Back
Home » ಆರೋಗ್ಯ
ಒಸಡುಗಳಲ್ಲಿ ಒಸರುವ ರಕ್ತ : ಶೀಘ್ರ ಪರಿಹಾರಕ್ಕೆ ನೈಸರ್ಗಿಕ ಮನೆಮದ್ದುಗಳು
Boldsky | 2nd Jul, 2019 10:49 AM

ಒಸಡುಗಳು ನಮ್ಮ ದೇಹದ ವಿಶಿಷ್ಟ ಬಗೆಯ ಅಂಗಾಂಶಗಳಾಗಿದ್ದು ಹಲ್ಲುಗಳನ್ನು ಹುದುಗಿಸಿಟ್ಟುಕೊಳ್ಳುವಷ್ಟು ದೃಢವಾಗಿರುತ್ತವೆ. ಈ ಭಾಗದಲ್ಲಿ ರಕ್ತ ಒಸರುತ್ತಿದೆ ಎಂದರೆ ಇದು periodontists ಎಂಬ ಹೆಸರಿನ ಕಾಯಿಲೆ ಆವರಿಸಿರುವ ಲಕ್ಷಣವೂ ಆಗಿರಬಹುದು. ಸಾಮಾನ್ಯವಾಗಿ ನಲವತ್ತು ದಾಟಿದ ಬಳಿಕ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ. ವಯಸ್ಸಿಗನುಗುಣವಾಗಿ ಒಸಡುಗಳ ಹೊರಪದರ ಸವೆಯುತ್ತಾ ಹಲ್ಲುಗಳ ಬೇರುಗಳನ್ನು ಪ್ರಕಟಿಸತೊಡಗುತ್ತವೆ. ಇದಕ್ಕೆ ಹಲವಾರು ಕಾರಣಗಳಿವೆ. ಸರಿಯಾದ ಕ್ರಮದಲ್ಲಿ ಹಲ್ಲಿನ ಆರೈಕೆ ಮಾಡದೇ ಇರುವುದು, ರಸದೂತಗಳ ಏರುಪೇರು ಅಥವಾ ಒಸಡುಗಳಲ್ಲಿ ಬ್ಯಾಕ್ಟೀರಿಯಾಗಳ ಸೋಂಕು ಈ ಸ್ಥಿತಿಗೆ ಕಾರಣವಾಗಬಹುದು. ಈ ಸ್ಥಿತಿ ಸಾಮಾನ್ಯವಾಗಿ ನೋವಿನಿಂದ ಕೂಡಿದ್ದು ಆಹಾರಸೇವನೆಗೆ ಅಡ್ಡಿಯುಂಟುಮಾಡುತ್ತದೆ.

