Back
Home » ಆರೋಗ್ಯ
ಮುಂಗಾರು ಋತು ಅಥವಾ ಮಳೆಗಾಲದಲ್ಲಿ ಆರೋಗ್ಯದ ಕಾಳಜಿಯನ್ನು ನಿರ್ವಹಿಸುವುದು ಹೇಗೆ?
Boldsky | 10th Jul, 2019 12:30 PM

ಮಾನ್ಸೂನ್ ಅಥವಾ ಮುಂಗಾರು ಮಳೆಯ ಆಗಮನ ಎಲ್ಲರ ಮೊಗದಲ್ಲಿ ಹರ್ಷ ತರಿಸಿ ಮುಂದಿನ ಬೆಳೆಗೆ ಕೃಷಿ ಚಟುವಟಿಕೆಗಳು ಗರಿಗೆದರುತ್ತವೆ. ಬಿಸಿಲಿಗೆ ಬೆಂಡಾಗಿದ್ದ ಭೂಮಿ ತಂಪಾಗಿ ಹಸಿರಿನಿಂದ ನಳನಳಿಸತೊಡಗುತ್ತಾಳೆ. ಆದರೆ ಜೊತೆಗೇ ಕೆಲವು ಅನಾರೋಗ್ಯಗಳೂ ಅನಪೇಕ್ಷಿತ ಅತಿಥಿಯಾಗಿ ಆಗಮಿಸುತ್ತವೆ. ವಿಶೇಷವಾಗಿ ಮಳೆಗಾದಲ್ಲಿ ಆವರಿಸುವ ಕಾಯಿಲೆಗಳು ಬೇಡವೆಂದರೂ ಆರೋಗ್ಯವನ್ನು ಬಾಧಿಸುತ್ತವೆ. ಅದರಲ್ಲೂ ಮನೆಯಲ್ಲಿ ಹಿರಿಯರು ಹಾಗೂ ಮಕ್ಕಳಿದ್ದರಂತೂ ಇವರ ಮೂಲಕ ಕೆಮ್ಮು, ಶೀತ, ಅಲರ್ಜಿ, ಸೀನು ಮೊದಲಾದವು ಇನ್ನೂ ಮೊದಲೇ ಮನೆಗೆ ಬಂದುಬಿಡುತ್ತವೆ.

ವರ್ಷದ ಉಳಿದ ಸಮಯದ ಆಹಾರವನ್ನೇ ಮಳೆಗಾಲದಲ್ಲಿಯೂ ಮುಂದುವರೆಸಬೇಕಾದರೆ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಏಕೆಂದರೆ ಮಳೆಗಾಲದಲ್ಲಿ ಗಾಳಿಯಲ್ಲಿ ತೇಲಾಡುವ ನೂರಾರು ಬಗೆಯ ಹೊಸ ಹೊಸ ವೈರಸ್ಸುಗಳಿಗೆ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಪ್ರತಿರೋಧವನ್ನು ಒಡ್ಡಬೇಕಾದರೆ ಈ ಶಕ್ತಿಗೆ ಪೂರಕವಾದ ಆಹಾರಗಳನ್ನು ಮಳೆಗಾಲದಲ್ಲಿ ಹೆಚ್ಚು ಹೆಚ್ಚಾಗಿ ಸೇವಿಸಬೇಕಾದ ಅಗತ್ಯವಿದೆ.

ಮುಂಗಾರು ಮಳೆಯ ಮೊದಲ ಹನಿಗಳು ಚೇತೋಹಾರಿಯೇನೋ ಸರಿ, ಕವಿಗಳಿಗೆ ಸ್ಪ್ರೂರ್ತಿಯೂ ಸರಿ, ಬೇಸಿಗೆಯಿಂದ ಬೆಂದಿದ್ದ ಜೀವಗಳಿಗೆ ತಂಪೂ ಸರಿ. ಆದರೆ ಈ ಹನಿಗಳಲ್ಲಿ ಗಾಳಿಯಲ್ಲಿದ್ದ ಕಲ್ಮಶ, ರಾಸಾಯನಿಕ, ಹೊಗೆ ಮೊದಲಾದವು ಮೊತ್ತ ಮೊದಲಾಗಿ ಹಾಗೂ ಅತಿ ಹೆಚ್ಚಿನ ಪ್ರಮಾಣದಲ್ಲಿ ಬೆರೆತಿರುತ್ತವೆ. ಹಾಗಾಗಿ ಯಾವುದೇ ಮಳೆಯ ಮೊದಲ ಹನಿಗಳಿಂದ ಆದಷ್ಟೂ ದೂರವಿರುವುದು ಅವಶ್ಯ ಹಾಗೂ ವಿಶೇಷವಾಗಿ ಮಳೆಗಾಲವಿಡೀ ನಾವು ಸೇವಿಸುವ ಅಹಾರ ಹಾಗೂ ನಮ್ಮ ಚಟುವಟಿಕೆಗಳಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ.

