದ ಸುಟ್ಟ ಗಾಯಗಳಿಗೆ ಕೆಲವೊಂದು ತುರ್ತು ಮಾರ್ಗಗಳು ಕೆಳಕಂಡಂತಿವೆ:

ಚರ್ಮ ಸುಟ್ಟಿದ್ದರೆ ನಿಮ್ಮ ನೆರವಿಗೆ ಕೋಲ್ಡ್ ವಾಟರ್ ತಕ್ಷಣ ಬರುತ್ತದೆ:

ನೀವು ಆಗ ತಾನೇ ಚರ್ಮ ಸುಟ್ಟಂತಹ ಅನುಭವ ಪಡೆದಿದ್ದರೆ ಮೊದಲು ಈ ರೀತಿ ಮಾಡಿ

* ಚರ್ಮ ಸುಟ್ಟಿರುವ ಭಾಗದಲ್ಲಿ ಯಾವುದೇ ಬಟ್ಟೆಯಿದ್ದರೆ ಮೊದಲು ಅದನ್ನು ತೆಗೆದು ಬಿಡಿ. ಏಕೆಂದರೆ ಸುಟ್ಟಿರುವ ಚರ್ಮದ ಮೇಲೆ ಯಾವುದೇ ವಸ್ತು ಅಂಟಿಕೊಂಡಿದ್ದರೂ ಅದು ಗಾಯದ ಮೇಲೆ ಬರೆ ಎಳೆದಂತೆ. ನೋವನ್ನು ಮತ್ತು ಉರಿಯನ್ನು ಇನ್ನಷ್ಟು ಜಾಸ್ತಿ ಮಾಡುತ್ತದೆ .

* ಸುಟ್ಟಂತಹ ಚರ್ಮದ ಭಾಗವನ್ನು ಕೋಲ್ಡ್ ವಾಟರ್ (ತಣ್ಣೀರು ) ನಲ್ಲಿ ಅದ್ದಿ. ಇದು ನಿಮಗೆ ನೋವನ್ನು ಕಡಿಮೆ ಮಾಡಿ ಸುಟ್ಟಿರುವುದರಿಂದ ಆಗುತ್ತಿರುವ ಉರಿಯನ್ನು ಬಹು ಬೇಗನೆ ಶಮನಗೊಳ್ಳುವಂತೆ ಮಾಡುತ್ತದೆ . ಇಲ್ಲಿ ನೀವು ತಣ್ಣಗಿನ ನೀರಿನ ಬದಲು ಐಸ್ ಪ್ಯಾಕ್ ಅನ್ನು ಬೇಕಾದರೂ ಬಳಸಬಹುದು . ಎರಡರಲ್ಲಿರುವ ಉದ್ದೇಶ ಮಾತ್ರ ಒಂದೇ . ನೋವು ಮತ್ತು ಉರಿಯಿಂದ ಕೂಡಿರುವ ಸ್ಥಳವನ್ನು ಮೊದಲು ತಣ್ಣಗಾಗುವಂತೆ ಮಾಡುವುದು .

ಚರ್ಮ ಸುಟ್ಟಿರುವ ತೀವ್ರತೆಯನ್ನು ಗಮನಿಸಿ

ಮೇಲಿನ ವಿಧಾನದಲ್ಲಿ ನೀವು ಚರ್ಮವನ್ನು ನೋವಿನಿಂದ ಮತ್ತು ಉರಿಯಿಂದ ಕಾಪಾಡಿದ್ದಲ್ಲದೆ ನಿಮ್ಮ ಸುಟ್ಟಿರುವ ಚರ್ಮವನ್ನು ತೊಳೆದಿರುತ್ತೀರಿ . ಇದು ನಿಮಗೆ ಎಷ್ಟರ ಮಟ್ಟಿಗೆ ಚರ್ಮ ಸುಟ್ಟಿದೆ ಎಂಬುದನ್ನು ತೋರಿಸುತ್ತದೆ . ಯಾವುದೇ ಸುಟ್ಟ ಗಾಯವಾದರೂ ಸರಿ ಒಬ್ಬ ತಜ್ಞರ ಚಿಕಿತ್ಸೆಯ ಮೂಲಕ ಅದನ್ನು ಗುಣ ಪಡಿಸಿಕೊಳ್ಳಬೇಕಾಗುತ್ತದೆ . ಆದರೆ ಆ ಕ್ಷಣದಲ್ಲಿ ತಕ್ಷಣ ಯಾವ ತಜ್ಞರೂ ಇಲ್ಲದ ಕಾರಣ ನೀವೇ ಚರ್ಮದ ಸದ್ಯದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು . ಚರ್ಮ ಸುಟ್ಟಿರುವುದರಲ್ಲಿ ಎರಡು ಬಗೆ ಗಳಿವೆ :

* ಸುಟ್ಟಿರುವಂತಹ ಚರ್ಮದ ಭಾಗದಲ್ಲಿ ಕೇವಲ ಕೆಂಪಾಗಿ ಒಂದು ಸಣ್ಣ ಗುಳ್ಳೆಯಾಕಾರದಲ್ಲಿ ಇದ್ದು ಚರ್ಮ ಎಲ್ಲಿಯೂ ಒಡೆದು ಕೊಳ್ಳದೆ ಇರುವುದು . ಇದನ್ನು " ಫಸ್ಟ್ ಡಿಗ್ರಿ ಬರ್ನ್ " ಎಂದು ಕರೆಯುತ್ತಾರೆ .

