Back
Home » ಇತ್ತೀಚಿನ
ಬೆಂಗಳೂರಿನ ಯುವಕನಿಗೆ 1,07,500 ರೂ.ಪಾವತಿಸಬೇಕು ಆಪಲ್!..ಏಕೆ ಗೊತ್ತಾ?
Gizbot | 11th Jun, 2019 12:00 PM

ವಿಶ್ವದಾದ್ಯಂತ ಗುಣಮಟ್ಟಕ್ಕೆ ಹೆಸರಾದ ಪ್ರಖ್ಯಾತ ಮೊಬೈಲ್ ತಯಾರಿಕಾ ಸಂಸ್ಥೆ ಆಪಲ್‌, ಇದೀಗ ಬೆಂಗಳೂರಿನ ಯುವಕನೋರ್ವನಿಗೆ 1 ಲಕ್ಷ ರೂಪಾಯಿಗಳನ್ನು ದಂಡವಾಗಿ ಪಾವತಿಬೇಕಾಗಿ ಬಂದಿದೆ. ಹೊಸದಾಗಿ ಖರೀದಿಸಿದ ಐಫೋನ್ ಎಕ್ಸ್‌ನಲ್ಲಿ ದೋಷವಿದ್ದರೂ ಸರಿಯಾಗಿ ಪ್ರತಿಕ್ರಿಯೆ ನೀಡದೇ ಅಥವಾ ಫೋನನ್ನು ವಾಪಸ್ ಪಡೆಯದ ಆಪಲ್‌ ಕಂಪೆನಿಯು ಗ್ರಾಹಕರಿಗೆ 1,07,500 ರೂ. ಪಾವತಿಸಬೇಕು ಎಂದು ನಗರದ ಗ್ರಾಹಕ ನ್ಯಾಯಾಲಯ ತೀರ್ಪು ನೀಡಿದೆ.

ಹೌದು, 2018ರಲ್ಲಿ ದೊಡ್ಡಬೊಮ್ಮಸಂಧ್ರ ಭಾಗದ ನಿವಾಸಿ ದೀಪಕ್‌ ಕುಮಾರ್‌ ಎಂಬುವವರು ಆಗಷ್ಟೇ ಬಿಡುಗಡೆಯಾಗಿದ್ದ ಹೊಸ 'ಐಫೋನ್ ಎಕ್' ಸ್ಮಾರ್ಟ್‌ಪೋನನ್ನು ಖರೀಸಿಸಿದ್ದರು. ನಗರದ ತಿಮ್ಮಸಂಧ್ರದಲ್ಲಿರುವ ಐ ಸೆಂಟರ್‌ನಿಂದ 64GB ಸಾಮರ್ಥ್ಯದ ಫೋನನ್ನು 97,500ರೂ. ಪಾವತಿಸಿದ್ದರು. ಆದರೆ, ಅದೇ ವರ್ಷ ಆಗಸ್ಟ್‌ ವೇಳೆಗೆ ಫೋನ್‌ನ ಸ್ಪೀಕರ್‌ನಲ್ಲಿ ದೋಷವಿರುವುದನ್ನು ದೀಪಕ್‌ ಕುಮಾರ್‌ ಅವರು ಗಮನಿಸಿದ್ದಾರೆ. ನಂತರ ಸರ್ವೀಸ್ ಸೆಂಟರ್‌ಗೆ ಫೋನ್ ನೀಡಿದ್ದಾರೆ.