ಮಾನ್ಸೂನ್ ಆಗಮನದ ಬಳಿಕ ಆರೋಗ್ಯವನ್ನು ಬಾಧಿಸುವ ಕೆಲವು ಕಾಯಿಲೆಗಳ ಸಾಧ್ಯತೆ ಅತೀವವಾಗಿ ಹೆಚ್ಚುತ್ತದೆ. ವಿಶೇಷವಾಗಿ ಮಕ್ಕಳು ಈ ರೋಗಗಳಿಗೆ ಸುಲಭವಾಗಿ ತುತ್ತಾಗುತ್ತಾರೆ. ಕೇವಲ ಗಾಳಿಯಲ್ಲಿ ತೇಲಿಬರುವ ವೈರಸ್ಸುಗಳು ಮಾತ್ರವಲ್ಲ, ನೀರಿನಿಂದ ಹರಡುವ ಬ್ಯಾಕ್ಟೀರಿಯಾಗಳೂ ಈಗ ಎಲ್ಲೆಡೆ ಹರಿಯುವ ನೀರಿನ ಮೂಲಕ ಕುಡಿಯುವ ನೀರಿನೊಂದಿಗೆ ಬೆರೆತು ಆರೋಗ್ಯಕ್ಕೆ ಪಣವೊಡ್ಡಿ ನಮ್ಮ ಜೀವ ನಿರೋಧಕ ಶಕ್ತಿಯನ್ನೂ ಕುಂದಿಸಬಹುದು.

ಮಳೆಗಾಲದಲ್ಲಿ ಸಾಮಾನ್ಯವಾಗಿ ಎದುರಾಗುವ ಕಾಯಿಲೆಗಳೆಂದರೆ ಅಜೀರ್ಣತೆ, ಅಲರ್ಜಿಗಳು ಹಾಗೂ ಕೆಲವು ಬಗೆಯ ಸೋಂಕುಗಳು. ಮಳೆಗಾಲದ ಅವಧಿಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಗತ್ಯವಿರುವ ಕೆಲವು ಅಮೂಲ್ಯ ಸಲಹೆಗಳನ್ನು ಇಂದಿನ ಲೇಖನದಲ್ಲಿ ನೀಡಲಾಗಿದ್ದು ವಿಶೇಷವಾಗಿ ಭಾರತದಂತಹ ಸಮಶೀತೋಷ್ಣ ವಲಯದ ಪ್ರದೇಶದಲ್ಲಿ ಆರೋಗ್ಯವನ್ನು ವೈರಸ್ ಮತ್ತು ಬ್ಯಾಕ್ಟೀರಿಯಾಗಳ ಧಾಳಿಯಿಂದ ಹೇಗೆ ರಕ್ಷಿಸಿಕೊಳ್ಳಬೇಕೆಂಬುದನ್ನು ನೋಡೋಣ.

