Back
Home » Business
ಭಾರತದ ನಿಜವಾದ ಜಿಡಿಪಿ ದರ ಎಷ್ಟು? ಅರವಿಂದ್ ಸುಬ್ರಹ್ಮಣಿಯನ್ ಹೇಳಿದ್ದೇನು?
Good Returns | 12th Jun, 2019 03:07 PM

ಕೇಂದ್ರ ಸರ್ಕಾರ 2019 ರ ಜೂನ್ 11 ರಂದು ದೇಶದ ಒಟ್ಟು ಆಂತರಿಕೆ ಉತ್ಪಾದನೆ (ಜಿಡಿಪಿ) ಮರು ಅಂದಾಜನ್ನು ದೃಢವಾಗಿ ಸಮರ್ಥಿಸಿಕೊಂಡಿದ್ದು, ಅಂತರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವ ಬ್ಯಾಂಕ್ ಇವೆರಡೂ ಮೌಲ್ಯೀಕರಿಸಿದ ಸಂಖ್ಯಾಶಾಸ್ತ್ರೀಯ ಮಾನದಂಡಗಳ ಆಧಾರದಲ್ಲೇ ಜಿಡಿಪಿ ಲೆಕ್ಕಹಾಕಲಾಗಿದೆ ಎಂದು ಸರಕಾರ ಸ್ಪಷ್ಟಪಡಿಸಿದೆ.

ದೇಶದ ಜಿಡಿಪಿಯ ಲೆಕ್ಕಾಚಾರದಲ್ಲಿ ಸರಿಯಾದ ವಿಧಾನವನ್ನು ಅನುಸರಿಸಲಾಗಿಲ್ಲ ಎಂಬ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣಿಯನ್ ಹೇಳಿದ್ದರು. ಜಿಡಿಪಿ ಬೆಳವಣಿಗೆಯನ್ನು ಅತಿಶಯವಾಗಿ ಪ್ರಸ್ತುತಪಡಿಸಲಾಗಿದ್ದು, ಸರಿಯಾದ ವಿಧಾನದಲ್ಲಿ ಮಾಪನ ಮಾಡಲಾಗಿಲ್ಲ ಎಂದು ಅರವಿಂದ್ ಸುಬ್ರಹ್ಮಣಿಯನ್ ಹೇಳಿಕೆ ನೀಡಿದ್ದರು.

ಅರವಿಂದ್ ಸುಬ್ರಹ್ಮಣಿಯನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಂಕಿ ಅಂಶ ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ತಾನು ಬಿಡುಗಡೆ ಮಾಡಿದ ಜಿಡಿಪಿ ಅಂದಾಜು ಸೂಕ್ತ ವಿಧಾನದ ಆಧಾರಿತವಾಗಿದೆ ಎಂದಿದೆ. ವಿವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಅಂದಾಜಿನ ಆಸುಪಾಸಿನಲ್ಲೇ ಜಿಡಿಪಿ ಬೆಳವಣಿಗೆ ದರವನ್ನು ಅಂದಾಜಿಸಿದೆ ಎಂದು ಸ್ಪಷ್ಟಪಡಿಸಿದ್ದು, ಜಿಡಿಪಿ ಮರು ಅಂದಾಜಿನ ಕುರಿತು ಅರವಿಂದ್ ಸುಬ್ರಹ್ಮಣ್ಯನ್ ಮಾಡಿದ ಟೀಕೆಗಳನ್ನು ತಳ್ಳಿಹಾಕಿದೆ.

2011-12 ಮತ್ತು 2016-17ರ ನಡುವೆ ಜಿಡಿಪಿ ದರವನ್ನು ಶೇ 2.5 ರಷ್ಟು ಕಡಿತಗೊಳಿಸಿರುವುದು ಬದಲಾದ ಮಾನದಂಡಗಳ ಪರಿಣಾಮವಾಗಿದೆ ಎಂದು ಅರವಿಂದ್ ಸುಬ್ರಹ್ಮಣ್ಯನ್ ಹೇಳಿದ್ದರು. ಈ ಅವಧಿಯಲ್ಲಿ ದೇಶದ ಜಿಡಿಪಿ ದರ 4.5 ರಷ್ಟು ಇರಬೇಕಿತ್ತು. ಆದರೆ ಸರಕಾರ ಜಿಡಿಪಿ ದರ ಶೇ. 7ರಷ್ಟಿದೆ ಎಂದು ಅಂದಾಜಿಸಿದೆ ಎಂದು ಸುಬ್ರಹ್ಮಣ್ಯನ್ ಹೇಳಿದ್ದರು.

ನರೇಂದ್ರ ಮೋದಿ ನೇತೃತ್ವದ ಹಿಂದಿನ ಸರ್ಕಾರದ ಅವಧಿಯಲ್ಲಿ ಜಿಡಿಪಿ ಲೆಕ್ಕ ಹಾಕುವುದನ್ನು ಪರಿಷ್ಕರಿಸಲಾಗತ್ತು.

   
 
ಹೆಲ್ತ್