ಒಸಡುಗಳ ಸವೆತಕ್ಕೆ ಪ್ರಮುಖ ಕಾರಣ ಸರಿಯಾದ ಕ್ರಮದಲ್ಲಿ ಹುಲ್ಲುಜ್ಜದೇ ಚೆನ್ನಾಗಿ ಸ್ವಚ್ಛವಾಗಬೇಕೆಂಬ ಇರಾದೆಯಿಂದ ಹೆಚ್ಚಿನ ಒತ್ತಡದಲ್ಲಿ ಅಡ್ಡಡ್ಡ ಬ್ರಶ್ ಚಲಿಸುವುದಾಗಿದೆ. ಪ್ರಾರಂಭಿಕ ವರ್ಷಗಳಲ್ಲಿ ಇದು ಕಾಣದೇ ಹೋದರೂ ಸತತವಾದ, ವರ್ಷಗಟ್ಟಲೇ ಉಜ್ಜಿದ್ದ ಪರಿಣಾಮವಾಗಿ ಒಸಡು ಮತ್ತು ಮುಖ್ಯವಾಗಿ ಹಲ್ಲು ಮತ್ತು ಒಸಡಿನ ಅಂಚಿನಲ್ಲಿರುವ ಹಲ್ಲಿನ ಭಾಗದಲ್ಲಿ ಕಾಲುವೆಯಂತೆ ಸವೆದಿರುತ್ತದೆ. ಅಲ್ಲದೇ ಸರಿಯಾದ ಕ್ರಮದಲ್ಲಿ ಹಲ್ಲುಜ್ಜದೇ ಇದ್ದರೆ ಅಥವಾ ಹಲ್ಲುಜ್ಜಲು ಅಸಡ್ಡೆ ತೋರಿದ್ದರೆ ಇಲ್ಲಿ ಸಂಗ್ರಹವಾದ ಕೂಳೆಯಲ್ಲಿ ಬ್ಯಾಕ್ಟೀರಿಯಾದ ಸೋಂಕು ಹರಡುವ ಮೂಲಕವೂ ಈ ಸ್ಥಿತಿ ಎದುರಾಗಬಹುದು. ಮಹುಮೇಹಿಗಳು, ಹೆಚಿ ಐ ವಿ / ಏಡ್ಸ್ ರೋಗಿಗಳಿಗೂ ಈ ತೊಂದರೆ ಎದುರಾಗುವ ಸಾಧ್ಯತೆ ಹೆಚ್ಚು. ಈ ಸ್ಥಿತಿಯ ಇತರ ಲಕ್ಷಣಗಳೆಂದರೆ ಹಲ್ಲುಗಳಿಗೆ ಬಿಸಿ, ತಣ್ಣಗೆ ಏನನ್ನೂ ತಾಕಿಸಲು ಸಾಧ್ಯವಾದಷ್ಟು ಸೂಕ್ಷ್ಮಸಂವೇದಿಯಾಗುವುದು, ಒಸಡುಗಳಲ್ಲಿ ಸತತವಾಗಿ ರಕ್ತ ಸುರಿಯುತ್ತಿರುವುದು, ಹಲ್ಲುಗಳಲ್ಲಿ ಕುಳಿ ಬೀಳುವುದು ಇತ್ಯಾದಿ. ಆದರೆ ಸೂಕ್ತ ಆರೈಕೆ ಮತ್ತು ತಕ್ಷಣದ ಕ್ರಮದಿಂದ ಸುಲಭ ಚಿಕಿತ್ಸೆಯಲ್ಲಿ ಈ ತೊಂದರೆಯನ್ನು ನಿರ್ವಹಿಸಬಹುದು. ಒಂದು ವೇಳೆ ನಿರ್ಲಕ್ಷ್ಯ ತೋರಿದರೆ ಒಸಡುಗಳ ಸವೆತ ಹೆಚ್ಚುತ್ತಾ ಹೋಗಿ ಗಂಭೀರ ಸಮಸ್ಯೆ ಎದುರಾಗಬಹುದು. ಬನ್ನಿ, ಈ ತೊಂದರೆಯನ್ನು ನಿವಾರಿಸಲು ನಿಸರ್ಗ ನೀಡಿರುವ ಎಂಟು ಬಗೆಯ ಚಿಕಿತ್ಸೆಗಳನ್ನು ನೋಡೋಣ:

ಎಣ್ಣೆಯ ಮುಕ್ಕಳಿಕೆ (Oil pulling)

ಒಸಡುಗಳಲ್ಲಿ ಒಸರುವ ರಕ್ತದ ತೊಂದರೆಯನ್ನು ಸರಿಪಡಿಸಲು ಹಾಗೂ ಬಾಯಿಯ ಆರೋಗ್ಯ ಕಾಪಾಡಿಕೊಳ್ಳಲು ಕೊಬ್ಬರಿ ಎಣ್ಣೆಯ ಮುಕ್ಕಳಿಕೆ ಉತ್ತಮ ಪರಿಹಾರವಾಗಿದೆ. ಕೊಬ್ಬರಿ ಎಣ್ಣೆಯ ಉರಿಯೂತ ನಿವಾರಕ ಗುಣ ಮತ್ತು ಬ್ಯಾಕ್ಟೀರಿಯಾ ನಿವಾರಕ ಗುಣಗಳು ಬಾಯಿಯಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳು ಮತ್ತು ಕ್ರಿಮಿಗಳು ವೃದ್ದಿಯಾಗದಂತೆ ತಡೆಯುತ್ತದೆ. ಅಲ್ಲದೇ ನಿತ್ಯವೂ ಕೊಬ್ಬರಿ ಎಣ್ಣೆಯ ಮುಕ್ಕಳಿಕೆಯಿಂದ ಒಸಡುಗಳು ಶೀಘ್ರವೇ ಗುಣವಾಗುವ ಜೊತೆಗೇ ಹಲ್ಲುಗಳಲ್ಲಿ ಕುಳಿಯಾಗದಂತೆ ಕಾಪಾಡಬಹುದು ಹಾಗೂ ಬಾಯಿಯ ದುರ್ವಾಸನೆಯಿಂದಲೂ ಮುಕ್ತಿ ಪಡೆಯಬಹುದು.