* ಮಳೆಗಾಲದ ಅತಿ ಚಳಿಯೂ ಅಲ್ಲದ, ತೇವಭರಿತ ವಾತಾವರಣ ಯಾರಿಗಾದರೂ ಸರಿ, ರಸ್ತೆಬದಿಯ ಹುರಿದ, ಕರಿದ, ವಿಶೇಷವಾಗಿ ಮೆಣಸಿನಕಾಯಿ ಬೋಂಡಾ ಮೊದಲಾದವುಗಳನ್ನು ತಿನ್ನುವಂತೆ ಪ್ರೇರೇಪಿಸುತ್ತವೆ. ಆದರೆ ಮಳೆಗಾಲದಲ್ಲಿ ಹಾದಿಬದಿಯಲ್ಲಿ ತೆರೆದಿಟ್ಟ ಆಹಾರಗಳನ್ನು ಸೇವಿಸುವುದು ತರವಲ್ಲ. ಅಷ್ತೇ ಅಲ್ಲ, ಹಸಿ ತರಕಾರಿ ಮತ್ತು ಮಳೆನೀರನ್ನು ನೇರವಾಗಿ ಕುಡಿಯುವುದೂ ಆರೋಗ್ಯಕ್ಕೆ ಒಳ್ಳೆಯದಲ್ಲ

* ಮಳೆಗಾಲದೊಂದಿಗೇ ಆಗಮಿಸುವ ಇನ್ನೊಂದು ಅಪಾಯಕಾರಿ ಅತಿಥಿಗಳೆಂದರೆ ಸೊಳ್ಳೆಗಳು. ಇವನ್ನು ಮನೆಯೊಳಗೆ ಬರದಂತೆ ಸೊಳ್ಳೆವಿಕರ್ಷಣಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿ ಆಗಬೇಕಾದ ಕ್ರಮವಾಗಿದೆ. ಮನೆಯ ಕಿಟಕಿಗಳಿಗೆ ಸೊಳ್ಳೆಪರದೆ ಅಳವಡಿಸುವುದೂ ಉತ್ತಮ ಹಾಗೂ ಮಲೇರಿಯಾ ನಿರೋಧಕ ಔಷಧಿಗಳನ್ನು ಪಡೆದುಕೊಳ್ಳಬೇಕು.

* ಮಳೆಯ ನೀರಿನಲ್ಲಿ ಪಾದಗಳನ್ನು ಒದ್ದೆ ಮಾಡುತ್ತಾ ನಡೆಯುವುದು ಎಲ್ಲರಿಗೂ ಇಷ್ಟವೇ ಸರಿ. ಆದರೆ ಈ ನೀರಿನಲ್ಲಿ ಏನೇನು ಬೆರೆತಿದೆಯೋ ನಮಗಾರಿಗೂ ಗೊತ್ತಿಲ್ಲ. ಆದರೆ ಈ ನೀರಿನಲ್ಲಿ ಪಾದಗಳನ್ನು ಒದ್ದೆ ಮಾಡಿಕೊಳ್ಳುವುದೆಂದರೆ ಶಿಲೀಂಧ್ರದ ಸೋಂಕಿಗೆ ಮುಕ್ತ ಆಹ್ವಾನವಾಗಿದೆ.

* ಮನೆಯಿಂದ ಹೊರಹೋಗಬೇಕಾದರೆ ಆ ಸಮಯದಲ್ಲಿ ಮಳೆ ಇಲ್ಲದಿದ್ದರೂ ಸರಿ, ಸದಾ ಮಳೆಯನ್ನೆದುರಿಸಲು ಸನ್ನದ್ಧರಾಗಿಯೇ ತೆರಳಿ. ಕೊಡೆ ಅಥವಾ ರೇನ್ ಕೋಟು ಮೊದಲಾದವುಗಳನ್ನು ಜೊತೆಗೇ ಕೊಂಡೊಯ್ಯಿರಿ.

* ಮಳೆಗಾಲದಲ್ಲಿ ಅತಿ ಬಿಸಿಯೂ ಅಲ್ಲದ, ತಣ್ಣನೆಯೂ ಅಲ್ಲದ ಆಹಾರ ಮತ್ತು ದ್ರವಗಳನ್ನೇ ಸೇವಿಸಿ.

* ಮಳೆನೀರು ನಿಂತ ಸ್ಥಳಗಳಲ್ಲಿ ಅಥವಾ ಮಳೆಯಲ್ಲಿ ನೆನೆಯುತ್ತಾ ಮಕ್ಕಳನ್ನು ಆಡಲು ಬಿಡದಿರಿ.