ಸರ್ವೀಸ್ ಸೆಂಟರ್‌ಗೆ ಫೋನ್‌ ನೀಡಿದ್ದ ದೀಪಕ್‌ ಕುಮಾರ್‌ಗೆ ಆಗಸ್ಟ್‌ 6ರಂದು ಆಪಲ್‌ ಸಂಸ್ಥೆಯಿಂದ ಹಾನಿಗೊಳಗಾದ ಸ್ಪೀಕರ್‌ ತೆಗೆದು ಹೊಸ ಭಾಗವನ್ನು ಅಳವಡಿಸಲಾಗುವುದು ಎಂದು ಇಮೇಲ್‌ ಬಂದಿದೆ. ಇದಾದ ಐದು ದಿನಗಳ ಬಳಿಕ, ಮತ್ತೊಂದು ಇ-ಮೇಲ್‌ ಬಂದಿದ್ದು, ಅದರಲ್ಲಿ ಫೋನ್‌ ಬಿಡಿಭಾಗವು ಅನ್‌ಡಾಕ್ಯುಮೆಂಟೆಡ್ ಡ್ಯಾಮೇಜ್ ಎಂದು ಪರಿಗಣಿಸಲಾಗಿದ್ದು, ಇದನ್ನು ಯಾವುದೇ ರೀತಿಯ ವಾರೆಂಟಿಗೆ ಪರಿಗಣಿಸಲಾಗುವುದಿಲ್ಲ. ಹಾಗಾಗಿ ನೀವು ಹಣ ಪಾವತಿಸಬೇಕು ಎಂದು ತಿಳಿಸಿದ್ದಾರೆ.

ಹೊಸದಾಗಿ ಖರೀದಿಸಿದ ಐಫೋನ್ ಎಕ್ಸ್‌ನಲ್ಲಿ ದೋಷ ಕಂಡುಬಂದಿರುವುದು ನಿಜ. ಆದರೆ, ವಾರೆಂಟಿ ಇದ್ದರೂ ಇದನ್ನು ಸರಿಪಡಿಸಲು ಅಥವಾ ವಾಪಸ್‌ ಪಡೆದುಕೊಳ್ಳಲು ಆಪಲ್‌ ಸಂಸ್ಥೆ ನಿರಾಕರಿಸಿದೆ. ಇದರಿಂದ ಬೇಸತ್ತ ದೀಪಕ್‌ ಕುಮಾರ್‌ ಸೆ.24ರಂದು ದೀಪಕ್‌ ಗ್ರಾಹಕ ನ್ಯಾಯಾಲಯದಲ್ಲಿ ದೂರು ನೀಡಿದ್ದರು. ಈ ಸಂಬಂಧ ಅಗತ್ಯ ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದರು. ಇದನ್ನು ವಿಚಾರಣೆ ನಡೆಸಿರುವ ನ್ಯಾಯಾಲಯವು ಬೆಂಗಳೂರು ಯುವಕನಿಗೆ ನ್ಯಾಯ ಒದಗಿಸಿದೆ.

ಆಪಲ್‌ ಇಂಡಿಯಾ ಸಂಸ್ಥೆಯ ವರ್ತನೆಯನ್ನು ಕಟುವಾಗಿ ಖಂಡಿಸಿ, ತೀರ್ಪು ನೀಡಿರುವ ಗ್ರಾಹಕ ನ್ಯಾಯಾಲಯದ ಆದೇಶದಂತೆ, ಆಪಲ್ ಸಂಸ್ಥೆಯು ಯುವಕ ಖರೀದಿಸಿದ ದೋಷಪೂರಿತ ಐಫೋನ್ ಎಕ್ಸ್‌ ಫೋನ್‌ನ್ನು ವಾಪಸ್‌ ಪಡೆದುಕೊಳ್ಳಬೇಕು. ಯುವಕನ ನ್ಯಾಯಾಲಯದ ಖರ್ಚು ವೆಚ್ಚವಾಗಿ ಐದು ಸಾವಿರ ರೂ, ಯುವಕನ ಮಾನಸಿಕ ನೆಮ್ಮದಿ ಹಾಳು ಮಾಡಿದ್ದಕ್ಕಾಗಿ ಮತ್ತೆ ಐದು ಸಾವಿರ ರೂ. ಸೇರಿದಂತೆ ಒಟ್ಟಾರೆ 1,07,500 ರೂ.ಗಳನ್ನು 60 ದಿನದ ಒಳಗಾಗಿ ಪಾವತಿಸುವಂತೆ ಸೂಚಿಸಿದೆ.

ಓದಿರಿ: 8GB RAM ಸಾಮರ್ಥ್ಯದ ಒನ್‌ಪ್ಲಸ್ 6T ಬೆಲೆ 27,999!!

   
 
ಹೆಲ್ತ್