ಬಳಕೆಯ ವಿಧಾನ: ಕೊಂಚ ಕೊಬ್ಬರಿ ಎಣ್ಣೆಯನ್ನು ನೇರವಾಗಿ ಬಾಯಿಗೆ ಹಾಕಿಕೊಂಡು ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಸತತವಾಗಿ ಮುಕ್ಕಳಿಸುತ್ತಿರಬೇಕು. ವಿಶೇಷವಾಗಿ ಹಲ್ಲುಗಳ ಸಂದುಗಳಲ್ಲಿ ಎಣ್ಣೆ ಸರಿಯುವಂತೆ ಮುಕ್ಕಳಿಸಿ. ಬಳಿಕ ಈ ಎಣ್ಣೆಯನ್ನು ಉಗುಳಿ ನಿಮ್ಮ ನಿತ್ಯದ ಸೌಮ್ಯ ಹಲ್ಲುಜ್ಜುವ ಪೇಸ್ಟ್ ಅಥವಾ ಕೊಬ್ಬರಿ ಎಣ್ಣೆಯಾಧಾರಿತ ಹಲ್ಲುಜ್ಜುವ ಲೇಪ ಬಳಸಿ ಸ್ವಚ್ಛಪಡಿಸಿಕೊಳ್ಳಿ.

ನೀಲಗಿರಿ ಎಣ್ಣೆ

ನೀಲಗಿರಿ ಎಣ್ಣೆ ಪ್ರಬಲ ಉರಿಯೂತ ನಿವಾರಕ ಹಾಗೂ ಕ್ರಿಮಿ ನಿವಾರಕ ಅವಶ್ಯಕ ತೈಲವಾಗಿದ್ದು ಸವೆಯುತ್ತಿರುವ ಒಸಡುಗಳನ್ನು ತಡೆಯಲು ಹಾಗೂ ಹೊಸ ಒಸಡುಗಳ ಜೀವಕೋಶಗಳ ಬೆಳವಣಿಗೆಗೆ ಪ್ರಚೋದಿಸಲು ನೆರವಾಗುವ ಎಣ್ಣೆಯಾಗಿದೆ. ಅಲ್ಲದೇ ಬಾಯಿಯಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನಿವಾರಿಸಿ ಹಲ್ಲುಗಳ ನಡುವೆ ಕೂಳೆ ತುಂಬಿಕೊಳ್ಳದಂತೆಯೂ ತಡೆಯುತ್ತದೆ.

ಬಳಕೆಯ ವಿಧಾನ: ಒಂದು ಕಪ್ ನೀರಿನಲ್ಲಿ ಕೆಲವಾರು ತೊಟ್ಟುಗಳಷ್ಟು ನೀಲಗಿರಿ ಎಣ್ಣೆಯನ್ನು ಬೆರೆಸಿ ಈ ನೀರಿನಿಂದ ಬಾಯಿಯನ್ನು ಮುಕ್ಕಳಿಸಿ ಹಾಗೂ ಬೆರಳುಗಳಿಂದ ಒಸಡುಗಳನ್ನು ನಯವಾಗಿ ಮಸಾಜ್ ಮಾಡಿಕೊಳ್ಳಿ.