* ರಸ್ತೆಬದಿಯ ಮಳೆನೀರು ನಿಂತಿರುವ ಹೊಂಡಗಳಿಂದ ಆದಷ್ಟೂ ದೂರದಲ್ಲಿ ಸಾಗಿ. ಏಕೆಂದರೆ ಈ ನೀರಿನಡಿಯಲ್ಲಿ ಕೆಸರು ಸಂಗ್ರಹವಾಗಿದ್ದು ಈ ಹೊಂಡದ ಮೇಲೆ ವೇಗವಾಗಿ ಸಾಗುವ ವಾಹನಗಳು ಕೆಸರನ್ನು ಮೈಮೇಲೆ ಎರಚಬಹುದು

* ಮನೆ ತಲುಪಿದ ಬಳಿಕ ಮೊತ್ತ ಮೊದಲಾಗಿ ಮಾಡಬೇಕಾದ ಕೆಲಸವೆಂದರೆ ಪಾದಗಳನ್ನು ಚೆನ್ನಾಗಿ ತೊಳೆದುಕೊಂಡು ಒಣಬಟ್ಟೆಯಲ್ಲಿ ಒರೆಸಿ ಒಣದಾಗಿರಿಸುವುದು. ಅಷ್ಟೇ ಅಲ್ಲ, ಒದ್ದೆಬಟ್ಟೆಗಳನ್ನೂ ತಕ್ಷಣವೇ ಬದಲಿಸಿ ಆದಷ್ಟೂ ಒಣದಾಗಿಯೇ ಇರುವ ಮೂಲಕ ಶೀತ ಕೆಮ್ಮುಗಳನ್ನು ದೂರವಿರಿಸಬೇಕು.

* ಒದ್ದೆಯಾದ ಕೂದಲು ಮತ್ತು ಬಟ್ಟೆಗಳೊಂದಿಗೆ ಎಂದಿಗೂ ಹವಾನಿಯಂತ್ರಣವಿರುವ ಕೋಣೆಗೆ ತೆರಳದಿರಿ. ಏಕೆಂದರೆ ಮೊದಲೇ ನೆನೆದಿದ್ದ ಬಟ್ಟೆ ಮತ್ತು ಕೂದಲುಗಳಲ್ಲಿ ಹವಾನಿಯಂತ್ರಣವಿರುವ ಕೋಣೆಯ ಆರ್ದ್ರತೆ ಶಿಲೀಂಧ್ರದ ಸೋಂಕನ್ನು ಆವರಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಮಳೆಗಾಲದಲ್ಲಿ ಸೇವಿಸಬೇಕಾದ ಆಹಾರದ ಆಯ್ಕೆ

ಮಳೆಗಾಲದಲ್ಲಿ ಸಿದ್ಧ ಆಹಾರಗಳು ಬೇಡವೇ ಬೇಡ ಎಂದು ತಜ್ಞರು ಎಚ್ಚರಿಸುತ್ತಾರೆ. ವಿಶೇಷವಾಗಿ ರಸ್ತೆಬದಿಯ ಅಹಾರಗಳಿಗೆ ಕಡಿವಾಣ ಹಾಕಿ. ಈ ಅಹಾರಗಳ ಸೇವನೆ ಹೊಟ್ಟೆಯ ಸೋಂಕಿಗೆ ಮುಕ್ತ ಆಹ್ವಾನವಾಗಿದೆ.

ಮಳೆಗಾಲದಲ್ಲಿ ಹೆಚ್ಚು ಜನರು ಅಜೀರ್ಣತೆಯಿಂದ ಬಳಲುತ್ತಾರೆ. ಏಕೆಂದರೆ ಗಾಳಿಯಲ್ಲಿ ತೇಲಿಬರುವ ಹಲವಾರು ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳು ನಮ್ಮ ದೇಹದಲ್ಲಿ ಅಡಿಯಿಡುತ್ತವೆ. ಈ ಕ್ರಿಮಿಗಳನ್ನು ಬಗ್ಗುಬಡಿದು ದೇಹವನ್ನು ಕಾಪಾಡಲು ರೋಗ ನಿರೋಧಕ ಶಕ್ತಿಗೆ ಹೆಚ್ಚಿನ ಶ್ರಮ ಬೀಳುತ್ತದೆ. ಅಲ್ಲದೇ ಆಹಾರದ ಮೂಲಕವೂ ಹೊಟ್ಟೆ ಪ್ರವೇಶಿಸುವ ಕ್ರಿಮಿಗಳು ಅಜೀರ್ಣತೆಯುಂಟುಮಾಡುತ್ತವೆ.