* ಅದೇ ಚರ್ಮ ಸುಟ್ಟು ಹೋಗಿ , ಒಡೆದುಕೊಂಡು ಒಳಗೆ ಮಾಂಸ ಖಂಡ ಕಾಣುತ್ತಿದ್ದರೆ , ಅದು ಸೆಕೆಂಡ್ ಅಥವಾ ಥರ್ಡ್ ಡಿಗ್ರಿ ಬರ್ನ್ ಎಂದು ಪರಿಗಣಿಸಲ್ಪಡುತ್ತದೆ . ಇಂತಹ ಸಂಧರ್ಭದಲ್ಲಿ ಮನೆಯಲ್ಲಿರುವ ಮುಲಾಮು ಅಥವಾ ಮಾತ್ರಗಳು ಕೆಲಸಕ್ಕೆ ಬರುವುದಿಲ್ಲ . ಆಸ್ಪತ್ರೆಯ ಚಿಕಿತ್ಸೆ ಅತ್ಯಗತ್ಯ.

ಮುಂದೇನು ಮಾಡಬೇಕು?

*ಚರ್ಮ ಯಾವ ಮಟ್ಟಿಗೆ ಸುಟ್ಟು ಹೋಗಿದೆ ಎಂದು ಅರಿತಾದ ಮೇಲೆ , ಅದು ಫಸ್ಟ್ ಡಿಗ್ರಿ ಬರ್ನ್ ಆಗಿದ್ದರೆ ನೀವು ನೋವಿಗೆ ಸಿಗುವ ಓ . ಟಿ . ಸಿ ಮೆಡಿಸಿನ್ ಗಳನ್ನು ತೆಗೆದುಕೊಂಡು ಉರಿಯ ಉಪಶಮನಕ್ಕೆ ಮುಲಾಮು ಹಚ್ಚಬಹುದು . ನೈಸರ್ಗಿಕವಾಗಿ ಲಭ್ಯವಿರುವ ಅಲೋವೆರಾ ಕೂಡ ನಿಮ್ಮ ಸಹಾಯಕ್ಕೆ ಬರುತ್ತದೆ. ಆದರೆ ಯಾವುದೇ ಕಾರಣಕ್ಕೂ ಸುಟ್ಟ ಗಾಯದ ಮೇಲೆ ಬಿಸಿ ನೀರನ್ನು ಮತ್ತು ಎಣ್ಣೆಯನ್ನು ಉಪಯೋಗಿಸಬೇಡಿ . ಇದು ಗಾಯವನ್ನು ಇನ್ನಷ್ಟು ದೊಡ್ಡದು ಮಾಡುತ್ತದೆ.

*ಅದು ಸೆಕೆಂಡ್ ಡಿಗ್ರಿ ಅಥವಾ ಥರ್ಡ್ ಡಿಗ್ರಿ ಬರ್ನ್ ಆಗಿದ್ದರೆ ಖಂಡಿತ ಗಾಯವನ್ನು ಶುಚಿ ಮಾಡುವುದಷ್ಟೇ ನಿಮ್ಮ ಕೆಲಸ . ಮಿಕ್ಕ ಕೆಲಸವನ್ನು ಆಗಲೇ ಹೇಳಿದ ಹಾಗೆ ತಜ್ಞರ ಅಥವಾ ವೈದ್ಯರ ಸಲಹೆ ಮೇರೆಗೆ ಮಾಡತಕ್ಕದ್ದು. ಜಾಸ್ತಿ ಸುಟ್ಟಿರುವ ಗಾಯವನ್ನು ಹೊಂದಿರುವ ಯಾವುದೇ ವ್ಯಕ್ತಿಯನ್ನು ಆದಷ್ಟು ಬೇಗನೆ ಆಂಬುಲೆನ್ಸ್ ಅಥವಾ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸುವ ಹೊಣೆ ನಿಮ್ಮದು . ನಂತರ ಚರ್ಮ ವೈದ್ಯರು ಪರೀಕ್ಷಿಸಿ ಅದಕ್ಕೆ ಸರಿ ಹೊಂದುವಂತಹ ಚಿಕಿತ್ಸೆ ಕೊಟ್ಟು ಗುಣ ಪಡಿಸುತ್ತಾರೆ.

ವಿಶೇಷ ಮತ್ತು ಮುಖ್ಯ ಸೂಚನೆ

ಸೆಕೆಂಡ್ ಅಥವಾ ಥರ್ಡ್ ಡಿಗ್ರಿ ಬರ್ನ್ ಆಗಿರುವ ಯಾವುದೇ ವ್ಯಕ್ತಿ ತನ್ನ ಪ್ರಾಣದ ಜೊತೆ ಹೋರಾಡುತ್ತಿರುತ್ತಾನೆ. ಅಂತಹ ವ್ಯಕ್ತಿಯನ್ನು ಆಸ್ಪತ್ರೆ ಗೆ ಸಾಗಿಸುವುದರಲ್ಲಿ ಯಾವುದೇ ರೀತಿಯ ತಡ ಮಾಡಬೇಡಿ . ಒಂದು ಜೀವ ಉಳಿಸಿದ ಪುಣ್ಯ ನಿಮಗೆ ಬರುತ್ತದೆ.

   
 
ಹೆಲ್ತ್