ಹಸಿರು ಟೀ:

ಒಂದು ಸಂಶೋಧನೆಯಲ್ಲಿ ಜಪಾನ್ ನ ಕೆಲವು ಸಂಶೋಧಕರು ಹಸಿರು ಟೀ ಸೇವನೆಯಿಂದ ಬಾಯಿಯ ಆರೋಗ್ಯದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಿದಾಗ ಒಂದು ಅಚ್ಚರಿಯ ಸಂಗತಿಯನ್ನು ಗಮನಿಸಿದರು. ಅಂದರೆ, ಕೆಲವು ವಾರಗಳ ಕಾಲ ಪ್ರತಿದಿನ ಒಂದು ಕಪ್ ಹಸಿರು ಟೀ ಸೇವಿಸಿದವರಲ್ಲಿ ಪೀರಿಯೋಡಾಂಟಿಸ್ ರೋಗ ಆವರಿಸುವ ಸಾಧ್ಯತೆ ತಗ್ಗಿರುವುದು ಹಾಗೂ ಹಲ್ಲುಗಳ ಮತ್ತು ಒಸಡುಗಳ ಆರೋಗ್ಯದಲ್ಲಿ ಹೆಚ್ಚಳವಾಗಿರುತ್ತದೆ.

ಹಿಮಾಲಯನ್ ಉಪ್ಪು

ಈ ಉಪ್ಪಿನಲ್ಲಿಯೂ ಉರಿಯೂತ ನಿವಾರಕ ಗುಣಗಳಿವೆ ಹಾಗೂ ಒಸಡಿನಲ್ಲಿ ರಕ್ತಸ್ರಾವಕ್ಕೆ ಕಾರಣವಾದ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಮೂಲಕ ಉರಿಯೂತವನ್ನು ನಿವಾರಿಸಿ ಗುಣಪಡಿಸಲು ನೆರವಾಗುತ್ತವೆ. ಈ ಉಪ್ಪನ್ನು ನೀರಿನೊಂದಿಗೆ ಉಪಯೋಗಿಸಬಹುದಾದರೂ ಕೊಬ್ಬರಿ ಎಣ್ಣೆ ಇನ್ನೂ ಉತ್ತಮ.

ವಿಧಾನ: ಒಂದು ದೊಡ್ಡ ಚಮಚದಷ್ಟು ಕೊಬ್ಬರಿ ಎಣ್ಣೆಗೆ ಕೊಂಚ ಗುಲಾಬಿ ಬಣ್ಣದ ಹಿಮಾಲಯನ್ ಉಪ್ಪು ಬೆರೆಸಿ ಚೆನ್ನಾಗಿ ಕಲಕಿ ಪೂರ್ಣವಾಗಿ ಕರಗಿಸಿ. ಈ ಎಣ್ಣೆಯಿಂದ ಒಸಡುಗಳನ್ನು ಬೆರಳುಗಳ ಮೂಲಕ ದಪ್ಪನಾಗಿ ಹಚ್ಚಿ ನಯವಾಗಿ ಮಸಾಜ್ ಮಾಡಿಕೊಳ್ಳಿ. ಕೆಲ ನಿಮಿಷಗಳ ಬಳಿಕ ಉರುಗುಬೆಚ್ಚನೆಯ ನೀರಿನಿಂದ ಚೆನ್ನಾಗಿ ಮುಕ್ಕಳಿಸಿ ಉಗಿಯಿರಿ.

ಲೋಳೆಸರ

ಲೋಳೆಸರ ಅಥವಾ ಆಲೋವೆರಾದ ತಿರುಳಿನಲ್ಲಿಯೂ ಪ್ರಬಲ ಉರಿಯೂತ ನಿವಾರಕ ಗುಣಗಳಿದ್ದು ಊದಿಕೊಂಡ ಹಾಗೂ ರಕ್ತಜಿನುಗುತ್ತಿರುವ ಸವೆದ ಒಸಡುಗಳನ್ನು ಮತ್ತೆ ಮೊದಲಿನಂತಾಗಿಸುವ ಗುಣವಿದೆ. ಅಲ್ಲದೇ ಸವೆದಿದ್ದ ಜೀವಕೋಶಗಳು ಮತ್ತೆ ಹುಟ್ಟಲು ಲೋಳೆಸರ ನೆರವಾಗುತ್ತದೆ.