ಮಳೆಗಾಲದಲ್ಲಿ ಸ್ವಾಭಾವಿಕವಾಗಿಯೇ ಗಾಳಿಯಲ್ಲಿ ಆರ್ದ್ರತೆಯೂ ಗರಿಷ್ಟವಾಗಿಯೇ ಇರುತ್ತದೆ. ಇದು ಜೀರ್ಣಕ್ರಿಯೆಯ ಮೇಲೂ ಪರಿಣಾಮವನ್ನುಂಟುಮಾಡುತ್ತದೆ. ಹಾಗಾಗಿ ಈ ಸಮಯದಲ್ಲಿ ಎಣ್ಣೆಯ ಪದಾರ್ಥಗಳು, ಅದರಲ್ಲೂ ರಸ್ತೆಬದಿಯ ಎಣ್ಣೆಪದಾರ್ಥಗಳನ್ನು ಸೇವಿಸಬಾರದು. ಮನೆಯಲ್ಲಿ ತಯಾರಿಸಿದ ಆಹಾರವೇ ಅತ್ಯುತ್ತಮವಾಗಿದೆ.

ಹಣ್ಣುಗಳು:

ಮಳೆಗಾಲವಿಡೀ ಸಾಕಷ್ಟು ಪ್ರಮಾಣದಲ್ಲಿ ಹಣ್ಣುಗಳನ್ನು ಸೇವಿಸಬೇಕು. ಈ ಹಣ್ಣುಗಳು ದೇಹದಲ್ಲಿ ಶಕ್ತಿಯನ್ನು ಉಳಿಸಿಕೊಳ್ಳಲು ನೆರವಾಗುತ್ತವೆ. ಆದರೆ ಎಲ್ಲಾ ಹಣ್ಣುಗಳನ್ನು ಬೇಕಾಬಿಟ್ಟಿ ತಿನ್ನಬಾರದು, ಬದಲಿಗೆ ಪಿಯರ್ಸ್, ಮಾವಿನ ಹಣ್ಣು, ಸೇಬು ದಾಳಿಂಬೆ ಮೊದಲಾದವುಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಬೇಕು.

ಮೆಳೆಗಾಲದಲ್ಲಿ ಕೆಲವು ಹಣ್ಣುಗಳ ಸೇವನೆಯಿಂದ ಮುಖದಲ್ಲಿ ಮೊಡವೆಗಳು ಮೂಡಬಹುದು. ಹಾಗಾಗಿ ಮಳೆಗಾದಲ್ಲಿ ಕಲ್ಲಂಗಡಿ ಮತ್ತು ತರಬೂಜಗಳಂತಹ ಹಣ್ಣುಗಳು ಬೇಡ. ಮಾವಿನ ಹಣ್ಣು ಸಹಾ ಮಿತವಾಗಿರಬೇಕೇ ವಿನಃ ಹೆಚ್ಚಿನ ಪ್ರಮಾಣದ ಸೇವನೆ ಮೊಡವೆಗಳಿಗೆ ಕಾರಣವಾಗಬಹುದು.

ಒಣಫಲಗಳು:

ಮಳೆಗಾಲದಲ್ಲಿ ದ್ರವಾಹಾರಗಳು ಮಿತವಾಗಿದ್ದಷ್ಟೂ ಒಳ್ಳೆಯದು. ವಿವಿಧ ಹಣ್ಣುಗಳ ರಸಗಳು, ಲಸ್ಸಿ ಹಾಗೂ ಇತರ ಪಾನೀಯಗಳು ಮಳೆಗಾಲಕ್ಕೆ ಹಿತವಲ್ಲ. ಬದಲಿಗೆ ಒಣದಾಗಿರುವ ಆಹಾರಗಳಾದ ಬಟಾಣಿ, ಹಿಟ್ಟಿನ ಖಾದ್ಯಗಳು, ಮೆಕ್ಕೆಜೋಳ ಮೊದಲಾದವು ಸೂಕ್ತವಾಗಿವೆ. ಮಳೆಗಾಲದಲ್ಲಿ ದ್ರವಾಹಾರ ಹೆಚ್ಚಿದ್ದಷ್ಟೂ ದೇಹ ಊದಿಕೊಳ್ಳುವ ಸಾಧ್ಯತೆ ಹೆಚ್ಚು. ಹಾಗಾಗಿ ದ್ರವಾಹಾರದ ಬದಲು ಘನಾಹಾರ ಮತ್ತು ಕೇವಲ ನೀರು ಉತ್ತಮ.