ಬಳಕೆಯ ವಿಧಾನ: ಒಂದು ತಾಜಾ ಕೋಡಿನಿಂದ ಪ್ರತ್ಯೇಕಿಸಲ್ಪಟ್ಟ ಲೋಳೆಸರದ ತಿರುಳನ್ನು ನೇರವಾಗಿ ಒಸಡುಗಳಿಗೆ ಹಚ್ಚಿಕೊಳ್ಳಿ. ಸುಮಾರು ಐದರಿಂದ ಹತ್ತು ನಿಮಿಷ ಹಾಗೇ ಬಿಟ್ಟು ಬಳಿಕ ತಣ್ಣೀರಿನಿಂದ ಮುಕ್ಕಳಿಸಿ ನಿವಾರಿಸಿ. ಉತ್ತಮ ಪರಿಣಾಮ ಪಡೆಯುವವರೆಗೆ ನಿತ್ಯವೂ ಅನುಸರಿಸಿ.

ಲವಂಗದ ಎಣ್ಣೆ

ಹಲ್ಲುನೋವಾದಾಗ ಲವಂಗದ ಎಣ್ಣೆಯನ್ನು ಹೆಚ್ಚಿಕೊಳ್ಳುವುದು ಹೆಚ್ಚಿನವರಿಗೆ ತಿಳಿದಿರುವ ವಿಧಾನವೇ ಆಗಿದೆ. ಹಲ್ಲುಗಳಲ್ಲಿ ಕುಳಿ, ನೋವು ಮೊದಲಾದ ತೊಂದರೆಗಳಿಗೂ ಈ ಎಣ್ಣೆ ಉತ್ತಮ ಪರಿಹಾರವಾಗಿದೆ. ವಾಸ್ತವವಾಗಿ ಎವಂಗದ ಎಣ್ಣೆ ಪ್ರಬಲ ಕ್ರಿಮಿನಿವಾರಕವಾಗಿದ್ದು ಒಸಡುಗಳಲ್ಲಿದ್ದ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ ಹಾಗೂ ಇನ್ನಷ್ಟು ಸವತವಾಗುವುದನ್ನು ತಡೆಯುತ್ತದೆ.

ಬಳಕೆಯ ವಿಧಾನ: ಒಂದರೆಡು ತೊಟ್ತು ಲವಂಗದ ಎಣ್ಣೆಯನ್ನು ನೇರವಾಗಿ ಒಸಡುಗಳಿಗೆ ಹೆಚ್ಚಿಕೊಳ್ಳಿ ಹಾಗೂ ನಯವಾಗಿ ಮಸಾಜ್ ಮಾಡಿಕೊಳ್ಳಿ. ಉತ್ತಮ ಪರಿಣಾಮ ಪಡೆಯುವವರೆಗೆ ನಿತ್ಯವೂ ಅನುಸರಿಸಿ.

ಎಳ್ಳೆಣ್ಣೆ

ನೀರಿನಷ್ಟು ತೆಳ್ಳಗಿರುವ ಈ ಎಣ್ಣೆಯೂ ಪ್ರಬಲ ಬ್ಯಾಕ್ಟೀರಿಯಾ ನಿವಾರಕ ಹಾಗೂ ಉರಿಯೂತ ನಿವಾರಕ ಗುಣಗಳನ್ನು ಪಡೆದಿದೆ ಹಾಗೂ ಒಸಡಿನಲ್ಲಿ ಒಸರುವ ರಕ್ತಕ್ಕೆ ಕಾರಣವಾದ ಸೋಂಕನ್ನು ಸರಿಪಡಿಸಿ ಸವೆತದಿಂದ ನಷ್ತಗೊಂಡಿದ್ದ ಜೀವಕೋಶಗಳು ಮತ್ತೆ ಹುಟ್ಟಲು ನೆರವಾಗುತ್ತದೆ. ಬಳಕೆಯ ವಿಧಾನ: ಒಂದು ಕಪ್ ಉಗುರುಬೆಚ್ಚನೆಯ ನೀರಿಗೆ ಮೂರರಿಂದ ನಾಲ್ಕು ತೊಟ್ಟು ಎಳ್ಳೆಣ್ಣೆ ಬೆರೆಸಿ ಈ ನೀರಿನಿಂದ ಬಾಯಿಯನ್ನು ಮುಕ್ಕಳಿಸುತ್ತಿರಿ. ಪೂರ್ಣವಾಗಿ ಗುಣವಾಗುವವರೆಗೆ ದಿನದಲ್ಲಿ ಕೆಲವಾರು ಬಾರಿ ನಿರ್ವಹಿಸುತ್ತಿರಿ.

ನೆಲ್ಲಿಕಾಯಿ

ಸವೆದಿರುವ ಒಸಡುಗಳಿಗೆ ಬೆಲ್ಲಿಕಾಯಿ ಶೀಘ್ರ ಚೇತರಿಸಿಕೊಳ್ಳುವ ಆರೈಕೆ ನೀಡುತ್ತದೆ ಹಾಗೂ ಸವೆದು ನಷ್ಟವಾಗಿದ್ದ ಜೀವಕೋಶಗಳು ಮತ್ತೆ ಹೊಸದಾಗಿ ಹುಟ್ಟಲು ನೆರವಾಗುತ್ತದೆ. ಇದಕ್ಕಾಗಿ ನೆಲ್ಲಿಕಾಯಿಯ ತಿರುಗಳನ್ನು ತಿಂದು ರಸವನ್ನು ಬಾಯಿತುಂಬಾ ಕಲಕಿಸಿಕೊಳ್ಳಬಹುದು. ಅಥವಾ ರಸವನ್ನು ನೇರವಾಗಿ ಬಾಯಿಗೆ ಹಾಕಿಕೊಂಡು ಮುಕ್ಕಳಿಸಬಹುದು.

ವಿಧಾನ: ನಾಲ್ಕಾರು ನೆಲ್ಲಿಕಾಯಿಗಳ ತಿರುಳನ್ನು ಸಂಗ್ರಹಿಸಿ ನುಣ್ಣಗೆ ಅರೆದು ತೆಳುಬಟ್ಟೆಯಲ್ಲಿ ಹಿಂಡಿ ರಸ ಸಂಗ್ರಹಿಸಿ. ಈ ನೀರಿನಿಂದ ದಿನದಲ್ಲಿ ಕೆಲವಾರು ಬಾರಿ ಮುಕ್ಕಳಿಸುತ್ತಿರಿ. ಕೊನೆಯ ಮಾತು: ಸಾಮಾನ್ಯವಾಗಿ ನಾವು ಹೆಚ್ಚಿನ ತೊಂದರೆ ಕೊಡದ ಚಿಕ್ಕ ಪುಟ್ಟ ತೊಂದರೆಗಳನ್ನು ಅಲಕ್ಷಿಸಿ ಬಿಡುತ್ತೇವೆ. ಆದರೆ ಹೆಚ್ಚಿನ ತೊಂದರೆಗಳು ಈ ಅಲಕ್ಷ್ಯದಿಂದಲೇ ಆರಂಭವಾಗಿರುವುದು ಮಾತ್ರ ಸುಳ್ಳಲ್ಲ. ಹಾಗಾಗಿ ಬಾಯಿಯ ಆರೋಗ್ಯದ ಕಡೆ ನಿತ್ಯವೂ ಗಮನ ಹರಿಸಬೇಕು ಹಾಗೂ ಕೊಂಚವಾದರೂ ನೋವು, ಉರಿ, ಅಸಹನೆ ಅಥವಾ ರಕ್ತಸ್ರಾವದ ಸೂಚನೆ ಕಂಡುಬಂದರೆ ತಕ್ಷಣ ದಂತವೈದ್ಯರಲ್ಲಿ ತೋರಿಸಿಕೊಳ್ಳಬೇಕು.

   
 
ಹೆಲ್ತ್