ನೀರು:

ಮಳೆಗಾಲದಲ್ಲಿ ನೀರಿನ ಮೂಲಕ ಹರಡಬಹುದಾದ ಸೋಂಕುಗಳ ಸಂಖ್ಯೆ ಅಪರಿಮಿತವಾಗಿ ಏರುತ್ತದೆ. ಹಾಗಾಗಿ ಶುದ್ಧೀಕರಿಸದ ನೀರನ್ನು ಕುಡಿಯದಿರಿ. ಶುದ್ದೀಕರಿಸಿದ ನೀರಿನಲ್ಲಿಯೂ ಅತಿ ಸೂಕ್ಷ್ಮ ಬ್ಯಾಕ್ಟೀರಿಯಾಗಳಿರಬಹುದು. ಹಾಗಾಗಿ ಈ ನೀರನ್ನೂ ಕುದಿಸಿ ತಣಿಸಿ ಕುಡಿಯುವುದು ಕ್ಷೇಮ.

ಅಧಿಕ ರಕ್ತದೊತ್ತಡಕ್ಕೆ ಒಳಗಾಗದಿರಿ

ಒಂದು ವೇಳೆ ನಿಮಗೆ ಅಧಿಕ ರಕ್ತದೊತ್ತಡದ ತೊಂದರೆ ಇದ್ದರೆ ನಿಮ್ಮ ಆಹಾರದಲ್ಲಿ ಕನಿಷ್ಟ ಪ್ರಮಾಣದ ಉಪ್ಪು ಇರಲಿ. ಎಕೆಂದರೆ ಉಪ್ಪಿನ ಪ್ರಮಾಣ ಹೆಚ್ಚಿದ್ದಷ್ಟೂ ಹೃದಯದ ಮೇಲಿನ ಹೊರೆ ಹೆಚ್ಚುತ್ತದೆ. ಹಾಗಾಗಿ ಮಳೆಗಾಲದಲ್ಲಿ ಈ ವ್ಯಕ್ತಿಗಳು ಕನಿಷ್ಟ ಉಪ್ಪಿನಾಂಶವಿರುವ ಆಹಾರಗಳನ್ನೇ ಸೇವಿಸಬೇಕು.

ಕಹಿಯಾದ ತರಕಾರಿಗಳು

ಈ ತರಕಾರಿಗಳಲ್ಲಿ ಒಂದಾದರೂ ನಿಮ್ಮ ನಿತ್ಯದ ಆಹಾರದ ಒಂದು ಭಾಗವಾಗಿರುವುದು ಅವಶ್ಯ. ಏಕೆಂದರೆ ಇವು ಕಹಿಯಾಗಿದ್ದರೂ ಆರೋಗ್ಯವನ್ನು ಕಾಪಾಡುವಲ್ಲಿ ಸಿಹಿಯೇ ಹೌದು. ಬೇವು, ಹಾಗಲಕಾಯಿ ಮೊದಲಾದವು ನಾಲಿಗೆಗೆ ಹಿತನೀಡದೇ ಇದ್ದರೂ ಆರೋಗ್ಯಕ್ಕೆ ಸಿಹಿಯುಣಿಸುತ್ತವೆ. ಅಲ್ಲದೇ ಈ ಆಹಾರಗಳು ಮಳೆಗಾಲದಲ್ಲಿ ಎದುರಾಗುವ ಎಲ್ಲಾ ಬಗೆಯ ತ್ವಚೆಯ ಸೋಂಕಿನಿಂದ ರಕ್ಷಿಸುತ್ತವೆ.

   
 
ಹೆಲ್ತ್